ನಾಡು-ನುಡಿ ಮರುಚಿಂತನೆ : ಹಿಂದೂ ಧರ್ಮ ಇಲ್ಲದಿದ್ದರೆ ಬಹುಸಂಖ್ಯಾತರು ಯಾರು?
– ರಾಜಾರಾಮ ಹೆಗಡೆ
ಇತ್ತೀಚೆಗೆ ಲಿಂಗಾಯತ ಮಠಾಧೀಶರೊಬ್ಬರು ‘ಹಿಂದೂ ಧರ್ಮ ಇಲ್ಲ ಏಕೆಂದರೆ ಹಿಂದೂಗಳು ಸಾವಿರಾರು ದೇವತೆಗಳನ್ನು ಪೂಜಿಸುತ್ತಾರೆ, ಹಾಗಾಗಿ ವೀರಶೈವರು ಹಿಂದೂಗಳಲ್ಲ, ವೀರಶೈವರು ಒಬ್ಬನೇ ದೇವತೆಯನ್ನು ಪೂಜಿಸುತ್ತಾರೆ ಹಾಗಾಗಿ ಅವರದು ಪ್ರತ್ಯೇಕ ಧರ್ಮ’ ಎಂಬ ಹೇಳಿಕೆಯನ್ನು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈಷ್ಣವ ಮಠಾಧೀಶರೊಬ್ಬರು ‘ಹಿಂದೂಗಳು ಪೂಜಿಸುವ ಶಿವ ಹಾಗೂ ಲಿಂಗಾಯತರ ಶಿವ ಒಂದೇ ಆಗಿರುವುದರಿಂದ ಅವರೂ ಹಿಂದೂ ಧರ್ಮಕ್ಕೆ ಸೇರಿದ್ದಾರೆ’ ಎಂದರು. ಇವರೆಲ್ಲ ದೇವತೆಗಳನ್ನು ಹಾಗೂ ಧರ್ಮವನ್ನು ಸಮೀಕರಿಸುತ್ತ ತಮ್ಮ ವಾದವನ್ನು ಮಂಡಿಸುತ್ತಿರುವುದು ಕುತೂಹಲಕಾರಿಯಾಗಿದೆ. ನಮ್ಮ ಇತಿಹಾಸ ಪುರಾಣಾದಿಗಳಲ್ಲಿ ಧರ್ಮದ ಕುರಿತು ಎಷ್ಟೊಂದು ಜಿಜ್ಞಾಸೆಗಳಿವೆಯಾದರೂ ಅದರ ನಿರ್ಣಯಕ್ಕೆ ದೇವತೆಗಳನ್ನು ಯಾರೂ ಕರೆದು ತಂದಿಲ್ಲ. ಹಾಗಾದರೆ ನಮ್ಮ ಮಠಾಧೀಶರುಗಳೆಲ್ಲ ನಡೆಸುತ್ತಿರುವ ಚರ್ಚೆ ಏನು?
ನಾವು ಧರ್ಮ ಎಂಬ ಶಬ್ದವನ್ನು ಇಂಗ್ಲೀಷಿನ ರಿಲಿಜನ್ ಎಂಬ ಶಬ್ದದ ಭಾಷಾಂತರವಾಗಿ ಬಳಸುತ್ತೇವೆ. ಜ್ಯೂಡಾಯಿಸಂ, ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂಗಳು ಮಾತ್ರವೇ ರಿಲಿಜನ್ನುಗಳು. ಅವರಿಗೆ ಈ ಪ್ರಪಂಚವನ್ನು ಹಾಗೂ ಮನುಷ್ಯರನ್ನು ಸೃಷ್ಟಿಸಿದ ತಂತಮ್ಮ ದೇವನು ಒಬ್ಬನೇ ಸತ್ಯ. ಅವನ ಆಜ್ಞೆಯನ್ನು ಉಲ್ಲಂಘಿಸಿದ ಪಾಪಕ್ಕಾಗಿ ಅವನಿಂದ ಅಭಿಶಪ್ತರಾಗಿ ಮನುಷ್ಯರೆಲ್ಲ ಅವನ ಲೋಕದಿಂದ ಭೂಮಿಗೆ ಬಿದ್ದರು, ಇಂಥ ಮನುಷ್ಯರು ತಮ್ಮ ಪಾಪವನ್ನು ಕಳೆದುಕೊಂಡು ಮರಳಿ ದೇವನ ಲೋಕವನ್ನು ಸೇರುವ ಮಾರ್ಗವೇ ರಿಲಿಜನ್ನು. ಈ ಸಂಗತಿಯನ್ನು ಸತ್ಯದೇವನು ಸ್ವತಃ ಆಯಾ ರಿಲಿಜನ್ನಿನ ಒಬ್ಬ ಪ್ರವಾದಿಗೆ ತಿಳಿಸಿದ್ದಾನೆ ಹಾಗೂ ಅದನ್ನಾಧರಿಸಿ ಅವರ ಪವಿತ್ರ ಗ್ರಂಥ ರೂಪುಗೊಂಡಿದೆ. ಈ ಗ್ರಂಥಗಳ ವಾಕ್ಯಗಳು ಆಯಾ ರಿಲಿಜನ್ನಿನ ಅನುಯಾಯಿಗಳ ಕ್ರಿಯೆಗಳಿಗೆ ಆಧಾರವಾಗಿರುತ್ತವೆ.