ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨
– ವಿನಾಯಕ ಹಂಪಿಹೊಳಿ
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
ರಿಲಿಜನ್ನುಗಳಲ್ಲಿ ತರ್ಕಕ್ಕೆ ನಂಬಿಕೆಯ ನಂತರದ ಸ್ಥಾನವಿದೆ. ನಂಬಿಕೆಗೆ ಪ್ರಥಮ ಪ್ರಾಶಸ್ತ್ಯ. ನಂಬಿಕೆಗೂ ತರ್ಕಕ್ಕೂ ವಿರೋಧಾಭಾಸವಿದ್ದಲ್ಲಿ ನಂಬಿಕೆಯೇ ಸತ್ಯ. ತರ್ಕಕ್ಕೆ ಅಲ್ಲಿ ಜಾಗವಿಲ್ಲ. ತರ್ಕದಿಂದ ಭಗವಂತನ ದರ್ಶನವೂ ಆಗುವದಿಲ್ಲ ಮತ್ತು ತರ್ಕದಿಂದ ಸ್ವರ್ಗಪ್ರಾಪ್ತಿಯೂ ಇಲ್ಲ. ತರ್ಕವೇನಿದ್ದರೂ, ಉಳಿದ ರಿಲಿಜನ್ನುಗಳಿಗಿಂತ ತಮ್ಮ ರಿಲಿಜನ್ನು ಹೇಗೆ ಶ್ರೇಷ್ಠ ಎಂಬುದನ್ನು ತೋರಿಸಲು, ಮತ್ತು ತಮ್ಮ ರಿಲಿಜನ್ನುಗಳ ಮೂಲ ಕಲ್ಪನೆಗಳು ಮಾತ್ರ ಪರಮ ಸತ್ಯ ಎಂದು ಸಾಬೀತು ಪಡಿಸಲು ಅಷ್ಟೇ. ಉದಾಹರಣೆಗಾಗಿ ದೇವನು ಒಬ್ಬನೇ ಎಂಬುದನ್ನು ಸೆಮೆಟಿಕ್ ರಿಲಿಜನ್ನುಗಳು ನಂಬುತ್ತವೆ. ಮತ್ತು ಅದಕ್ಕೆ ಸಾಕಷ್ಟು ತರ್ಕಗಳನ್ನೂ ನೀಡುತ್ತವೆ. ಆದರೆ ದೇವನ ನಾಮ ಮತ್ತು ಗುಣಗಳ ಬಗ್ಗೆ ವಿರೋಧಾಭಾಸಗಳಿವೆ. ಪ್ರತಿಯೊಂದು ರಿಲಿಜನ್ನೂ ತಮ್ಮ ಪ್ರವಾದಿಗಳೇ ಸತ್ಯ ಎಂದು ಸಾರುತ್ತವೆ. ಮತ್ತು ಉಳಿದ ರಿಲಿಜನ್ನುಗಳ ಮುಂದೆ ಅದನ್ನೇ ತರ್ಕಬದ್ಧವಾಗಿ ಸಾಧಿಸುತ್ತವೆ.
ಆದರೂ ರಿಲಿಜನ್ನಿನ ಅನುಯಾಯಿಗಳು ತರ್ಕವನ್ನು ತಮ್ಮ ರಿಲಿಜನ್ನಿನ ಗ್ರಂಥಗಳ ಮೇಲೆ ಬಿಟ್ಟುಕೊಳ್ಳುವದಿಲ್ಲ. ಉದಾಹರಣೆಗೆ ಹಳೇ ಒಡಂಬಡಿಕೆಯೇ ಸತ್ಯ ಎಂಬುದು ಯಹೂದಿಗಳು ನಂಬುತ್ತಾರೆ ಅದಕ್ಕೆ ಅವರು ತರ್ಕವನ್ನು ಬೇಡುವದಿಲ್ಲ. ಆದರೆ ಹೊಸ ಒಡಂಬಡಿಕೆಯನ್ನು ಒಪ್ಪಿಕೊಳ್ಳಲು ತರ್ಕದ ಸಾಧನೆಯನ್ನು ಅಪೇಕ್ಷಿಸುತ್ತಾರೆ. ಮೊಹಮದ್ ಪೈಗಂಬರ್ ಅಂತಿಮ ಪ್ರವಾದಿ ಎಂಬುದನ್ನು ಮುಸ್ಲಿಮರು ತಮ್ಮ ಗ್ರಂಥದಿಂದಲೇ ಒಪ್ಪಿರುತ್ತಾರೆ. ಆದರೆ ಉಳಿದ ರಿಲಿಜನ್ನಿನವರಿಗೂ ಅದನ್ನು ಮನವರಿಕೆ ಮಾಡಲು ತರ್ಕವನ್ನಾಶ್ರಯಿಸುತ್ತಾರೆ. ಉಳಿದ ಗ್ರಂಥಗಳಲ್ಲಿನ ಇತಿಮಿತಿಗಳನ್ನು ತೋರಿಸಲು ತರ್ಕವನ್ನು ಹಿಡಿಯುತ್ತಾರೆ. ಆದರೆ ತಮ್ಮ ಗ್ರಂಥಗಳ ಇತಿಮಿತಿಗಳನ್ನು ತೋರಿಸುವ ಅದೇ ತರ್ಕವನ್ನು ಅಲ್ಲಗೆಳೆದು ತಮ್ಮ ಗ್ರಂಥವು ತರ್ಕಾತೀತವೆಂದು ಸಾರುತ್ತಾರೆ.