ನಮ್ಮೂರ ಹಬ್ಬ : ಮುಗಬಾಳ ಕರಗ ಸಂಪ್ರದಾಯ
– ಸುರೇಶ್ ಮುಗಬಾಳ್
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದ ಲೇಖನ ..
ಕರದಲ್ಲಿ ಮುಟ್ಟದೆ, ರುಂಡದಲ್ಲಿ ಧರಿಸಿ ಚಲಿಸುವುದೇ “ಕರಗ”, ಸ್ತ್ರೀ ವೇಷಧಾರಿ ಪುರುಷ (ಕರಗ ಪೂಜಾರಿ) ತನ್ನ ತಲೆಯ ಮೇಲೆ ಕರಗವನ್ನು ಹೊತ್ತು ಕುಣಿಯುವುದನ್ನು ಕಣ್ತುಂಬಿಕೊಳ್ಳುವುದೇ ಸೊಗಸು, ಮೂರು ಕಳಶಗಳನ್ನು ಒಂದರ ಮೇಲೊಂದರಂತೆ ಜೋಡಿಸಿ, ಕಳಶಗಳನ್ನು ಸುಗಂಧ ಬೀರುವ ಮಲ್ಲಿಗೆ ಹೂಗಳಿಂದ ಸಿಂಗರಿಸಿ, ಅಲಂಕೃತಗೊಂಡ ಕರಗವನ್ನು ತಲೆಯಮೇಲೆ ಹೊರುವ ಕರಗ ಪೂಜಾರಿಯು, ಎಲ್ಲೂ ಸಮತೋಲನವನ್ನು ತಪ್ಪದೆ, ಬಲಗೈನಲ್ಲಿ ಕತ್ತಿ (ಬಾಕು), ಎಡಗೈನಲ್ಲಿ ಮಂತ್ರದಂಡವನ್ನು ಹಿಡಿದು, ಘಂಟೆ ಪೂಜಾರಿಯ ಘಂಟೆ ಸದ್ದಿಗೆ, ವೀರಕುಮಾರರ “ಗೋವಿಂದ-ಗೋವಿಂದ” ಕೂಗಿಗೆ ತಾಳಬದ್ಧವಾಗಿ ಕುಣಿಯುವ ಆಚರಣೆ ಕರಗ ಶಕ್ತ್ಯೋತ್ಸವ ಎನಿಸಿಕೊಂಡಿದೆ, ಕರಗ ಪೂಜಾರಿಯು ಕಳಶವನ್ನು ತಲೆಯಮೇಲೆ ಹೊತ್ತು ಕುಣಿಯುವಾಗ ಎಂತಹ ನಾಸ್ತಿಕನ ಎದೆಯಲ್ಲೂ ಆಸ್ತಿಕತೆಯ ಪ್ರಜ್ಞೆಯನ್ನು ಬಡಿದೆಬ್ಬಿಸಿಬಿಡುತ್ತದೆ. “ಕರಗ” ಎಂದೊಡನೆ ಬೆಂಗಳೂರು ಕರಗ ನೆನಪಾಗುವುದು ಸಾಮಾನ್ಯ.. ಮೈಸೂರಿನ ದಸರ ಬಿಟ್ಟರೆ ಸಾಂಸ್ಕೃತಿಕ ಐತಿಹ್ಯವನ್ನು ಹೊಂದಿದ ಮತ್ತೊಂದು ಆಚರಣೆಯೇ ಬೆಂಗಳೂರಿನ ದ್ರೌಪತಾಂಭ ದೇವಿ ಕರಗ. ಬೆಂಗಳೂರು ಕರಗವನ್ನು ಸುಮಾರು 800 ವರುಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂಬ ಮಾಹಿತಿ ಧರ್ಮರಾಯಸ್ವಾಮಿ ದೇವಸ್ಥಾನದ ಮೂಲ ದಾಖಲೆಗಳಲ್ಲಿ ಉಲ್ಲೇಖಿತವಾಗಿದೆ. ಬೆಂಗಳೂರು ಕರಗದ ರೀತಿಯಲ್ಲೇ ಬೆಂಗಳೂರು ನಗರದ ಸುತ್ತ-ಮುತ್ತ ಕರಗವನ್ನು ಆಚರಿಸಿಕೊಂಡು ಬರುವ ಪದ್ಧತಿಯಿದೆ. ಮುಖ್ಯವಾಗಿ ಹೊಸಕೋಟೆ, ಮಾಲೂರು, ವರ್ತೂರು, ಕೆಂಗೇರಿ ಹಾಗೂ ಆನೇಕಲ್ ಭಾಗಗಳಲ್ಲಿ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗಿದೆ. ಈ ಎಲ್ಲಾ ಕರಗ ಆಚರಣೆಗಳು ಭೌಗೋಳಿಕವಾಗಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಿಸಲಾಗುವುದರಿಂದ ಹೆಚ್ಚು ಪ್ರಸಿದ್ಧಿ ಪಡೆದಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರುವ, ಹೊಸಕೋಟೆಯಿಂದ 12 ಕಿ.ಮೀ. ದೂರದಲ್ಲಿರುವ “ಮುಗಬಾಳ” ಗ್ರಾಮ ನನ್ನೂರು, ಕೇವಲ 1500 ಜನರಿರುವ ಊರದು. ಪ್ರತಿ ವರ್ಷದ ಶ್ರೀರಾಮನವಮಿಯ ದಿನದಿಂದ ಪ್ರಾರಂಭವಾಗಿ ಎಂಟು ದಿನಗಳ ಸಂಭ್ರಮಾಚರಣೆಯ ನಂತರ ಮುಗಿಯುವ ಕರಗಾಚರಣೆಯನ್ನು ಮುಗಬಾಳ ಗ್ರಾಮದ ವಿಶೇಷ ಸಂಪ್ರದಾಯವಾಗಿ ತಲೆತಲೆಮಾರುಗಳಿಂದ ಆಚರಿಸಿಕೊಂಡು ಬರಲಾಗಿದೆ. “ಮುಗಬಾಳ” ಎಂಬ ಪದವು “ಮೊಗಲ್+ಬಾಳ” ಎಂಬ ಪದಗಳ ಸಂಯೋಜನೆಯಿಂದ ವ್ಯುತ್ಪತ್ತಿಗೊಂಡಿದೆ ಎಂಬ ಅಭಿಪ್ರಯವಿದೆ, ಆದರೆ ಇದಕ್ಕೆ ಯಾವುದೇ ಆಧಾರಗಳ ಲಭ್ಯತೆಯಿಲ್ಲ. “ಬಾಳ” ಎಂದರೆ ಹಳ್ಳಿ ಎಂಬ ಅರ್ಥವನ್ನು ನೀಡುವುದರಿಂದ ಇದು ಮೊಗಲರು ಇದ್ದಂತಹ ಹಳ್ಳಿಯಿರಬೇಕು ಎಂಬ ಅಭಿಪ್ರಾಯವಿದೆ.
ಕರಗ ಆಚರಣೆಯನ್ನು ಊರಿನ ತಿಗಳ ಜನಾಂಗದವರು (ಜಾತಿ) ಪ್ರತೀ ವರ್ಷ ಚಾಚೂತಪ್ಪದೆ ಆಚರಿಸಿಕೊಂಡು ಬರುತ್ತಾರೆ. ತಿಗಳ ಜನಾಂಗದವರು ತಮ್ಮನ್ನು ದ್ರೌಪದಿ ದೇವಿಯ ಮಕ್ಕಳೆಂದು ಕರೆದುಕೊಳ್ಳುವುದರಿಂದ ತಮ್ಮ ಕುಲದ ಆದಿ ಶಕ್ತಿ ದ್ರೌಪದಿ ದೇವಿಯ ಆರಾಧನೆಯ ಸೂಚಕವಾಗಿ ಈ ಆಚರಣೆಯನ್ನು ನಡೆಸುತ್ತಿರುವುದಾಗಿ ಊರಿನ ಹಿರಿಯರು ನಂಬಿದ್ದಾರೆ. ಈ ಆಚರಣೆಯ ಕುರಿತು ಅಜ್ಜಿಯನ್ನು (ತಾಯಿಯ ತಾಯಿ) ಕೇಳಿದಾಗ ಅವರಿಂದ ಒಂದು ಸ್ವಾರಸ್ಯಕರ ಕಥೆಯೇ ಬಿಚ್ಚಿಕೊಂಡಿತು. ಅಜ್ಜಿ ಹೇಳಿದಂತೆ, ಮಹಾಭಾರತದಲ್ಲಿ ಪಾಂಡವರು-ಕೌರವರ ಯುದ್ಧಾನಂತರದಲ್ಲಿ 36 ವರ್ಷಗಳ ಆಳ್ವಿಕೆಯನ್ನು ನಡೆಸಿದ ಪಾಂಡವರು, ದ್ವಾಪರಯುಗದ ಅಂತ್ಯ ಸಮೀಪಿಸುತ್ತಿದ್ದಂತೆ ಭೂಲೋಕವನ್ನು ತ್ಯಜಿಸಿ, ಪುಷ್ಪಕ ವಿಮಾನವೇರಿ ಸ್ವರ್ಗಲೋಕಕ್ಕೆ ಹಿಂದಿರುಗಲು ಸನ್ನದ್ಧರಾಗುತ್ತಾರೆ. ಪಾಂಡವರೆಲ್ಲಾ ಪುಷ್ಪಕ ವಿಮಾನವೇರಿದ ನಂತರ ದ್ರೌಪದಿಯು ಇನ್ನೇನು ವಿಮಾನವನ್ನು ಏರಬೇಕು; ಅಷ್ಟರಲ್ಲಿ ತಿಮಿರಾಸುರನೆಂಬ ರಾಕ್ಷಸನು ವಿಮಾನವೇರುತ್ತಿದ್ದ ದ್ರೌಪದಿಯನ್ನು ಹಿಡಿದೆಳೆಯುತ್ತಾನೆ, ಅಷ್ಟರಲ್ಲಿ ವಿಮಾನವು ಭೂಲೋಕವನ್ನು ಬಿಟ್ಟು ಹೊರಟು ಹೋಗಿರುತ್ತದೆ. ಇತ್ತ ತಿಮಿರಾಸುರನ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ, ಅವನಿಂದ ಹೇಗಾದರೂ ಬಿಡುಗಡೆ ಪಡೆಯಬೇಕೆಂದು ನಿರ್ಧರಿಸಿದ ದ್ರೌಪದಿಯು, ನವಶಕ್ತಿಯ ಸ್ವರೂಪವಾದ ಕುಂಭವನ್ನು ತಲೆಯಮೇಲೆ ಹೊತ್ತು ತನ್ನ ಆದಿಶಕ್ತಿ ರೂಪವನ್ನು ತಾಳುತ್ತಾಳೆ (ದ್ರೌಪದಿಯನ್ನೇ ಆದಿಶಕ್ತಿ ಎಂದು ನಂಬಲಾಗಿದೆ), ತಿಮಿರಾಸುರನೊಂದಿಗೆ ಹೋರಾಡಲು ಸೈನ್ಯದ ಅವಶ್ಯಕತೆ ಎದುರಾದಾಗ, ತನ್ನ ದೇಹದ ವಿವಿಧ ಭಾಗಗಳಿಂದ ಶಸ್ತಾಸ್ತ್ರಗಳನ್ನು ಹಾಗೂ ಸೈನಿಕರನ್ನು ಸೃಷ್ಟಿಸುತ್ತಾಳೆ. ಅದರಂತೆ, ತಲೆಯಿಂದ ಯಜಮಾನನನ್ನು, ಹಣೆಯಿಂದ ಗಣಾಚಾರಿಯನ್ನೂ, ಕಿವಿಯಿಂದ ಗೌಡನನ್ನೂ, ಬಾಯಿಯಿಂದ ಘಂಟೆ ಪೂಜಾರಿಯನ್ನೂ ಹಾಗೂ ಬಾಹುಗಳಿಂದ ವೀರಕುಮಾರರನ್ನೂ ಸೃಷ್ಟಿಸುತ್ತಾಳೆ. ಇವರೆಲ್ಲರೂ ಒಟ್ಟುಗೂಡಿ ತಿಮಿರಾಸುರನೊಂದಿಗೆ ಹೋರಾಡಿ ಸಂಹರಿಸುತ್ತಾರೆ. ತಿಮಿರಾಸುರನ ಸಂಹಾರದ ನಂತರ ಶಾಂತಳಾಗುವ ಆದಿಶಕ್ತಿ ಮತ್ತೆ ದ್ರೌಪದಿ ರೂಪ ತಾಳುತ್ತಾಳೆ.
ಸ್ವರ್ಗಾರೋಹಣಕ್ಕೆ ಸಿದ್ಧಳಾಗಿ ನಿಂತ ದ್ರೌಪದಿಯನ್ನು ಕಂಡ ಸೈನಿಕರು ರೋಧಿಸುತ್ತಾರೆ, ಒಕ್ಕೊರಲಿನಿಂದ, ನಮ್ಮ ತಾಯಿಯಾದ ನೀನು ನಮ್ಮನ್ನು ಬಿಟ್ಟು ಹೋದರೆ ನಾವು ತಬ್ಬಲಿಗಳಾಗುತ್ತೇವೆ ಎಂದು ಬೇಡಿಕೊಳ್ಳುತ್ತಾರೆ. ಹರಿತವಾದ ಖಡ್ಗಗಳಿಂದ ತಮ್ಮ ಎದೆಗೆ ಜೋರಾಗಿ “ಡಿಕ್ ಡೀ – ಡಿಕ್ ಡೀ” ಎಂದು ಬಡಿದುಕೊಳ್ಳಲು ಶುರುಮಾಡುತ್ತಾರೆ. ಆಗ ದ್ರೌಪದಿಯು ಎಲ್ಲರನ್ನೂ ಸಮಾಧಾನಗೊಳಿಸಿ, ಪ್ರತಿವರ್ಷ ನೀವು ನನ್ನನ್ನು ಪೂಜಿಸಿರೆಂದು ಹೇಳುತ್ತಾಳೆ. ತನ್ನ ಬಳಿಯಲ್ಲಿದ್ದ ಕುಂಭವನ್ನು ನೀಡಿ, ಪೂಜಾ ಸಂದರ್ಭದಲ್ಲಿ ನಾನು ಈ ಕುಂಭದಲ್ಲಿ ಬಂದು ನೆಲೆಸುತ್ತೇನೆ ಎಂದು ಹೇಳಿ ಸ್ವರ್ಗಲೋಕಕ್ಕೆ ಹಿಂದಿರುಗುತ್ತಾಳೆ. ಅಂದಿನಿಂದ ಇಂದಿನವರೆಗೂ ಕರಗ ಆಚರಣೆಯು ತಿಗಳ ಜನಾಂಗದವರಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂಬ ನಂಬಿಕೆಯಿದೆ, ಈ ಕಥೆಯನ್ನು ಕೇಳುವಾಗ ತಿಮಿರಾಸುರ ವಧೆಯ ದೃಶ್ಯ ಕಣ್ಣಮುಂದೆ ಬಂದಿದ್ದು ನನಗಿನ್ನೂ ನೆನಪಿದೆ.
ಮುಗಬಾಳ ಗ್ರಾಮದ ಕರಗ ಆಚರಣೆಯಲ್ಲಿ ನಾವು ಚಿಕ್ಕ ಹುಡುಗರಿಂದ ಪಾಲ್ಗೊಳ್ಳುತ್ತಾ ಬಂದಿದ್ದೇವೆ, ಪ್ರತಿವರ್ಷ ರಾಮನವಮಿಯ ಹಬ್ಬಕ್ಕೆ ಊರಿಗೆ ಹೊರಟುಬಿಟ್ಟರೆ, ಮತ್ತೆ ಹಿಂದಿರುಗುತ್ತಿದ್ದದ್ದು ಕರಗ ಶಕ್ತ್ಯೋತ್ಸವ ಮುಗಿದ ಮೇಲೆಯೇ. ಹೇಗಿದ್ದರೂ ಬೇಸಿಗೆ ರಜೆ ಇರುತ್ತಿದ್ದರಿಂದ, ತಿಂಗಳು ಪೂರ ಬಿಡುವಿರುತ್ತಿತ್ತು. ರಜೆ ಕಳೆಯಲು ಕರಗ ಶಕ್ತ್ಯೋತ್ಸವ ವಿಶೇಷ ಅನುಭವಗಳನ್ನು ನೀಡುತ್ತಿತ್ತು. ರಾಮನವಮಿಯ ಪಾನಕದಿಂದ (ಕರಗದ ಮೊದಲನೆ ದಿನ) ಶುರುವಾಗುತ್ತಿದ್ದ ನಮ್ಮ ಓಡಾಟಗಳು, ಗಜಪಟವನ್ನು ಕೆಳಗಿಳಿಸುವವರೆಗೂ (ಕರಗ ಆಚರಣೆಯ ಕೊನೆಯ ದಿನ) ನಡೆಯುತ್ತಲೇ ಇರುತ್ತಿದ್ದವು. ಕರಗ ಆಚರಣೆಯ ಆರನೇ ದಿನ ಜಾತ್ರೆಯಲ್ಲಿ ಅದೆಷ್ಟು ಬಲೂನುಗಳನ್ನು ಬೇಕೆಂದೇ ಬಟ್ಟೆ ಪಿನ್ ಮೂಲಕ ಚುಚ್ಚಿ ‘ಡಬ್’ ಎನಿಸಿದ್ದೇವೋ ಲೆಕ್ಕವೇ ಇಲ್ಲ. ಆಗೆಲ್ಲಾ ಮಕ್ಕಳು ಹೇಗೆ ಕರಗದಲ್ಲಿ ಪಾಲ್ಗೊಳ್ಳಬೇಕೋ ಹಾಗೆ ನಮ್ಮನ್ನು ತೊಡಗಿಸಿಕೊಳ್ಳುತ್ತಿದ್ದೆವು, ಈಗ ದೊಡ್ಡ ಹುಡುಗರಾಗಿ ಕರಗ ಶಕ್ತ್ಯೋತ್ಸವವನ್ನು ಯಶಸ್ವಿಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ನಡೆಸಿಕೊಂಡು ಹೋಗುತ್ತೇವೆ. ಕರಗ ಆಚರಣೆ ಕೇವಲ ಒಂದೆರಡು ದಿನಗಳಲ್ಲಿ ಮುಗಿಯುವ ಆಚರಣೆಯಲ್ಲ, ಒಂದೊಂದು ಸ್ಥಳದಲ್ಲೂ ಒಂದೊಂದು ರೀತಿ ಆಚರಿಸಲ್ಪಡುತ್ತದೆ. ಆಚರಣೆಯ ವಿಶಿಷ್ಟತೆ, ಸಂಪ್ರದಾಯಗಳಿಗೆ ಅನುಗುಣವಾಗಿ ಶಕ್ತ್ಯೋತ್ಸವ ನಡೆಯುತ್ತದೆ. ಬೆಂಗಳೂರು ಕರಗ ಹನ್ನೊಂದು ದಿನಗಳವರೆಗೆ ನಡೆದರೆ, ಮುಗಬಾಳ ಗ್ರಾಮದ ಕರಗ ಎಂಟೇ ದಿನಗಳಿಗೇ ಮುಗಿಯುತ್ತದೆ. ಗಜಪಟದಿಂದ (ಧ್ವಜಾರೋಹಣ) ಪ್ರಾರಂಭವಾಗುವ ಕರಗ, ಕೊನೆಯದಾಗಿ ಗಜಪಟ ಇಳಿಸುವ ಮೂಲಕ (ಧ್ವಜಾವರೋಹಣ) ಕೊನೆಗೊಳ್ಳುತ್ತದೆ. ಕರಗ ಆಚರಣೆಗೂ ಮಹಾಭಾರತ ಪ್ರಸಂಗಗಳಿಗೂ ನಂಟು ಬೆಳೆಸಿಕೊಂಡಿರುವುದರಿಂದ, ಮಹಾಭಾರತದ ಪ್ರಸಂಗಗಳ ಪಠಣವೂ ಇಲ್ಲಿ ನಡೆಯುತ್ತದೆ. ಆದರೆ ಮಹಾಭಾರತದ ಆಯ್ದ ಭಾಗಗಳನ್ನು ಮಾತ್ರ ಕರಗಕ್ಕೆ ಅನ್ವಯವಾಗುವಂತೆ ಪಠಣ ಮಾಡಲಾಗುತ್ತದೆ. ಭರತಪೂಜಾರಿ ಭಾರತ ಪಠಣ ಮಾಡುವ ಜವಾಬ್ದಾರಿಯನ್ನು ಹೊತ್ತಿರುತ್ತಾನೆ.
ಮುಗಬಾಳ ಗ್ರಾಮದ ಕರಗ ಶಕ್ತ್ಯೋತ್ಸವದ ಆಚರಣೆಯನ್ನು ದಿನಗಳ ಆಧಾರದಲ್ಲಿ ಈ ಕೆಳಗಿನಂತೆ ವರ್ಗೀಕರಿಸಬಹುದು,
1. ಗಜಪಟ (ಧ್ವಜಾರೋಹಣ)
2. ಹಸಿಕರಗ
3. ವನವಾಸ
4. ಕಲ್ಯಾಣೋತ್ಸವ ಹಾಗೂ ದೀಪಗಳು
5. ಕರಗ
6. ಪೋತುಲರಾಜ ಗಾವು
7. ವಸಂತೋತ್ಸವ
8. ಮಹಾಮಂಗಳಾರತಿ ಹಾಗೂ ಧ್ವಜಾವರೋಹಣ
ಮೊದಲೇ ಹೇಳಿದಂತೆ ಮುಗಬಾಳ ಗ್ರಾಮದ ಕರಗವು ಎಂಟು ದಿನಗಳು ವಿಜೃಂಭಣೆಯಿಂದ ನಡೆಯುವ ಆಚರಣೆ, ಆಚರಣೆಯ ಎಂಟು ದಿನಗಳು ವಿಶೇಷ ಅನುಭವವನ್ನು ನೀಡುವ ಜೊತೆಗೆ, ವಿಭಿನ್ನ ಆಚರಣೆಗಳನ್ನು ತೆರೆದಿಡುತ್ತಾ ಹೋಗುತ್ತದೆ. ಬಹುತೇಕ ಎಲ್ಲಾ ಆಚರಣೆಗಳು ಸೂರ್ಯಾಸ್ತದ ನಂತರ ಕತ್ತಲಲ್ಲಿ ನಡೆಯುವುದು ಕರಗ ಆಚರಣೆಯ ಮತ್ತೊಂದು ವಿಶೇಷತೆ. ಮಹಾಭಾರತದ ಕೆಲವು ಸನ್ನಿವೇಶಗಳನ್ನೇ ಇಲ್ಲೂ ಉಳಿಸಿಕೊಂಡು ಬಂದಿರುವುದರಿಂದ, ಕೆಲ ಆಚರಣೆಗಳು ಅದರ ಛಾಯೆಯೇನೋ ಎಂದೆನಿಸಿಬಿಡುತ್ತದೆ. ಉದಾಹರಣೆಗೆ ಪಾಂಡವರು, ಕೌರವರಿಂದ ಜೂಜಿನಲ್ಲಿ ಸೋತ ನಂತರ ವನವಾಸಕ್ಕೆ ಹೊರಡುವ ಸನ್ನಿವೇಶವನ್ನು ಕರಗ ಆಚರಣೆಯಲ್ಲಿ “ವನವಾಸ” ಎಂದು ಸೂಚಕವಾಗಿ ಆಚರಿಸಲಾಗುತ್ತದೆ.
ಕರಗ ಶಕ್ತ್ಯೋತ್ಸವ ಪ್ರಾರಂಭವಾಗಲು ಕೆಲ ದಿನಗಳು ಉಳಿದಿರುವಾಗ ಊರಿನ ಎಲ್ಲಾ ಜಾತಿಯ ಮುಖ್ಯಸ್ಥರು ಕರಗ ನಡೆಯುವ ಧರ್ಮರಾಯ ಸ್ವಾಮಿ ದೇವಸ್ಥಾನದ ಮುಂದೆ ಸಭೆ ಸೇರುತ್ತಾರೆ. ಸಭೆಯ ಆರಂಭಕ್ಕೂ ಮೊದಲು, ದೇವಸ್ಥಾನದ ಪ್ರಧಾನ ಅರ್ಚಕ (ಕರಗ ಪೂಜಾರಿ) ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಸಭೆಯ ಆರಂಭಕ್ಕೆ ಚಾಲನೆ ನೀಡುತ್ತಾನೆ. ಸಭೆಯಲ್ಲಿ ಮೊದಲಿಗೆ ಕರಗ ನಡೆಯುವ ದಿನಾಂಕವನ್ನು ಯಜಮಾನ, ಗಣಾಚಾರಿ ಹಾಗೂ ಗೌಡನ ಸಮ್ಮುಖದಲ್ಲಿ ಘೋಷಿಸಲಾಗುತ್ತದೆ. ಈ ಮೂವರೂ ಕರಗ ಆಚರಣೆಯನ್ನು ಪ್ರಾರಂಭದಿಂದ ಕೊನೆಯವರೆಗೂ ಸುಸೂತ್ರವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಆಚರಣೆಯ ಬೆನ್ನೆಲುಬಾಗಿ ನಿಂತು ಪ್ರತಿ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರನ್ನು ಪ್ರಮುಖರು ಎಂದು ಕರೆಯುವ ಸಂಪ್ರದಾಯವಿದೆ. ಕರಗ ಶಕ್ತ್ಯೋತ್ಸವದಲ್ಲಿ ಕರಗ ನಡೆಯುವ ಮುನ್ನಾ ದಿನ ‘ದೇವ ವಿವಾಹ’ ಕಾರ್ಯ ನಡೆಸುವುದು ಆಚರಣೆಯ ಮತ್ತೊಂದು ವಿಶೇಷತೆ, ಧರ್ಮರಾಯ ಸ್ವಾಮಿ ಹಾಗೂ ದ್ರೌಪದಿ ದೇವಿಯ ವಿವಾಹ ಮಹೋತ್ಸವ ನಡೆಸುವ ಸಲುವಾಗಿ ಸಭೆಯಲ್ಲಿ ವಿವಾಹದ ದಿನವನ್ನು ನಿಶ್ಚಿಯಿಸಲಾಗುತ್ತದೆ. ಸಭೆಯಲ್ಲಿ ಈ ತೀರ್ಮಾನಗಳಿಗೆ ಎಲ್ಲರೂ ಸಮ್ಮತಿ ಸೂಚಿಸುತ್ತಾರೆ. ಶ್ರೀರಾಮನವಮಿ ಹಬ್ಬ ಮುಕ್ತಾಯವಾಗಿ ಸರಿಯಾಗಿ ಐದನೇ ದಿನದಂದು ಕರಗ ನಡೆಯುವ ವಿಚಾರ ಈ ಮೊದಲೇ ಎಲ್ಲರಿಗೂ ತಿಳಿದಿರುತ್ತದೆ, ಆದರೆ ಸಭೆ ಸೇರಿದ ಎಲ್ಲರ ಸಮ್ಮತಿ ಕೇಳುವ ಸಂಪ್ರದಾಯವನ್ನು ಆಚರಣೆಯ ಒಂದು ಭಾಗವಾಗಿ ನಡೆಸಿಕೊಂಡು ಬರಲಾಗಿದೆ. ಸಭೆಯಲ್ಲಿ ನಾನಾ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆಚರಣೆಯ ಸಂಧರ್ಭದಲ್ಲಿ ಕೆಲವು ಸೇವಾಕಾರ್ಯಗಳನ್ನು ಹರಕೆಯ ರೂಪದಲ್ಲಿ ಭಕ್ತರು ವಹಿಸಿಕೊಳ್ಳುವ ವಾಡಿಕೆ ಇದೆ. ಕರಗಕ್ಕೆ ಹೂವಿನ ಸೇವೆ, ಕರಗ ದೇವಸ್ಥಾನಕ್ಕೆ ಹೂವಿನ ಅಲಂಕಾರ ಸೇವೆ, ಊರಿನ ಮಸೀದಿಗೆ ಬೆಳಕಿನ ಸೇವೆ, ವಾದ್ಯಗೋಷ್ಟಿ ಸೇವೆ, ಭಕ್ತರಿಗೆ ಪ್ರಸಾದ ಸೇವೆ, ಪಲ್ಲಕ್ಕಿ ಸೇವೆ, ಊರಿನ ಪ್ರಮುಖ ದೇವಸ್ಥಾನಗಳಿಗೆ ಹೂವಿನ ಅಲಂಕಾರ ಸೇವೆ, ಊರಿನ ಮುಖ್ಯ ರಸ್ತೆಗಳಲ್ಲಿ ಬೆಳಕಿನ ಸೇವೆ ಇತ್ಯಾದಿ ಸೇವೆಗಳಿಗೆ ಹರಕೆ ಹೊತ್ತ ಭಕ್ತರು ತಮ್ಮ ಸ್ವಂತ ಖರ್ಚಿನ ಮೂಲಕ ಸೇವಾ ಕಾರ್ಯವನ್ನು ವಹಿಸಿಕೊಳ್ಳುತ್ತಾರೆ. ಇಷ್ಟೇ ಅಲ್ಲಾ, ಮಾದಿಗ-ಹೊಲೆಯ ಜಾತಿಯವರಿಂದಲೂ ಕರಗಕ್ಕೆ ಸೇವೆಗಳು ನಡೆಯುತ್ತವೆ, ತಮಟೆ ಸೇವೆ, ಬಾಂಕ ಊದುವ ಸೇವೆ, ಪಲ್ಲಕ್ಕಿ ಸೇವೆಗಳನ್ನು ನಡೆಸುವ ಅನುಮತಿ ಇದೆ. ಕರಗ ಆಚರಣೆಯಲ್ಲಿ ಮುಸ್ಲೀಮರೂ ಭಾಗವಹಿಸುವುದು ಸೌಹಾರ್ದತೆಯ ಪ್ರತೀಕವಾಗಿದೆ.
ಕರಗದ ಹಾಗೂ ಕಲ್ಯಾಣೋತ್ಸವದ ದಿನಾಂಕವನ್ನು ಗೊತ್ತು ಮಾಡಿದ ನಂತರ, ಯಾರು ಯಾವ ಸೇವಾಕಾರ್ಯವನ್ನು ವಹಿಸಿಕೊಂಡಿರುತ್ತಾರೋ ಅದರ ಮಾಹಿತಿಯನ್ನೊಳಗೊಂಡ ಲಗ್ನಪತ್ರಿಕೆಯನ್ನು ರಚಿಸಿ, ಮುದ್ರಣಗೊಂಡ ಲಗ್ನಪತ್ರಿಕೆಗಳನ್ನು ಊರಿನ ಎಲ್ಲಾ ಮನೆಗಳಿಗೂ ತಲುಪಿಸಲಾಗುತ್ತದೆ. ಈ ಕಾರ್ಯವನ್ನು “ಸಾರುವುದು” ಎಂದು ಕರೆಯುತ್ತಾರೆ. ಸಾರುವ ಕೆಲಸವನ್ನು ‘ಸಾರುವವ’ (ಸುದ್ದಿ ಸಾರುವವ) ಮಾಡಿ ಮುಗಿಸಬೇಕಾಗುತ್ತದೆ. ತಮಟೆ ಸೇವೆ ಒಪ್ಪಿಕೊಂಡ ಭಕ್ತರು ಸಾರುವವನೊಂದಿಗೆ ಮನೆ ಮನೆಗಳಿಗೂ ಹೋಗಿ ಲಗ್ನ ಪತ್ರಿಕೆಗಳನ್ನು ಹಂಚಿ ಬರುತ್ತಾರೆ. ಲಗ್ನಪತ್ರಿಕೆಗಳನ್ನು ಸ್ವೀಕರಿಸಿದ ಮನೆಯವರು, ತಮ್ಮ ಬಂಧು-ಬಾಂಧವರಿಗೆ ಸುದ್ದಿ ಮುಟ್ಟಿಸಲು ಲಗ್ನಪತ್ರಿಕೆಗಳ ಪ್ರತಿಯನ್ನು ಅವರಿರುವ ಸ್ಥಳಗಳಿಗೆ ಹೋಗಿ ತಲುಪಿಸಿ ಬರುತ್ತಾರೆ. ಕರಗ ಶಕ್ತ್ಯೋತ್ಸವಕ್ಕೆ ಹಣಕಾಸಿನ ಅವಶ್ಯಕತೆಯಿರುವುದರಿಂದ ಊರಿನ ಪ್ರತಿ ಮನೆಗಳಿಂದಲೂ ಇಂತಿಷ್ಟು ಸೇವಾ ಮೊತ್ತವನ್ನಾಗಿ ಸಂಗ್ರಹಿಸಲಾಗುತ್ತದೆ.
ಶ್ರೀರಾಮನವಮಿ ಹಬ್ಬಕ್ಕೆ ಏಳು ದಿನಗಳಿರುವಂತೆಯೇ ಕರಗವನ್ನು ಹೊರುವ ಕರಗ ಪೂಜಾರಿಯು ದೇವಸ್ಥಾನದಲ್ಲಿ ಬಂದು ನೆಲೆಸಲು ಪ್ರಾರಂಭಿಸುತ್ತಾನೆ, ಕರಗ ಪೂಜಾರಿಯು ಈ ಸಮಯದಲ್ಲಿ ಎಷ್ಟು ಕಟ್ಟು ನಿಟ್ಟಿನ ಆಚರಣೆಯನ್ನು ನಡೆಸುತ್ತಾನೆಂದರೆ, ಕರಗ ದೇವಸ್ಥಾನದಲ್ಲಿ ನೆಲೆಸಲು ಪ್ರಾರಂಭಿಸಿದ ದಿನದಿಂದ, ಗಜಪಟ ಇಳಿಸುವ (ಧ್ವಜಾವರೋಹಣ) ದಿನದವರೆಗೂ ತನ್ನ ಮನೆಗೆ ಹಿಂದಿರುಗುವಂತಿಲ್ಲ, ಮಡಿವಂತಿಕೆಯನ್ನು ಕಟ್ಟುನಿಟ್ಟಾಗಿ ಆಚರಿಸಬೇಕಾಗುತ್ತದೆ.. ದಿನ ನಿತ್ಯದಂತೆ ಸೇವಿಸುತ್ತಿದ್ದ ಆಹಾರವನ್ನು ಮುಟ್ಟುವಂತಿಲ್ಲ, ಆಹಾರವಾಗಿ ದೇವಸ್ಥಾನದ ಮೂರ್ತಿಗಳಿಗೆಂದು ಇಟ್ಟ ಹಣ್ಣು – ಹಂಪಲುಗಳನ್ನು ಮಾತ್ರ ಪ್ರಸಾದ ರೂಪದಲ್ಲಿ ಸೇವಿಸಬೇಕಾಗುತ್ತದೆ. ಕರಗ ಹೊರುವ ಪೂಜಾರಿಯ ಪತ್ನಿಯೂ ಕೂಡ ಕೆಲವು ಕಟ್ಟು ನಿಟ್ಟಿನ ಸಂಪ್ರದಾಯಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಕರಗ ಪ್ರಾರಂಭದ ದಿನದಿಂದ ಕೊನೆಗೊಳ್ಳುವ ದಿನದವರೆಗೂ ತನ್ನ ಮಾಂಗಲ್ಯವನ್ನು ಕಳಚಿ ಮನೆಯ ದೇವರ ಗುಡಿಯಲ್ಲಿರುವ ದೇವರ ಮುಂದಿಡಬೇಕಾಗುತ್ತದೆ. ಮುತ್ತೈದೆಯಾಗಿ ಕಂಗೊಳಿಸುತ್ತಿದ್ದ ಆಕೆ, ಆ ಎಂಟು ದಿನಗಳು ವಿಧವೆಯಂತೆ ಬಿಳಿ ಸೀರೆಯುಟ್ಟು, ಹಣೆಗೆ ಕುಂಕುಮವಿಡದೆ, ಕೈಗಳಿಗೆ ಬಳೆ ತೊಡದೆ, ಹೂ ಮುಡಿಯದೆ ಮನೆಯಿಂದ ಹೊರಗೆ ಬಾರದೆ ಗೃಹಬಂಧನದಲ್ಲಿರಬೇಕಾಗುತ್ತದೆ. ಕರಗವನ್ನು ನೋಡುವ ಅವಕಾಶವೂ ಆಕೆಗಿರುವುದಿಲ್ಲ. ಕರಗ ಪೂಜಾರಿಯ ಪತ್ನಿಯು ವಿಧವೆಯಂತೆ ಗೃಹಬಂಧನದಲ್ಲಿರಲು ಹಿರಿಯರು ಕೆಲ ಕಾರಣಗಳನ್ನು ನೀಡುತ್ತಾರೆ, ಒಂದೊಮ್ಮೆ ಕರಗದ ಪೂಜಾರಿ ಕರಗವನ್ನು ಹೊತ್ತು ಸಾಗುವಾಗ ಕರಗದ ಕಳಶವನ್ನು ಆಯತಪ್ಪಿ ಬೀಳಿಸಿದ್ದೇ ಆದರೆ ಆತನ ತಲೆಯನ್ನು ಕಡಿದು, ಮುಂಡದಿಂದ ಚಿಮ್ಮುವ ರಕ್ತವನ್ನು ಕರಗಕ್ಕೆ ಎರಚಲಾಗುತ್ತದೆ, ಇದೇ ಕಾರಣಕ್ಕಾಗಿ ತನ್ನ ಪುರುಷ ಮತ್ತೆ ಹಿಂದಿರುಗಿ ಬರುವ ಸಾಧ್ಯತೆಗಳು ಇಲ್ಲವಾದ್ದರಿಂದ ಆಕೆ ವಿಧವೆಯಂತೆ ಕಾಲ ಸವೆಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಕರಗದ ಇತಿಹಾಸದಲ್ಲಿ ಇದೂವರೆಗೂ ಯಾರೂ ಕರಗವನ್ನು ಬೀಳಿಸಿದ ಘಟನೆಗಳಿಲ್ಲ, ಇದಕ್ಕೆ ಆ ಆದಿಶಕ್ತಿಯ ಅನುಗ್ರಹವೇ ಕಾರಣ ಎಂದು ನಂಬಲಾಗಿದೆ.
ಕರಗದ ಪೂಜಾರಿಯು ತನ್ನ ಮನೆಯಿಂದ ತಂದ ಆಹಾರವನ್ನು ಸೇವಿಸಬಾರದೆಂಬ ನಿಷೇಧವಿದ್ದರೂ ಪ್ರಸಾದದ ರೂಪದಲ್ಲಿ ಸೇವಿಸುವ ಅವಕಾಶವಿದೆ. ಕರಗ ಪೂಜಾರಿಯ ಪತ್ನಿಯು ತಾನೇ ಸ್ವತಃ ಭತ್ತವನ್ನು ಕುಟ್ಟಿ, ಅಕ್ಕಿಯನ್ನು ಬೇರ್ಪಡಿಸಿ ಬೆಲ್ಲದನ್ನದ ರೂಪದಲ್ಲಿ ಪ್ರಸಾದವನ್ನು ಕಳುಹಿಸಿಕೊಡಬಹುದಾಗಿದೆ. ಆದರೆ ಕರಗ ಮುಗಿಯುವವರೆಗೂ ತನ್ನ ಗಂಡನನ್ನು ನೋಡುವ ಅವಕಾಶ ಮಾತ್ರ ಆಕೆಗಿರುವುದಿಲ್ಲ, ಕರಗದ ಪೂಜಾರಿಯ ಪತ್ನಿಯು ಆತನನ್ನು ನೋಡುವುದರಿಂದ ಆಕೆಯ ದೃಷ್ಟಿ ಆತನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿ, ಲೌಕಿಕ ಆಸಕ್ತಿಗಳಿಗೆ ಒಳಗಾಗಬಹುದು ಎಂಬ ಕಾರಣಕ್ಕೆ ಆಕೆಯನ್ನು ಕರಗ ಆಚರಣೆಯಿಂದ ಸಂಪೂರ್ಣ ದೂರವಿರಿಸಲಾಗಿದೆ.
ರಾಮನವಮಿ ಹಬ್ಬದ ಮುನ್ನಾ ದಿನ ಕರಗ ಆಚರಣೆಯ ಪ್ರಮುಖರಾದ ಯಜಮಾನರು, ಗಣಾಚಾರಿ, ಗೌಡ, ಕರಗದ ಪೂಜಾರಿ, ವೀರಕುಮಾರರು ದೇವಸ್ಥಾನದ ಮುಂದೆ ಸಭೆ ಸೇರುತ್ತಾರೆ. ರಾಮನವಮಿಯ ಹಬ್ಬವನ್ನು ಆಚರಿಸಿ ನಂತರ ಆಚರಣೆಗೆ ಚಾಲನೆ ನೀಡುತ್ತಾರೆ. ಊರಿನ ಎಲ್ಲಾ ಗ್ರಾಮಸ್ಥರಿಗೆ ಆಚರಣೆಯ ಮೊದಲನೇ ದಿನದ ಸುಳಿವನ್ನು ಆ ಸಭೆಯಲ್ಲಿ ನೀಡಲಾಗುತ್ತದೆ.
ಆಚರಣೆಯ ಸ್ಥೂಲ ವಿವರಣೆ.
ಎಂಟು ದಿನಗಳ ಈ ಆಚರಣೆಯನ್ನು ಅರ್ಥೈಸಿಕೊಳ್ಳಬೇಕಾದರೆ ಆಚರಣೆಯ ವಿವಿಧ ಸ್ವರೂಪಗಳನ್ನು ಪ್ರತಿಯೊಂದು ದಿನವೂ ನಡೆಯುವ ಶಾಸ್ತ್ರಗಳು, ಸಂಪ್ರದಾಯಗಳು, ಭಾಗವಹಿಸುವ ಪ್ರಮುಖ ವ್ಯಕ್ತಿಗಳ ಪರಿಚಯದ ಆಧಾರದಲ್ಲಿ ಸ್ಥೂಲವಾಗಿ ವಿವರಿಸುವುದರೊಂದಿಗೆ ಅರ್ಥೈಸಿಕೊಳ್ಳಬಹುದು. ಇದೇ ಕಾರಣಕ್ಕಾಗಿ ಕರಗ ಆಚರಣೆಯ ಮೊದಲ ದಿನದಿಂದ ಕೊನೆಯ ದಿನದವರೆಗೂ ನಡೆಯುವ ಎಲ್ಲಾ ಸಂಪ್ರದಾಯಗಳ ವಿವರಣೆಯನ್ನು ಮುಂದಿನ ಭಾಗದಲ್ಲಿ ವಿವರಿಸಲಾಗಿದೆ.
1. ಗಜಪಟ :
ಆಚರಣೆಯ ಮೊದಲ ದಿನದ ಮುಖ್ಯ ಆಚರಣೆಯೇ ಗಜಪಟ (ಧ್ವಜಾರೋಹಣ). ಮಹಾಭಾರತ ಯುದ್ಧದಲ್ಲಿ ಪಾಂಡವರ ಸೇನೆಯು ಆಂಜನೇಯನ ಚಿತ್ರವನ್ನು ಸೇನೆಯ ಧ್ವಜವನ್ನಾಗಿ ಹೊಂದಿದ್ದರು.. ಯುದ್ಧ ಶುರು ಮಾಡುವ ಮುನ್ನ ಧ್ವಜಾರೋಹಣ ಮಾಡಿ ಕೃಷ್ಣನು ಪಾಂಚಜನ್ಯವನ್ನು ಊದಿ ತಮ್ಮ ಸೇನೆಯನ್ನು ಹುರಿದುಂಬಿಸಿ ಯುದ್ಧಕ್ಕೆ ಸನ್ನದ್ದರಾಗಿಸುತ್ತಿದ್ದರು. ಅದೇ ರೀತಿ ಕರಗದ ಆಚರಣೆಗಳು ಶುರುವಾಗುವುದು ಧ್ವಜಾರೋಹಣದ ಮುಖಾಂತರವೇ. ಇಲ್ಲಿ ಬಾವುಟವನ್ನೇ ಗಜಪಟ ಎಂದು ಕರೆಯುವ ವಾಡಿಕೆ ಇದೆ, ಗಜಪಟ ಎಂದರೆ ದೊಡ್ಡ ಬಾವುಟ ಎಂಬ ಅರ್ಥವಿದ, ಇಲ್ಲೂ ಕೂಡ ಆಂಜನೇಯನೇ ಧ್ವಜದಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಾನೆ.
ರಾಮನವಮಿಯ ಪೂಜೆಯ ನಂತರ ಸಂಜೆ 7 ಗಂಟೆಯ ಸುಮಾರಿಗೆ ಕರಗ ದೇವಸ್ಥಾನದಲ್ಲಿ (ಧರ್ಮರಾಯ ಸ್ವಾಮಿ ದೇವಸ್ಥಾನ) ಪೂಜೆ ಸಲ್ಲಿಸಿ, ತಮಟೆ ಸದ್ದುಗಳ ಮೂಲಕ ಊರಿನ ಗ್ರಾಮಸ್ಥರೊಂದಿಗೆ ಯಜಮಾನರು, ಗಣಾಚಾರಿ, ಗೌಡ, ಕರಗಪೂಜಾರಿ, ವೀರಕುಮಾರರು ಹಾಗೂ ಬ್ರಾಹ್ಮಣರು ಊರಿನ ಕೊರ್ದಪ್ಪ ವಂಶದ ಹಿರಿಯ ವ್ಯಕ್ತಿಯ ಮನೆಗೆ ತೆರಳುತ್ತಾರೆ. ಕೊರ್ದಪ್ಪ ವಂಶಸ್ಥರು ಗಜಪಟ ಸೇವೆಯನ್ನು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಮನೆಯ ಆವರಣವನ್ನು ಪ್ರವೇಶಿಸುವ ಎಲ್ಲರಿಗೂ ಶ್ರೀರಾಮನವಮಿಯ ಪಾನಕವನ್ನು ನೀಡಲಾಗುತ್ತದೆ. ಕರಗ ಪೂಜಾರಿಯ ಪಾದಗಳನ್ನು ಶುಭ್ರಗೊಳಿಸಿ ಮನೆಗೆ ಬರಮಾಡಿಕೊಳ್ಳಲಾಗುತ್ತದೆ. ಯಜಮಾನರು, ಗಣಾಚಾರಿ, ಗೌಡ, ಬ್ರಾಹ್ಮಣರ ಸಮ್ಮುಖದಲ್ಲಿ ಕೊರ್ದಪ್ಪನವರ ಮನೆಯಲ್ಲಿರುವ ಗಜಪಟಕ್ಕೆ ಪೂಜೆ ಸಲ್ಲಿಸಿ ಪ್ರಸಾದವನ್ನು ಹಂಚುತ್ತಾರೆ. ಪೂಜೆಯ ನಂತರ ಸುಮಾರು 20 ಅಡಿಗಳಷ್ಟು ಎತ್ತರದ ಗಜಪಟವನ್ನು ಗ್ರಾಮಸ್ಥರು ಹಾಗೂ ವೀರಕುಮಾರರು ಹೊತ್ತುಕೊಂಡು ಊರಿನಲ್ಲಿ ಮೆರವಣಿಗೆ ಸಾಗುತ್ತಾರೆ. ಕರಗ ಪೂಜಾರಿಯೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಮೆರವಣಿಗೆ ಮುಗಿದ ನಂತರ ಸುಮಾರು 9 ಗಂಟೆ ಸಮಯಕ್ಕೆ ದೇವಸ್ಥಾನ ತಲುಪುವ ಪ್ರಮುಖರು, ಗಜಪಟವನ್ನು ಹೊತ್ತು ದೇವಸ್ಥಾನವನ್ನು ಮೂರು ಬಾರಿ ಸುತ್ತುತ್ತಾರೆ. ನಂತರ ದೇವಸ್ಥಾನದ ದೇವ ಮೂಲೆಗೆ ಸರಿಯಾಗಿ ಗಜಪಟವನ್ನು ನೆಟ್ಟು ಅದಕ್ಕೆ ಮಂತ್ರಗಳ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ಇದರೊಂದಿಗೆ ಗಜಪಟ ನೆಡುವ ಮೂಲಕ ಕರಗಾಚರಣೆಗೆ ನಾಂದಿಯಾಗುತ್ತದೆ. ಗಜಪಟದ ವಿಧಿ ವಿಧಾನಗಳ ನಂತರ ಕರಗಪೂಜಾರಿ ಹಾಗೂ ವೀರಕುಮಾರರು ದೇವಸ್ಥಾನದಲ್ಲೇ ಇರಬೇಕಾಗುತ್ತದೆ.
2. ಹಸಿಕರಗ:
ಆದಿಶಕ್ತಿಯ ಸ್ವರೂಪಳಾದ ದ್ರೌಪದಿಯು ಕಳಶದ (ಕುಂಭ) ರೂಪದಲ್ಲಿ ಭಕ್ತರ ಪೂಜೆಯನ್ನು ಸ್ವೀಕರಿಸಲು ಧರೆಗಿಳಿದು ಬರುವ ಮೊದಲ ದಿನವೇ ಹಸಿಕರಗಾಚರಣೆ. ನೀರಿನಲ್ಲಿ ಜನಿಸುವ ಕಳಶವು ಆ ಮೂಲಕ ಭಕ್ತರ ಕೈಸೇರಿ ಪೂಜಿಸಲ್ಪಡುತ್ತದೆ ಎಂಬ ಪ್ರತೀತಿ ಇದೆ. ಊರಿನ ಆಂಜನೇಯ ದೇವಸ್ಥಾನದ ಬಳಿಯಿರುವ ಹಸಿಕರಗ ಕೊಳದ ಮಧ್ಯಭಾಗದಲ್ಲಿ ಕಳಶವು ಉಗಮವಾಗುತ್ತದೆ. ಉಗಮವಾದ ಕಳಶವನ್ನು ಹಸಿಕರಗದ ರೂಪದಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಹಸಿಕರಗವು ಕರಗ ಶಕ್ತ್ಯೋತ್ಸವದ ಎರಡನೇ ದಿನ ಆಚರಿಸಲ್ಪಡುತ್ತದೆ. ಗಜಪಟದ ಮಾರನೆ ದಿನ ಬೆಳಗ್ಗೆ ಕರಗದ ಪೂಜಾರಿ, ವೀರಕುಮಾರರು ಹಾಗೂ ಭರತ ಪೂಜಾರಿಯು ಊರ ಹೊರಗಿರುವ ಬಾವಿಯಲ್ಲಿ ಸ್ನಾನಮುಗಿಸಿ, ಮಡಿಯನ್ನುಟ್ಟು ಕರಗ ದೇವಸ್ಥಾನಕ್ಕೆ ಹಿಂದಿರುಗಿ, ದ್ರೌಪದಿ ದೇವಿ ಹಾಗೂ ಧರ್ಮರಾಯ ಸ್ವಾಮಿ ಮೂರ್ತಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಭರತ ಪೂಜಾರಿಯು ಕರಗ ಆಚರಣೆಗೆ ಪ್ರವೇಶಿಸುವುದು ಹಸಿಕರಗದ ದಿನದಂದೇ. ಭರತ ಪೂಜಾರಿಯ ಪಾತ್ರ ಈ ಆಚರಣೆಯಲ್ಲಿ ಬಹುಮುಖ್ಯವಾಗಿರುತ್ತದೆ. ಇಡೀ ಕರಗಾಚರಣೆಯ ಶಕ್ತಿ ಆವಾಹನೆಯಲ್ಲಿ ಭರತ ಪೂಜಾರಿ ಮುಖ್ಯ ಪಾತ್ರ ವಹಿಸುತ್ತಾನೆ. ಭಾರತ ಪಠಣ (ಮಹಾಭಾರತದ ಕೆಲವು ಘಟನೆಗಳನ್ನು ಹಾಡುವುದು) ವೀರಕುಮಾರರಿಗೆ ಮೈದುಂಬಿಸುವುದು, ಕರಗ ಪೂಜಾರಿಗೆ ಮೈದುಂಬಿಸುವುದು, ಪೋತುಲರಾಜ ವೇಷಧಾರಿಗೆ ಮೈದುಂಬಿಸುವುದು ಹಾಗೂ ಋಣಾತ್ಮಕ ಶಕ್ತಿಗಳನ್ನು ನಿಗ್ರಹಿಸುವುದು ಭರತಪೂಜಾರಿಯ ಕರ್ತವ್ಯ. ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ರಾತ್ರಿಯವರೆಗೂ ಯಾವುದೇ ಆಚರಣೆಗಳಿರುವುದಿಲ್ಲ, ಆದರೆ ಹಸಿಕರಗಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿರುತ್ತದೆ. ಸೂರ್ಯಾಸ್ತ ಸಮೀಪಿಸುತ್ತಿದ್ದಂತೆ ಊರಿನ ಚೆನ್ನಮ್ಮನವರ ವಂಶಸ್ಥರು ಕರಗದ ಪವಿತ್ರ ಕಳಶವನ್ನು ಅರಿಶಿನ ಲೇಪಿತ ಬಟ್ಟೆಯಲ್ಲಿ ಸುತ್ತಿ, ಅಂಜನೇಯ ದೇವಸ್ಥಾನದ ಬಳಿಯಿರುವ ಹಸಿಕರಗ ಕೊಳದಲ್ಲಿ ಯಾರಿಗೂ ಕಾಣದಂತೆ ವಿಸರ್ಜಿಸಿ ಬರುತ್ತಾರೆ. ಈ ಕಾರ್ಯವು ಅತೀ ಗೌಪ್ಯವಾಗಿ ನಡೆಯುತ್ತದೆ. ಊರಿನ ಹಿರಿಯ ವ್ಯಕ್ತಿಯ ಮಾಹಿತಿಯಂತೆ, ಕಳಶವನ್ನು ಸ್ವತಃ ಅವರೂ ಸಹ ನೋಡಿಲ್ಲವಂತೆ. ಈ ಕಾರ್ಯದಲ್ಲಿ ಗೌಪ್ಯತೆಯನ್ನು ಇಂದಿಗೂ ಕಾಪಾಡಿಕೊಂಡು ಬರಲಾಗಿದೆ. ಇದೇ ಕಾರಣಕ್ಕಾಗಿ ಕಳಶದ ದರ್ಶನ ಕಷ್ಟಸಾಧ್ಯ. ಇತ್ತ ಕರಗ ಪೂಜಾರಿ, ಭರತ ಪೂಜಾರಿ ಹಾಗೂ ವೀರಕುಮಾರರೆಲ್ಲರೂ ಊರಿನ ಹೊರಗಡೆ ಇರುವ ಬಾವಿಯ ಬಳಿ ಹೋಗಿ ಸ್ನಾನ ಮುಗಿಸಿ ಮತ್ತೆ ಕರಗ ದೇವಸ್ಥಾನಕ್ಕೆ ಹಿಂದಿರುಗುತ್ತಾರೆ. ಇಲ್ಲಿ ಮೊದಲ ಬಾರಿಗೆ ಭರತ ಪೂಜಾರಿಯು ಕರಗ ಪೂಜಾರಿಗೆ ಮೈದುಂಬಿಸುತ್ತಾನೆ. ದ್ರೌಪದಿಯನ್ನು ಮೈದುಂಬಿಕೊಂಡ ಕರಗದ ಪೂಜಾರಿಯ ಸಮೇತರಾಗಿ, ಯಜಮಾನರು, ಗಣಾಚಾರಿ, ಗೌಡ ಹಾಗೂ ವೀರಕುಮಾರರು ಚೆನ್ನಮ್ಮನವರ ವಂಶಸ್ಥರ ಮನೆ ತಲುಪುತ್ತಾರೆ.
ಚೆನ್ನಮ್ಮನವರ ವಂಶಸ್ಥರು ಸ್ತ್ರೀ ವೇಷಧಾರಿ ಕರಗಪೂಜಾರಿಯ ಕಾಲುಗಳನ್ನು ಶುಭ್ರಗೊಳಿಸಿ ಮನೆಯೊಳಗೆ ಬರಮಾಡಿಕೊಳ್ಳುತ್ತಾರೆ, ಮುತ್ತೈದೆಗೆ ಯಾವ ರೀತಿ ಗೌರವ ಸಲ್ಲಿಸುತ್ತಾರೋ ಅದೇ ರೀತಿಯ ಗೌರವ ಕರಗದ ಪೂಜಾರಿಗೂ ಸಲ್ಲಿಸಲಾಗುತ್ತದೆ. ಮುಖಕ್ಕೆ ಅರಿಶಿನ ಹಚ್ಚಿ, ತಲೆಯ ಮೇಲೆ ಅಕ್ಷತೆ ಸುರಿದು, ಮಡಿಲು ತುಂಬಿಸುವ ಕಾರ್ಯಗಳು ನಡೆಯುತ್ತವೆ. ಇದಾದ ನಂತರ, ವೀರಕುಮಾರರಿಗೆ ಅಲುಗುಗಳನ್ನು (ಖಡ್ಗ) ಪೂಜಿಸಿ ನೀಡಲಾಗುತ್ತದೆ. ಅಲ್ಲಿಂದ ನೇರವಾಗಿ ಹಸಿಕರಗದ ಕೊಳದ ಬಳಿ ಎಲ್ಲಾ ಪ್ರಮುಖರು ಹಾಗೂ ಗ್ರಾಮಸ್ಥರು ಬಂದು ಸೇರುತ್ತಾರೆ. ಮೊದಲಿಗೆ ಕೊಳದ ದಂಡೆಯಲ್ಲಿ ನಿಂತು ಕರಗ ಪೂಜಾರಿಯು ಗಂಗೆ ಪೂಜೆ ನೆರವೇರಿಸುತ್ತಾರೆ. ಪೂಜೆಯ ನಂತರ ವೀಳ್ಯದೆಲೆಯಲ್ಲಿ ಕರ್ಪೂರವನ್ನಿಟ್ಟು ನೀರಿನಲ್ಲಿ ತೇಲಿಸಿಬಿಡಲಾಗುತ್ತದೆ. ತೇಲಿಸಿಬಿಟ್ಟ ವೀಳ್ಯದೆಲೆಯು ಎಲ್ಲಿ ಹೋಗಿ ನಿಲ್ಲುವುದೋ ಆ ಸ್ಥಳದಲ್ಲಿ ಕಳಶ (ಕುಂಭ) ಉದ್ಭವವಾಗಿರುತ್ತದೆ ಎಂದು ನಂಬಲಾಗುತ್ತದೆ. ದ್ರೌಪದಿಯನ್ನು ಮೈದುಂಬಿಕೊಂಡ ಕರಗದ ಪೂಜಾರಿಯು ಆ ಕಳಶವನ್ನು ತರಲು ವೀಳ್ಯದೆಲೆ ನಿಂತಿರುವ ಜಾಗಕ್ಕೆ ಸಾಗಿ ಅಲ್ಲಿ ಉದ್ಭವಿಸಿರುವ ಕಳಶವನ್ನು ಅರಿಶಿನ ಲೇಪಿತ ಬಟ್ಟೆಯಲ್ಲಿ ಸುತ್ತಿ ದಡಕ್ಕೆ ತರುತ್ತಾನೆ. ದಡಕ್ಕೆ ಹೊತ್ತು ತಂದ ಕಳಶವನ್ನು ಅಂಜನೇಯ ದೇವಸ್ಥಾನದ ಗರ್ಭಗುಡಿಯಲ್ಲಿ ಹೂವಿನ ಅಲಂಕಾರಕ್ಕಾಗಿ ತೆಗೆದುಕೊಂಡು ಹೋಗಲಾಗುತ್ತದೆ. ಇಲ್ಲಿಯೂ ಸಹ ಕಳಶವನ್ನು ಯಾರಿಗೂ ಕಾಣದಂತೆ ಅರಿಶಿನ ಲೇಪಿನ ಬಟ್ಟೆಯಲ್ಲಿ ಸುತ್ತಿ ಮರೆಮಾಚುತ್ತಾರೆ.
ಆಂಜನೇಯ ದೇವಸ್ಥಾನದ ಗರ್ಭಗುಡಿಯಲ್ಲಿ ಕಳಶಕ್ಕೆ ಹಸಿಕರಗದ ಅಲಂಕಾರಗಳು ನಡೆಯುತ್ತಿದ್ದರೆ, ಇತ್ತ ಹೊರಗಡೆ ವೀರಕುಮಾರರಿಗೆ ಕಂಕಣ ಕಟ್ಟುವ ಕಾರ್ಯ ನಡೆಯುತ್ತದೆ. ಕಂಕಣ ಕಟ್ಟಿಸಿಕೊಳ್ಳಲು ಮಡಿವಂತಿಕೆಯ ಅವಶ್ಯಕತೆ ಇರುವುದರಿಂದ ಮತ್ತೆ ಅದೇ ಕೊಳದಲ್ಲಿ ಸ್ನಾನ ಮುಗಿಸಿ ಬರಬೇಕಾಗುತ್ತದೆ. ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಊರಿನ ಅಗಸರು ಅಲಗುಗಳನ್ನು (ಖಡ್ಗ) ಇಡುವುದಕ್ಕಾಗಿ ಶುಭ್ರ ಬಟ್ಟೆಗಳನ್ನು ನೆಲದ ಮೇಲೆ ಹಾಸಿರುತ್ತಾರೆ. ವೀರಕುಮಾರರು ತಮ್ಮ ತಮ್ಮ ಅಲಗುಗಳನ್ನು ಆ ಬಟ್ಟೆಯ ಮೇಲಿಟ್ಟು ಒಬ್ಬೊಬ್ಬರಾಗಿ ಕಂಕಣ ಹಾಗೂ ಜೆನಿವಾರಗಳನ್ನು ತೊಡಿಸಿಕೊಳ್ಳಲು ಬ್ರಾಹ್ಮಣರ ಬಳಿ ತೆರಳುತ್ತಾರೆ. ತ್ರಿಶೂಲಾಕಾರದ ವಿಭೂತಿಯ ನಾಮವನ್ನು ಹಣೆಗೆ ಮುದ್ರೆ ಒತ್ತಿದ ನಂತರ ಬಾಹ್ಮಣರು ಕಂಕಣ ಹಾಗೂ ಜನಿವಾರಗಳನ್ನು ವೀರಕುಮಾರರಿಗೆ ತೊಡಿಸುತ್ತಾರೆ. ಈ ಕಾರ್ಯದ ನಂತರ ವೀರಕುಮಾರರು ತಮ್ಮ ಅಲಗು ಸೇವೆಗಳನ್ನು ಪ್ರಾರಂಭಿಸಬಹುದಾಗಿದೆ. ಅಲಗು ಸೇವೆ ಎಂದರೆ, ಹರಿತವಾದ ಕತ್ತಿಗಳನ್ನು ತಮ್ಮ ಎದೆಯ ಮೇಲೆ ಡಿಕ್-ಡೀ, ಡಿಕ್-ಡೀ ಎಂಬ ಮಂತ್ರದೊಂದಿಗೆ ರಭಸವಾಗಿ ಬಡಿದುಕೊಳ್ಳುವುದು ಎಂದರ್ಥ. ಅಲಗು ಸೇವೆ ಮಾಡುವಾಗ ವೀರ ಕುಮಾರರು ತಾವು ಯಾವ ಕಂಕಣವನ್ನು ತೊಟ್ಟಿರುತ್ತಾರೋ ಆ ದೇವತೆಗಳನ್ನು ಅವರ ಮೈದುಂಬಿಸಲಾಗುತ್ತದೆ. ಇಲ್ಲಿ ಪಾಂಡವರನ್ನೇ ದೇವತೆಗಳೆಂದು ನಂಬಲಾಗಿದೆ, ಪಂಚ ಪಾಂಡವರಾದ ಧರ್ಮರಾಯ, ಭೀಮ, ಅರ್ಜುನ, ನಕುಲ ಹಾಗೂ ಸಹದೇವರುಗಳು ಕಂಕಣ ತೊಟ್ಟ ವೀರ ಕುಮಾರರ ಮೈದುಂಬುತ್ತಾರೆ ಎಂದು ನಂಬಲಾಗಿದೆ. ಬೇರೆ ಬೇರೆ ಮನೆತನಗಳಲ್ಲಿ ಗುರುತಿಸಿಕೊಂಡ ವೀರಕುಮಾರರು, ಆ ಮನೆತನಕ್ಕೆ ನೀಡಲಾದ ಕಂಕಣವನ್ನು ಮಾತ್ರ ಧರಿಸಬೇಕಾಗುತ್ತದೆ. ಇದಾದ ನಂತರ ಮೊದಲ ಬಾರಿಗೆ ಕರಗದ ಆಚರಣೆಯಲ್ಲಿ ಪೋತುಲರಾಜನ ಆಗಮನವಾಗುತ್ತದೆ.
ಪೋತುಲರಾಜನು ದ್ರೌಪದಿಯ ಸಹೋದರನೆಂದು ನಂಬಲಾಗಿರುವುದರಿಂದ ಆತನಿಗೂ ಈ ಆಚರಣೆಯಲ್ಲಿ ಮುಖ್ಯ ಸ್ಥಾನವನ್ನು ನೀಡಲಾಗಿದೆ ಎಂಬ ಅಭಿಪ್ರಾಯ ಕೆಲವರದ್ದಾದರೆ, ಇನ್ನೂ ಕೆಲವರು ಪೋತುಲರಾಜನು ತಿಮಿರಾಸುರನನ್ನು ಸಂಹರಿಸಲು ದ್ರೌಪದಿಗೆ ಸಹಾಯ ಮಾಡಿದ್ದರಿಂದ ಆತನಿಗೂ ಕರಗಾಚರಣೆಯಲ್ಲಿ ವಿಶಿಷ್ಟ ಸ್ಥಾನಮಾನ ನೀಡಲಾಗಿದೆ ಎಂದು ನಂಬಿದ್ದಾರೆ. ಇಲ್ಲಿ ಪೋತುಲರಾಜನ ಬಗ್ಗೆ ಗಮನಿಸಬೇಕಾದ ಅಂಶವೆಂದರೆ, ಭೀಮನು ಎಂಟು ಸಿಂಹಗಳ ಶಕ್ತಿಯನ್ನು ಹೊಂದಿದ್ದರೆ, ಪೋತಲರಾಜನು ಹನ್ನೆರಡು ಸಿಂಹಗಳ ಶಕ್ತಿಯನ್ನು ಹೊಂದಿದ್ದ ಎಂದು ಪೋತುಲರಾಜ ಗಾವಿನ ಸಂದರ್ಭದಲ್ಲಿ ಭರತ ಪೂಜಾರಿ ವಿವರಿಸುತ್ತಾನೆ. ಹಸಿಕರಗಕ್ಕೆ ಹೂವಿನ ಅಲಂಕಾರವೆಲ್ಲಾ ಮುಗಿದು ದೇವಸ್ಥಾನದಿಂದ ಹೊರ ಬರುವ ಮೊದಲು ಪೋತಲುರಾಜ ವೇಷಧಾರಿಗೆ ಭರತ ಪೂಜಾರಿಯು ಮೈದುಂಬಿಸುತ್ತಾನೆ.
ಆಂಜನೇಯ ದೇವಸ್ಥಾನದಲ್ಲಿ ಕಳಶಕ್ಕೆ ಹೂವಿನ ಅಲಂಕಾರವೆಲ್ಲಾ ಮುಗಿದ ಮೇಲೆ, ಹಸಿಕರಗವೂ ಗರ್ಭಗುಡಿಯಿಂದ ಹೊರಬರುತ್ತದೆ. ಅಲ್ಲಿ ನೆರೆದಿರುವ ಎಲ್ಲಾ ಗ್ರಾಮಸ್ಥರು ಹಸಿಕರಗವು ಗರ್ಭಗುಡಿಯಿಂದ ಹೊರಬರುತ್ತಿದ್ದಂತೆ, ‘ಗೋವಿಂದ-ಗೋವಿಂದ’ ಎಂದು ಕೂಗಿಕೊಂಡು ಹಸಿಕರಗದ ದರ್ಶನಕ್ಕೆ ಮುಗಿಬೀಳುತ್ತಾರೆ. ಇತ್ತ ವೀರಕುಮಾರರಿಗೆ ಮೈದುಂಬಿ ‘ಡಿಕ್-ಡೀ, ಡಿಕ್-ಡೀ’ ಎಂದು ಖಡ್ಗದಿಂದ ತಮ್ಮ ಎದೆಗೆ ಬಡಿದುಕೊಳ್ಳಲು ಶುರುಮಾಡುತ್ತಾರೆ. ಪೋತುಲ ರಾಜನು ‘ಕ್ಯಾವ್sss ಕ್ಯಾವ್sssss’ ಎಂದು ಅರಚಲು ಶುರುಮಾಡುತ್ತಾನೆ. ಇಡೀ ಸ್ಥಳವೇ ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದೇಳುತ್ತದೆ. ಕರಗದ ಪೂಜಾರಿಯು ಹಸಿಕರಗವನ್ನು ಕೈಯಲ್ಲಿಡಿದು ಕರಗದ ಮಧ್ಯದಲ್ಲಿ ನಿಲ್ಲುತ್ತಾರೆ, ಆತನ ಬಲ ಹಾಗೂ ಎಡಭಾಗದಲ್ಲಿ ಚೆನ್ನಮ್ಮನವರ ಇಬ್ಬರು ವಂಶಸ್ಥರು ಕರಗವನ್ನು ಹಿಡಿದು ಮುಂದೆ ಮುಂದೆ ಸಾಗುತ್ತಾರೆ. ಹಸಿಕರಗವು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪೂಜೆ ಸ್ವೀಕರಿಸುತ್ತದೆ. ನಂತರ ಚೆನ್ನಮ್ಮನವರ ಮನೆಯ ಮುಂದೆ ಸ್ವಲ್ಪ ಹೊತ್ತು ತಮಟೆ ಸದ್ದಿಗೆ ಕುಣಿಯುವ ಹಸಿಕರಗವು, ಅಲ್ಲಿಯೂ ಪೂಜೆ ಸ್ವೀಕರಿಸಿ ಕರಗದ ದೇವಸ್ಥಾನ ಆವರಣ ತಲುಪುತ್ತದೆ. ಸ್ವಲ್ಪ ಸಮಯ ಘಂಟೆ ನಾದಕ್ಕೆ ಹಾಗೂ ತಮಟೆ ಸದ್ದಿಗೆ ತಾಳಬದ್ಧವಾಗಿ ಕುಣಿಯುವ ಹಸಿಕರಗವು ದೇವಸ್ಥಾನವನ್ನು ಮೂರು ಸುತ್ತು ಸುತ್ತಿ ದೇವಸ್ಥಾನದ ಗರ್ಭಗುಡಿ ಸೇರುವ ಮೂಲಕ ಸುಮಾರು ಹನ್ನೆರಡು ಗಂಟೆಗೆ ಹಸಿಕರಗವು ಮುಕ್ತಾಯಗೊಳ್ಳುತ್ತದೆ. ಇಲ್ಲಿಗೆ ಕರಗ ಶಕ್ತ್ಯೋತ್ಸವದ ಎರಡನೇ ದಿನವು ಯಶಸ್ವಿಯಾಗಿ ಮುಗಿಯುತ್ತದೆ.
3. ವನವಾಸ :
ಹಸಿಕರಗವು ದೇವಸ್ಥಾನದ ಗರ್ಭಗುಡಿ ಸೇರಿದ ಮೇಲೆ, ಕರಗದಲ್ಲಿ ಭಾಗವಹಿಸುವ ಪ್ರಮುಖರೆಲ್ಲರೂ ದೇವಸ್ಥಾನದಲ್ಲೇ ವಿಶ್ರಾಂತಿ ಪಡೆಯಬೇಕಾಗುತ್ತದೆ, ವಿಶ್ರಾಂತಿಯ ನಂತರ ಅಂದರೆ ಕರಗ ಶಕ್ತ್ಯೋತ್ಸವದ ಮೂರನೆಯ ದಿನ ಬೆಳಗ್ಗೆ 4 ಗಂಟೆ ಸುಮಾರಿಗೆ, ಕರಗದ ಪೂಜಾರಿ, ಘಂಟೆ ಪೂಜಾರಿ, ಭರತ ಪೂಜಾರಿ, ಪೋತುಲರಾಜ, ವೀರಕುಮಾರರೆಲ್ಲರೂ ವನವಾಸಕ್ಕೆ ಹೊರಡಲು ಸಿದ್ಧರಾಗುತ್ತಾರೆ. ಮಹಾಭಾರತದಲ್ಲಿ ಪಾಂಡವರು ವನವಾಸಕ್ಕೆ ಹೋಗುವಾಗ ತಮ್ಮ ಆಯುಧಗಳನ್ನೆಲ್ಲಾ ತ್ಯಜಿಸುತ್ತಾರೆ. ಅದೇ ರೀತಿ ಇಲ್ಲೂ ಕೂಡ ವೀರಕುಮಾರರು ತಮ್ಮ ಬಳಿ ಇದ್ದ ಅಲಗುಗಳನ್ನೆಲ್ಲಾ (ಖಡ್ಗ) ದೇವಸ್ಥಾನದಲ್ಲಿ ದ್ರೌಪದಿ ಮೂರ್ತಿಯ ಮುಂದೆ ಇಟ್ಟು ವನವಾಸಕ್ಕೆ ಹೊರಡುತ್ತಾರೆ. ವನವಾಸ ಆಚರಣೆಯು ಮಹಾಭಾರತದ ವನವಾಸವನ್ನು ಸಾಂಕೇತಿಕವಾಗಿ ಸೂಚಿಸುವ ಆಚರಣೆಯಾಗಿದೆ.
ಬೆಳಗ್ಗೆ 4 ಗಂಟೆಗೆ ದೇವಸ್ಥಾನದಿಂದ ಯಾರ ಕಣ್ಣಿಗೂ ಕಾಣದಂತೆ ಹೊರಡುವ ಪ್ರಮುಖರು, ಊರಿನ ಹೊರಗಡೆಯಿರುವ ಏಳು ಬಾವಿಗಳಲ್ಲಿ ಸ್ನಾನ ಮುಗಿಸಿ ವನವಾಸವನ್ನು ಆರಂಭಿಸುತ್ತಾರೆ. ನಿರ್ಜನ ಪ್ರದೇಶಗಳಲ್ಲಿ ಅಲೆದಾಡುತ್ತಾರೆ. ಈ ಸಮಯದಲ್ಲಿ ಪ್ರಮುಖರನ್ನು ಬಿಟ್ಟರೆ, ಊರಿನ ಯಾವ ವ್ಯಕ್ತಿಯೂ ಜೊತೆಯಲ್ಲಿರುವುದಿಲ್ಲ. ವನವಾಸವನ್ನು ಮುಗಿಸಿ ಹಿಂದಿರುಗಿದ ನಂತರ, ಸಂಜೆ 5 ಗಂಟೆಯ ಸುಮಾರಿಗೆ ಮತ್ತೆ ಊರ ಹೊರಗಿನ ಬಾವಿಯ ಬಳಿ ಬಂದು ಸ್ನಾನ ಮುಗಿಸಿ ಶುಭ್ರರಾಗುತ್ತಾರೆ, ಅಲ್ಲಿಗೆ ವನವಾಸವು ಮುಗಿದಂತಾಗುತ್ತದೆ. ವನವಾಸ ಮುಗಿಸಿದವರನ್ನು ಮತ್ತೆ ಊರಿಗೆ ಕರೆದುಕೊಂಡು ಬರುವ ಸಲುವಾಗಿ ಊರಿನ ಮಾದಿಗ ಜನಾಂಗಕ್ಕೆ ಸೇರಿದವರು ತಮಟೆಗಳನ್ನು ಬಡಿಯುತ್ತಾ ಬಾವಿಯ ಬಳಿ ಸಾಗುತ್ತಾರೆ.
ತಮಟೆಗಾರರು ವನವಾಸದಲ್ಲಿರುವವರನ್ನು ಊರಿಗೆ ಕರೆದುಕೊಂಡು ಬರಲು ತೆರಳಿದ ಮೇಲೆ, ಇತ್ತ ದೇವಸ್ಥಾನದ ಸುತ್ತಲೂ ವನವಾಸಕ್ಕೆಂದು ಹೊರಟ ವ್ಯಕ್ತಿಗಳ ಮನೆಯವರೆಲ್ಲರೂ ಒಲೆಗಳನ್ನು ನಿರ್ಮಿಸಿ ಅಲ್ಲೇ ಬೆಲ್ಲದನ್ನವನ್ನು ತಯಾರಿಸುತ್ತಾರೆ. ವನವಾಕ್ಕೆ ಹೋದವರು ಬೆಳಗ್ಗಿನಿಂದ ಯಾವುದೇ ಆಹಾರವನ್ನು ಸ್ವೀಕರಿಸಿರುವುದಿಲ್ಲವಾದ್ದರಿಂದ ಅವರಿಗೆ ಪ್ರಸಾದದ ರೂಪದಲ್ಲಿ ಆಹಾರವನ್ನು ನೀಡುವ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ. ಕರಗದ ಪ್ರಮುಖರೆಲ್ಲಾ ಮರಳಿ ಊರನ್ನು ಪ್ರವೇಶಿಸಿದ ಮೇಲೆ ಊರಿನ ತಿಗಳ ಜನಾಂಗದ ಮನೆಗಳಲ್ಲಿ ಭಿಕ್ಷೆ ಬೇಡಲು ತೆರಳುತ್ತಾರೆ. ಭಿಕ್ಷೆಯ ರೂಪದಲ್ಲಿ ತಿಗಳ ಜನಾಂಗದವರು ಹಣ್ಣು-ಹಂಪಲು, ಅಕ್ಕಿ, ಬೆಲ್ಲವನ್ನು ದಾನವಾಗಿ ನೀಡುತ್ತಾರೆ. ದಾನವಾಗಿ ತಂದ ಪದಾರ್ಥಗಳನ್ನು ದೇವಸ್ಥಾನಕ್ಕೆ ತಂದು, ಪೂಜೆ ಸಲ್ಲಿಸಿ, ಬೆಲ್ಲದನ್ನವನ್ನು ತಯಾರಿಸುತ್ತಾರೆ. ಬೆಲ್ಲದನ್ನವನ್ನು ಪ್ರಸಾದದ ರೂಪದಲ್ಲಿ ಅಲ್ಲಿ ನೆರೆದಿರುವ ಭಕ್ತಾದಿಗಳಿಗೆ ಹಂಚಲಾಗುತ್ತದೆ. ವನವಾಸ ಮುಗಿಸಿ ಹಿಂದಿರುಗಿದ ಮನೆಯವರು ತಯಾರಿಸಿದ ಬೆಲ್ಲದನ್ನವನ್ನೂ ಕೂಡ ಪ್ರಸಾದದ ರೂಪದಲ್ಲಿ ಸೇವಿಸುತ್ತಾರೆ.
ಸಂಜೆ 8 ಗಂಟೆಗೆ ಭರತ ಪೂಜಾರಿಯು ಮಹಾಭಾರತದ ಕೆಲವು ಭಾಗಗಳನ್ನು ಹಾಡುಲು ಶುರು ಮಾಡುತ್ತಾನೆ, ರಾತ್ರಿ 11 ಗಂಟೆಯವರೆಗೂ ನಡೆಯುವ ಈ ಕಾರ್ಯಕ್ರಮವನ್ನು ಊರಿನ ಎಲ್ಲಾ ಭಕ್ತಾದಿಗಳು ಕುಳಿತು ಕೇಳುತ್ತಾರೆ. ಕರಗ ಆಚರಣೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಪಾಂಡವವರು ಹಾಗೂ ದ್ರೌಪದಿಯ ಬಗೆಗೆ ಕೆಲವು ಹಾಡುಗಳನ್ನು ಹಾಡುವ ಮೂಲಕ ಭಾರತ ಪಠಣವನ್ನು ಮುಕ್ತಾಯಗೊಳಿಸಲಾಗುತ್ತದೆ. ಇದರೊಂದಿಗೆ ಮೂರನೆ ದಿನದ ಪ್ರಮುಖ ಆಚರಣೆ ಯಶಸ್ವಿಯಾಗಿ ಮುಕ್ತಾಯವಾಗುತ್ತದೆ.
4. ಕಲ್ಯಾಣೋತ್ಸವ ಹಾಗೂ ದೀಪಗಳು :
ಕರಗ ಶಕ್ತ್ಯೋತ್ಸವ ಆಚರಣೆಯ ನಾಲ್ಕನೇ ದಿನವನ್ನು ಕಲ್ಯಾಣೋತ್ಸವವನ್ನಾಗಿ ಆಚರಿಸಲಾಗುತ್ತದೆ. ಇಲ್ಲಿ ಜೇಷ್ಠ ಪಾಂಡವನಾದ ಧರ್ಮರಾಯನಿಗೂ ದ್ರೌಪದಿಗೂ ಕಲ್ಯಾಣ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ. ಬೆಳಗ್ಗಿನ ಜಾವ ತಿಗಳ ಜನಾಂಗಕ್ಕೆ ಸೇರಿದ ಎಲ್ಲಾ ಮನೆಗಳಲ್ಲಿ ಕಲ್ಯಾಣೋತ್ಸವಕ್ಕೆ ತಂಬಿಟ್ಟಿನ ಆರತಿಯನ್ನು (ಅಕ್ಕಿಯನ್ನು ಕುಟ್ಟಿ ಸಿದ್ಧಮಾಡಿದ ಸಿಹಿ ಪದಾರ್ಥ) ಸಿದ್ಧಗೊಳಿಸಿಕೊಳ್ಳುವ ಕಾರ್ಯ ಪ್ರಾರಂಭವಾಗುತ್ತದೆ. ಮನೆಗಳಲ್ಲಿ ಮದುವೆ ಸಂಭ್ರಮವಿರುತ್ತದೆ. ಮನೆಯ ಹೆಣ್ಣುಮಗಳು ತಂಬಿಟ್ಟಿನ ಆರತಿಯನ್ನು ತಲೆಯಮೇಲೆ ಹೊತ್ತು ದೇವಸ್ಥಾನಕ್ಕೆ ಸಾಗುವ ಸಂಪ್ರದಾಯವಿರುವುದರಿಂದ ಸರ್ವಾಲಂಕರ ಭೂಷಿತಳಾಗಿ ಕಂಗೊಳಿಸುತ್ತಾಳೆ. ತಂಬಿಟ್ಟಿನ ಆರತಿಯನ್ನು ಸಿದ್ಧಗಿಳಿಸಲು ಎಲ್ಲಾ ಮನೆಗಳಲ್ಲಿಯೂ ಅಕ್ಕಿಯನ್ನು ನೆನಹಾಕುತ್ತಾರೆ. ನೆನಸಿದ ಅಕ್ಕಿಯನ್ನು ಒನಕೆಯಿಂದ ಕುಟ್ಟಿ ಅಕ್ಕಿಹಿಟ್ಟು ಸಿದ್ಧಮಾಡಿಕೊಳ್ಳಲಾಗುತ್ತದೆ. ಬೆಲ್ಲದ ಪಾಕ ತೆಗೆದು ಅಕ್ಕಿಹಿಟ್ಟನ್ನು ಅದರೊಳಗೆ ಸೇರಿಸಿ ನಯವಾಗಿ ಕೈಯಡಿಸಬೇಕಾಗುತ್ತದೆ. ಒಂದು ವೇಳೆ ತಂಬಿಟ್ಟಿನ ಸಿದ್ಧತೆ ಸರಿಯಾಗಿ ಮಾಡಿಕೊಳ್ಳದಿದ್ದರೆ ಆ ಮನೆಯವರು ದೀಪೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶವನ್ನೇ ಕಳೆದುಕೊಳ್ಳಬೇಕಾಗುತ್ತದೆ. ನಾವೆಲ್ಲಾ ಚಿಕ್ಕವರಿದ್ದಾಗ ಈ ತಂಬಿಟ್ಟಿಗಾಗೇ ಕಾಯುತ್ತಿದ್ದದ್ದು ನೆನಪಿದೆ. ಈಗಲೂ ತಂಬಿಟ್ಟು ನಮ್ಮೆಲ್ಲರ ಅಚ್ಚುಮೆಚ್ಚಿನ ಸಿಹಿ ಪದಾರ್ಥ.
ತಂಬಿಟ್ಟನ್ನು ಸಿದ್ಧ ಮಾಡಿಕೊಂಡ ಮನೆಯವರು ತಂಬಿಟ್ಟಿನ ಮೇಲ್ಭಾಗದಲ್ಲಿ ನಿಂಬೆಹಣ್ಣಿನ ಸಿಪ್ಪೆಯಿಂದ ಮಾಡಿದ ದೀಪವನ್ನು ಇಟ್ಟು, ಪಾತ್ರೆಯಲ್ಲಿ ತಂಬಿಟ್ಟಿನಾರತಿ ಇರಿಸುತ್ತಾರೆ. ಪಾತ್ರೆಯನ್ನು ಹೂಗಳಿಂದ ಸಿಂಗರಿಸಲಾಗುತ್ತದೆ. ಇತ್ತ ಊರಿನ ಎಲ್ಲಾ ಮನೆಯಲ್ಲೂ ಸಿದ್ಧಮಾಡಿಟ್ಟುಕೊಂಡ ತಂಬಿಟ್ಟಿನಾರತಿಗಳನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲು ತಮಟೆ ಬಡಿಯುವವನು ಪ್ರತಿ ಮನೆಗಳಿಗೆ ತೆರಳುತ್ತಾನೆ. ಮನೆಯ ಎದುರಿಗೆ ಬಂದು ನಿಲ್ಲುವ ತಮಟೆ ಬಡಿಯುವಾತ ಮನೆಯ ಹೆಣ್ಣುಮಗಳು ತಂಬಿಟ್ಟಿನಾರತಿಯನ್ನು ತಲೆಯ ಮೇಲೆ ಹೊತ್ತು ಬರುವಂತೆ ಹೇಳುತ್ತಾನೆ. ಅಲ್ಲಿಂದ ನೇರವಾಗಿ ಊರ ಯಜಮಾನನ ಮನೆಗೆ ತೆರಳುತ್ತಾರೆ. ಕಲ್ಯಾಣೋತ್ಸವ ಸೇವೆಯನ್ನು ಊರಿನ ಯಜಮಾನನು ನೆರವೇರಿಸುವುದರಿಂದ ಆತನ ಮನೆಯಲ್ಲೇ ಎಲ್ಲರೂ ಸೇರಬೇಕಾಗುತ್ತದೆ. ತಮಟೆಗಾರನು ತಂಬಿಟ್ಟಿನ ಆರತಿಯನ್ನು ಹೊತ್ತ ಹೆಂಗಸರನ್ನೆಲ್ಲಾ ಊರಿನ ಯಜಮಾನರ ಮನೆಯ ಬಳಿ ಸೇರಿಸಿದ ನಂತರ, ಕರಗ ದೇವಸ್ಥಾನಕ್ಕೆ ಹಿಂದಿರುಗುತ್ತಾನೆ. ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಊರ ಯಜಮಾನನ ಮನೆಗೆ ಹೊರಡಲು ಸಿದ್ಧರಾಗಿ ನಿಂತ ಕರಗ ಪೂಜಾರಿ, ಭರತ ಪೂಜಾರಿ, ಪೋತುಲರಾಜ ಹಾಗೂ ವೀರಕುಮಾರರನ್ನು ಅಲ್ಲಿಂದ ತಮಟೆ ಸದ್ದಿನ ಮೂಲಕ ಯಜಮಾನನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಊರ ಯಜಮಾನನ ಮನೆಯನ್ನು ತಲುಪಿದ ಪ್ರಮುಖರನ್ನು ಸ್ವಾಗತಿಸುವ ಯಜಮಾನನ ಮನೆಯವರು ಕರಗದ ಪೂಜಾರಿಯ ಕಾಲುಗಳನ್ನು ಶುಭ್ರಗೊಳಿಸಿ ಮನೆಯೊಳಗೆ ಕರೆದುಕೊಳ್ಳುತ್ತಾರೆ. ನಂತರ ಕರಗ ಪೂಜಾರಿಯನ್ನು ದೇವರ ಮುಂದೆ ಕೂರಿಸಿ ದ್ರೌಪದಿ ದೇವಿಯನ್ನು ಮೈದುಂಬಿಸಲಾಗುತ್ತದೆ. ಮೈದುಂಬಿದ ಕರಗದ ಪೂಜಾರಿಗೆ ಅರಿಶಿನ ಶಾಸ್ತ್ರ ಮಾಡಿ, ಮಡಿಲು ತುಂಬಿಸಲಾಗುತ್ತದೆ. ಅರಿಶಿನ ಶಾಸ್ತ್ರ ಮುಗಿದ ನಂತರ, ತಂಬಿಟ್ಟಿನಾರತಿಯನ್ನು ಹೊತ್ತ ಹೆಂಗಸರ ಸಮೇತರಾಗಿ ಕರಗಪೂಜಾರಿಯು ದೇವಸ್ಥಾನದ ಮುಂದೆ ಇರುವ ಅಗ್ನಿಕುಂಡದ ಬಳಿ ಬಂದು ನಿಲ್ಲುತ್ತಾನೆ. ವೀರಕುಮಾರರು, ಗ್ರಾಮಸ್ಥರೆಲ್ಲರೂ ಅಲ್ಲಿ ನೆರೆದಿರುತ್ತಾರೆ. ಭರತ ಪೂಜಾರಿಯು ಕರಗದ ಪೂಜಾರಿಯನ್ನು ಮೊದಲಿಗೆ ಅಗ್ನಿಕುಂಡ ಪ್ರವೇಶಿಸುವಂತೆ ತಿಳಿಸುತ್ತಾನೆ. ದ್ರೌಪದಿ ದೇವಿಯನ್ನು ಮೈದುಂಬಿಕೊಂಡ ಕರಗದ ಪೂಜಾರಿಯು ಅಗ್ನಿಕುಂಡವನ್ನು ಪ್ರವೇಶಿಸುತ್ತಾನೆ, ಆತನ ಹಿಂದೆಯೇ ವೀರಕುಮಾರರು, ತಂಬಿಟ್ಟಿನ ಆರತಿಯನ್ನು ಹೊತ್ತ ಹೆಂಗಸರು ಅಗ್ನಿಕುಂಡವನ್ನು ಪ್ರವೇಶಿಸುತ್ತಾರೆ. ಇದಾದ ನಂತರ ಕರಗದ ಪೂಜಾರಿಯು ದೇವಸ್ಥಾನವನ್ನು ಮೂರು ಬಾರಿ ಸುತ್ತಿ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸುತ್ತಾನೆ.
ಕರಗದ ಪೂಜಾರಿಯು ದೇವಸ್ಥಾನವನ್ನು ಪ್ರವೇಶಿಸುತ್ತಿದ್ದಂತೆ, ದೇವಸ್ಥಾನದ ಮುಂಭಾಗದಲ್ಲಿ ಧರ್ಮರಾಯ ಹಾಗೂ ದ್ರೌಪದಿ ದೇವಿಯ ವಿವಾಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಚಿಕ್ಕದೊಂದು ಚಪ್ಪರ ಹಾಕಿ, ಚಪ್ಪರದ ಅಡಿಯಲ್ಲಿ ಧರ್ಮರಾಯ ಹಾಗೂ ದ್ರೌಪದಿಯ ವಿಗ್ರಹಗಳನ್ನು ಇರಿಸಲಾಗಿರುತ್ತದೆ. ಊರಿನ ಬ್ರಾಹ್ಮಣರೊಬ್ಬರು ವಿವಾಹ ಕಾರ್ಯವನ್ನು ನೆರವೇರಿಸಲು ಮಂತ್ರ ಪಠಣ ಮಾಡುತ್ತಾರೆ, ವಾದ್ಯಗೋಷ್ಟಿ ನಡೆಯುತ್ತದೆ. ನಂತರ ಊರಿನ ಯಜಮಾನನು ಧರ್ಮರಾಯನ ಸ್ಥಾನದಲ್ಲಿ ನಿಂತು ದ್ರೌಪದಿಯ ವಿಗ್ರಹಕ್ಕೆ ಮಾಂಗಲ್ಯಧಾರಣೆ ಮಾಡುತ್ತಾನೆ. ಮಾಂಗಲ್ಯಧಾರಣೆಯ ನಂತರ ಅಲ್ಲಿ ಸೇರಿರುವ ಮುತ್ತೈದೆಯರಿಗೆಲ್ಲರಿಗೂ ಅರಿಶಿನ-ಕುಂಕುಮ ನೀಡಲಾಗುತ್ತದೆ. ಅಲ್ಲಿಗೆ ಕಲ್ಯಾಣೋತ್ಸವ ಕಾರ್ಯಕ್ರಮ ಮುಕ್ತಾಯವಾಗುತ್ತದೆ. ನಂತರ ರಾತ್ರಿ ಸುಮಾರು ಹನ್ನೆರಡು ಗಂಟೆಯವರೆಗೂ ಭರತಪೂಜಾರಿಯು ಮಹಾಭಾರತ ಪಠಣಮಾಡುತ್ತಾನೆ.
5.ಕರಗ :
ಕರಗ ಆಚರಣೆಯ ಪ್ರಮುಖ ದಿನ, ಸುತ್ತ-ಮುತ್ತಲಿನ ಎಲ್ಲಾ ಊರಿನ ಗ್ರಾಮಸ್ಥರು ಸೇರುವ ದಿನವದು, ಬೆಳಗ್ಗೆಯೇ ಜಾತ್ರೆಯ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತದೆ, ಬೇರೆ ಬೇರೆ ಸ್ಥಳಗಳಿಂದ ಬಂದ ವ್ಯಾಪಾರಸ್ಥರು ಜಾತ್ರೆಯಲ್ಲಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ತೆರೆಯುತ್ತಾರೆ. ಇತ್ತ ದೇವಸ್ಥಾನದಲ್ಲಿ ಕರಗ ಶಕ್ತ್ಯೋತ್ಸವಕ್ಕೆ ತಯಾರಿ ಶುರುವಾಗಿರುತ್ತದೆ. ಕರಗದ ಪೂಜಾರಿಯು ವಿಶೇಷ ಪೂಜೆ ನೆರವೇರಿಸಬೇಕಾಗುತ್ತದೆ. ಕರಗದ ದೇವಸ್ಥಾನದಿಂದ ನೇರವಾಗಿ ತಮಟೆ ಬಡಿಯುತ್ತ, ಬಾಂಕಗಳನ್ನು ಊದುತ್ತ ಊರ ಕೆರೆಯ ಬಳಿಯಿರುವ ಸೋಮೇಶ್ವರ ದೇವಸ್ಥಾನದ ಬಳಿ ಎಲ್ಲಾ ಪ್ರಮುಖರು, ಗ್ರಾಮಸ್ಥರು ತಲುಪುತ್ತಾರೆ. ದೇವಸ್ಥಾನದ ಮುಂಭಾಗದಲ್ಲಿ ಅಗಸರು ಬಟ್ಟೆಯನ್ನು ಹಾಸಿ ಎಲ್ಲಾ ವೀರಕುಮಾರರ ಅಲಗುಗಳನ್ನು (ಖಡ್ಗ) ಪೂಜೆಗೆ ಇಡಲು ಹೇಳುತ್ತಾರೆ. ಕರಗದ ಪೂಜಾರಿಯು ಸೋಮೇಶ್ವರ ದೇವಾಲಯವನ್ನು ಪ್ರವೇಶಿಸಿ ಅಲ್ಲೇ ಸ್ನಾನ ಮುಗಿಸಿ ಸ್ತ್ರೀ ವೇಷಧಾರಿಯಾಗುತ್ತಾನೆ. ಸೀರೆ ತೊಟ್ಟು, ಆಭರಣಗಳನ್ನು ಧರಿಸಿ, ಮುಡಿಯಿಂದ ಕಾಲಿನವರೆಗೂ ದೇಹ ಮುಚ್ಚುವಂತೆ ಹೂವನ್ನು ಮುಡಿದು ದೇವಸ್ಥಾನದ ಮುಂಭಾಗದಲ್ಲಿ ಅಗಸರು ಹಾಸಿರುವ ಬಟ್ಟೆಯ ಮಧ್ಯಭಾಗದಲ್ಲಿ ಬಂದು ಕೂರುತ್ತಾನೆ.
ಸ್ತ್ರೀ ವೇಷಧಾರಿಯಾದ ಕರಗದ ಪೂಜಾರಿಗೆ ಬಳೆತೊಡಿಸುವ ಶಾಸ್ತ್ರವನ್ನು ಗ್ರಾಮದ ಅರ್ಜುನಪ್ಪನವರ ವಂಶಸ್ಥರು ನೆರವೇರಿಸುತ್ತಾರೆ. ಬಳೆತೊಡಿಸಿದ ನಂತರ ಅಲ್ಲಿ ನೆರೆದಿರುವ ಹೆಂಗಸರಿಗೆ ಹೂವನ್ನು ಪ್ರಸಾದವಾಗಿ ನೀಡಲಾಗುತ್ತದೆ. ವೀರಕುಮಾರರಿಗೆ ಮಾಲೆಯನ್ನು ಅರ್ಪಿಸಲಾಗುತ್ತದೆ. ಭರತ ಪೂಜಾರಿಯು, ಪೋತುಲ ರಾಜನಿಗೆ ಮೈದುಂಬಿಸಿ “ಹೋಯ್ ಪೋತುಲ ರಾಜ – ಹೋಯ್ ಪೋತುಲ ರಾಜ” ಎಂದು ಅಣಕಿಸುತ್ತಾನೆ, ಈ ಅಣಕು ಮಾತಿಗೆ ಕೆರಳುವ ಪೋತುಲ ರಾಜನು “ಕ್ಯಾವ್sss ಕ್ಯಾವ್sssss” ಎಂದು ಕಿರುಚಲು ಪ್ರಾರಂಭಿಸುತ್ತಾನೆ. ಇತ್ತ ಕರಗದ ಪೂಜಾರಿಗೂ ದ್ರೌಪದಿಯು ಮೈದುಂಬಿ ಎಡಗೈನಲ್ಲಿ ಮಂತ್ರದಂಡವನ್ನು ಹಾಗೂ ಬಲಗೈನಲ್ಲಿ ಬಾಕು (ಚಾಕು) ಹಿಡಿದು ಕುಣಿಯಲು ಪ್ರಾರಂಭಿಸುತ್ತಾನೆ. ವೀರಕುಮಾರರು ಕರಗದ ಪೂಜಾರಿಯು ಕುಣಿಯುವುದನ್ನು ನೋಡಿ “ಡಿಕ್ – ಡೀ, ಡಿಕ್ – ಡೀ” ಎಂದು ಅಲಗುಗಳಿಂದ (ಖಡ್ಗ) ದಿಂದ ತಮ್ಮ ಎದೆಗಗೆ ಬಡಿದುಕೊಳ್ಳಲು ಶುರು ಮಾಡುತ್ತಾರೆ. ಅಲ್ಲಿ ನೆರೆದ ಗ್ರಾಮಸ್ಥರೆಲ್ಲರೂ “ಗೋವಿಂದ-ಗೋವಿಂದ” ಎಂದು ಕೂಗುತ್ತಲೇ ಇರುತ್ತಾರೆ. ಅಲ್ಲಿಂದ ಹೊರಡುವ ಕರಗಪೂಜಾರಿಯು ಗ್ರಾಮದ ಕರಗದ ದೇವಸ್ಥಾನದ ಬಳಿ ಬಂದು ಗರ್ಭಗುಡಿ ಸೇರುತ್ತಾನೆ. ಅವನ ಹಿಂದೆಯೇ ಎಲ್ಲಾ ಪ್ರಮುಖರು ಹಾಗೂ ಗ್ರಾಮಸ್ಥರು ಕೂಡ ದೇವಸ್ಥಾನದ ಬಳಿ ಬಂದು ಸೇರುತ್ತಾರೆ.
ಕರಗದ ಪೂಜಾರಿಯು ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿದ ನಂತರ, ಗರ್ಭಗುಡಿಯಲ್ಲಿರುವ ಕಳಶಕ್ಕೆ (ಕುಂಭ) ಮಲ್ಲಿಗೆ ಹೂಗಳಿಂದ ಅಲಂಕೃತಗೊಳಿಸಿ ಕರಗವನ್ನು ಸೃಷ್ಟಿಸಲಾಗುತ್ತದೆ. ಗರ್ಭಗುಡಿಯಲ್ಲಿ ಕಳಶಕ್ಕೆ ಹೂವಿನ ಅಲಂಕಾರ ನಡೆಯುವ ಸಂದರ್ಭದಲ್ಲಿ ದೇವಸ್ಥಾನದ ಹೊರಗೆ ಭರತಪೂಜಾರಿಯು ಭಾರತ ಪಠಣ ಕಾರ್ಯದಲ್ಲಿ ಮಗ್ನನಾಗಿರುತ್ತಾನೆ. ವಾದ್ಯಗೋಷ್ಟಿಗಳು ಪ್ರಾರಂಭವಾಗಿರುತ್ತದೆ, ಪಲ್ಲಕ್ಕಿ ಸೇವೆಯನ್ನು ವಹಿಸಿಕೊಂಡಂತಹ ಭಕ್ತಾದಿಗಳು ವಿವಿಧ ದೇವರುಗಳ ಪಲ್ಲಕ್ಕಿಗಳನ್ನು ಸಿದ್ಧಮಾಡಿರುತ್ತಾರೆ.
ರಾತ್ರಿ ಸುಮಾರು 12-1 ಗಂಟೆ ಸುಮಾರಿಗೆ ಕರಗವನ್ನು ಹೊತ್ತ ಕರಗದ ಪೂಜಾರಿಯು ಕರಗ ದೇವಸ್ಥಾನದ ಗರ್ಭಗುಡಿಯಿಂದ ಹೊರಬರುತ್ತಾನೆ. ಕರಗವು ತಲೆಯಿಂದ ಸುಮಾರು ನಾಲ್ಕು ಅಡಿಗಳಷ್ಟು ಉದ್ದವಿರುವ ಕಾರಣ, ಗರ್ಭಗುಡಿಯ ಬಾಗಿಲಿನ ತುದಿ ತಾಗುವ ಕಾರಣಕ್ಕಾಗಿ ತನ್ನ ಮಂಡಿಯನ್ನು ನೆಲಕ್ಕೂರಿ, ಮಂಡಿಯ ಸಹಾಯದಿಂದ ಗರ್ಭಗುಡಿಯಿಂದ ಹೊರಬರುತ್ತಾನೆ. ಈ ಸಮಯದಲ್ಲಿ ಕರಗ ಹೊರಬರುವುದನ್ನೇ ಕಾಯುತ್ತಿರುವ ಗ್ರಾಮಸ್ಥರು ಗೋವಿಂದ – ಗೋವಿಂದ ಎಂದು ಕೂಗುತ್ತಾರೆ. ಅಲಗು ಹಿಡಿದ ವೀರಕುಮಾರರು ತಮ್ಮ ಎದೆಯ ಮೇಲೆ ಡಿಕ್-ಡೀ ಡಿಕ್-ಡೀ ಎಂದು ಬಡಿದುಕೊಳ್ಳಲು ಪ್ರಾರಂಭಿಸುತ್ತಾರೆ. ಗರ್ಭಗುಡಿಯನ್ನು ಬಹಳ ತ್ರಾಸದಿಂದ ದಾಟುವ ಕರಗಪೂಜಾರಿಯು. ನಂತರ ಎದ್ದು ನಿಲ್ಲುತ್ತಾನೆ. ಎದ್ದು ನಿಂತು ನಿಂತ ಜಾಗದಲ್ಲೇ ತಮಟೆ ಹಾಗೂ ಘಂಟೆಯ ಸದ್ದಿಗೆ ಕುಣಿಯಲು ಶುರುಮಾಡುತ್ತಾನೆ. ಗರ್ಭಗುಡಿಯ ಇಕ್ಕೆಲದಲ್ಲೂ ನಿಂತಿರುವ ಬಾಂಕ ಊದುವವರು ಜೋರಾಗಿ ಬಾಂಕ ಊದಲು ಶುರುಮಾಡುತ್ತಾರೆ. ಕರಗ ಪೂಜಾರಿಯು ಕುಣಿಯುವಾಗ ಕೈಯಲ್ಲಿ ಕತ್ತಿ ಹಾಗೂ ಮಂತ್ರದಂಡಗಳನ್ನು ಹಿಡಿದು ಕುಣಿಯುತ್ತಾನೆ, ನಂತರ ದೇವಸ್ಥಾನವನ್ನು ಮೂರು ಸುತ್ತು ಸುತ್ತಿ ಊರಿನ ತಿಗಳರ ಮನೆಗಳಲ್ಲಿ ಪೂಜೆ ಸ್ವೀಕರಿಸಲು ಕರಗವು ಆ ಸರಿರಾತ್ರಿಯಲ್ಲಿ ಹೊರಡುತ್ತದೆ.
ರಾತ್ರಿ ಒಂದು ಗಂಟೆಯಿಂದ ಬೆಳಗ್ಗಿನ ಜಾವ 8 ಗಂಟೆಯವರೆಗೂ ಊರಿನ ಪ್ರಮುಖ ಬೀದಿಗಳ ತಿಗಳರ ಮನೆಗಳಲ್ಲಿ ಪೂಜೆ ಸ್ವೀಕರಿಸುತ್ತದೆ. ಕರಗವು ಎಲ್ಲಿಯೂ ವಿಶ್ರಾಂತಿ ಪಡೆಯದೆ ಕರಗವನ್ನು ಹೊತ್ತು ಕರಗ ಪೂಜಾರಿಯು ಕುಣಿಯುತ್ತಾ ಸಾಗುತ್ತಾನೆ. ಊರಿನ ಮಸೀದಿಯಲ್ಲೂ ಪೂಜೆ ಸ್ವೀಕರಿಸುತ್ತದೆ, ಮಸೀದಿಯ ಪ್ರಧಾನ ವ್ಯಕ್ತಿಗಳು ಕರಗಕ್ಕೆ ಪೂಜೆ ಸಲ್ಲಿಸುತ್ತಾರೆ, ಬೆಂಗಳೂರು ಕರಗದಂತೆ ಮುಗಬಾಳ ಕರಗವೂ ಸಹ ಧಾರ್ಮಿಕ ಭಾವೈಕ್ಯತೆ ಸಾರುತ್ತದೆ. ಮೆರವಣಿಗೆ ಮುಗಿದ ನಂತರ ಪ್ರತಿ ಮನೆಯವರು ದೇವರ ಪಲ್ಲಕ್ಕಿಗಳಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಕರಗವು ಕರಗ ದೇವಸ್ಥಾನದ ಮುಂಭಾಗಕ್ಕೆ ಬಂದು ಸುಮಾರು 1 ಗಂಟೆಗಳ ಕಾಲ ಘಂಟೆ ಸದ್ದಿಗೆ, ತಮಟೆಯ ಸದ್ದಿಗೆ ತಾಳಬದ್ಧವಾಗಿ ಕುಣಿಯಲು ಪ್ರಾರಂಭಿಸುತ್ತದೆ. ಸುತ್ತ ಮುತ್ತಲಿನ ಊರಿನ ಗ್ರಾಮಸ್ಥರು ಕರಗವನ್ನು ಕಣ್ತುಂಬಿಕೊಳ್ಳುವುದು ಈ ಸಂದರ್ಭದಲ್ಲಿಯೇ.
ಕರಗ ದೇವಸ್ಥಾನದ ಮುಂದೆ ಕುಣಿಯುವ ಕರಗ ಪೂಜಾರಿಯು, ತಾನು ಕಲಿತ ಎಲ್ಲಾ ನರ್ತನ ಕಲೆಯನ್ನೂ ಪ್ರದರ್ಶಿಸುತ್ತಾನೆ. ತಾಳಬದ್ಧವಾಗಿ ಕುಣಿದು ದೇವಸ್ಥಾನದ ಮುಂದಿರುವ ಅಗ್ನಿಕುಂಡದ ಮುಂದೆ ಬಂದು ನಿಲ್ಲುತ್ತಾನೆ. ಭರತಪೂಜಾರಿಯು ಈ ಸಂದರ್ಭದಲ್ಲಿ ಎಲ್ಲಾ ವೀರಕುಮಾರರಿಗೂ, ಪೋತುಲ ರಾಜನಿಗೂ ಮೈದುಂಬಿಸುತ್ತಾನೆ. ಕರಗಕ್ಕೆ ನಿಂಬೆ ಹಣ್ಣಿನಿಂದ ದೃಷ್ಟಿ ತೆಗೆದು ಅಗ್ನಿಕುಂಡ ಪ್ರವೇಶಿಸಲು ಸೂಚಿಸುತ್ತಾನೆ. ಅಗ್ನಿಕುಂಡ ಪ್ರವೇಶಿಸಲು ಅಣಿಯಾಗಿ ನಿಂತ ಕರಗದ ಪೂಜಾರಿಗೆ ಅಗ್ನಿ ಕುಂಡದ ಬೆಂಕಿ ಉಂಡೆಗಳನ್ನು ಮಡಿಲು ತುಂಬಿಸಿ ಅಗ್ನಿ ಕುಂಡ ಪ್ರವೇಶಿಸುವಂತೆ ತಿಳಿಸಲಾಗುತ್ತದೆ. ಅಗ್ನಿಕುಂಡ ಪ್ರವೇಶಿಸುವ ಕರಗ ಪೂಜಾರಿಯ ಹಿಂದೆಯೇ ವೀರಕುಮಾರರು ಹಾಗೂ ಗ್ರಾಮಸ್ಥರು ಅಗ್ನಿಕುಂಡವನ್ನು ಪ್ರವೇಶಿಸುತ್ತಾರೆ. ಇತ್ತ ಕರಗವು ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಲು ಸಿದ್ಧವಾಗುತ್ತಿದ್ದಂತೆ ವೀರಕುಮಾರರು ಅಲಗಿನಿಂದ (ಖಡ್ಗ) ಜೋರಾಗಿ ತಮ್ಮ ಎದೆಯ ಮೇಲೆ ಹೊಡೆದುಕೊಳ್ಳಲು ಪ್ರಾರಂಭಿಸುತ್ತಾರೆ. ಡಿಕ್-ಡೀ ಡಿಕ್-ಡೀ ಎಂಬ ಮಂತ್ರ, ಗೋವಿಂದ-ಗೋವಿಂದ ಎಂಬ ಕೂಗು, ತಮಟೆ ಸದ್ದು, ಘಂಟೆ ಸದ್ದು, ಬಾಂಕದ ಸದ್ದು, ಡೊಳ್ಳು ಸದ್ದು ಇವೆಲ್ಲಾ ಸದ್ದುಗಳು ಒಮ್ಮೆಲೆ ತೂರಿಬಂದು ಇಡೀ ವಾತಾವರಣವೇ ಭಕ್ತಿಮಯವಾಗುತ್ತದೆ. ಕರಗವು ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸದಂತೆ ವೀರಕುಮಾರರು ಎಷ್ಟೇ ಅಲಗು ಸೇವೆ ಮಾಡಿ ಕೇಳಿಕೊಂಡರು ಕರಗ ಗರ್ಭಗುಡಿಯತ್ತ ಪ್ರವೇಶಿಸುತ್ತದೆ.
ಗರ್ಭಗುಡಿಯನ್ನು ಪ್ರವೇಶಿಸುವುದಕ್ಕೂ ಮುನ್ನ ದೇವಸ್ಥಾನವನ್ನು ಮೂರು ಸುತ್ತು ಸುತ್ತಿ ಗರ್ಭಗುಡಿಯ ಮುಂದೆ ನಿಲ್ಲುತ್ತದೆ. ಆ ಸಮಯದಲ್ಲಿ ಭರತಪೂಜಾರಿಯು ಎಲ್ಲರನ್ನೂ ಶಾಂತಗೊಳಿಸಿ ಕರಗಕ್ಕೆ ಸಂಬಂಧಪಟ್ಟ “ತಾನಿತಂದಾನ, ತಾನಿತಂದಾನ, ತಾನಿತಂದನಾನ….. ಆನೆಮೇಲೆ ವರಸೆ ಕಟ್ಟಿ, ಕುದುರೆ ಮೇಲೆ ವರಸೆ ಕಟ್ಟಿ…….” ಹಾಡುಗಳನ್ನು ಹಾಡಲು ಪ್ರಾರಂಭಿಸುತ್ತಾನೆ. ಇಡೀ ಗ್ರಾಮಸ್ಥರು ಭರತಪೂಜಾರಿಯೊಂದಿಗೆ ಹಾಡು ಹಾಡಲು ಪ್ರಾರಂಭಿಸುತ್ತಾರೆ. ಹಾಡು ಮುಕ್ತಾಯವಾದ ನಂತರ ಕರಗವು ಎಲ್ಲರಿಗೂ ಮತ್ತೊಮ್ಮೆ ದರ್ಶನ ನೀಡಿ ಗರ್ಭಗುಡಿಯನ್ನು ಪ್ರವೇಶಿಸುತ್ತದೆ. ಮೊದಲೇ ಹೇಳಿದಂತೆ ಗರ್ಭಗುಡಿಯ ಬಾಗಿಲು ಚಿಕ್ಕದಿರುವುದರಿಂದ ಮಂಡಿಯ ಸಹಾಯದಿಂದಲೇ ಕರಗವನ್ನು ಹೊತ್ತ ಕರಗಪೂಜಾರಿ ಗರ್ಭಗುಡಿ ಪ್ರವೇಶಿಸಬೇಕಾಗುತ್ತದೆ. ಭಕ್ತಿಯ ಉನ್ಮಾದ ಹೆಚ್ಚುಗೊಂಡಂತೆಲ್ಲಾ ಗ್ರಾಮಸ್ಥರು ಗೋವಿಂದ-ಗೋವಿಂದ ಎಂದು ಕೂಗುತ್ತಿರುತ್ತಾರೆ. ನಿಧಾನವಾಗಿ ಕರಗವು ಗರ್ಭಗುಡಿಯನ್ನು ಪ್ರವೇಶಿಸುತ್ತಿದ್ದಂತೆ ಗರ್ಭಗುಡಿಯ ಬಾಗಿಲುಗಳನ್ನು ಮುಚ್ಚಲಾಗುತ್ತದೆ.
ಗರ್ಭಗುಡಿಯನ್ನು ಪ್ರವೇಶಿಸಿದ ನಂತರ ಅಲ್ಲಿ ನೆರೆದ ಗ್ರಾಮಸ್ಥರೆಲ್ಲಾ ಚಪ್ಪಾಳೆಯ ಮೂಲಕ ಕರಗದ ಯಶಸ್ಸನ್ನು ಆನಂದಿಸುತ್ತಾರೆ. ಕರಗಪೂಜಾರಿಯು ಗರ್ಭಗುಡಿಯಲ್ಲಿ ಕರಗವನ್ನು ತನ್ನ ತಲೆಯಮೇಲಿಂದ ಇಳಿಸಿ, ಗರ್ಭಗುಡಿಯಿಂದ ಹೊರಬಂದು ಭಕ್ತರಿಗೆ ಆಶಿರ್ವಾದ ನೀಡುತ್ತಾನೆ. ಇಲ್ಲಿಗೆ ಕರಗ ಆಚರಣೆಯ ಮುಖ್ಯಭಾಗ ಕೊನೆಗೊಳ್ಳುತ್ತದೆ. ಅಂದೇ ಜಾತ್ರೆಯು ನಡೆದು ಸಂಜೆಯೊಳಗೆ ಜಾತ್ರೆಯನ್ನೂ ಕೊನೆಗೊಳಿಸಲಾಗುತ್ತದೆ.
6.ಪೋತುಲರಾಜ ಗಾವು :
ಕರಗ ಆಚರಣೆಯ ಆರನೇ ದಿನ ಕರಗದ ಪ್ರಮುಖರೆಲ್ಲಾ ವಿಶ್ರಾಂತಿಯಲ್ಲಿರುತ್ತಾರೆ. ಅಂದು ಬೆಳಗ್ಗೆ ಕರಗವು ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿದ ನಂತರ ದೇವಸ್ಥಾನದಲ್ಲಿ ಪೂಜಾಕಾರ್ಯಗಳನ್ನು ನೆರವೇರಿಸಿ ಕರಗ ಪೂಜಾರಿಯೂ ದೇವಸ್ಥಾನದಲ್ಲಿ ವಿಶ್ರಾಂತಿಗೆ ಮೊರೆಹೋಗುತ್ತಾನೆ. ಸಂಜೆ 6 ಗಂಟೆಯವರೆಗೂ ನಡೆಯುವ ಜಾತ್ರೆಯನ್ನು ಬಿಟ್ಟರೆ ಬೇರೆ ಯಾವ ಆಚರಣೆಗಳೂ ಇರುವುದಿಲ್ಲ, 6 ಗಂಟೆಯ ನಂತರ ಪೋತುಲರಾಜ ಗಾವಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಪೋತುಲರಾಜ ವೇಷಧಾರಿಯು ಗಾವು ಸಿಗಿಯುವ ಆಚರಣೆ ಕರಗ ಸಂಪ್ರದಾಯದಲ್ಲಿ ಇಷ್ಟು ಪ್ರಾಮುಖ್ಯತೆ ಏಕೆ ನೀಡಲಾಗಿದೆ ಎಂಬ ನನ್ನ ಪ್ರಶ್ನೆಗೆ ಗ್ರಾಮಸ್ಥರಿಂದ ಸಮರ್ಪಕ ಉತ್ತರ ದೊರೆಯಲೇ ಇಲ್ಲ. ಆದರೆ ಭರತ ಪೂಜಾರಿಯ ಭಾರತ ಪಠಣ ಸಂದರ್ಭದಲ್ಲಿ ಪೋತುಲರಾಜನು ದ್ರೌಪದಿಯ ಸೋದರ ಎಂಬ ಮಾಹಿತಿ ಮಾತ್ರ ತಿಳಿದು ಬರುತ್ತದೆ. ಪೋತುಲ ರಾಜನ ಗಾವಿನ ಆಚರಣೆಗಾಗಿ ಮುಗಬಾಳ ಗ್ರಾಮದ ಸಮೀಪವಿರುವ ಕೆಮಡಗಾನಹಳ್ಳಿಯ ಗ್ರಾಮಸ್ಥರು ಕರಿಯ ಹೋತವನ್ನು ನೀಡುತ್ತಾರೆ.
ಪೋತುಲರಾಜ ಗಾವಿನ ಆಚರಣೆಯನ್ನು ಊರಿನ ಮುನಿಸಂಜೀವಪ್ಪನವರ ವಂಶಸ್ಥರು ನೆರವೇರಿಸಿಕೊಂಡು ಬರುವ ಪದ್ಧತಿಯಿದೆ, ಅವರ ವಂಶಸ್ಥರು ಮಾತ್ರ ಪೋತುಲರಾಜನ ವೇಷಧಾರಿಯಾಗಬೇಕಾಗುತ್ತದೆ. ಸಂಜೆ 6 ಗಂಟೆಗೆ ಪೋತುಲರಾಜ ವೇಷಧಾರಿಯ ಮನೆಯಲ್ಲಿ ಎಲ್ಲಾ ಸಿದ್ಧತೆಗಳು ನಡೆಯಲು ಪ್ರಾರಂಭವಾಗುತ್ತದೆ, ಪೋತುಲರಾಜ ವೇಷಧಾರಿ ಸ್ನಾನಮುಗಿಸಿದ ನಂತರ ದೇಹದ ತುಂಬೆಲ್ಲಾ ಬಿಳಿಯ ಪಟ್ಟೆ ಬಳಿಯಲಾಗುತ್ತದೆ. ಇತ್ತ ಮನೆಮಂದಿಯೆಲ್ಲಾ ಪೂಜೆಗೆ ಸಿದ್ಧಗೊಳಿಸಿ, ಗಾವು ಸಿಗಿಯುವ ಅನ್ನವನ್ನು (ಬಲಿ ಅನ್ನ) ಹಾಗೂ ಪೂಜೆಗೆ ಬರುವ ಗ್ರಾಮಸ್ಥರಿಗೆ ಪ್ರಸಾದ ನೀಡುವ ಸಲುವಾಗಿ ಪ್ರಸಾದ ಸಿದ್ಧಮಾಡಿಟ್ಟುಕೊಳ್ಳುತ್ತಾರೆ. ಸಂಜೆ 8 ಗಂಟೆಗೆ ಸರಿಯಾಗಿ ಭರತಪೂಜಾರಿಯು ಪೋತುಲ ರಾಜ ವೇಷಧಾರಿಯ ಮನೆಯಲ್ಲಿ ವಿಶೇಷ ಪೂಜೆಯನ್ನು ನೆರವೇರಿಸುತ್ತಾನೆ. ಪೂಜೆಯನ್ನು ನೆರವೇರಿಸಿ ಪೋತುಲರಾಜನ ಕಥೆಯನ್ನು ಅರ್ಥವಾಗದ ಭಾಷೆಯಲ್ಲಿ ಹೇಳಲು ಪ್ರಾರಂಭಿಸುತ್ತಾನೆ. ಕಥೆಯನ್ನು ಕೇಳುತ್ತಾ ಕೇಳುತ್ತಾ ಪೋತುಲರಾಜ ವೇಷಧಾರಿಯು ಮೈದುಂಬಿದವನಂತೆ ಎದ್ದು ನಿಲ್ಲುತ್ತಾನೆ. ಭರತಪೂಜಾರಿಯು ಆತನು ಎದ್ದು ನಿಂತ ತಕ್ಷಣ ಕೈಗೆ ಚಾಟಿಯನ್ನು ನೀಡಿ “ಹೇ ಪೋತುಲ್ ರಾಜ” ಎಂದು ಕೂಗಲು ಪ್ರಾರಂಭಿಸುತ್ತಾನೆ. ಈ ಕೂಗಿಗೆ ಸಿಟ್ಟಾದವನಂತೆ ಕಾಣುವ ಪೋತುಲರಾಜನು “ಕ್ಯಾವ್sss ಕ್ಯಾವ್sssss” ಎಂದು ಚಾಟಿಯನ್ನು ಮೇಲೆ ಹಿಡಿದು ಕೂಗಲು ಶುರುಮಾಡುತ್ತಾನೆ. ಅಲ್ಲಿಂದ ನೇರವಾಗಿ ಭರತಪೂಜಾರಿಯು ಪೋತುಲರಾಜನಿಗೆ ಮೈದುಂಬಿಸಿ ಊರ ಹೆಬ್ಬಾಗಿಲಿನ ಬಳಿ ಇರುವ ಏಳುಸುತ್ತಿನ ಕೋಟೆಯ ಪ್ರತಿರೂಪದ ಬಳಿಗೆ ಪೋತುಲರಾಜನನ್ನು ಕರಗದಪೂಜಾರಿ, ವೀರಕುಮಾರರ ಸಹಿತ ಕರೆದುಕೊಂಡು ಹೋಗುತ್ತಾನೆ. ಪೋತುಲ ರಾಜನು ದ್ವಾಪರರ ಯುಗದಲ್ಲಿ ಏಳುಸುತ್ತಿನ ಕೋಟೆಯಲ್ಲಿ ಜೀವಿಸಿದ್ದನು ಎಂದು ನಂಬಿರುವ ಕಾರಣ ಆತನನ್ನು ಆ ಪ್ರತಿಮೆಯ ಬಳಿ ಕರೆದುಕೊಂಡು ಹೋಗಿ, ಪ್ರತಿಮೆಯ ಸುತ್ತ ಕರ್ಪೂರವನ್ನು ಹಚ್ಚಲಾಗುತ್ತದೆ. ಮೈದುಂಬಿದ ಸ್ಥಿತಿಯಲ್ಲಿರುವ ಪೋತುಲರಾಜನನ್ನು ಮತ್ತೊಮ್ಮೆ “ಹೇ ಪೋತುಲ್ ರಾಜ” ಎಂದು ಎಲ್ಲರೂ ಕರೆಯಲು ಶುರುಮಾಡುತ್ತಾರೆ. ಆ ಕೂಗಿಗೆ “ಕ್ಯಾವ್sss ಕ್ಯಾವ್sssss” ಎಂದು ಕಿರುಚುವುದು ನಡೆಯುತ್ತಲೇ ಇರುತ್ತದೆ.
ಏಳುಸುತ್ತಿನ ಕೋಟೆಯ ಬಳಿ ಪೂಜೆ ಸಲ್ಲಿಸಿ ನೇರವಾಗಿ ಕರಗದ ದೇವಸ್ಥಾನದ ಬಳಿ ಬರುವ ಎಲ್ಲಾ ಪ್ರಮುಖರು ಹಾಗೂ ಊರಿನ ಗ್ರಾಮಸ್ಥರು, ಪೋತುಲರಾಜನ ವೀರಾವೇಷವನ್ನು ಕಣ್ತುಂಬಿಕೊಳ್ಳುತ್ತಾರೆ. ಇನ್ನೇನು ಪೋತುಲರಾಜನ ಸಿಟ್ಟು ಮಿತಿಮೀರುತ್ತಿದೆ ಎನ್ನುವಾಗ ಭರತಪೂಜಾರಿಯು ಸಮಾಧಾನಪಡಿಸುತ್ತಾನೆ. ಆತನನ್ನು ಎಲ್ಲಾ ವೀರಕುಮಾರರೂ ಸೇರಿ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಭರತಪೂಜಾರಿಯು ಪೋತುಲರಾಜನ ಕೈಯಲ್ಲಿರುವ ಚಾಟಿಯನ್ನು ಕಸಿದುಕೊಂಡು ಆತನ ಕೈಗಳಿಗೆ ಚಾಟಿಯಿಂದ ಮೂರು ಬಾರಿ ಹೊಡೆಯುತ್ತಾನೆ. ಅಲ್ಲಿಗೆ ಪೋತುಲರಾಜ ವೇಷಧಾರಿಯು ಸಮಾಧಾನಗೊಂಡು ಕುಸಿದು ಬೀಳುತ್ತಾನೆ. ಕುಸಿದು ಬಿದ್ದ ಆತನನ್ನು ದೇವಸ್ಥಾನದ ಒಳಭಾಗಕ್ಕೆ ಕರೆದುಕೊಂಡು ಹೋಗಲಾಗುತ್ತದೆ.
ಪೋತುಲರಾಜನನ್ನು ಸಮಾಧಾನ ಮಾಡಿದ ನಂತರ, ಅಲ್ಲಿ ನೆರೆದಿದ್ದ ಎಲ್ಲಾ ಗ್ರಾಮಸ್ಥರಿಗೂ ಪ್ರಸಾದವನ್ನು ಹಂಚುತ್ತಾರೆ. ಮುಂದಿನ ಕಾರ್ಯಗಳು ನಡೆಯುವವರೆಗೂ ಭರತಪೂಜಾರಿಯು ಭಾರತ ಪಠಣ ಮಾಡುತ್ತಾನೆ. ರಾತ್ರಿ 12 ಗಂಟೆಗೆ ಸರಿಯಾಗಿ ಭರತಪೂಜಾರಿಯ ಭಾರತ ಪಠಣ ನಿಲ್ಲಿಸುತ್ತಾನೆ. ಇತ್ತ ಪೋತುಲರಾಜನ ಗಾವು ಪ್ರಾರಂಭವಾಗುತ್ತದೆ. ಕೆಮಡಿಗಾನಹಳ್ಳಿಯ ಗ್ರಾಮಸ್ಥರು ನೀಡಿದ ಕರಿ ಹೋತವನ್ನು ದೇವಸ್ಥಾನದ ಮುಂಭಾಗದಲ್ಲಿ ಹೋತದ ಕತ್ತಿಗೆ ಹಗ್ಗ ಬಿಗಿದು ಕಟ್ಟಿರುತ್ತಾರೆ. ಭರತ ಪೂಜಾರಿಯು ಹೋತಕ್ಕೆ ಪೂಜೆ ಸಲ್ಲಿಸಿ ಹೂವಿನ ಹಾರ ಹಾಕಿ ನಂತರ ಪೋತುಲ ರಾಜನಿಗೆ ಮೈದುಂಬಿಸುತ್ತಾನೆ. ಮೈದುಂಬಿದ ಪೋತುಲರಾಜನು ಕರಿಯ ಹೋತವನ್ನು ನೋಡಿದ ತಕ್ಷಣ ಜೋರಾಗಿ ಕೂಗಿಕೊಂಡು ಅದರ ಬಳಿ ಸಾಗುತ್ತಾನೆ. ತನ್ನ ಹಲ್ಲಿನಿಂದ ಹೋತದ ಕತ್ತನ್ನು ಹಿಡಿದು ಗರ-ಗರ ತಿರುವುತ್ತಾನೆ, ಹಲ್ಲಿನಿಂದ ಕಚ್ಚಿ ಹೋತದ ಕತ್ತನ್ನು ಸೀಳಿ ರಕ್ತಕುಡಿಯಲು ಪ್ರಾರಂಭಿಸುತ್ತಾನೆ. ಇನ್ನೇನು ಆ ಹೋತವನ್ನು ತಿನ್ನಲು ಅಣಿಯಾಗುತ್ತಾನೆ ಎಂಬ ಸಂದರ್ಭದಲ್ಲಿ ಆತನ ಬಾಯಿಗೆ ಪೋತುಲರಾಜನ ಮನೆಯವರು ಸಿದ್ಧಪಡಿಸಿ ತಂದಂತಹ ಗಾವು ಅನ್ನವನ್ನು (ಬಲಿ ಅನ್ನ) ಬಾಯಿಗೆ ಹಾಕಲಾಗುತ್ತದೆ, ಅನ್ನವನ್ನು ಭಕ್ಷಿಸುವ ಪೋತುಲರಾಜನು ಜೋರಾಗಿ ಕಿರುಚಲು ಪ್ರಾರಂಭಿಸುತ್ತಾನೆ. ಭರತಪೂಜಾರಿಯು ಮತ್ತೊಮ್ಮೆ ಆತನನ್ನು ಶಾಂತಗೊಳಿಸಿ ದೇವಸ್ಥಾನದ ಗರ್ಭಗುಡಿಗೆ ಕರೆದುಕೊಂಡು ಹೋಗುತ್ತಾನೆ. ಇಲ್ಲಿಗೆ ಪೋತುಲರಾಜನ ಗಾವು ಅಂತ್ಯಗೊಳ್ಳುತ್ತದೆ.
7.ವಸಂತೋತ್ಸವ :
ಪೋತುಲರಾಜನ ಗಾವು ಮುಗಿದ ಮಾರನೆಯ ದಿನ ವಸಂತೋತ್ಸವ ಹಾಗೂ ಊರ ದೇವತೆಗಳಿಗೆ ತಂಬಿಟ್ಟಿನಾರತಿಯ ಆಚರಣೆ ನಡೆಯುತ್ತದೆ. ಇಡೀ ಕರಗ ಮಹೋತ್ಸವದಲ್ಲಿ ಪಾಲ್ಗೊಂಡು ದಣಿಯುವ ವೀರಕುಮಾರರು ಆ ದಿನ ಉಲ್ಲಾಸಭರಿತರಾಗಿ ವಸಂತೋತ್ಸವದಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಮಧ್ಯಾಹ್ನ 2 ಗಂಟೆಗೆ ವೀರಕುಮಾರರ ಮನೆಗಳಿಂದ ಮನೆಯ ಹೆಂಗಸರು ಸಿದ್ಧಪಡಿಸಿದ ಅರಿಶಿನ ಮಿಶ್ರಿತ ನೀರನ್ನು ದೇವಸ್ಥಾನದ ಮುಂಭಾಗವಿರುವ ಎರಡು ದೊಡ್ಡ ಪಾತ್ರೆಗಳಲ್ಲಿ ಸುರಿಯಲಾಗುತ್ತದೆ. ದೇವಸ್ಥಾನದ ಮುಂಭಾಗಕ್ಕೆ ಸರಿಯಾಗಿ ಮಧ್ಯದಲ್ಲಿ ಒಂದು ಹಗ್ಗವನ್ನು ಕಟ್ಟಲಾಗುತ್ತದೆ. ಹಗ್ಗದ ಒಂದು ಬದಿಯಲ್ಲಿ ಒಂದು ಪಾತ್ರೆ, ಮತ್ತೊಂದು ಬದಿಯಲ್ಲಿ ಮತ್ತೊಂದು ಪಾತ್ರೆಯನ್ನು ಇರಿಸಲಾಗುತ್ತದೆ.
ವೀರಕುಮಾರರೆಲ್ಲರೂ ಕಟ್ಟಿರುವ ಹಗ್ಗದ ಎರಡು ಬದಿಗಳಲ್ಲಿ ನಿಲ್ಲುತ್ತಾರೆ. ವಾಲಿಬಾಲ್ ಕ್ರೀಡೆಯಲ್ಲಿ ಹೇಗೆ ಎರಡು ತಂಡಗಳು ಎದುರು-ಬದರು ನಿಲ್ಲುತ್ತಾರೋ ಹಾಗೆ ಇಲ್ಲೂ ಕೂಡ ವೀರಕುಮಾರರ ಎರಡು ಗುಂಪುಗಳು ಹಗ್ಗದ ಎರಡು ಬದಿಗಳಲ್ಲಿ ನಿಂತು ದೊಡ್ಡ ಪಾತ್ರೆಗಳಲ್ಲಿರುವ ಅರಿಶಿನದ ನೀರನ್ನು ಚುಂಚುಪಾತ್ರೆಯಲ್ಲಿ (ಚೆಂಬು) ಮೊಗಚಿ-ಮೊಗಚಿ ಮತ್ತೊಂದು ಬದಿಯಲ್ಲಿರು ವೀರಕುಮಾರರಿಗೆ ಎರಚುತ್ತಾರೆ. ಎರಡೂ ತಂಡಗಳು ಅರಿಶಿನದ ನೀರು ಖಾಲಿಯಾಗುವವರೆಗೂ ಎರಚುತ್ತಲೇ ಇರುತ್ತಾರೆ. ಈ ಸಂಭ್ರಮದ ಆಟವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರೂ ಸೇರಿರುತ್ತಾರೆ. ಒಂದು ಬದಿಯ ವೀರಕುಮಾರರನ್ನು “ಭಾವ” ಎಂದು ಕರೆದರೆ ಮತ್ತೊಂದು ಬದಿಯ ವೀರಕುಮಾರರನ್ನು “ಭಾಮೈದ” ಎಂದು ಕರೆದುಕೊಂಡು ಅರಿಶಿನದ ನೀರನ್ನು ಎರಚಾಡುತ್ತಾರೆ. ನೀರನ್ನು ಎರಚುವ ರಬಸಕ್ಕೆ ವೀರಕುಮಾರರ ಕೈಯಲ್ಲಿರುವ ಚುಂಚುಪಾತ್ರೆ ಜಾರಿ ನೆಲಕ್ಕೆ ಬಿದ್ದು ಮತ್ತೊಂದು ತಂಡದ ಕೈಗೆ ಸಿಕ್ಕರಂತು ಮುಗಿಯಿತು, ಚುಂಚುಪಾತ್ರೆಯನ್ನು ಜಾರಿಬಿಟ್ಟ ವೀರಕುಮಾರನು ಹಗ್ಗವನ್ನು ದಾಟಿಹೋಗಿ ಆ ಪಾತ್ರೆಯನ್ನು ತರಬೇಕಾಗುತ್ತದೆ. ಆ ಸಮಯದಲ್ಲಿ ಎದುರು ತಂಡದ ವೀರಕುಮಾರರು ರಭಸವಾಗಿ ಅರಿಶಿನದ ನೀರನ್ನು ಆತನಿಗೆ ಎರಚುತ್ತಾರೆ. ಪಾತ್ರೆಯಲ್ಲಿರುವ ಅರಿಶಿನದ ನೀರು ಮುಗಿದ ಮೇಲೆ ವಸಂತೋತ್ಸವ ಮುಕ್ತಾಯವಾಗುತ್ತದೆ.
ವಸಂತೋತ್ಸವ ಮುಗಿದ ಮೇಲೆ, ಕರಗ ದೇವಸ್ಥಾನದ ಮೂರ್ತಿಗಳನ್ನು ಊರ ಹೊರಗಿನ ಬಾವಿಯ ಬಳಿಗೆ ತಮಟೆ, ಡೊಳ್ಳು ಬಡಿಯುತ್ತಾ, ಬಾಂಕ ಊದುತ್ತ ಕರಗಪೂಜಾರಿ, ಭರತಪೂಜಾರಿ, ವೀರಕುಮಾರರೆಲ್ಲಾ ಮೆರವಣಿಗೆಯಲ್ಲಿ ಮೂರ್ತಿಗಳನ್ನು ತಮ್ಮ ತಲೆಯ ಮೇಲೆ ಹೊತ್ತು ಸಾಗುತ್ತಾರೆ. ಬಾವಿಯ ಬಳಿ ಎಲ್ಲರೂ ಸ್ನಾನ ಮುಗಿಸಿ, ಹಸಿಕರಗದಂದು ತಮ್ಮ ಕೈಗಳಿಗೆ ಕಟ್ಟಿಕೊಂಡ ಕಂಕಣವನ್ನು ತೆಗೆಯುತ್ತಾರೆ, ಜೆನಿವಾರವನ್ನೂ ಅಲ್ಲೇ ಭರತಪೂಜಾರಿಯ ಸಹಾಯದಿಂದ ತೆಗೆಯಲಾಗುತ್ತದೆ. ಬಾವಿಯ ನೀರಿನಿಂದ ಮೂರ್ತಿಗಳನ್ನು ಶುಭ್ರಗೊಳಿಸಿ ಮತ್ತೆ ಮೆರವಣಿಗೆ ಮೂಲಕ ಮೂರ್ತಿಗಳನ್ನು ಹೊತ್ತು ಕರಗ ದೇವಸ್ಥಾನ ತಲುಪುತ್ತಾರೆ. ಮೂರ್ತಿಗಳಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸುತ್ತಾರೆ.
ಅಂದು ಸಂಜೆ 6 ಗಂಟೆಯ ನಂತರ ಊರ ಗ್ರಾಮದೇವತೆಗಳಾದ, ಮಾರಮ್ಮ, ಸಪಲಾಂಭ, ಸುಬ್ಬಲಮ್ಮ ದೇವತೆಗಳಿಗೆ ಊರಿನ ಗ್ರಾಮಸ್ಥರಿಂದ ತಂಬಿಟ್ಟಿನ ಆರತಿಯ ಪೂಜೆ ನಡೆಯುತ್ತದೆ. ದೇವಸ್ಥಾನದ ಮುಖ್ಯ ಅರ್ಚಕರೊಂದಿಗೆ ಕರಗದ ಪೂಜಾರಿಯೂ ಸೇರಿ ಪೂಜೆ ಸಲ್ಲಿಸುತ್ತಾರೆ. ಪೂಜೆಯ ನಂತರ ಅಲ್ಲಿ ಸೇರಿದ ಎಲ್ಲಾ ಗ್ರಾಮಸ್ಥರಿಗೂ ವೀರಕುಮಾರರು ಪ್ರಸಾದ ಹಂಚುತ್ತಾರೆ.
8.ಮಹಾಮಂಗಳಾರತಿ ಹಾಗೂ ಧ್ವಜಾವರೋಹಣ :
ಕರಗ ಆಚರಣೆಯ ಎಂಟನೇ ದಿನ ತಲುಪುವುದರೊಂದಿಗೆ ಆಚರಣೆ ಮುಕ್ತಾಯದ ಹಂತ ತಲುಪಿರುತ್ತದೆ. ಮಹಾಮಂಗಳಾರತಿಯ ದಿನದಂದು ಕರಗ ಪೂಜಾರಿಯ ಪತ್ನಿಯನ್ನು ಮನೆಯಿಂದ ನೇರವಾಗಿ ದೇವಸ್ಥಾನದ ಬಳಿಗೆ ತಮಟೆ ಸದ್ದುಗಳ ಮೂಲಕ ಕರೆದುಕೊಂಡು ಬರಲಾಗುತ್ತದೆ. ದೇವಸ್ಥಾನದ ಗರ್ಭಗುಡಿಯ ಹೊರಗಡೆ ಆಕೆಗೆ ಬಳೆ ತೊಡಿಸಲಾಗುತ್ತದೆ. ಅರಿಶಿನ-ಕುಂಕುಮ ನೀಡಿ, ಮಡಿಲು ತುಂಬಿಸುವ ಶಾಸ್ತ್ರ ನೆರವೇರಿಸಲಾಗುತ್ತದೆ, ಇಲ್ಲಿಗೆ ಆಕೆ ವಿಧವೆತನವನ್ನು ಕೊನೆಗೊಳಿಸುತ್ತಾಳೆ.
ಕರಗದ ಪೂಜಾರಿಯು ದ್ರೌಪದಿ ದೇವಿ, ಧರ್ಮರಾಯ ಸ್ವಾಮಿ ಹಾಗೂ ಪೋತುಲರಾಜ ಮೂರ್ತಿಗಳಿಗೆ ಮಹಾಮಂಗಳಾರತಿ ಪೂಜೆ ಸಲ್ಲಿಸುತ್ತಾನೆ. ನಂತರ ದೇವಸ್ಥಾನದಲ್ಲಿ ಪೂಜೆಗೆಂದು ಬಂದ ಎಲ್ಲಾ ಭಕ್ತಾದಿಗಳಿಗೂ ಪಾನಕ-ಪ್ರಸಾದ ನೀಡಲಾಗುತ್ತದೆ.
ಮಹಾಮಂಗಳಾರತಿಯ ನಂತರ ಗಜಪಟ ಸೇವೆ ನೆರವೇರಿಸಿದ ಕೊರ್ದಪ್ಪನವರ ಕುಟುಂಬದವರಿಂದ ಗಜಪಟ ಇಳಿಸುವ (ಧ್ವಜಾವರೋಹಣ) ಕಾರ್ಯಕ್ರಮ ನಡೆಯುತ್ತದೆ. ಗಜಪಟ ಇಳಿಸುವುದಕ್ಕೂ ಮುನ್ನ ಗಜಪಟದ ಬುಡಕ್ಕೆ ಪೂಜೆ ಸಲ್ಲಿಸಿ ಗ್ರಾಮಸ್ಥರು ಹಾಗೂ ಕರಗ ಆಚರಣೆಯ ಪ್ರಮುಖರಾದ ಯಜಮಾನ, ಗಣಾಚಾರಿ, ಗೌಡ, ಘಂಟೆ ಪೂಜಾರಿ, ಕರಗದ ಪೂಜಾರಿ ಹಾಗೂ ವೀರಕುಮಾರರ ಸಮ್ಮುಖದಲ್ಲಿ ಗಜಪಟ ಇಳಿಸಲಾಗುತ್ತದೆ. ಈ ಆಚರಣೆಯೊಂದಿಗೆ ಮುಗಬಾಳದ ಗ್ರಾಮದ ಕರಗ ಶಕ್ತ್ಯೋತ್ಸವ ಮುಕ್ತಾಯಗೊಳ್ಳುತ್ತದೆ.
ಕೊನೆಯ ಮಾತು:
ಕರಗ ಆಚರಣೆಯಲ್ಲಿ ಮುಗಬಾಳ ಗ್ರಾಮದ ಕರಗಕ್ಕೆ ಬೇರೆ ಪ್ರದೇಶಗಳ ಕರಗದಷ್ಟು ಪ್ರಸಿದ್ಧಿ ಇಲ್ಲದಿದ್ದರೂ, ಇಲ್ಲಿ ನಡೆಯುವ ಕೆಲ ಆಚರಣೆಗಳು ತನ್ನದೇ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿವೆ, ಈ ಕರಗದಲ್ಲಿ ಭಾಗವಹಿಸುವ ವೀರಕುಮಾರರ ಅಲಗು ಸೇವೆ ಬೇರೆ ಕರಗದ ವೀರಕುಮಾರರ ಅಲಗು ಸೇವೆಗಿಂತಲೂ ಭಿನ್ನವಾಗಿರುತ್ತದೆ. ಮುಗಬಾಳ ಕರಗವನ್ನು ಊರಿನ ಎಲ್ಲಾ ಜಾತಿಯವರು ಸೇರಿ ಆಚರಿಸುವ ಆಚರಣೆಯಾದ್ದರಿಂದ, ಪ್ರತಿಯೊಂದು ಸಂದರ್ಭದಲ್ಲಿಯೂ ಒಂದಲ್ಲಾ ಒಂದು ಜಾತಿಯವರು ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗುತ್ತದೆ. ಇವೆಲ್ಲವುದರ ನಡುವೆ ಕರಗದಂತಹ ಗ್ರಾಮೀಣ ಹಬ್ಬಗಳು ಗ್ರಾಮೀಣ ಜನರ ಒಗ್ಗಟ್ಟಿನ ಸೂಚಕಗಳಾಗಿವೆ.