ಕಾಡು ಮತ್ತು ಕ್ರೌರ್ಯ ( ಪುಸ್ತಕ ಪರಿಚಯ)
– ನಾಗೇಶ ಮೈಸೂರು
ಸಾಧಾರಣವಾಗಿ ತೇಜಸ್ವಿಯರ ಯಾವುದೇ ಪುಸ್ತಕವನ್ನು ಪರಿಚಯ ಮಾಡಿಸುವ ಅಗತ್ಯ ಇರುವುದಿಲ್ಲ. ಅವೊಂದು ರೀತಿ ‘ಸ್ವಯಂಭು’ ಪ್ರವೃತ್ತಿಯ ‘ಸ್ವಯಂದರ್ಶಿ’ ಜಾತಿಗೆ ಸೇರಿದವು. ಆದರೂ ಈ ಪುಸ್ತಕ ನೋಡಿದಾಗ ಒಂದು ಪರಿಚಯ ಮಾಡಿಸುವ ಅಗತ್ಯವಿದೆ ಎನಿಸಿತು. ಅದಕ್ಕೆ ಮೊದಲ ಕಾರಣ – ಇದು ೧೯೬೨ರಲ್ಲಿ ತಮ್ಮ ಎಂ.ಎ. ಮುಗಿಸಿದ ನಂತರದ ದಿನಗಳಲ್ಲಿ ತೇಜಸ್ವಿ ಬರೆದ ಮೊಟ್ಟಮೊದಲ ಕಾದಂಬರಿ. ನಾನಾ ಕಾರಣಗಳಿಂದ ಪ್ರಕಟವಾಗದೆ ತೀರಾ ಈಚೆಗೆ ಬೆಳಕು ಕಂಡ ಕೃತಿ. ಪ್ರಕಾಶಕರ ಮಾತಿನಲ್ಲೇ ಹೇಳಿದಂತೆ ಸ್ವರೂಪ ಮತ್ತು ನಿಗೂಢ ಮನುಷ್ಯರು ಬರೆದಾದ ಮೇಲೆ ಸ್ವತಃ ತೇಜಸ್ವಿಯವರೇ, ಈ ಪುಸ್ತಕ ಪ್ರಕಟಿಸುವ ಮಾತೆತ್ತಿದಾಗ ‘ಹೂಂ’ ಅಥವಾ ‘ಉಹೂಂ’ ಎರಡೂ ಅಲ್ಲದ ತಮ್ಮ ಕಥೆಗಳಷ್ಟೇ ನಿಗೂಢವಾದ ಮುಗುಳ್ನಗೆಯೊಂದನ್ನು ಬಿತ್ತರಿಸಿ ಸುಮ್ಮನಾಗಿಬಿಡುತ್ತಿದ್ದರಂತೆ. ಅಂತಹ ಪುಸ್ತಕವೊಂದು ಕೊನೆಗೂ ೨೦೧೩ ರಲ್ಲಿ, ಬರೆದ ಸುಮಾರು ಐವತ್ತು ವರ್ಷಗಳ ನಂತರ ಪ್ರಥಮ ಮುದ್ರಣ ಭಾಗ್ಯ ಕಂಡಿತೆಂದ ಮೇಲೆ ಅದರ ಕುರಿತಾದ ಪರಿಚಯ ಸಾಕಷ್ಟು ಕುತೂಹಲಕಾರಿಯಾದ ವಿಷಯವೇ ಅಲ್ಲವೇ ? ಬಹುತೇಕ ತೇಜಸ್ವಿ ‘ಪರಮಾಭಿಮಾನಿ’ಗಳಿಗು ಈ ಪುಸ್ತಕ ಪರಿಚಿತವಿರಲಾರದೆಂಬ ಅನಿಸಿಕೆಯಲ್ಲಿ ಹೀಗೊಂದು ಪರಿಚಯದ ಯತ್ನ. ಮತ್ತಷ್ಟು ಓದು