ಶಂಕರಾಚಾರ್ಯರ ಕುರಿತು ವಿವೇಕಾನಂದರ ಧೋರಣೆಗಳು.
-ಚೈತನ್ಯ ಮಜಲುಕೋಡಿ
ಶಂಕರರ ಕುರಿತು ಹಲವು ಬುದ್ಧಿಜೀವಿಗಳು ಅನುಸರಿಸಿರುವ ಏಕಮುಖ ಮತ್ತು ಛಿದ್ರಾನ್ವೇಷಣ ಮನಸ್ಥಿತಿಯ ಧೋರಣೆಯಲ್ಲಿ ಶಂಕರರೆಂದರೆ ವಿವೇಕಾನಂದರಿಗೆ ಅಲರ್ಜಿ ಎಂಬಂತೆ ಬಿಂಬಿಸಿಬಿಟ್ಟಿದ್ದಾರೆ. ಅಂತಹವರಿಂದಾಗಿ ನಮ್ಮಲ್ಲಿ ಯಾರು ಏನು ಬರೆದಿದ್ದಾರೆಂದು ಪೂರ್ತಿಯಾಗಿ ಅವಲೋಕಿಸುವ ಜಿಜ್ಞಾಸೆಯ ಆಸಕ್ತಿ ಮತ್ತೂ ಕಡಿಮೆಯಾಗಿಬಿಟ್ಟಿದೆ. ಪ್ರಸ್ತುತ ನಮಗೆ ವಿವೇಕಾನಂದರು ತಮ್ಮ ವಿಚಾರಗಳಲ್ಲಿ ಶಂಕರರ ಬಗ್ಗೆ ಯಾವ ರೀತಿಯ ಮನೋಭಾವ ಹೊಂದಿದ್ದರೆಂದು ಸಮಗ್ರವಾಗಿ ಅರಿಯಬೇಕಾದ್ದು ಮುಖ್ಯವಾದ ಕೆಲಸ. ತಮ್ಮ ಪ್ರಖರ ವಿದ್ವತ್ತಿನ ಸ್ವರೂಪದಿಂದ ಇಂದಿಗೂ ಈ ಆಚಾರ್ಯದ್ವಯರು ದೇದೀಪ್ಯಮಾನರಾಗಿ ಬೆಳಗುತ್ತಿದ್ದಾರೆ. ಸಾವಿರವಿವೇಕಾನಂದರು ಸೇರಿದರೆ ಒಬ್ಬರು ಶಂಕರಾಚಾರ್ಯರಾಗಬಹುದು ಎಂದು ಅವರ ಪಟ್ಟಶಿಷ್ಯೆ ಸಿಸ್ಟರ್ ನಿವೇದಿತಾ ಅವರೇ ಒಂದೆಡೆ ಹೇಳಿದ್ದಾರೆ. ಹಾಗಾಗಿ ಸ್ವಾಮಿ ವಿವೇಕಾನಂದರು ಯಾವ ಸಂದರ್ಭಗಳಲ್ಲಿ ಏನೆಲ್ಲ ನುಡಿದಿದ್ದಾರೆ/ಬರೆದಿದ್ದಾರೆ ಎಂಬ ಹಿನ್ನೆಲೆ, ಶಂಕರರ ಬಗ್ಗೆ ಅವರಿಗೆ ದೊರಕಿರಬಹುದಾದ ಅಂಶಗಳು, ಅವರ ವೈಚಾರಿಕ ತುಲನೆ ಮತ್ತು ಧೋರಣೆ, ಶಂಕರಾಚಾರ್ಯರ ಬರವಣಿಗೆ ಮತ್ತು ಜೀವನ ಇವುಗಳ ಬಗ್ಗೆ ವಿವೇಕಾನಂದರ ವಿಚಾರಗಳೇನಿದ್ದವು ಎಂಬುದನ್ನ ನೋಡೋಣ.
ಮೊದಲಿಗೆ ಶಂಕರರ ಬಗ್ಗೆ ಹೇಳಿದರೆನ್ನುವ ಋಣಾತ್ಮಕ ಅಭಿಪ್ರಾಯಗಳ ಕುರಿತು ನೋಡುವ.
೧.ವಿವೇಕಾನಂದರು ತುಂಬಾ ಗೌರವಿಸುತ್ತಿದ್ದ ಪ್ರಮದದಾಸ್ ಮಿತ್ರ ಎಂಬುವರಿಗೆ ಬರೆದ ಪತ್ರದ ಉಲ್ಲೇಖ:
ವೇದಾಂತ ಸೂತ್ರಗಳ ಮೇಲಿನ ಭಾಷ್ಯಗಳಲ್ಲಿ ಶಂಕರಾಚರ್ಯರು ಎಲ್ಲಿ ಸ್ಮೃತಿಗಳನ್ನು ಉದಹರಿಸಿರುವರೋ ಅಲ್ಲೆಲ್ಲ ಮಹಾಭಾರತದ ಪ್ರಮಾಣವನ್ನು ಪ್ರಸ್ತಾಪಿಸಿರುವರು. ಆದರೆ ಮಹಾಭಾರತದ ಭೀಷ್ಮಪರ್ವದಲ್ಲಿ ಮತ್ತು ಅಜಗರ ಮತ್ತು ಉಮಾಮಹೇಶ್ವರ ಕಥೆಗಳಲ್ಲಿ, ಜಾತಿಪದ್ಧತಿಯನ್ನು ಅವರವರ ಯೋಗ್ಯತೆಯ ಆಧಾರದ ಮೇಲೆ ನಿರ್ಣಯಿಸುತ್ತಿದ್ದರೆಂಬುದಕ್ಕೆ ಸ್ಪಷ್ಟವಾದ ರುಜುವಾತಿದೆ. ಶಂಕರಾಚರ್ಯರು ತಮ್ಮ ಬರವಣಿಗೆಯಲ್ಲಿ ಈ ವಿಷಯವಾಗಿ ಪ್ರಸ್ತಾಪಿಸಿದ್ದಾರೆಯೆ?
ವೇದಗಳ ಪುರುಷಸೂಕ್ತದಲ್ಲಿ ಜಾತಿಪದ್ಧತಿಯ ಸಿದ್ಧಾಂತ ಅನುವಂಶಿಕವಲ್ಲ. ಹಾಗಾದಲ್ಲಿ ವೇದಗಳಲ್ಲಿ ಜಾತಿಪದ್ಧತಿಯನ್ನು ಅನುವಂಶಕವಾಗಿ ಒಯ್ಯವ ಹಲವು ಉದಾಹರಣೆಗಳಿವೆಯಲ್ಲ, ಅವು ಯಾವುವು? ಶೂದ್ರರು ವೇದಗಳನ್ನೋದಬಾರದೆಂಬುದು ವೇದಗಳಲ್ಲಿದೆ ಎಂಬ ವಿಷಯವಾಗಿ ಆಚಾರ್ಯರು ಯಾವ ರುಜುವಾತನ್ನೂ ಒದಗಿಸಲಾರದೇಹೋದರು. ಯಜ್ಞಗಳನ್ನು ಮಾಡಲು ಅರ್ಹತೆ ಇಲ್ಲದಿದ್ದ ಮೇಲೆ ಉಪನಿಷತ್ತು ಮುಂತಾದವುಗಳನ್ನೂ ಅವನಿಗೆ ಓದಲು ಹಕ್ಕಿಲ್ಲ ಎಂಬುದನ್ನು ಸಮರ್ಥಿಸಲು ಹೋಗಿ “ಯಜ್ಞೇಅನವಕ್ಲುಪ್ತಾ”(ತೈತ್ತಿರೀಯ ಸಂಹಿತಾ VII. ID.1.6) ಎಂಬುದನ್ನು ಮಾತ್ರ ಅವರು ಉದ್ಧರಿಸುತ್ತಾರೆ. ಅದರೆ ಅದೇ ಆಚಾರ್ಯರು “ಅಥಾsತೋಬ್ರಹ್ಮ ಜಿಜ್ಞಾಸಾ” (ಬ್ರಹ್ಮ ಸೂತ್ರಗಳು I.I.1) ವಿಷಯವಾಗಿ”ಅಥ” ಎನ್ನುವುದು ಇಲ್ಲಿ “ವೇದಗಳ ವ್ಯಾಸಂಗದ ತರುವಾಯ” ಎಂದರ್ಥವಲ್ಲ ಎಂದು ಅಭಿಪ್ರಾಯಪಡುತ್ತಾರೆ. ಏಕೆಂದರೆ ಬ್ರಾಹ್ಮಣಗಳನ್ನೂ ಮಂತ್ರಗಳನ್ನೂ ಮುಂಚೆಯೇ ವ್ಯಾಸಂಗ ಮಾಡಿದು ಹೊರತು ಉಪನಿಷತ್ತುಗಳ ವ್ಯಾಸಂಗಕ್ಕೆ ಅವಕಾಶವಿಲ್ಲ ಮತ್ತು ವೇದಗಳ ಕರ್ಮಕಾಂಡಕ್ಕೂ ಮತ್ತು ವೇದಗಳ ಜ್ಞಾನಕಾಂಡಕ್ಕೂ ಸ್ವಾಭಾವಿಕವಾದ ಅನುಕ್ರಮವಿಲ್ಲ ಎಂಬ ಪ್ರಮಾಣಕ್ಕೆ ಅದು ವಿರುದ್ಧವಾಗಿದೆ. ಆದ್ದರಿಂದ ವೇದಗಳ ಕರ್ಮಕಾಂಡವನ್ನು ಓದದೆ ಬ್ರಹ್ಮಜ್ಞಾನವನ್ನು ಪಡೆಯಬಹುದೆಂಬುದು ಸ್ಪಷ್ಟವಾಯಿತು. ಹಾಗಾದಲ್ಲಿ ಜ್ಞಾನಕ್ಕೂ ಕರ್ಮಕಾಂಡಕ್ಕೂ ಅನುಕ್ರಮ ಇಲ್ಲವೆಂದ ಮೇಲೆ ಆಚಾರ್ಯರು ಏಕೆ, “ಅದೇ ತರ್ಕದಿಂದ” ಎಂಬ ಷರತ್ತನ್ನು ಶೂದ್ರರವಿಷಯದಲ್ಲಿ ಸೇರಿಸಿ, ತಮ್ಮ ಸ್ವಂತ ಹೇಳಿಕೆಗೇ ವಿರುದ್ಧವಾಗಿ ಹೇಳಿದ್ದಾರೆ? ಶೂದ್ರರೇಕೆ ಉಪನಿಷತ್ತನ್ನು ಓದಬಾರದು?” (೧)
೨. ಅವರ ಶಿಷ್ಯ ಬಾಬು ಶರತ್ ಚಂದ್ರ ಚಕ್ರವರ್ತಿ ಡೈರಿಯಿಂದ ಗುರುಶಿಷ್ಯರ ನಡುವಿನ ಸಂಭಾಷಣೆಯನ್ನು ಬರೆದಿಟ್ಟುಕೊಂಡ ವಿವರಣೆಯಿಂದ ಇದನ್ನು ಆಯ್ದಕೊಳ್ಳಲಾಗಿದೆ: “ಹೀಗೆ ನಾನಾ ಪ್ರಸ್ತಾವವು ನಡೆಯುತ್ತಾ ಶ್ರೀಮದ್ ಶಂಕರಾಚಾರ್ಯರ ಮಾತು ಬಂತು. ಶಿಷ್ಯನಿಗೆ ಶಂಕರಾಚಾರ್ಯರ ಮೇಲೆ ತುಂಬ ಅಭಿಮಾನ. ಅಷ್ಟೇ ಏಕೆ ಈ ವಿಷಯದಲ್ಲಿ ಅವನನ್ನು ಅತಿ ಪಕ್ಷಪಾತಿ ಎಂದುಬೇಕಾದರೂ ಹೇಳಬಹುದು. ಅವನು ಶಂಕರಾಚಾರ್ಯರಿಂದ ಸ್ಥಾಪಿತವಾದ ಅದ್ವೈತಮತವು ಸರ್ವದರ್ಶನಗಳಿಗೂ ಶಿರೋರತ್ನಪ್ರಾಯವಾದದ್ದೆಂಬ ಬುದ್ಥಿಯಿಟ್ಟುಕೊಂಡಿದ್ದನು. ಶಂಕರಾಚಾರ್ಯರ ಯಾವ ಮಾತಿನಲ್ಲಿಯಾದರೂ ಯಾರಾದರೂ ಒಂದು ದೋಷವನ್ನು ಕಂಡುಹಿಡಿದರೆ ಅವನ ಹೃದಯವು ಹಾವುಕಚ್ಚಿದಂತೆ ವ್ಯಥೆಗೊಳ್ಳುತ್ತಿತ್ತು. ಸ್ವಾಮಿಜಿ ಇದನ್ನು ಬಲ್ಲರು. ಯಾವುದಾದರೂ ಒಂದು ಮತದ ಅತಿ ಪಕ್ಷಪಾತಿಗಳಾಗಿದ್ದರೆ ಅದನ್ನು ಅವರು ಸಹಿಸುತ್ತಿರಲಿಲ್ಲ. ಯಾವುದಾದರೊಂದು ವಿಷಯದಲ್ಲಿ ಅತಿಪಕ್ಷಪಾತವನ್ನು ಕಂಡರೆ ಸಾಕು, ಅವರು ಅದರ ವಿರುದ್ಧ ಪಕ್ಷವನ್ನು ಹಿಡಿದು ಅಜಸ್ರ ಅಮೋಘ ಯುಕ್ತಿಯ ಬಲದಿಂದ ಈ ಅತಿ ಪಕ್ಷಪಾತದ ಕಟ್ಟನ್ನು ಪುಡಿಪುಡಿಮಾಡಿಹಾಕುತ್ತಿದ್ದರು.
ಸ್ವಾಮಿಜಿ: ಶಂಕರಾಚಾರ್ಯರಿಗೆ ಕತ್ತಿಯ ಧಾರೆಯಂಥ ಬುದ್ಧಿ. ವಿಚಾರಕರು ಹೌದು, ಪಂಡಿತರು ಹೌದು. ಆದರೆ ಅವರ ಉದಾರತೆಯ ತುಂಬಾ ಗಂಭೀರವಾದದ್ದಾಗಿರಲಿಲ್ಲ. ಹೃದಯವೂ ಹೀಗಿತ್ತೆಂದುತೋರುತ್ತದೆ; ಮತ್ತು ಬ್ರಾಹ್ಮಣ ಅಭಿಮಾನವೂ ಹೆಚ್ಚಾಗಿತ್ತು. ದಕ್ಷಿಣದೇಶದ ವೈದಿಕ ಬ್ರಾಹ್ಮಣರ ಮಗ, ಮತ್ತೇನು? ಬ್ರಾಹ್ಮಣೇತರಿಗೆ ಬ್ರಹ್ಮಜ್ಞಾನವಾಗುವುದಿಲ್ಲ ಎಂಬೀ ಅಂಶವನ್ನು ವೇದಾಂತ ಭಾಷ್ಯದಲ್ಲಿ ಹೇಗೆ ಸಮರ್ಥನೆ ಮಾಡಿಕೊಂಡು ಹೋಗಿದ್ದಾರೆ! ಸತ್ಯವೆಂಬಂತೆ ಕಾಣುವ ವಿಚಾರ! ವಿದುರನ ಸಂಗತಿಯನ್ನು ಎತ್ತಿಕೊಂಡು, ಅವನಪೂರ್ವಜನ್ಮದ ಬ್ರಾಹ್ಮಣ ಶರೀರದ ಫಲದಿಂದ ಅವನು ಬ್ರಹ್ಮಜ್ಞನಾದನೆಂದು ಹೇಳಿದ್ದಾರೆ. ಹಾಗಾದರೆ ನಾನು ಕೇಳುವುದೇನೆಂದರೆ, ಈಗಿನ ಕಾಲದಲ್ಲಿ ಹೀಗೆ ಯಾವನಿಗಾದರೂ ಶೂದ್ರನಿಗೆ ಬ್ರಹ್ಮಜ್ಞಾನವಾದರೆ ಅವನಿಗೆ ಶಂಕರಾಚಾರ್ಯರು ಹೇಳಿರುವಂತೆ ಪೂರ್ವಜನ್ಮದಲ್ಲಿ ಬ್ರಾಹ್ಮಣ್ಯವಿದ್ದುದರಿಂದ ಈಗ ಹೇಗೆ ಆಯಿತೆಂದು ಹೇಳಬೇಕೆ? ಬ್ರಾಹ್ಮಣತ್ವವನ್ನು ಹೀಗೆ ಎಳೆದಾಡುವುದರಿಂದ ಬಂದ ಫಲವೇನಪ್ಪಾ? ವೇದವೇನೊತ್ರಿವರ್ಣದವರೆಗೆ ಮಾತ್ರ ವೇದಪಾಠ ಮತ್ತು ಬ್ರಹ್ಮಜ್ಞಾನಗಳ ಅಧಿಕಾರವನ್ನು ಕೊಟ್ಟಿದೆ. ಆದ್ದರಿಂದಲೇ ಈ ವಿಷಯವನ್ನು ತೆಗೆದುಕೊಂಡು ವೇದದ ಮೇಲೆ ತಮ್ಮ ಅದ್ಭುತ ವಿದ್ಯೆಯನ್ನು ಉಪಯೋಗಿಸುವ ಅವಶ್ಯಕತೆ ಏನೂ ಕಾಣಲಿಲ್ಲ. ಅಲ್ಲದೆ ಅವರ ಹೃದಯವೆಂಥದ್ದೆಂದರೆ, ಅವರು ಎಷ್ಟೋ ಜನ ಬೌದ್ಧ ಶ್ರಮಣರನ್ನು ತಮ್ಮ ತರ್ಕದಿಂದ ಸೋಲಿಸಿಬಿಟ್ಟು, ಬೆಂಕಿಯಲ್ಲಿ ಬೀಳಿಸಿ ಕೊಲ್ಲಿಸಿದರು. ಬುದ್ಧಿಹೀನರಾದ ಬೌದ್ಧರೂ ಕೂಡಾ ತರ್ಕದಲ್ಲಿ ಸೋಲನ್ನು ಒಪ್ಪಿಕೊಂಡು ಬೆಂಕಿಯಲ್ಲಿ ಬಿದ್ದು ಸಾಯುವುದಕ್ಕೆ ಮೊದಲು ಮಾಡಿದರು. ಶಂಕರಾಚಾರ್ಯರ ಈ ರೀತಿಯ ಕಾರ್ಯವನ್ನು ಧರ್ಮಾಂಧತೆ ಎನ್ನದೆ ಮತ್ತೇನೆನ್ನಬಹುದು? ಆದರೆ ಬುದ್ಧದೇವನ ಹೃದಯವನ್ನು ನೋಡು! ‘ಬಹುಜನ ಹಿತಾಯ ಬಹುಜನ ಸುಖಾಯ’ ಎಂಬ ಈ ಮಾತನ್ನು ಹೇಳಬೇಕಾದ್ದೇ ಇಲ್ಲ. ಸಾಮಾನ್ಯ ಒಂದು ಆಡಿನಮರಿಯನ್ನು ಕಾಪಾಡುವುದಕ್ಕಾಗಿ ತನ್ನ ಪ್ರಾಣವನ್ನು ಕೊಡುವುದಕ್ಕೆ ಸರ್ವದಾ ಸಿದ್ಧನಾಗಿರುತ್ತಿದ್ದನು; ನೋಡು ಎಂಥ ಉದಾರತೆ – ಎಂಥದಯೆ!” (೨)
೩. ಮತ್ತೆ ಪ್ರಮದದಾಸ್ ಮಿತ್ರರಿಗೆ ಬರೆದ ಪತ್ರ: ನನ್ನ ಜೀವನದಲ್ಲಿ ಅಂತಹ ದೇವರನ್ನು ನೋಡಿರುವೆನು. ಆತನ ಆಜ್ಞೆಯನ್ನು ನೆರವೇರಿಸುವುದಕ್ಕೇ ನಾನು ಜೀವಿಸಿರುವೆನು. ಸ್ಮೃತಿ ಪುರಾಣಗಳೆಲ್ಲ ಅಲ್ಪಮತಿಗಳಿಂದ ರಚಿಸಿದವು. ಅವುಗಳಲ್ಲಿ ಬೇಕಾದಷ್ಟು ತಪ್ಪುಗಳಿವೆ, ಜಾತಿಕುಲದ ಹೆಮ್ಮೆ ಅಸೂಯೆ ಇವೆ. ಅವುಗಳಲ್ಲಿ ಹೃದಯವೈಶಾಲ್ಯ ಮತ್ತು ಪ್ರೀತಿಯನ್ನು ಬೋಧಿಸುವ ಕೆಲವು ಭಾಗಗಳು ಮಾತ್ರ ಸ್ವೀಕಾರಕ್ಕೆ ಯೋಗ್ಯ. ಉಳಿದವುಗಳನ್ನು ತಿರಸ್ಕರಿಸಬೇಕಾಗುವುದು. ಉಪನಿಷತ್ತು ಮತ್ತು ಗೀತೆ ಇವುಗಳು ಮಾತ್ರ ನಿಜವಾದ ಶಾಸ್ತ್ರಗಳು -ರಾಮ, ಕೃಷ್ಣ, ಬುದ್ಧ, ಚೈತನ್ಯ, ನಾನಕ್, ಕಬೀರ್ ಮುಂತಾದವರು ನಿಜವಾದ ಅವತಾರಗಳು. ಏಕೆಂದರೆ ಅವರ ಹೃದಯ ಆಕಾಶದಷ್ಟು ವಿಶಾಲವಾಗಿತ್ತು. ಇವರೆಲ್ಲರಿಗಿಂತ ಹೆಚ್ಚು ಶ್ರೀರಾಮಕೃಷ್ಣರು. ರಾಮಾನುಜ ಮತ್ತು ಶಂಕರ ಮುಂತಾದವರು ಹೆಚ್ಚು ಹೃದಯಸಂಕುಚಿತರಾದ ಪಂಡಿತರಂತೆ ತೋರುವರು. ಆ ಪ್ರೇಮವೆಲ್ಲ, ಮತ್ತೊಬ್ಬರ ದುಃಖಕ್ಕೆ ಮರುಗುವ ಹೃದಯವೆಲ್ಲಿ? ಪಂಡಿತನ ನಿಸ್ಸಾರವಿದ್ಯೆಯ ಅಲಂಕಾರ, ತಾವು ಒಬ್ಬರೇ ಮುಕ್ತಿಯನ್ನು ಗಳಿಸಬೇಕೆಂಬ ತವಕದ ಭಾವನೆ! ಆದರೆ ಅದು ನಿಜವಾಗಿ ಸಾಧ್ಯವೇ? ಹಾಗೆ ಎಂದಾದರೂ ಇತ್ತೆ? ಅಥವಾ ಮುಂದೆ ಎಂದಾದರೂ ಇರುವುದೋ? ‘ನಾನು’ ಎಂಬುವ ಅಹಂಕಾರ ಉಳಿಯುವ ತನಕ ಏನನ್ನಾದರೂ ನಾವು ಸಾಧಿಸಬಹುದೆ?” (೩)
೪. ಅಖಂಡಾನಂದರಿಗೆ ಬರೆದ ಪತ್ರದ ಸಾಲುಗಳು “ಆದರೆ ಶಂಕರರಿಗೆ ಬುದ್ಧನಷ್ಟು ವಿಶಾಲವಾದ, ಅನುಕಂಪದಿಂದ ಕೂಡಿದ ಹೃದಯವಿರಲಿಲ್ಲ, ಬರಿಯ ಬುದ್ಧಿಯ ಒಣಪಾಂಡಿತ್ಯವಿತ್ತು. ತಂತ್ರಕ್ಕೆ, ಜನಸಮುದಾಯಕ್ಕೆ ಅಂಜಿ, ಒಂದು ಕುರುವನ್ನು ಗುಣಮಾಡಲು ಹೋಗಿ ಅದಿದ್ದ ಕೈಯನ್ನೇ ಕತ್ತರಿಸಿದರು. ಈ ವಿಷಯಗಳ ಮೇಲೆ ಏನಾದರೂ ಬರೆಯಬೇಕಾದರೆ ಒಂದು ದೊಡ್ಡ ಗ್ರಂಥವೇಬೇಕು. ಆದರೆ ಅದನ್ನು ಬರೆಯಲು ಬೇಕಾದ ಪಾಂಡಿತ್ಯವಾಗಲೀ ಅವಕಾಶವಾಗಲೀ ನನಗೆ ಇಲ್ಲ.” (೪)
ಇನ್ನೂ ಒಂದೆರಡು ಉದಾಹರಣೆಗಳು ವಿವೇಕಾನಂದರು ಶಂಕರರನ್ನು ಕುರಿತು ಅಸಮಾಧಾನ ವ್ಯಕ್ತ ಪಡಿಸಿದ್ದಕ್ಕೆ ಸಿಗುತ್ತವೆ.
ಮೊದಲನೆಯ ಪತ್ರದ ಕಾಲ ೧೮೮೯ ಆಗಸ್ಟ್. ಇದು ಅವರ ಜಿಜ್ಞಾಸೆಯನ್ನು ತಿಳಿಸುತ್ತದೆ, ಅದಕ್ಕೆ ಏನು ಉತ್ತರ ಪಡೆದರೋ ಅವರ ಮುಂದಿನ ಪತ್ರದಿಂದ ತಿಳಿದಿಲ್ಲ. ಆದರೆ ಅವರಿಗೆ ಸಮಾಧಾನಕರ ಉತ್ತರವಂತೂ ಸಿಕ್ಕಿಲ್ಲ. ಆದರೆ ಈ ಬರವಣಿಗೆಯನ್ನು ಬುದ್ಧಿಜೀವಿಗಳು, ವಿವೇಕಾನಂದರು ಶಂಕರರನ್ನು ಹಳಿದಿದ್ದಾರೆ ಎಂದು ಹೇಳುತ್ತಾ ಬಳಸಿಕೊಂಡಿದ್ದಾರೆ. ಆದರೆ ನಿಜವಾಗಿ ಇದು ಜಿಜ್ಞಾಸೆ.
ಎರಡನೆಯ ಪ್ರಕರಣದಲ್ಲಿ ನಿಸ್ಸಂಶಯವಾಗಿ ವಿವೇಕಾನಂದರು ಶಂಕರರನ್ನು ಹಳಿದಿದ್ದಾರೆ. ಇದು ನಡೆದದ್ದು ಸುಮಾರು ೧೮೯೮ರಆಸುಪಾಸಿನಲ್ಲಿ. ಅವರು ಅದನ್ನು ಮಾಡಿದ್ದು ಶಿಷ್ಯನ ಅತಿ ಪಕ್ಷಪಾತದಭರ್ತ್ಸನೆಗಾಗಿ. ಶಂಕರರನ್ನು ಅವರು ಹೊಗಳಲೂಬಲ್ಲರು. ಅದನ್ನು ಮುಂದೆ ನೋಡೋಣ. ಇಲ್ಲಿ ಹಳಿಯುವಲ್ಲಿ ಅವರು ವಿದುರನಿಗೆ ಪೂರ್ವಜನ್ಮದಲ್ಲಿ ಬ್ರಾಹ್ಮಣ್ಯವಿದ್ದುದ್ದರಿಂದ ಈಗ ಹೀಗೆ ಆಯಿತೆಂದು ಶಂಕರರು ಹೇಳಿದ್ದಾರೆಂಬುದು ನಿಜವೇ ಅಲ್ಲ “ಹಿಂದೆಮಾಡಿದ(ಕರ್ಮಗಳ) ಸಂಸ್ಕಾರ ವಶದಿಂದ ಜ್ಞಾನವು ಉಂಟಾಗಿರುವುದೋ ಅವರಿಗೆ ಫಲವು ದೊರಕಿದೆಯೆಂಬುದನ್ನು ಇಲ್ಲವೆನ್ನುವುದಕ್ಕಾಗದು”. ಹೀಗಿದೆ ಅರ್ಥ. ಆದರೆ, ಅವರಿಗೆ ಶಿಷ್ಯನತೇಜೋವಧೆ ಮುಖ್ಯವಾಗಿತ್ತಾದ್ದರಿಂದ ವಿಚಾರವನ್ನು ಈ ರೀತಿಯಾಗಿ ಅಧಿಕಾರವಾಣಿಯಲ್ಲಿ ಹೇಳಿದ್ದಾರೆಂಬುದು ವೇದ್ಯವಾಗುತ್ತದೆ. ಅಲ್ಲದೇ ಹಿಂದೆ ನಾವು ನೋಡಿದ ಪತ್ರದಲ್ಲಿ ಅವರು ತರ್ಕಮಾಡುತ್ತಿದ್ದ ವಿಚಾರವು ಇಲ್ಲಿ ಅದರ ಬಗ್ಗೆ ಅವರ ಮನದಲ್ಲಿದ್ದ ಖಾಚಿತ್ಯವನ್ನುನೀಡಿದೆ “ವೇದವೇನೋ ತಿವರ್ಣದವರೆಗೆ ಮಾತ್ರ ವೇದಪಾಠ ಮತ್ತು ಬ್ರಹ್ಮಜ್ಞಾನದ ಅಧಿಕಾರವನ್ನು ಕೊಟ್ಟಿದೆ” ಎಂದು ಸಮ್ಮತಿಸೂಚಿಸಿದ್ದಾರೆ. ಆದರೆ ಅದರ ಮೇಲೆ ತರ್ಕಪಾಂಡಿತ್ಯವನ್ನು ತೋರಿಸುವುದು ಅವರ ಅಸಮಾಧಾನಕ್ಕೆ ಕಾರಣ. ಇನ್ನೊಂದು ಒಳಕುದಿ ಮುಂದಿನ ಬೌದ್ಧರ ಸಂಹಾರದ ವಿಚಾರದಲ್ಲಿ ವ್ಯಕ್ತವಾಗಿದೆ. ಬೇರೆ ಎಲ್ಲೂ ತಮ್ಮ ಬರಹ-ಭಾಷಣದಲ್ಲಿ ಮಾಡದ ಆಪಾದನೆ ಇಲ್ಲಿ ಮಾಡಿದ್ದಾರೆ. ಇದು ಮಿಥ್ಯೆ ಎಂದು ತಿಳಿದೂ ಅವನ ಅತಿಪಕ್ಷಪಾತವನ್ನು ಖಂಡಿಸುವುದು ಇಲ್ಲಿಯ ಉದ್ದೇಶವೋ ಅಥವಾ ಇದನ್ನು ನಿಜವೆಂದೇ ತಿಳಿದಿದ್ದರೋ ತಿಳಿಯದು. ವಿವೇಕಾನಂದರು ಶಂಕರರನ್ನು ಧರ್ಮಾಂಧರೆಂದು ಪರಿಗಣಿಸುವವರಾದರೆ ಅದು ಇವರ ತಪ್ಪುಅಭಿಪ್ರಾಯ ಎಂದೇ ಹೇಳಬಹುದು. ಅದಕ್ಕೆ ಕಾರಣವೂ ಇಲ್ಲದಿಲ್ಲ. ವಿವೇಕಾನಂದರ ಜೀವಿತ ಅವಧಿಯ ಕಾಲಕ್ಕೆ ಕಲ್ಕತ್ತೆಯಲ್ಲಿ ಸಿಗಬಹುದಾಗಿದ್ದ ಶಂಕರರ ಜೀವನ ಚರಿತ್ರೆ ಎಂದರೆ ಮಾಧವೀಯಶಂಕರ ವಿಜಯವನ್ನು ಬಿಟ್ಟರೆ ಪ್ರಮುಖವಾಗಿ ಆನಂದಗಿರಿಯ ಶಂಕರವಿಜಯ. ೧೮೬೭ರಲ್ಲಿ ಪ್ರಕಟವಾದ ಈ ಚರಿತ್ರೆಯು ಕುಂಭಕೋಣಂ /ಕಂಚಿಮಠದಿಂದ ಪ್ರಕಟವಾಗಿದ್ದು. ಇದು ಅಲ್ಲಿಯವರೆಗೆ ಪ್ರಚಲಿತದಲ್ಲಿದ್ದ ಜೀವನಚರಿತ್ರೆಗಳಿಗಿಂತ ಬೇರೆಯದೇ ಆದ ವಿವರಗಳನ್ನು ನೀಡುತ್ತದೆ ಮತ್ತು ಜೈನ, ಬೌದ್ಧ, ಚಾರ್ವಾಕ, ಕಾಪಾಲಿಕರಿಗೆ ವಾದಗಳಲ್ಲಿ ಸೋತಿದ್ದಕ್ಕೆ ಶಂಕರರು ಬಗೆಬಗೆಯ ಶಿಕ್ಷೆಗಳನ್ನು ಕೊಟ್ಟಿದ್ದನ್ನು ವರ್ಣಿಸಿದ್ದಾರೆ. ಇನ್ನೂ ಬಹು ಚಿತ್ರ-ವಿಚಿತ್ರವಾದ ವಿವರಣೆ ವಿಚಾರಗಳಿಂದ (ಶಂಕರರ ಹುಟ್ಟೂರುಚಿದಂಬರಂ, ಜೀವಿತದ ಕಾಲಮಾನ ಕ್ರಿ.ಪೂ ೫ನೇ ಶತಮಾನ, ಸಮಾಧಿಯಿರುವುದು ಕಂಚಿಯಲ್ಲಿ ಮುಂತಾಗಿ) ಈ ಪುಸ್ತಕ ಬೇರೆಯದೇ ಆಗಿ ಮೂಡಿ ಬಂದಿದೆ. ಈ ಪುಸ್ತಕ ಮತ್ತು ಇದನ್ನು ಪ್ರಕಟಿಸಿದ ಕಂಚೀಮಠದ ಅನಾಮತ್ತು ಅಭ್ಯುದಯವು ಭಾರತದ ಇತಿಹಾಸದಲ್ಲಿ ಕಾಲಾನಂತರದಲ್ಲಿ ಕುಖ್ಯಾತವಾಗಿದೆ. ಇತಿಹಾಸಕಾರರಾದ ಹುರಗಲವಾಡಿ ನರಸಿಂಹಶಾಸ್ತ್ರಿಯವರು ಆಕಾಲಕ್ಕೆ ನಡೆದಿದ್ದ ಮಠದ ಕೋಲಾಹಲವನ್ನು ಕುರಿತ ಸಂಶೋಧನೆ ನಡೆಸಿ ಸಂಗ್ರಹಿಸಿದ ಐತಿಹಾಸಿಕ ಗ್ರಂಥ “ಶಾಂಕರದಕ್ಷಿಣಾಮ್ನಾಯಪೀಠ ಮತ್ತು ಇತರ ಶಾಖಾಮಠಗಳು” ಇದನ್ನು ಓದಿದರೆ ವಿವೇಕಾನಂದರು ಶಂಕರರ ಬಗ್ಗೆ ವ್ಯಕ್ತಪಡಿಸಿರುವ ಅಸಹನೆ ಬಹಳ ಕಡಿಮೆ ಅನ್ನಿಸುತ್ತದೆ. ಶಂಕರರ ಜೀವನಕಾಲದ ಈ ರೀತಿಯ ಸಂದರ್ಭಗಳನ್ನು ನಾವುಕುಂಭಕೋಣಂ/ಕಂಚಿಮಠದಿಂದ ಕಲ್ಕತ್ತೆಯಲ್ಲಿ ಪ್ರಕಾಶಿತವಾದ ಆನಂದಗಿರಿಯ ರಚಿಸಿರುವ ಚರಿತ್ರೆಯಲ್ಲಿ ಮಾತ್ರ ಕಾಣುತ್ತೇವೆ. ಹದಿನೆಂಟು, ಹತ್ತೊಂಬತ್ತನೇ ಶತಮಾನ ಮತ್ತು ಇಪ್ಪತ್ತರ ಪೂರ್ವಾರ್ಧದಲ್ಲಿ ಶಂಕರರ ಕುರಿತ ಅಸಂಬದ್ಧ ಗ್ರಂಥಗಳ ರಾಶಿಯೇ ತಯಾರಾಯಿತು. ಹೀಗಾಗಿ ಒಂದು ಕಡೆ ಕುಂಭಕೋಣಂ/ಕಂಚಿಮಠವು ತಮ್ಮ ಇಲ್ಲದ ಪ್ರಾಚೀನತೆಯನ್ನು ಸಿದ್ಧಪಡಿಸಲು ತಲೆಬುಡವಿಲ್ಲದ ಪೊಳ್ಳುಚರಿತ್ರೆಯನ್ನು ಸಿದ್ಧಪಡಿಸಿದರೆ, ಹಿಂದೂ ಧರ್ಮ ಪುನರುತ್ಥಾನವು ಶಂಕರರಿಂದಲೇ ಆಯಿತೆಂದು ಜಂಭ ಕೊಚ್ಚುವವರು ಅವರನ್ನು ಅನ್ಯಮತಗಳ ವಿರೋಧಿಯಾಗಿಯೂ ಚಿತ್ರಿಸಿದ್ದಾರೆ. ಹಾಗಾಗಿ ವಿವೇಕಾನಂದರು ಶಂಕರರನ್ನು ಧರ್ಮಾಂಧರೆಂದು ಅಂದುಕೊಂಡಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ. ವಿವೇಕಾನಂದರು ಮಾಧವೀಯ ಶಂಕರ ವಿಜಯವನ್ನೂ ಓದಿಕೊಂಡಿದ್ದರು. ಯಾಕೆಂದರೆ ಕಾಲಡಿ ಶಂಕರರ ಹುಟ್ಟೂರು ಎಂದು ತಮ್ಮ ಉಪನ್ಯಾಸಗಳಲ್ಲಿ ಹೇಳುತ್ತಾರೆ. ಆದರೆ ಇತರೆ ಪೊಳ್ಳು ಚರಿತ್ರೆಯನ್ನೂ ಓದಿಕೊಂಡು ತಮ್ಮ ಮನಸ್ಸನ್ನು ಗೋಜಲಾಗಿಸಿಕೊಂಡಿದ್ದು ಅವರ ಶಿಷ್ಯರೆದುರು ಆಡಿದ ಮಾತುಗಳಲ್ಲಿ ವ್ಯಕ್ತವಾಗಿದೆ.
ಮೂರನೇ ಪತ್ರ ಮತ್ತೆ ಪ್ರಮದದಾಸರಿಗೆ ಬರೆದದ್ದು. ಇದು ಬರೆದದ್ದು ೧೮೯೭ರಲ್ಲಿ. ಅಂದರೆ ತಮ್ಮ ಪಾಶ್ಚಾತ್ಯ ದಿಗ್ವಿಜಯ ಯಾತ್ರೆಯನ್ನು ಮುಗಿಸಿ ವಾಪಸ್ಸು ಭಾರತಕ್ಕೆ ಬಂದ ಸಮಯದಲ್ಲಿ ಆಲ್ಮೊರಾದಿಂದ ಬರೆದ ಪತ್ರ. ಇದು ಅವರಿಗೆ ಬರೆದ ಕೊನೆಯ ಪತ್ರ. ಇಲ್ಲಿ ತಮ್ಮ ಭಿನ್ನಾಭಿಪ್ರಾಯವನ್ನ ಮತ್ತೆ ಹೊರಹಾಕಿದ್ದಾರೆ. ಅವರಿಂದ ಉತ್ತರಬಯಸಿದ್ದಾರೆ. ಇಲ್ಲೂ ಕೂಡಾ ಇಡೀ ಪತ್ರ ಬಹಳ ಕಟುವಾದಶಬ್ದಗಳಿಂದ ತುಂಬಿದೆ. ಕರ್ಮಠತೆಯ ಸ್ವಭಾವವನ್ನು ಬಿಡುವಂತೆ ಆಗ್ರಹಿಸುವ ಹಾಗಿದೆ. ಪ್ರಮದದಾಸರ ಸಂಪ್ರದಾಯವಾದಿ ನಡುವಳಿಕೆ ಇದಕ್ಕೆ ಕಾರಣ. ಶಂಕರರು ಸಕಲರಿಗೂ ಮೋಕ್ಷಾಧಿಕಾರ ಉಂಟೆಂದು ಹೇಳಿದ್ದರೂ “ತಾವು ಒಬ್ಬರೇ ಮುಕ್ತಿಯನ್ನು ಗಳಿಸಬೇಕೆಂಬ ತವಕದಭಾವನೆ! ” ಎಂದು ಯಾವ ದೃಷ್ಟಿಯಲ್ಲಿ ಹೇಳಿದ್ದಾರೋ ಕಾಣೆ. ಸ್ವತಃ ವಿವೇಕಾನಂದರೇ ಸಾಧನ ಚತುಷ್ಟಯದಿಂದ ಯಾರು ಬೇಕಾದರೂ ಮೋಕ್ಷ ಪಡೆಯಬಹುದೆಂದು ಶಂಕರರು ಹೇಳಿದ್ದಾರೆಂದು ಬೇರೊಂದು ಕಡೆ ಹೇಳುವರು. (೫)
ಇನ್ನು ನಾಲ್ಕನೆಯ ಪತ್ರವು ಬಹಳ ಸ್ವಾರಸ್ಯಕರವಾದುದು. ೧೮೯೦ರಲ್ಲಿಬರೆದದ್ದು. ವಿವೇಕಾನಂದರ ಧೋರಣೆ ಈಗಲಾದರೂ ತಿಳಿಯಿತೇ ಎಂದು ಈ ವಾಕ್ಯಗಳನ್ನು ತೋರಿಸುತ್ತಾ ಕೂಗುವ ವಿಚಾರವಾದಿಗಳಿಗೆ ಇದರ ಹಿಂದಿನ ಪ್ಯಾರಾಗಳಲ್ಲಿ ಶಂಕರರನ್ನು ಹೊಗಳಿರುವುದೂ ಮತ್ತು ನಂತರದಲ್ಲಿ ವಿವೇಕಾ ಚೂಡಾಮಣಿಯ ಶ್ಲೋಕಗಳನ್ನು ಉದ್ಧರಿಸಿರುವುದು ಕಣ್ಣಿಗೆ ಬಿದ್ದೇ ಇಲ್ಲ…!! “ಅವನ (ಬುದ್ಧನ) ಸಿದ್ಧಾಂತ ಕಪಿಲನ ಸಿದ್ಧಾಂತದಂತೆ ಆದರೆ ಶಂಕರರದಾದರೋ ಅದಕ್ಕಿಂತ ಎಷ್ಟು ಉತ್ತಮವಾಗಿದೆ ಮತ್ತು ಯುಕ್ತಿ ಯುಕ್ತವಾಗಿದೆ! ….” ಎಂದು ಹೇಳುತ್ತಾ ಜಗತ್ತು , ಜೀವದ ಕುರಿತಾಗಿ ಬುದ್ಧನ ಮತ್ತು ಶಂಕರರ ಸಿದ್ಧಾಂತವನ್ನು ತುಲನೆ ಮಾಡುತ್ತಾರೆ. “ಎಂತಹ ಉಚ್ಛವಾದ ಆದರ್ಶ, ಎಷ್ಟು ಭವ್ಯವಾಗಿದೆ!” ಎಂದು ಕೊಂಡಾಡುತ್ತಾ “ಉಪನಿಷತ್ತಿನಿಂದಲೇ ಬೌದ್ಧಧರ್ಮ ಬೆಳೆದಿರುವುದು, ಅದೇ ಶಂಕರರ ತತ್ವಶಾಸ್ತ್ರಕ್ಕೂ ಮೂಲ. ಆದರೆ..” ಎಂದು ಮೇಲಿನ ವಾಕ್ಯಗಳು ಮುಂದುವರೆಯುತ್ತವೆ. ಹಾಗಾಗಿ ಇಲ್ಲಿ ದೊಡ್ಡ ಗ್ರಂಥ ಬರೆಯುವುದು ಎಂಬುದು ಶಂಕರರನ್ನು ಹಳಿಯುವುದರ ಕುರಿತಾಗಿ ಅಲ್ಲ, ಅದ್ವೈತ ವೇದಾಂತದ ಕುರಿತಾದ್ದದ್ದಾಗಿದೆ. ಜಾಣ್ಮೆಯ ವಾಕ್ಯಾಧಾರಗಳು ಎಂತಹ ಅಭಾಸಕ್ಕೆ, ವೈರುಧ್ಯಕ್ಕೆ ದಾರಿಯಾಗುತ್ತದೆ ಎಂಬುದಕ್ಕೆ ಇದೊಂದು ನಿಚ್ಚಳ ಸಾಕ್ಷಿ.
ಇವುಗಳ ನಂತರ ಶಂಕರರನ್ನು ಅನೇಕ ಸಂದರ್ಭಗಳಲ್ಲಿ ಸಕಾರಾತ್ಮಕವಾಗಿ ಉಪನ್ಯಾಸಗಳಲ್ಲಿ ಬಳಸಿಕೊಂಡಿದ್ದನ್ನೂ ನಾವು ನೋಡಬಹುದು. ಅವರು ಹೆಚ್ಚಾಗಿ ಪ್ರತಿಪಾದಿಸಿದ್ದು ಅದ್ವೈತವೇದಾಂತವನ್ನೇ. ಅದನ್ನು ಅವರೇ ಅನೇಕ ಕಡೆ ಹೇಳಿಕೊಂಡಿದ್ದಾರೆ ಕೂಡಾ. ಅಲ್ಲೆಲ್ಲ ಅವರು ವಿವರಿಸಿದ್ದು ಶಂಕರರು ಪ್ರತಿಪಾದಿಸಿದ್ದನ್ನೇ. ಬುದ್ಧ, ಬೌದ್ಧಧರ್ಮದ ವಿಚಾರವಾಗಿ ಹೇಳುತ್ತಿದ್ದರೂ ಕೊನೆಗೆ ಬಂದು ನಿಲ್ಲುತ್ತಿದ್ದದ್ದು ಅದ್ವೈತ ವೇದಾಂತಕ್ಕೇ. ಅವರ ಬಹುತೇಕ ಎಲ್ಲ ಉಪನ್ಯಾಸಗಳೂ ಕಡೆಗೆ ವೇದಾಂತದೆಡೆಗೇ ಸಾಗಿವೆ. ಶಂಕರರಸಿದ್ಧಾಂತ, ಭಾಷ್ಯ, ವಿವೇಕ ಚೂಡಾಮಣಿಯೇ ಮುಂತಾದ ಪ್ರಕರಣಗ್ರಂಥಗಳು ವಿವೇಕಾನಂದರಿಂದ ಮತ್ತೊಮ್ಮೆ ಬಹಳ ದೊಡ್ಡಪ್ರಮಾಣದಲ್ಲಿ ಪ್ರಪಂಚದಾದ್ಯಂತ ಪ್ರಚಾರಗೊಂಡಿತು.
ಶಂಕರರು ಅಧೋಗತಿಗಿಳಿದ ಬೌದ್ಧ ಧರ್ಮದ ನಿರ್ಮೂಲಕ್ಕೆ ಮೂಲ ಪ್ರಬಲ ಕಾರಣ ಎಂಬ ಜನಪ್ರಿಯ ನಂಬಿಕೆ ಅವರಲ್ಲೂ ಇತ್ತು. “ಭಗವಾನ್ ಬುದ್ಧದೇವನ ಮೇಲೆ ಭಕ್ತಿ ಗೌರವಗಳು ನನಗೆ ಉಂಟು. ಆದರೆ ಇದನ್ನು ಗಮನಿಸಿ: ಬೌದ್ಧ ಧರ್ಮ ಹರಡುವುದಕ್ಕೆ ಕಾರಣ ಅದರ ಸಿದ್ಧಾಂತವೂ ಅಲ್ಲ, ಆ ಪ್ರಖ್ಯಾತ ಮೂಲಪುರುಷನ ವ್ಯಕ್ತಿತ್ವವೂ ಅಲ್ಲ. ಅದಕ್ಕೆ ಮುಖ್ಯ ಕಾರಣ ಬೌದ್ಧರು ಕಟ್ಟಿದ ವಿಹಾರಗಳು, ಕೆತ್ತಿದ ವಿಗ್ರಹಗಳು, ಜನರ ಮನವನ್ನು ಸೆಳೆಯುವ ಹಲವು ಬಾಹ್ಯಾಚಾರಗಳು. ಬೌದ್ಧಧರ್ಮ ಹರಡಿದ್ದು ಹೀಗೆ. ಹಿಂದೂಗಳ ಮನೆಯಲ್ಲಿ ಹವಿಸ್ಸನ್ನು ಕೊಡುವುದಕ್ಕೆ ನಿರ್ಮಿಸುತ್ತಿದ್ದ ಸಣ್ಣ ಸಣ್ಣಯಜ್ಞವೇದಿಕೆಗಳಿಗೆ, ಬೌದ್ಧರ ಅದ್ಭುತ ದೇಗುಲಗಳನ್ನೂ, ಆಕರ್ಷಣೀಯ ಬಾಹ್ಯಚಾರಗಳನ್ನೂ ಎದುರಿಸುವ ಶಕ್ತಿ ಇರಲಿಲ್ಲ. ಕಾಲಕ್ರಮೇಣ ಬೌದ್ಧಧರ್ಮದ ಈ ಎಲ್ಲವೂ ಅಧೋಗತಿಗೆ ಇಳಿದುವು. ಅದು ಎಷ್ಟರ ಮಟ್ಟಿಗೆ ಅನಾಚಾರಗಳ ರಾಶಿಯಾಯಿತೆಂದರೆ ಅದನ್ನುಈ ಸಭೆಯಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಯಾರು ಈ ವಿಷಯವನ್ನು ತಿಳಿದುಕೊಳ್ಳಬೇಕೆಂದು ಬಯಸುವರೋ ಅವರು ದಕ್ಷಿಣ ಭಾರತದ ದೇವಸ್ಥಾನಗಳಲ್ಲಿರು ಕೆತ್ತನೆಗಳನ್ನು ನೋಡಬಹುದು. ಇವೆಲ್ಲಾ ನಮಗೆ ಬಂದದ್ದು ಬೌದ್ಧಧರ್ಮದ ಕೊಡುಗೆಯಾಗಿ. ನಂತರ ಮಹಾನ್ಸುಧಾರಕರಾದ ಶಂಕರಾಚಾರ್ಯರು ಮತ್ತು ಅವರ ಅನುಯಾಯಿಗಳು ಪ್ರಾಬಲ್ಯಕ್ಕೆ ಬಂದರು. ಅಂದಿನಿಂದ ಇಂದಿನವರೆಗೆ ನೂರಾರು ವರುಷಗಳ ಕಾಲ, ಕ್ರಮೇಣ ಜನಸಾಮಾನ್ಯರಿಗೆ ಪರಿಶುದ್ಧವಾದ ವೇದಾಂತ ಸಿದ್ಧಾಂತದ ಪರಿಚಯ ಮಾಡಿಕೊಡಲು ಯತ್ನಿಸಿರುವರು. ಈ ಸುಧಾರಕರಿಗೆ ಸಮಾಜದ ಲೋಪ ದೋಷಗಳು ಗೊತ್ತಿದ್ದುವು. ಆದರೂ ಅವರು ಅದನ್ನು ಅಲ್ಲಗಳೆಯಲಿಲ್ಲ. “ನಿಮ್ಮಲ್ಲಿರುವುದೆಲ್ಲ ತಪ್ಪು, ಅದನ್ನೆಲ್ಲಾಕಿತ್ತೊಗೆಯಿರಿ” ಎಂದು ಅವರು ಹೇಳಲಿಲ್ಲ. ಹಾಗೆಂದಿಗೂ ಅದು ಆಗಬಾರದು. …. ಬದಲಾವಣೆ ತಕ್ಷಣ ಆಗಲಾರದು. ಶಂಕರಾಚಾರ್ಯರಿಗೆ ಇದು ತಿಳಿದಿತ್ತು. ರಾಮಾನುಜಾಚಾರ್ಯರಿಗೆ ಇದು ತಿಳಿದಿತ್ತು. ಅವರಿಗೆ ಇದ್ದ ಏಕಮಾತ್ರಮಾರ್ಗವೇ ಕ್ರಮೇಣ ಜನರನ್ನು ಉತ್ತಮ ಆದರ್ಶದ ಕಡೆಗೆ ಕರೆದುಕೊಂಡು ಬರುವುದು. ಅವರು ಬೇರೆ ಮಾರ್ಗವನ್ನು ಹಿಡಿದಿದ್ದರೆ ಮಿಥ್ಯಾಚಾರಿಗಳಾಗುತ್ತಿದ್ದರು. ಅವರ ಧರ್ಮದ ಮೂಲ ಸಿದ್ಧಾಂತವೇ ವಿಕಾಸ. ಜೀವವು ಹಲವು ಅನುಭವಗಳ ಮೂಲಕ ಕ್ರಮೇಣ ಪರಮಾದರ್ಶದ ಕಡೆಗೆ ಹೋಗುವುದು. ಆದಕಾರಣ ಇವೆಲ್ಲ ಅವಶ್ಯಕ. ಇವೆಲ್ಲ ಸಹಾಯ ಮಾಡುವುವು. ಅವನ್ನು ಯಾರು ಧಿಕ್ಕರಿಸಬಲ್ಲರು?” (೬)
“ಬುದ್ಧನ ಆಗಮನಕ್ಕೆ ಮುಂಚೆ ಜಡವಾದವು ಭಯಂಕರವಾಗಿ ವ್ಯಾಪಿಸಿತ್ತು. ಅದು ಇಂದಿನಂತೆ ಅಲ್ಲ, ಇದಕ್ಕಿಂತ ಘೋರವಾದ ಅವಸ್ಥೆಯಲ್ಲಿತ್ತು. ನಾನೂ ಒಂದು ದೃಷ್ಟಿಯಿಂದ ಜಡವಾದಿಯೇ. ಏಕೆಂದರೆ ಇರುವುದು ಒಂದೇ ವಸ್ತುವೆಂದು ನಾನು ನಂಬುತ್ತೇನೆ. ಜಡವಾದಿಯೂ ಒಂದು ವಸ್ತುವನ್ನು ನಂಬಿ ಎನ್ನುತ್ತಾನೆ. ಅವನು ಅದನ್ನು ದ್ರವ್ಯ ಎನ್ನುವನು, ನಾನು ಅದನ್ನು ದೇವರು ಎನ್ನುತ್ತೇನೆ. ಜಡವಾದಿ ಈ ದ್ರವ್ಯ ಒಂದರಿಂದ ಧರ್ಮ, ಭರವಸೆ – ಇವೆಲ್ಲ ಬಂದಿವೆ ಎನ್ನುವನು. ಇವುಗಳೆಲ್ಲ ಬ್ರಹ್ಮನಿಂದ ಬಂದಿವೆ ಎಂದು ನಾನು ನಂಬುತ್ತೇನೆ. ಆದರೆ ಬುದ್ಧನ ಕಾಲಕ್ಕೆ ಮುಂಚೆ ಇದ್ದ ಜಡವಾದ ಅತಿಹೀನಸ್ಥಿತಿಗೆ ಸೇರಿದುದು. “ತಿನ್ನಿ, ಕುಡಿಯಿರಿ, ಸಂತೋಷವಾಗಿರಿ. ದೇವರು, ಆತ್ಮ, ಸ್ವರ್ಗವೆಂಬುದೇನೂ ಇಲ್ಲ. ಧರ್ಮವೆಂಬುದು ದುಷ್ಟಪೂಜಾರಿಗಳ ಕಲ್ಪನೆ” ಎಂದು ಅದು ಭೋಧಿಸುತ್ತಿತ್ತು. ಎಲ್ಲಿಯವರೆಗೂ ನೀವು ಬದುಕಿರುವಿರೊ ಅಲ್ಲಿಯವರೆಗೆ ನೀವು ಸುಖವಾಗಿರಬೇಕು. ಸಾಲಮಾಡಿಯಾದರೂ ಚೆನ್ನಾಗಿ ತಿನ್ನಿ, ಹಿಂತಿರುಗಿಕೊಡುವುದನ್ನು ಗಮನಿಸಬೇಕಾಗಿಲ್ಲ ಎಂದು ಬೋಧಿಸಿತು. ಇದೇ ಹಿಂದಿನ ಜಡವಾದ, ಇದು ದೇಶದಲ್ಲೆಲ್ಲಾ ವ್ಯಾಪಿಸಿತು. ಈಗಲೂ ಅದನ್ನು ಲೋಕಾಯತ ತತ್ತ್ವವೆನ್ನುವರು. ಬುದ್ಧನು ವೇದಾಂತವನ್ನು ಬೆಳಕಿಗೆ ತಂದು, ಜನರಿಗಿತ್ತು ಭರತಖಂಡವನ್ನು ಉದ್ಧರಿಸಿದನು. ಅವನ ಅವಸಾನದ ಒಂದು ಸಾವಿರ ವರುಷಗಳಾದ ಮೇಲೆ ಹಿಂದಿನಸ್ಥಿತಿಯೇ ಪುನಃ ಪ್ರಾಪ್ತವಾಯಿತು. ಹಲವು ಜನಾಂಗಗಳ ಜನರ ಹಿಂಡುಗಳು ಬೌದ್ಧಮತಕ್ಕೆ ಸೇರಿದ್ದುವು. ಸ್ವಾಭಾವಿಕವಾಗಿಯೆ ಬುದ್ಧನಸಂದೇಶ ಕಾಲಕ್ರಮೇಣ ಅಧೋಗತಿಗೆ ಬಂತು. ಏಕೆಂದರೆ ಬಹುಜನರು ಅಜ್ಞಾನಿಗಳಾಗಿದ್ದರು. ಬೌದ್ಧಧರ್ಮದಲ್ಲಿ ದೇವರಿಲ್ಲ, ಸೃಷ್ಟಿಪಾಲಕನಿಲ್ಲ; ಸಾಧಾರಣ ಜನರು ತಮ್ಮ ಹಳೆಯ ದೇವರನ್ನು, ಭೂತಪ್ರೇತಗಳನ್ನೆಲ್ಲ ಅದರೊಳಕ್ಕೆ ತಂದರು. ಭರತಖಂಡದಲ್ಲಿ ಬೌದ್ಧಧರ್ಮವು ಒಂದುವಿಚಿತ್ರ ಕಲಸು ಮೇಲೋಗರವಾಯಿತು. ಪುನಃ ಜಡವಾದವು ಮೇಲಿನ ಅಂತಸ್ತಿನವರಲ್ಲಿ ಸ್ವಚ್ಛಂದವಾದದಂತೆ, ಕೆಳಗಿನವರಲ್ಲಿ ಮೂಢನಂಬಿಕೆಯಂತೆ ತಲೆದೋರಿತು. ಆಗ ಶಂಕರಾಚಾರ್ಯರು ಉದಯಿಸಿ ವೇದಾಂತ ತತ್ತ್ವಕ್ಕೆ ಪುನಃ ಪ್ರಾಣಪ್ರತಿಷ್ಠೆಯನ್ನು ಮಾಡಿದರು, ಅದನ್ನು ಯುಕ್ತಿಬದ್ಧ ತತ್ತ್ವವನ್ನಾಗಿ ಮಾಡಿದರು. ಉಪನಿಷತ್ತಿನ ವಾದಸರಣಿ ಅನೇಕ ವೇಳೆ ಬಹು ಅಸ್ಪಷ್ಟವಾಗಿದೆ. ಬುದ್ಧನು ತತ್ತ್ವದ ನೈತಿಕ ಪಕ್ಷಕ್ಕೆ ಪ್ರಾಧಾನ್ಯವನ್ನು ಕೊಟ್ಟ. ಶಂಕರಾಚಾರ್ಯರು ಅದರ ಯುಕ್ತಿಯ ಪಕ್ಷಕ್ಕೆ ಪ್ರಾಧಾನ್ಯವನ್ನುಕೊಟ್ಟರು. ಅದನ್ನು ಒಂದು ಸುವ್ಯವಸ್ಥಿತ ಸ್ಥಿತಿಗೆ ತಂದು ಯುಕ್ತಿಬದ್ಧವಾಗಿ ಮಾಡಿ ಜನರಿಗೆ ಅದ್ಭುತವಾದ, ಸಮಂಜಸವಾದ ಅದ್ವೈತ ತತ್ತ್ವವನ್ನು ಕೊಟ್ಟರು.” ಇಂತಹ ಮಾತುಗಳನ್ನು ಅವರು ಹಲವಾರು ಉಪನ್ಯಾಸಗಳಲ್ಲಿ ಹೇಳಿದ್ದಾರೆ. (೭)
ಶಂಕರರ ಅದ್ವೈತವನ್ನು ಕುರಿತಾಗಿ ಓದುವಂತೆ, ಶಂಕರರ ಗ್ರಂಥಗಳನ್ನು ಓದುವಂತೆ ವಿವೇಕಾನಂದರು ಶಿಷ್ಯರಿಗೆ ಹೇಳುತ್ತಿದ್ದರು.
“ಅದ್ವೈತವಾದಿಗಳ ಪ್ರಖ್ಯಾತ ಪ್ರತಿನಿಧಿಗಳಾದ ಶಂಕರಾಚಾರ್ಯರು ಏನು ಹೇಳುತ್ತಾರೆ ಎಂಬುದನ್ನು ಈಗ ನೋಡೋಣ. ದ್ವೈತಿಯ ಯಾವ ಆಶೆ ಆಕಾಂಕ್ಷೆಗಳಿಗೂ ಭಂಗ ಬರದಂತೆ, ಮಾನವರು ಮುಟ್ಟಬೇಕಾಗಿರುವ ಪರಮ ಪದವಿಗೂ ಲೋಪ ಬಾರದಂತೆ ಪ್ರಕೃತಪ್ರಶ್ನೆಗೆ ಸ್ವತಂತ್ರವಾದ ಒಂದು ಉತ್ತರವನ್ನು ಅದ್ವೈತ ಸಿದ್ಧಾಂತ ಹೇಗೆ ಕೊಟ್ಟಿದೆ ಎಂಬುದನ್ನು ಗಮನಿಸೋಣ. ಮುಕ್ತಿಯಾದ ಮೇಲೂ ತಮ್ಮಮನಸ್ಸನ್ನು ಇಟ್ಟಕೊಂಡು ತಾವು ಪ್ರತ್ಯೇಕವಾಗಿರಬೇಕೆಂದು ಬಯಸಿದರೆ ಅವರಿಗೆ ಈ ಆಸೆ ಕೈಗೂಡಿ ಸಗುಣಬ್ರಹ್ಮಾನಂದವನ್ನು ಅನುಭವಿಸಲು ಅವಕಾಶವಿದೆ.” (೮)
“ಭರತಖಂಡದಲ್ಲಿರುವ ಪಂಥಗಳನ್ನೆಲ್ಲ ಸ್ಥೂಲವಾಗಿ ಜ್ಞಾನಮಾರ್ಗಾವಲಂಬಿಗಳು ಅಥವಾ ಭಕ್ತಿಮಾರ್ಗಾವಲಂಬಿಗಳು ಎಂದು ವಿಭಾಗಿಸಬಹುದು. ನೀವು ದಯವಿಟ್ಟು ಶಂಕರಾಚಾರ್ಯರ ಶಾರೀರಕ ಭಾಷ್ಯದ ಮುನ್ನುಡಿಯನ್ನು ಓದಿದರೆ ಅಲ್ಲಿ ಜ್ಞಾನದ ನಿರಪೇಕ್ಷತೆಯನ್ನು ಚೆನ್ನಾಗಿ ಚರ್ಚಿಸಿರುವರು. ಅಲ್ಲಿ ಅವರ ನಿರ್ಣಯವೇನೆಂದರೆ, ಬ್ರಹ್ಮಸಾಕ್ಷಾತ್ಕಾರ ಮತ್ತು ಮೋಕ್ಷಪ್ರಾಪ್ತಿ – ಇವು ಬಾಹ್ಯ ಆಚಾರ, ಜಾತಿ ಜಾತಿ ಕುಲ ಗೋತ್ರ ಮತ್ತು ಇತರ ನಂಬಿಕೆಗಳ ಮೇಲೆ ನಿಂತಿಲ್ಲವೆನ್ನುವುದು. ಯಾರು ಸಾಧನ ಚತುಷ್ಟಯವನ್ನು ಅಭ್ಯಾಸ ಮಾಡುವರೋ ಅವರಿಗೆಲ್ಲ ಇದು ಪ್ರಾಪ್ತವಾಗುವುದು.
ಜ್ಞಾನ ಭಕ್ತಿಗಳನ್ನು ಎಲ್ಲಾ ಕಡೆಗಳಲ್ಲಿಯೂ ಯಾವ ಷರತ್ತುಗಳೂ ಇಲ್ಲದೆ ಸಾರಿರುವರು. ಆದಕಾರಣವೇ ಯಾರೂ ಕೂಡ ಮೋಕ್ಷ ಸಂಪಾದನೆಗೆ ಇಂತಹ ವರ್ಣವೇ ಇರಬೇಕು, ಇಂತಹ ಜಾತಿಯವರೇ ಆಗಿರಬೇಕು, ಇಂತಹ ಜನಾಂಗದವರೇ ಆಗಿರಬೇಕು ಎಂದು ಸಾರುವುದಿಲ್ಲ. ವ್ಯಾಸಸೂತ್ರದಲ್ಲಿ ಬರುವ ” ಅನ್ತರಾ ಚಾಪಿ ತು ತದ್ ದೃಷ್ಟೇಃ (ಬ್ರ. ಸೂ. III. IV. ೩೬)- ಮಧ್ಯದಲ್ಲಿರುವವರು, ಅಂದರೆ ಯಾವ ಆಶ್ರಮಕ್ಕೂ ಸೇರದೆ ಇರುವವರು, ಕೂಡ ಜ್ಞಾನಕ್ಕೆ ಯೋಗ್ಯರು. ಅದನ್ನು(ಶಾಸ್ತ್ರದಲ್ಲಿ) ನೋಡುತ್ತೇವೆ – ಎಂಬ ಸೂತ್ರಕ್ಕೆ ಶಂಕರ, ರಾಮಾನುಜ, ಮಧ್ವರ ಭಾಷ್ಯಗಳನ್ನು ನೋಡಿ.” (೯)
ಶಿಷ್ಯ ಶುದ್ಧಾನಂದರಿಗೆ ಶ್ಲೋಕಾರ್ಥದಲ್ಲಿ ಗೊಂದಲವುಂಟಾದಾಗ ಪತ್ರಮುಖೇನ ಮಾಡಿದ ಸಲಹೆ ಹೀಗೆ “ನೀನು ಯಾವಾಗಲೂ ಶಂಕರಾಚಾರ್ಯರನ್ನೇ ಅನುಸರಿಸಬೇಕು” (೧೦)
ಆಹಾರ ಪದ್ಧತಿಯ ಕುರಿತಾಗಿ ರಾಮಾನುಜರ ಮತ್ತು ಶಂಕರರ ಅಭಿಪ್ರಾಯವನ್ನು ಬಹಳ ಬಾರಿ ಉಲ್ಲೇಖಿಸುತ್ತಾರೆ ಮತ್ತು ಶಂಕರರ ಅಭಿಪ್ರಾಯವನ್ನು ಅನುಮೋದಿಸುವುದನ್ನು ನೋಡಬಹುದು. (೧೧)
ಶಂಕರರು ಸೂತ್ರಗಳಿಗೆ ಭಾಷ್ಯವನ್ನು ನಿರ್ಣಯಿಸುವಾಗ ಅದರಲ್ಲೇನಿದೆಯೋ ಅದನ್ನು ವಿವರಿಸಲು ಪ್ರಯತ್ನಿಸಿದ್ದಾರೆಯೇ ವಿನಃ ಅವರ ಮಾತನ್ನಲ್ಲ. ಅಂತಹ ಪ್ರಾಥಮಿಕ ವಿಚಾರವನ್ನು ವಿವೇಕಾನಂದರು ಯಾಕೆ ಪರಿಗಣಿಸಿಲ್ಲವೋ ತಿಳಿಯದು. ವೇದಾಂತ ತತ್ವ ವಿಚಾರದಲ್ಲಿ ಅವರ ಒಂದು ಪ್ರಮುಖ ಅಭಿಪ್ರಾಯ ಬೇಧ ಹಲವು ಕಡೆ ಪ್ರಕಟವಾಗಿದೆ. ಅದರ ಒಂದು ಉದಾಹರಣೆಯನ್ನು ಅವರ ವೇದಾಂತ ಎಂಬ ಪ್ರಸಿದ್ಧ ಉಪನ್ಯಾಸದಲ್ಲಿ ನೋಡಬಹುದು. “ಹೇಗೆ ಷಡ್ದರ್ಶನಗಳು ಒಂದೇ ಮಹಾತತ್ತ್ವದ ಕ್ರಮ ವಿಕಾಸಗಳಂತಿವೆಯೋ, ಮೃದುಸ್ವರದಲ್ಲಿ ಪ್ರಾರಂಭವಾದ ಸಂಗೀತವು ಅದ್ವೈತ ಮಹಾಗಾನದಲ್ಲಿ ಹೇಗೆ ಕೊನೆಗೊಂಡಿದೆಯೋ, ಹಾಗೆಯೇ ,ಮಾನವನ ಮನಸ್ಸು ದ್ವೈತವಿಶಿಷ್ಟಾದ್ವೈತಗಳೆಂಬ ಸೋಪಾನಗಳನ್ನೇರಿ, ಸರ್ವೋನ್ನತದರ್ಶನವಾದ ಅದ್ವೈತ ಶಿಖರವನ್ನು ಸೇರಿದೆ. ಆದ್ದರಿಂದ ಈ ಮೂರು ಸಿದ್ಧಾಂತಗಳೂ ಪರಸ್ಪರ ವಿರೋಧಿಗಳಲ್ಲ. ಅವುಗಳು ಪರಸ್ಪರ ವಿರೋಧಿಗಳೆಂದು ಅನೇಕರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಅದ್ವೈತಿಗಳು ಉಪನಿಷತ್ತಿನ ಅದ್ವೈತ ಭಾಗವನ್ನು ಮಾತ್ರವೇ ವಿಕಾರಗೊಳಿಸದೆ ಉಳಿಸಿಕೊಂಡು ದ್ವೈತ ವಿಶಿಷ್ಟಾದ್ವೈತ ಭಾಗಗಳಿಗೆ ಬಹು ಕಷ್ಟದಿಂದ ತಮ್ಮ ಸಿದ್ಧಾಂತದ ಅರ್ಥ ಬರುವಂತೆ ವ್ಯಾಖ್ಯಾನಗಳನ್ನು ಆರೋಪಿಸಿದ್ದಾರೆ. ಹಾಗೆಯೇ ದ್ವೈತಿಗಳು ದ್ವೈತಭಾಗವನ್ನು ಮಾತ್ರ ತೆಗೆದುಕೊಂಡು ಅದ್ವೈತಭಾಗಗಳಿಗೆ ಬಹುಪ್ರಯಾಸದಿಂದ ದ್ವೈತಾರೋಪಣೆ ಮಾಡಿದ್ದಾರೆ. ಅವರೆಲ್ಲರೂ ಮಹಾ ಪುರುಷರೇ ಹೌದು. ಆದರೂ ಗುರುವಿನಲ್ಲಾದರೂ ದೋಷಗಳಿದ್ದರೆ ಹೇಳಲೇಬೇಕು ಎಂಬ ಹೇಳಿಕೆ ಇದೆ. ನನ್ನ ಅಭಿಪ್ರಾಯದಲ್ಲಿ ಅವರೆಲ್ಲರೂ ತಪ್ಪು ಹಾದಿಯನ್ನೇ ಹಿಡಿದಿದ್ದರು. ಆ ಗ್ರಂಥಪೀಡನೆ ನಮಗೇಕೆ? ಆ ಧಾರ್ಮಿಕ ಕೃತ್ರಿಮತೆ ನಮಗೇಕೆ? ಆವ್ಯಾಕರಣದ ಕಚ್ಚಾಟವೇಕೆ? ಇಲ್ಲದ ಅರ್ಥವನ್ನು ಗ್ರಂಥಗಳಿಗೆ ನಾವೇಕೆ ಆರೋಪಿಸಬೇಕು? ನಾವೆಂದು ಅಧಿಕಾರ ಭೇದದ ಅದ್ಭುತರಹಸ್ಯವನ್ನು ಗ್ರಹಿಸುತ್ತೇವೆಯೋ, ಅಂದು ನಮಗೆ ಆ ಗ್ರಂಥಗಳಲ್ಲಿರುವ ಸಮನ್ವಯ ಭಾವ ಸುಲಭವೂ ಸರಳವೂ ಆಗುತ್ತದೆ.” ಇದು ವೇದಾಂತದ ಕುರಿತು ಅವರ ನಿಲುವು. (೧೨)
ಇಲ್ಲಿ ಕಾಣಬಹುದಾದ ಒಂದು ಸ್ವಾರಸ್ಯಕರ ಅಂಶ ಎಂದರೆ ವಿವೇಕಾನಂದರು ಶಂಕರರ ಕುರಿತು ತೋರಿಸಿರುವ ವೈಯಕ್ತಿಕ ಅಸಮಾಧಾನಗಳು ಬಹುತೇಕ ಖಾಸಗಿಯೇ, ಅಂದರೆ ಪತ್ರ ಇಲ್ಲವೇ ಸಂಭಾಷಣೆಗಳಲ್ಲಿ. ಉಪನ್ಯಾಸ ಮತ್ತು ಚಿಂತನ ಬರಹಗಳಲ್ಲಿ ಶಂಕರರನ್ನು ತೆಗಳಿದ್ದು ಬಹಳ ಕಡಿಮೆ. ಇಂತಹ ವಿಷಯದಲ್ಲಿ ಎಲ್ಲೋ ಒಂದು ಸಿಗಬಹುದು.ಇದು ಬಹುಶಃ ಜನರ ಮೇಲೆ ತಮ್ಮ ವೈಯಕ್ತಿಕ ಭಾವನೆಯನ್ನು ಹೇರುವುದು ಬೇಡವೆಂದೋ ಅಥವಾ ಎಷ್ಟೋಂದು ಉತ್ತಮವಾದ ವಿಚಾರಗಳನ್ನು ಚಿಂತಿಸಲು ಆಸ್ಪದವಿರುವಾಗ ವಿವಾದಿತ ವಿಚಾರವನ್ನೇಕೆ ಹೇಳಿಕೊಂಡು ತಿರುಗಬೇಕೆನ್ನುವುದೋ, ಏನೋ ತಿಳಿಯದು. ಆದರೆ ಅವರು ಕಾಲಕ್ರಮೇಣ ತಮ್ಮ ಜಾತಿಬೇಧ,ವರ್ಣಾಶ್ರಮ ಮುಂತಾದವುಗಳ ಕುರಿತು ಒಂದು ತೀರ್ಮಾನಕ್ಕೆ ಬಂದಂತೆ ತೋರುತ್ತದೆ. “ಜಾತಿ ವಿಂಗಡನೆಯು ಜನಾಂಗದ ರಕ್ಷಣೆಗೆ, ರಾಷ್ಟ್ರರಕ್ಷಣೆಗೆ ಅವಶ್ಯಕವಾಗಿದ್ದವು, ಆ ಸಂಸ್ಥೆಗಳನ್ನು ನಾನು ಗೌರವದಿಂದ ಕಾಣುತ್ತಿದ್ದೇನೆ, ವಯಸ್ಸಾದಂತೆಲ್ಲಾ ನಾನು ಯಾವುದನ್ನೂ ತುಚ್ಛವಾಗಿ ಕಾಣಲಾರೆ, ಪ್ರತಿಯೊಂದರ ಹಿಂದೆಯೂ ಶತಮಾನಗಳ ಪ್ರಯೋಗದ ಫಲವಿದೆ. ಜಾತಿಧರ್ಮ, ಸ್ವಧರ್ಮಗಳು ಯಾವುದೇ ದೇಶದ ಸಾಮಾಜಿಕ ಉನ್ನತಿಗೆ, ಮುಕ್ತಿಗೆ ಸೋಪಾನ” ಎನ್ನುತ್ತಾರೆ. (೧೩)
ಹಿಂದೂ ಧರ್ಮ ಎಂದು ಕರೆದು ಇತರ ಧರ್ಮಗಳಂತೆಯೇ ಮತ್ತೊಂದು ಧರ್ಮವಾಗಿ ಭಾರತೀಯರ ಧಾರ್ಮಿಕತೆಯನ್ನು ಗುರುತಿಸಿದ ಪಾಶ್ಚಾತ್ಯರ ಹಾದಿಯಲ್ಲೇ ಸಾಗಿದ ವಿವೇಕಾನಂದರು, ಪಾಶ್ಚಾತ್ಯರ ನಿಲುವಿನಂತೆಯೇ ವೇದ, ಮನುಸ್ಮೃತಿಯನ್ನು ಧರ್ಮಗ್ರಂಥವನ್ನಾಗಿ ನಂಬಿದ್ದರು. ಮನುಸ್ಮೃತಿಯ ಹಲಾವರು ಶ್ಲೋಕಗಳನ್ನು ಉತ್ತಮ ವಿಚಾರಗಳ ಸಹಿತ ಅವರು ಉಪನ್ಯಾಸಗಳಲ್ಲಿ ವಿವರಿಸಿದ್ದಾರೆ. ಆದರೆ ಅವರ ಮಾತುಗಳಲ್ಲಿ ದೇಶ ಕಟ್ಟುವ ರಾಷ್ಟ್ರೀಯಭಾವನೆಯೇ ವ್ಯಕ್ತವಾಗುತ್ತಿತ್ತು. ಅವರಿಗೆ ಭಾರತದಲ್ಲಿ ಜಾತಿಗಳಿರುವ ಬಗ್ಗೆ ಅಸಮಾಧಾನ ಇರಲಿಲ್ಲ. ಅದರ ಹೆಸರಿನಲ್ಲಿ ಉಂಟಾಗಿರುವ ತಾರತಮ್ಯತೆಯ ಬಗ್ಗೆ ತೀವ್ರ ಅಸಹನೆ ಇತ್ತು. ವರ್ಣಾಶ್ರಮವನ್ನು ಕುರಿತು ಮಾತನಾಡುವ ಶಂಕರಾಚಾರ್ಯರ ವಿಚಾರದಲ್ಲಿ ಅವರ ವಿರೋಧವಿತ್ತು. ಧರ್ಮವೇ ಭಾರತದ ಜೀವಾಳ ಎಂದು ನೂರಾರು ಬಾರಿ ತಮ್ಮ ಉಪನ್ಯಾಸಗಳಲ್ಲಿ ಹೇಳಿರುವ ವಿವೇಕಾನಂದರು ಶಂಕರರನ್ನು ಎಂದಿಗೂ ನಿರಾಕರಿಸಲಿಲ್ಲ. ನಮಗೆ ಶಂಕರಾಚಾರ್ಯರ ಪ್ರಚಂಡ ವಿದ್ವತ್ತು ಮತ್ತು ಬುದ್ಧನ ಹೃದಯ ವೈಶಾಲ್ಯತೆ ಬೇಕಿದೆ ಎಂದು ಹೇಳುತ್ತಿದ್ದರು. “ನಮಗಿಂದು ಬೇಕಾಗಿರುವುದು ಅದ್ಭುತ ಹೃದಯದ ಮತ್ತು ಪ್ರಚಂಡ ಪ್ರತಿಭೆಯ ಸಂಗಮ. ಅನಂತಜ್ಞಾನವು ಅನಂತಪ್ರೇಮದೊಂದಿಗೆ ಮಿಲನವಾಗಬೇಕು. ವೇದಾಂತಿಗಳು ಬ್ರಹ್ಮವನ್ನು ಸತ್ ಚಿತ್ ಆನಂದ ಎಂದು ಮಾತ್ರ ಕರೆಯುವರು. ಈ ಮೂರನ್ನೂ ಅವರು ಏಕವೆಂದು ಭಾವಿಸುವರು. ಸತ್ ಎಂಬುದು ಚಿತ್ ಅಥವಾ ಆನಂದ ಇಲ್ಲದೆ ಇರಲಾರದು. ಆನಂದವಿಲ್ಲದ ಚಿತ್ತಾಗಲಿ ಸತ್ಯವಿಲ್ಲದ ಆನಂದವಾಗಲಿ ಇರಲಾರದು. ನಮಗೆ ಇಂದುಬೇಕಾಗಿರುವುದು ಸತ್ ಚಿತ್ ಆನಂದಗಳ ಸಾಮರಸ್ಯ. ಇದೆ ನಮ್ಮ ಗುರಿ. ನಮಗೆ ಸಾಮರಸ್ಯ ಬೇಕು, ಏಕಮುಖವಾದ ಪ್ರಗತಿಯಲ್ಲ. ಶಂಕರಾಚಾರ್ಯರ ಬುದ್ಧಿಶಕ್ತಿಯನ್ನು ಮತ್ತು ಬುದ್ಧನ ಹೃದಯ ವೈಶಾಲ್ಯವನ್ನು ಪಡೆಯಲು ಸಾಧ್ಯವಿದೆ. ಇಂತಹ ಪವಿತ್ರ ಸಮನ್ವಯವನ್ನು ಪಡೆಯಲು ನಾವೆಲ್ಲ ಪ್ರಯತ್ನಿಸೋಣ.” (೧೪)
ಜಾತಿಗಳನ್ನು ನಿರಾಕರಿಸಿ ಬೌದ್ಧ ಧರ್ಮದಡಿ ಎಲ್ಲರೂ ಸಮಾನರು ಎಂದು ಹೇಳಿದ ಬುದ್ಧನ ಔದಾರ್ಯತೆಯು ಶಂಕರರಲ್ಲಿ ಇರಲಿಲ್ಲ, ವೇದಾಧ್ಯಯನವನ್ನು ಶೂದ್ರರಿಗೆ ನಿರಾಕರಿಸಿದರು ಎಂಬುದು ಅವರ ವೈರುಧ್ಯಕ್ಕಿರುವ ಪ್ರಮುಖ ಕಾರಣಗಳಲ್ಲಿ ಒಂದು. ಶಂಕರರು ಹುಟ್ಟಿನಿಂದ ಬ್ರಾಹ್ಮಣರಾಗಿದ್ದರಿಂದ ಸಾಧಾರಣವಾಗಿ ಪುರೋಹಿತ /ಬ್ರಾಹ್ಮಣರಿಗೆ ಜಾತಿ ವಿಚಾರಗಳಲ್ಲಿ ಯಾವ ರೀತಿಯಲ್ಲಿ ಖಂಡನೆಯನ್ನು ಮಾಡುತ್ತಿದ್ದರೋ ಅದರ ಭಾಗಶಃ ಖಂಡನೆಯನ್ನು ಶಂಕರರಿಗೂ ಅನ್ವಯಿಸುತ್ತಿದ್ದರು. ಸಂನ್ಯಾಸವನ್ನು ಸ್ವೀಕರಿಸಿದವರು ಯಾವ ವರ್ಣಕ್ಕೂ ಸೇರಿದವರಲ್ಲ ಎಂಬುದನ್ನು ಹೇಳುತ್ತಿದ್ದರೂ ಅದನ್ನು ಅವರು ಶಂಕರರಿಗೆ ಅನ್ವಯಿಸಿದಂತೆ ಕಾಣುವುದಿಲ್ಲ. “ಬುದ್ಧನ ಜೀವನವೇ ಒಂದು ದೊಡ್ಡ ಆಕರ್ಷಣೆಯಾಗಿದೆ. ನನಗೆ ಬುದ್ಧನ ಜೀವನದ ಮೇಲೆ ಪ್ರೀತಿ, ಅವನ ಸಿದ್ಧಾಂತದ ಮೇಲೆ ಅಲ್ಲ” ಎನ್ನುವ ಅವರು ಶಂಕರರ ಜೀವನ/ ಚರಿತ್ರೆಯನ್ನು ಓದಿ ಹಲವು ವಿಚಾರಗಳ ಕುರಿತು ಭ್ರಮನಿರಸನರಾಗಿದ್ದಿರಬಹುದು. ಶಂಕರರು ಭಾಷ್ಯದಲ್ಲಿ ವಿವರಿಸಿರುವುದು ಅವರ ಆಶಯ ಅಲ್ಲ ಅದರಲ್ಲಿರುವ ವಿಷಯ ಎಂದೇಕೆ ವಿವೇಕಾನಂದರು ತಿಳಿಯಲಿಲ್ಲವೋ ಗೊತ್ತಾಗದು. “ಶ್ರವಣಾಧ್ಯಯನಾರ್ಥಂ ಪ್ರತಿಷೇಧಾತ್ ಸ್ಮೃತೇಶ್ಚ” ಅಂತಿರುವ ಸೂತ್ರವನ್ನು ಸ್ಮೃತಿಗಳ ಉಲ್ಲೇಖದಿಂದಲೇ ಹೇಳಬೇಕು. ಶಂಕರರು ಅಲ್ಲಿ ತನ್ನದಾಗಿ ಏನೂ ಹೇಳಿಲ್ಲ. ಆಶ್ಚರ್ಯವೆಂಬಂತೆ ಭಾರತದ ಮಹಾಪುರುಷರು ಎಂಬ ಉಪನ್ಯಾಸದಲ್ಲಿ ವಿವೇಕಾನಂದರು ತಮ್ಮದೇ ಧೋರಣೆಗೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ: “ರಾಮಾನುಜರ ಕಾಲದಿಂದಲೂ ನೀವು ಒಂದನ್ನು ಗಮನಿಸಬಹುದು ಅದೇ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ವಿದ್ಯೆಯ ಅಧಿಕಾರವನ್ನು ನೀಡಿದರು. ಶಂಕರಾಚಾರ್ಯರಿಗಿಂತ ಮುಂಚಿನ ಆಚಾರ್ಯರ ಪಲ್ಲವಿಯೂ ಇದೇ ಆಗಿದ್ದಿತು. ಹಾಗೆಯೇ ರಾಮನುಜಾಚಾರ್ಯರ ಆನಂತರ ಬಂದ ಆಚಾರ್ಯರ ಮುಖ್ಯ ಪಲ್ಲವಿಯೂ ಅದೇ ಆಗಿದೆ. ಶಂಕರಾಚಾರ್ಯರು ಸಂಕುಚಿತ ಮನೋಭಾವದವರೆಂದು ಏತಕ್ಕೆ ಹೇಳಲಾಗಿದೆಯೋ ಗೊತ್ತಿಲ್ಲ. ಅವರ ಗ್ರಂಥದಲ್ಲಿ ಅದಕ್ಕೆ ಆಧಾರ ದೊರಕುವುದಿಲ್ಲ. ಭಗವಾನ್ ಬುದ್ಧದೇವನ ಸಂದೇಶದ ವಿಷಯದಲ್ಲಿ ಆದಂತೆಯೇ ಇಲ್ಲಿಯೂ ಕೂಡಾ ಭಗವಾನ್ ಶಂಕರಾಚಾರ್ಯರಿಗೆ ಆರೋಪಿಸುವ ಈ ಪ್ರತ್ಯೇಕತೆಯ ನೀತಿ ಅವರ ಉಪದೇಶದಲ್ಲಿ ಸೇರಿಲ್ಲ; ಅವರ ಶಿಷ್ಯರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎನ್ನಬೇಕಾಗಿದೆ”. (೧೫) “ಅವರ ಗ್ರಂಥ” ಎಂದರೆ ಬಹುಶಃ ಅವರದ್ದೇ ರಚನೆಯಾದ ಉಪದೇಶ ಸಾಹಸ್ರಿ ಮುಂತಾದ ಪ್ರಕರಣ ಗ್ರಂಥಗಳಿರಬೇಕು. ಒಟ್ಟಾರೆಯಾಗಿ ಹೇಳಬೇಕೆಂದರೆ ನಾವೀಗ ಹೇಗೆ ವಸಾಹತು ಪ್ರಜ್ಞೆಯ ನರಳಿನಲ್ಲಿ ಯಾವುದು ಸತ್ಯ, ಯಾವುದು ಹುಯಿಲು ಎಂದು ನಿರ್ಧರಿಸಲು ಕಷ್ಟ ಪಡುತ್ತಿರುವೆವೋ ಅದಕ್ಕಿಂತ ಹತ್ತು ಹಲವು ಪಟ್ಟು ಹೆಚ್ಚು ಕಷ್ಟವನ್ನು ಅವರು ಸತ್ಯಶೋಧನೆಯ ಹಾದಿಯಲ್ಲಿ ನಡೆಸಿದ್ದರು. ಹಾಗಾಗಿ ಅವರ ವಾಕ್ಯಗಳನ್ನು ಉದ್ಧರಿಸುವ ಸಂದರ್ಭದಲ್ಲಿ ಅದರ ಕಾಲ ಮತ್ತು ಸಂದರ್ಭ ಎರಡೂ ಮುಖ್ಯವಾಗುತ್ತವೆ. ಅವರ ವ್ಯಾಪಕವಾದ ಓದು, ಅನುಭವ, ವಿಶ್ವಸಂಚಾರ ಮತ್ತು ಯೋಚನಾ ಲಹರಿಯು ಹಲವು ಬಾರಿ ಹಲವು ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ಮಾಡಿದೆ. ಅವರ ಸಮಗ್ರ ಓದು ಮಾತ್ರವೇ ಒಂದು ವಿಚಾರದ ಕುರಿತು ನಮಗೆ ಅವರ ಆಶಯದ ಕುರಿತಾಗಿ ಅರ್ಥಪೂರ್ಣ ಅಭಿಪ್ರಾಯವನ್ನು ಒದಗಿಸಬಲ್ಲುದು. ಅವರ ಹೃದಯದಲ್ಲಿದ್ದ ಅಪ್ರತಿಮ ದೇಶಪ್ರೇಮವು ಎಲ್ಲ ವೈಚಾರಿಕ ಹರಹುಗಳಿಗೂ ಕಲಶವಿಟ್ಟಂತೆ ಇದ್ದು, ಎಲ್ಲ ಜಾತಿ, ಪಂಥ, ಮತಗಳನ್ನು ಒಟ್ಟಿಗೇ ತೆಗೆದುಕೊಂಡು ಹೋಗುವ ಸಮನ್ವಯ ದೃಷ್ಟಿಯಿಂದ ನಮಗೆ ಸದಾ ಪ್ರಿಯರಾಗುತ್ತಾರೆ. ತಮಗೆ ಸ್ಪಷ್ಟಗೊಳ್ಳದ ಸಂಗತಿಗಳ ಗೋಜಲುಗಳ ನಡುವೆಯೂ ತಮ್ಮ ಎಣೆಯಿಲ್ಲದ ದೇಶಭಕ್ತಿಯಿಂದ ಭಾರತದ ಏಳಿಗೆಗೆ ಶ್ರಮಿಸಿದ ಮಹಾನ್ ಕರ್ಮಯೋಗಿ ಸ್ವಾಮಿ ವಿವೇಕಾನಂದರು.
ಗ್ರಂಥಋಣ:
೧. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೪ ಪುಟ ೧೪,೧೫
೨. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೮ ಪುಟ ೯೬,೯೭
೩. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೫ ಪುಟ ೨೨
೪. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೪ ಪುಟ ೩೮
೫. ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿಸ್ವಾಮಿಗಳು, ಪು.೫೦೭,ಬ್ರಹ್ಮಸೂತ್ರಭಾಷ್ಯ ಸಂಪುಟ-೧ , ಆಧ್ಯಾತ್ಮ ಪ್ರಕಾಶ ಕಾರ್ಯಾಲಯ,ಹೊಳೆನರಸೀಪುರ
೬. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೩, ನನ್ನ ಸಮರನೀತಿಪುಟ ೯೭-೯೮
೭. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೨, ಬ್ರಹ್ಮ ಮತ್ತುಜಗತ್ತು, ಪುಟ ೭೫,೭೬
೮. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೧ ಈಶ್ವರ ತತ್ವ, ಪುಟ೧೯೩
೯. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೫ ಹಿಂದೂ ಧರ್ಮದತೂರ್ಯವಾಣಿ, ಪುಟ ೨೯೦-೨೯೧
೧೦. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೫ ಪುಟ ೨೬
೧೧. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೩, ವೇದಾಂತದರ್ಶನದ ವಿವಿಧ ಮುಖಗಳು, ಪುಟ ೨೦೪-೨೦೫
೧೨. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೩, ವೇದಾಂತ ಪುಟ೨೫೬
೧೩.ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೩, ವೇದಾಂತ ಪುಟ೨೬
೧೪. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೨, ಬ್ರಹ್ಮ ಮತ್ತುಜಗತ್ತು, ಪುಟ ೭೯,೮೦
೧೫. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ಸಂಪುಟ ೩, ಭಾರತದಮಹಾಪುರುಷರು ಪುಟ ೧೪೧