ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹ
– ಡಾ.ಸಂಗಮೇಶ ಸವದತ್ತಿಮಠ
ಬೆಂಗಳೂರಿನಲ್ಲಿ ಸುಪ್ರೀಮ್‍ಕೋರ್ಟ ವಿಶ್ರಾಂತ ನ್ಯಾಯಮೂರ್ತಿ ಶ್ರೀ ಎಂ.ಎನ್.ವೆಂಕಟಾಚಲಯ್ಯ ಅವರು,ದಿನಾಂಕ 29-7-2012 ರಂದು ಮಾಜಿ ಕೇಂದ್ರ ಸಚಿವ ಹಾಗೂ ಪತ್ರಕರ್ತ ಅರುಣ ಶೌರಿ ಅವರ ನಾಲ್ಕು ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈಚೆಗೆ ನಮ್ಮ ದೇಶದಲ್ಲಿ `ನಕಾರಾತ್ಮಕ ಸಾಮಾಜಿಕ ವಿಮರ್ಶಾ ಸಮೂಹ’ದ (Negetive Social Critical mass) ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ ಎಂದು ಹೇಳಿದ್ದು ನಮ್ಮನ್ನು ಯೋಚಿಸುವಂತೆ ಮಾಡಿದೆ. ಅವರು ಹೇಳಿದ ’Social Critical mass’, ಎಂಬುದು ಎಲ್ಲ ವಲಯಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಹಬ್ಬಿಸುತ್ತಲಿದೆ. ಸಾಮಾಜಿಕ ಸಮೂಹ ಎಂಬುದು ಒಂದು ಜಾತಿ ಅಥವಾ ಒಂದು ಧರ್ಮ ಇಲ್ಲವೆ ರಾಜಕೀಯ ಪಕ್ಷದ ಒಬ್ಬ ಮುಖಂಡನ ಸುತ್ತ ಗಿರಕಿಹೊಡೆಯುತ್ತ ಇರುತ್ತದೆ. ಮುಖಂಡನು ತನ್ನ ಸುತ್ತಮುತ್ತಣದವರ ಸ್ವಾರ್ಥ ಲಾಲಸೆಗಳನ್ನು ಪೂರೈಸಲೋಸುಗ ಒಂದು ಅಥವಾ ಹಲವು ಸಮಾನ ಮನಸ್ಕ ಜನತಾಗುಂಪುಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ. ಅಂಥ ಗುಂಪಿನ ಜನ ಹತ್ತಾರು ಸಾವಿರವಿದ್ದರೂ ಆಯಿತು, ಆತನು ಮೊದಲು ಕೈಹಾಕುವುದು ಆಡಳಿತದಲ್ಲಿದ್ದ ಸರ್ಕಾರದ ಕುತ್ತಿಗೆಗೆ. ನನಗೆ ಇಷ್ಟು ಜನಬೆಂಬಲವಿದೆ, ನಮ್ಮ ಸಮುದಾಯವನ್ನು ಸರ್ಕಾರ ನಿರ್ಲಕ್ಷಿಸಿದೆ. ಅದಕ್ಕೆ ಇಂತಿಂಥ ಸೌಲಭ್ಯಗಳು ನಮ್ಮವರಿಗೆ ಬೇಕು ಎಂದು ಒಂದು ದೊಡ್ಡ ಪಟ್ಟಿಯನ್ನು ಮುಂದಿಡುತ್ತಾನೆ. ಇಂಥ ಮುಖಂಡರು ಭಸ್ಮಾಸುರರಿದ್ದಂತೆ. ಒಂದು ಪಕ್ಷವು ಆಡಳಿತದಲ್ಲಿ ಇದ್ದಾಗ ಆ ಪಕ್ಷದಿಂದ ಏನು ಬೇಕೋ ಅದನ್ನೆಲ್ಲ ವಾಮಮಾರ್ಗದಿಂದಾದರೂ ಸರಿಯೆ, ಇನ್ನಿತರರಿಗೆ ಕಷ್ಟವಾದರೂ ಸರಿಯೆ ಬಾಚಿಕೊಳ್ಳುವುದು. ನಂತರ ಮತ್ತೊಂದು ಪಕ್ಷವು ಆಡಳಿತಕ್ಕೆ ಬಂದರೆ ಅಲ್ಲಿಯೂ ಅವನು ಅದೇ ಬಗೆಯ ತಂತ್ರಗಾರಿಕೆಯನ್ನು ಉಪಯೋಗಿಸುತ್ತಾನೆ. ಅವನಿಗೆ ಯಾರು ಅಧಿಕಾರದಲ್ಲಿ ಇದ್ದರೇನು? ತನ್ನ ಮತ್ತು ತನ್ನವರ ಕಾರ್ಯ ಸುಲಭವಾಗಿ ಸಾಗುವಂತಿದ್ದರೆ ಆಯಿತು. ಇದೀಗ ಮಠಾಧೀಶರೂ ಅದೇ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಅದಕ್ಕಾಗೆ ಜಾತಿಗೊಂದು ಮಠಗಳು ಹುಟ್ಟಿಕೊಳ್ಳುತ್ತಿವೆ. ಮಠಾಧೀಶರಿಗೆ ರಾಜಕಾರಣಿಗಳಿಗೆ ಈಗ ವ್ಯತ್ಯಾಸ ಕಡಿಮೆಯಾಗುತ್ತಿದೆ. ತಮ್ಮ ತಮ್ಮ ಜಾತಿ ಗುಂಪುಗಳ ಅನುಕೂಲಸಿಂಧು ಚಟುವಟಿಕೆಗಳೇ ತಮತಮಗೆ ಮುಖ್ಯ ಎಂಬುದನ್ನು ಬಹಿರಂಗವಾಗಿಯೇ ಅವರು ತೋರ್ಪಡಿಸಿಕೊಳ್ಳುತ್ತಿದ್ದಾರೆ. ಇದು ಭಾರತವನ್ನು ಧರ್ಮ-ಜಾತಿ-ಪಕ್ಷ ಆಧಾರಿತ ಗುಂಪುಗಳಲ್ಲಿ ಛಿದ್ರಗೊಳಿಸುವ ಬಹು ಕೆಟ್ಟ ಬೆಳವಣಿಗೆ.
ಮತ್ತಷ್ಟು ಓದು