ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ 1
– ಮು. ಅ. ಶ್ರೀರಂಗ,ಬೆಂಗಳೂರು
ಪದ್ಮನಾಭರಾಯರು (ಪೀರಾಯರು) ಕೇಂದ್ರ ಸರ್ಕಾರದ ಗ್ರಾಹಕ ಸೇವಾ ಕಚೇರಿಯೊಂದರಲ್ಲಿ ಸುಮಾರು ಮೂವತ್ತು ಮೂರು ವರುಷ ಕೆಲಸಮಾಡಿ ಸ್ವಯಂ ನಿವೃತ್ತಿ ಹೊಂದಿ (ವಿ ಆರ್ ಎಸ್ ) ಇಂದಿಗೆ ಐದು ವರುಷಗಳಾದವು. ನಿನ್ನೆಯ ವರ್ತಮಾನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ನೌಕರರಿಗೆ ‘ಅಚ್ಛೆದಿನ್’ ಎನ್ನಬಹುದಾದ ಏಳನೇ ವೇತನ ಆಯೋಗದ ವರದಿ ಓದಿದ ಮೇಲೆ ತಾನು ಅವಸರ ಪಟ್ಟು ವಿ ಆರ್ ಎಸ್ ತೆಗೆದುಕೊಂಡು, ಮನೆಗೆ ಬರುತ್ತಿದ್ದ ಧನಲಕ್ಷ್ಮಿಗೆ ಬಾಗಿಲು ಹಾಕಿದೆನೇನೋ ಎಂಬ ಸಣ್ಣ ಎಳೆಯ ವಿಷಾದಾವೊಂದು ಅವರ ಮನಸ್ಸಿನಲ್ಲಿ ಬಂದಿದ್ದು ಸುಳ್ಳಲ್ಲ. ಇನ್ನೂ ಐದು ವರ್ಷ ಸರ್ವಿಸ್ ಬಾಕಿ ಇತ್ತು. ಕಮ್ಮಿ ಎಂದರೂ ಒಂದು ಹತ್ತು ಹನ್ನೆರೆಡು ಲಕ್ಷ ಹೆಚ್ಚಾಗಿ ಬರುತ್ತಿತ್ತು. ಅವರು ವಿ ಆರ್ ಎಸ್ ಅನ್ನು ತೀರಾ ಆತುರ ಪಟ್ಟು ತೆಗೆದುಕೊಂಡಿರಲಿಲ್ಲ. ತಮ್ಮ ಇಲಾಖೆಗೆ ಮೂರು ತಿಂಗಳ ಮುಂಚಿತವಾಗಿಯೇ ನೋಟಿಸ್ ಕೊಡಬೇಕಾಗಿತ್ತು. ಕೊಟ್ಟರು. ಆ ಅವಧಿಯಲ್ಲಿ ಒಮ್ಮೆ ತಮ್ಮ ಅರ್ಜಿಯನ್ನು ವಾಪಸ್ ತೆಗೆದುಕೊಂಡಿದ್ದರು. ಮತ್ತೆ ವಿ ಆರ್ ಎಸ್ ಗೆ ಅರ್ಜಿ ಹಾಕಿದರು. ಮೂರು ತಿಂಗಳ ಅವಧಿಯಲ್ಲಿ ಬೇಕಾದರೆ ಕೊನೆಯ ದಿನವೂ ಸಹ ವಿ ಆರ್ ಎಸ್ ಬೇಡ ಎಂದು ಅರ್ಜಿಯನ್ನು ವಾಪಸ್ ಪಡೆಯುವ ಅವಕಾಶವಿತ್ತು. ಅವರ ಮೇಲಾಧಿಕಾರಿ ದೂರವಾಣಿಯಲ್ಲಿ ಮಾತಾಡಿ ‘ರಾಯರೇ ನಿಮ್ಮ ಫೈಲಿನಲ್ಲಿ ಮೂರು ಅರ್ಜಿಗಳಿವೆ. ಇಂದು ಕೊನೆಯ ಅವಕಾಶ. ಏನು ಮಾಡೋಣ ನೀವೇ ಹೇಳಿ’ ಎಂದಾಗ ಕುರುಕ್ಷೇತ್ರದ ಯುದ್ಧ ಇನ್ನೂ ನಡೆಯುತ್ತಿರುವಾಗಲೇ ಶರ ಶಯ್ಯೆಯಲ್ಲಿ ಮಲಗುವ ಪ್ರತಿಜ್ಞೆ ಮಾಡಿದ ಭೀಷ್ಮನಂತೆ ತಮ್ಮ ಸ್ವಯಂ ನಿವೃತ್ತಿಯ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದರು.
ಐದು ವರ್ಷಗಳ ಹಿಂದೆ ಗಾಂಧೀ ಜಯಂತಿ ಆದ ಮಾರನೇ ದಿನ ಅಕ್ಟೋಬರ್ ಮೂರರಂದು ಆಫೀಸು ಪ್ರಾರಂಭವಾದ ಮೇಲೆ ಹನ್ನೊಂದು ಗಂಟೆಯ ಹೊತ್ತಿಗೆ ತಾವು ಕೆಲಸ ಮಾಡುತ್ತಿದ್ದ ಖುರ್ಚಿ ಬಿಟ್ಟು ಮೇಲೆದ್ದರು. ಅಂದು ಅವರ ಕಣ್ಣು ಸ್ವಲ್ಪ ಜಾಸ್ತಿಯೇ ಒದ್ದೆಯಾಯಿತು. ತಮ್ಮ ಕೆಲಸವನ್ನು ಅವರು ತುಂಬಾ ಇಷ್ಟಪಟ್ಟು,ಬೇಸರವಿಲ್ಲದೆ ಮಾಡಿಕೊಂಡು ಬಂದಿದ್ದರು. ರಾಯರು ತಮ್ಮ ಕೆಲವು ಮೇಲಾಧಿಕಾರಿಗಳು,ಕೆಲ ಸಹೋದ್ಯೋಗಿಗಳು ಹಾಗೂ ಗ್ರಾಹಕರ ಜತೆ ಸಾಕಷ್ಟು ಕಿರಿಕಿರಿ ಅನುಭವಿಸಿದ್ದರು. ಇಲ್ಲವೆಂದಲ್ಲ. ಆದರೆ ಅದೆಲ್ಲಾ part and parcel of the game ಎಂದು ಅಂದಂದಿಗೆ ಬಿಟ್ಟುಬಿಡುತ್ತಿದ್ದರು. ನಿನ್ನೆಯ ನ್ಯೂಸ್ ಪೇಪರ್ ಸುದ್ದಿ ನೋಡಿದ ಮೇಲೆ, ಇಂದು ಬೆಳಗ್ಗೆ ಎದ್ದು ಕಾಫಿ ಕುಡಿದ ನಂತರ ತಮ್ಮ ಲ್ಯಾಪ್ ಟಾಪ್ ತೆಗೆದು ಇಂಟರ್ನೆಟ್ ನಲ್ಲಿ ಗೂಗಲ್ ಸರ್ಚ್ ಗೆ ಹೋಗಿ ತಮ್ಮ ನಿವೃತ್ತಿ ವೇತನ ಎಷ್ಟು ಹೆಚ್ಚಾಗಬಹುದೆಂದು ನೋಡಿದರು. ಅವರು ತಮ್ಮ ಇಲಾಖೆಯ ಅಕೌಂಟ್ಸ್ ವಿಭಾಗದಲ್ಲಿ ಒಂದು ದಿನವೂ ಕೆಲಸ ಮಾಡಿದವರಲ್ಲ. ಇತರೇ ವಿಭಾಗದಲ್ಲೇ ತಮ್ಮ ಇಡೀ ಸರ್ವಿಸ್ ಮುಗಿಸಿದ್ದರು. ಹೀಗಾಗಿ ಏಳನೇ ವೇತನ ಆಯೋಗದ ಮುಖ್ಯಾಂಶಗಳನ್ನು ಓದಿದಾಗ ಆ ಗೂಢ, ತಾಂತ್ರಿಕ ಪದಗಳಾವುವೂ ಅವರಿಗೆ ಅರ್ಥವಾಗಲಿಲ್ಲ. ದುಡ್ಡು ಕೈಗೆ ಬಂದಾಗ ಹೇಗೂ ತಿಳಿಯುತ್ತದಲ್ಲ ಎಂದು ನಿರ್ಲಿಪ್ತರಾಗಿ ಪೇಪರ್ ಓದಲು ಕುಳಿತರು.