ಎಲೆಕ್ಷನ್ ಪುರಾಣ
– ಎಸ್ ಜಿ ಅಕ್ಷಯ್ ಕುಮಾರ್
“ಅಜ್ಜಿ, ಅಂಗಡಿಗೆ ಯಾರೋ ಪೋಲಿಸರು ಬಂದ” ಹೇಳಿ ಕೂಗಿ ವಿನಾಯಕ ಹಗುರ ಅಂಗಡಿ ಮತ್ತು ಮನೆಯ ಮಧ್ಯವಿದ್ದ ಅರ್ಧ ಗೋಡೆಯ ಹತ್ರ ಬಂದು ಬದಿಗೆ ನಿಂತುಕೊಂಡ. ಆನೊಳ್ಳಿಯಂತಹ ಹಳ್ಳಿಗೆ ಪೋಲಿಸರು ಇಪ್ಪತ್ತು ಕಿಮೀ ದೂರದ ಹೊನ್ನಾವರದಿಂದ ಬರುವಂತಹದ್ದು ಎಂತಾ ಆಗಿದೆ ಹೇಳಿ ತಿಳಕಳುವ ಕುತೂಹಲ ಇದ್ದರೂ ಓದುತ್ತಿದ್ದ ಪುಸ್ತಕ ತುಂಬಾ ಇಂಟರೆಸ್ಟಿಂಗ್ ಆಗಿದ್ರಿಂದ ನಾನು ಅಂಗಳದಲ್ಲಿ ಕುಳಿತಲ್ಲೇ ಮಾತುಕತೆ ಕೇಳಿದರಾಯ್ತು ಅಂತ ಅಲ್ಲೇ ಕೂತಿದ್ದೆ. ಹಿಂದೆ ಅಡುಗೆ ಮನೆಯ ಹತ್ರ ಇದ್ದ ಅಜ್ಜಿ ಅಲ್ಲಿಂದಲೇ,
“ಬಂದೆ” ಹೇಳಿ ಕೂಗಿ, ಲಂಗಕ್ಕೆ ಕೈ ವರೆಸುತ್ತ ಲಗು ಲಗು ಬಂದು,
“ನಮಸ್ತೆ ಸಾಹಬ್ರೇ, ಎಂತಾ ಬೇಕಾಗಿತ್ತು?” ಅಂತ ಕೇಳಿತು.
“ಅಮ್ಮಾ, ನೀರು ಸಿಗಬುಹದಾ? ಕುಡಿಲಿಕ್ಕೆ, ಬಹಳ ಆಸರ ಅಗಿದೆ.”
“ತಂದೆ, ಒಂದು ನಿಮಿಷ” ಎಂದು ಹೇಳಿ ಆಜ್ಜಿ ಒಳಗೆ ಅಡಿಗೆ ಮನೆಗೆ ಹೊಗುತ್ತಾ,
“ಓ ಕಾರ್ತಿಕೋ, ಕೆಳಗೆ ತೋಟಕ್ಕೆ ಮಂಗ ಬಂದು, ಒಂದ್ ಹನಿ ಹೊಡದಿಕಿ ಬಾರೋ.” ಹೇಳಿ ಕೂಗಿ, ಒಳಗಿಂದ ಒಂದು ದೊಡ್ಡ ಚಂಬು ನೀರು ತಂದು ಕೊಟ್ಟಳು.
“ಎಂತಾ ವಿಷಯ, ಸಾಹೆಬ್ರೆ ಜೀಪು ಹೋದಂಗೆ ಆಯ್ತು, ಎಂತಕ್ಕೆ?”
“ಎಂತಾ ಹೇಳುದ್ರ ಅಮ್ಮ, ನಿನ್ನೆ ಎಲೆಕ್ಷನ್ನಿನ ಟೈಮಿಗೆ, ಸಂಜೆ ಮೇಲೆ ಗಲಾಟೆ ಮಾಡಾರೆ, ಅವ್ರ ಸಲುವಾಗಿ, ಈಗ ಅಲೆಯುವ ಹಣೆಬರಹ ನಮ್ದು. ಅದ್ ಬಿಡಿ, ಮಧು ಅದಿಯ?”
“ಅದೆ. ಎಷ್ಟು ಕೊಡ್ಲಿ?”
“ಒಂದು ಕಟ್ಟು ಎಲೆ, ಒಂದು ಹಸಿರು ಮಧು ಕೊಡಿ.” ಹೇಳಿ ಕಿಸೆಯಿಂದ ಹತ್ತು ರೂಪಾಯಿಯ ಎರಡು ನೋಟು ಕೊಟ್ಟು, “ಸರಿ ಆಯತ್ರಲ್ಲಾ” ಅಂತ ಹೇಳಿ ಹೊರಟ.
“ಆಜ್ಜಿ, ಎಂತದಡೆ? ಆ ನಮ್ನಿ ಪೋಲಿಸರು ಬಂದ” ಹೇಳಿ ವಿನಾಯಕ ಹಗುರ ಹೊರಗೆ ಬಂದ.
“ನೀ ಯೆಂತ ಅಡಿಕಂಡಿದ್ದೆ ಅಲ್ಲಿ?” ಅಂತ ಅಜ್ಜಿ ತನ್ನ ಸಣ್ಣ ಮೊಮ್ಮಗನ ಕಡೆ ನೋಡಿ ನೆಗ್ಯಾಡ್ತಾ ಬಂದು ಅಂಗಳದ ಚಿಡೆ ಮೇಲೆ ಕುಳಿತುಕೊಂಡಳು.
“ಏಂತದಡ ಕತೆ? ಆ ನಮ್ನಿ ಪೋಲೀಸರ ಗೋಲೆನೆ ಬಂದ.” ಅಂದು ನಾನು,
“ವಿನಾಯಕಾ ಎಂತಾ ಮಾಡ್ದ್ಯಾ?” ಅಂತ ಕೇಳಿದೆ.
“ನಾ ಎಂತು ಮಾಡಿನಿಲ್ಯಪ್ಪ, ನೀ ನನ್ನ ಎಂತ ಕೇಳ್ತೆ? ಅದರ ಕೇಳು” ಹೇಳಿ ಅಜ್ಜಿ ಬದಿಗೆ ನೋಡ್ದ.
“ಅಲ್ಲಾ ಮೊನ್ನೆ ಎಂತದೊ ಕೊಲೆ ಮಾಡ್ತೆ ಹೇಳ್ತಿದ್ಯಲ, ಅದಕ್ಕೆ ಕೇಳ್ದ್ನಪ್ಪ. ಮಾಡಿದ್ಯ ಏನ್ ಕತೆ? ಈಗೆಯ ಪೋಲಿಸರ ಹತ್ರ ಹೇಳಿಬಿಡು ಚಾಕಲೇಟು ಕೊಡ್ತೆ.” ಅಂದೆ.
“ಹೋಗ ಅತ್ಲಾಗೆ. ನೀನು ಬೇಡ, ನಿನ್ನ ಚಾಕಲೇಟು ಬೇಡ.” ಅಂತ ಹೇಳಿ ವಿನಾಯಕ ತನ್ನ ಸೈಕಲ್ ತಗಂಡು ರೋಡಿಗೆ ಹೋದ.
“ಅವ್ ನಿನ್ನೆ ಗಲಾಟೆ ಸಲುವಾಗಿ ಬಂದವಡ. ಎಂತ ಹೇಳುದ ಈ ಸುಟ್ಟ ಜನಕ್ಕೆ! ನಿನ್ನೆ ಎಲೆಕ್ಷನ್ನು ಆಗಿತ್ತು. ಸಂಜೆ ಮೇಲೆ ಪ್ರಭು ಕಡೆಯವ್ಕೆ, ಆ ಜೈರಾಜಂಗೆ ಗಲಾಟೆಯಾಗಿ, ಡ್ಯೂಟಿ ಮೇಲೆ ಇದ್ದ ಪೋಲಿಸರು ೪ ಜನರನ್ನ ತಗ ಹೋಯ್ದ ಹೇಳಿ ಮಾಬ್ಲಣ್ಣ ಹೇಳಕತ್ತ ಇದ್ದಿದ್ದನಪ. ಎಂತಾ ಕರ್ಮವೋ.” ಅಂತ ಅಜ್ಜಿ ನಿಟ್ಟುಸಿರು ಬಿಟ್ಟಳು.
“ಎಲೆಕ್ಷನ್ ದಿವ್ಸವೆ ಬೇಕಾಗಿತ್ತ ಇವ್ಕೆ, ಹೊಡ್ಕಂಬಲೆ? ಇದು ಸದ್ಯಕ್ಕೆ ಥಂಡ ಅಗು ವಿಚಾರ ಅಲ್ಲ ಬಿಡು. ಎಂತಕ್ಕೆ ಹೊಡೆದಾಟ ಆದದ್ದು?” ಎಂದೆ.
“ಆ ಕೆ.ಪಿ. ನಾಯ್ಕನ ಲಾರಿ ಡ್ರೈವರು ಸುರೇಶ ಮೇಲೆ ಶಾಲೆ ಹತ್ರ ನಾರಾಯಣಣ್ಣಂಗೆ ಉಲ್ಟಾ-ಸೀದಾ ಮಾತಾಡಿದ್ನಪ, ಅಂವ ಕೆಳಗೆ ಬಂದು ಉಚ್ಚಿ ಹೊಯ್ತ ನಿತ್ಕಂಡಾಗ ಮೇಲಿಂದ ಜೈರಾಜ ಕಲ್ಲು ನೆಗದಿ ಹಾಕ್ದ. ಇಂವಂಗೆ ತಲೆಗ-ಕಾಲಿಗ ಎನೋ ಜೋರು ಪೆಟ್ಟಾಗಿ ಆಸ್ಪತ್ರೆಗೆ ತಗಂಡು ಹೋದ ಮೇಲೆ, ಪ್ರಭು ಕಡೆಯವ್ವು ಜೈರಾಜಂಗೆ ಹೊಡದಿ, ವದ್ದಿ ಎಲ್ಲಾ ಗಲಾಟೆ ದೊಡ್ಡ ಆಗ್ತು ಹೇಳಕರೆ ಪೋಲಿಸರು ಬಂದು, ೪ ಜನರನ್ನ ಅರೆಸ್ಟ್ ಮಾಡಿ ತಗಹೊಯ್ದ, ಈಗ ಇವ್ವು ಅದರ ವಿಚಾರಣೆಗೆ ಬಂದ ಕಾಣ್ತು”. ಅಂದವಳು, ಮತ್ತೇನೋ ನೆನಪು ಮಾಡಿಕಂಡು,
“ಕೆ.ಪಿ. ನಾಯ್ಕನ ಮನೆಯವ್ವು ಎಲ್ಲಾರುವ ತಿರುಪತಿಗೆ ಹೋಪದು ಹೇಳಿ ಆಗಿತ್ತು. ಈಗ ಇವ್ವು ಬಂದಿ ಎಲ್ಲಾರನು ಬಸ್ ಇಳಿಸಿ, ಪ್ರಭು, ದಯಾನಂದನ ಸಂತಿಗೆ ತಾಸುಗಟ್ಲೆ ತಿರುಗಿ, ಅವ್ವು ೧೨ ಗಂಟೆಗೆ ಹೋಗಕ್ಕಾದವ್ವು ೪ ಗಂಟೆಗೆ ಹೋಯ್ದ. ನಿನ್ನ ಮಾವ ಆವಾಗ ಅಂವನ ಫೋನ್ ಬಂತು ಹೇಳಿ ಊಟನೂ ಮಾಡದೆ ಹೋದಂವ ಈಗ ೫.೩೦ ಆದ್ರೂ ಬಂದಿನಿಲ್ಲೆ”, ಹೇಳಿ ಗೊಣಗ್ತಾ ಇರಬೇಕಾದ್ರೆ ಒಂದರ ಹಿಂದೆ ಒಂದರಂತೆ ನಾಲ್ಕು ಲಾರಿ, ದೊಡ್ಡ ಶಬ್ದ ಮಾಡ್ತಾ, ರಸ್ತೆ ಧೂಳು ಎಬ್ಬಿಸಿ ಭರ್ರೋ ಅಂತ ಹೋಯಿತು.
ಆಜ್ಜಿ ಈಗಷ್ಟೆ ಗುಡಿಸಿದ ಅಂಗಳಕ್ಕೆ ಎಲ್ಲಾ ಧೂಳು ಹಾರಿಸಿ ಹೋದ ಲಾರಿ ಡ್ರೈವರನಿಗೆ, “ಇವನ ಮನೆ ಹಾಳಾಗ” ಅಂತ ಬಯ್ದು, ರೋಡ್ ಮೇಲೆ ಸೈಕಲ್ ಹೋಡಿತಿದ್ದ ವಿನಾಯಕನ ಬದಿಗಿ ತಿರುಗಿ
“ಸೈಕಲ್ ಹೊಡದಿದ್ದು ಸಾಕು. ಒಳಗಬಾರೊ ಮಾರಾಯ, ಲಾರಿ ತಿರುಗುಲೆ ಬೇರೆ ಶುರು ಆತು. ಒಳಗೆ ಬಾ ಸಾಕು” ಹೇಳಿ ಕೂಗಿ,
“ಸೈಕಲ್ ಒಂದು ಇದ್ರೆ ಆಗೋತು ಬೇರೆ ಎಂತದು ಸಂಬಂಧ ಇಲ್ಲೆ, ಇಡೀ ದಿವ್ಸು ರೋಡ್ ಮೇಲೆ ಇಪ್ಪುದು” ಅಂತ ತನಗೆ ತಾನೇ ಗೊಣಗಿದಂತೆ ಮಾಡಿ, ನಂಗೆ “ಒಳಗೆ ನಡಿ ಇಲ್ಲಿ ಬರಿ ಧೂಳು.” ಹೇಳಕತ್ತ ಒಳಗೆ ಬಂದು ಕುತ್ಗಂತು.
“ಕಲ್ಲು ಕ್ವಾರಿ ಮತ್ತೆ ಶುರು ಆಯ್ದನೆ? ಈ ನಮ್ನಿ ಲಾರಿ ತಿರಗ್ತು?” ಹೇಳಿ ಕೇಳ್ತಾವ ನಾನೂ ಒಳಗೆ ಬಂದು ಕುಳಿತೆ.
“ಇಲ್ಯಪ್ಪ. ಅದು ಬಂದ್ ಬಿದ್ದು ೧೦ ವರ್ಷ ಆತು. ಇದು ರೇತಿ ತೆಗಿವರ್ದು. ಈಗ ಇಲ್ಲಿ ಶರಾವತಿ ಬುಡದಲ್ಲಿ ಮಹೇಶಂದು, ಕೆ.ಪಿ. ನಾಯ್ಕಂದು ಎರಡೆರಡು ಸೈಟು ಆಯ್ದು. ಇಡಿ ದಿವ್ಸ ದೋಣಿಲಿ ಹೊಯ್ಗೆ ತೆಗುದು, ಸಂಜೆಯಾದರೆ ಲಾರಿ ತುಂಬಿ ಕಳ್ಸುದು ಎರಡೇ ಕೆಲ್ಸ, ರೋಡು ಪೂರಾ ಕಿತ್ತ ಹಮ್ಸಿಕಿದ. ನಾ ನೆಟ್ಟ ಡೇರೆ ಗಿಡ ಅಷ್ಟರ ಮೇಲೂ ಒಂದೊಂದು ಮಣ ಮಣ್ಣು ಕುಂತು ಬಗ್ಗಿ ಹೋಪಂಗೆ ಆಯ್ದು. ಅಂಗಳದಲ್ಲೆಲ್ಲೂ ಕುತ್ಗಂಬ ಹಂಗೇ ಇಲ್ಲೆ” ಅಂತು.
ಅಷ್ಟು ಹೊತ್ತಿಗೆ ಶೋಭಿತ್ ಸೈಕಲ್ ಒಳಗೆ ತಂದವ, ಲಾರಿಯಂವಂಗೂ, ಅಜ್ಜಿಗೂ ಹನಿ ಹನಿ ಬಯ್ದುಕೊಳ್ಳತಾ ಸೀದಾ ಅಂಗಡಿಯ ಫ್ರಿಡ್ಜ್ ಹತ್ರ ಹೋಗಿ ಒಂದು ಪೆಪ್ಸಿ ತಗಂಡು,
“ಅಕ್ಷಯ್ ಭಾವ, ನಿಂಗ್ ಬೇಕನೋ?” ಹೇಳಿ ಕೂಗಿದ.
“ನಂಗ ಬೇಡದೋ. ನಿಂಗು ಬೇಡ ಕಾಣ್ತಪ” ಅಂದಿದ್ದಕ್ಕೆ,
“ನಾ ತಿಂಬವ್ನೆಯ, ನಿಂಗ ಬೇಡಾದ್ರೆ ಇಲ್ಲೆ, ನಂಗ ಬೇಕು” ಹೇಳಿ ಒಂದು ಪೆಪ್ಸಿ ತಗಂಡು ಬಂದದ್ದಕ್ಕೆ, ಅಜ್ಜಿ “ತಿಂಬದಕ್ಕೆ ಒಂದು ಮಿತಿ ಇದ್ದ ಇಲ್ಯ, ಮಧ್ಯಾಹ್ನ ಮೇಲೆ ನಾಲ್ಕನೆದು ಇದು. ಕೈ ಕಾಲು ತೊಳ್ಕಂಡಾದ್ರು ತಿನ್ನು” ಹೇಳಿದ್ದೆಂತದೂ ಕೇಳಿದ್ದೇ ಇಲ್ಲೆ ಅನ್ನುವವರ ಹಂಗೆ ಓಡಿ ಹೋಗಿ ಬಾಲಮಂಗಳ ತಗಂಡು ಬಂದು, ಅಜ್ಜಿ ಎದ್ರಿಗೆ ಹಲ್ಲು ಕಿರಿದು ಕೂತು, ೪ ಪೇಜು ತಿರುಗಿಸಿ ಮುರುಗಿಸಿ, ಪೆಪ್ಸಿ ತಿಂತಾ
“ಎಷ್ಟೆಷ್ಟು ದೊಡ್ಡ ಮಿಷಿನ್ ತಂದ ಗೊತ್ತಿದ್ದ? ನಾ ಆ ದಿವಸ ಮಾಬ್ಲಣ್ಣನ ಬೈಕಿನ ಮೇಲೆ ಹೋಗಿದ್ದೆ. ನೋಡ್ಕ ಬಪ್ಪಲೆ, ಸಾಮ್ಮನಿ ದೊಡ್ಕಿಲ್ಲೆ. ಮತ್ತೆ ನಿಂಗೆ ಇನ್ನೊಂದು ಗೊತ್ತಿದ್ದ? ಕೆಲ್ಸಗಾರರು ಯಾರೂ ಇಲ್ಲಿಯವಲ್ಲಾ. ಎಲ್ಲಾ ಬಯಲಸೀಮೆಯವ್ವು, ಆ ಟಾರ್ಪಾಲಿರ್ತಲ, ಅದರ ಟೆಂಟ್ ಹಾಕ್ಕಂಡಿ ಉಳ್ಕಂಡದ. ಇಲ್ಲಿ ಮರ್ತನಾಯ್ಕನ ಎಣ್ಣೆ ಅಂಗಡಿ ಹತ್ರ ಸಂಜೆಯಾದರೆ ಇಸ್ಪೀಟ್ ಆಡ್ತಿರ್ತ. ನಾ ಆ ದಿವ್ಸ ನೋಡಿದ್ದೆ.” ಹೇಳಿ ತನಗೆ ಗೊತ್ತಿದ್ದದ್ದನ್ನೆಲ್ಲ ಒಂದೆ ಸಮನೆ ವದರಿ ಮುಖ ಮುಖ ನೋಡ್ತಾ ಕುಳಿತ.
“ಹೌದ, ಊರೆಲ್ಲಾ ರಾಡಿ ಎಬ್ಸಿಕಿದ, ಅತ್ಲಾಗೆಲ್ಲ ಹೋಪ ಆಟಿಲ್ಲೆ, ಎಲ್ ನೋಡಿದ್ರೆ ಅಲ್ಲಿ ರಾಡಿ ಮಾಡಿಟ್ಟಿದ್ದ.” ಅಂತ ಹೇಳಿ ವಲಸಿಗರೆಂಬ ಜಾಗತಿಕ ಸಮಸ್ಯೆ ತಮ್ಮ ಹಳ್ಳಿಗೂ ಆವರಿಸುತಿರುವ ಕರಾಳ ಸತ್ಯವನ್ನು ತನಗೆ ತಿಳಿದಹಾಗೆ ಬಿಚ್ಚಿಟ್ಟಿತು.
“ಆ ನಾರಾಯಣಣ್ಣ ಇದ್ನಲೆ. ಅಂವದು ಏಂತ ಕತೆ? ಈಗೂ ದರ್ಶನ ಬತ್ತಾ? ಅಥವ ನಿಂತು ಹೋಯ್ದ?” ಅಂತ ನಾನು ಟಾಪಿಕ್ ಬದಲಾಯಿಸಿದೆ.
“ಅಂವ ಇಂವ ಹೇಳ್ಬೇಡ ಅಕ್ಷಯಾ, ನಿಂಗೆ ನಂಬಿಕೆ ಇದ್ದ, ಇಲ್ಯ. ಆದರೆ ಈಗುವ ನೂರಾರು ಜನ ಅಲ್ಲಿಗೆ ಬತ್ತ. ಅಂವ ಸಂಜೆ ಮೇಲೆ ಕುಡ್ಕಂಡು ತಿರಗ್ತಾ, ಇಸ್ಪೀಟ್ ಆಡ್ತಾ, ಗುಟ್ಕಾ ಹಾಕಿದ್ ಬಾಯಲ್ಲೆಯಾ ಮಂತ್ರ ಹೇಳ್ತ ಎಲ್ಲದೂ ಹೌದು, ನಾ ಇಲ್ಲೆ ಹೇಳ್ತನಿಲ್ಲೆ. ಆದ್ರೂ ಅಂವ ಹೇಳದ್ದನ್ನ ನಂಬುವವ್ವು ರಾಶಿ ಜನ ಇದ್ದ ಗೊತ್ತಾತಲ?” ಹೇಳಿ ಒಂದೇ ಉಸಿರಿಗೆ ಹೇಳುವಾಗ ನಾನು ನಗು ತಡೆಯಲು ಸ್ವಲ್ಪ ತ್ರಾಸ್ ಪಡುತ್ತಿದ್ದೆ.
“ಇರ್ಲಿ ಬಿಡು ಮಾರಾಯ್ತಿ, ಈಗ ನೀ ನಂಗೆ ಹೊಡಿಯಡಾ ಆತಲೆ.” ಹೇಳಿ ನಗೆಯಾಡುತ್ತಿದ್ದಾಗ, ಕಾರ್ತಿಕ ತೋಟದಿಂದ ಬಂದು ಕುರ್ಚಿ ಮೇಲೆ ಧಡ್ಡನೆ ಕುತ್ಗಂಡು,
“ಅಜ್ಜಿ ಒಂದು ಚಂಬು ನೀರು ತಗಬಾ, ಆಸರ ಆಗೊಯ್ದು. ಮಂಗನ ಅತ್ಲಾಗೆ ಮಾಬ್ಲಣ್ಣನ ತೋಟದ ಅತ್ಲಾಗೆ ತವರಿ ಹಾಕಿಕಿ ಬಂದೆ” ಹೇಳಿ ಕರೆಂಟ್ ಇಲ್ಲಾದ ಫ್ಯಾನಿನಡಿ ಕೈಯಲ್ಲೆ ಗಾಳಿ ಹಾಕ್ಕತ್ತವ, ಮಿನಿಸ್ಟ್ರಿಂದ ಹಿಡಿದು ಹಳ್ಳಿ ಲೈನ್ಮ್ಯಾನ್ ತನಕ ಎಲ್ಲರಿಗೂ, ಅವರ ವಂಶಸ್ಥರಿಗೂ ಬೈಯುತ್ತಾ ಕುಳಿತ.
ಅಜ್ಜಿ ನೀರು ತಂದು ಕೊಟ್ಟು, ಒಳಗೆ ಹೊಗ್ತಾ ಇರಬೇಕಾದರೆ ನನ್ನ ಮನಸಿನಲ್ಲಿ ಹಲವಾರು ಯೋಚನೆಗಳು ಆವರಿಸಲಾರಂಭಿಸಿದವು. ಮಲೆನಾಡಿನ ಮಡಿಲಲ್ಲಿ, ಶರಾವತಿಯ ಬಗಲಿನಲ್ಲಿ ಪ್ರಕೃತಿ ಸೌಂದರ್ಯವನ್ನೆ ಹೊದ್ದು ನಿಂತಿದ್ದ ಹಳ್ಳಿಯಾಗಿದ್ದ ಆನೊಳ್ಳಿ, ಮಾನವನ ತೀರದ ಅತಿಯಾಸೆಗೆ ಬಲಿಯಾಗುತ್ತಿದೆ. ನಮ್ಮ ಊರಿನವ ಎಂದು ಕರೆಸಿಕೊಳ್ಳುತ್ತಿದ್ದವರಲ್ಲಿ ಇಂದು ನಮ್ಮ ಪಾರ್ಟಿ ಅಥವ ವಿರೋಧ ಪಾರ್ಟಿ ಎಂಬ ವಿಭಜನೆಯಾಗ್ತಿದೆ. ಶರಾವತಿಯ ಒಡಲನ್ನು ಮರಳುಗಳ್ಳರು ದಿನವು ಬರಡಾಗಿಸುತ್ತಿದ್ದಾರೆ. ಆನೊಳ್ಳಿ ಗುಡ್ಡ ಹತ್ತಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ಇಂದು ಬಸ್ ಹತ್ತಿ ಹೊನ್ನಾವರ ಪೇಟೆಯ ಇಂಗ್ಲೀಷ್ ಶಾಲೆಗಳಿಗೆ ಹೋಗುತ್ತಿದ್ದಾರೆ. ದೇಶ ದೇಶಗಳ ನಡುವೆ ಎಂದುಕೊಳ್ಳುತ್ತಿದ್ದ ವಲಸಿಗರ ಸಮಸ್ಯೆ ಹಳ್ಳಿಯನ್ನೂ ಕಾಡುತ್ತಿದೆ. ದೇವರಂತೂ ಇರುವುದೆ ಲೂಟಲು ಎಂಬಂತಾಗಿ ಹೋಗಿದೆ. ಅತಿಯಾಸೆಗೆ ಒಂದು ಮಿತಿ ಎಲ್ಲವೆ? ನಾವು ಏನನ್ನೋ ಗಳಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತಿದ್ದೆವೆಯೆ? ಎಂದು ಯೋಚಿಸುತ್ತಿರಬೇಕಾದಾಗ ಹಿಂದೆ ಅಡುಗೆ ಮನೆಯಿಂದ ಒಂದು ಧ್ವನಿ ಕೇಳಿಸಿತು
“ನಿನ್ನೆ ಸಂಜೆ ಮಾಡಿದ ಕೇಸರಿ ಇದ್ದು. ತಿಂತ್ಯನಾ?”
“ಹೌದೆ. ತಿಂದೆಯಾ ರಾಶಿ ದಿವಸ ಆತು.” ಅಂತ ಹೇಳಿ ನಾನು ಪ್ರಕೃತಿಯ ಸಮಸ್ಯೆಗಳನ್ನ ಅದರ ಪಾಡಿಗೆ ಬಿಟ್ಟು, ನನ್ನ ಪ್ರಿಯ ತಿಂಡಿಯೆಡೆ ಓಡಿದೆ.
ನಾನು ಹುಬ್ಬಳ್ಳಿ ಪಟ್ಟ್ ನದವನು, ಮಲೆನಾಡಿನ ವರ್ಣನೆ ಕೇಳಿ,ಅಲ್ಲಿಯ ಭಾಷೆಯ ಸುಂದರತೆ ನನ್ನ ಮನಸ್ಸು ತುಂಬಿತು.ಹಳ್ಳಿಯ ವಾತಾವರಣ ಕಾಲಕ್ಕೆ ತಕ್ಕಂತೆ ಬದಲಾಗುತ್ತಲಿದೆ. ಮೊದಲಿನ ವಾತಾವರಣವೇ ಚನ್ನಾಗಿತ್ತು, ಲೇಖಕರಿಗೆ ಧನ್ಯ್ ವಾದಗಳು.