ಉಪರಾಷ್ಟ್ರಪತಿ ಹುದ್ದೆಯ ಆಯ್ಕೆ ಮತ್ತವರ ಕರ್ತವ್ಯಗಳು…
– ಶ್ರೇಯಾಂಕ ಎಸ್ ರಾನಡೆ
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ 13ನೇ ಉಪರಾಷ್ಟ್ರಪತಿ ಚುನಾವಣೆ ನಡೆದಿದೆ. ನಿರೀಕ್ಷೆಯಂತೆ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ಮಾನ್ಯ ವೆಂಕಯ್ಯನಾಯ್ಡು ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಗೋಪಾಲಕೃಷ್ಣ ಗಾಂಧಿಯವರನ್ನು ಬಹು ಅಂತರದಿಂದ ಸೋಲಿಸಿದ್ದಾರೆ. ಅದಕ್ಕಾಗಿ ಅವರಿಗೂ, ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೂ ಶುಭಾಶಯಗಳು. ಈ ಹೊತ್ತಿನಲ್ಲಿ ರಾಷ್ಟ್ರಪತಿಗಳ ಕೆಲಸ, ಕರ್ತವ್ಯ ಹಾಗೂ ಇನ್ನಿತರ ಸಂಗತಿಗಳ ಕುರಿತು ಬೆಳಕು ಚೆಲ್ಲುವ ಬರಹ.
ನಮ್ಮ ದೇಶದ ಎರಡನೇ ದೊಡ್ಡ ಸಾಂವಿಧಾನಿಕ ಹುದ್ದೆ ಉಪರಾಷ್ಟ್ರಪತಿ. ಉಪರಾಷ್ಟ್ರಪತಿ ಹುದ್ದೆ ನಿರ್ವಹಿಸುವ ಕರ್ತವ್ಯಕ್ಕಿಂತಲೂ ಆ ಸ್ಥಾನದ ಗೌರವ, ಘನತೆ ಹಾಗೂ ರಿಕ್ತತೆಯ ಕಾರಣದಿಂದ ಮುಖ್ಯವೆನಿಸುತ್ತದೆ. ಭಾರತೀಯ ಸಂವಿಧಾನದ 63-71ನೇ ವಿಧಿಗಳು ಸಂವಿಧಾನದಲ್ಲಿ ಉಪರಾಷ್ಟ್ರಪತಿಯ ಸ್ಥಾನ, ಕರ್ತವ್ಯ, ಆಯ್ಕೆಯಾಗುವ ಬಗೆ, ಪದಚ್ಯುತಿಗೊಳಿಸುವ ವಿಧಾನ ಇತ್ಯಾದಿ ಸಂಗತಿಗಳ ಕುರಿತು ವಿವರಣೆ ಒದಗಿಸುತ್ತವೆ.
ಉಪರಾಷ್ಟ್ರಪತಿ ಯಾರಾಗಬಹುದು?
ಅಮೆರಿಕದ ಉಪರಾಷ್ಟ್ರಪತಿ ಹುದ್ದೆಯಿಂದ ಪ್ರೇರಣೆ ಪಡೆದು ಭಾರತದಲ್ಲಿ ಸೃಷ್ಟಿಸಲಾದ ಹುದ್ದೆ ಉಪರಾಷ್ಟ್ರಪತಿ ಎಂಬ ಸಾಂವಿಧಾನಿಕ ಸ್ಥಾನ. ಕನಿಷ್ಟ 35 ವರ್ಷವಾದ ಭಾರತೀಯ ಪ್ರಜೆಗಳು ಈ ಸಾಂವಿಧಾನಿಕ ಸ್ಥಾನಕ್ಕೆ ಸ್ಪರ್ಧಿಸಬಹುದು. ರಾಜ್ಯಸಭೆಯ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಇರುವ ಅರ್ಹತೆಯನ್ನು ಹೊಂದಿರಬೇಕು. ಮುಖ್ಯವಾಗಿ ಕೇಂದ್ರ, ರಾಜ್ಯ ಸರಕಾರಗಳ ಅಥವಾ ಸ್ಥಳೀಯ ಸಂಸ್ಥೆಗಳ ಅಥವಾ ಯಾವುದೇ ಸರಕಾರಿ ಆದಾಯವಿರುವ “ಲಾಭದಾಯಕ ಹುದ್ದೆ” ಅಲಂಕರಿಸಿರಬಾರದು. ಆ ಕಾರಣದಿಂದಾಗಿಯೇ ಕೇಂದ್ರ ಸರಕಾರದ ಮಂತ್ರಿಯಾಗಿದ್ದ ವೆಂಕಯ್ಯನಾಯ್ಡು ಚುನಾವಣೆಗೂ ಮುನ್ನ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದು ಅನಿವಾರ್ಯವಾಯಿತು.
ಉಪರಾಷ್ಟ್ರಪತಿಯಾದ ಮೇಲೆ ಬೇರೆ ಹುದ್ದೆಗಳನ್ನು ನಿರ್ವಹಿಸಬಹುದೇ?
ಉಪರಾಷ್ಟ್ರಪತಿಯಾಗಿರುವಷ್ಟು ಕಾಲ ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರಾಗಿರುವಂತಿಲ್ಲ. ಹಾಗೆ ಅವರು ಬೇರೆ ಯಾವ ಹುದ್ದೆಗಳನ್ನೂ ಅಲಂಕರಿಸುವಂತಿಲ್ಲ. ಒಂದು ವೇಳೆ ಅಂತಹ ಯಾವುದೇ “ಲಾಭದಾಯಕ ಹುದ್ದೆ” ಹೊಂದಿದರೆ ಅವರನ್ನು ಸಂಸತ್ತು ಪದಚ್ಯುತಿಗೊಳಿಸಬಹುದು.
ಅಧಿಕಾರ ಮತ್ತು ಕರ್ತವ್ಯಗಳು:
ಅವರ ಅಧಿಕಾರ ವ್ಯಾಪ್ತಿ ಮತ್ತು ವಿಸ್ತಾರ ಎರಡು ನೆಲೆಗಳಲ್ಲಿ ಸಾಗುತ್ತದೆ. ಮೊದಲನೆಯದಾಗಿ ಉಪರಾಷ್ಟ್ರಪತಿ ಎಂಬುದು ಒಂದು ಕಾಲ್ಪನಿಕ ಹುದ್ದೆ ಎಂದರೆ ತಪ್ಪಾಗಲಾರದು. ಅಂದರೆ ಮೂಲಭೂತವಾಗಿ ಅವರ ಕರ್ತವ್ಯವಿರುವುದು ರಾಜ್ಯಸಭೆಯ ಸಭಾಧ್ಯಕ್ಷರಾಗಿ. ಅವರು ಸಂಬಳ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆಯುವುದು ರಾಜ್ಯಸಭೆಯ ಸಭಾಧ್ಯಕ್ಷರಾಗಿರುವ ಕಾರಣಕ್ಕೆ ಹೊರತು ಅಲಂಕಾರಿಕವಾದ ಉಪರಾಷ್ಟ್ರಪತಿ ಹುದ್ದೆಗಾಗಿ ಅಲ್ಲ. ಈ ಸ್ಥಾನದಲ್ಲಿ ಅವರ ಅಧಿಕಾರ ವ್ಯಾಪ್ತಿ ಮತ್ತು ಕರ್ತವ್ಯಗಳು ಲೋಕಸಭೆಯ ಸ್ಪೀಕರ್‍ಗೆ ಸಮಾನಾಂತರವಾಗಿವೆ. ಇದು ಅಮೆರಿಕದ ಉಪರಾಷ್ಟ್ರಪತಿಯ ಹುದ್ದೆಗೂ ಸಮಾನಾಂತರವಾಗಿದೆ. ಅಮೆರಿಕದಲ್ಲಿ ಅಲ್ಲಿನ ಉಪರಾಷ್ಟ್ರಪತಿ ಸಂಸತ್ತಿನ ಮೇಲ್ಮನೆ ಅಂದರೆ “ಸೆನೆಟ್”ನ ಸಭಾಧ್ಯಕ್ಷರಾಗಿರುತ್ತಾರೆ.
ಎರಡನೆಯ ನೆಲೆಯಲ್ಲಿ ಭಾರತದ ಉಪರಾಷ್ಟ್ರಪತಿ, ಯಾವುದಾದರೂ ಕಾರಣಗಳಿಂದ ರಾಷ್ಟ್ರಪತಿ ಹುದ್ದೆ ಖಾಲಿಯಿದ್ದ ಸಂದರ್ಭದಲ್ಲಿ ತಾತ್ಕಾಲಿಕ ಅವಧಿಗೆ ಹಂಗಾಮಿಯಾಗಿ ಆ ಸ್ಥಾನವನ್ನು ನಿರ್ವಹಿಸುತ್ತಾರೆ. ಆದರೆ ಅಮೆರಿಕ ವ್ಯವಸ್ಥೆಯಲ್ಲಿರುವಂತೆ ನೇರವಾಗಿ ರಾಷ್ಟ್ರಪತಿಯಾಗಿಬಿಡುವುದಿಲ್ಲ. ಹಾಗೆಯೇ ರಾಷ್ಟ್ರಪತಿಯ ಕರ್ತವ್ಯವನ್ನು ಹಂಗಾಮಿಯಾಗಿ ನಿರ್ವಹಿಸುವ ಸಂದರ್ಭದಲ್ಲಿ ರಾಜ್ಯಸಭೆಯ ಸಭಾಧ್ಯಕ್ಷ ಸ್ಥಾನವನ್ನು ನಿರ್ವಹಿಸುವಂತಿಲ್ಲ. ಭಾರತೀಯ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ ರಾಷ್ಟ್ರಪತಿ ಹುದ್ದೆ ಖಾಲಿಯಿದ್ದ ಸಂದರ್ಭದಲ್ಲಿ ಚುನಾವಣಾ ಆಯೋಗ 6 ತಿಂಗಳೊಳಗಾಗಿ ಚುನಾವಣೆಯನ್ನು ನಡೆಸಿ ನೂತನ ರಾಷ್ಟ್ರಪತಿಯನ್ನು ನೇಮಿಸಬೇಕಾಗುತ್ತದೆ.
ಸಂಬಳ ಮತ್ತು ಸೌಲಭ್ಯಗಳು:
2008ರಲ್ಲಿ ಪಾರ್ಲಿಮೆಂಟ್ ರಾಜ್ಯಸಭೆಯ ಸಭಾಧ್ಯಕ್ಷರ ಸಂಬಳವನ್ನು 40,000 ರೂಪಾಯಿಗಳಿಂದ 1,25,000 ರೂಪಾಯಿಗಳಿಗೆ ಏರಿಸಿದೆ. ಇದರ ಜೊತೆಗೆ ದಿನ ಭತ್ಯೆ, ಮೌಲಾನಾ ಆಜಾದ್ ರಸ್ತೆಯಲ್ಲಿರುವ ಉಪರಾಷ್ಟ್ರಪತಿ ಭವನ, ಆರೋಗ್ಯ, ಓಡಾಟ ಇತ್ಯಾದಿ ಭತ್ಯೆಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.
ಅಧಿಕಾರದ ಅವಧಿ ಮತ್ತು ಪದಚ್ಯುತಿಗೊಳಿಸುವ ವಿಧಾನ:
ಉಪರಾಷ್ಟ್ರಪತಿಯ ಸಾಂವಿಧಾನಿಕ ಅವಧಿ 5 ವರ್ಷಗಳು. ಪೂರ್ಣಾವಧಿ ಮುಗಿದ ನಂತರ ಮತ್ತೊಮ್ಮೆ ಆಯ್ಕೆಯಾಗುವುದಕ್ಕೆ ಅವಕಾಶವಿದೆ. ಅಂದರೆ ಅವಧಿಗಳ ನಿರ್ಬಂಧವಿಲ್ಲ. ಅವಧಿ ಪೂರ್ಣವಾಗುವ ಮುಂಚೆ ಅವರಿಗೆ ರಾಜಿನಾಮೆ ನೀಡುವುದಕ್ಕೂ ಅವಕಾಶವಿದೆ. ವಿಶೇಷ ಸಂದರ್ಭಗಳಲ್ಲಿ ಉಪರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಇದಕ್ಕಾಗಿ ರಾಷ್ಟ್ರಪತಿಗಳ ಪದಚ್ಯುತಿಗಾಗಿ ಉಪಯೋಗಿಸುವ “ಇಂಪೀಚ್‍ಮೆಂಟ್” ಪ್ರಕ್ರಿಯೆಯ ಅನಿವಾರ್ಯತೆಯಿಲ್ಲ.
ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ನಿರ್ಮೂಲನೆಗಾಗಿ ಪೂರ್ಣ ಬಹುಮತದ ಮೂಲಕ (ಅಂದರೆ ರಾಜ್ಯಸಭೆಯ ಒಟ್ಟು ಸದಸ್ಯಬಲದ ಬಹುಮತ) ರೆಸಲ್ಯೂಶನ್ ಅಂಗೀಕರಿಸಬೇಕಾಗುತ್ತದೆ. ಆ ಮಂಡನೆ/ರೆಸಲ್ಯೂಶನ್‍ಅನ್ನು ಲೋಕಸಭೆಯೂ ಒಪ್ಪಿದಾಗ ಮಾತ್ರ ಪದಚ್ಯುತಿಯ ಅಂಗೀಕಾರವಾಗುತ್ತದೆ. ಈ ಸಂದರ್ಭದಲ್ಲಿ ರಾಜ್ಯಸಭೆಯ ಕಲಾಪಗಳಲ್ಲಿ ಸಭಾಧ್ಯಕ್ಷರಾಗಿ ಉಪರಾಷ್ಟ್ರಪತಿ ಪಾಲ್ಗೊಳ್ಳುವಂತಿಲ್ಲ. ಆ ಸ್ಥಾನವನ್ನು ಉಪಸಭಾಧ್ಯಕ್ಷರು ಅಲಂಕರಿಸಿರುತ್ತಾರೆ. ಆದರೆ ಪದಚ್ಯುತಿ ಮಂಡನೆ ಮಾಡುವ 14 ದಿನಗಳ ಮುಂಚೆಯೇ ಉಪರಾಷ್ಟ್ರಪತಿಗಳಿಗೆ ಸೂಚನೆ ನೀಡಬೇಕಾಗುತ್ತದೆ. ಈ ಅವಧಿ ಅವರ ಮೇಲಿನ ಆರೋಪಗಳಿಗೆ ಅವರು ಸ್ಪಷ್ಟೀಕರಣ ನೀಡುವುದಕ್ಕಿರುವ ಕಾಲ. ಅವರು ನೀಡುವ ಸ್ಪಷ್ಟೀಕರಣ ರಾಜ್ಯಸಭೆಗೆ ಸಮಂಜಸವೆನಿಸಿದರೆ ಆಗ ಪದಚ್ಯುತಿ ಮಂಡನೆ ಪ್ರಕ್ರಿಯೆ ಮುಂದುವರೆಯುವುದಿಲ್ಲ.
ರಾಷ್ಟ್ರಪತಿಯ ಪದಚ್ಯುತಿಗೆ ಸಂವಿಧಾನ ಕೆಲವಾರು ಕಾರಣಗಳನ್ನು ನೀಡಿದೆ. ಆದರೆ ಉಪರಾಷ್ಟ್ರಪತಿ ಪದಚ್ಯುತಿಗೆ ಅಂತಹ ಯಾವುದೇ ಕಾರಣಗಳನ್ನು ನೀಡಿಲ್ಲ. ಅಂದರೆ ಅದನ್ನು ರಾಜ್ಯಸಭೆಯ ಸದಸ್ಯರ ವಿವೇಚನೆಗೆ ಬಿಟ್ಟಿದೆ. ಅಂದಹಾಗೆ ಭಾರತದ ಇತಿಹಾಸದಲ್ಲಿ ಈವರೆಗೂ ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿಗಳ ಪದಚ್ಯುತಿಗಾಗಿ ಯಾವುದೇ ರೆಸಲ್ಯೂಶನ್‍ಗಳು ಮಂಡನೆಯಾಗಿಲ್ಲ.
ಉಪರಾಷ್ಟ್ರಪತಿಯ ಪ್ರಸ್ತುತತೆ:
ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ, ಪ್ರಧಾನಿಗಳೆದುರು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿದರೆ ಶಿಷ್ಟಾಚಾರ ಭಂಗಗೊಳ್ಳುತ್ತದೆ ಎಂಬ ಉಪರಾಷ್ಟ್ರಪತಿಯನ್ನು ನಾವು ಈಗಷ್ಟೇ ನೋಡಿದ್ದೇವೆ. ಹೀಗೆ ಇಂತಹ ಶಿಷ್ಟಾಚಾರದ ದಾಕ್ಷಿಣ್ಯಕ್ಕೆ ಒಳಪಟ್ಟು ಸ್ವತಂತ್ರ ಭಾರತದ ಆಡಳಿತ ಇತಿಹಾಸದಲ್ಲಿ ಕೇವಲ ಅಲಂಕಾರಿಕ ಹುದ್ದೆಯಾಗಿ ಉಳಿದು ಬಂದಿರುವ ಉಪರಾಷ್ಟ್ರಪತಿ ಸ್ಥಾನ ಮುಂದಿನ ದಿನಗಳಲ್ಲಿ ಅದರ ಪ್ರಸ್ತುತತೆಗೆ ಅನುಗುಣವಾಗಿ, ಹೊಸ ಆನ್ವಯಿಕ ಸಾಧ್ಯತೆಗಳಿಗೆ ತೆರೆದುಕೊಳ್ಳಬೇಕಿದೆ.
ಕೇವಲ ರಾಜ್ಯಸಭೆಗಷ್ಟೇ ಸೀಮಿತವಾಗಿರುವ ಉಪರಾಷ್ಟ್ರಪತಿ ಹುದ್ದೆ ನಿಜವಾದ ಅರ್ಥದಲ್ಲಿಯೂ ದೇಶಕ್ಕೆ ಉಪರಾಷ್ಟ್ರಪತಿಯಾಗಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಪಾರ್ಲಿಮೆಂಟ್ ಸಂವಿಧಾನದಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕಿದೆ. ಇಲ್ಲವಾದಲ್ಲಿ “ಕನಿಷ್ಟ ಸರಕಾರ ಗರಿಷ್ಟ ಆಡಳಿತ”ವೆಂಬ ಪರಿಣಾಮಕಾರಿ ಆಡಳಿತದ ಹೊಸ ಮನ್ವಂತರಕ್ಕೆ ದೇಶ ತೆರೆದುಕೊಳ್ಲುತ್ತಿರುವ ಈ ಹೊತ್ತಿನಲ್ಲಿ ಹಾಗೂ ಕಾಲಾಂತರದಲ್ಲಿ ಈ ಹುದ್ದೆ ಅಪ್ರಸ್ತುತವಾಗುವ ಅಪಾಯವಿದೆ.
ಜೈ ಹಿಂದ್…