ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 17, 2016

6

ಎನ್‍ಜಿಓ: ಪರದೆ ಹಿಂದಿನ ಕತೆ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

harvesting_souls_of_indiaನರೇಂದ್ರ ಮೋದಿಯ ಬಿಜೆಪಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ಮೊದಲ ಕೆಲಸವೇನೆಂದರೆ ಅದುವರೆಗೆ ಭಾರತದಲ್ಲಿ ಬೇರುಬಿಟ್ಟು ಹೆಮ್ಮರಗಳೂ ಹೆಮ್ಮಾರಿಗಳೂ ಆಗಿ ವಿಜೃಂಭಿಸುತ್ತಿದ್ದ ಎನ್‍ಜಿಓಗಳಿಂದ ಅವುಗಳ ಹಣಕಾಸು ವ್ಯವಹಾರಗಳ ಲೆಕ್ಕ ಕೇಳಿದ್ದು ಮತ್ತು ಹಾಗೆ ಲೆಕ್ಕ ಕೊಡದೆ ಅಂಗಡಿ ತೆರೆದಿರುವ ಎಲ್ಲ ಎನ್‍ಜಿಓಗಳಿಗೂ ಬಾಗಿಲು ಹಾಕಿಸಿ ಬೀಗ ಜಡಿಯುತ್ತೇನೆಂದು ಖಡಕ್ ಸೂಚನೆ ಇತ್ತಿದ್ದು. ಯಾವ್ಯಾವುದೋ ಬೇನಾಮಿ ಹೆಸರು ಮತ್ತು ಖಾತೆಗಳಿಂದ ಧನಸಹಾಯ ಪಡೆಯುತ್ತ ಆರಾಮಾಗಿದ್ದ ಎನ್‍ಜಿಓಗಳಿಗೆ ಕೇಂದ್ರ ಸರಕಾರ ಹೀಗೆ ಚಾಟಿ ಬೀಸತೊಡಗಿದ್ದೇ ಕಣ್ಣುಕತ್ತಲೆ ಬಂದಂತಾಯಿತು. ಕೇಂದ್ರದ ಗೃಹಖಾತೆ 2015ರ ಎಪ್ರೀಲ್‍ನಲ್ಲಿ ಗ್ರೀನ್‍ಪೀಸ್ ಎಂಬ ಅಂತಾರಾಷ್ಟ್ರೀಯ ಎನ್‍ಜಿಓದ ಮಾನ್ಯತೆ ರದ್ದುಮಾಡಿದ್ದೇ ತಡ, ಇನ್ನು ಕೆಲವೇ ದಿನಗಳಲ್ಲಿ ತಮ್ಮ ಬುಡಕ್ಕೂ ಕೊಡಲಿಯೇಟು ಬೀಳುವುದು ಖಚಿತವೆಂದು ತಿಳಿದ ಉಳಿದ ಎನ್‍ಜಿಓಗಳು ಚಿರೋಬರೋ ಅಳತೊಡಗಿದವು. ಬಿಲಕ್ಕೆ ಹೊಗೆ ಹಾಕಿದಾಗ ದಂಶಕಗಳು ದಿಕ್ಕಾಪಾಲಾಗಿ ಹೊರಗೋಡಿಬರುವುದು ಸಾಮಾನ್ಯವೇ ತಾನೇ? ಗ್ರೀನ್‍ಪೀಸ್ ಸಂಸ್ಥೆಗೆ ಬರೆ ಎಳೆದೊಡನೆ ಫೋರ್ಡ್ ಫೌಂಡೇಶನ್, ಆಮ್ನೆಸ್ಟಿ ಇಂಟರ್‍ನ್ಯಾಷನಲ್, ವಿಶ್ವಸಂಸ್ಥೆ ಎಲ್ಲವೂ ಕೋರಸ್‍ನಲ್ಲಿ ಕೂಗು ಹಾಕಿದವು. ಗ್ರೀನ್‍ಪೀಸ್ ಮತ್ತು ಉಳಿದ ದೇಶದ್ರೋಹಿಗಳ ನೆಟ್‍ವರ್ಕ್ ಹೇಗಿದೆ ಎಂಬುದನ್ನು ಯಾವ ತನಿಖೆಯೂ ಇಲ್ಲದೆ ಸರಕಾರಕ್ಕೆ ನೋಡಲು ಅವಕಾಶವಾಯಿತು. ನಂಬಿದರೆ ನಂಬಿ, ಆ ಕಾಲಕ್ಕೆ ಭಾರತದಲ್ಲಿ ಯಾರ ನಿಯಂತ್ರಣ ಇಲ್ಲದೆ ಸಿಕ್ಕಸಿಕ್ಕ ಮೂಲಗಳಿಂದ ಧನಸಹಾಯ ಪಡೆದುಕೊಂಡು ಆಯಾ ವ್ಯಕ್ತಿ/ಸಂಸ್ಥೆಗಳಿಗೆ ಬೇಕಾದಂತೆ ಕೆಲಸ ಮಾಡಿಕೊಡುತ್ತಿದ್ದ ಎನ್‍ಜಿಓಗಳ ಸಂಖ್ಯೆ ಒಟ್ಟು 42,273!

ಎನ್‍ಜಿಓಗಳ ಮೇಲೆ ಮೋದಿ ಸರಕಾರ ಹರಿಹಾಯ್ದಿದ್ದೇಕೆ ಎಂಬ ಪ್ರಶ್ನೆ ಹಲವರಿಗೆ ಬರಬಹುದು. ಇದಕ್ಕೆ ಉತ್ತರ ಸ್ಪಷ್ಟ. ಭಾರತದಲ್ಲಿ ಅಭಿವೃದ್ಧಿಯನ್ನು ತಡೆಹಿಡಿದಿದ್ದ ಪ್ರಮುಖ ತೊಡರುಗಾಲುಗಳೇ ಈ ಎನ್‍ಜಿಓಗಳು. ಹೆಚ್ಚಿನ ಎಲ್ಲ ಎನ್‍ಜಿಓಗಳಿಗೆ ಆರ್ಥಿಕ ಸಹಾಯ ಬರುತ್ತಿರುವುದು ಅಂತಾರಾಷ್ಟ್ರೀಯ ವೇದಿಕೆಗಳಿಂದ; ಹೊರದೇಶಗಳ ಬಹುರಾಷ್ಟ್ರೀಯ ಕಂಪೆನಿಗಳಿಂದ; ಭಾರತದ ಏಳಿಗೆಯನ್ನು ಸಹಿಸದ ಕೆಲವು ದೇಶಗಳಿಂದ ಮತ್ತು ಈ ದೇಶದ ಜನಸಂಖ್ಯೆಯನ್ನು ಕಂಡು ಕಣ್ಣು ಬಾಯಿಗಳಲ್ಲಿ ಜೊಲ್ಲು ಸುರಿಸುತ್ತಿರುವ ಮತಾಂತರಿಗಳ ಮಾತೃಸಂಸ್ಥೆಯಿಂದ. ಭಾರತದಲ್ಲಿ ಎನ್‍ಜಿಓಗಳು ಯಾಕೆ ಕಳೆದ ಎರಡು ವರ್ಷಗಳಿಂದ ಚಡಪಡಿಸುತ್ತಿವೆ ಎಂದು ಅಚ್ಚರಿ ಪಡುತ್ತಿರುವವರು ಅರ್ಥ ಮಾಡಿಕೊಳ್ಳಬೇಕಾದ ಸತ್ಯವೊಂದಿದೆ: ಅದೇನೆಂದರೆ, ನಮ್ಮ ದೇಶದಲ್ಲಿ ಕಾರ್ಯಾಚರಿಸುತ್ತಿರುವ ಎನ್‍ಜಿಓಗಳು ತಮ್ಮೊಳಗೇ ಒಂದು ದೊಡ್ಡ ನೆಟ್‍ವರ್ಕ್ ರೂಪಿಸಿಕೊಂಡಿವೆ. ಅವುಗಳಲ್ಲಿ ಒಂದರ ಮೇಲೆ ಸರಕಾರ ಕ್ರಮ ಕೈಗೊಳ್ಳಲು ಹೋದರೆ ಮಿಕ್ಕವು ಪತರಗುಟ್ಟುತ್ತವೆ. ಯಾಕಿರಬಹುದು ಎನ್ನುತ್ತಾ ಅವುಗಳ ಸಂಬಂಧಗಳ ಸಂಕೀರ್ಣ ಸಿಕ್ಕುಗಳನ್ನು ಬಿಡಿಸುತ್ತಾಹೋದರೆ ನಮಗೆ ಅಂತಿಮವಾಗಿ ಅಲ್ಲಿ ಕಾಣುವುದು ಒಂದೇ ಸಂಸ್ಥೆ. ಅದುವೇ, ಒಂದು ಕೈಯಲ್ಲಿ ಬೈಬಲ್ಲನ್ನೂ ಇನ್ನೊಂದು ಕೈಯಲ್ಲಿ ಹಣದ ಥೈಲಿಯನ್ನೂ ಹಿಡಿದುನಿಂತ ವ್ಯಾಟಿಕನ್. ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಬಹುತೇಕ ಎಲ್ಲ ಎನ್‍ಜಿಓಗಳಿಗೂ ಈ ಮಾತೃಸಂಸ್ಥೆಯೊಡನೆ ಒಂದಿಲ್ಲೊಂದು ರೀತಿಯ ಸಂಬಂಧವಿದೆ. ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಇಪ್ಪತ್ತು ಪ್ರಭಾವಶಾಲಿ ಎನ್‍ಜಿಓಗಳ ಹೆಸರುಗಳನ್ನು ಎದುರಿಟ್ಟುಕೊಂಡು ಅವುಗಳ ಕೆಲಸ-ಕಾರ್ಯಗಳ ಬಗ್ಗೆ ತನಿಖೆ ಮಾಡುತ್ತಾಹೋದ ಯಾರಿಗಾದರೂ ಈ ಸೂಕ್ಷ್ಮಸಂಬಂಧ ಗೋಚರಿಸಲೇಬೇಕು. ಹಾಗಂತ ಇವೆಲ್ಲವೂ ವ್ಯಾಟಿಕನ್‍ಗೆ ನೇರವಾಗಿ ಸಂಬಂಧಪಟ್ಟಿವೆ ಎಂದು ಕೋರ್ಟಿನಲ್ಲಿ ಸಾಧಿಸಲು ಸಾಧ್ಯವಾಗದೇ ಹೋಗಬಹುದು. ಸಾಧಿಸಲು ಆಗಲಿಲ್ಲ ಎಂದ ಮಾತ್ರಕ್ಕೆ ನಮ್ಮ ಬಲವಾದ ಅನುಮಾನ ಸುಳ್ಳು ಎಂದಾಗುವುದಿಲ್ಲ.

ಭಾರತದಲ್ಲಿ 2004ರಿಂದ 14ರವರೆಗೆ ಯುಪಿಎ ಸರಕಾರದ ಆಡಳಿತವಿದ್ದಾಗ ನಾವು ಎನ್‍ಜಿಓಗಳ ಬಗ್ಗೆ ಹೆಚ್ಚು ಕೇಳಿದ್ದೇ ಇಲ್ಲ. ಅವು ತಮ್ಮ ಪಾಡಿಗೆ ತಾವು ಹುಲುಸಾಗಿ ಮೇಯ್ದುಕೊಂಡಿದ್ದವು, ಅಷ್ಟೆ. ಆದರೆ 2010ರ ನಂತರ ಮುಂದಿನ ಚುನಾವಣೆಯಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಬರುತ್ತಿದ್ದಾರೆಂದು ತಿಳಿದೊಡನೆ ಇವೆಲ್ಲ ಧಡ್ಡನೆ ಎದ್ದುನಿಂತವು. ಅಪಾಯದ ಮುನ್ಸೂಚನೆ ಅರಿತವು. ಮೋದಿಯನ್ನು ನರಹಂತಕನೆಂದು ಬಿಂಬಿಸಲು ಇನ್ನಿಲ್ಲದ ಪ್ರಯತ್ನಪಟ್ಟವು. ಮಾಧ್ಯಮ ಮತ್ತು ಎನ್‍ಜಿಓಗಳ ಒಂದು ದುಷ್ಟಕೂಟ ಈ ವಿಷಯದಲ್ಲಿ ಶಕ್ತಿಮೀರಿ ಹೋರಾಡಿತು. ಕೊನೆಗೆ ತಮ್ಮ ಪ್ರಯತ್ನವೆಲ್ಲ ನಿಷ್ಫಲವಾಗಿ ಮೋದಿ ಪ್ರಧಾನಿಯಾಗಿಬಿಟ್ಟಾಗ ಭಾರತದ ಹೆಸರಿಗೆ ಕೆಸರು ಮೆತ್ತುವ ಕೆಲಸದಲ್ಲಿ ನಿರತವಾಗಿಬಿಟ್ಟವು. ಭಾರತದಲ್ಲಿ ಹಿಂದೆಂದೂ ಇಲ್ಲದ ಅಸಾಧ್ಯ ಅಸಹಿಷ್ಣುತೆ ಇದೆಯೆಂಬ ಕತೆ ಕಟ್ಟಲಾಯಿತು. ಬಂಗಾಳ, ಕೇರಳಗಳಲ್ಲಿ ಆಗಾಗ ಹಿಂಸಾಚಾರಗಳು ಭುಗಿಲೇಳುವಂತೆ ನೋಡಿಕೊಳ್ಳಲಾಯಿತು. ಆದಿವಾಸಿಗಳ ಮೇಲೆ ಭಾರತದ ಸರಕಾರ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅತ್ತುಕರೆಯಲಾಯಿತು. ಕೇಂದ್ರ ಸರಕಾರ ಯಾವುದೇ ಪರಮಾಣುಶಕ್ತಿಯ ವಿದ್ಯುತ್ ಯೋಜನೆಗಳಿಗೆ ಅನುಮತಿ ಕೊಡಬಾರದೆಂದು ಬುಡಕಟ್ಟು ಜನರನ್ನು ಮುಂದಿಟ್ಟುಕೊಂಡು ಬೀದಿಹೋರಾಟಗಳನ್ನು ರೂಪಿಸಲಾಯಿತು. ಒಟ್ಟಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿಯಾಗದಂತೆ ತಡೆಯಲಂತೂ ಆಗಲಿಲ್ಲ; ಈ ಮನುಷ್ಯನನ್ನು ಅಂತಾರಾಷ್ಟ್ರೀಯ ಸಮುದಾಯದ ಮೂಲಕ ನಾಲಾಯಕ್ ಎಂದು ಘೋಷಿಸಿ ಕೈಕಟ್ಟಿಹಾಕುವಂತೆ ಮಾಡಲಿಕ್ಕಾದರೂ ಆದೀತೋ ಎಂಬ ಹತಾಶ ಯತ್ನಕ್ಕೆ ಎನ್‍ಜಿಓಗಳು ಇಳಿದವು. ಭಾರತವನ್ನು ಒಳಗಿನಿಂದ ಒಡೆಯಬೇಕು; ಛಿದ್ರಗೊಳಿಸಬೇಕು; ಆ ಮೂಲಕ ತಮ್ಮ ಗುರಿಸಾಧನೆ ಮಾಡಿಕೊಳ್ಳಬೇಕೆಂಬ ಹಪಾಹಪಿಗೆ ಬಿದ್ದವು.

ನಾವು ಒಂದು ಸಂಗತಿಯನ್ನು ಬಹಳ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಅದೇನೆಂದರೆ ಸದ್ಯಕ್ಕೆ ಭಾರತದಲ್ಲಿ ಒಂದು ಅಘೋಷಿತ ಯುದ್ಧ ಜಾರಿಯಲ್ಲಿದೆ. ಇದು ಒಂದು ಧರ್ಮ ಮತ್ತು ಎರಡು ರಿಲಿಜನ್‍ಗಳ ನಡುವಿನ “ಧರ್ಮಯುದ್ಧ”. ಪ್ರಪಂಚದ ಬಹುಪಾಲು ರಾಷ್ಟ್ರಗಳನ್ನು ಪಸರಿಸಿರುವ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳಿಗೆ ಸದ್ಯಕ್ಕೆ ಸವಾಲಾಗಿ ಉಳಿದಿರುವ ದೇಶಗಳು ಎರಡೇ: ಚೀನಾ ಮತ್ತು ಭಾರತ. ಚೀನಾದ ಕಮ್ಯುನಿಸ್ಟ್ ಸರಕಾರ ಎಲ್ಲ ಧರ್ಮಗಳನ್ನೂ ಹದ್ದುಬಸ್ತಿನಲ್ಲಿಟ್ಟು ಮೂರನೇ ಪಾರ್ಟಿಗೆ ತನ್ನ ದೇಶದ ಹೊಸಿಲು ತುಳಿಯುವುದಕ್ಕೇ ಅವಕಾಶ ಕೊಡದೇ ಇರುವುದರಿಂದ ರಿಲಿಜನ್ನುಗಳಿಗೆ ಸದ್ಯದ ಟಾರ್ಗೆಟ್ ಆಗಿ ಕಾಣಿಸುತ್ತಿರುವುದು ಭಾರತ ಮಾತ್ರ. ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಈ ದೇಶದ ಮೇಲೆ ನಿರಂತರ ದಾಳಿ ನಡೆಸಿದರೂ ಹಿಂದೂ ಧರ್ಮವನ್ನು ಕಿತ್ತೊಗೆಯಲು ಆಗಿಲ್ಲವಲ್ಲ ಎಂಬ ಸಿಟ್ಟು, ಹತಾಶೆ ಇವೆರಡು ರಿಲಿಜನ್ನುಗಳಿಗೂ ಇದೆ. ಭಾರತದಲ್ಲಿ ತಮ್ಮ ಕಾರ್ಯಸಾಧನೆ ಮಾಡಿಕೊಳ್ಳಬೇಕಾದರೆ ಹಿಂದೂ ಧರ್ಮವನ್ನು ಒಡೆಯಬೇಕು; ಅದರ ಹಲವು ಪಂಗಡಗಳಿಗೆ ತಮ್ಮತಮ್ಮೊಳಗೆ ಜಗಳ ತಂದಿಡಬೇಕು ಎನ್ನುವುದು ಅವುಗಳ ಸದ್ಯದ ಹಿಡನ್ ಅಜೆಂಡಾ. ಹಿಂದೂ ಎಂಬ ಮಹಾಪ್ರತಿಸ್ಪರ್ಧಿ ಸೋತರೆ ನಂತರ ಈ ದೇಶದಲ್ಲಿ ತಮ್ಮಿಬ್ಬರೊಳಗೆ ಅಧಿಕಾರ ಹಂಚಿಕೊಂಡು ಬಾಳಬಹುದು ಎಂಬುದು ಅವುಗಳ ಹಂಚಿಕೆ. ಹಾಗಾಗಿ ಜಗತ್ತಿನ ಉಳಿದೆಲ್ಲ ಕಡೆಗಳಲ್ಲಿ ಪರಸ್ಪರ ಕತ್ತಿ ಹಿಡಿದು ಕಾಳಗ ಮಾಡುವ ಎರಡೂ ರಿಲಿಜನ್ನುಗಳು ಭಾರತವೆಂಬ ಪುಣ್ಯಭೂಮಿಯಲ್ಲಿ ಜತೆಯಾಗಿವೆ, ಹಸ್ತಲಾಘವ ಮಾಡುತ್ತಿವೆ! ಮೂರನೇ ಶತ್ರುವನ್ನು ಸೋಲಿಸಲು, ತಮ್ಮ ಭಿನ್ನಾಭಿಪ್ರಾಯಗಳನ್ನು ತಾತ್ಕಾಲಿಕವಾಗಿ ಬದಿಗಿಟ್ಟು ಗೆಳೆಯರಾದರೂ ಓಕೆ ಎಂಬ ಅನುಕೂಲಸಿಂಧು ರಾಜಕಾರಣವನ್ನು ಈ ರಿಲಿಜನ್ನುಗಳು ಬಹಳ ಚೆನ್ನಾಗಿ ಕಲಿತಿವೆ.

ಹಾಗಾಗಿ, ಭಾರತದಲ್ಲಿ ಹಿಂದೂಗಳನ್ನು ಸೋಲಿಸಲು ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳು ಯಾವ ಮಟ್ಟದ ಮೈತ್ರಿಯನ್ನು ಬೇಕಾದರೂ ಕಾಪಾಡಿಕೊಳ್ಳಬಲ್ಲವು. ಇದು ಮತ್ತೆಮತ್ತೆ ಸಾಧಿತವಾಗಿರುವ ಸತ್ಯ. ಇವರಿಬ್ಬರ ಜೊತೆ ಕೈಮಿಲಾಯಿಸಿರುವ ಮೂರನೇ ಶಕ್ತಿ ಕಮ್ಯುನಿಸ್ಟ್ ಪಕ್ಷ! ತತ್ತ್ವಸಿದ್ಧಾಂತಗಳೊಂದೂ ಇಲ್ಲದ ಈ ಮೂರು ಜನರ ಮೈತ್ರಿ ಭಾರತದಲ್ಲಿ ಕೇವಲ ಒಂದು ಸಮಾನಶತ್ರುವನ್ನು ಸೋಲಿಸಲೋಸುಗ ಮೂಡಿಬಂದಿದೆ ಎಂಬುದನ್ನು ನಾವು ನೆನಪಿಡಬೇಕು. ನೇರವಾಗಿ ಮತಾಂತರದ ಕೆಲಸಗಳಲ್ಲಿ ತೊಡಗಿಕೊಳ್ಳುವುದಕ್ಕಿಂತ ಎನ್‍ಜಿಓಗಳ ರೂಪದಲ್ಲಿ ಭಾರತದ ಗಲ್ಲಿಗಲ್ಲಿಗಳಲ್ಲಿ ಬೇರು ಬಿಡುವುದು ಸುಲಭದ ಕೆಲಸ ಎಂದು ವ್ಯಾಟಿಕನ್‍ನಿಂದ ಆದೇಶ ಪಡೆಯುವ ರಿಲಿಜನ್ನಿಗೆ ಸ್ಪಷ್ಟವಾಗಿದೆ. ಹಾಗಾಗಿಯೇ ಸೋನಿಯಾ ಆಡಳಿತದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಎನ್‍ಜಿಓಗಳು ಬೀದಿಗೊಂದು ಕೇರಿಗೆರಡು ಎಂಬಂತೆ ಹುಲುಸಾಗಿ ಬೆಳೆದವು. ಆದರೆ ಈಗ, ಭಾರತದಲ್ಲಿ ಬಿಜೆಪಿ (ಮತ್ತು ನರೇಂದ್ರ ಮೋದಿಯ) ಸರಕಾರ ಇರುವಷ್ಟು ಕಾಲ ಈ ಎನ್‍ಜಿಓಗಳಿಗೆ ಸ್ವತಂತ್ರವಾಗಿ ತಮಗಿಷ್ಟಬಂದಂತೆ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಹೆಚ್ಚಿನ ಎನ್‍ಜಿಓಗಳಿಗೆ ಧನಸಹಾಯ ಬರುತ್ತಿರುವುದು ಹೊರದೇಶಗಳ ಕ್ಯಾಥೊಲಿಕ್ ಮೂಲಗಳಿಂದ. ಹೆಚ್ಚಿನ ಎನ್‍ಜಿಓಗಳು ತಮ್ಮ ಕೆಲಸಕಾರ್ಯಗಳಿಗೆ ಸೇವೆ, ಕರುಣೆ, ಪ್ರೀತಿ, ತ್ಯಾಗ ಮುಂತಾದ ಅತ್ಯಂತ ಸುಂದರ ಶಬ್ದಗಳಿಂದ ಅಲಂಕಾರ ಮಾಡುತ್ತವೆ. ಹೆಚ್ಚಿನ ಎನ್‍ಜಿಓಗಳು ಆದಿವಾಸಿಗಳಿರುವಲ್ಲಿ; ಸ್ಲಂಗಳಲ್ಲಿ; ಬಡವರ ಹಾಡಿಗಳಿರುವಲ್ಲಿ; ಬುಡಕಟ್ಟು ಜನರ ವಸತಿ ಇರುವ ಪ್ರದೇಶಗಳಲ್ಲಿ ಮತ್ತು ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಕೆಲಸ ಮಾಡುತ್ತವೆ. ಮತಾಂತರಿಗಳ ಮೊದಲ ಟಾರ್ಗೆಟ್ ಗ್ರೂಪ್‍ಗಳು ಕೂಡ ಈ ಜನರೇ. ಈ ಇಷ್ಟೂ ಸಂಗತಿಗಳನ್ನು ಒಂದಕ್ಕೊಂದು ಜೋಡಿಸುತ್ತಾಹೋದರೆ ಓದುಗರಿಗೆ ಭಾರತದಲ್ಲಿ ನಡೆಯುತ್ತಿರುವ ಎನ್‍ಜಿಓ ಕಾರ್ಯಾಚರಣೆಗಳ ಉದ್ದೇಶ ಸ್ಪಷ್ಟವಾಗುತ್ತದೆ. ಹಾಗೆಯೇ, ಎನ್‍ಜಿಓಗಳು ಬಿಜೆಪಿ ಸರಕಾರದ ವಿರುದ್ಧ ಯಾಕೆ ಇಷ್ಟೊಂದು ಆಕ್ರೋಶಗೊಂಡಿವೆ ಎಂಬುದಕ್ಕೂ ಉತ್ತರ ಸಿಗುತ್ತದೆ.

6 ಟಿಪ್ಪಣಿಗಳು Post a comment
  1. Kiran
    ಆಗಸ್ಟ್ 17 2016

    Narendra Modi jai Ho!

    ಉತ್ತರ
  2. K.Sreepathybhat
    ಆಗಸ್ಟ್ 18 2016

    An eye opening article.

    ಉತ್ತರ
  3. Gururaj kulkarni
    ಆಗಸ್ಟ್ 18 2016

    Vinasha kaale viparita buddi

    ಉತ್ತರ
  4. Hanumantappa
    ಆಗಸ್ಟ್ 27 2016

    When indians realise This real story .that’s my worry

    ಉತ್ತರ
  5. Goutham
    ಆಗಸ್ಟ್ 30 2016

    ಮದರ್ ಥೆರೇಸಾರಂತವರ ಅವಶ್ಯಕತೆ ಭಾರತಕ್ಕೆ ಇದೆ

    ಉತ್ತರ
    • ಕಾಮ್ರೇಡ್ ಕನ್ನಯ್ಯ
      ಆಗಸ್ಟ್ 31 2016

      Why ಇದೆ?

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments