‘ಗಾಂಧಿಬಜಾರ್’ನಲ್ಲಿ ನೆನಪುಗಳ ಸೋನೆ ಮಳೆ!
– ತುರುವೇಕೆರೆ ಪ್ರಸಾದ್
ಬೆಂಗಳೂರಿನ ಗಾಂಧಿಬಜಾರ್‍ನ ಮಧುರ ನೆನಪುಗಳನ್ನು ಯಾವತ್ತಿಗೂ ಮರೆಯಲಾಗುವುದಿಲ್ಲ. ಗಾಂಧಿಬಜಾರ್‍ನ ಬ್ಯೂಗಲ್ ರಾಕ್, ವಿದ್ಯಾರ್ಥಿ ಭವನ್ ಮಸಾಲೆ ದೋಸೆ, ಚುರ್ಮುರಿ, ಸುಬ್ಬಮ್ಮಜ್ಜಿ ಹಪ್ಪಳದ ಅಂಗಡಿ, ಪ್ರಜಾಮತ ಕಛೇರಿ ಇವೆಲ್ಲಾ ಗಾಂಧಿಬಜಾರ್ ಎಂದೊಡನೆ ದುತ್ತನೆ ಕಣ್ಮುಂದೆ ಬಂದು ನಿಲ್ಲುತ್ತವೆ. ಗಾಂಧಿಬಜಾರ್ ಇಡೀ ಬೆಂಗಳೂರಿಗೇ ಒಂದು ಘನತೆವೆತ್ತ ಶಾಂತಿಕುಟೀರ ಎಂಬಂತಂಹ ಭಾವನೆ ಮೂಡಿಸುವ ಅನುಭವಗಳು ಗಾಂಧಿಬಜಾರ್‍ನ ರಸ್ತೆಗಳಲ್ಲಿ ಸುತ್ತಾಡಿದಾಗ ನನಗಾಗಿದೆ. ಸೋನೆ ಮಳೆ ಬಂದು ನಿಂತ ಒಂದು ಮುಸ್ಸಂಜೆಯಲ್ಲಿ ಇಕ್ಕೆಲೆಗಳ ಹಸಿರು ಮರಗಳ ನಡುವೆ ಪ್ರಶಾಂತವಾಗಿ ನಡೆಯುತ್ತಾ ಗಾಂಧಿಬಜಾರ್‍ನ ಹೂವಿನಂಗಡಿಗಳ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ಅನಿರ್ವಚನೀಯ ಅನುಭವ. ಬಹುಶಃ ನನಗೆ ನೆನೆಪಿರುವ ಹಾಗೆ ಮೆಜೆಸ್ಟಿಕ್‍ನಿಂದ ಆ ಕಾಲದ ಮೊದಲ ಡಬ್ಬಲ್ ಡೆಕ್ಕರ್ ಬಸ್ ಓಡಾಟ ಆರಂಭಿಸಿದ್ದೇ ಗಾಂಧಿಬಜಾರ್‍ಗೆ! ಆಹ್ಲಾದಕರ ವಾತಾವರಣ ಬೆಂಗಳೂರಿನ ಕೆಲವೇ ಬಡಾವಣೆಗಳಿಗಿರುವ ಸೌಭಾಗ್ಯ.ಅವುಗಳಲ್ಲಿ ಗಾಂಧಿಬಜಾರ್‍ಗೆ ಅಗ್ರಸ್ಥಾನ ಎಂದರೆ ತಪ್ಪಿಲ್ಲ, ಇಲ್ಲೇ ಪೂರ್ವ ಆಂಜನೇಯ ದೇವಸ್ಥಾನದ ರಸ್ತೆಯಲ್ಲಿದ್ದ ಅಜ್ಜನ ಮನೆಗೆ ವರ್ಷಕ್ಕೊಂದು ಭಾರಿ ಬಂದು ಜಾಂಡಾ ಹೊಡೆಯುತ್ತಿದ್ದ ನನಗೆ ಗಾಂಧಿಬಜಾರ್, ಡಿವಿಜಿ ರೋಡ್, ಬುಲ್ ಟೆಂಪಲ್ ರಸ್ತೆಯ ಸಂದಿಗೊಂದಿಗಳೂ ಪರಿಚಯವಾಗಿತ್ತು. ವರ್ಷಕ್ಕೊಮ್ಮೆ ನಡೆಯುತ್ತಿದ್ದ ಕಳ್ಳೆಕಾಯಿ ಪರಿಷೆಗಂತೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಬನಶಂಕರಿಯಲ್ಲಿ ನಮ್ಮೂರಿನಿಂದ ಹೋಗಿ ನೆಲೆಸಿದ್ದ ನನ್ನ ಗೆಳೆಯರು ಇದ್ದರು, ನಾವೆಲ್ಲಾ ಬ್ಯೂಗಲ್ ರಾಕ್,ಕೃಷ್ಣರಾವ್ ಪಾಕ್‍ಗಳಲ್ಲಿ ಅದೆಷ್ಟು ಕಾಲ ಕಳೆದಿದ್ದೇವೆಂಬುದಕ್ಕೆ ಲೆಕ್ಕವೇ ಇಲ್ಲ. ಮತ್ತಷ್ಟು ಓದು