ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 27, 2017

ಅಂಕಣರಂಗ ೧ – ಅನಿಯತಕಾಲಿಕ ಅಂಕಣದ ಅಂಕುರಾರ್ಪಣ!!

‍ನಿಲುಮೆ ಮೂಲಕ
– ಮು ಅ ಶ್ರೀರಂಗ, ಬೆಂಗಳೂರು
pexels-photo-302440ನಿಲುಮೆಯಲ್ಲಿ ವಾರಕ್ಕೊಮ್ಮೆ ಒಂದು ಅಂಕಣ ಬರೆಯುವ ಆಸೆ ಸುಮಾರು ದಿನಗಳಿಂದ  ಇತ್ತು. ಸುಮಾರು ಎರಡು ವರ್ಷಗಳ ಹಿಂದೆ ನಾನು ಇದೇ ಜಾಲತಾಣದಲ್ಲಿ ‘ನಿನ್ನೆಗೆ ನನ್ನ ಮಾತು’ ಎಂಬ ತುಂಬಾ  ಧ್ವನಾರ್ಥಕವುಳ್ಳ ಹೆಸರನ್ನಿಟ್ಟುಕೊಂಡು ಒಂದು ಅಂಕಣ ಬರೆದಿದ್ದೆ. ಅದು ಐದು ಲೇಖನಗಳ ನಂತರ ಮುಂದುವರಿಯಲಿಲ್ಲ.  ಬರೀ ಆರಂಭ ಶೂರತ್ವವಾಗಿ ಹೋಯಿತು. ಈ ಸಲದ ಲೇಖನಗಳಿಗೆ   ಅಂಕಣರಂಗ ಎಂಬ ಹೆಸರನ್ನೇನೋ ಇಟ್ಟುಕೊಂಡಿರುವೆ. ಜತೆಗೇ ಯಾವುದಕ್ಕೂ ಇರಲಿ ಎಂಬ ಹುಷಾರಿನಿಂದ ಅನಿಯತಕಾಲಿಕ ಎಂಬ ರಕ್ಷಾಕವಚವನ್ನೂ ಧರಿಸಿಕೊಂಡಿರುವೆ!!. ಏಕೆಂದರೆ  ವಾರಕ್ಕೊಂದರಂತೆಯೋ  ಅಥವಾ ಹದಿನೈದು ದಿನಗಳಿಗೊಮ್ಮೆಯೋ ತಪ್ಪದೆ ಬರೆಯುವ ಬಗ್ಗೆ ನನಗೇ ಅನುಮಾನವಿದೆ. ಅದಕ್ಕೆ ಕಾರಣ  ಬರವಣಿಗೆ ನನ್ನ ಮನದಾಳದ  ಆಸೆಯಾದರೂ  ಅದು ನನಗೆ   ಓದಿನಷ್ಟು  ಪ್ರಿಯವಾದುದಲ್ಲ. ಸುಲಭವೂ ಅಲ್ಲ.  ನಾನು ಬರೆದರೆ ಒಂದು ಹತ್ತು ಪುಸ್ತಕಗಳ ಪರಿಚಯಾತ್ಮಕ ಲೇಖನವನ್ನು ಹೊಸ ಕನ್ನಡ ಸಾಹಿತ್ಯದ ಒಬ್ಬ  ಹವ್ಯಾಸಿ ಓದುಗನ ಮಟ್ಟದಲ್ಲಿ  ಮಾತ್ರ   ಬರೆಯಬಲ್ಲೆ.   ಅಂಕಣ ಬರೆಯಲು ಸಾಹಿತ್ಯವೊಂದೇ ಆಗಬೇಕೇ? ಬರೆಯುವ ಮನಸ್ಸಿದ್ದರೆ ಎಷ್ಟೊಂದು ವಿಷಯಗಳಿಲ್ಲ.

ಧರ್ಮ, ರಾಜಕೀಯ, ಸಾಮಾಜಿಕ ಸಮಸ್ಯೆಗಳು ಆರ್ಥಿಕ, ಜಾಗತೀಕರಣ, ಸಂಸ್ಕೃತಿ ಕಥನ, ಏರುತ್ತಿರುವ ತಾಪಮಾನ, ನಾಶವಾಗುತ್ತಿರುವ ಮರಗಳು, ಕಾಂಕ್ರೀಟ್ ಕಾಡಾಗಿರುವ ಬೆಂಗಳೂರು,  ಬೆಳ್ಳಂದೂರು ಕೆರೆಯಲ್ಲಿ ಉಕ್ಕುವ ನೊರೆ, ಆಗಾಗ ಕಾಣಿಸಿಕೊಳ್ಳುವ ಬೆಂಕಿ , ವಿಜ್ಞಾನ, ಪರಿಸರ ………  ಒಂದೇ ಎರಡೇ. ನಿಜ. ಬೇಕಾದಷ್ಟು ವಿಷಯಗಳಿವೆ. ಆದರೆ  ಆಯಾ ವಿಷಯಗಳ ಬಗ್ಗೆ ಕ್ಷೇತ್ರ ಅಧ್ಯಯನ ಹಾಗೂ  ಓದಿನ  ಅನುಭವವಿಲ್ಲದೆ,  ಹೇಗೆ ಬರೆಯುವುದು?  ಹೀಗಾಗಿ ನಾನು ಬರೆದರೆ  ಅಷ್ಟಿಷ್ಟು ಓದಿಕೊಂಡಿರುವ  ಹೊಸಗನ್ನಡದ ಒಂದಷ್ಟು ಪುಸ್ತಕಗಳ ಬಗ್ಗೆ ಬರೆಯಬಹುದು. ಅವಾಗಲೂ ಹಿಂಜರಿಕೆ  ಬಿಟ್ಟಿದ್ದಲ್ಲ. ಏಕೆಂದರೆ ನಾನು ಬರೆಯಬಹುದಾದ ಲೇಖನಗಳ ಭಾಷೆ, ಉಪಯೋಗಿಸುವ ಪದಗಳು, ಬರಹದ ಬಂಧ, ಇವೆಲ್ಲಾ ಸರಿಯಾಗಿದೆಯೋ ಇಲ್ಲವೋ ಎಂಬ ಅಳುಕು . ಇದಕ್ಕೆ ಕಾರಣ   ಕಾಲೇಜು ದಿನಗಳಲ್ಲಿ ಕನ್ನಡ ಸಾಹಿತ್ಯವನ್ನು ಒಂದು ವಿಷಯವಾಗಿ  ಪದವಿ ಮಟ್ಟದಲ್ಲಿ ನಾನು ಓದಲಿಲ್ಲ. ಕನ್ನಡ ಸಾಹಿತ್ಯವನ್ನು ಪದವಿ /ಮಾಸ್ಟರ್ ಡಿಗ್ರಿ ಮಟ್ಟದಲ್ಲಿ ಓದಿದವರಿಗೆ ಇರುವ  ಭಾಷೆಯ ಮೇಲಿನ ಒಂದು Authority, ಹಿಡಿತ ನನಗೆ ಇಲ್ಲ.  ಇನ್ನು ನಾನು ಕೆಲಸ ಮಾಡಿದ ಇಲಾಖೆಗೂ ಸಾಹಿತ್ಯಕ್ಕೂ ಸಂಬಂಧವೇ ಇಲ್ಲ. .  ಕನ್ನಡ ಭಾಷೆ ನನ್ನ ಮನೆ ಮಾತು.  ನಿರರ್ಗಳವಾಗಿ ಮಾತಾಡಬಲ್ಲೆ. ಆದರೆ  ನೋಟ್ ಬುಕ್  ತೆರೆದುಕೊಂಡು ಬರೆಯಲು ಕೂತರೆ ಪೆನ್ನು ಮುಂದಕ್ಕೆ ಚಲಿಸುವುದೇ ಇಲ್ಲ. ಏನೋ ಹಿಂಜರಿಕೆ. ಕೆಲಸದಿಂದ ನಿವೃತ್ತನಾಗಿರುವ ನನಗೆ ಬೇಕಾದಷ್ಟು ಬಿಡುವಿದೆ.   ದಿನಾ ಬೆಳಗ್ಗೆ ಎರಡು ಕನ್ನಡ ವರ್ತಮಾನ ಪತ್ರಿಕೆಗಳನ್ನು ಪೂರ್ತಿ ಓದುವುದಕ್ಕೆ  ಒಂದೂವರೆ ಗಂಟೆ ಸಾಕು. ನಾನು  ದಿನಾ ಟಿ ವಿ ನೋಡುವುದಿಲ್ಲ. ಒಂದು ದಿನದ ಅಥವಾ  ಟಿ- 20  ಕ್ರಿಕೆಟ್ ಪಂದ್ಯಗಳು ಇದ್ದಾಗ  ಮತ್ತು ಬಿಬಿಎಂಪಿ , ವಿಧಾನಸಭೆ  ಹಾಗೂ ಲೋಕಸಭೆಯ ಚುನಾವಣಾ ಫಲಿತಾಂಶ  ಬರುವ ದಿನಗಳು ಮಾತ್ರ ಟಿ ವಿ ಮುಂದೆ ಕೂರುವುದು.  ಸಿನಿಮಾ ನೋಡುವ ಬಯಕೆ  ಇಪ್ಪತ್ತು ವರ್ಷದ ಹಿಂದೆಯೇ ಇಂಗಿಹೋಯಿತು. ನಾನು ಕೆಲಸಕ್ಕೆ ಸೇರಿದ ಹೊಸತರಲ್ಲಿ ಅಂದರೆ ೧೯೮೦ರ ಸಮಯದಲ್ಲಿ  ವಾರಕ್ಕೊಂದರಂತೆ ಸಿನಿಮಾ ನೋಡುತ್ತಿದೆ. ನಾನು ನಿವೃತ್ತನಾದ ಮೇಲಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದು. ಅದಕ್ಕೆ ಮೊದಲು ಕೆಲಸದ ಸಲುವಾಗಿ  ಬೆಂಗಳೂರಿನ ಸುತ್ತ ಮುತ್ತ ನಲವತ್ತರಿಂದ ಐವತ್ತು ಮೈಲಿಗಳ ಆಸುಪಾಸಿನ ತಾಲ್ಲೂಕು ಕೇಂದ್ರಗಳಲ್ಲೇ ಇದ್ದವನು. ಹೀಗಾಗಿ ‘ಅಂದಿನ’ ಬೆಂಗಳೂರು ನನಗೆ ಪಕ್ಕದ ಮನೆಯಂತೆ ಇತ್ತು. ಪ್ರತಿ ತಿಂಗಳೂ  ಒಮ್ಮೆಯಾದರೂ  ಭಾನುವಾರ ಅಥವಾ  ರಜಾದಿನಗಳಲ್ಲಿ ಸ್ನೇಹಿತರ ಜತೆಗೂಡಿ ಬೆಳಗ್ಗೆ ಒಂಭತ್ತು ಹತ್ತು ಗಂಟೆಯ ಹೊತ್ತಿಗೆ ಬೆಂಗಳೂರಿಗೆ ಬಂದು  ಆಗ ತಾನೇ  ಬಿಡುಗಡೆಯಾಗಿರುತ್ತಿದ್ದ ಕನ್ನಡ/ಹಿಂದಿ/ತೆಲುಗು ಭಾಷೆಯ ಸಿನಿಮಾ ನೋಡಿ, ಬೆಂಗಳೂರಿನ ಪೇಟೆಗಳಲ್ಲಿ ಓಡಾಡಿ  ರಾತ್ರಿ ವೇಳೆಗೆ ಊರಿಗೆ ವಾಪಸ್ ಹೋಗುತ್ತಿದ್ದೆ. ಈ ಸಿನಿಮಾ ಹುಚ್ಚು ಎಷ್ಟು ತಾರಕಕ್ಕೆ ಏರಿತ್ತೆಂದರೆ ಒಮ್ಮೆ  ಸ್ನೇಹಿತರ ಜತೆ ಬೆಂಗಳೂರಿಗೆ ಬಂದು, ಒಂದೇ ದಿನ  ಒಂದಾದ ಮೇಲೊಂದರಂತೆ ಮೂರು ಸಿನಿಮಾಗಳನ್ನು ಮೂರು ಟಾಕೀಸುಗಳಲ್ಲಿ ನೋಡಿ  ರಾತ್ರಿ ಹನ್ನೆರೆಡು ಗಂಟೆಯ  ಕೊನೆಯ ಬಸ್ಸಿಗೆ ನಮ್ಮೂರಿಗೆ ವಾಪಸ್ ಹೋಗಿದ್ದೆ. ಈಗ ಸಿನಿಮಾ ನೋಡುವುದರಲ್ಲಿ ನಾನು  ತುಂಬಾ choosyಯಾಗಿದ್ದೇನೆ. ಒಂದೆರೆಡು ತಿಂಗಳ ಹಿಂದೆ  ಟಿ ವಿ ವಾಹಿನಿಯೊಂದು ಪ್ರಸಾರ ಮಾಡಿದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನೋಡಿದೆ. ಯು ಟ್ಯೂಬ್ ನಲ್ಲಿ ಬೇಕಾದಷ್ಟು ಸಿನಿಮಾಗಳು ನೋಡಲು ಸಿಗುತ್ತವೆ. ಅಂಗಡಿಗಳಲ್ಲಿ ಡಿವಿಡಿಗಳು ಸಿಗುತ್ತವೆ. ಹಿಂದಿನಂತೆ ಚಿತ್ರಮಂದಿರಗಳಿಗೆ ಹೋಗಬೇಕಾದ ಅಥವಾ ಟಿವಿ  ಮುಂದೆ  ಕೂರಬೇಕಾದ ಅವಶ್ಯಕತೆ ಈಗ  ಇಲ್ಲ. ಆದರೆ  ವಯಸ್ಸಾದಂತೆ ಸಿನಿಮಾಗಳನ್ನು ನೋಡುವ ಆಸೆ ನನಗೇ  ಇಲ್ಲವಾಗಿದೆ. 
 
ಎಪ್ಪತ್ತು ಎಂಭತ್ತರ ದಶಕದಲ್ಲಿ ಪದವಿ ಕಾಲೇಜುಗಳು (First Grade College) ಸಾಮಾನ್ಯವಾಗಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಇರಲಿಲ್ಲ. ಆಗ ನಾನು ಇದ್ದಿದ್ದು ಪುಟ್ಟ ಪಟ್ಟಣವೊಂದರಲ್ಲಿ. ಹೆಸರಿಗೆ ಅದೂ ಒಂದು ತಾಲ್ಲೂಕು . ಹೀಗಾಗಿ ನನ್ನನ್ನು ನನ್ನ ಅಪ್ಪ  ಮೂರು ವರ್ಷಗಳ ಪದವಿ ಓದಿಗೆ ಅನುಕೂಲವಾಗಲಿ ಎಂದು  ಬೆಂಗಳೂರಿನಲ್ಲಿದ್ದ ನಮ್ಮ ಸಮುದಾಯದ ಒಂದು ಹಾಸ್ಟೆಲ್ ಗೆ ಸೇರಿಸಿದರು.  ಆ   ಕಾಲೇಜು ದಿನಗಳಲ್ಲಿ ಪ್ರಾರಂಭವಾದ–ಬೇಕಾದರೆ  ಒಂದು  ವ್ಯವಸ್ಥಿತವಾದ ಓದು ಎನ್ನಬಹುದು– ಪಠ್ಯೇತರ ಪುಸ್ತಕಗಳ ಓದಿನ ಹವ್ಯಾಸ ಇದುವರೆಗೂ ಮುಂದುವರೆದುಕೊಂಡು ಬಂದಿದೆ. ಅದು ಪ್ರಾರಂಭವಾದದ್ದು ನಾನು ಬಿಎಸ್ಸಿ ಎರಡನೇ ವರ್ಷದಲ್ಲಿದ್ದಾಗ ಎಂದು ನೆನಪು. (ಪದವಿ ತರಗತಿಗಳಿಗೆ  ಆ ಕಾಲದಲ್ಲಿ  ಸೆಮಿಸ್ಟರ್ ಪದ್ಧತಿ ಇರಲಿಲ್ಲ. ವರ್ಷಕ್ಕೊಂದರಂತೆ ಪರೀಕ್ಷೆ. ಆ ಪರೀಕ್ಷೆಯಲ್ಲಿ ಯಾವುದಾದರೂ ವಿಷಯದಲ್ಲಿ  ನಪಾಸಾದರೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಮರು  ಪರೀಕ್ಷೆ). ಆಗ  ಮೊದಲ ಮತ್ತು ಎರಡನೇ ವರ್ಷಗಳ ಪದವಿ ತರಗತಿಗಳಲ್ಲಿ  ವರ್ಷಕ್ಕೆ ಮೂರು ಪುಸ್ತಕಗಳಂತೆ  ಕನ್ನಡ   ಭಾಷೆಗಾಗಿ ಒಟ್ಟು ಆರು  ಪಠ್ಯಪುಸ್ತಕಗಳನ್ನು ಓದಬೇಕಾಗುತ್ತಿತ್ತು. ಮೂರನೇ ವರ್ಷಕ್ಕೆ ಭಾಷೆಗಳು ಇರುತ್ತಿರಲಿಲ್ಲ.  ಒಟ್ಟು ಆರುನೂರು ಅಂಕಗಳಿಗೂ  ನಾವು ಆಯ್ದು ಕೊಂಡ ವಿಜ್ಞಾನದ ಮೂರು ವಿಷಯಗಳ  ಆರು ಪ್ರಶ್ನಪತ್ರಿಕೆಗಳ ಪರೀಕ್ಷೆ.   ಮೊದಲ  ಎರಡು  ವರ್ಷಗಳಲ್ಲಿ ಹಳಗನ್ನಡದ ಕಾವ್ಯವೊಂದರ ಸಂಗ್ರಹಿತ ಭಾಗ,   ಹೊಸಗನ್ನಡದ ಲೇಖನಗಳನ್ನೊಳಗೊಂಡ ಗದ್ಯದ ಪುಸ್ತಕ , ಹೊಸ ಕನ್ನಡ ಸಾಹಿತ್ಯದ  ಒಂದು ಪೂರ್ಣ ಕಾದಂಬರಿ,  ಒಂದು ನಾಟಕ, ಹೊಸಗನ್ನಡದ ಕವಿಯೊಬ್ಬರ ಆಯ್ದ ಕವನಗಳ ಸಂಗ್ರಹ,  ಮತ್ತು ಲಲಿತ ಪ್ರಬಂಧಗಳ ಒಂದು ಪುಸ್ತಕ ಇಷ್ಟನ್ನು ಓದಬೇಕಾಗಿತ್ತು.  ಆ ವರುಷ ನಮಗೆ ಹಿರೇಮಲ್ಲೂರು ಈಶ್ವರನ್ ಅವರ ‘ಶಿವನ ಬುಟ್ಟಿ’ ಎಂಬ ಹೆಸರಿನ  ಪ್ರಬಂಧಗಳ ಸಂಕಲನವನ್ನು ಇಟ್ಟಿದ್ದರು. ಅದನ್ನು ಪಾಠ ಮಾಡುತ್ತಿದ್ದ ಪ್ರಾಧ್ಯಾಪಕರು  ಲಲಿತ ಪ್ರಬಂಧಗಳ  ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಬೇಕಾಗಿದ್ದರೆ ಕರ್ನಾಟಕ ವಿಶ್ವವಿದ್ಯಾಲಯದವರು ಪ್ರಕಟಿಸಿರುವ ‘ಕನ್ನಡದಲ್ಲಿ ಲಲಿತ ಪ್ರಬಂಧಗಳು’ ಎಂಬ ಸಣ್ಣ ಪುಸ್ತಕ ಇದೆ. ಆಸಕ್ತಿಯಿದ್ದವರು  ಇಪ್ಪತ್ತೈದು ಪೈಸೆಗಳಿಗೆ ಸಿಗುವ ಆ  ಸಣ್ಣ ಪುಸ್ತಕ ಕೊಂಡುಕೊಂಡು ಓದಬಹುದು ಎಂದು ಆ ಪುಸ್ತಕ ಸಿಗುವ ಅಂಗಡಿಯ ಹೆಸರನ್ನೂ ಹೇಳಿದರು. ಪರೀಕ್ಷೆಯ ದೃಷ್ಟಿಯಿಂದ ಆ ಹೆಚ್ಚಿನ ಓದು ಅವಶ್ಯಕತೆಯಿರಲಿಲ್ಲ. ಅದನ್ನೂ ಅವರು ಹೇಳಿದರು. ನಾನು ನೋಡೋಣ, ಆ ಪುಸ್ತಕದಲ್ಲಿ ಏನಿರಬಹುದು? ಎಂಬ ಕುತೂಹಲದಿಂದ ಆ ಅಂಗಡಿಗೆ ಹೋದೆ. ಆ ಪುಸ್ತಕದ ಅಂಗಡಿಯ ಮಾಲೀಕರು, ಪ್ರಕಾಶಕರೂ ಆಗಿದ್ದರಿಂದ ತಮ್ಮ ಟೇಬಲ್ ಸುತ್ತಾ  ತಾವು ಹೊಸದಾಗಿ ಪ್ರಕಟಮಾಡಿದ್ದ  ಪುಸ್ತಕಗಳನ್ನು ಪೇರಿಸಿ ಇಟ್ಟು ಕೊಂಡಿದ್ದರು.  ಅಂಗಡಿಗೆ ಪ್ರವೇಶ ಮಾಡಿದವರಿಗೆ ಹೊಸ ಪುಸ್ತಕಗಳು ತಕ್ಷಣ ಕಾಣಲಿ ಎಂದು. ಐದಾರು ವರ್ಷಗಳಾದರೂ ಮಾರಾಟವಾಗದೆ ಉಳಿದುಹೋಗಿದ್ದ ಹಳೆಯ ಪುಸ್ತಕಗಳನ್ನು ಗೋಡೌನ್ ನಂತಿದ್ದ  ಪಕ್ಕದ ಒಂದು ಕೊಠಡಿಯಲ್ಲಿ ಜೋಡಿಸಿಟ್ಟಿದ್ದರು.  ನಾನು ಕೇಳಿದ ಪುಸ್ತಕ ಆ ಗೋಡೌನ್ ನಲ್ಲಿರಬಹುದು  ನೋಡಿ  ಎಂದರು. ಆ ಕೊಠಡಿಗೆ ಹೋದೆ. ಅಲ್ಲಿದ್ದ  ರಾಶಿ ರಾಶಿ ಪುಸ್ತಕಗಳ ನಡುವೆ ಕೊನೆಗೂ ನಮ್ಮ ಮೇಷ್ಟ್ರು ಹೇಳಿದ್ದ ಪುಸ್ತಕವನ್ನು ಹುಡುಕಿ ತೆಗೆದುಕೊಂಡೆ. ನನ್ನ ಅವ್ಯವಸ್ಥಿತವಾದ , ಪಠ್ಯೇತರ ಹವ್ಯಾಸಿ ಓದು ಪ್ರಾರಂಭವಾಗಿದ್ದು   ನಾನು ಮೊದಲ ಹಾಗು ಎರಡನೇ  ಪಿ.ಯು.ಸಿ  ಓದುತ್ತಿದ್ದಾಗ.  ಪರೀಕ್ಷೆಗಳು ಮುಗಿದ ಮೇಲೆ ಪ್ರತಿ ವರ್ಷವೂ  ಫಲಿತಾಂಶ ಬರುವ ತನಕದ ಎರಡು ತಿಂಗಳುಗಳ ರಜಾ  ದಿನಗಳಲ್ಲಿ  ಕಾಲ ಕಳೆಯಲು!! ಅದು ೧೯೭೩-೭೫ರ ವರ್ಷಗಳು. ಟಿವಿ ಇನ್ನೂ ಬಂದಿರಲಿಲ್ಲ. ಸಿನಿಮಾ ನೋಡೋಣವೆಂದರೆ ಇದ್ದದ್ದು ಒಂದೇ ಒಂದು ಟಾಕೀಸ್. ಒಂದು ಸಿನಿಮಾ ಬಂದರೆ ಹದಿನೈದು ಇಪ್ಪತ್ತು ದಿನಗಳು ಅದನ್ನೇ ಓಡಿಸುತ್ತಿದ್ದರು.  ಜತೆಗೆ ಎಲ್ಲಾ ಸಿನಿಮಾ ನೋಡಲು ಮನೆಯಲ್ಲಿ  ದುಡ್ಡು ಮತ್ತು ಪರ್ಮಿಷನ್ ಕೊಡುತ್ತಿರಲಿಲ್ಲ.  ಆ ಸಮಯದಲ್ಲಿ  ನಾನಿದ್ದ ಪುಟ್ಟ ಪಟ್ಟಣವೊಂದರಲ್ಲಿ ಒಂದೇ ಒಂದು  ಖಾಸಗಿ ಲೈಬ್ರರಿಯಿತ್ತು .  ನಾನು ಆ ಲೈಬ್ರರಿಯಲ್ಲಿದ್ದ   ಸರಿಸುಮಾರು ಎಲ್ಲಾ ಪತ್ತೇದಾರಿ , ಸಾಮಾಜಿಕ ಹಾಗೂ ಐತಿಹಾಸಿಕ ಕಾದಂಬರಿಗಳನ್ನು ಓದಿ ಮುಗಿಸಿದ್ದೆ. ಒಂದು ದಿನಕ್ಕೆ ಒಂದು ಪುಸ್ತಕ್ಕೆ ಹತ್ತು ಪೈಸೆ ಬಾಡಿಗೆ!!. ಆಗ ನಾನು ಓದಿದ  ಆ ಪುಸ್ತಕಗಳ ವಸ್ತು, ವಿಮರ್ಶೆಯ ದೃಷ್ಟಿಯಿಂದ ಅವುಗಳ ಸಾಹಿತ್ಯಕ ಮೌಲ್ಯ, ಸಾಮಾಜಿಕ ಕಳಕಳಿ ಇತ್ಯಾದಿಗಳು ಏನೇ ಇರಲಿ ಅಂತಹದೊಂದು ಓದು ಸಾಮಾನ್ಯವಾಗಿ ನಮ್ಮ ಮುಂದಿನ ಓದಿಗೆ ಬೇಕು ಅನ್ನಿಸುತ್ತದೆ. (ಹದಿಹರೆಯದಲ್ಲೇ ಅತ್ಯಂತ ಪ್ರತಿಭಾನ್ವಿತರಾದವರಿಗೆ ಬೇಕಾಗದಿರಬಹುದು.  ಅಂತಹವರೂ ಇರಬಹುದು).  ಆ ವಯಸ್ಸೇ ಅಂತಹುದು.  ಅಂತಹ ಓದು ಅಡಿಪಾಯವಿದ್ದಂತೆ ಅಷ್ಟೇ.  ಕಾಲ ಕಳೆದಂತೆ, ನಮಗೆ ವಯಸ್ಸಾದಂತೆ ಹಿಂದೆ ಓದಿದ್ದ ಪುಸ್ತಕಗಳ ಅಭಿರುಚಿಗೇ ನಾವು ಜೋತು ಬೀಳಬಾರದು. ಮುಂದುವರೆಯಬೇಕು, ಅಡಿಪಾಯದ ಮೇಲೆ ಮನೆ ಕಟ್ಟುವ ಹಾಗೆ.  
ಮುಂದಿನ ಅಂಕಣದಲ್ಲಿ ‘ಸಂಚಯ’ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಡಿ.ವಿ.ಪ್ರಹ್ಲಾದ್ ಅವರ ಎರಡು ಪುಸ್ತಕಗಳ ಪರಿಚಯ 

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments