ಶೃಂಗೇರಿ ಮಠದ ಮೇಲೆ ಮರಾಠರು ದಾಳಿ ಮಾಡಿದ್ದರೇ?
ಮೂಲ ಲೇಖಕ : ಉದಯ್ ಕುಲಕರ್ಣಿ
ಅನುವಾದ : ರಾಕೇಶ್ ಶೆಟ್ಟಿ
ಹೈದರಾಲಿ,ಟಿಪ್ಪು ಸುಲ್ತಾನನಿಂದ ದೇವಾಲಯಗಳ ನಾಶದ ಬಗ್ಗೆ ಮಾತನಾಡಿದ ತಕ್ಷಣ ಶೃಂಗೇರಿ ಮಠದ ಮೇಲೆ ಮರಾಠರು ದಾಳಿ ಮಾಡಿದ್ದರು, ಟಿಪ್ಪು ಸ್ವಾಮೀಜಿಯವರ ಸಹಾಯಕ್ಕೆ ಬಂದಿದ್ದ ಎಂದು ಕಮ್ಯುನಿಸ್ಟರು ಮುಂದೆ ನಿಲ್ಲುತ್ತಾರೆ.ಹಾಗಿದ್ದರೆ ಈ ದುರ್ಘಟನೆಯ ಸತ್ಯವೇನು? ಈ ಘಟನೆಯ ಇನ್ನೊಂದು ಮಗ್ಗುಲನ್ನು ತಿಳಿಸುವ ಇತಿಹಾಸ ತಜ್ಞ ಉದಯ್ ಕುಲಕರ್ಣಿಯವರು ಸ್ವರಾಜ್ಯ ಮ್ಯಾಗಜಿನ್ನಿನಲ್ಲಿ ಬರೆದ ಲೇಖನ ನಿಲುಮಿಗರಿಗಾಗಿ – ನಿಲುಮೆ
ಟಿಪ್ಪುವಿನ ಮತಾಂಧತೆಯನ್ನು ತಮ್ಮ ರೆಡ್ ಕಾರ್ಪೆಟಿನ ಅಡಿಯಲ್ಲಿ ತೂರಿಸುವ ಅಭ್ಯಾಸವುಳ್ಳ ಕಮ್ಯುನಿಸ್ಟ್ ಇತಿಹಾಸಕಾರರು ಆತ ಸೆಕ್ಯುಲರ್ ಆಗಿದ್ದ ಎಂದು ತೋರಿಸಲು ಪದೇ ಪದೇ ಬಳಸುವದು ಮರಾಠರ ಸೈನ್ಯ ಶೃಂಗೇರಿ ಮಠದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದ ನಂತರ ಟಿಪ್ಪು ಅದರ ಜೀರ್ಣೋದ್ಧಾರಕ್ಕೆ ಸಹಾಯ ಮಾಡಿದ ಎನ್ನುವುದಾಗಿದೆ. ಆದರೆ ಆ ದಿನ ನಿಜವಾಗಿಯೂ ನಡೆದಿದ್ದೇನು ಎನ್ನುವುದನ್ನು ‘Solstice at Panipat’ ಪುಸ್ತಕ ಲೇಖಕರು ಮತ್ತು ಇತಿಹಾಸಕಾರರಾದ ಉದಯ್ ಕುಲಕರ್ಣಿಯವರು ಲಭ್ಯವಿರುವ ಪುರಾವೆಗಳ ಸಹಿತ ವಿವರಿಸುತ್ತಾರೆ.
“ಟಿಪ್ಪುವಿನ ನಡೆಗಳು ಸರಿಯಿಲ್ಲ. ಅಹಂಕಾರವೇ ತುಂಬಿರುವ ಆತ ಇತ್ತೀಚಿಗೆ ನೂರ್ ಮುಹಮ್ಮದನಿಗೆ ಬರೆದ ಪಾತ್ರದಲ್ಲಿ ತಾನು 50,000 ಹಿಂದುಗಳನ್ನು, ಮಹಿಳೆಯರು ಮಕ್ಕಳನ್ನು ಒಳಗೊಂಡಂತೆ ಇಸ್ಲಾಮ್ ಗೆ ಮತಾಂತರಿಸಿದ್ದೇನೆ. ಹಿಂದಿನ ಯಾವುದೇ ಪಡಿಶಾಹ್ ಅಥವಾ ವಜೀರ್ ಮಾಡಲಾಗದ್ದನ್ನು ನಾನು ಅಲ್ಲಾಹ್ ಕೃಪೆಯಿಂದ ಮಾಡಿದ್ದೇನೆ . ಹಳ್ಳಿಗೆ ಹಳ್ಳಿಯನ್ನೇ ಮತಾಂತರಿಸಿದ್ದೇನೆ ಎನ್ನುತ್ತಾನೆ” – ನಾನಾ ಫಡ್ನವಿಸ್ ಅವರು ಮಹಾಡ್ಜಿ ಸಿಂಧಿಯಾಗೇ ಬರೆದ ಪತ್ರ 5 September 1784.
ಥಾಮಸ್ ಡೇನಿಯಲ್ ಮತ್ತು ಜೇಮ್ಸ್ ವೇಲ್ಸ್ ಅವರು ಬಿಡಿಸಿರುವ ಚಿತ್ರವೊಂದು ಪುಣೆಯ ಶನಿವಾರ್ ವಾಡದಲ್ಲಿ ಗಮನ ಸೆಳೆಯುತ್ತದೆ.ಬ್ರಿಟಿಷರ ಚಾರ್ಲ್ಸ್ ಎಂ ಮಾಲೆಟ್ ಮತ್ತು ಮರಾಠರ ನಡುವಿನ ಒಪ್ಪಂದದ ಚಿತ್ರವದು. ಮಾಲೆಟ್ ವಿಶೇಷ ಆಸಕ್ತಿಯಿಂದ ಮಾಡಿಸಿದ ಈ ಚಿತ್ರವು, ಮರಾಠರು,ನಿಜಾಮರನ್ನು ಬ್ರಿಟಿಷ್ ಪಡೆಯೊಂದಿಗೆ ಸೇರಿಕೊಳ್ಳುವಂತೆ ಆತ ನಡೆಸಿದ ರಾಜತಾಂತ್ರಿಕತೆಯ ಪ್ರಾಮುಖ್ಯತೆಯನ್ನು ಹತ್ತು ವರ್ಷಗಳ ಹಿಂದೆ ಬ್ರಿಟಿಷರು ಹೊಂದಿದ್ದ ಮಿತ್ರ ಪಡೆಯನ್ನು ನೋಡುವ ಮೂಲಕ ಗಮನಿಸಬೇಕು. ಆ ಸಮಯದಲ್ಲಿ ಹೈದರಾಲಿಯ ಮರಾಠರ ಮಿತ್ರನಾಗಿದ್ದ. 1790 ರ ಸಮಯಕ್ಕಾಗಲೇ ಟಿಪ್ಪು ತನ್ನ ತಂದೆಯ ಹಳೆಯ ಮಿತ್ರಪಡೆಗಳಲ್ಲಿ ಅದೆಷ್ಟು ಆಕ್ರೋಶ ಮೂಡಿಸಿದ್ದನೆಂದರೆ ಅವರು ಬ್ರಿಟಿಷರೊಂದಿಗೆ ಕೈ ಜೋಡಿಸಿಬಿಟ್ಟಿದ್ದರು.
1790-1792ರ ನಡುವೆ ಟಿಪ್ಪುವಿನ ಮೇಲೆ ನಡೆದ ಯುದ್ಧದ ಸಮಯದಲ್ಲಿ, ಮರಾಠರ ಸೇನಾ ಮುಖ್ಯಸ್ಥ ರಘುನಾಥ ರಾವ್ ‘ದಾದಾ’ ಕುರುಂದ್ವಾಡ್ಕರ್ ಅವರ ಮೇಲ್ವಿಚಾರಣೆಯಲ್ಲಿದ್ದ ಸೇನೆಯ ತುಕಡಿಯೊಂದು ಶೃಂಗೇರಿಯ ಶಂಕರಾಚಾರ್ಯ ಮಠದ ಮೇಲೆ ದಾಳಿ ಮಾಡಿ, ಲೂಟಿಗೈದು ಹಾಳುಗೆಡವಿತ್ತು. ಇಂದಿಗೂ ಮಾಗದ ಗಾಯದಂತಿರುವ ಈ ದಾಳಿಯ ಹೊಣೆಯನ್ನು ಮರಾಠರು ಮತ್ತು ಪರಶುರಾಮ್ ಭಾವ್ ಪಟವರ್ಧನ್ ಅವರ ಮೇಲೆಯೇ ಹೊರಿಸಲಾಗಿದೆ.1791ರ ಸಮಯದಲ್ಲಿ ಮರಾಠರ ನಡುವೆ ಈ ಅನಾಹುತದ ಸುತ್ತ ನಡೆದಿರುವ ಪತ್ರ ವಿನಿಮಯಗಳ ಮೇಲೆ ಭಾಷಾ ಸಮಸ್ಯೆಯಿಂದಲೋ ಅಥವಾ ಉದ್ದೇಶಪೂರ್ವಕವಾಗಿಯೋ ಬೆಳಕು ಚೆಲ್ಲಲಾಗಿಲ್ಲ.