ವಚನ ಸಾರ: 2 (ದಕ್ಕಿದಷ್ಟು)
– ಡಾ. ಸಂತೋಷ್ ಕುಮಾರ್ ಪಿ.ಕೆ
ನಾನೇನು ಮಾಡಲಿ ಬಡವನಯ್ಯ?
ಎನ್ನ ಕಾಲೇ ಕಂಬ ದೇಹವೆ ದೇಗುಲ
ಶಿರವೇ ಹೊನ್ನ ಕಳಸವಯ್ಯ!
ಕೂಡಲಸಂಗಮ ದೇವ ಕೇಳಯ್ಯ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ! (ಬಸವಣ್ಣ)
ಬಸವಣ್ಣನವರ ಈ ವಚನವು ತುಂಬಾ ಸುಪ್ರಸಿದ್ಧವಾದುದು, ಪ್ರಾಥಮಿಕ ಶಾಲಾ ತರಗತಿಯಿಂದ ಓದುತ್ತಾ ಬಂದಿರುವುದು ಎಲ್ಲರಿಗೂ ನೆನೆಪಿರಬಹುದು. ಇದಕ್ಕೆ ಸಂಬಂಧಿಸಿದಂತೆ ಎರಡು ರೀತಿಯ ವಿವರಣೆಯನ್ನು ಸಾಮಾನ್ಯವಾಗಿ ನೀಡುತ್ತಾ ಬರಲಾಗುತ್ತಿದೆ. ಮೊದಲನೆಯದಾಗಿ, ಬಸವಣ್ಣ ತೀರಾ ಬಡವರಾಗಿದ್ದರಿಂದ ದೇವಾಲಯವನ್ನು ನಿರ್ಮಿಸುವ ಶಕ್ತಿ ಅವರಿಗಿರಲಿಲ್ಲ, ಆದ್ದರಿಂದ ತಮ್ಮ ಅಸಹಾಯಕತೆಯನ್ನು ವಚನದ ಮೂಲಕ ಹೊರಹಾಕಿದ್ದಾರೆ. ಎರಡನೆಯದಾಗಿ, ಬಸವಣ್ಣ ಮತ್ತು ಇಡೀ ವಚನಕಾರರ ಸಮುದಾಯವು ಮೇಲ್ಜಾತಿಗಳನ್ನು ಹಲವಾರು ಆಯಾಮಗಳಲ್ಲಿ ವಿರೋಧಿಸುತ್ತಿದ್ದರು, ಹಾಗಾಗಿ ಅವರಿಗೆ ಸಂಬಂಧಪಟ್ಟ ದೇವಾಲಯ, ಗ್ರಂಥಗಳು ಹಾಗೂ ಅವರ ಸಂಸ್ಕೃತಿಗಳನ್ನು ವಿರೋಧಿಸಿ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದರು ಎಂಬುದು ಮತ್ತೊಂದು ವಿವರಣೆಯಾಗಿದೆ.
ಮೊದಲನೆಯ ವಿವರಣೆ ಆರ್ಥಿಕ ಚೌಕಟ್ಟಿನಿಂದ ಕೂಡಿದ್ದರೆ, ಎರಡನೆ ವಿವರಣೆ ಒಂದು ರೀತಿಯ ಪೂರ್ವಾಗ್ರಹದಿಂದ ಕೂಡಿದೆ ಎಂದು ಹೇಳಬಹುದು. ಮೇಲಿನ ವಚನಕ್ಕೆ ಸಂಬಂಧಿಸಿದಂತೆ ಈ ಎರಡೂ ವಿವರಣೆಗಳು ಅಪ್ಯಾಯಮಾನವಾಗುತ್ತವೆಯೇ ಎಂಬುದನ್ನು ಒಮ್ಮೆ ನೋಡಬೇಕಾಗುತ್ತದೆ. ಬಸವಣ್ಣನವರು ಬಡವರೇ ಆಗಿದ್ದರು ಎಂಬುದನ್ನು ಒಂದು ಕ್ಷಣಕ್ಕೆ ಒಪ್ಪಿಕೊಂಡರೂ ಸಹ, ಅವರೇಕೆ ದೇವಾಲಯವನ್ನು ಕಟ್ಟಲಾಗಲಿಲ್ಲ ಎಂಬ ಅಂಬೋಣವನ್ನು ಹೊರಹಾಕಬೇಕು? ಸೇವಿಸಲು ಆಹಾರ, ಇರಲು ವಸತಿ ಇಲ್ಲ ಎಂದು ಒಂದು ಪಕ್ಷ ಹೇಳಿದ್ದರೆ, ಬಡತನದ ಬೇಯ್ಗೆಯಿಂದ ಹಾಗೆ ಹೇಳುತ್ತಿದ್ದಾರೆ ಎಂದು ಅಂದಾಜಿಸಬಹುದಿತ್ತು. ಆದರೆ ಅಂತಹ ವಿಷಯಗಳನ್ನು ಹೇಳದೆ ದೇವಾಲಯವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿರುವುದು ಮತ್ತೆ ಅದಕ್ಕೆ ಪರ್ಯಾಯವಾಗಿ ತನ್ನ ದೇಹವೇ ಅಂತಹ ರಚನೆಯನ್ನು ಹೊಂದಿದೆ ಎನ್ನುವುದರಲ್ಲಿ ಬಡತನದ ಪ್ರಸ್ತಾಪ ಇಲ್ಲದಿರುವುದು ಗೋಚರಿಸುತ್ತದೆ. ಹಾಗಾದರೆ ಎರಡನೇ ವಿವರಣೆಯಾದರೂ ಇದಕ್ಕೆ ಆಪ್ತವಾಗುತ್ತದೆಯೆ? ಮತ್ತಷ್ಟು ಓದು