ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 14:
ಸಂಗೊಳ್ಳಿ ರಾಯಣ್ಣ
– ರಾಮಚಂದ್ರ ಹೆಗಡೆ
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷ್ ಸಾಮ್ರಾಜ್ಯದ ಎದೆ ನಡುಗಿಸಿದ, ತನ್ನ ಅಪಾರ ಶೌರ್ಯ ಪರಾಕ್ರಮಗಳಿಂದ ಬ್ರಿಟಿಷರಿಗೆ ಸವಾಲಾಗಿ ನಿಂತು ಕ್ರಾಂತಿಯ ರಣಕಹಳೆ ಮೊಳಗಿಸಿದ ಕನ್ನಡ ನಾಡಿನ ಗಂಡುಗಲಿ, ನಮ್ಮೆಲ್ಲರ ಹೆಮ್ಮೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಬಹುತೇಕರಿಗೆ ತಿಳಿಯದ ಅಚ್ಚರಿಯೆಂದರೆ, ನಮ್ಮ ರಾಯಣ್ಣ ಹುಟ್ಟಿದ್ದು ಆಗಸ್ಟ್ 15 ರಂದು ಮತ್ತು ದೇಶಕ್ಕಾಗಿ ಬಲಿದಾನಗೈದದ್ದು ಜನವರಿ 26 (15 ಆಗಸ್ಟ್ 1798 – 26 ಜನವರಿ 1831). ಒಂದು ಸ್ವಾತಂತ್ರ್ಯ ದಿನ, ಮತ್ತೊಂದು ಗಣರಾಜ್ಯ ದಿನ, ಎರಡೂ ದಿನಗಳೂ ಭಾರತೀಯರ ಪಾಲಿಗೆ ಅವಿಸ್ಮರಣೀಯ ದಿನಗಳು. ಬ್ರಿಟಿಷರ ದಬ್ಬಾಳಿಕೆಯನ್ನು ಮೆಟ್ಟಿ ನಿಂತು ಕೆಚ್ಚೆದೆಯಿಂದ ಅವರ ವಿರುದ್ಧ ಸಮರ ಸಾರಿದ ಕನ್ನಡದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮಳ ಬಲಗೈ ಬಂಟ ರಾಯಣ್ಣ. ತನ್ನವರದೇ ಮೋಸಕ್ಕೆ ಒಳಗಾಗಿ ಚೆನ್ನಮ್ಮ ಬ್ರಿಟಿಷರ ಸೆರೆಗೆ ಸಿಕ್ಕಾಗ ಕಿತ್ತೂರಿನ ಪರವಾಗಿ ಕ್ರಾಂತಿ ಕಹಳೆ ಮೊಳಗಿಸಿದ ಗಂಡುಗಲಿ.
ಕಿತ್ತೂರು ಚೆನ್ನಮ್ಮನ ಸೇನೆಯ ಅಧಿಪತಿಯಾಗಿದ್ದ ರಾಯಣ್ಣ ಒಂದು ದೊಡ್ಡ ದೇಶಭಕ್ತರ ಪಡೆಯನ್ನೇ ಕಟ್ಟಿದ್ದ. ರಾಯಣ್ಣ ಕರೆದರೆ ಆ ವೀರರ ದಂಡು ಸಮರಕ್ಕೆ ಸಿದ್ಧವಾಗಿ ನಿಲ್ಲುತ್ತಿತ್ತು. ಕೇವಲ 32 ವರ್ಷಗಳ ಕಾಲ ಬದುಕಿದ ಈ ಕೆಚ್ಚೆದೆಯ ವೀರನ ಕಥೆ ಎಂಥವರಿಗೂ ಪ್ರೇರಣಾದಾಯಕ. ಗೆರಿಲ್ಲಾ ಯುದ್ಧ ಪ್ರವೀಣನಾಗಿದ್ದ ರಾಯಣ್ಣ ಚೆನ್ನಮ್ಮನ ಸೈನ್ಯ ಮೊದಲ ಬಾರಿ ಬ್ರಿಟಿಷರ ಸೈನ್ಯವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಚೆನ್ನಮ್ಮ ಸೆರೆಯಾದ ನಂತರ ಬ್ರಿಟಿಷರ ದೌರ್ಜನ್ಯ ಮಿತಿಮೀರಿತ್ತು. ಬಡಬಗ್ಗರ ಜಮೀನನ್ನು ಬಲವಂತವಾಗಿ ಕಿತ್ತುಕೊಳ್ಳುವುದು ಇಲ್ಲವೇ ವಿಪರೀತ ತೆರಿಗೆ ಹಾಕಿ ಅವರನ್ನು ಹಿಂಸಿಸುವುದು ಇದೇ ಬ್ರಿಟಿಷರ ಕಾರ್ಯನೀತಿಯಾಗಿತ್ತು. ಬಡಬಗ್ಗರ ಜಮೀನನ್ನು ಕಿತ್ತುಕೊಳ್ಳುತ್ತಿದ್ದ ಬ್ರಿಟಿಷರ ವಿರುದ್ಧ ರಾಯಣ್ಣ ಸಿಡಿದೆದ್ದ, ಈ ದಬ್ಬಾಳಿಕೆಯನ್ನು ವಿರೋಧಿಸುವ ದೇಶಭಕ್ತರ ಪಡೆ ಕಟ್ಟಿದ, ಬ್ರಿಟಿಷರ ಜತೆ ಕೈ ಜೋಡಿಸಿದ್ದ ಭೂಮಾಲೀಕರ ವಿರುದ್ಧ ರಾಯಣ್ಣನ ಸೇನೆ ತಿರುಗಿಬಿತ್ತು. ತನ್ನ ಗೆರಿಲ್ಲಾ ಮಾದರಿಯ ಹೋರಾಟದ ಮೂಲಕ ಬ್ರಿಟಿಷರ ಹಾಗೂ ಭೂಮಾಲೀಕರ ಹಣ, ಆಸ್ತಿಗಳನ್ನು ವಶಪಡಿಸಿಕೊಂಡು ಬಡವರಿಗೆ ಹಂಚತೊಡಗಿದ. ಅವನನ್ನು ಸದೆಬಡಿಯಲು ಬಂದ ಬ್ರಿಟಿಷ್ ಸೈನ್ಯವನ್ನು ತನ್ನ ಗೆರಿಲ್ಲಾ ಯುದ್ಧದ ಮೂಲಕ ಪರಾಕ್ರಮದ ಮೂಲಕ ಮಣ್ಣುಮುಕ್ಕಿಸಿದ. ಬ್ರಿಟಿಷರ ಕೈಯಿಂದ ಹಲವು ಊರುಗಳನ್ನು ಮುಕ್ತಗೊಳಿಸಿ ಬಡಜನರ ಪಾಲಿನ ಕಣ್ಮರೆಯಾದ. ಕೊನೆಗೆ ರಾಯಣ್ಣನನ್ನು ಯುದ್ಧದಲ್ಲಿ ಸೋಲಿಸಲಾಗದ ಬ್ರಿಟಿಷರು ಮೋಸದ ಬಲೆ ಹೆಣೆದರು. ವಂಚಕರು ನಮ್ಮೊಳಗೇ ಇದ್ದರಲ್ಲಾ, ರಾಯಣ್ಣನ ಮಾವನೇ ಹಣದ ಆಸೆಗೆ ಬ್ರಿಟಿಷರು ತೋರಿದ ಆಮಿಷಕ್ಕೆ ಮರುಳಾಗಿ ಮಾಡಿದ ಮೋಸದಿಂದ ಅಪ್ರತಿಮ ಸೇನಾನಿ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ಕೈಸೆರೆಯಾಗಬೇಕಾಯಿತು.
ಕೊನೆಗೆ 1831ರ ಜನವರಿ 26 ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಬ್ರಿಟಿಷರು ರಾಯಣ್ಣನನ್ನು ಗಲ್ಲಿಗೇರಿಸಿದರು. ಗಲ್ಲಿಗೇರಿಸುವ ಮುನ್ನ ಬ್ರಿಟಿಷ್ ಅಧಿಕಾರಿಗಳು ನಿನ್ನ ಕಡೆಯ ಆಸೆ ಏನೆಂದು ಕೇಳಿದಾಗ “ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು, ಬ್ರಿಟೀಷರನ್ನು ಹೊಡೆದೋಡಿಸಲು ಮನೆಗೊಬ್ಬ ರಾಯಣ್ಣ ಹುಟ್ಟಲಿ” ಎಂದು ಸಿಂಹದಂತೆ ಘರ್ಜಿಸಿದ್ದ ರಾಯಣ್ಣ. ಭಾರತದ, ಕನ್ನಡನಾಡಿನ ಇತಿಹಾಸದಲ್ಲಿ ರಾಯಣ್ಣನ ಹೋರಾಟ ಅಜರಾಮರ. ಜನಪದರ ಹಾಡುಗಳ ಮೂಲಕ ರಾಯಣ್ಣ ಇಂದೂ ಅವಿಸ್ಮರಣೀಯವಾಗಿದ್ದಾನೆ. ರಾಯಣ್ಣನ ಮರಣಾನಂತರ ಅವನ ಬಂಟ ಕತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಅವನ ಸಮಾಧಿಯ ಮೇಲೆ ಆಲದ ಮರವೊಂದನ್ನು ನೆಟ್ಟ. ಅಂದು ನೆಟ್ಟ ಆಲದ ಮರ ಬೃಹದಾಕಾರವಾಗಿ ಬೆಳೆದು ಇಂದು ಪವಿತ್ರ ಸ್ಥಳವಾಗಿದೆ. ಇಂದಿಗೂ ಸಾವಿರಾರು ಜನರು ಅಲ್ಲಿಗೆ ತೆರಳಿ ಆ ಮರವನ್ನು ಪೂಜಿಸಿ ರಾಯಣ್ಣನಿಗೆ ಗೌರವ ನೀಡುತ್ತಿದ್ದಾರೆ. ‘ಮಗ ಇದ್ದರ ಇರಬೇಕಾ ಎಂಥಾವ, ನಮ್ಮ ಸಂಗೊಳ್ಳಿ ರಾಯಣ್ಣನಂಥಾವ’ ಎಂಬ ರಾಯಣ್ಣನ ಹಿರಿಮೆ ಸಾರುವ ಲಾವಣಿಗಳು ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿದೆ.
ನಮ್ಮ ರಾಯಣ್ಣ ನಮ್ಮ ಹೆಮ್ಮೆ