ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 1, 2017

ಬಾಲಗಂಗಾಧರ ತಿಲಕರೆಂದರೆ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ ಧಾರ್ಮಿಕ ಸಾಮರಸ್ಯ ಮೂಡಿಸಿದ ಧೀಮಂತನಾಯಕ.

‍ನಿಲುಮೆ ಮೂಲಕ

ಶಿವಾನಂದ ಶಿವಲಿಂಗ ಸೈದಾಪೂರ

ಬಾಲಗಂಗಾಧರ ತಿಲಕರೆಂದರೆ ಭಾರತದ ಸಂಪೂರ್ಣ ಸ್ವಾತಂತ್ರ್ಯ ಚಳುವಳಿಯ ಮೊದಲ ನಾಯಕ. “ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು” ಎಂದು ಬ್ರಿಟನಿಯರ ವಿರುದ್ಧ ಘರ್ಜಿಸಿದ ಪ್ರಖರ ಹಿಂದೂ ರಾಷ್ಟ್ರವಾದಿ. ಧಾರ್ಮಿಕ ಹಬ್ಬಗಳಾದ ಶಿವಾಜಿ, ಸಾರ್ವಜನಿಕ ಗಣೇಶ ಉತ್ಸವಗಳ ಜನಕ. ಭಾರತೀಯರಲ್ಲಿ ಧಾರ್ಮಿಕ ಸಾಮರಸ್ಯ ಮೂಡಿಸಿ, ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸಿದ ಏಕೈಕ ಜನನಾಯಕ. ಸಮಸ್ತ ಭಾರತೀಯರ ಬಾಯಿಂದ “ಲೋಕಮಾನ್ಯ”ರೆಂದು ಕರೆಸಿಕೊಂಡವರು.

ಅವರು ಹುಟ್ಟಿದ್ದು 1856 ರ ಜುಲೈ ತಿಂಗಳ 23ರಂದು. ಮಹಾರಾಷ್ಟ್ರದ ರತ್ನಾಗಿರಿಯ ಗಂಗಾಧರ ರಾಮಚಂದ್ರ ತಿಲಕ ಎಂಬುವ ಒಬ್ಬ ಶಾಲಾ ಶಿಕ್ಷಕರ ಮಗನಾಗಿ. ಅವರ ಮೂಲ ಹೆಸರು ‘ಕೇಶವ’. ‘ಬಾಲ’ ಅಥವಾ ‘ಬಲವಂತ’ ಎಂಬುವ ಹೆಸರು ನಡುವೆ ಬಂದು ಸೇರಿದ್ದು. ತಂದೆಗೂ ಆಶ್ಚರ್ಯಗೊಳಿಸುವಷ್ಟು ಬಾಲಕ ‘ತಿಲಕ’ರಲ್ಲಿ ಗಣಿತ ಮತ್ತು ಸಂಸ್ಕೃತಗಳ ಜ್ಞಾನ ಜೊತೆಗೆ ಬೆಳವಣಿಗೆ ಇತ್ತು. ಹುಟ್ಟಿನಿಂದಲೇ ಆಂಗ್ಲ ಮಾದರಿಯ ಶಿಕ್ಷಣದಲ್ಲಿ ನಿರಾಸಕ್ತಿಯಿತ್ತು. ಬಾಲ್ಯದಲ್ಲಿದ್ದಾಗಲೇ ದೇಶೀಯ ಸಾಹಿತ್ಯದ ಕೃತಿ, ಕೃತಿಗಾರರ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಕಾಳಿದಾಸ, ಭವಭೂತಿ ದಂತಿ ಮತ್ತು ಭಾರವಿಯರ ಕೃತಿಗಳ ಪರಿಚಯ ತಮ್ಮದಾಗಿಸಿಕೊಂಡಿದ್ದರು. ಬಾಲಗಂಗಾಧರ ತಿಲಕರ ಚರಿತ್ರೆಯಲ್ಲಿ ‘ಟಿ.ವಿ.ಪರ್ವತೆ’ಯವರು ಹೇಳುವಂತೆ ತಿಲಕರಲ್ಲಿ ವಯಸ್ಸಿಗೂ ಮೀರಿದ ಬುದ್ಧಿಶಕ್ತಿ ಗಳಿಸಿದರೆಂಬುದಕ್ಕೆ ಒಂದು ಘಟನೆಯನ್ನು ಉಲ್ಲೇಖಿಸುತ್ತಾರೆ; “ಒಂದು ದಿನ ತಿಲಕರ ತಂದೆ ಬಾಣ ಕಾದಂಬರಿಯ ‘ಸಮಾಸ’ ಪದಗಳನ್ನು ಬಿಡಿಸುವುದರಲ್ಲಿ ಮಗ್ನರಾಗಿದ್ದಾಗ ಅವರ ಪಕ್ಕದಲ್ಲೇ ಆಟ ಆಡಿಕೊಳುತ್ತಿದ್ದ ಬಾಲಕ ತಂದೆಯ ಕೈಯಲ್ಲಿದ್ದ ಕೃತಿಯನ್ನು ಬೇಕೆಂದು ಹಟಮಾಡಿದಾಗ ಮಗನ ಗಮನ ಬೇರೆಡೆ ಸೆಳೆಯಲು ಒಂದು ಷರತ್ತನ್ನು ಆತನಿಗೆ ಹಾಕುತ್ತಾರೆ. ಅವನಿಗೆ ಬಿಡಿಸಲು ಅಸಾಧ್ಯವಾದ ಲೆಕ್ಕವೊಂದನ್ನು ಕೊಡುತ್ತಾರೆ. ಬಾಲಕ ತಿಲಕರಿಗೆ ಅದು ಬಹಳ ಕಷ್ಟವಾಗಿಯೇ ಇತ್ತು. ದಿಟ್ಟ ಹಟದ ತಿಲಕರು ಎರಡು ಗಂಟೆ ವ್ಯಯಿಸಿ ಆಸಕ್ತಿಯಿಂದ ಲೆಕ್ಕವನ್ನು ಬಿಡಿಸಿ ತಂದೆಗೆ ತೋರಿಸುತ್ತಾರೆ. ಮಗನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ತಮ್ಮ ಬಳಿ ಇರುವ ಬಾಣ ಕಾದಂಬರಿಯನ್ನು ಕೊಡುತ್ತಾರೆ”. ಈ ರೀತಿಯ ದಿಟ್ಟತನದೊಂದಿಗೆ ಅಪಾರವಾದ ಬುದ್ಧಿಶಕ್ತಿಯನ್ನು ಹೊಂದಿರುವಂತವರಾಗಿದ್ದರು.

ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ತಿಲಕರು ತಮ್ಮ ಹದಿನೇಳನೇಯ ವಯಸ್ಸಿನ ಹೊತ್ತಿಗೆ ತಂದೆಯನ್ನು ಕೂಡ ಕಳೆದುಕೊಂಡರು. ಅನಂತರದ ದಿನಗಳಲ್ಲಿ ಚಿಕ್ಕಪ್ಪ ಗೋವಿಂದರಾವ್ ತಿಲಕರ ಆಶ್ರಯದಲ್ಲಿ ಬೆಳೆಯುತ್ತಾರೆ.

ಬಾಲ್ಯದಿಂದಲೂ ದಿಟ್ಟತನ ಹೊಂದಿರುವ ತಿಲಕರು ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟವರು. 1857ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಚಳುವಳಿಯ ನಂತರ ಸ್ವಾತಂತ್ರ್ಯ ಹೋರಾಟದ ಮೊದಲ ನಾಯಕರಾಗಿದ್ದರು. ದೇಶದ ಯಾವುದೇ ವಿಚಾರ ಬಂದರೂ ಅದನ್ನು ಹಿಮ್ಮೆಟ್ಟಿಸುವ ಗಟ್ಟಿ ಧೈರ್ಯವನ್ನು ಹೊಂದಿದ್ದರು. ಅನ್ಯಾಯವಾಗುವ ಯಾವುದೇ ಸಂದರ್ಭ ಬಂದರೆ ದಿಟ್ಟ ಹೆಜ್ಜೆಯನ್ನು ಅವರಿಡುತ್ತಿದ್ದರು. ಇವರ ಜೊತೆಯಾಗಿ ಇವರ ನಿಲುವುಗಳಿಗೆ ಬೆಂಬಲ ನೀಡುವ ಇನ್ನಿತರ ನಾಯಕರೆಂದರೆ ಲಾಲಾ ಲಜಪತ ರಾಯರು ಮತ್ತು ಬಿಪಿನ ಚಂದ್ರಪಾಲರು. ಇಂದಿಗೂ ಈ ಮೂವರು ನಾಯಕರು ‘ಲಾಲ ಬಾಲ ಪಾಲ’ರೆಂದೇ ಪ್ರಸಿದ್ಧರು. ಬಿಚ್ಚು ಮಾತಿನ ಇವರ ನೇರ ನುಡಿಗಳು ದೇಶದ ಮಂದಗತಿಯ ನಾಯಕರನ್ನೂ ಕೂಡ ನಡುಗಿಸುತ್ತದ್ದವು. ಇನ್ನು ಬ್ರಿಟಿಷರನಂತು ಕೇಳುವುದೇ ಬೇಡ!! ಆದುದರಿಂದಲೇ ಏನೋ ತಿಲಕರನ್ನು ಬ್ರಿಟಿಷ್ ಅಧಿಕಾರಿ ‘ವ್ಯಾಲೆಂಟೈನ್ ಚೀರೊಲ’ ತನ್ನ “ಭಾರತದ ಕ್ಷೋಭೆ” ಎಂಬ ಪುಸ್ತಕದಲ್ಲಿ “ಭಾರತದ ಅಶಾಂತಿಯ ಜನಕ”ನೆಂದು ಅಪಪ್ರಚಾರ ಮಾಡಿದ. ದೇಶಕ್ಕಾಗಿ ಇವರು ಇಡುವ ಪ್ರತಿ ಹೆಜ್ಜೆಗಳು ದಿಟ್ಟವಾಗಿರುತಿದ್ದವು. ಇವರ ನೇರ ಮತ್ತು ದಿಟ್ಟತನದ ಬಗ್ಗೆ ಹೇಳುವಾಗ ‘ಗಾಂಧೀಜಿಯವರ’ ”ರಾಜಕೀಯ ಗುರು” ಗೋಪಾಲಕೃಷ್ಣ ಗೋಖಲೆಯವರು ತಮ್ಮ ಬಿಳಿಯ(ಇಂಗ್ಲಿಷ್) ಸ್ನೇಹಿತನಿಗೆ “ತಿಲಕರು ನೂರು ವರ್ಷದ ಹಿಂದೆ ಹುಟ್ಟಿದ್ದರೆ ಒಂದು ಮಹಾ ಸಾಮ್ರಾಜ್ಯವನ್ನೇ ಕಟ್ಟುತ್ತಿದ್ದರೆಂದು” ಹೇಳಿದರಂತೆ.

ಬ್ರಿಟಿಷರ ವಿರುದ್ಧ ಹೋರಾಡುವ ಕಾಲದಲ್ಲಿ ಅಥವಾ ಹೋರಾಟ ಮಾಡುವ ಸಮಯಕ್ಕಾಗಿ ಅವರ ಮುಂದಾಲೋಚನೆ ಅಥವಾ ಪೂರ್ವ ಸಿದ್ಧತೆ ಬಹಳಷ್ಟು ಇರುತ್ತಿತ್ತು. ಮೊದಲು ಇಡೀ ಜನತೆಯನ್ನು ಒಂದುಗೂಡಿಸಲು ಅವರು ಆಯ್ದುಕೊಂಡ ಮಾರ್ಗವೇ ಧಾರ್ಮಿಕತೆಯ ಬಂಧನ. ಧಾರ್ಮಿಕ ಕಾರ್ಯಕ್ರಮದ ಮೂಲಕ ಏಕತೆಯನ್ನು ಸಾಧಿಸಲು ‘ಸಾರ್ವಜನಿಕ ಗಣೇಶ ಹಬ್ಬದ ಉತ್ಸವಕ್ಕೆ’ ಚಾಲನೆ ನೀಡಿದರು. ಸಮಸ್ತ ಭಾರತೀಯರನ್ನು ಸಾರ್ವಜನಿಕ ಗಣೇಶ ಉತ್ಸವದ ನೆಪದಲ್ಲಿ ಒಂದೆಡೆ ಸೇರಿಸಿ ಅವರಲ್ಲಿ ರಾಷ್ಟ್ರೀಯತೆಯನ್ನು, ಕೀರ್ತನೆ, ಭಜನೆ ಕಾರ್ಯಕ್ರಮಗಳ ಮೂಲಕ ತುಂಬಲು ಹೊಸ ಮಾರ್ಗಕ್ಕೆ ಅಡಿಪಾಯ ಹಾಕಿದರು. ವಿವಿಧ ಆಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಮಸ್ತ ಭಾರತೀಯರ ಐಕ್ಯತೆಗಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದರು. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯ ಹೋರಾಟದ ಚಳುವಳಿಗೆ ಹೊಸ ಬಲ ಬಂದದ್ದು.

ತಿಲಕರು ಒಂದು ದಿನ ತಮ್ಮ ಸ್ನೇಹಿತರಾದ ಎಂ. ಬಿ. ನಾಮಜೋಶಿ , ಬಾಬಾ ಮಹಾರಾಜ್ ಪಂಡಿತ್ ಮತ್ತು ಇನ್ನಿತರ ತಮ್ಮ ಸ್ನೇಹಿತ ಬಳಗದೊಂದಿಗೆ ಮಾತನಾಡುತ್ತ ಕುಳಿತ ಸಂದರ್ಭದಲ್ಲಿ ಅರಿವಿಗೆ ಬಂದದ್ದೇ ಸಾರ್ವಜನಿಕ ಗಣೇಶೋತ್ಸವ. ಅದುವರೆಗೂ ಕೇವಲ ಗುಡಿ ಗುಂಡಾರಗಳಲ್ಲಿದ್ದ ಗಣಪತಿಯನ್ನು ಸಾರ್ವಜನಿಕನನ್ನಾಗಿಸಿದರು. ಜಾತಿ ಧರ್ಮಗಳಲ್ಲಿ ಮಾತ್ರ ಸೀಮಿತಗೂಳಿಸದೆ ಸಮಸ್ತ ಹಿಂದೂಗಳಲ್ಲಿ, ಸಾಮರಸ್ಯದ ಭಾವನೆ ಮೂಡಿಸಲು ಸಾಧ್ಯ ಎಂಬುದನ್ನು ಈ ಮೂಲಕ ತೋರಿಸಿದರು. ಎಲ್ಲ ಜಾತಿ ಜನಾಂಗದವರಲ್ಲಿಯೂ ಗಣೇಶನಿಗೆ ಸ್ಥಾನಮಾನ ನೀಡುವ ಅವಕಾಶ ಕಲ್ಪಿಸಿದರು. ಮೊದಲ ಬಾರಿಗೆ ‘1893 ರಲ್ಲಿ ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ ಹನ್ನೊಂದು ದಿನಗಳ ಕಾಲ’ ಉತ್ಸವ ಮಾಡಲು ಕರೆ ನೀಡಿದರು. ಇತರ ಜನಸಾಮಾನ್ಯರು ನಾಯಕರೊಂದಿಗಿನ ಭೇಟಿಗಾಗಿ ಈ ಸಂದರ್ಭವನ್ನು ಅನುಕೂಲಕ್ಕೆ ತಕ್ಕಂತೆ ತಯಾರಿ ಮಾಡಲಾಯಿತು. ಆ ಒಂದು ಆಕ್ರಮಣಕಾರಿ ದಿನಗಳಲ್ಲಿ ಜನರಿಗೆ ಬೌದ್ಧಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ವಿಚಾರಗಳನ್ನು ಒದಗಿಸುವ ಉದ್ದೇಶದಿಂದ ಭಾಷಣಗಳು, ಕೀರ್ತನೆಗಳು, ನಾಟಕ, ಸಂಗೀತ ಗೋಷ್ಠಿ, ಕವಿ ಗೋಷ್ಠಿಗಳನ್ನೊಳಗೊಂಡ ಈ ಎಲ್ಲ ಅಂಶಗಳನ್ನು ಸಾರ್ವಜನಿಕ ಗಣೇಶ ಉತ್ಸವದಲ್ಲಿ ಹೊಂದಿಸುವ ಯೋಜನೆಯನ್ನು ತಮ್ಮ ಸ್ನೇಹಿತ ಬಳಗದೊಂದಿಗೆ ಚರ್ಚೆ ನಡೆಸಿದರು.

ಮೇಲ್ನೋಟಕ್ಕೆ ಈ ಉತ್ಸವ ಮುಸ್ಲಿಮರ ಮೊಹರಂ ಹಬ್ಬದ ವಿರೋಧಿಯಂತೆ ತೋರಿದರು; ಸಮಸ್ತ ಭಾರತೀಯರ ಐಕ್ಯತೆಗಾಗಿ ಹುಟ್ಟಿಕೊಂಡಂತದ್ದದಾಗಿತ್ತು. ಭಾರತೀಯ ಪರಂಪರೆಯ ಸಂಸ್ಕೃತಿ, ಆಚಾರ, ವಿಚಾರಗಳನ್ನು ವಿವಿಧ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿತ್ತು. 1893ರಲ್ಲಿ ಆರಂಭವಾದ ಈ ಗಣೇಶ ಉತ್ಸವ 1896ರ ಹೊತ್ತಿಗೆ ರಾಷ್ಟ್ರವ್ಯಾಪ್ತಿಯಾಗಿತ್ತು. ರಾಷ್ಟ್ರೀಯ ಹಬ್ಬವಾಗಿತ್ತು. ವರ್ಷದಿಂದ ವರ್ಷಕ್ಕೆ ಗಣೇಶ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದ. ರಾಜ ಮಹಾರಾಜರ ಮನೆತನದಲ್ಲಿ ರಾಜ ಗಾಂಭೀರ್ಯದವನಾಗಿದ್ದರೆ; ಸಾಮಾನ್ಯರ ಮನೆಯಲ್ಲಿ ಸಾಮಾನ್ಯನಾಗಿದ್ದ. ಗಣೇಶ ಉತ್ಸವ ಹುಟ್ಟಿದ ಮೂರೇ ಮೂರು ವರ್ಷದಲ್ಲಿ ಭಾರತೀಯ ಎಲ್ಲ ಜಾತಿ,ಮತ, ಧರ್ಮೀಯರು ಭೇದವಿಲ್ಲದೆ ಒಟ್ಟಿಗೆ ಸೇರಿ ರಾಷ್ಟ್ರ ವ್ಯಾಪ್ತಿಯಾಗಿ ಆಚರಿಸಲಾರಂಭಿಸಿದ್ದರು. ಯಹೂದಿಗಳು, ಫಾರ್ಸಿಗಳು, ಮುಸ್ಲಿಮರು ಕೂಡ ಅಲ್ಲದೇ ಭಾರತದಲ್ಲಿದ್ದ ಕೊನೆ ಕೊನೆಗೆ ಬ್ರಿಟಿಷ್ ಅಧಿಕಾರಿಗಳು, ರೆಸಿಡೆಂಟರೂ ಈ ಉತ್ಸವದಿಂದ ಹೊರತಾಗಿರಲಿಲ್ಲ. ಈ ಗಣೇಶ ಉತ್ಸವದಿಂದ ನೈತಿಕ ಉನ್ನತಿಗಾಗಿ ಹೊಸ ಮಾದರಿಯ ಕಾರ್ಯಕ್ರಮಗಳು ಹುಟ್ಟಿಕೊಂಡವು. ಹುದುಗಿರುವ ಎಷ್ಟೋ ಸಂಗತಿಗಳು ಬೆಳಕಿಗೆ ಬಂದವು; ಪ್ರಚಾರಕ್ಕೊಳಪಟ್ಟವು. 1893ರ ಹೊತ್ತಿನಲ್ಲಿ ಭಾರತೀಯ ಧಾರ್ಮಿಕತೆಯ ಸಂಸ್ಕೃತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವಾಮಿ ವಿವೇಕಾನಂದರು ಪರಿಚಯಿಸಿದರೆ, ಸ್ವದೇಶದಲ್ಲಿ ತಿಲಕರು ‘ಪುನಶ್ಚೇತನ’ಗೊಳಿಸಿದರು. ಧಾರ್ಮಿಕತೆಯ ಪ್ರತಿಬಿಂಬವಾದ ವೇದಗಳು, ಬ್ರಾಹ್ಮಣಕಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ ಮತ್ತು ಸಂಸ್ಕೃತ ಅಧ್ಯಾಯನ ಪುನರ್ ಆರಂಭಗೊಂಡವು. ಸಂತರ, ಜನ ಸೇವಕರ ಕೃತಿಗಳ ಅಧ್ಯಯನ ಮತ್ತು ಪುನರ್ ಪರಿಶೀಲನಗೊಂಡು ಉನ್ನತ ಮಟ್ಟಕ್ಕೆ ಏರಿದವು. ಈ ಧಾರ್ಮಿಕ ಉತ್ಸವದಲ್ಲಿ ದೇಶೀಯ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಒದಗಿ ಬರತೊಡಗಿದ್ದವು. ದೇಶದ ತುಂಬೆಲ್ಲಾ ಮನರಂಜನೆ ಮಾತ್ರವಲ್ಲದೆ ದೇಶಭಕ್ತಿಯ ಕಾರ್ಯಕ್ರಮಗಳು ಹೆಚ್ಚಾಗಿ ಹುಟ್ಟಿಕೊಂಡವು. ಹಾಡು ಮತ್ತು ನಾಟಕದಲ್ಲಿ ದೇಶಭಕ್ತಿಯನ್ನು ಉಕ್ಕಿಸುತ್ತಿದ್ದವು. ಭರತಖಂಡದ ಪುರಾಣ ಕಥೆಗಳು ವಿವಿಧ ಬಗೆಯ ರೂಪದಲ್ಲಿ ಪ್ರದರ್ಶನಗೊಂಡವು. ಮಂದಗಾಮಿಯರ ಮತ್ತು ಆಂಗ್ಲೋ ಇಂಡಿಯನ್ ಪತ್ರಿಕೆಗಳ ಅರಚಾಟದ ನಡುವೆಯೂ ತಿಲಕರು ಆರಂಭಿಸಿದ ಗಣೇಶ ಹಬ್ಬದ ಉತ್ಸವವು ಮತ್ತಷ್ಟು ಶ್ರೀಮಂತಗೊಳ್ಳುತ್ತಲೇ ಹೋಯಿತು. ಆರಂಭದ ಹೊತ್ತಿಗೆ ಇದ್ದ ಮುಸ್ಲಿಮ ವಿರೋಧಗಳು ನಂತರ ಮಾಯವಾದವು.

ತಿಲಕರು ಇಷ್ಟೆಲ್ಲವನ್ನು ಮಾಡಿದ್ದು ದೇಶೀಯರಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸುವುದಕ್ಕೆ; ಪ್ರತಿಯೊಬ್ಬರಲ್ಲಿಯೂ ದೇಶಾಭೀಮಾನವನ್ನು ಎಚ್ಚರಗೊಳಿಸುವುದಕ್ಕಾಗಿ, ಭಾರತೀಯರ ಮೇಲೆ ನಡೆಯುವ ಅತಿಕ್ರಮಣ ಆಕ್ರಮಣಕಾರಿಯ ದೌರ್ಜನ್ಯವನ್ನು ತಡೆಯದ್ದಕ್ಕೆ. ಆದರೂ ಅವರ ಈ ನಿರಂತರ ಪ್ರಯತ್ನದ ಮೇಲೆ ಕೋಮು ಗಲಭೆಯ ಆಪಾದನೆಗಳನ್ನು ಬ್ರಿಟಿಷರು ಮತ್ತು ಮಂದಗತಿಯ ನಾಯಕ ಮಹಾಶಯರು ಹೇರುತ್ತಲೇ ಇದ್ದರು. ತಿಲಕರ ರಾಜಕೀಯ ವಿರೋಧಿಗಳ ಜೊತೆಗೆ ಆಂಗ್ಲೋ ಇಂಡಿಯನ್ ಪತ್ರಿಕೆಗಳು ಸೇರಿ ಅವರೊಬ್ಬ ಮುಸ್ಲಿಮ ಜನಾಂಗದ ಕಡು ವಿರೋಧಿ ಎಂದೂ, ಪುನಃ ಬ್ರಾಹ್ಮಣತ್ವಕ್ಕೆ ಪ್ರಾಧಾನ್ಯತೆಯನ್ನು ನೀಡುವರೆಂದೂ! ಹೊಟ್ಟೆ ಕಿಚ್ಚಿನಿಂದ ಉರಿದುಕೊಳುತ್ತಲೇ ಇದ್ದರು. ಕೊನೆಯವರೆಗೂ ತಿಲಕರ ಈ ವಿಚಾರಧಾರೆಯ ನಿಲುವನ್ನು ಅವರು ಸಹಿಸಲಾಗದೇ ತೊಳಲಾಡಿದರು. ಅವರು ಈ ಕಾರ್ಯ ಮಾಡಿದ್ದರೆಂಬ ಕಾರಣಕ್ಕಾಗಿಯೇ ಅವರನ್ನು ಪ್ರತಿಗಾಮಿ ಮತ್ತು ಅಸಂಬಂದ್ಧ ನಡುವಳಿಕೆ ಎಂದು ದೂರಿದರು. ಅವರು ಹುಟ್ಟು ಹಾಕಿದ ಈ ಧಾರ್ಮಿಕ ಕಾರ್ಯವನ್ನು ಅಪಾರ್ಥಕ್ಕೀಡು ಮಾಡಿ ಅವಹೇಳನಗೊಳಿಸಲಾರಂಭಿಸಿದ್ದರು. ತಿಲಕರ ಬಗ್ಗೆ ಟೀಕೆ ಮಾಡುವ ಮಟ್ಟ ಎಲ್ಲಿಗೆ ಹೋಯಿತೆಂಬುವುದನ್ನು ಅವರ ಜೀವನ ಚರಿತ್ರೆಯಲ್ಲಿ ಟಿ.ವಿ.ಪರ್ವತೆಯವರು ಉಲ್ಲೇಖಿಸುತ್ತಾರೆ. ”ಗಣಪತಿಯ ಉತ್ಸವಕಾರರು ಅಜ್ಞಾನಿಗಳು, ಅವಿಧ್ಯಾವಂತರು, ಅಸಂಸ್ಕೃತರು ಮತ್ತು ಅಪ್ರಮಾಣಿಕರು ಇವರಿಗೆ ಭಕ್ತಿ ನಂಬಿಕೆ ಯಾವುದು ಇಲ್ಲವೆಂದು… ಸುಧಾರಕ ಪತ್ರಿಕೆ ಲೇಖಕನ” ಉದ್ಧಟತನವನ್ನು ಖಾರವಾಗಿ ಹೇಳಿದ್ದಾರೆ. ಹಿಂದೂಗಳು ಮತ್ತು ಮುಸ್ಲಿಮರು ಎಂದೂ ಹೊಂದಾಣಿಕೆಯಿಂದ ಇರಬಾರದೆನ್ನುವುದೇ ಬ್ರಿಟಿಷರ ಮುಖ್ಯ ಉದ್ದೇಶ ಆಗಿತ್ತು. ಹಿಂದೂ ಮುಸ್ಲಿಮ ಒಂದಾದರೆ ತಮ್ಮ ಬುಡಕ್ಕೆ ಪೆಟ್ಟು ಬೀಳುತ್ತದೆ ಎಂಬುದು ಖಚಿತವಾಗಿತ್ತು. ಅದರಿಂದಾಗಿಯೇ ಬ್ರಿಟಿಷರು ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ವೈರಿಗಳನ್ನಾಗಿಸುವ ಕುತಂತ್ರವನ್ನು ನಿರಂತರವಾಗಿ ಮಾಡುತ್ತಲೇ ಬಂದರು. ಅದರಲ್ಲೂ 1905 ರಲ್ಲಿ ಬಂಗಾಳ ವಿಭಜನೆ ಮಾಡಿ ಅಲ್ಪ ಮಟ್ಟದ ಯಶಸ್ಸು ಕೂಡ ಕಂಡರು. ಇಂತಹ ನೀಚ ಕೃತ್ಯವನ್ನು ಬ್ರಿಟಿಷರು ಪದೇ ಪದೇ ಮಾಡುತ್ತಲೇ ಬಂದರು. ಅಂತಹ ಸಂಚಿನ ಪ್ರಸಂಗಗಳು ನಮ್ಮ ಮಂದಗಾಮಿಯರಿಗೆ ಅರ್ಥವಾಗಲೇ ಇಲ್ಲ. ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಭಾರತೀಯ ಜನ ಸಮೂಹ ಹೊಸದೊಂದು ಸಂಸ್ಕೃತಿಯನ್ನು ಹುಟ್ಟುಹಾಕಿದಾಗ ಅದನ್ನು ಬೆಳೆಸುವುದನ್ನು ಬಿಟ್ಟು, ಅದರ ಉನ್ನತಿಯ ಮೇಲೆ ತಣ್ಣೀರು ಎರಚುವ ಕಾರ್ಯ ಮಾಡಿದ ಸ್ವದೇಶಾಭಿಮಾನಿಗಳಾಗಿದ್ಧರು. ಗಣೇಶ ಉತ್ಸವ ಮೊಹರಂ ಹಬ್ಬದ ಅನುಕರಣೆ ಎಂದೂ ತಿಲಕರು ಮುಸ್ಲಿಮರ ವಿರೋಧಿಯೆಂದು ಗುಲ್ಲೆಬ್ಬಿಸಿದರು. ಇಷ್ಟೆಲ್ಲ ಮಂದ ಬುದ್ಧಿಯವರು ಮಾಡಿದಾಗಲೂ ತಿಲಕರು ತಮ್ಮ ನಿಲುವನ್ನು ಬದಲಿಸದೇ ಟೀಕಾಕಾರರನ್ನು ತಿದ್ದಲು ಪ್ರಯತ್ನಿಸಿದರು. ಟೀಕಾಕಾರರಿಗೆ ಉತ್ಸವದಲ್ಲಿ ಭಾಗವಹಿಸಿ ಅದರ ತಪ್ಪು ಒಪ್ಪುಗಳನ್ನು ಬಿಚ್ಚು ಮಾತಿನಲ್ಲಿ ಪ್ರಾಮಾಣಿಕತೆಯಿಂದ ಚರ್ಚಿಸಿ ಉತ್ಸವವನ್ನು ಇನ್ನೂ ಉತ್ತಮಗೊಳಿಸಬೇಕೆಂದು ಸೂಚಿಸಿದರು. ದೂರದಲ್ಲಿ ಎಲ್ಲೋ ನಿಂತು ಟೀಕೆ ಮಾಡುವ ಅಸಡ್ಡೆ ಮಾತ್ರ ತಿಲಕರಿಗೆ ಇರಲಿಲ್ಲ. ತಿಲಕರು ನಿಜಕ್ಕೂ ದಿಟ್ಟರು ಮತ್ತು ನಿಷ್ಠುರರೂ ಆಗಿದ್ದರು. ಆದುದರಿಂದಲೇ ಅವರು ಬ್ರಿಟನಿನ ನೆಲದಲ್ಲಿಯೇ ಚೀರೊಲನಿಗೆ ಸವಾಲಸೆದರು.

ಮಂದಗಾಮಿಗಳು ಏನೇ ಅಂದರೂ ಬರೆದರು ಬಾಲಗಂಗಾಧರ ತಿಲಕರೂ ಅಗಲಿ ತೊಂಭತ್ತೆಂಟು ವರ್ಷ ಆಯಿತು. ಅವರು ಆಚರಣೆಗೆ ತಂದ ಗಣೇಶ ಉತ್ಸವ 2017 ಕ್ಕೆ ಈಗ ನೂರಾ ಇಪ್ಪತ್ತೆಳು ವರ್ಷ ವಯಸ್ಸು. ದುರದೃಷ್ಟಕರ ಸಂಗತಿ ಎಂದರೆ ಇಂದು ತಿಲಕರ ನೆನಪು ಅತಿ ಕಡಿಮೆ. ಆದರೆ! ಅವರು ಆರಂಭಿಸಿದ ಗಣೇಶ ಉತ್ಸವ ಇಂದು ರಾಷ್ಟ್ರವ್ಯಾಪ್ತಿ ಮಾತ್ರ ಆಗಿರದೆ ಅಂತರರಾಷ್ಟ್ರೀಯ ವ್ಯಾಪ್ತಿಯಾಗಿದೆ. ಹೊರ ದೇಶದಲ್ಲಿದ್ದುಕೊಂಡೇ ಎಷ್ಟೋ ಭಾರತೀಯರು ಆರಾಧಿಸುತಿದ್ದಾರೆ. ಬಾಲಗಂಗಾಧರ ತಿಲಕರೆಂದರೆ ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ ಧಾರ್ಮಿಕ ಸಾಮರಸ್ಯ ಮೂಡಿಸಿದ ಧೀಮಂತನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments