ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
– ತೇಜಸ್ವಿನಿ ಹೆಗಡೆ.
ಅದೊಂದು ಸುವಿಶಾಲ ಮನೆ. ಎಷ್ಟಂಕಣದ್ದು ಎಂದು ಹೇಳಲೂ ಆಗದಷ್ಟು ದೊಡ್ಡ ಮನೆ! ಆ ಮನೆಯೊಳಗೆ ಅಸಂಖ್ಯಾತ ಕೋಣೆಗಳು. ಗಾತ್ರದಲ್ಲಿ, ಆಕಾರಗಳಲ್ಲಿ, ಅಂದ ಚೆಂದಗಳಲ್ಲಿ ವಿವಿಧತೆಯನ್ನು, ವೈವಿಧ್ಯಗಳನ್ನು ಹೊಂದಿದ ಕೋಣೆಗಳು. ಅದೊಂದು ಬಹು ದೊಡ್ಡ ಒಟ್ಟು ಕುಟುಂಬ. ಕೆಲವು ಸದಸ್ಯರಿಗಂತೂ ಕೋಣೆಗಳೇ ಇಲ್ಲ. ಇದಕ್ಕಾಗಿ ಹೋರಾಟ ಮಾಡುತ್ತಿರುತ್ತಾರೆ. ಅವರ ಇದೇ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡು, ಅವರ ನೈಜ ಹೋರಾಟವನ್ನೇ ದಿಕ್ಕೆಡಿಸಿ, ತಮ್ಮ ಕುಟಿಲ ಸ್ವಾರ್ಥಕ್ಕಾಗಿಯೇ ಮನೆಯೊಡೆಯಲು ಕೆಲವೊಂದು ಸದಸ್ಯರು ಸಂಚು ಮಾಡುತ್ತಿರುತ್ತಾರೆ. ಕೆಲವು ನೆರಹೊರೆಯ ಕುಟುಂಬಗಳ ಕುಮ್ಮಕ್ಕೂ ಇದಕ್ಕೆ ಲಭಿಸುತ್ತಿರುತ್ತದೆ. ಹೀಗಾಗಿ ಕಚ್ಚಾಟ, ಜಗಳ, ಹೊಡೆದಾಟ ಪ್ರತಿದಿವಸವೂ ಅಲ್ಲಿ ನಡೆಯುತ್ತಿರುತ್ತದೆ ಮತ್ತು ಅದನ್ನು ಆ ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತ ಯಜಮಾನ ಹಾಗೂ ಇನ್ನಿತರ ಹಿರಿಯ ಸದಸ್ಯರು ಬಗೆಹರಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಕಾಲ ಸರಿದಂತೇ, ಸ್ವಾರ್ಥಿಗಳ ಸತತ ತಲೆತುಂಬುವಿಕೆಯ ಪರಿಣಾಮದಿಂದ ಮನೆಯ ಕೆಲವೊಂದಿಷ್ಟು ಜನಕ್ಕೆ ಆಗಾಗ ಅನ್ನಿಸತೊಡಗುತ್ತದೆ.. ಈ ಮನೆಯೊಳಗೆ ಮಾತ್ರ ಸರಿಯಾದ ವ್ಯವಸ್ಥೆಯಿಲ್ಲ.. ಯಾವುದೂ ಸರಿಯಿಲ್ಲ.. ಭದ್ರತೆಯಿಲ್ಲ.. ಎಂಬಿತ್ಯಾದಿ ಕೊರಗು, ಕೂಗು ಎದ್ದೇಳುತ್ತಿರುತ್ತದೆ. ಮನೆಯನ್ನು ಒಂದಿಷ್ಟು ಪಾಲು ಮಾಡಿ ಹಂಚಿದರೇ ಪರಿಹಾರ ಎಂದು ಹೊರಟವರೂ ಹಲವರಿರುತ್ತಾರೆ. ಆದರೆ ಆ ಮನೆಯ ಹೊರಗೆ ಬಿದ್ದರೆ, ಅದರ ಅಕ್ಕ ಪಕ್ಕದ ಅಷ್ಟೇ ಮನೆಗಳೊಳಗಿನ ಸ್ಥಿತಿ-ಗತಿಯೂ ಬಹುಪಾಲು ಅದೇ ರೀತಿ ಇರುವುದು ಆ ಜನರಿಗೆ ಅರಿವಾಗಿರುವುದೇ ಇಲ್ಲ ಅಥವಾ ಕೆಲವರಿಗೆ ತಿಳಿದಿದ್ದರೂ ತಿಳಿಯದಂತೇ ನಟಿಸುತ್ತಿರುತ್ತಾರೆ. ಕ್ರಮೇಣ ಮನೆಯೊಳಗಿನ ಪ್ರತಿಯೊಂದು ಸಂಭ್ರಮದಲ್ಲೂ ಒಂದಲ್ಲಾ ಒಂದು ಕೊರಗು, ಕೆಡುಕು ತೆಗೆದು ಕಟಕಿಯಾಡುವ, ಮನೆಯನ್ನು, ಮನೆ ಮಂದಿಯನ್ನು ಹಳಿಯುತ್ತಲೇ, ಜರೆಯುತ್ತಲೇ ಸವೆಯುವ ಪ್ರಕ್ರಿಯೆ ಶುರುವಾಗುತ್ತದೆ.
ಈಗ ಈ ಮನೆ ಹಾಗೂ ಮನೆಯೊಳಗಿನವರ ಕಥೆಯನ್ನು ಸಂಪೂರ್ಣ ಹಾಗೇ ಎತ್ತಿಕೊಂಡು ಸದ್ಯದ ನಮ್ಮ ದೇಶದ ಕಥೆ ವ್ಯಥೆಯೊಂದಿಗೆ ಸಮೀಕರಿಸಿ ಬಿಡಿ ಅಷ್ಟೇ! ಸ್ವಾತಂತ್ರ್ಯೋತ್ಸವದಲ್ಲೆ ತುಸು ಹೆಚ್ಚೇ ಉರಿವ ಈ ಸಿನಿಕತೆಯ ಬೆಂಕಿ, ಪ್ರತಿ ಹಬ್ಬಗಳಲ್ಲೂ ಹೊಗೆ ಕಾರುತ್ತಲೇ ಇರುತ್ತದೆ. ಗಣೇಶನ ಹಬ್ಬದಲ್ಲಿ, ಅದೆಲ್ಲಾ ವ್ಯರ್ಥ ಆಚರಣೆ.. ಮೌಢ್ಯ.. ದುಡ್ಡು ದಂಡ.. ಗಣೇಶನ ಕಥೆಯೇ ಸುಳ್ಳು.. ಅಷ್ಟೊಂದು ಸಿಹಿಗಡುಬು ಮಾಡಿ ತಿನ್ನುವ ಬದಲು, ಅದೇ ದುಡ್ಡನ್ನು ಇಲ್ಲದವರಿಗೆ ಕೊಡಬಹುದಲ್ಲವೇ? ಇತ್ಯಾದಿ ವರಾತವಾದರೆ, ದೀಪಾವಳಿಯಲ್ಲೋ ಅದೆಷ್ಟೋ ಕಡೆ ದೀಪವನ್ನೇ ಕಾಣದವರಿದ್ದಾರೆ, ನಾವು ಮಾತ್ರ ಮನೆಯ ಸುತ್ತಲೆಲ್ಲಾ ದೀಪ ಬೆಳಗಿಸಿ ಎಣ್ಣೆ ಹಾಳುಮಾಡುತ್ತೇವೆ.. ದಂಡ.. ಎನ್ನುವರು. ಹೀಗೆ ಕೆ.ಎಸ್.ನ ಅವರ “ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ” ಎಂಬ ಸಾಲು ಇಂಥವರಿಗೆ ಹೇಳಿ ಮಾಡಿಸಿದಂತಿದೆ! ಆದರೆ ಇದು ಪ್ರತಿ ಸಲವೂ ಅತಿರೇಕದ ಪರಮಾವಧಿಯನ್ನು ತಲುಪುವುದು ಸ್ವಾತಂತ್ರ್ಯೋತ್ಸವದಲ್ಲೇ.
ನಾವು ನಮ್ಮ ಜನ್ಮದಿವಸದಂದು ಯಾರಾದರೂ ಸಂಭ್ರಮಿಸಿ ಶುಭ ಕೋರುತ್ತಾ ಅಥವಾ ಬೇರೆಯವರ ಹುಟ್ಟು ಹಬ್ಬಕ್ಕೆ ನಾವೇ ಶುಭಕೋರುವಾಗ “ಅಯ್ಯೋ ಪಾಪ, ನೀನು ಹುಟ್ಟಿದ್ದೇ ವ್ಯರ್ಥ.. ಯಾಕೆ ಹುಟ್ಟಿದೆ? ಏನು ಸಾಧಿಸಿದೆ ಇಷ್ಟು ವರ್ಷ? ಯಾಕಾಗಿ ಈ ಸಂಭ್ರಮ ಬೇಕು? ಇಷ್ಟು ವರ್ಷ ಅಷ್ಟು ಕಷ್ಟ ಅನುಭವಿಸಿದೆ.. ಈಗಲೂ ಅನುಭವಿಸ್ತಾ ಇದ್ದೀಯಾ.. ಇದಕ್ಕೆಲ್ಲಾ ಎಂದು ಮುಕ್ತಿ? ಈ ರೀತಿ ಅನುಭವಿಸುವುದಕ್ಕಿಂತ ನೀನು ಹುಟ್ಟದಿದ್ರೇ ಚೆನ್ನಿತ್ತು ಅಲ್ವಾ? ಆದ್ರೂ ಶುಭಾಶಯ ಕೋರುವೆ..” ಎಂಬಿತ್ಯಾದಿ ಅಸಂಬದ್ಧ ಕೊರಗಿನ ಜೊತೆ ಹಾರೈಸುತ್ತೇವೆಯೇ?! ಎಷ್ಟೇ ನಮಗೆ ಅವರ ಮೇಲೆ ಅಸಮಾಧಾನ ಇದ್ದರೂ, ಅಥವಾ ನಮ್ಮ ಮೇಲೆ ಅವರಿಗಿದ್ದರೂ, ಸಹೃದಯ ಮನಸಿಗರು, ಸ್ನೇಹಜೀವಿಗಳು ಮನದಾಳದಿಂದ ಶುಭ ಹಾರಿಸುತ್ತಾರೆ/ಹಾರೈಸುತ್ತೇವೆ. ಅದೇ ರೀತಿ ಶತಮಾನಗಳ ದಾಸ್ಯದಿಂದ ನಮ್ಮ ದೇಶ ಒಬ್ಬಿಬ್ಬರ ಬಲಿದಾನದಿಂದಲ್ಲ.. ಕೋಟಿ ಸಂಖ್ಯೆಯ ಜನರ ತ್ಯಾಗದಿಂದ ಬಿಡುಗಡೆ ಹೊಂದಿ ಭಾರತವಾಗಿದೆ. ದಾಸ್ಯದ ಅನುಭವ ಇಲ್ಲದವರಿಗೆ ಮಾತ್ರ ಇಂದು ನಮಗೆ ದಯಪಾಲಿಸಿರುವ ಸ್ವಾತಂತ್ರ್ಯದ ಮಹತ್ವ, ಘನತೆ ಅರಿವಾಗದೇನೋ!
ಹೌದು ನಿಜ.. ಇಂದೂ ನಮ್ಮಲ್ಲಿ ಅನೇಕಾನೇಕ ಸಮಸ್ಯೆಗಳಿವೆ, ಕ್ರೌರ್ಯಗಳಿವೆ, ದೌರ್ಜನ್ಯಗಳಿವೆ, ಅಸಂಖ್ಯಾತ ಪಿಡುಗುಗಳಿವೆ. ಖಂಡಿತ ಇಲ್ಲವೆನ್ನುತ್ತಿಲ್ಲ. ಆದರೆ ಅವೆಲ್ಲಾ ಬಹು ಹಿಂದೆಯೂ ಇದ್ದವು ಮಾತ್ರವಲ್ಲ ಜಗತ್ತಿನೆಲ್ಲೆಡೆಯೂ ನಡೆಯುತ್ತಿರುತ್ತವೆ. ದೂರದ ಬೆಟ್ಟ ಸದಾ ನುಣ್ಣಗೆಯೇ. ಇದರರ್ಥ.. ಇವೆಲ್ಲಾ ಮಾಮೂಲಿ, ಸುಮ್ಮನಿದ್ದು ಸಹಿಸಿ ಬಿಡೋಣ ಎಂದು ಸರ್ವಥಾ ಅಲ್ಲ. ಜನರು ಬೆವರು ಹರಿಸಿ ಕಟ್ಟುವ ತೆರಿಗೆಯ ಹಣವನ್ನು ಭ್ರಷ್ಟ ರಾಜಕರಣಿಗಳು ನುಂಗುತ್ತಿರುವುದು… ದುಡ್ಡು, ಅಧಿಕಾರಕ್ಕೆ ಮಾತ್ರ ಎಲ್ಲೆಡೆ ಮನ್ನಣೆ ಸಿಗುತ್ತಿರುವುದು… ಅಸಹಾಯಕರು, ದುರ್ಬಲರ ಮೇಲೆ ಪದೇ ಪದೇ ಪ್ರಹಾರ ಮಾಡುತ್ತಿರುವುದು.. ಪ್ರತಿಯೊಂದು ಕ್ಷೇತ್ರದಲ್ಲೂ ಹಾಸುಹೊಕ್ಕಾಗಿರುವ ಭ್ರಷ್ಟತೆ, ಅವ್ಯವಸ್ಥೆ.. ಇವೆಲ್ಲಾ ಈಗಲೂ ನಮ್ಮನ್ನು ಕಾಡುತ್ತಲಿವೆ. ಆದರೆ ಕಾಲ ಕಾಲಕ್ಕೆ ಅದೆಷ್ಟೋ ಕೆಟ್ಟ ಪದ್ಧತಿಗಳು ನಿರ್ಮೂಲನಗೊಳ್ಳುತ್ತ ಬಂದಿವೆ.. ಸಮಾಜವೂ ಕೂಡ ಈ ಹಿಂದೆ ಚಿಂತಿಸಲೂ ಹೋಗದಿದ್ದ ಮೌಡ್ಯಗಳಿಗೆ ಕಣ್ತೆರೆದು ಪ್ರತಿಕ್ರಿಯಿಸತೊಡಗಿದೆ. ಹೀಗಿರುವಾಗ ನಾವು ದೇಶದೊಳಗಿನ ಪ್ರತಿಯೊಂದು ಸಮಸ್ಯೆಗೂ ಕನಿಷ್ಟ ಸ್ಪಂದಿಸಲು, ನಿವಾರಿಸಲು ಪ್ರತಿಯೊಬ್ಬರೂ ಸಂಕಲ್ಪಿಸೋಣ. ಅದು ಬಿಟ್ಟು ಪ್ರತಿ ಸಲವೂ ಸ್ವಾತಂತ್ರ್ಯದ ದಿವಸ ಮಾತ್ರ ವಿಶೇಷವಾಗಿ ನಮ್ಮ ಕಣ್ಣಿಗೆ ಕಾಣುವ ಕೆಲವು ಹುಳುಕುಗಳನ್ನಷ್ಟೇ ಕೇವಲ ಎತ್ತಿ ಹಿಡಿದು `ಎಲ್ಲಿದೆ ಸ್ವಾತಂತ್ರ್ಯ? ಭಾರತವೆಂದರೆ ಅಭದ್ರತೆಯ ನೆಲೆ.. ನಾವಿನ್ನೂ ದಾಸ್ಯದಲ್ಲೇ ಇದ್ದೇವೆ’ ಎಂಬಿತ್ಯಾದಿ ಸಿನಿಕತನದ ಮಾತುಗಳಿಂದ ಸಹಜೀವಿಗಳ ಮನಸ್ಸನ್ನು ಘಾಸಿಗೊಳಿಸುವುದಲ್ಲದೇ ಹುತಾತ್ಮರ ಮನೆಯವರಿಗೆ, ಅವರ ಆತ್ಮಕ್ಕೂ ಘಾಸಿಯನ್ನುಂಟುಮಾಡುವುದು ಏತಕ್ಕೆ?! ವಿಶಿಷ್ಟವಾಗಿ, ವಿಭಿನ್ನವಾಗಿ ಚಿಂತಿಸುವುದೆಂದರೆ ವಿಕೃತಿಯನ್ನು ಮೆರೆಯುವುದಲ್ಲ. ವೈಫಲ್ಯಗಳ ಜೊತೆಗೇ ಸಾಧನೆಗಳ ಪಟ್ಟಿಯನ್ನೂ ಇಟ್ಟುಕೊಂಡರೆ ಉತ್ಸಾಹ, ಸ್ಫೂರ್ತಿ ನೂರ್ಮಡಿಸುತ್ತದೆ.
ಸರ್ವರಿಗೂ ಸಮಬಾಳು, ಸಮಪಾಲು, ಮಹಿಳೆಯರಿಗೆಲ್ಲರಿಗೂ ಸಮಾನ ಹಕ್ಕು, ಗೌರವ, ಎಲ್ಲೆಲ್ಲೂ ಸುಭಿಕ್ಷತೆ, ಸುಶಿಕ್ಷಣ ಇತ್ಯಾದಿ ಪರಿಕಲ್ಪನೆಗಳು ಬಲು ಚೆನ್ನ.. ಇರಬೇಕಾದ್ದೇ. ಆದರೆ ಜಗತ್ತಿನ ಯಾವ ದೇಶದಲ್ಲೂ ಇವೆಲ್ಲಾ ಈವರೆಗೂ ಸಂಪೂರ್ಣ ಸಾಫಲ್ಯಗೊಂಡೇ ಇಲ್ಲ. ಮನುಷ್ಯನ ಮನಸಿನೊಳಗೆ ಮಾತ್ರ ಈ ಸುಂದರ ಕಲ್ಪನೆಗಳು ಸಾಕಾರಗೊಳ್ಳುವಂಥವು. ಇದು ಕಟು ವಾಸ್ತವ! ಕೆಡುಕು-ಒಳಿತುಗಳು ಒಂದೇ ನಾಣ್ಯದ ಎರಡು ಮುಖ. ಯಾವ ದೇಶವೂ ಎಲ್ಲಾ ಸಮಸ್ಯೆಗಳಿಂದ (ನಮ್ಮಲ್ಲಿರುವಂಥ) ಮುಕ್ತವಾಗಿಲ್ಲ.. ಬಿಡುಗಡೆ ಸಿಕ್ಕಿಲ್ಲ. ಇದಕ್ಕೆ ಕಾರಣ (ಅ)ವ್ಯವಸ್ಥೆಯೊಂದೇ ಮಾತ್ರವಲ್ಲ, ಮನುಷ್ಯನ ಹುಟ್ಟಿನಿಂದಲೇ ಜೊತೆಯಾಗಿರುವ ಅವನೊಳಗಿನ ಕೊಳಕು, ದುಷ್ಟತನ, ಕ್ರೌರ್ಯವೂ ಹೌದು. ಹೀಗಿರುವಾಗ ನಮ್ಮಲ್ಲಿ ಮಾತ್ರ ಎಲ್ಲವನ್ನೂ ವಿಜೃಂಭಿಸುವ, ಅದರಲ್ಲೂ ವಿಶೇಷವಾಗಿ ಸ್ವಾತಂತ್ರ್ಯೋತ್ಸವದ ದಿನದಂದೇ ಕಾಪಿಟ್ಟುಕೊಂಡು ಸಣ್ಣ, ದೊಡ್ಡ ಕೊಳೆಗಳನ್ನು ಸಮಸ್ಯೆಗಳನ್ನು ಎತ್ತೆತ್ತಿ ತೋರಿ, `ಇದು ಇಲ್ಲಿ ಮಾತ್ರ ಸಿಗುವುದಂಥದ್ದು ನೋಡಿ’ ಎಂಬಂಥ ಅತಿರೇಕ ಯಾಕೆ? ಯಾವ ದೇಶದಲ್ಲೂ ಅದರ ಅಸ್ತಿತ್ವದ ಸಂಭ್ರಮದಂದು ಈ ಪರಿಯ ಗೋಳಾಟ ಕಂಡಿಲ್ಲವೇನೋ! (ಇದ್ದರೆ ತಿಳಿಸಿ ತುಸು ಸಮಾಧಾನ ಹೊಂದುವೆ.. ನಮ್ಮಲ್ಲಿ ಮಾತ್ರ ಹೀಗಿಲ್ಲ ಎಂದು). ಪ್ರತಿ ವರುಷವೂ ಇದೇ ದೊಂಬರಾಟ ನೋಡಿ ಮನಸು ರೋಸಿಹೋಗಿದೆ. `ಈ ದೇಶ ಗಬ್ಬೆದ್ದು ಹೋಗಿದೆ.. ಯಾರಿಗೆ ಬಂತು ಈ ಭಾಗ್ಯ?’ ಎಂದೆಲ್ಲಾ ಗೋಳಾಡುವವರೊಮ್ಮೆ ಇದೇ ದೇಶದ ವಿಮುಕ್ತಿಗಾಗಿ ಹೋರಾಡಿದ ಎಲೆಮರೆಯ ಕಾಯಂತಾಗಿ ಕಳೆದು ಹೋದ ಅನೇಕಾನೇಕ ಹೋರಾಟಗರ ಕಥೆ-ವ್ಯಥೆ, ಆಗಿನ ಕಾಲದ ಸಾಮಾಜಿಕ ದುಃಸ್ಥಿತಿಗಳನ್ನೊಮ್ಮೆ (ಬ್ರಿಟೀಷರ ಕಪಿ ಮುಷ್ಟಿಯೊಳಗೆ ಸಿಲುಕಿ, ನಲುಗಿ) ಓದಲಿ! ಮಿತ್ರ ರಾಮಚಂದ್ರ ಹೆಗಡೆಯವರು ಅಂತಹ ಎಲೆಮರೆಯ ಕಾಯಂಥ ದೇಶಪ್ರೇಮಿಗಳ ಬಲಿದಾನದ ಕಥೆಗಳನ್ನು ಬರೆದು ಬ್ಲಾಗಿನಲ್ಲಿ ಹಂಚುತ್ತಿದ್ದಾರೆ. ಕನಿಷ್ಟ ಉಪ್ಪಿಗೂ ಕರ ಕೊಡಬೇಕಾದಂಥ ಅಂದಿನ ಆ ಕಡು ಕೆಟ್ಟ ಪರಿಸ್ಥಿತಿಯಿಂದ ಪಾರಾಗಿದ್ದಕ್ಕಾದರೂ ಸಂತಸಪಡಬೇಕಲ್ಲವೇ? ಇತ್ತೀಚಿಗೆ ಓದಿದ ಕೆ.ಸತ್ಯನಾರಾಯಣ ಅವರ `ಸನ್ನಿಧಾನ’ ಕಾದಂಬರಿಯಲ್ಲಿ ಬರುವ ಈ ಸಾಲುಗಳು ನನ್ನ ಬಹುವಾಗಿ ಕಾಡಿದವು. “ನಾವೇ ಕೊಳೆತಾಗಲೂ ಕೂಡ ಸುತ್ತಮುತ್ತಲ ಈ ಜಗತ್ತಿನಲ್ಲಿ ಏನಾದರೂ ಒಂದು ಆದರ್ಶ ಇರಬೇಕಲ್ಲವೆ. ಈಗಿನ ವಿದ್ಯಮಾನಕ್ಕೆ ನಾವು ದುಃಖಪಡೋಣ. ಬೇಸರಿಸಿಕೊಳ್ಳೋಣ. ಆದರೆ ಆಸೆ ಕಳೆದುಕೊಳ್ಳುವುದು ಬೇಡ”. ಎಷ್ಟು ನಿಜವಲ್ಲವೇ? ಮನುಷ್ಯ ಭವಿಷ್ಯತ್ತಿನ ಸಾಧ್ಯತೆಗಳ ಕುರಿತು ಭರವಸೆ ಕಳೆದುಕೊಳ್ಳುವುದೇ, ಇಂದಿನ ಹಲವರ ಈ ಸಿನಿಕತನಕ್ಕೆ, ಕೊರಗುವಿಕೆಗೆ ಕಾರಣ ಎಂದೆನಿಸುತ್ತಿದೆ. ಭರವಸೆಯೇ ಇಲ್ಲದೆ, ಸಹಜೀವಿಯ ಭಾವನೆಗಳ ಕುರಿತು ಕಿಂಚಿತ್ತೂ ಗೌರವವಿಲ್ಲದೆ, ತಮ್ಮ ತಮ್ಮ ಮೂಗಿನ ನೇರಕ್ಕೆ ಆಲೋಚಿಸುತ್ತಾ, ಬೆಳಗಾಗುವುದರೊಳಗೆ ಒಟ್ಟಿನಲ್ಲಿ ತಾವು ಬಯಸಿದ ಬದಲಾವಣೆ ಇಲ್ಲಿ ಆಗಿರಬೇಕು ಮತ್ತು ಆ ಕ್ರಾಂತಿಗೆ ಎಂಥಹ ದೊಡ್ಡ ಬೆಲೆಯನ್ನಾದರೂ ಸರಿಯೇ ಈ ದೇಶ ತೆರಬೇಕೆಂದು ಬಯಸುವ ಸ್ವಾರ್ಥ ಈ ಸಿನಿಕತೆಗೆ ಕಾರಣವೇನೊ! ಇದರಿಂದಾಗಿಯೇ ಇಂದು ಕೆಲವರು ಬೊಬ್ಬಿರಿಯುತ್ತಿರುತ್ತಾರೆ (ನಮ್ಮ ಪೂರ್ವಜರ ನೆತ್ತರು ಹರಿಸಿ ನಮಗಿತ್ತ ಈ ಸ್ವಾತಂತ್ರ್ಯದ ಇನಿತೂ ಅರಿವಿಲ್ಲದೇ..) `ಬ್ರಿಟೀಷರ ಕಾಲದಲ್ಲೇ ಇಂದಿಗಿಂತ ಎಷ್ಟೋ ಚೆನ್ನಗಿತ್ತೇನೊ’ ಎಂದು.
ನಾವು ನಮ್ಮ ಸ್ವಂತ ಮನೆಯ ಭದ್ರೆತೆಗೆ ಏನೇನೆಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತೇವೆ! ಕಾರಣ ಕಳ್ಳರು, ದುಷ್ಟರು, ವಿಷ ಜಂತುಗಳು, ಅಗಂತುಕರು ಬರಬಾರದೆಂದು. ಹಾಗಿದ್ದರೂ ಖದೀಮರು ಎಂತೆಂತಾ ಅದ್ಭುತ ಲಾಕ್‍ಗಳನ್ನೂ ಮುರಿದು ಒಳ ನುಗ್ಗಿ ದೋಚುತ್ತಾರೆ, ಕತ್ತು ಕೊಯ್ಯುತ್ತಾರೆ. ಹೀಗಿರುವಾಗ ದೇಶದ ಗಡಿಯನ್ನು ಸದಾ ಕಾಲ ಕಾಯುವ, ನಮ್ಮ ಭದ್ರತೆಗಾಗಿ ತನ್ನ ಭದ್ರತೆಯನ್ನು ಪಣಕ್ಕಿಡುವ ಯೋಧನ ಕುರಿತೂ ಅನೇಕಾನೇಕ ಟೀಕೆ ಟಿಪ್ಪಣಿಗಳು! ಕೆಲವರಂತೂ ದೇಶಕ್ಕೆ ಗಡಿ ಅನ್ನೋದೇ ಇರಬಾರದು ಅದೇ ಸಮಸ್ಯೆಗೆ ಮೂಲ ಎಂದು ಬೀಗ ಜಡಿದುಕೊಂಡು ಭದ್ರವಾಗಿರುವ ತಮ್ಮ ಕೋಣೆಯೊಳಗಿಂದ ಬರೆಯುತ್ತಾರೆ! ನಿಜ.. ಎಲ್ಲರೂ ಒಂದೇ ರೀತಿ ಇರುವುದೇ ಇಲ್ಲ.. ಯೋಧರೂ ಮನುಷ್ಯರೇ. ನಮ್ಮ ನಿಮ್ಮಂತೇ ಅವರಲ್ಲೂ ಹಲವರಲ್ಲಿ ರಾಗ, ದ್ವೇಷ, ಕ್ರೌರ್ಯಗಳಿರುತ್ತವೆ ಮತ್ತು ಅವು ಸಮರ್ಥನೀಯವೂ ಅಲ್ಲ. ಅಂತಹ ವ್ಯಕ್ತಿಗಳನ್ನು ಹುಡುಕಿ, ತೆಗೆದು ಹಾಕಿ ವ್ಯವಸ್ಥೆಕಾಪಾಡಿಕೊಳ್ಳಬೇಕು ಮತ್ತು ಈ ಪ್ರಕ್ರಿಯೆ ನಾವು ಕೆಟ್ಟು ಕೆರ ಹಿಡಿದ ನಮ್ಮ ಮನೆಯ ಬೀಗ ಬದಲಿಸಿದಷ್ಟು ಸುಲಭವೂ ಅಲ್ಲ.
ನಮ್ಮ ದೇಶ ದಾಸ್ಯಕ್ಕೊಳಗಾಗಿ ಇನ್ನಿಲ್ಲದ ಸಾವು ನೋವು ಕಂಡಿದ್ದು ಬ್ರಿಟೀಷರಿಂದ ಎನ್ನುತ್ತೇವೆ. ಇದು ಅರ್ಧ ಸತ್ಯವೂ ಅಲ್ಲ ಎಂದೆನಿಸುತ್ತದೆ ನನಗೆ. ನಾವು ದಾಸ್ಯಕ್ಕೊಳಗಾಗಿದ್ದು ನಮ್ಮ ನಮ್ಮೊಳಗೇ ಇದ್ದ ದುರಾಸೆ, ವಂಚನೆ, ವಿದ್ರೋಹ, ಪರಮ ಸ್ವಾರ್ಥ ಗುಣಗಳಿಂದ. ಏಕತೆ, ಸಮಾನತೆ, ಸೌಹಾರ್ದತೆ, ನಿಃಸ್ವಾರ್ಥತೆ ಎಲ್ಲವು ಕೇಳಲು ಚೆಂದದ ಪದಗಳೇ. ಆದರೆ ಅನಾದಿ ಕಾಲದಿಂದಲೂ ಜಗತ್ತಿನೆಲ್ಲೆಡೆಯಿಂದ ಮತ್ತೆ ಮತ್ತೆ ದಮನಕ್ಕೊಳಗಾಗುತ್ತಲೇ ಬಂದ ಪದಗಳಿವು. ಅಂದಿನ ನಮ್ಮವರ ಅವಿವೇಕದ ನಿರ್ಣಯಗಳಿಂದ, ಕುಟಲತೆಯಿಂದ ಬ್ರಿಟೀಶರು ಸರಾಗವಾಗಿ ಬಂದು ಇಂಚಿಂಚಾಗಿ ಕಬಳಿಸಿಕೊಂಡರು. ಹೋಗುವಾಗಲೂ ದೇಶದ ಜೊತೆಗೆ ಮನಸುಗಳನ್ನು ಇಬ್ಭಾಗಿಸಿ ಹೋಡರು. ಇಂದೂ ನಮ್ಮೊಳಗೇ ನಮ್ಮನ್ನು ಕೊರೆವ ಗೆದ್ದಲುಗಳು ಹಲವಿವೆ ಮತ್ತು `ನಮಗಿರುವ ತಾಳ್ಮೆ ಈ ಗೆದ್ದಲುಗಳಿಗೆ ಇಲ್ಲ!’. ಆದಷ್ಟು ದೇಶದ ಉಳಿವಿಗೆ, ಏಕತೆಗೆ ಧಕ್ಕೆ ಬರದಂತೆ ನೋಡಲು ಮತ್ತೆ ಭಾರತ ಒಳಗಿನ ಗೆದ್ದಲುಗಳ ಜೊತೆ ಸೇರಿ ವಿದೇಶಿಯರ ಸಂಚಿಗೆ ಬಲಿಯಾಗದಂತೇ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಅದೃಷ್ಟವಶಾತ್ ಈ ರೀತಿ ಕೊರೆದು ಒಳಗಿಂದ ಟೊಳ್ಳಾಗಿಸುವವರಿಗಿಂತ ಕಾಪಿಡುವವರ ಸಂಖ್ಯೆ ಹೆಚ್ಚಾಗಿದೆ. ನಾನಂತೂ ಹೀಗೇ ನಂಬುತ್ತಿದ್ದೇನೆ. ಕಾರಣ ನಂಬಿದರೆ ಭಯವಿಲ್ಲ.. ನಂಬದಿರೆ ಬಾಳಿಲ್ಲ.. ಈ ನಂಬಿಕೆಯನ್ನು ನನ್ನ ಅಂಬಿಗ ಧಕ್ಕೆಗೆ ಧಕ್ಕೆಯಾಗದಂತಿಡಲಿ ಎಂದೇ ಸದಾ ಪ್ರಾರ್ಥಿಸುತ್ತಿರುತ್ತೇನೆ.
ನಿಜ ಮೇಡಂ. ಎಲೆ ಮರೆಯ ಕಾಯಂತೆ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿಗಳ ಚಿತ್ರಣ ಶ್ರೀ ರಾಮಚಂದ್ರ ಹೆಗಡೆಯವರಿಂದ ನಿಲುಮೆಯಲ್ಲಿ ಪ್ರಕಟವಾಗುತ್ತಿರುವುದು.ಹೆಮ್ಮೆಯ ವಿಷಯ. ನಿಲುಮೆಗೂ ಹಾಗೂ ಲೇಖಕರಿಗೂ ಧನ್ಯವಾದಗಳು.
ಹಾಗೆ ನಿಮ್ಮ ಅತ್ಯುತ್ತಮವಾದ ಬರಹ ಓದಿ ಮನಸ್ಸು ಚಿಂತನೆಗೆ ಒಳಪಟ್ಟಿತು. ಧನ್ಯವಾದಗಳು.
ಧನ್ಯವಾದಗಳು ಮೇಡಮ್…
ಆ ಮನೆಯೊಳಗೆ ಅಸಂಖ್ಯಾತ ಕೋಣೆಗಳು. ಗಾತ್ರದಲ್ಲಿ, ಆಕಾರಗಳಲ್ಲಿ, ಅಂದ ಚೆಂದಗಳಲ್ಲಿ ವಿವಿಧತೆಯನ್ನು, ವೈವಿಧ್ಯಗಳನ್ನು ಹೊಂದಿದ ಕೋಣೆಗಳು. ಅದೊಂದು ಬಹು ದೊಡ್ಡ ಒಟ್ಟು ಕುಟುಂಬ. …….ಕೆಲವು ಸದಸ್ಯರಿಗಂತೂ ಕೋಣೆಗಳೇ ಇಲ್ಲ……..
ಕೋಣೆಗಳಲ್ಲಿ…ಬೆಚ್ಚಗೆ ಕುಳಿತಿರುವವರು…ಕೋಣೆಗಳಿಲ್ಲದಿರುವವರನ್ನು ಒಳಗೆ ಕರೆದು ಇದ್ದುದರಲ್ಲಯೇ ಹಂಚಿಕೊಂಡರೆ ಹೋರಾಟವೇ ಇಲ್ಲ ಅಲ್ಲವೇ? ??
laxmikanth ಅವರೆ ನಿಜ.. ನಾವು ನಮ್ಮ ಗಳಿಕೆಯಲ್ಲಿ ಸ್ವಲ್ಪವನ್ನೇ ಆದರೂ ಸಮಾಜದ ಜೊತೆ ಹಂಚಿಕೊಳ್ಳುತ್ತಾ ಹೋದರೆ.. ಹೀಗೆ ಎಲ್ಲರೂ ಮಾಡುತ್ತಾ ಬಂದರೆ ಎಲ್ಲಾ ಸಹಕಾರಕ್ಕೂ ಸರಕಾರವನ್ನೇ ಕೇಳುವ ಪರಿಸ್ಥಿತಿಯೂ ಬರುವುದಿಲ್ಲ!