ನಾಡು-ನುಡಿ ಮರುಚಿಂತನೆ : ಶಂಕರಾಚಾರ್ಯರು ಮತ್ತು ಜಾತಿವ್ಯವಸ್ಥೆಯ ಕಥೆ
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಶಂಕರಾಚಾರ್ಯರು ಇಂದು ಒಂದು ವರ್ಗದ ಬುದ್ಧಿಜೀವಿಗಳ ಟೀಕೆಗೆ ಗುರಿಯಾಗಿದ್ದಾರೆ.ಅವರೆಂದರೆ ಜಾತಿ ವ್ಯವಸ್ಥೆಯ ವಿನಾಶವನ್ನು ಪ್ರತಿಪಾದಿಸುವವರು.ಜಾತಿ ವ್ಯವಸ್ಥೆ ಎಂಬ ಕಥೆಯ ಸಾರವಿಷ್ಟು: ಇಂದು ಭಾರತದಲ್ಲಿ ಕಂಡುಬರುವ ಸಕಲ ಜಾತಿಗಳನ್ನೂ, ಅವುಗಳ ಪದ್ಧತಿಗಳನ್ನೂ ಹಾಗೂ ತರತಮಗಳನ್ನೂ ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ರಚಿಸಿದರು ಹಾಗೂ ತಮ್ಮ ಧರ್ಮಶಾಸ್ತ್ರಗಳೆಂಬ ಕಾನೂನುಗಳನ್ನು ಮಾಡಿ ಅವು ಮುಂದುವರೆಯುವಂತೆ ನೋಡಿಕೊಂಡರು. ಈ ಕಥೆಯನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕಾದರೆ ಅದಕ್ಕೆ ಆಧಾರಗಳು ಬೇಕೇ ಬೇಕು. ಶಂಕರಾಚಾರ್ಯರು ಅಂಥದ್ದೊಂದು ಆಧಾರ ಎಂಬುದಾಗಿ ಈ ಬುದ್ಧಿಜೀವಿಗಳು ನಂಬಿದ್ದಾರೆ. ಶಂಕರರ ತತ್ವಜ್ಞಾನ ಹಾಗೂ ಜಿಜ್ಞಾಸೆಗಳು ಈ ವರ್ಗಕ್ಕೆ ಅಪ್ರಸ್ತುತ. ಅವರ ತತ್ವಜ್ಞಾನವೇ ಬ್ರಾಹ್ಮಣಶಾಹಿಯ ಒಂದು ಕಣ್ಕಟ್ಟಾಗಿರುವುದರಿಂದ ಅದಕ್ಕೆ ಬಲಿಯಾಗಬಾರದು ಎಂಬ ಎಚ್ಚರಿಕೆ ಕೂಡ ಇವರಲ್ಲಿ ಸದಾ ಜಾಗೃತವಾಗಿ ಇರುತ್ತದೆ.
ಆದರೆ ಶಂಕರರ ಸಿದ್ಧಾಂತವನ್ನು ಪರಿಚಯಿಸಿಕೊಂಡ ಯಾರಿಗಾದರೂ ಅವರು ಎಲ್ಲಾ ಬಿಟ್ಟು ಜಾತಿಭೇದವನ್ನು ಎತ್ತಿ ಹಿಡಿಯಲಿಕ್ಕಾಗಿ ತಮ್ಮ ಜೀವ ಸವೆಸಿದರು ಎಂಬುದು ಹಾಸ್ಯಾಸ್ಪದವಾಗಿ ಕಾಣುವುದರಲ್ಲಿ ಸಂದೇಹವಿಲ್ಲ. ತಾವು ಪ್ರತಿಪಾದಿಸುವ ಜ್ಞಾನವು ಜಾತಿ, ಒಣ ಪಾಂಡಿತ್ಯ, ತರ್ಕ, ಶಾಸ್ತ್ರ ಇತ್ಯಾದಿಗಳನ್ನು ಮೀರಿದ್ದು ಎಂಬುದನ್ನು ಅವರು ಸ್ಪಷ್ಟವಾಗಿಯೇ ಸಾರುತ್ತಾರೆ. ಜ್ಞಾನಿಯಾದವನಲ್ಲಿ ‘ಜಾತಿ ಭೇದ’ ಅಳಿಯುತ್ತದೆ ಹಾಗೂ ಎಲ್ಲರಲ್ಲೂ ನಾನೇ ಇದ್ದೇನೆ ಎನ್ನುವ ಅನುಭವವಾಗುತ್ತದೆ ಎನ್ನುತ್ತಾರೆ. ಇಂಥ ಹೇಳಿಕೆಗಳು ಜಾತಿಭೇದವನ್ನು ಗಟ್ಟಿಮಾಡುತ್ತವೆ ಎನ್ನಬಹುದಾದರೆ ಜಾತಿಭೇದ ಅಳಿಯಬೇಕು ಎನ್ನುತ್ತಿರುವ ಇಂದಿನ ಎಲ್ಲ ಬುದ್ಧಿಜೀವಿಗಳ ಹೇಳಿಕೆಗಳೂ ಅದೇ ಕೆಲಸವನ್ನು ಮಾಡುತ್ತಿವೆ ಎಂದೇಕೆ ಹೇಳಬಾರದು? ಹಾಗಾಗಿ ಶಂಕರರ ಮೇಲಿನ ಆಪಾದನೆಯು ತರ್ಕಬದ್ಧವಾಗಿ ಕಾಣಿಸುವುದಿಲ್ಲ. ಹಾಗಾದರೆ ಈ ಆಪಾದನೆಯು ಎಲ್ಲಿಂದ ಹುಟ್ಟಿಕೊಂಡಿತು?