ವಿಷಯದ ವಿವರಗಳಿಗೆ ದಾಟಿರಿ

ಜೂನ್ 18, 2017

1

ಅಪ್ಪನೆಂಬ ಆಪ್ತ…

‍ನಿಲುಮೆ ಮೂಲಕ

– ಗೀತಾ ಹೆಗ್ಡೆ

ಇತಿ ಮಿತಿಯಿಲ್ಲದ ಪ್ರೀತಿಯ ತೇರು ಎಂದರೆ ಹೆತ್ತವರು. ಅಲ್ಲಿ ನಾನು ನನ್ನದೆಂಬ ವಾಂಚೆ ತುಂಬಿ ತುಳುಕುವಷ್ಟು ಮೋಹ. ಈ ಮೋಹದ ಪಾಶಾ ಬಂಧನ ವರ್ಣಿಸಲಸಾಧ್ಯ. ಅಲ್ಲಿ ಸದಾ ನೆನಪಿಸಿಕೊಳ್ಳುವ, ನೆನೆನೆನೆದು ಆಗಾಗ ಪುಳಕಿತಗೊಳ್ಳುವ ಅಪ್ಪನೊಂದಿಗಿನ ದಿನಗಳು ಪ್ರತಿಯೊಬ್ಬರ ಜೀವನದಲ್ಲೂ ಅಮೂಲ್ಯ.

ಅದರಲ್ಲೂ ಹೆಣ್ಣು ಮಕ್ಕಳು ಅಪ್ಪನನ್ನು ಅಪ್ಪಿಕೊಳ್ಳುವುದು ಜಾಸ್ತಿ. ಆಗಾಗ ಬಯ್ಯುವ ಅಮ್ಮನಿಗಿಂತ ಅಪ್ಪನ ಕಂಡರೆ ಹೆಣ್ಣು ಮಕ್ಕಳಿಗೆ ಅಮಿತ ಪ್ರೀತಿ. ಅಪ್ಪನಿಗೂ ಅಷ್ಟೆ, ಮಗಳೂ ಅಂದರೆ ಆಯಿತು. ಅವಳೇನು ಮಾಡಿದರೂ ಚಿಕ್ಕಂದಿನಲ್ಲಿ ವಹಿಸಿಕೊಂಡು ಬರುವುದು ಅಪ್ಪ ಮಾತ್ರ. ಅದಕ್ಕೇ ಏನೋ ಮಗಳು ಏನು ಕೇಳುವುದಿದ್ದರೂ ಅಪ್ಪನ ಕೊರಳಿಗೆ ಹಾರವಾಗಿ ಅಪ್ಪಾ ಅದು ಕೊಡಸ್ತೀಯಾ? ಅಲ್ಲಿ ಕರ್ಕೊಂಡು ಹೋಗ್ತೀಯಾ ಅಂತೆಲ್ಲಾ.. ಅಪ್ಪಾ ಅಂದರೆ ನನ್ನಪ್ಪಾ! ಎಷ್ಟು ಚಂದ ನನ್ನಪ್ಪಾ. ನಂಗೆ ಅಮ್ಮನಿಗಿಂತ ಅಪ್ಪಾ ಅಂದರೇನೆ ಬಲೂ ಇಷ್ಟ. ಈ ಅಮ್ಮ ಯಾವಾಗಲೂ ಬಯ್ತಾಳೆ, ರೇಗುತ್ತಾಳೆ. ಅದು ಕಲಿ ಇದು ಕಲಿ, ಅಲ್ಲಿ ಹೋಗಬೇಡಾ ಇಲ್ಲಿ ಹೋಗಬೇಡಾ, ಸದಾ ಕಾಟ ಕೊಡ್ತಾಳೆ ಹೀಗೆ ಹಲವಾರು ಕಂಪ್ಲೇಂಟು ಕಂಡವರ ಮುಂದೆ ಮಗಳಿನದ್ದು.

ಇದಕ್ಕೆ ಸರಿಯಾಗಿ ಓದುವ ದಿನಗಳಲ್ಲಿ ಮಕ್ಕಳ ಪಾಠದಲ್ಲಿ ವಕ್ಕಣೆ ; Father is the head of the family. ಏನೋ ಮಾತಿಗೆ ಅಮ್ಮ ತಾನೆ ಮನೆ ನೋಡಿಕೊಳ್ಳುವುದು. ಅವಳು ಈ ಮನೆ head ಕಣೆ ಅಂದರೆ ಮಗಳು ಇಲ್ಲ father is the head of the family; ನಮ್ಮ ಮಿಸ್ ಹೇಳಿದ್ದಾರೆ.

ಅಮ್ಮ ಅಡುಗೆ ಮಾಡೋದಕ್ಕೆ ಮಾತ್ರ ಸೀಮಿತ. ಹೌದು ಮಕ್ಕಳಿಗೆ ಅಪ್ಪ ಅಂದರೆ ಅದೇನೊ ಭಯ, ಭಕ್ತಿ, ಪ್ರೀತಿ, a precious thing ಅನ್ನೊ ತರ ಅವರ ಭಾವನೆ. ಅಪ್ಪ ಹೊರಗಡೆ ಹೋಗುತ್ತಾನೆಂದರೆ ನೂರೆಂಟು ಪ್ರಶ್ನೆಗಳು. ಎಲ್ಲಿಗೆ ಹೋಗ್ತೀಯಾ? ಎಷ್ಟೊತ್ತಿಗೆ ಬರ್ತೀಯಾ?  ನಾನೂ ನಿನ್ನ ಜೊತೆ ಬರ್ತೀನಿ. ಬೇಗ ಬರಬೇಕು. ನನಗೇನು ತರ್ತೀಯಾ? ಅಯ್ಯೋ! ಅದೆಷ್ಟು ಪ್ರಶ್ನೆಗಳ ಸುರಿಮಳೆ. ದೂರದಲ್ಲಿ ಅಪ್ಪ ಬರುವಾಗಲೇ ಗುರ್ತಿಸುವ ಅಪ್ಪನ ಬೈಕಿನ ಹಾರನ್, ಓ! ಅಪ್ಪ ಬಂದಾ ಅಂತ ಓಡಿ ಬಂದು ಗೇಟಿನ ಮುಂದೆ ಕಾಯುವ ಕ್ಷಣ, ಒಳಗೆ ಬರಲೂ ಬಿಡದೆ ಅಪ್ಪನ ಕೊರಳ ಸುತ್ತುವ ಎರಡೂ ಕೈಗಳು, ಇರೆ ಚಪ್ಪಲಿ ಬಿಚ್ಚತೀನಿ ತಾಳೆ. ಊಹೂಂ ಮೊದಲು ಮುದ್ದುಗರೆಯಬೇಕು, ಎತ್ತಿಕೊಳ್ಳುವ ವಯಸ್ಸಾದರೆ ಎತ್ತಿಕೊಂಡೆ ಒಳಗಡಿಯಿಡಬೇಕಾಂದಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಮಗಳೆಂಬ ಅರಗಿಣಿ. ಇದು ಎಷ್ಟು ವಾಸ್ತವವೋ ಅಷ್ಟೆ ಖಟು ಸತ್ಯ ಅಪ್ಪನ ಇರುವಿಕೆ ಮಕ್ಕಳಿಗೆ.

ಬೇಡಿಕೆಗಳು ಏನೇ ಇದ್ದರೂ ಅಪ್ಪನನ್ನೇ ಕೇಳಬೇಕು, ತನ್ನ ಬೇಡಿಕೆಗಳನ್ನು ಈಡೇರಿಸುವ ವ್ಯಕ್ತಿ ಇವನೊಬ್ಬನೇ ಅನ್ನುವಷ್ಟು ಮಕ್ಕಳ ಪುಟ್ಟ ಮನಸ್ಸಿನಲ್ಲಿ ಗಟ್ಟಿ ನೆಲೆಯೂರುವುದು ಈ ಚಿಕ್ಕಂದಿನ ದಿನಗಳಲ್ಲಿ.  ಮನೆ ಶಾಲೆ ಆಟ ಪಾಠ ಓದು ಇವುಗಳೊಂದಿಗೆ ದಿನ ಕಳೆದಂತೆ ಮಕ್ಕಳ ಮನಸ್ಸು ವಿಕಾಸವಾದಂತೆಲ್ಲ ಅಲ್ಲಿ ಸಣ್ಣದಾಗಿ ಒಂದು ಹುಡುಕಾಟ ಶುರು.  ತನಗೆ ಬೇಕಾದಂತೆ ಅಪ್ಪ ಇದ್ದರೆ ಸರಿ.  ಅದಿಲ್ಲವಾದರೆ ನಿಧಾನವಾಗಿ ಅಮ್ಮನತ್ತ ವಾಲುವ ಮಕ್ಕಳ ಮನಸ್ಸು ಅಮ್ಮನ ಮಡಿಲಲ್ಲಿ ತಮ್ಮ ದುಃಖ ಹಂಚಿಕೊಳ್ಳಲು ಶುರು ಮಾಡುತ್ತವೆ.  ಹಂತ ಹಂತವಾಗಿ ತಮ್ಮ ಜವಾಬ್ದಾರಿ ಅರಿತು ಓ! ನನಗೆ ಅಪ್ಪಾ ಇಲ್ಲ, ನನ್ನ ಕೆಲಸ ನಾನೇ ಮಾಡಿಕೊಳ್ಳಬೇಕು,ಅಮ್ಮನಿಗೆ ತೊಂದರೆ ಕೊಡಬಾರದು ಹೀಗೆ ಹಲವಾರು ಹಂತಗಳಲ್ಲಿ ಬದಲಾಗುವ ಮಕ್ಕಳು ಕ್ರಮೇಣ ಒಂಟಿತನ, ದೈರ್ಯ ಎರಡನ್ನೂ ಮೈಗೂಡಿಸಿಕೊಳ್ಳಲು ಶುರು ಮಾಡುತ್ತವೆ.  ಜವಾಬ್ದಾರಿ ಹೊರುವ ಅಪ್ಪನ ಸ್ಥಾನದಲ್ಲಿ ನಿಂತು ಅಮ್ಮನ ಹೊಣೆ ಹೊರುವಷ್ಟರ ಮಟ್ಟಿಗೆ ಬದಲಾಗಿಬಿಡುತ್ತವೆ ಬೆಳೆದಂತೆ.

ಎಲ್ಲಿಯವರೆಗೆ ಜವಾಬ್ದಾರಿ ಹೊರುವ ಅಪ್ಪ ಇರುತ್ತಾನೊ ಅಂತಹವರ ಕೆಲವು ಮಕ್ಕಳಿಗೆ ಮನೆಯ ಯಾವ ಕೆಲಸದ ಕಡೆಯೂ ಗಮನವಿರುವುದಿಲ್ಲ, ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಅಮ್ಮ ಏನಾದರೂ ಹೇಳಿದರೆ ಯಾಕೆ ಅಪ್ಪ ಇಲ್ವಾ? ಅವರಿಗೆ ಹೇಳು ಮಾಡಿಕೊಂಡು ಬರುತ್ತಾರೆ. ತಮ್ಮ ಸ್ವಂತ ಕೆಲಸಕ್ಕೂ ಅಪ್ಪನ ಸಹಾಯ ಬೇಕು. ನಿರಾಳ ಮನಸ್ಸು ಅಪ್ಪನಿದ್ದರೆ.

ಇನ್ನು ವಯಸ್ಸಿಗೆ ಬಂದ ಮಕ್ಕಳ ಮದುವೆ ವಿಷಯದಲ್ಲಿ ಸಂಪೂರ್ಣ ಜವಾಬ್ದಾರಿ ಹೊರುವ ಈ ಅಪ್ಪ ಅಲೆದಲೆದು ತನ್ನ ಮಕ್ಕಳಿಗೆ ಯೋಗ್ಯ ಸಂಬಂಧ ಹುಡುಕಿ ಮದುವೆ ಮಾಡಿ ಸರಿಯಾದ ನೆಲೆ ಊರಲು ಅನುವು ಮಾಡಿಕೊಟ್ಟು ಅವರ ಸಂತೋಷದಲ್ಲಿ ತಾನೂ ತನ್ನ ಹೆಂಡತಿಯೊಂದಿಗೆ ಸುಃಖ ಕಾಣಲು ಕಾರಣಕರ್ತ ಈ ಅಪ್ಪನೆಂಬ ಅಭಿವ್ಯಕ್ತಿ. ಮಕ್ಕಳ ವಿಷಯದಲ್ಲಿ ಹೆತ್ತವರದು ನಿಸ್ವಾರ್ಥ ಸೇವೆ, ಕರ್ತವ್ಯ ಕೂಡಾ. ಆದರೆ ಅಪ್ಪನನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಅಯೋಮಯ. ಅಲ್ಲಿ ತಾಯಿ ತನ್ನ ಜವಾಬ್ದಾರಿ ಅದೆಷ್ಟು ಸಮರ್ಥವಾಗಿ ನಿಭಾಯಿಸಬಹುದು! ನಿಜಕ್ಕೂ ವಿಚಾರ ಮಾಡಬೇಕಾದ ಸಂಗತಿ. ಸದಾ ಒಂದಿಲ್ಲೊಂದು ಜೀವನದ ಕಷ್ಟ ನಷ್ಟಗಳಿಗೆ, ಬರುವ ಸಮಯ ಸಂದರ್ಭದಲ್ಲಿ ಧೈರ್ಯದಿಂದ ಮುನ್ನುಗ್ಗಿ ಮಕ್ಕಳಿಗೆ ರಕ್ಷಣೆ ಕೊಡುವ ಅಪ್ಪ ಸಮಾಜದಲ್ಲಿ ಗೌರವ ಸ್ಥಾನಕ್ಕೆ ಅಣಿಗೊಳಿಸುವ ಸಿಂಧು.

ಅಪ್ಯಾಯಮಾನವಾದ ಅಪ್ಪ ಎಲ್ಲ ಮಕ್ಕಳಿಗೂ ಬೇಕು. ಆದರೆ ಇಂತಹ ಸ್ಥಾನ ತುಂಬುವ ಅಪ್ಪ ಎಲ್ಲರಿಗೂ ಸಿಗಲು ಸಾಧ್ಯವೆ?  ಸಿಕ್ಕರೂ ಅರ್ಧದಲ್ಲೆ ಕಳೆದುಕೊಳ್ಳುವ ಮಕ್ಕಳು ಅನೇಕ. ಆಗ ಅವರ ಮನಸ್ಥಿತಿ ಹೇಗಿರಬಹುದು? ಮುಗ್ಧ ಮನಸ್ಸು ಈ ಆಘಾತ ಹೇಗೆ ತಡೆದುಕೊಳ್ಳಬಹುದು?  ಆ ಮಗು ಅದೆಷ್ಟು ಕನಸುಗಳನ್ನು ಅಪ್ಪನ ಸುತ್ತ ಹೆಣೆದುಕೊಂಡಿರುತ್ತೊ ಏನೊ ಪಾಪ!  ಹೇಳಿಕೊಳ್ಳಲೂ ಆಗದೆ ದುಃಖವನ್ನು ತನ್ನೊಳಗೇ ಅದುಮಿ ಅದುಮಿ ಕಣ್ಣೀರಿಡುವ ನತದೃಷ್ಟ ಮಕ್ಕಳು ; ಅವುಗಳ ಬೇಗುದಿಗೆ ತಕ್ಕಂತೆ ಸಾಂತ್ವನ ಹೇಳಲಾಗದ ಅಮ್ಮನ ಸ್ಥಿತಿ. ಒಂದಿಲ್ಲೊಂದು ಸಂದರ್ಭದಲ್ಲಿ ಸದಾ ನೆನಪಿಸಿಕೊಂಡು ನನ್ನಪ್ಪಾ ಹಾಗೆ ಹೀಗೆ ಎಂದು ನೆನಪಿಸಿಕೊಂಡು ಹೆಮ್ಮೆ ಪಡುವುದು ದುಃಖ ಪಡುವುದು ನಡೆದೇ ಇರುತ್ತದೆ.

ನಿಜ ಈ ಅಪ್ಪನೆಂಬ ಅಪ್ಯಾಯಮಾನವಾದ ವ್ಯಕ್ತಿ ಎಲ್ಲರಿಗೂ ಬೇಕು. ಮನೆಯ ಜವಾಬ್ದಾರಿ ಹೊತ್ತು ಮಕ್ಕಳ ಜೀವನಕ್ಕೆ ಅಡಿಪಾಯವಾಗಿ ನಿಲ್ಲುವ ಅಪ್ಪ ಅವನ ಸ್ಥಾನ, ಅವನ ಪ್ರೀತಿ, ವಾತ್ಸಲ್ಯ ಬೇರೆ ಯಾರಿಂದಲೂ ಸಿಗಲು ಸಾಧ್ಯವೇ ಇಲ್ಲ.  ಅಪ್ಪಾ ಅಂದರೆ ಅಪ್ಪನೆ.

ಈ ದಿನ ವಿಶ್ವ ಅಪ್ಪಂದಿರ ದಿನ.  ಇಂತಹ ಪ್ರೀತಿ ಎಲ್ಲ ಮಕ್ಕಳಿಗೂ ಸದಾ ಸಿಗಲೆಂದು ಹಾರೈಸೋಣವೆ?

ಚಿತ್ರಕೃಪೆ :- http://marcusperkins.photoshelter.com/

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments