ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 4, 2017

ಚೆನಾನಿ – ನಶ್ರಿ ಏಷ್ಯಾದ ಅತೀ ದೊಡ್ಡ ಹಾಗೂ ಭಾರತದ ಅತೀ ಉದ್ದದ ಸುರಂಗ ಮಾರ್ಗ…

‍ನಿಲುಮೆ ಮೂಲಕ

-ಶ್ರೇಯಾಂಕ ಎಸ್ ರಾನಡೆ.
ಈ ಕಣಿವೆ ಜಮ್ಮು ಕಾಶ್ಮೀರದ ಜೀವಸೆಲೆ; ಭಾರತದ ಇಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿ.

– ಏಪ್ರಿಲ್ 2ರಂದು ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭಾರತದ ಅತೀ ಉದ್ದದ, ಏಷ್ಯಾದ ಅತೀ ದೊಡ್ಡ, ಎಲ್ಲಾ ರೀತಿಯ ಹವಾಮಾನಗಳಿಗೂ ಒಪ್ಪುವ ದ್ವಿಮುಖ ಸಂಚಾರ ವ್ಯವಸ್ಥೆಯಿರುವ ಸುರಂಗ ರಸ್ತೆ ಮಾರ್ಗವನ್ನು ಲೋಕಾರ್ಪಣೆಗೊಳಿಸಿದ್ದರು. ಕಳೆದ ಐದು ವರ್ಷ ಐದು ತಿಂಗಳ ಅವಧಿಯಲ್ಲಿ 3,720 ಕೋಟಿ ವೆಚ್ಚದಲ್ಲಿ ಈ ಸುರಂಗ ಮಾರ್ಗವನ್ನು ತಯಾರಿಸಲಾಗಿದೆ. ಕಲೆ ಮತ್ತು ವಿಜ್ಞಾನದ ಇಂಜಿನಿಯರಿಂಗ್ ತಾಂತ್ರಿಕತೆಯನ್ನು ಬಳಸಿಕೊಂಡು ನಿರ್ಮಿಸಲಾಗಿರುವ ಈ ಸುರಂಗ ಮಾರ್ಗ ಅನೇಕ ಕಾರಣಗಳಿಂದ ವಿಶೇಷವಾಗಿದೆ.

ಸಾಮಾನ್ಯವಾಗಿ ಸುರಂಗಗಳನ್ನು ನಿರ್ಮಿಸುವುದೆಂದರೆ ಅಲ್ಲಿನ ಮೂಲಭೂತ ನೈಸರ್ಗಿಕ ಭೂಲಕ್ಷಣಗಳನ್ನು ಅಧ್ಯಯನಿಸಬೇಕಾಗುತ್ತದೆ. ಯಾಕೆಂದರೆ ಸುರಂಗ ನಿರ್ಮಾಣ ಪ್ರಕ್ರಿಯೆ ಸ್ಥಳೀಯ ಮಟ್ಟದಲ್ಲಿ ಭೌತಿಕ ಭೂಪರಿವರ್ತನೆಗೆ ಕಾರಣವಾಗುವುದರ ಜೊತೆಗೆ ಅದರ ಪರೋಕ್ಷ ಪರಿಣಾಮಗಳು ದೂರಗಾಮಿ ಹಾಗೂ ಪ್ರಾದೇಶಿಕ ಮಟ್ಟದಲ್ಲೂ ಪ್ರಭಾವ ಬೀರುವ ಅಪಾಯವಿರುತ್ತದೆ. ಪಶ್ಚಿಮ ಘಟ್ಟ ಕಣಿವೆಗಳಲ್ಲಿ ಇಂತಹ ಅನೇಕ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಕೊಂಕಣ್ ರೈಲ್ವೆ ಮಾರ್ಗಗಳಲ್ಲಿ ಸಿಗುವ ಕಣ್ಣು ಹಾಗೂ ಮನಸ್ಸಿಗೆ ಆಹ್ಲಾದವನ್ನೊದಗಿಸುವ ಕಣಿವೆಗಳ ಪ್ರದೇಶಗಳ ನಡುವಿನ ಬೃಹತ್ ಅಂತರಗಳನ್ನು ಕಡಿಮೆಗೊಳಿಸಿವೆ. ಮೈಸೂರಿನಿಂದ ಮಂಗಳೂರಿಗೆ ರೈಲು ಮಾರ್ಗದಲ್ಲಿ ಸಂಚರಿಸುವಾಗ ಸಿಗುವ ಹತ್ತಾರು ಸುರಂಗಮಾರ್ಗಗಳು ಪ್ರಯಾಣದ ದಣಿವನ್ನು ಆರಿಸಿ ನಿಸರ್ಗದ ದಟ್ಟನೆಯತ್ತ ಕೊಂಡೊಯ್ಯುತ್ತವೆ. ಆದರೆ ಅದೇ ಹೊತ್ತಿಗೆ ಈ ಕಣಿವೆಗಳು ಮಳೆಗಾಲದ ಸಂದರ್ಭದಲ್ಲಿ ಸುಗಮ ಪ್ರಯಾಣಕ್ಕೆ ಸವಾಲಾಗಿ ಎದುರಾಗುತ್ತವೆ. ಕೆಲವೊಮ್ಮೆ ಕಣಿವೆ ಪ್ರದೇಶದ ಮೇಲಿನ ಅತಿಯಾದ ಒತ್ತಡ ಹಾಗೂ ಮಣ್ಣನ್ನು ಹಿಡಿದಿಟ್ಟುಕೊಳ್ಳಲು ಬೇಕಾದ ಗಿಡ-ಮರಗಳ ನಾಶದಿಂದಾಗಿ ಕಣಿವೆಗಳ ಬಾಯಿಗಳು, ಕಡಿದಾದ ದಾರಿಗಳು ಕುಸಿಯುವುದನ್ನು, ಮಣ್ಣಿನಿಂದ ಆವೃತವಾಗುವ ಅಪಾಯಗಳು ಸರ್ವೇಸಾಮಾನ್ಯ. ದೂರದೃಷ್ಟಿಯಿಲ್ಲದ, ಪರಿಸರ ವಿಜ್ಞಾನ, ಪ್ರಾಕೃತಿಕ ಕಾಳಜಿಯಿಲ್ಲದ ಅಭಿವದ್ಧಿಯಿಂದ ಆಗಬಹುದಾದ ಉಪಯೋಗಗಳಿಗಿಂತ ಆಗುವ ದುಷ್ಪರಿಣಾಮಗಳೇ ಹೆಚ್ಚು. ಪರಿಸರವನ್ನು ನಿರ್ಲಕ್ಷಿಸಿ ಮನಸೋ ಇಚ್ಛೆ ಕೃತಕ ಕಾಂಕ್ರೀಟು ಕಾಡನ್ನು ಕಟ್ಟುತ್ತಾ ಹೋಗಿದ್ದ ಉತ್ತರಖಂಡದಲ್ಲಿ 2013ರಲ್ಲಿ ಮೇಘಸ್ಪೋಟವೆಂದು ಹೇಳಲಾಗಿದ್ದ ಆದರೆ ವಿಪರೀತ ಮಳೆ, ನೆರೆಯ ಪರಿಣಾಮದಿಂದಾದ ಪ್ರಾದೇಶಿಕ ಹಾನಿ ಹಾಗೂ ಸಾವು ನೋವಿನ ವಿಪ್ಲವಗಳಿಗೆ ಅಭಿವೃದ್ಧಿಯ ಬಳಿ ಉತ್ತರ ಸಿಗುವುದಿಲ್ಲ.

ಹಾಗಾಗಿಯೇ ಪ್ರಕೃತಿಯ ತಳಹದಿಯ ಮೇಲೆ ನಿರ್ಮಿಸುವ ಪ್ರತಿಯೊಂದು ಕೋಟೆ-ಕೊತ್ತಲಗಳಿಗೂ, ರಸ್ತೆ ಅಣೆಕಟ್ಟುಗಳಿಗೂ, ಸುರಂಗಮಾರ್ಗಗಳಿಗೂ ಪ್ರಕೃತಿಯನ್ನು ಜೊತೆಯಲ್ಲಿಯೇ ಕೊಂಡೊಯ್ಯುವ ಅವಶ್ಯಕತೆಯಿದೆ. ಪ್ರದೇಶದ ಪ್ರಾಕೃತಿಕ ಆನ್ವಯಿಕತೆ ಪರಿಸರ ಕೇಂದ್ರಿತ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಾಗ ಅಭಿವೃದ್ಧಿಗೆ ಅರ್ಥಪೂರ್ಣತೆ ಒದಗುತ್ತದೆ. ಅಭಿವೃದ್ಧಿಯಲ್ಲಿ ಪ್ರಕೃತಿಗೂ ಸ್ಥಾನ ದೊರೆತಾಗ ಅದು ಸುಸ್ಥಿರವಾಗಿರುತ್ತದೆ. ಸುಸ್ಥಿರ ಯೋಜನೆಯೊಂದನ್ನು ರೂಪಿಸಿ, ಅಧ್ಯಯನ-ದೂರಗಾಮಿ ಪರಿಣಾಮಗಳ ಅಧ್ಯಯನಕ್ಕೆಂದೇ ಸಮಯವನ್ನು ಮೀಸಲಿಟ್ಟು ನಿರ್ಮಿಸಲಾದ ‘ಚೆನಾನಿ-ನೆಶ್ರಿ’ ಸುರಂಗಮಾರ್ಗ ಕೇವಲ ಭಾರತ ಮಾತ್ರವಲ್ಲ, ಏಷ್ಯಾದ ಅತೀದೊಡ್ಡ ಹಾಗೂ ಅತ್ಯಂತ ಸುರಕ್ಷಿತ ಸುರಂಗಮಾರ್ಗವಾಗಿ ರೂಪು ತಳೆದಿದೆ.

ಸಮುದ್ರಮಟ್ಟಕ್ಕಿಂತ 1,200 ಮೀಟರ್ ಎತ್ತರದಲ್ಲಿರುವ; ಭೂಮಿಯ ನಿರಂತರ ಚಲನೆ, ಕಂಪನಗಳು ಸಕ್ರಿಯವಾಗಿರುವ ಯುವ ಮಡಚು ಪರ್ವತ ನಿರ್ಮಿತಿಗಳಾದ ಹಿಮಾಲಯ ಪರ್ವತ ಶ್ರೇಣಿಗಳ ಸಮುಚ್ಛಾಯ ಪ್ರದೇಶಗಳಲ್ಲಿ ಸುರಂಗಗಳನ್ನು ಕೊರೆಯುವುದು ಕತ್ತಿಯಂಚಿನ ನಡಿಗೆಯಿದ್ದಂತೆ. ಜಮ್ಮು ಕಾಶ್ಮೀರ ಪ್ರದೇಶ ಹಿಮಾಲಯ ಪರ್ವತ ಶ್ರೇಣಿಗಳ ಮೆಟ್ಟಿಲು ಅಥವಾ ಕೆಳಹಂತದ ಹಿಮಾಲಯಗಳೆಂದು ಪರಿಗಣಿಸಲಾಗಿರುವ ‘ಶಿವಾಲಿಕ್’ ಶ್ರೇಣಿಗಳಿಗೆ ಅಡಿಪಾಯ. ಆವರಿಸಿಕೊಂಡಿರುವ ನೆಲ, ಜಲ, ಬೆಟ್ಟ, ಕಣಿವೆಗಳನ್ನು ಅಗೆದು ಸುರಂಗವನ್ನು ನಿರ್ಮಿಸುವುದರಿಂದ ಭೌತಿಕ ದೂರ ಕಡಿಮೆಯಾಗುವ ಜೊತೆಗೆ ಸುಗಮ ಸಂಚಾರಕ್ಕೆ, ವ್ಯಾಪರ ವಹಿವಾಟುಗಳಿಗೆ ಅನುವಾಗುತ್ತದೆ. ಆದರೆ ಅದರೊಂದಿಗೆ ಗಣನೀಯ ಪ್ರಮಾಣದಲ್ಲಿ ಪ್ರಾಕೃತಿಕ ನೈಸರ್ಗಿಕ ಅಂಶಗಳನ್ನು ಕಳೆದುಕೊಳ್ಳುವ ಅಪಾಯವೂ ಇರುತ್ತದೆ. ಅದಾಗಲೇ ಆವರಿಸಿಕೊಂಡಿರುವ ಭೂಮಿಯನ್ನು ಬಗೆದು ಹೊಸ ದಾರಿಯನ್ನು ಸೃಜಿಸುವುದು ಅತ್ಯಂತ ನಾಜೂಕಿನ ಹಾಗೂ ಸವಾಲಿನ ಸಂಗತಿ. ನೈಸರ್ಗಿಕ ಶ್ರೀಮಂತಿಕೆಗೆ ಹೆಸರಾದ, ಅನೇಕ ನದಿಗಳ ತವರು ಪ್ರದೇಶದಲ್ಲಿ ಶ್ರೀಮಂತ ನೈಸರ್ಗಿಕ ಸಂಪತ್ತನ್ನು ಹಾಗೆಯೇ ಉಳಿಸಿಕೊಂಡು ಸುರಂಗ ನಿರ್ಮಾಣಗೊಂಡ ಕೀರ್ತಿ ಈ ಸುರಂಗಮಾರ್ಗಕ್ಕೆ ಸಲ್ಲುತ್ತದೆ.

(ನೇರ ಪ್ರಯೋಜನ:)
10.89 ಕಿಲೋಮೀಟರ್ ಉದ್ದದ ಸುರಂಗಮಾರ್ಗ ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-44 (ಈ ಮೊದಲಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-1ಎ)ರ 40 ಕಿಲೋಮೀಟರ್ ಅಂತರವನ್ನು ಕಡಿಮೆಗೊಳಿಸಲಿದೆ. ಈ ಸುರಂಗಮಾರ್ಗ ಸಂಚಾರಕ್ಕೆ ಮುಕ್ತಗೊಳ್ಳುವುದರಿಂದ ಚಳಿಗಾಲದಲ್ಲಿ ಹಿಮಾವೃತಗೊಳ್ಳುವ ಹಾಗೂ ಯಾವುದೇ ಸಮಯದಲ್ಲಿ ಭೂಕುಸಿತಕ್ಕೊಳಗಾಗಿ ರಸ್ತೆ ಸಂಚಾರ ಸ್ಥಗಿತಗೊಳ್ಳುವ ಹಾಗೂ ಸುರಕ್ಷಿತವಲ್ಲದ ಕುದ್ನ್, ಪಟ್ನಿಟಾಪ್, ಬಟೋಟ್‍ನಂತಹ ಪ್ರದೇಶಗಳ ಕಂದಕದಂತಹ 40ಕಿ,ಮೀ ರಸ್ತೆಯನ್ನು ಸುಗಮಗೊಳಿಸುವುದಷ್ಟೇ ಅಲ್ಲದೆ 2ಘಂಟೆಗಳ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಿದೆ. ಜೊತೆಗೆ ಜಮ್ಮು ಪ್ರಾಂತ್ಯದ ಕಿಶ್ತಿವಾರ್, ದೋದಾ, ಬಂದೇರ್ವ ಪ್ರದೇಶಗಳ ಜನರಿಗೆ ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಿದೆ. ಸುರಂಗಮಾರ್ಗದಲ್ಲಿ ವಾಹನಗಳ ಇಂಧನದ ಬಳಕೆ ಕಡಿಮೆಯಾಗುವುದರಿಂದ ನೇರವಾಗಿ ದಿನಕ್ಕೆ ಕನಿಷ್ಟವೆಂದರೂ 27-30 ಲಕ್ಷ ರೂಪಾಯಿಗಳ ಉಳಿತಾಯವಾಗಲಿದೆ. ಹಾಗೆಯೇ ಇದು ದೇಶದ ಬೆಳವಣಿಗೆಗೆ ಹಾಗೂ ಉತ್ಪಾದಕತೆ ಮೇಲೆ ಅನೇಕ ಪರಿಣಾಮಗಳನ್ನು ಬೀರಬಲ್ಲದು. ಪ್ರಯಾಣಿಕರು ಉಳಿಯಳಿರುವ ಪ್ರಯಾಣದ ಸಮಯವನ್ನು ಇತರ ಮೌಲ್ಯಾತ್ಮಕ ಚಟುವಟಿಕೆಗಳಲ್ಲಿ ವಿನಿಯೋಗಿಸಬಹುದು.

ಆದರ್ಶವಾದಿ ಜಾಗತಿಕರಣದ ಮೂಲಭೂತ ಆಶಯವೇ ಅಂತರಗಳನ್ನು ಕಡಿತಗೊಳಿಸಿ ಸಂಪರ್ಕಗಳನ್ನು ವೃದ್ಧಿಸುವುದು. ಆದರೆ ಅದು ಒಮ್ಮುಖ ಚಲನೆಗೆ ಕಾರಣವಾಗದೆ ಇಬ್ಬಗೆ ಬೆಳವಣಿಗೆಗೆ ನಾಂದಿಹಾಡುವಂತಿರಬೇಕು. ಮೇಲಾಗಿ ನಮ್ಮ ನಡುವಲ್ಲೇ ಇರುವ ಅನೇಕ ಕುಗ್ರಾಮಗಳಿಗೆ ‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ’ ರಸ್ತೆಯ ಜೊತೆಗೆ ಅವಕಾಶವನ್ನೂ ತೆರೆದಿಟ್ಟಿತು. ಕರ್ನಾಟಕದಲ್ಲಿ ಇಂದಿಗೂ ನಕ್ಸಲ್ ಪೀಡಿತ ಎಂದು ಕರೆಯಲಾಗುವ ಕೆಲವು ಪ್ರದೇಶಗಳಿಗೆ ನೇರ ರಸ್ತೆಯ ಸಂಪರ್ಕವಿಲ್ಲ. ಅದೇ ರೀತಿ ಉತ್ತಮ ಅವಕಾಶಗಳನ್ನು ಹೊಂದಿರುವ, ಸಾಪೇಕ್ಷವಾಗಿ ಬೆಳವಣಿಗೆ ಹಾಗೂ ಮುಂಚೂಣಿಯಲ್ಲಿರುವ ಕೆಲವಾರು ಪ್ರದೇಶಗಳೂ ಇಂದಿಗೂ ನಕ್ಸಲ್ ಪೀಡಿತ ಎಂಬ ಹಣೆಪಟ್ಟಿಯ ಜೊತೆಗೆ ಅನೇಕ ಹೆಚ್ಚುವರಿ ಸೌಲಭ್ಯಗಳನ್ನು ಪಡೆಯುತ್ತಿರುವುದು ಸರಕಾರಗಳ ಅವ್ಯವಸ್ಥಿತ ಯೋಜನೆಗಳ ವೈಫಲ್ಯಕ್ಕೆ ಸಾಕ್ಷಿ.

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಸುರಂಗಮಾರ್ಗದ ಕಾರ್ಯವನ್ನು 26 ಮೇ 2011ರಲ್ಲಿ ಆರಂಭಿಸಿತು. ಇಂಜಿನಿಯರ್‍ಗಳು, ಭೂವಿಜ್ಞಾನಿಗಳು, ಕೌಶಲ್ಯಯುಕ್ತ ಕೆಲಸಗಾರರು ಹಾಗೂ ಇನ್ನಿತರ ಕಾರ್ಮಿಕರು ಹೀಗೆ 1,500 ಜನರು ಇದರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದರಲ್ಲಿ ಎರಡು ಟ್ಯೂಬ್ ಸುರಂಗಗಳನ್ನು ಬಳಸಲಾಗಿದೆ. ಮೊದಲನೆಯದು ಮುಖ್ಯ ಸುರಂಗ. ಎರಡನೆಯದ್ದು ಬಿಡುಗಡೆ ಸುರಂಗ. ಈ ಎರಡೂ ಸರಂಗದ ಟ್ಯೂಬ್‍ಗಳನ್ನು ಪ್ರತೀ 300 ಮೀಟರ್‍ಗಳ ಅಂತರದಲ್ಲಿ 29 ಕಿರಿದಾದ ಆಂತರಿಕ ಮಾರ್ಗಗಳ ಸಂಪರ್ಕದ ಮೂಲಕ ಪರಸ್ಪರ ಬೆಸೆಯಲಾಗಿದೆ.

ಅತ್ಯುತ್ತಮ ಗುಣಮಟ್ಟದ ತಂತ್ರಜ್ಞಾನ (‘ಸ್ಟೇಟ್ ಆಫ್ ಆರ್ಟ್’) ಸಾಧ್ಯತೆಗಳನ್ನು ಬಳಸಿಕೊಂಡು ನಿರ್ಮಾಣಗೊಂಡ ಆಧುನಿಕ ಭಾರತದ ರಸ್ತೆ ನಿರ್ಮಾಣ ತಂತ್ರಜ್ಞಾನದ ಅಚ್ಛರಿಯಿದು.
1. ವಿಶ್ವ ದರ್ಜೆಯ ಸಮಗ್ರ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ,
2. ಪ್ರತೀ ವಾಹನದ ಪ್ರವೇಶ ಹಾಗೂ ನಿರ್ಗಮನವನ್ನು ಗುರುತಿಸಿ ದಾಖಲಿಸುವ ಎಲೆಕ್ಟ್ರಾನಿಕ್ ಟ್ಯಾಗಿಂಗ್ ವ್ಯವಸ್ಥೆ.
3. ಸುರಂಗದೊಳಗೆ ಯಾವುದೇ ರೀತಿಯಲ್ಲಿ ಅಗ್ನಿ ಅವಗಡ ಸಂಭವಿಸಿದರೆ ಅದನ್ನು ತಡೆಯುವುದಕ್ಕೆಂದೇ ಇರುವ ‘ಕ್ರಿಯಾತ್ಮಕ ಅಗ್ನಿ ನಂದಿಸುವ ವ್ಯವಸ್ಥೆ,’
4. ಸುರಂಗದೊಳಗೆ ಪರಿಶುದ್ಧ ಗಾಳಿ ನಿರಂತರವಾಗಿ ಸಂಚರಿಸುವಂತೆ ಮಾಡಿ ಇಂಗಾಲದ ವಿಷಯುಕ್ತ ಗಾಳಿಯನ್ನು ಮತ್ತೊಂದು ಏರ್ ಡಕ್‍ಗಳ ಮೂಲಕ ಹೊರಹಾಕುವ ‘ಸುರಂಗ ವೆಂಟಿಲೇಶನ್ ವ್ಯವಸ್ಥೆ’
5. ಸುರಂಗಮಾರ್ಗದಲ್ಲಿ ಅತಿಯಾದ ವೇಗದಿಂದ ಚಲಿಸಿದರೆ ಅಥವಾ ಸಂಶಯಾಸ್ಪದ ಸಮಯವನ್ನು ಕಳೆದರೆ ಅದನ್ನು ಹೊರಗಿನಿಂದಲೇ ಗುರುತಿಸುವ ‘ಎಲೆಕ್ಟ್ರಾನಿಕ್ ಬೇಹುಗಾರಿಕಾ ವ್ಯವಸ್ಥೆ’ ಅದಕ್ಕಾಗಿ ಸುರಂಗದೊಳಗೆ 124 ಸಿಸಿ(ಕ್ಲೋಸ್ಡ್ ಸರ್ಕ್ಯುಟ್) ಕ್ಯಾಮರಾಗಳ ಅಳವಡಿಕೆ. ಇದರಿಂದ ಪ್ರಯಾಣಿಕರ, ವಾಹನಗಳ ಹಾಗೂ ಸುರಂಗದ ಸುರಕ್ಷತೆಯ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತದೆ.
6. ಅಪಘಾತ ಅಥವಾ ಅವಗಡದ ಸಂದರ್ಭದಲ್ಲಿ ತುರ್ತಾಗಿ ಕಾರ್ಯನಿರ್ವಹಿಸಿ ಜೀವ ರಕ್ಷಿಸಲು ಸಹಾಯಮಾಡುವ ‘ಎಮರ್ಜೆನ್ಸಿ ಬ್ರಾಡ್‍ಕಾಸ್ಟ್ ವ್ಯವಸ್ಥೆ’.
7. ನಿರಂತರವಾಗಿ ಕಾರ್ಯನಿರ್ವಹಿಸುವ ಆಂಬ್ಯುಲೆನ್ಸ್ ಸೇರಿದಂತೆ ಇತರ ಮೂಲಭೂತ ಸೇವೆಗಳು.
8. ಅಪಘಾತಗಳನ್ನು ತಡೆಯುವುದಕ್ಕೆ ಪ್ರತ್ಯೇಕ ಲೇನ್ ಹಾಗೂ ಸುರಕ್ಷಿತ ಸಂಚಾರ ವ್ಯವಸ್ಥೆ. ಹೀಗೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಹಾಗೂ ಗಣನೀಯವಾಗಿ ಹೆಚ್ಚುವರಿ ಕಾಳಜಿ ವಹಿಸಲಾಗಿರುವ ವ್ಯವಸ್ಥೆಯೇ ಇದನ್ನು ಸಮರ್ಥ ಸುರಂಗಮಾರ್ಗವನ್ನಾಗಿಸುತ್ತದೆ.
9. ಈ ಸುದೀರ್ಘ ಹಾದಿಯಲ್ಲಿ ವಾಹನಗಳು ಕೈಕೊಟ್ಟರೆ(ಕೆಟ್ಟು ನಿಂತರೆ)? ಅದಕ್ಕಾಗಿಯೇ, ಅಂತಹ ಸಂದರ್ಭಗಳಿಗೆ ಅನ್ವಯವಾಗಲೆಂದು ಸುರಂಗದೊಳಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
10. 24/7 ವಾತಾವರಣದ ಪರಿಶುದ್ಧ ಗಾಳಿಯ ಲಭ್ಯತೆ ಹಾಗೂ ಪರಿಶುದ್ಧವಲ್ಲದ ಗಾಳಿಯ ನಿಶ್ವಾಸ ತಂತ್ರಜ್ಞಾನ ಭಾರತದಲ್ಲಿ ಸುರಂಗಕ್ಕೆ ಬಳಕೆಯಾಗಿರುವುದು ಇದೇ ಮೊದಲು. ಎರಡು ಏರ್‍ಡೆಕ್‍ಗಳು ಏಕಕಾಲಕ್ಕೆ ಸುರಂಗದ ಹೊರ ವಾತಾವರಣದ ಶುದ್ಧಗಾಳಿಯನ್ನು ದೊರಕಿಸಿ, ಒಳಗಾಳಿಯನ್ನು ಸುರಂಗದ ಹೊರಹಾಕುವ ಈ ತಂತ್ರಜ್ಞಾನಕ್ಕೆ ‘ಟ್ರಾನ್ಸ್‍ವರ್ಸ್ ವೆಂಟಿಲೇಶನ್’ ಎನ್ನಲಾಗುತ್ತದೆ.
11. ಮನಸ್ಸು ಮಾಡಿದ್ದಾರೆ ಈ ಸುರಂಗವನ್ನು ಬೇಗ ಬೇಗನೇ ಮುಗಿಸಿ ಸಾಗುವುದಕ್ಕಾಗಿ ಸುರಂಗದ ಮೇಲಿನ ಎಲ್ಲಾ ಮರಗಿಡ, ನೈಸರ್ಗಿಕ ಆವೃತ್ತಿಯನ್ನು ನಿರ್ಣಾಮಗೊಳಿಸಬಹುದಿತ್ತು. ಆದರೆ ತುಸು ತಡವಾದರೂ ಜಮ್ಮು ಕಾಶ್ಮೀರದ ಶಕ್ತಿ ಹಾಗೂ ಶ್ರೀಮಂತಿಕೆಯಾದ ನೈಸರ್ಗಿಕ ಸಂಪತ್ತನ್ನು ಒಂದಿನಿತು ಮುಟ್ಟದೇ ಹಾಗೇ ಉಳಿಸಿಕೊಂಡಿದ್ದು ಸುಸ್ಥಿರ ಅಭಿವೃದ್ಧಿಯ ನಿದರ್ಶನ.
12. ಸುರಂಗದೊಳಗೂ ಮೊಬೈಲ್ ಪೋನ್‍ಗಳ ಬಳಕೆಗೆ ಸಹಕಾರಿಯಾಗುವಂತೆ ನಿರಂತರವಾಗಿ ದೊರೆಯುವ ಟವರ್ ಸಿಗ್ನಲ್ ವ್ಯವಸ್ಥೆ.
13. ಎಂತಹ ಮಳೆ ಅಥವಾ ಹಿಮಪಾತದ ಸಂದರ್ಭದಲ್ಲಿಯೂ ಒಂದಿನಿತೂ ನೀರು ಸೋರದಂತಹ “ವಾಟರ್‍ಪ್ರೂಫ್” ಸೀಲಿಂಗ್(ಸುರಂಗದ ಮೇಲು ಹೊದಿಕೆ) ವ್ಯವಸ್ಥೆ.
14. ಪ್ರತೀ 150 ಮೀಟರ್‍ಗಳಿಗೆ ಒಮ್ಮೆ ಅಳವಡಿಸಲಾಗಿರುವ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಸಹಾಯಮಾಡುವ “ಎಸ್‍ಒಎಸ್” ಬಾಕ್ಸ್ ಗಳು. ಅನಿವಾರ್ಯ ಸಂದರ್ಭದಲ್ಲಿ ಅದರ ಬಾಗಿಲು ತೆರೆದು “ಹಲೋ” ಎಂದರೆ ಸಾಕು, ಅದೇ ಅದಾಗಿ ಸುರಂಗದಿಂದ ತಪ್ಪಿಸಿಕೊಳ್ಳುವ ಹಾದಿ, ಹತ್ತಿರದ ಆಂಬ್ಯುಲೆನ್ಸ್ ಸೇವೆ ಇತ್ಯಾದಿಗಳ ವಿವರ ಒದಗಿಸಿ, ಅಗತ್ಯ ಸಹಾಯವನ್ನು ಮಾಡಲಿದೆ.
15. 24/7 ಒಂದೇ ರೀತಿಯ ತಡೆರಹಿತ “ಲ್ಯುಮಿನಸ್ ಇಂಟೆನ್ಸಿಟಿ” ಲೈಟಿಂಗ್ ವ್ಯವಸ್ಥೆ. ಇದರಿಂದ ಚಾಲಕರ ಕಣ್ಣಿನ ಮೇಲೆ ಯಾವುದೇ ಪರಿಣಾಮ ಬಿರದು ಮತ್ತು ತಡೆರಹಿತ ಬೆಳಕಿನಿಂದ ಸುರಕ್ಷತೆ ಹಾಗೂ ಸುಗಮ ಸಂಚಾರ ಸುಲಭವಾಗಲಿದೆ.

ಈ ಸುರಂಗಮಾರ್ಗದಲ್ಲಿ ಬಳಕೆಯಾದ ಭಾರತೀಯ ಯೋಚನೆಗಳು ಹಾಗೂ ಭಾರತೀಯ ಚಿಂತನೆಯಿಂದ ರೂಪುಗೊಂಡ ನಿರ್ಮಾಣ ವ್ಯವಸ್ಥೆ ಕೇಂದ್ರ ಸರಕಾರದ “ಟ್ರಾನ್ಸ್‍ಫಾರ್ಮಿಂಗ್ ಇಂಡಿಯಾ” ಆಶಯಕ್ಕೆ ಪೂರಕವಾಗಿದೆ. ಇಸ್ರೋದ ಸಾಧನೆಗಳಂತೆಯೇ ರಸ್ತೆಸಾರಿಗೆಯಲ್ಲಿಯೂ ಅನೇಕ ಅನ್ವೇಷಣೆ ಹಾಗೂ ಸಾಧ್ಯತೆಗಳು ಸಾಕಾರಗೊಳ್ಳುತ್ತಿರುವುದು ಭಾರತದ ಬೆಳವಣಿಗೆಯ ದೃಷ್ಟಿಯಿಂದ ಹಾಗೂ ವಿಶ್ವದ ಗಮನವನ್ನು ಭಾರತದದತ್ತ ಸೆಳೆಯುವತ್ತ ಮಾಡುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.

3,720 ಕೋಟಿ ವೆಚ್ಚದಲ್ಲಿ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಮತ್ತು ಫಿನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್(ಐಎಲ್‍ಎಫ್‍ಎಸ್) ಸಂಸ್ಥೆ ನಿರ್ಮಿಸಿದ ಈ ಸುರಂಗಮಾರ್ಗದಲ್ಲಿ ತೆರಳಲು ವಾಹನಗಳ ಮೇಲೆ ಸುಂಕವನ್ನು ವಿಧಿಸಲಾಗಿದೆ. ಸರಕಾರದ ದಾಖಲೆಗಳ ಪ್ರಕಾರ ನಾಲ್ಕು ಚಕ್ರದ ವಾಹನಗಳ ಮೇಲೆ 55 ರುಪಾಯಿಗಳಿಂದ ಬೃಹತ್ ವಾಹನಗಳ ಮೇಲೆ 19 ರುಪಾಯಿ ಪ್ರಾರಂಭಿಕ ಸುಂಕವನ್ನು ವಿಧಿಸಲಾಗಿದೆ. ಇದು ಹಾಕಿದ ಬಂಡವಾಳವನ್ನು ಮರುಕಳಿಸುವ ಜೊತೆಗೆ ನಿರಂತರ ನಿರ್ವಹಣೆಗೂ ಕಾರಣವಾಗಲಿದೆ. ಇದು ಜಮ್ಮು ಕಾಶ್ಮೀರದ ಬೆಳವಣಿಗೆಗೆ, ಸುರಕ್ಷತೆ ಹಾಗೂ ಅಭಿವೃದ್ಧಿಗೆ ಜೀವಧಾತುವಾಗಲಿದೆ. ಹೀಗೆ ಅನೇಕ ಪ್ರದೇಶಗಳಿಗೆ ಸಂಪರ್ಕ ಬೆಸೆಯುವ ಹಾಗೂ ಮಾರ್ಗದ ದೂರವನ್ನು ಕಡಿತಗೊಳಿಸುವ ಇಂತಹ ಅದ್ಭುತ ನಿರ್ಮಿತಿಯ ಮಾರ್ಗಗಳು ಹೊಸ ಭಾರತಕ್ಕೆ ಅನ್ವೇಷಣೆ ಹಾಗೂ ಅವಕಾಶದ ಹಾದಿಗಳಾಗಲಿವೆ. ಆರ್ಥಿಕ ಸಾಧ್ಯತೆಗಳನ್ನು ಮುಕ್ತಗೊಳಿಸುವ ಜೊತೆಗೆ ಕಟ್ಟಕಡೆಯ ಪ್ರದೇಶಗಳ ವಿಕಸನಕ್ಕೂ ಕಾರಣವಾಗಲಿವೆ. ಚೆನಾನಿ-ನಶ್ರಿ ಏಷ್ಯಾದ ಅತೀ ದೊಡ್ಡ ಹಾಗೂ ಭಾರತದ ಅತೀ ಉದ್ದದ ಸುರಂಗ ಮಾರ್ಗ ಏಪ್ರಿಲ್ 2ರಿಂದ ಸಂಚಾರಕ್ಕೆ ಮುಕ್ತವಾಗಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments