ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 17, 2015

8

ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ – ಭಾಗ ೩

‍ನಿಲುಮೆ ಮೂಲಕ

– ಪ್ರೇಮಶೇಖರ

ಗ್ರಹಗಳು  ವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
  ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨

ನಾವು ಹೋಮೋ ಸೇಪಿಯನ್ ಸೇಪಿಯನ್ ಮಾನವರು ಭೂಮಿಯಲ್ಲಿ ಕಾಣಿಸಿಕೊಂಡದ್ದು ಕೇವಲ ಮೂವತ್ತೈದು ಸಾವಿರ ವರ್ಷಗಳ ಹಿಂದೆ.ಆದರೆ ಅರವತ್ತು ಲಕ್ಷ ವರ್ಷಗಳ ಹಿಂದೆ ವಾನರನಿಂದ ಮಾನವ ಪ್ರತ್ಯೇಕವಾದದ್ದಕ್ಕಿಂತಲೂ ಹಿಂದೆಯೇ ಅಷ್ಟೇಕೆ ಕೋಟ್ಯಾಂತರ ವರ್ಷಗಳ ಹಿಂದೆಯೇ ಭೂಮಿಯಲ್ಲಿ ನಮ್ಮಂತಹ ಪೂರ್ಣ ಹೋಮೋ ಸೇಪಿಯನ್ ಸೇಪಿಯನ್ ಮಾನವರು ಇದ್ದ ಕುರುಹುಗಳು ದೊರೆತಿವೆ.ಅವರ ಪಾದದ ಗುರುತುಗಳಷ್ಟೇ ಏಕೆ,ಸುಸ್ಥಿತಿಯಲ್ಲಿರುವ ಪೂರ್ಣ ಆಸ್ಥಿಪಂಜರಗಳೇ ಚೀನಾ, ಅರ್ಜೆಂಟೈನಾ, ಮಧ್ಯ ಏಶಿಯಾ, ಅಮೆರಿಕಾ, ಸೇರಿದಂತೆ ಪ್ರಪಂಚದ ಎಲ್ಲೆಡೆ ಸಿಕ್ಕಿವೆ!  ಕ್ಯಾಲಿಫೋರ್ನಿಯಾದ ಟೇಬಲ್ ಮೌಂಟನ್‍ನಲ್ಲಿ ದೊರೆತಿರುವ ಅಸ್ಥಿಪಂಜರವೊಂದು ಮೂರುಕೋಟಿ ಮೂವತ್ತು ಲಕ್ಷ ವರ್ಷ ಹಳೆಯದು!  ಸ್ವಿಟ್ಜರ್ಲ್ಯಾಂಡ್ ನಲ್ಲಿ ಸಿಕ್ಕಿರುವ ಅಸ್ಥಿಪಂಜರ ನಾಲ್ಕೂವರೆಕೋಟಿ ವರ್ಷ ಹಳೆಯದು!

ಡೈನೋಸಾರ್‍ಗಳು ನಿರ್ನಾಮವಾದದ್ದು ಆರೂವರೆ ಕೋಟಿ ವರ್ಷಗಳ ಹಿಂದೆ.ಅದಾದ ಮೇಲಷ್ಟೇ ಭೂಮಿಯಲ್ಲಿ ಸಸ್ತನಿಗಳು ಉಗಮವಾಗಿ ವಿಕಾಸ ಹೊಂದಿದ್ದು.ಆದರೆ,ಸಸ್ತನಿಯಾದ ಹೋಮೋ ಸೇಪಿಯನ್ ಸೇಪಿಯನ್ ಮಾನವ ಮತ್ತು ಡೈನೋಸಾರ್‍ಗಳ ಹೆಜ್ಜೆ ಗುರುತುಗಳು ಜತೆಜತೆಯಾಗಿಯೇ ಭೂಗರ್ಭದ ಒಂದೇ ಸ್ತರದಲ್ಲಿ ದೊರೆತು ಅವೆರಡೂ ಇದ್ದದ್ದು ಒಂದೇಕಾಲದಲ್ಲಿ ಎಂದು ಸೂಚಿಸುತ್ತವೆ.ಮಧ್ಯ ಏಶಿಯಾದ ತುರ್ಕ್‍ಮೆನಿಸ್ತಾನ,ಅಮೆರಿಕಾದ ಪೆನ್ಸಿಲ್‍ವೇನಿಯಾ ಮತ್ತು ಕೆಂಟಕಿ ಸೇರಿದಂತೆ ಹಲವೆಡೆ ಇವು ದೊರೆತಿವೆ.ಅಂದರೆ ಡಾರ್ವಿನ್‍ನ ವಿಕಾಸವಾದವನ್ನು ಕಸದಬುಟ್ಟಿಗೆಸೆದು ನಾವು ಭೂಮಿಯಲ್ಲಿ ಕೋಟ್ಯಾಂತರ ವರ್ಷಗಳ ಹಿಂದಿನಿಂದಲೂ ಇದ್ದೇವೆ ಎಂದು ತಿಳಿಯಬೇಕೆ?

ಹಾಗೇನಿಲ್ಲ ಎನ್ನುತ್ತಾರೆ ಈ ಬಗ್ಗೆ ಸಂಶೋಧನೆ ನಡೆಸಿರುವ ಟಾಮ್ ಲೇತ್‍ಬ್ರಿಜ್, ಕೆನೆತ್ ಹ್ಯೂರ್ ಮುಂತಾದ ವಿದ್ವಾಂಸರುಗಳು.ಡೈನೋಸಾರ್‍ಗಳ ಕಾಲದಲ್ಲೇ ಹೋಮೋ ಸೇಪಿಯನ್ ಸೇಪಿಯನ್ ಮಾನವ ಭೂಮಿಯಲ್ಲಿ ಇದ್ದಿದ್ದಾದರೆ ಆತ ಇಲ್ಲಿಯವನಾಗಿರಲು ಸಾಧ್ಯವಿಲ್ಲ.ಆ ಮಾನವರು ಬೇರೊಂದು ಗ್ರಹದಿಂದ ಇಲ್ಲಿಗೆ ಬಂದವರು.ಅವರು ವಾನರನಿಂದ ಮಾನವನನ್ನು ಪ್ರತ್ಯೇಕಿಸಿ, ಮಾನವ ಹಂತಹಂತವಾಗಿ ವಿಕಾಸಗೊಳ್ಳಲು ಕಾರಣವಾದರು,ಮೂವತ್ತೈದು ಸಾವಿರ ವರ್ಷಗಳ ಹಿಂದೆ ತಮ್ಮಂತೇ ಇರುವ ಹೋಮೋ ಸೇಪಿಯನ್ ಸೇಪಿಯನ್ ಮಾನವರನ್ನು ಸೃಷ್ಟಿಸಿದರು.ಆ್ಯಡಂನನ್ನು ಸೃಷ್ಟಿಸುವಾಗ “ನಮ್ಮ ರೂಪಿನಲ್ಲಿ ಮನುಷ್ಯನನ್ನು ಸೃಷ್ಟಿಸೋಣ”  (Let’s create man in our own image) ಎಂದು ‘ದೇವರು’ ಹೇಳಿದ್ದಾಗಿ ಬೈಬಲ್‍ನಲ್ಲಿರುವ ವಾಕ್ಯವನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬಹುದು ಎಂದವರ ವಾದ.

ಸರಿ, ಕೋಟ್ಯಾಂತರ ವರ್ಷಗಳ ಹಿಂದಿನಿಂದಲೇ ಹೋಮೋ ಸೇಪಿಯನ್ ಸೇಪಿಯನ್ ಮಾನವರು ಬೇರೊಂದು ಕಡೆಯಿಂದ ಭೂಮಿಗೆ ಬರುತ್ತಿದ್ದುದಾದರೆ ಅವರು ಬರುತ್ತಿದ್ದುದು ಎಲ್ಲಿಂದ? ಈ ಬಗ್ಗೆ ಆಸಕ್ತಿ ತಳೆದಿರುವ ವಿದ್ವಾಂಸರು ಅನ್ಯಲೋಕ ಜೀವಿಗಳ ನೆಲೆಯನ್ನು ಗುರು ಹಾಗೂ ಶನಿಗ್ರಹಗಳ ಉಪಗ್ರಹಗಳಲ್ಲಿ ಗುರುತಿಸುತ್ತಾರೆ.ಕೆಲವರು ಶುಕ್ರ ಗ್ರಹವೆಂದು ವಾದಿಸುತ್ತಾರೆ.ಆದರೆ ಶುಕ್ರಗ್ರಹದಲ್ಲಿ ಜೀವಿಗಳಿರಲು ಸಾಧ್ಯವೇ ಇಲ್ಲ ಎಂದು ಈಗ ಸಾಬೀತಾಗಿದೆ.ಮತ್ತೆ ಕೆಲವರು ನಮ್ಮ ಸೌರವ್ಯೂಹಕ್ಕೆ ಹತ್ತಿರದಲ್ಲಿರುವ ಬೇರೆ ಸೌರವ್ಯೂಹಗಳಲ್ಲಿನ ಗ್ರಹಗಳ ಹೆಸರು ಹೇಳುತ್ತಾರೆ.ಇನ್ನಷ್ಟು ಜನ ಆ ಜೀವಿಗಳು ಬರುತ್ತಿರುವುದು ಭೂಮಿಯಿಂದಲೇ,ಅವರ ನೆಲೆ ಸಾಗರದಾಳದಲ್ಲಿದೆ ಎಂದು ತರ್ಕಿಸುತ್ತಾರೆ.ಕೆರಿಬಿಯನ್ ಸಮುದ್ರದಲ್ಲೊಮ್ಮೆ ಫ್ಲೈಯಿಂಗ್ ಸಾಸರೊಂದು ಸಾಗರದಾಳದಿಂದ ಧುತ್ತನೆ ಮೇಲೆದ್ದು ಬಂದು,ಹತ್ತಿರದಲ್ಲೇ ನಾವೆಯೊಂದು ಇದ್ದದ್ದನ್ನು ಕಂಡು (ಬಹುಶಃ ತಮ್ಮ ಗುಟ್ಟು ರಟ್ಟಾಯಿತೆಂದು ಹೆದರಿ?) ಥಟಕ್ಕನೆ ಮತ್ತೆ ನೀರಿನಲ್ಲಿ ಮುಳುಗಿಹೋದುದನ್ನೂ ಅವರು ಉದಾಹರಣೆಯಾಗಿ ಕೊಡುತ್ತಾರೆ.ಎಷ್ಟು ನಿಜವೋ ಗೊತ್ತಿಲ್ಲ,ಫ್ಲೈಯಿಂಗ್ ಸಾಸರ್‍ಗಳು ಅಟ್ಲಾಂಟಿಕ್ ಸಾಗರದಲ್ಲಿ ಇಳಿದು ಮಾಯವಾಗುವ ಅನೇಕ ಉದಾಹರಣೆಗಳನ್ನೂ ಕೊಡುತ್ತಾರೆ.ಇನ್ನಷ್ಟು ಜನ ಹೇಳುವುದು ಭೂಮಿಯ ಅಂತರಾಳ ಘನವಾಗಿಲ್ಲ, ಅದು ಟೊಳ್ಳು, ಅಲ್ಲಿಂದ ಆ ಜೀವಿಗಳು, ಅವರ ಫ್ಲೈಯಿಂಗ್ ಸಾಸರ್‍ಗಳು ಬರುತ್ತಿವೆಯೆಂದು!

ಅವರ ಪ್ರಕಾರ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಭೂಮಿಯ ಅಂತರಾಳಕ್ಕೆ ಪ್ರವೇಶದ್ವಾರಗಳಿವೆಯಂತೆ.ನವೆಂಬರ್ 23, 1968ರಂದು ಉತ್ತರ ಧ್ರುವದ ಮೇಲೆ ಮೋಡಗಳಿಲ್ಲದ ಅಪರೂಪದ ಸಮಯದಲ್ಲಿ ಅಮೆರಿಕಾದ ESSA-7 ತೆಗೆದ ಚಿತ್ರಗಳಲ್ಲಿ ಅಲ್ಲೊಂದು ಕಪ್ಪುರಂಧ್ರ ಕಾಣಿಸುತ್ತದೆ.ಅದು ಭೂಮಿಯ ಅಂತರಾಳಕ್ಕೆ ಪ್ರವೇಶದ್ವಾರವೇ? ಗೊತ್ತಿಲ್ಲ.ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ನಾರ್ವೆಯ ನಾವಿಕ ಒಲಾಫ್ ಜಾನ್ಸೆನ್ ತಾನು ಮತ್ತು ತನ್ನ ತಂದೆ ಉತ್ತರ ಧ್ರುವದೊಳಗಿನ ಅದ್ಭುತ ಪ್ರಪಂಚದಲ್ಲಿ ಮೂರು ವರ್ಷಗಳು ಇದ್ದುದಾಗಿ ಹೇಳಿದ.ಎಲ್ಲರೂ ಅಪಹಾಸ್ಯ ಮಾಡಿದರೂ ಅವನಂತೂ ತಾನು ಸತ್ಯ ಹೇಳುತ್ತಿರುವುದಾಗಿಯೂ,ತನ್ನನ್ನು ನಂಬಬೇಕೆಂದೂ ಸಾಯುವ ಗಳಿಗೆಯಲ್ಲೂ ದೀನನಾಗಿ ಬೇಡಿಕೊಳ್ಳುತ್ತಿದ್ದ.ರಿಯರ್ ಅಡ್ಮಿರಲ್ ರಿಚರ್ಡ್ ಬೈರ್ಡ್ ಎಂಬ ವೈಮಾನಿಕ ಎರಡೂ ಧ್ರುವಗಳಲ್ಲಿ 1947 ಮತ್ತು 1956ರಲ್ಲಿ ವಿಮಾನಯಾನ ನಡೆಸುತ್ತಿದ್ದಾಗ ಅಕಸ್ಮಾತ್ ಆಗಿ ಹಸಿರು ಹುಲ್ಲುಗಾವಲುಗಳನ್ನೂ, ಪುರಾತನ ಕಾಲದಲ್ಲಿ ಜೀವಿಸುತ್ತಿದ್ದ ಮ್ಯಾಮತ್, ಮ್ಯಾಸ್ಟೊಡಾನ್‍ನಂತಹ ಪ್ರಾಣಿಗಳನ್ನು ಕಂಡಿದ್ದನಂತೆ.ತಾನು ಕಂಡದ್ದರ ವಿವರಗಳನ್ನು ಬೈರ್ಡ್ ಕೊಟ್ಟಿದ್ದಾನೆ ನಿಜ,ಆದರೆ ಅವು ಸತ್ಯವೇ ಎಂದು ಪ್ರಮಾಣೀಕೃತವಾಗಿಲ್ಲ.

ಇವರೆಲ್ಲರ ವಾದಗಳನ್ನು, ಊಹೆಗಳನ್ನು ನೋಡಿದರೆ ತಲೆ ಕೆಟ್ಟುಹೋಗುತ್ತದೆ.ಹೀಗಾಗಿ ಇವುಗಳೆಲ್ಲವನ್ನೂ ಪಕ್ಕಕ್ಕಿಟ್ಟು ತರ್ಕಕ್ಕೆ ನಿಲುಕುವಂಥ, ಇತರ ಸಾಕ್ಷಾಧಾರಗಳಿಂದ ಪ್ರಮಾಣೀಕರಿಸಬಹುದಾದ ಎರಡು ವಾದಗಳನ್ನಷ್ಟೇ ನಿಮ್ಮ ಮುಂದಿಡುತ್ತೇನೆ.

ಪುರಾತನ ಕಾಲದಲ್ಲಿ ಹೋಮೋ ಸೇಪಿಯನ್ ಸೇಪಿಯನ್ ಮಾನವರು ಇಲ್ಲಿಗೆ ಬರುತ್ತಿದ್ದುದು ನೆರೆಯ ಮಂಗಳ ಗ್ರಹದಿಂದ ಎಂದು ಹೆರ್ಬೀ ಬ್ರೆನ್ಯಾನ್ ಹೇಳುತ್ತಾರೆ.ಮಂಗಳನಲ್ಲಿ ಈಗ ಜೀವವಿಲ್ಲ.ಆದರೆ ಹಿಂದೆ ಅಲ್ಲಿ ಯಥೇಚ್ಛವಾಗಿ ನೀರಿದ್ದ ಬಗ್ಗೆ, ಜೀವವಿದ್ದ ಬಗ್ಗೆಯೂ ಕುರುಹುಗಳು ದೊರೆತಿವೆ.ಭೂಮಿಯಲ್ಲಿ ಸಸ್ತನಿಗಳ ವಿಕಾಸವಾಗುವುದಕ್ಕೂ ಕೋಟ್ಯಾಂತರ ವರ್ಷಗಳ ಹಿಂದೆಯೇ ಅಲ್ಲಿ ಮುಂದುವರಿದ ಮಾನವ ಜನಾಂಗವಿತ್ತು, ಅವರು ತಮ್ಮ ಅಂತರಿಕ್ಷ ನೌಕೆಗಳಲ್ಲಿ ಭೂಮಿಗೆ ಭೇಟಿಕೊಡುತ್ತಿದ್ದರು ಎಂದು ಬ್ರೆನ್ಯಾನ್‍ನಂಥ ವಿದ್ವಾಂಸರು ನಂಬುತ್ತಾರೆ.ಆ ಕೆಂಪುಗ್ರಹದ ವಾತಾವರಣ ಜೀವಿಗಳ ಬದುಕಿಗೆ ಈಗಲೂ ಪೂರಕವಾಗಿಯೇ ಇದೆ.ಹೊರಗಿನ ಪ್ರಪಂಚಕ್ಕೆ ಹೆಚ್ಚಾಗಿ ತಿಳಿಯದಂತಹ ಪ್ರಯೋಗವೊಂದು ಮಾಸ್ಕೋ ವಿಶ್ವವಿದ್ಯಾಲಯದ ಸ್ಪೇಸ್ ಬಯಾಲಜಿ ಲ್ಯಾಬೋರೇಟರಿಯಲ್ಲಿ 1980ರಲ್ಲಿ ನಡೆಯಿತು.ಅಲ್ಲಿಯವರೆಗೆ ಲಭ್ಯವಿದ್ದ ಮಾಹಿತಿಗಳ ಅನುಸಾರವಾಗಿ ಮಂಗಳನ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಿ ಜೀವಿಗಳನ್ನೂ,ಸಸ್ಯಗಳನ್ನೂ ಅಲ್ಲಿಡಲಾಯಿತು.  ಸಸ್ತನಿಗಳು ಮತ್ತು ಪಕ್ಷಿಗಳು ಕ್ಷಣಗಳಲ್ಲಿ ಸತ್ತರೆ ಉರಗಗಳು ಕೆಲವು ತಾಸು ಜೀವದಿಂದಿದ್ದವು.ಕೀಟಗಳು ಹಲವಾರು ವಾರಗಳವರೆಗೆ ಬದುಕುಳಿದವು.ಸಸ್ಯಗಳಂತೂ ಆ ವಾತಾವರಣಕ್ಕೆ ಹೊಂದಿಕೊಂಡು ಚೆನ್ನಾಗಿಯೇ ಬೆಳೆಯತೊಡಗಿದವು!  ಇದರರ್ಥ ಜೀವದ ಅಸ್ತಿತ್ವಕ್ಕೆ ಮಂಗಳನಲ್ಲಿ ಪೂರಕ ಅಂಶಗಳಿವೆ.ಅಂದರೆ, ಮಂಗಳನಲ್ಲಿ ಹಿಂದೊಮ್ಮೆ ಜೀವಿಗಳಿದ್ದವು ಎಂಬ ವಾದಕ್ಕೆ ಪುಷ್ಟಿ ದೊರೆಯುತ್ತದೆ.

ಬ್ರೆನ್ಯಾನ್‍ನಂಥವರು ಹೇಳುವುದೇನೆಂದರೆ ಯಾವುದೋ ಕಾರಣದಿಂದಾಗಿ ಮಂಗಳನಲ್ಲಿ ಜೀವ ನಿರ್ನಾಮವಾಯಿತು.ಅದರ ಸೂಚನೆ ದೊರೆತ ಅಲ್ಲಿನ ನಿವಾಸಿಗಳನೇಕರು ಭೂಮಿಯಲ್ಲಿ ನೆಲೆ ಕಂಡುಕೊಂಡರು ಎಂದು.ಆದರೆ ಝಕಾರಿಯಾ ಸಿಟ್ಚಿನ್ ಬೇರೆಯದೇ ಕಥೆ ಹೇಳುತ್ತಾರೆ.ಅವರ ಪ್ರಕಾರ ಅನ್ಯಲೋಕ ಜೀವಿಗಳು ಬರುತ್ತಿದ್ದುದು ಮಂಗಳ ಮತ್ತು ಗುರು ಗ್ರಹಗಳ ನಡುವೆ ಹಿಂದೊಮ್ಮೆ ಅಸ್ತಿತ್ವದಲ್ಲಿದ್ದ ಬೃಹದಾಕಾರದ ಗ್ರಹವೊಂದರಿಂದ.

ಬರ್ಲಿನ್‍ನ ಸ್ಟೇಟ್ ಮ್ಯೂಸಿಯಂನಲ್ಲೊಂದು ಮುದ್ರೆಯಿದೆ.ನೀವೇನಾದರೂ ಅಲ್ಲಿಗೆ ಹೋದರೆ ಅದನ್ನು ಕಣ್ಣಾರೆ ನೋಡಬಹುದು.ಅದರ ಕ್ಯಾಟಲಾಗ್ ಸಂಖ್ಯೆ- VA/243.ಇರಾಕ್‍ನಲ್ಲಿ ದೊರೆತಿರುವ ಸಾವಿರಾರು ಮುದ್ರೆಗಳಲ್ಲೊಂದು ಇದು.ಕ್ರಿ.ಪೂ. ಮೂರನೆಯ ಸಹಸ್ರಮಾನದ್ದೆಂದು ತೀರ್ಮಾನಿಸಲಾಗಿರುವ ಈ ಮುದ್ರೆಯಲ್ಲಿ ನಮ್ಮ ಸೌರವ್ಯೂಹದ ಪೂರ್ಣ ಚಿತ್ರವಿದೆ! ಭೂಮಿಯ ಜತೆ ಚಂದ್ರನನ್ನು ಸೇರಿಸಿ ಸೂರ್ಯನ ಸುತ್ತ ಹನ್ನೊಂದು ಆಕಾಶಕಾಯಗಳಿವೆ.ಒಂದಕ್ಕೊಂದು ಹೋಲಿಸಿದರೆ ಅವುಗಳ ಗಾತ್ರಗಳು ಇಂದು ನಮಗೆ ತಿಳಿದಿರುವಂತೆ ಹೇಗಿವೆಯೋ ಹಾಗೇ ಇವೆ.ಆದರೆ ಪ್ಲೂಟೋ ಸೌರವ್ಯೂಹದ ಕೊನೆಯಲ್ಲಿರದೇ ಶನಿ ಮತ್ತು ಯುರೇನಸ್ ಮಧ್ಯೆ ಇದೆ!  ಗ್ರಹದ ಪಟ್ಟವನ್ನು 2006ರಲ್ಲಿ ಕಳೆದುಕೊಂಡ ಪ್ಲೂಟೋ ತನ್ನ ವಿಚಿತ್ರ ಪಥದಿಂದಾಗಿ ಒಮ್ಮೆ ಸೌರವ್ಯೂಹದ ಕೊನೆಗೆ ಸರಿದರೆ ಮತ್ತೊಮ್ಮೆ ಒಳಸರಿದು ನೆಪ್ಚೂನ್ ಮತ್ತು ಯುರೇನಸ್‍ಗಳ ನಡುವೆ ನುಸುಳುವುದು ಖಗೋಳವಿಜ್ಞಾನಿಗಳಿಗೆ ಇತ್ತೀಚೆಗಷ್ಟೇ ತಿಳಿಯಿತು.ಈ ಮುದ್ರೆಯಲ್ಲಿನ ಪ್ರಕಾರ ಅದು ಹಿಂದೊಮ್ಮೆ ಯುರೇನಸ್ ಅನ್ನೂ ದಾಟಿ ಇತ್ತ ಶನಿಯ ಪಕ್ಕ ಬರುತ್ತಿದ್ದಂತಿದೆ.ಎಲ್ಲಕ್ಕಿಂತಲೂ ಅಚ್ಚರಿಯ ವಿಷಯವೆಂದರೆ ಮಂಗಳ ಮತ್ತು ಗುರು ಗ್ರಹಗಳ ನಡುವೆ ಗುರುವಿಗಿಂತ ಸ್ವಲ್ಪ ಚಿಕ್ಕದಾದ ಗ್ರಹವೊಂದು ಈ ಮುದ್ರೆಯಲ್ಲಿ ಚಿತ್ರಿತವಾಗಿದೆ!

ಈ ಮುದ್ರೆ ಇನ್ನೂರು ವರ್ಷಗಳ ಹಿಂದೆ ಪತ್ತೆಯಾಗಿದ್ದರೆ ಅದರಲ್ಲಿನ ಸೌರವ್ಯೂಹದ ಚಿತ್ರವನ್ನು ನೋಡಿದ ನಮ್ಮ ಖಗೋಳವಿಜ್ಞಾನಿಗಳು ನಕ್ಕುಬಿಡುತ್ತಿದ್ದರು.ಶನಿಯಿಂದಾಚೆಗೆ ಯಾವ ಗ್ರಹದ ಅರಿವೂ ಇಲ್ಲದ ಅವರು ಕೊನೆಯ ಮೂರು ಗ್ರಹಗಳನ್ನೂ, ಮಂಗಳ ಮತ್ತು ಗುರುವಿನ ನಡುವಿನ ಬೃಹದಾಕಾರದ ಗ್ರಹವನ್ನೂ ನೋಡಿ ಈ ಚಿತ್ರ ಪ್ರಾಚೀನ ಸುಮೇರಿಯನ್ನರ ಕಲ್ಪನಾವಿಲಾಸಕ್ಕೊಂದು ಅದ್ಭುತ ಉದಾಹರಣೆಯೆಂದು ತಿಳಿಯುತ್ತಿದ್ದುರಲ್ಲಿ ಅಚ್ಚರಿಯೇನಿಲ್ಲ.ಆದರೀಗ ಇಡೀ ಸೌರವ್ಯೂಹದ ಅರಿವಿರುವ ನಾವು ಯುರೇನಸ್, ನೆಪ್ಚೂನ್ ಮತ್ತು ಪ್ಲೂಟೋಗಳ ಅಸ್ತಿತ್ವದ ಅರಿವು ಸಾವಿರಾರು ವರ್ಷಗಳ ಹಿಂದಿನ ಸುಮೇರಿಯನ್ನರಿಗೆ ತಿಳಿದುದಾದರೂ ಹೇಗೆ ಎಂದು ಅಚ್ಚರಿಪಡುವಂತಾಗಿದೆ.ಅಷ್ಟೇ ಅಲ್ಲ, ಆ ಮೂರು ಗ್ರಹಗಳ ಅರಿವು ಅವರಿಗಿದ್ದಿರುವುದಾದರೆ ಗುರು ಮತ್ತು ಮಂಗಳನ ನಡುವಿರುವ ಗ್ರಹ ಸಹಾ ಒಂದು ಕಾಲದಲ್ಲಿ ಅಸ್ತಿತ್ವದಲ್ಲೇ ಇದ್ದಿರಬೇಕೆಂದು ಒಪ್ಪಿಕೊಳ್ಳುವ ಇಕ್ಕಟ್ಟಿಗೆ ನಾವು ಸಿಲುಕಿಕೊಳ್ಳುತ್ತೇವೆ.

ಈಗ ನಮಗೆ ತಿಳಿದಿರುವ ಪ್ರಕಾರ ಅಲ್ಲಿ ಯಾವ ಗ್ರಹವೂ ಇಲ್ಲ.ಅಲ್ಲಿರುವುದು “ಕ್ಷುದ್ರಗ್ರಹಗಳು” ಎಂದು ಕರೆಯಲ್ಪಡುವ ಅಸಂಖ್ಯ ಸಣ್ಣಪುಟ್ಟ ಆಕಾಶಕಾಯಗಳು.ಯಾವುದೋ ಕಾರಣದಿಂದ ಆ ಗ್ರಹ ಸಿಡಿದು ಚೂರುಚೂರಾಗಿರಬೇಕೆಂದೂ,ಆ ಚೂರುಗಳೇ ಈಗಿನ ಕ್ಷುದ್ರಗ್ರಹಗಳೆಂದೂ ಸಿಟ್ಚಿನ್ ವಾದಿಸುತ್ತಾರೆ.ಪ್ರಾಚೀನ ಸುಮೇರಿಯನ್ ಸಾಹಿತ್ಯದಲ್ಲಿ, ನಂತರದ ಬೈಬಲ್‍ನ ಹಳೇ ಒಡಂಬಡಿಕೆಯಲ್ಲಿ ವರ್ಣಿತವಾಗಿರುವ “ನೆಫಿಲಿಂ” ಎಂಬ ಜನರ ಮೂಲ ನೆಲೆ ಆ ಗ್ರಹವೆಂದು ಸಿಟ್ಚಿನ್ ಹೇಳುತ್ತಾರೆ.ನೆಫಿಲಿಂ ಜನರೇ ಪ್ರಾಚೀನ ಸುಮೇರಿಯಾದಲ್ಲಿ ನಾಗರಿಕತೆ ಸೃಷ್ಟಿಸಿದರು ಎಂದವರ ವಾದ.

ಇವರೆಲ್ಲರ ವಾದದ ಪ್ರಕಾರ ಅನ್ಯಲೋಕದ ಜೀವಿಗಳ ಮೂಲನೆಲೆ ಈಗಿಲ್ಲ.ಮಂಗಳ ಬರಡಾಗಿಹೋಗಿದೆ, ಅದರಾಚೆ ಹಿಂದೆ ಇದ್ದ ಗ್ರಹ ಈಗ ಚೂರುಚೂರಾಗಿಹೋಗಿದೆ.ಆದರೆ ನನ್ನ ಪ್ರಶ್ನೆಯೆಂದರೆ ಅನ್ಯಲೋಕ ಜೀವಿಗಳು ಈಗಲೂ ಬರುತ್ತಿದ್ದಾರಲ್ಲ?  ಎಲ್ಲಿಂದ ಬರುತ್ತಿದ್ದಾರೆ?

ಅನ್ಯಲೋಕದ ಜೀವಿಗಳ ನೆಲೆ ಮಂಗಳ ಮತ್ತು ನೆಫಿಲಿಂ ಮಾತ್ರವಲ್ಲ,ಅವುಗಳ ಜತೆಗೇ ಬೇರೆ ಗ್ರಹ ಅಥವಾ ಗ್ರಹಗಳೂ ಇರಬಹುದು.ಅದು ನಮ್ಮ ಸೌರವ್ಯೂಹದ ಅಥವಾ ಹತ್ತಿರದ ಬೇರೊಂದು ಸೌರವ್ಯೂಹದ ಯಾವುದಾದರೊಂದು ಗ್ರಹ ಅಥವಾ ಉಪಗ್ರಹವಿರಬಹುದು.ಅದು ಈಗಲೂ ಅವರ ನೆಲೆಯೇ.ಕೋಟ್ಯಾಂತರ ವರ್ಷಗಳಿಂದಲೂ ಭೂಮಿಗೆ ಬರುತ್ತಿರುವ ಅವರು ಭೂಮಿಯಲ್ಲಿದ್ದ ವಾನರಜೀವಿಯನ್ನು ತಮ್ಮ ಯಾವುದೋ ಉದ್ದೇಶಕ್ಕಾಗಿ ಮಾನವನನ್ನಾಗಿ ವಿಕಾಸಗೊಳಿಸಿದರು.ಅವರು ಬಯಸಿದಂತೆ ಮಾನವ ವಿಕಾಸ ಹೊಂದದೇ ಹೋದಾಗ ವಿಕಾಸಪ್ರಕ್ರಿಯೆಯಲ್ಲಿ ಮತ್ತೆಮತ್ತೆ ಹಸ್ತಕ್ಷೇಪ ಮಾಡಿ ಮನುಷ್ಯನನ್ನು ತಮಗೆ ಅನುಕೂಲವಾಗುವಂತೆ ಬದಲಾಯಿಸಿ ಅಂತಿಮವಾಗಿ ತಮ್ಮಂತೇ ಹೋಮೋ ಸೇಪಿಯನ್ ಆಗಿಸಿದ್ದಾರೆ.ಅವರ ಪ್ರಯೋಗ ಇಂದೂ ಮುಂದುವರೆಯುತ್ತಿದೆ.ಹಾಗಿದ್ದರೆ ಯಾರದೋ,ಯಾವುದೋ ಉದ್ದೇಶಸಾಧನೆಗಾಗಿ ನಾವು ಸೃಷ್ಟಿಯಾಗಿದ್ದೇವೆಯೇ? ಹಾಗಿದ್ದರೆ ಆ ಉದ್ದೇಶವೇನು? ಇದನ್ನು ಮುಂದಿನವಾರ ಲೇಖನದ ನಾಲ್ಕನೆಯ ಹಾಗೂ ಅಂತಿಮ ಭಾಗದಲ್ಲಿ ಹೇಳಲು ಪ್ರಯತ್ನಿಸುತ್ತೇನೆ.

ಚಿತ್ರಕೃಪೆ : http://www.space.com

ಕೃಪೆ : ವಿಜಯವಾಣಿ ದೈನಿಕ

8 ಟಿಪ್ಪಣಿಗಳು Post a comment
  1. UNIVERSAL's avatar
    hemapathy
    ಏಪ್ರಿಲ್ 17 2015

    ಒಟ್ಟಿನಲ್ಲಿ ಅಂತೆ ಕಂತೆ ಕಥೆಗಳು.

    ಉತ್ತರ
    • M. SRINIVASAN's avatar
      M. SRINIVASAN
      ಏಪ್ರಿಲ್ 23 2015

      HAVE YOU READ MY BOOK BY ANKITHA PRAKASHANA ?
      DEVARU – HAGENDARENU ?
      THE BOOK CONTAINS SOME OF THE POINTS WHICH YOUR ARE MENTIONING.

      ಉತ್ತರ
  2. BNS's avatar
    BNS
    ಏಪ್ರಿಲ್ 20 2015

    ಪ್ರೇಮಶೇಖರರ “ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ” ಈ ಸರಣಿ ಕಡೆಗೂ ಮುಗಿಯಿತು ಎನ್ನುವ ನಿಟ್ಟುಸಿರನ್ನು ತಂದಿತು. ವೈಜ್ಞಾನಿಕ ಶಿಕ್ಷಣ ಕೊಂಚವೂ ಇಲ್ಲದ ಮುಗ್ಧರಿಗೆ ಮೈ ನವಿರೇಳಿಸಬಹುದಾದ ಕಥನ ಎಂದು ಒಪ್ಪಬಹುದಾದ ಮಾಹಿತಿ ಇದು.

    ಮಂಗಳನಿಂದ ಆಚೆಗೆ ಇರುವ ಗ್ರಹಗಳಲ್ಲಿ ಬಹುಶಃ ಪ್ಲೂಟೊ ಒಂದೇ ಘನರೂಪದಲ್ಲಿರುವ ಗ್ರಹ ಎನ್ನಬಹುದು (ಗ್ರಹ ಅಲ್ಲವೆಂದು ಇತ್ತೀಚಿನ ಕ್ಲಾಸಿಫಿಕೇಷನ್ ಹೇಳುತ್ತದೆ). ಗುರುಗ್ರಹಕ್ಕೆ ಇರುವ ೬೭, ಮತ್ತು ಶನಿಗ್ರಹಕ್ಕೆ ಇರುವ ೬೨ ಉಪಗ್ರಹಗಳೂ, ಯುರೆನಸ್, ನೆಪ್ಚೂನ್ ಮತ್ತು ಪ್ಲೂಟೊಗಳಿಗೆ ಇರುವ ಉಪಗ್ರಹಗಳು ಮಾತ್ರ solid – ಘನಸ್ಥಿತಿಯಲ್ಲಿವೆ. ಆದರೆ ಗುರು, ಶನಿ, ಯುರೆನಸ್, ಹಾಗೂ ನೆಪ್ಚೂನ್ ಗಳು gas giants (ಅನಿಲ ದೈತ್ಯ)ಗಳೆಂದು ಕರೆಯಲ್ಪಡುತ್ತವೆ. ಇವುಗಳಲ್ಲಿ ನಮ್ಮ ಸದ್ಯದ ಅರಿವಿಗೆ ವೇದ್ಯವಾಗುವಂತೆ ಯಾವುದೇ ಜೀವಿ ಇರುವ ಸಾಧ್ಯತೆಯಿಲ್ಲ.

    ಭೂಮಿಯ ಒಡಲಾಳದಲ್ಲಿ ತಮ್ಮ ‘ಕೇಂದ್ರ ಕಚೇರಿ’ ಹೊಂದಿರಬಹುದಾದ ಈ ಅನ್ಯಗ್ರಹದ ಜೀವಿಗಳು ಬಹಳ ತಾಪ-ಪ್ರಿಯ ಜೀವಿಗಳೇ ಇರಬೇಕು. ಏಕೆಂದರೆ ಹತ್ತಿರ ಹತ್ತಿರ ೬೪೦೦ ಕಿ ಮೀ ಗಳ ವ್ಯಾಸವನ್ನು ಹೊಂದಿರಬಹುದಾದ ಭೂಮಿಯ ಮೇಲ್ಮೈಯಿಂದ ಕೇವಲ ಹತ್ತು ಹನ್ನೆರಡು ಕಿಮೀ ಆಳಕ್ಕೆ ಹೋದರೆ ಕಲ್ಲುಗಳೇ ಕರಗಿ ದ್ರವಾವಸ್ಥೆಗೆ ತಲುಪಿರುವ ಮ್ಯಾಗ್ಮಾ ಇದೆ. ಇನ್ನು ಕೇಂದ್ರಭಾಗ (core) ದಲ್ಲಂತೂ ಅತೀವ ಶಾಖಕ್ಕೆ ಕರಗಿ ದ್ರವವಾದ ಕಬ್ಬಿಣ ಇದೆ (ಓ..ಮತ್ತೊಂದು ವಿಷಯ.. ಈ ದ್ರವರೂಪದ ಕಬ್ಬಿಣ ಭೂಮಿ ತನ್ನ ಅಕ್ಷದ ಸುತ್ತ ತಿರುಗುವುದರಿಂದ ತಾನೂ ತಿರುಗುತ್ತದೆ, ತನ್ಮೂಲಕ ಬಾಹ್ಯಾಕಾಶದ ಎಲ್ಲ ರೀತಿಯ ವಿನಾಶಕಾರಿ ವಿಕಿರಣಗಳನ್ನು ತಡೆಗಟ್ಟುವ ಭೂ ಅಯಸ್ಕಾಂತೀಯ ಕ್ಷೇತ್ರವನ್ನು ನಿರ್ಮಿಸುತ್ತದೆ. ಇದಿಲ್ಲದ ಯಾವುದೇ ಗ್ರಹದಲ್ಲಿ ಜೀವಸೃಷ್ಟಿ ಬಹಳ ಕಷ್ಟಸಾಧ್ಯ! ಸೌರವ್ಯೂಹದ ಇತರ ಘನ ರೂಪದ ಗ್ರಹಗಳನ್ನೇ ನೋಡಿ, ಭೂಮಿಗೆ ಇರುವಂತಹ ಅಯಸ್ಕಾಂತೀಯ ಕ್ಷೇತ್ರ ಬುಧ, ಶುಕ್ರಗ್ರಹಗಳಿಗೆ ಇಲ್ಲ, ಮಂಗಳನಿಗೂ ಇಲ್ಲ).

    ಇನ್ನು ಬರ್ಲಿನ್ ನ ಹನ್ನೆರಡು ಗ್ರಹಗಳ ಫಲಕ ತುಂಬ ಸೊಗಸಾದ ಕಲ್ಪನೆ. VA/243 ಎಂಬ ನಿರಪಾಯಕಾರಿ ಹೆಸರಿನ ಈ ಫಲಕ ಹಲವು ಆಸಕ್ತರ ಕುತೂಹಲವನ್ನು ಕೆರಳಿಸಿರುವುದು ಸಹಜ. ಈ ಫಲಕದಲ್ಲಿನ ಚುಕ್ಕಿಗಳನ್ನು ಅರ್ಥೈಸುವ ಹಲವು ವಿವರಣೆಗಳು ಲಭ್ಯವಿದೆ. ಆದರೆ ಒಂದು ಸಾಧ್ಯತೆ ಗುರುಗ್ರಹದ ನಾಲ್ಕುಪಟ್ಟು ದ್ರವ್ಯವನ್ನು ಹೊಂದಿರುವ ‘ನಿಬಿರು’ ಎಂಬ ಅನಿಲದೈತ್ಯದ ಅಸ್ತಿತ್ವ. ಒಂದುವೇಳೆ ಇಷ್ಟು ದೊಡ್ಡ ಆಕಾಶಕಾಯ ಸೌರವ್ಯೂಹದಲ್ಲಿ ಇದ್ದರೆ, ಅದು ಸೂರ್ಯನ ಅವಳಿ ತಾರೆ ಆಗುತ್ತಿತ್ತೇನೋ.. ಏಕೆಂದರೆ ಬ್ರಹ್ಮಾಂಡದಲ್ಲಿ ತಮ್ಮ ಸುತ್ತ ಸುತ್ತುವ ಗ್ರಹಗಳನ್ನು ಹೊಂದಿರುವ, ಅಂತಹ ಅನೇಕ ತಾರಾಯುಗ್ಮಗಳಿವೆ!

    ಕೇವಲ ಊಹಾಪೋಹಗಳ ಆಧಾರದ ಮೇಲೆ ಸತ್ಯದ ತಲೆಯ ಮೇಲೆ ಹೊಡೆವಂತಹ ಅನೇಕ ವಿಡಿಯೋಗಳೂ ಸಹ ಇಂದು ಅಂತರ್ಜಾಲದಲ್ಲಿ ಲಭ್ಯವಿವೆ. ಆದರೆ ಸ್ವಲ್ಪ ಅನುಮಾನ ಮತ್ತು ಕೊಂಚ ಕೆದಕಿನೋಡುವ ಪ್ರವೃತ್ತಿಯಿದ್ದರೆ, ಇಂತಹ ಹಲವು ಅಂತೆಗಂತೆಗಳನ್ನು ಧೂಳೀಪಟ ಮಾಡಬಹುದು.

    ಉತ್ತರ
    • WITIAN's avatar
      WITIAN
      ಏಪ್ರಿಲ್ 20 2015

      BNS ಅವರ ಕಮೆಂಟಿಗೆ ಒಂದು correction.. ಭೂಮಿಯ ವ್ಯಾಸ (DIAMETER) ೬೪೦೦ ಕಿಮೀ ಅಲ್ಲ, ೧೨೮೦೦ ಕಿಮೀ ಎಂದು ಗ್ರಹಿಸಬಹುದು. ತ್ರಿಜ್ಯ (RADIUS) ದ ಅಳತೆ ~೬೪೦೦.

      ಉತ್ತರ
      • BNS's avatar
        BNS
        ಏಪ್ರಿಲ್ 20 2015

        ನೀವು ಹೇಳಿದ್ದು ನಿಜ, ಭೂಮಿಯ ತ್ರಿಜ್ಯ ೬೪೦೦ ಕಿಲೋಮೀಟರುಗಳಷ್ಟು..ದೋಷಕ್ಕೆ ಕ್ಷಮೆಯಿರಲಿ

        ಉತ್ತರ
  3. keshav's avatar
    keshav
    ಮೇ 7 2015

    Sir Nana hesaru keshav dayvitu helli bere graha dali jeevigalu edeya

    ಉತ್ತರ

Trackbacks & Pingbacks

  1. ಈ ಭೂಮಿಯೆಂಬ ಗ್ರಹವೊಂದು ರಿಮ್ಯಾಂಡ್ ಹೋಮ್ | ನಿಲುಮೆ
  2. ಗಟ್ಟಿದನಿಯಲ್ಲಿ ಹೇಳುತ್ತಿದ್ದೇನೆ: “ನಮಗೆ ಸಾವೇ ಇಲ್ಲ” | ನಿಲುಮೆ

Leave a reply to BNS ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments