ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 25, 2018

30 ಇಯರ್ಸ್ ಆಫ್ 1987.

‍ನಿಲುಮೆ ಮೂಲಕ

– ಸುಜಿತ್ ಕುಮಾರ್

ಕಾಲದ ಗಾಲಿ ಎಂದಿಗಾದರೂ ನಿಲ್ಲಬಹುದೇ? ಎಂಬ ಮೂರ್ಖ ಪ್ರಶ್ನೆಯನ್ನು ಮಾನವ ಅದೆಷ್ಟು ಬಾರಿ ತನ್ನನ್ನೇ ತಾನು ಕೇಳಿದ್ದಾನೆಯೋ. ಅದೆಷ್ಟು ಬಾರಿ ಅದು ನಿಂತಿದೆ ಎಂದೇ ಭಾವಿಸಿ ಮೋಹಪರವಶನಾಗಿ, ಅಸೂಹಿಯಾಗಿ, ಸಕಲವೂ ನನ್ನದೇ ನಾನೇ ಒಡೆಯ ಎಂಬಂತೆ ಅದೆಷ್ಟು ಬಾರಿ ವರ್ತಿಸಿ ಕುಣಿದು ಮತ್ತೆ ಯಥಾ ಪ್ರಕಾರ ಅದೇ ಕಾಲದ ಗಾಲಿಯೊಳಗೆಯೇ ಮರೆಯಾಗಿದ್ದಾನೆಯೋ? ಅಂದಿನಿಂದ ಇಂದಿನವರೆಗೂ ಮಾನವ ಮೂರ್ಖನೇ. ಗಳಿಕೊಂಡಿರುವ ಒಂದೆರೆಡು ದಿನಗಳನ್ನು ಹಾಯಾಗಿ ಬದುಕಿ ನಕ್ಕು ನಲಿದು ಮರೆಯಾಗುವ ಬದಲು ಇಲ್ಲ ಸಲ್ಲದ ತಾಪತ್ರಯವನ್ನೆಲ್ಲ ತನ್ನ ಮೇಲೆರೆದುಕೊಂಡು ಸುಖಾಸುಮ್ಮನೆ ಗೋಳಾಡಿ ಗೊಣಗಾಡಿ ಅತ್ತು ಒದ್ದಾಡಿ ಮರೆಯಾಗುತ್ತಾ ಬಂದಿದ್ದಾನೆ. ಅಷ್ಟೆಲ್ಲ ಸರ್ಕಸ್ ಗಳನ್ನೂ ಮಾಡಿಯೂ ಆತ ಕಾಲದ ಗಾಲಿಯನ್ನು ತಡೆದು ನಿಲ್ಲಿಸಿದನೇ? ನಿಲ್ಲಿಸಬಲ್ಲನೆ?

ಈಗ ಮೊನ್ನೆ ಮೊನ್ನೆ ಮರೆಯಾಗಿರುವಂತಹ ಇಸವಿ 1987ನನ್ನೇ ತೆಗೆದುಕೊಳ್ಳಿ. ‘ಅಲ್ಲಾ ಗುರು, ನೆನ್ನೆ ಮೊನ್ನೆ ತಾನೇ ಚಡ್ಡಿ ಹಾಕೊಂಡು ಆಡ್ದಡ್ತಾ ಇದ್ದವ ಈಗ ಅವ್ನ ಕಾರು ನೋಡು!’ ಎಂದು ಮೂವತ್ತು ವರ್ಷವನ್ನು ಬರೇ ಮೂರೇ ದಿನಗಳಿಗೆ ಸಮವಾಗಿಸಿ ಬಿಡುತ್ತಾರೆ ಕಾಲದ ಓಟದಲ್ಲಿ ಭಾಗಿಯಾಗಿರುವ ಅನೇಕರು. ಆದರೂ ಎಲ್ಲೋ ಒಂದೆಡೆ ಈ ಮೂರು ದಶಕಗಳು ಮಾನವನ ಓಟದ ದಿಕ್ಕನ್ನೇ ಬದಲಿಸಿದವು ಎಂದರೆ ತಪ್ಪಾಗದು. ಓಟ ಮಾನವನ ಸಹಜ ಗುಣ. ಇಂದು ಬೈಸಿಕಲ್ಲ ತುಳಿಯುವ ಆತ ನಾಳೆ ಬೈಕ ಕ್ಲಚ್ ಅನ್ನು ಹಿಂಡದಿರುತ್ತಾನೆಯೇ? ಅಂತೆಯೇ ಇಂದು ಏನಿದೆಯೋ ನಾಳೆ ಅದನ್ನು ಮಹತ್ತರವಾದ ಮತ್ತೊಂದಾಗಿ ಕಾಣಲು ಆತ ಬಯಸುತ್ತಾನೆ. ನಾಳೆಯ ಅದನ್ನು ನಾಡಿದ್ದು ಮತ್ತೆಂದದ್ದೋ ಆಗಿ ಕಾಣಬಯಸುತ್ತಾನೆ. ಒಟ್ಟಿನಲ್ಲಿ ಕಾಲವನ್ನು ತಡೆಯಲಾಗದವನು ಹೆಚ್ಚೆಂದರೆ ಅದನ್ನು ಬದಲಾಯಿಸಬಹುದಷ್ಟೇ. ಬದಲಾಯಿಸತೊಡಗುತ್ತಾನೆ. ಬದಲಾವಣೆಯ ಬರದಲ್ಲಿ ಆತ ಬದಲಾಯಿಸುತ್ತಿರುವುದು ಕಾಲವನ್ನೇ ಅಥವಾ ತನ್ನನ್ನೇ ಎಂಬುದ ಮಾತ್ರ ಅರಿಯದವನಾಗಿದ್ದಾನೆ!

ಹಾಡುಗಳೆಂದರೆ ಕಿಶೋರ್ ಕುಮಾರ್ ಎಂದುಕೊಂಡವರಿಗೆ ಆತನ ಕೊನೆಯ ಘಳಿಗೆಯನ್ನು ಕಂಡ ವರ್ಷವದು. ಹುಚ್ಚೆದ್ದು ಕುಣಿದಾಡುವಂತೆ ಮಾಡುತಿದ್ದ ಖ ಆ ಬರ್ಮನ್ ರ ಹವಾ ಕೊಂಚ ಕೊಂಚವಾಗಿ ಕ್ಷೀಣಿಸತೊಡಗಿತ್ತು. ಆಂಗ್ರಿ ಯಂಗ್ ಮ್ಯಾನ್ ನ ಗಡ್ಡವೂ ಬಿಳಿಯಾಗತೊಡಗಿದ್ದಿತು! ರಾಜ್ಕುಮಾರ್ ರ ತಲೆಗೂ ವಿಗ್ ಬಂದಿದ್ದಿತು. ಅದೆಲ್ಲೋ ಮುಂಬೈಯ ಮೂಲೆಯಲ್ಲಿ ಕ್ರಿಕೆಟ್ ನ ದೇವರೆಂದು ಕರೆಸಿಕೊಳ್ಳುವ ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣಕ್ರಿಯೆ ಜರುಗುತ್ತಿತ್ತು. ಓವರ್ ಗೆ ಮೂರರಿಂದ ನಾಲ್ಕರ ಸರಾಸರಿಯಲ್ಲಿ ರನ್ ಗಳಿಸುತ್ತಿದ್ದ ತಂಡಗಳು ಆರು ಬಾಲಿಗೆ ಆರು ರನ್ಗಳನ್ನು ಕಬಳಿಸಲು ಶುರುವಚ್ಚಿಕೊಂಡವು. ದೇಶ ಕಂಡ ಮೊದಲ ಮಹಿಳಾ ಪ್ರಧಾನಿಯ ನೆನಪು ಇಂಚಿಚ್ಚೇ ಮಾಸಲು ಶುರುವಾಗಿದ್ದಿತು. ಅಮೇರಿಕವೆಂಬ ದೈತ್ಯ ರಾಷ್ಟ್ರಕ್ಕೆ ಸಡ್ಡು ಹೊಡೆದು ದೇಶೀ ನಿರ್ಮಾಣದ ಸೂಪರ್ ಕಂಪ್ಯೂಟರ್ಗಳನ್ನು ನಿರ್ಮಿಸಲು ದೇಶ ಚಿಂತಿಸುತ್ತಿತ್ತು. ಕುಡಿದು ಕುಣಿದು ಬರಲು ಬ್ಯಾಚುಲರ್ಗಳ ಸ್ವರ್ಗವಾದ ಗೋವಾಕ್ಕೆ ರಾಜ್ಯದ ಸ್ಥಾನಮಾನವನ್ನು ನೀಡಲಾಯಿತು. ಅಲ್ಲದೆ ಕೆಂಪು ಸೊಡ್ಡಿನ ಚೀನಾ ಆಗಲೂ ಅರುಣಾಚಲದ ವಿಷಯದಲ್ಲಿ ಮೂಗು ತೋರಿ ಮಾತು ಯುದ್ಧದವರೆಗೂ ಬೆಳೆದಿದ್ದಿತು.
ಇವೆಲ್ಲ ಘಟನೆಗಳು ಕಾಲದ ಗಾಲಿಯೊಳಗೆ ಕರಗಿ ಅದಾಗಲೇ ಮೂವತ್ತು ಬೇಸಿಗೆಗಳಾಗಿವೆ. ಬಿಸಿಲಿಗೆ ಬೆಂದ ಮನಗಳು ಮಾತ್ರ ದಣಿಯದೆ, ದಣಿಗಳಾಗಿವೆ! ಸರ್ವವೂ ಕೈಗೆಟುಕುವ ಪ್ರಸ್ತುತ ಕಾಲದಲ್ಲಿ ಅವುಗಳು ಸಾಧಿಸುವುದಾದರೂ ಏನು?

ಮೂವತ್ತು ವಸಂತಗಳ ಮೊದಲು ಕಿಶೋರ್ ಕುಮಾರ್ ರವರ ಘನ ಸ್ವರವನ್ನು ಅಮಿತಾಬ್ ಬಚ್ಚನ್ ನ ಹಾಡೊಂದಕ್ಕೆ ಬೆರೆಸಿ ಮೂಡಿಸಿದ ಹಾಡಿನ ಇಂಪನ್ನು ಗುನುಗುತ್ತಾ, ರಾಜಕೀಯ, ಕ್ರಿಕೆಟ್, ದೇಶ ವಿದೇಶಗಳ ಬಗ್ಗೆ ಚರ್ಚಿಸುತ್ತಾ ದೂರದ ಮುಂಬೈಯನ್ನು ಸೇರಲು ಗೋವಾದ ಮೂಲಕ ಹಾದು ಹೋಗುತ್ತಾ, ಅಲ್ಲಿನ ಪರಕೀಯತೆಯನ್ನು ಕಿಟಕಿಯಲ್ಲಿಯೇ ಒಮ್ಮೆ ನೋಡಿ ‘ಏನ್ ಕಾಲ ಬಂತಪ್ಪ’ ಎನ್ನುತ್ತಾ ಮತ್ತದೇ ಕಾಲವನ್ನು ಶಪಿಸುತ್ತಾ, ಸೇರಬೇಕಾದ ಜಾಗಕ್ಕೆ ಸೇರಿ, ವರ್ಷಪೂರ್ತಿ ದುಡಿದು, ಕಣ್ಣರಳಿಸಿ ಕಾಯುವ ಮಕ್ಕಳಿಗೆ ಒಂದೆರೆಡು ಆಟಿಕೆಗಳನ್ನು ಕೊಂಡು ಮತ್ತದೇ ಹಳೆಯ ಹಾಡುಗಳನ್ನು ಗುನುಗುತ್ತ, ಅರೆಬೆತ್ತಲೆಯಾದ ಗೋವಾವನ್ನು ಶಪಿಸುತ್ತಾ ಊರಿಗೆ ಬಂದು ಸೇರುತ್ತಿದ್ದ ಅಪ್ಪಂದಿರುಗಳು.

ಹೆಚ್ಚೆಂದರೆ ಯಾರೋ ನೆಂಟರಿಷ್ಟರು ಕೊಟ್ಟ ಒಂದು ರೂಪಾಯಿಯ ಬಿಲ್ಲೆ. ಅದನ್ನೂ ಎಲ್ಲೂ ಖರ್ಚು ಮಾಡದೆ ಒಂದೆಡೆ ಕೂಡಿಸಿ ಆದ ಚಿಲ್ಲರೆಯ ಜಲ್ ಜಲ್ ಸದ್ದಿನಲ್ಲಿ ಆಕಾಶಕ್ಕೇ ಮಹಡಿಯನ್ನು ಕಟ್ಟುವ ಕನಸ್ಸನ್ನು ಹೆಣೆಯುತ್ತಾ, ದಿನ ಬೆಳಗಾದರೆ ತಮ್ಮ ತೂಕದ ಸರಿ ಸಮಾನದಷ್ಟೇ ಭಾರವಿರುವ ಶಾಲೆಯ ಬ್ಯಾಗನ್ನು ಹೊತ್ತು, ಅರಚಿದರೆ ಚಡ್ಡಿಯೇ ಒದ್ದೆಯಾಗುವ ಶಿಕ್ಷಕರ ಭಯದಿಂದಲೋ ಏನೋ ಸರಿಯಾದ ಸಮಯಕ್ಕೆ, ಹೇಳಿದ ಪಾಠವನ್ನು ಕಲಿತು, ಕೊಟ್ಟ ಮನೆಗೆಲಸವನ್ನು ಮಾಡಿಯೂ ಭಯದ ಎಳೆಯನ್ನು ಜೊತೆಗಿರಿಸಿಕೊಂಡೇ ಶಾಲೆಯನ್ನು ಸೇರುತ್ತಿದ್ದ ಮಕ್ಕಳು.

ಕೆಲವೊಮ್ಮೆ ಕೋಳಿಯೂ ಕಣ್ಣು ಬಿಟ್ಟಿರದ ಸಮಯಕ್ಕೆ ಎದ್ದು ಮನೆಯನ್ನು ಶುಚಿಗೊಳಿಸಿ, ಪೂಜೆ, ಕಾಫಿ, ತಿಂಡಿ, ಊಟ ಎಲ್ಲವನು ಅಕ್ಷರ ಸಹಃ ಯಂತ್ರಗಳಂತೆಯೇ ಮಾಡಿ, ಮಕ್ಕಳನ್ನು, ಮಕ್ಕಳಂತಿದ್ದ ಗಂಡನನ್ನೂ ಎಬ್ಬಿಸಿ, ತಯಾರುಗೊಳಿಸಿ, ಮನೆಯಿಂದ ಹೊರಗಟ್ಟಿ, ಮತ್ತೊಮ್ಮೆ ಮನೆಗುಡಿಸಿ, ಹೂವಿನ ಗಿಡಗಳನ್ನೂ ಒಮ್ಮೆ ಮಾತಾಡಿಸಿ, ಬೀರುವಿನ ಮೇಲಿಟ್ಟಿರುವ ವೀಣೆಯನ್ನು ಹೊರಗೆಳೆದು ಅದರಿಂದ ಒಂದೆರೆಡು ರಾಗಗಳನ್ನು ಗುನುಗಿಸಿ ಮತ್ತೊಮ್ಮೆ ಸಂಜೆಯಾಗುತ್ತಿದ್ದಂತೆ Vesrsion 2.0 ವಿನಂತೇ ಮನೆ ಗೆಲಸದಲ್ಲಿ ತೊಡಗಿಕೊಳ್ಳುತ್ತಿದ್ದ ಅಮ್ಮಂದಿರುಗಳು.

ಇಂದು ಅದೇ ಅಪ್ಪಂದಿರುಗಳು ಅಜ್ಜಂದಿರಾಗಿ, ಮಕ್ಕಳು ಅಪ್ಪಂದಿರಾಗಿ, ಅಮ್ಮಂದಿರು ಅಜ್ಜಿಯರಾಗಿದ್ದರೆ. ಅವರೆಲ್ಲರೂ ಹೇಳುವ, ಕೇಳಬಯಸುವ ಒಂದೇ ಮಾತು ‘ನಮ್ಮ್ ಕಾಲನೇ ಎಷ್ಟೋ ಚೆನ್ನಾಗಿತ್ತು’ ಎಂದು!
ಹಾಗಾದರೆ ಕಾಲ ಬದಲಾಗಿದೆ. ಅಂದು ಅಷ್ಟೆಲ್ಲ ಕಷ್ಟಪಟ್ಟರೂ ಎಂದೂ ಕೊರಗದ, ಗೊಣಗದ ಮನಸ್ಥಿತಿ ಇಂದು ಏನಾಗಿದೆ? ಲಕ್ಷ ಖರ್ಚು ಮಾಡಿ ಮಕ್ಕಳನ್ನು ಸ್ಕೂಲುಗಳಿಗೆ ದಬ್ಬಿಬಿಟ್ಟರೆ ಸಾಕೆ? ಕೈಗೊಂದು ಮೊಬೈಲನ್ನು ಪಡೆದು ಜಗತ್ತನೇ ಜಯಿಸಿ ಬಾ ಎಂಬಂತೆ ಅವರನ್ನು ಮನೆಯಿಂದ ಹೊರಗಟ್ಟಿದರೆ ಸಾಕೆ? ಜಗತ್ತಿನ ಓಟದಲ್ಲಿ ಅಪ್ಪ ಬ್ಯುಸಿ, ಅಮ್ಮನೂ ಬ್ಯುಸಿ. ರಣಓಟಕ್ಕೇ ಒಗ್ಗಿಕೊಳ್ಳದೆ ಎಂಬಂತೆ ಅಜ್ಜ ಅಜ್ಜಿಯರಂತೂ ಅನಾಥಾಶ್ರಮಕ್ಕೆ ಪ್ರಿಯರಾಗಿ ಅದೆಷ್ಟೋ ವರ್ಷಗಳಾಗಿವೆ! ಭಯವೆಂಬ ಬ್ರೇಕನ್ನು ಮಕ್ಕಳಿಗಿಂದು ಶಿಕ್ಷಕರಿಂದಲೂ ಹಾಕಲಾಗದು. ಶಿಕ್ಷಿಸುವ ಮಾತು ಒಂದೆಡೆ ಇರಲಿ ಅಪ್ಪಿ ತಪ್ಪಿ ಗದರಿಸಿದರೂ ನಾಳೆ ಅವರುಗಳೇ ಮಕ್ಕಳ ಕಾಲಿಗೆ ಬಿದ್ದು ಕ್ಷಮೆಯಾಚಿಸಬೇಕಾಗಿ ಬಂದಿದೆ. ಇನ್ನು ಮನೆಯಲ್ಲಿ ಅಪ್ಪ ಅಮ್ಮರಿರದೆ, ಅಜ್ಜ ಅಜ್ಜಿಯರಿರದೆ, ಬೆಳೆಯುವ ಮಕ್ಕಳಿಗೆ ‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎಂಬ ಮಾತು ಮರೀಚಿಕೆಯೇ. ಇಂತಹ ಮನಸ್ಥಿತಿ ಒಬ್ಬ ಕೃಷಿಕನನ್ನಾಗಲಿ, ಸಂಗೀತಗಾರನನ್ನಾಗಲಿ, ಸಾಹಿತ್ಯವನ್ನು ರಚಿಸುವವನ್ನನ್ನಾಗಲಿ ಅಥವಾ ಇತಿಹಾಸ, ಸಂಸ್ಕೃತಿ, ಆಚರಣೆ, ಐಕ್ಯತೆ, ಅನ್ಯೂನತೆಯಂತಹಯಂತಹ ಜವಾಬ್ದಾರಿಯುತ ಅಲ್ಲದೆ ಸಮಾಜದ ಒಳಿತಿಗೆ ಹಾಗು ಉಳಿವಿಗೆ ಅತ್ಯಗತ್ಯವಾದ ಗುಣಗಳನ್ನು ಎಳೆಯರಲ್ಲಿ ಬೆಳೆಸಬಲ್ಲದೇ? ನಾವುಗಳು ಖಂಡಿತವಾಗಿಯೂ ಉತ್ತರಿಸಿಕೊಳ್ಳಬೇಕು.

ಮೂವತ್ತು ವರ್ಷದ ಕೆಳಗೂ ಒಂದು ಓಟವಿತ್ತು. ಆ ಓಟಕ್ಕೆ ಒಂದಿನಿತಾದರೂ ಗುರಿ ಎಂಬುದಿತ್ತು. ನಾವುಗಳು ಅಂದಿನ ಎಲ್ಲ ಗುರಿಗಳನ್ನೂ ತಲುಪಿದರೂ ಇಂದು ಮತ್ತದೇ ಓಟದ ವೇಗದಲ್ಲಿ ಭಾಗಿಯಾಗಿದ್ದೇವೆ. ಎಲ್ಲಿಗೆ, ಏತಕ್ಕೆ, ಎಂಬುದು ತಿಳಿದಿಲ್ಲ! ಬೇಕಿರುವುದೆಲ್ಲವ ಬಿಟ್ಟು ಬೇಡದಿರುವ ಎಲ್ಲೆಡೆಗೆ ಓಡುವ ನಾವುಗಳು ಹೇಳುವುದು ಮಾತ್ರ ‘ಕಾಲ ಬದಲಾಗಿದೆ’ ಎಂದು. ಕಾಲ ನಿಜವಾಗಿಯೂ ಬದಲಾಗಿದೆಯೇ ಅಥವ ನಾವುಗಳು ಮಾತ್ರ ಬದಲಾಗಿ ಕಾಲವನ್ನಷ್ಟೇ ದೂಷಿಸುತ್ತಿದ್ದೇವೆಯೇ? ಉತ್ತರ ಮಾತ್ರ ಅಸ್ಪಷ್ಟ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments