ಬೀಭತ್ಸ (ಭಾಗ ೨)
ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಭಾಗ 1 ರಿಂದ ಮುಂದುವರೆದ ಕತೆ
“ಎಷ್ಟು ಬೇಗ ಈ ಆಚರಣೆ ಮರುಕಳಿಸಿತು ಅಲ್ಲವಾ..”? ಎಂದವಳು ಶ್ರೀಮತಿ ಡೆಲಾಕ್ರೋಕ್ಸ್. ಅವಳ ಮಾತಿಗೆ ಸಮ್ಮತಿಸುವಂತೆ ತಲೆಯಾಡಿಸಿದ ಶ್ರೀಮತಿ ಗ್ರೇವ್ಸ್, “ಹೌದು, ಮೊನ್ನೆಮೊನ್ನೆಯಷ್ಟೇ ಕಳೆದ ವರ್ಷದ ಚೀಟಿಯೆತ್ತುವಿಕೆಯ ಆಚರಣೆ ಮುಗಿದಿತ್ತೇನೋ ಎಂದು ಭಾಸವಾಗುತ್ತಿದೆ. ಕಾಲ ಎಷ್ಟು ಬೇಗ ಸರಿದು ಹೋಗುತ್ತದಲ್ಲವಾ..’?”ಎಂದು ನುಡಿದಳು. ಅಷ್ಟರಲ್ಲಿ ಕ್ಲಾರ್ಕ್ ನ ಸರದಿ ಮುಗಿದು ಡೆಲಾಕ್ರೋಕ್ಸ್ ತನ್ನ ಪಾಳಿಗಾಗಿ ಕಾಯುತ್ತ ನಿಂತಿದ್ದ. “ಅಲ್ನೋಡು ನನ್ನ ಗಂಡನ ಸರದಿ ಬಂದೇ ಬಿಟ್ಟಿತು” ಎಂದ ಅವನ ಮಡದಿಗೆ ಒಂದು ಕ್ಷಣ ಉಸಿರು ನಿಂತ ಅನುಭವ. ಡೆಲಾಕ್ರೊಕ್ಸ್ ಚೀಟಿಯನ್ನೆತ್ತಿಕೊಂಡು ಸ್ವಸ್ಥಾನಕ್ಕೆ ಮರಳಿದ. “ಡನ್ಬರ್” ಎಂಬ ಹೆಸರು ಕೇಳುತ್ತಲೇ ಕಾಲು ಮುರಿದುಕೊಂಡು ಮನೆಯಲ್ಲಿಯೇ ಮಲಗಿದ್ದ ಡನ್ಬರನ ಮಡದಿ ನಿಧಾನವಾಗಿ ಕಪ್ಪುಪೆಟ್ಟಿಗೆಯ ಬಳಿ ನಡೆಯಲಾರಂಭಿಸಿದಳು. ಆಕೆಯನ್ನು ಗಮನಿಸಿದ ಮಹಿಳೆಯೊಬ್ಬಳು “ಧೈರ್ಯವಾಗಿ ಹೋಗು ಜೇನಿ, ಭಯ ಬೇಡ” ಎನ್ನುತ್ತ ಆಕೆಯನ್ನು ಹುರಿದುಂಬಿಸಿದಳು. “ನಮ್ಮದು ಮುಂದಿನ ಸರದಿ” ಎನ್ನುತ್ತ ಕೊಂಚ ಗಂಭೀರಳಾದಳು ಶ್ರೀಮತಿ ಗ್ರೇವ್ಸ್. ತನ್ನ ಪತಿ ಗಡಿಬಿಡಿಯಾಗಿ ಕರಿಪೆಟ್ಟಿಗೆಯತ್ತ ತೆರಳಿ ಸಮ್ಮರ್ಸನಿಗೊಂದು ನಮಸ್ಕಾರ ಹೇಳಿ, ಚೀಟಿಯನ್ನು ಎತ್ತಿದ್ದನ್ನು ದೂರದಿಂದಲೇ ಗಮನಿಸಿದಳಾಕೆ. ಸಾಕಷ್ಟು ಸಮಯ ಕಳೆದಿತ್ತು. ಅದಾಗಲೇ ಚೀಟಿಯನ್ನು ಎತ್ತುಕೊಂಡಿದ್ದ ಜನ ಚೀಟಿಯನ್ನು ತೆರೆದು ನೋಡಲಾಗದೆ, ಕುತೂಹಲವನ್ನು ತಡೆದುಕೊಳ್ಳಲಾಗದೆ ನಿಂತಲ್ಲೆ ಸಣ್ಣಗೆ ಕಂಪಿಸುತ್ತಿದ್ದರು. ಡನ್ಬರನ ಮಡದಿ ಸಹ ಕೊಂಚ ಆತಂಕದಿಂದಲೇ ತನ್ನೆರಡು ಮಕ್ಕಳೊಡಗೂಡಿ ಮೂಲೆಯೊಂದರಲ್ಲಿ ನಿಂತಿದ್ದಳು. ಅಷ್ಟರಲ್ಲಿ ಹರ್ಬರ್ಟನ ಸರದಿ ಮುಗಿದು, ಹಚ್ಚಿಸನ್ನನ ಸರದಿ ಬಂದಿತ್ತು. “ಬೇಗ ಹೋಗಿ ಚೀಟಿ ಎತ್ತು, ಬಿಲ್” ಎಂದ ಟೆಸ್ಸಿಯ ಮಾತಿನ ಶೈಲಿಯೇ ನೆರೆದಿದ್ದ ಕೆಲವರಿಗೆ ನಗು ತರಿಸಿತ್ತು. ಹಚ್ಚಿಸನ್ನನ ನಂತರ ಚೀಟಿಯೆತ್ತುವ ಸರದಿ ಜೋನ್ಸಳದ್ದು. ಮತ್ತಷ್ಟು ಓದು