ವಿಷಯದ ವಿವರಗಳಿಗೆ ದಾಟಿರಿ

Archive for

31
ಮೇ

ಚಿತ್ರದುರ್ಗ: ಒಂದು ಅಪರೂಪ ಐತಿಹಾಸಿಕ ತಾಣ.

–    ಆರ್.ರಾಘವೇಂದ್ರ, ಚಳ್ಳಕೆರೆ

ಇತಿಹಾಸ ಪ್ರಸಿದ್ಧ ಚಿತ್ರದುರ್ಗ ಜಿಲ್ಲೆಯು ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಮತ್ತು ಹೊಳಲ್ಕೆರೆ ಎಂಬ ಆರು ತಾಲ್ಲೂಕು ಕೇಂದ್ರಗಳನ್ನೊಳಗೊಂಡಂತೆ ೧೮೫ ಗ್ರಾಮ ಪಂಚಾಯಿತಿ ಕೇಂದ್ರಗಳಿಂದ ಕೂಡಿರುತ್ತದೆ. ಚಿತ್ರದುರ್ಗ ಜಿಲ್ಲೆಯು ೮೩೮೮ ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಒಟ್ಟು ೧೫,೧೦,೨೨೭ ಜನಸಂಖ್ಯೆ ಇರುತ್ತದೆ.

ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ, ಚಿತ್ರದುರ್ಗ ತಾಲ್ಲೂಕು ಸಾಪೇಕ್ಷಿತವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕಿನ ಗುಂಪಿನಲ್ಲಿದ್ದರೆ, ಚಳ್ಳಕೆರೆ, ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ ಅತಿ ಹಿಂದುಳಿದ ತಾಲ್ಲೂಕುಗಳ ಗುಂಪಿನಲ್ಲಿವೆ ಹಾಗೂ ಮೊಳಕಾಲ್ಮೂರು ತಾಲ್ಲೂಕು ಅತ್ಯಂತ ಹಿಂದುಳಿದ ತಾಲ್ಲೂಕಿನ ಗುಂಪಿನಲ್ಲಿದೆ. ಆದರೆ ರಾಜ್ಯದ ಹಿಂದುಳಿದ ಪ್ರದೇಶವಾಗಿದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. ಅದು ಹೇಗೆಂದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕ್ಷರತೆ ಪ್ರಮಾಣ, ಮಕ್ಕಳು-ಉಪಾಧ್ಯಾಯರ ಅನುಪಾತ, ೬-೧೪ ವಯೋಮಾನದಲ್ಲಿ ಶಾಲೆ ಸೇರದ ಮಕ್ಕಳ ಪ್ರಮಾಣ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇವುಗಳ ಮೇಲೆ ನಾವು ಜಿಲ್ಲೆಯ ಶೈಕ್ಷಣಿಕ ಪ್ರಗತಿಯನ್ನು ಕಾಣಬಹುದು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶವೆಂದು ಮೊಳಕಾಲ್ಮೂರು ತಾಲ್ಲೂಕು ಒಂದೇ. ಚಿತ್ರದುರ್ಗವು ತಾಮ್ರದ ಖನಿಜ ಸಂಪತ್ರವನ್ನು ಇಂಗಳದಾಳ್‌ನಲ್ಲಿ ಒಳಗೊಂಡಿದೆ.

ಸಾಹಿತ್ಯ ಕ್ಷೇತ್ರದ ಮೇರುವ್ಯಕ್ತಿಯಾದ ರಸಕವಿ ‘ಕುವೆಂಪು’ರವರನ್ನೇ ಶಿಷ್ಯರಾಗಿ ಪಡೆದಂತಹ ಕೀರ್ತಿ ಟಿ.ಎಸ್.ವೆಂಕಣ್ಣಯ್ಯರವರದು. ತಳಕಿನ ಕುಟುಂಬದ ತ.ಸು.ಶಾಮರಾಯರು, ತ.ರಾ.ಸು., ಅಂಬುಜಾ ತ.ರಾ.ಸು., ರವರು ಸೇರಿದಂತೆ, ಬೆಳಗೆರೆ ಮನತೆನದ ಬೆಳಗೆರೆ ಚಂದ್ರಶೇಖರಶಾಸ್ತ್ರಿ, ಬೆಳಗೆರೆ ಕೃಷ್ಣಶಾಸ್ತ್ರಿ, ಬೆಳಗೆರೆ ಜಾನಕಮ್ಮ ಮುಂತಾದ ಸಾಹಿತ್ಯ ಗಣಿಗಳು ಚಿತ್ರದುರ್ಗದ ಸಾಹಿತ್ಯವನ್ನು ಅಮರವಾಗಿಸಿದ್ದಾರೆ. ತ.ರಾ.ಸು. ರವರ ದುರ್ಗಾಸ್ತಮಾನ, ನಾಗರಹಾವು ಹಾಗೂ ಇತರೆ ಕೃತಿಗಳು ವಿಶ್ವಕ್ಕೆ ಚಿತ್ರದುರ್ಗದ ಪರಿಚಯವನ್ನು ಬಹುಸುಂದರವಾಗಿ ಮಾಡಿಕೊಟ್ಟಿದೆ. ‘ಬಿ.ಎಲ್.ವೇಣು’ ರವರ ‘ಕಲ್ಲರಳಿ ಹೂವಾಗಿ’ ಚಲನಚಿತ್ರವು ರಾಷ್ಟ್ರಮಟ್ಟದಲ್ಲಿ ಪ್ರಶಂಸೆ ಪಡೆದಿದ್ದು, ಖ್ಯಾತ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರು, ಪ್ರೋ. ಲಕ್ಷ್ಮಣ ತೆಲಗಾವಿ, ಪ್ರೋ. ಬಿ.ರಾಜಶೇಖರಪ್ಪ, ಜಾನಪದ ತಜ್ಞರಾದ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಮಲ್ಲಿಕಾರ್ಜುನ ಕಲಮರಹಳ್ಳಿ, ನೇಮಿಚಂದ್ರ, ಮುಂತಾದವರು ಸೇರಿದಂತೆ ಅನೇಕ ಸಾಹಿತ್ಯ ಕಣ್ಮಣಿಗಳನ್ನೊಳಗೊಂಡಿದ್ದು, ದುರ್ಗವು ಸಾಹಿತ್ಯದ ಗಣಿಯಾಗಿದೆ. ಮತ್ತಷ್ಟು ಓದು »

31
ಮೇ

ಕನ್ನಡ ಟಿವಿ ವಾಹಿನಿಗಳು ಹಾಗೂ ಮೂಢನಂಬಿಕೆಗಳ ಪ್ರಸಾರ

ಆನಂದ ಪ್ರಸಾದ್

ಕನ್ನಡದ ಎಲ್ಲ ಟಿವಿ ವಾಹಿನಿಗಳೂ ಜ್ಯೋತಿಷ್ಯವೆಂಬ ಅವೈಜ್ಞಾನಿಕ ಹಾಗೂ ಮೂಢನಂಬಿಕೆಗಳನ್ನು ಬಲಪಡಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು ಇದು ಮಾಧ್ಯಮಗಳಿಗೆ ಇರಬೇಕಾದ ಜವಾಬ್ದಾರಿಗೆ ವಿರುದ್ಧವಾದುದು.  ವಿಜ್ಞಾನದ ಆವಿಷ್ಕಾರವಾದ ಟಿವಿಯನ್ನು ತಮ್ಮವ್ಯಾಪಾರ   ಹೆಚ್ಚಿಸಿಕೊಳ್ಳಲು ಜ್ಯೋತಿಷಿಗಳಿಗೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿರುವ ಟಿವಿ ವಾಹಿನಿಗಳು ಯಾವುದೇ ನಾಚಿಕೆ ಇಲ್ಲದೆ ಈ ಕೆಲಸದಲ್ಲಿ ತೊಡಗಿವೆ.  ವಿಜ್ಞಾನಿಗಳು ಶ್ರಮ ವಹಿಸಿ ಸಂಶೋಧಿಸಿದ ಟಿವಿ ಮಾಧ್ಯಮ ಇಂದು ಅವೈಜ್ಞಾನಿಕ ವಿಚಾರಗಳು ಹಾಗೂ ಮೂಢನಂಬಿಕೆಗಳನ್ನು ಬಲಪಡಿಸಲು ದುರುಪಯೋಗವಾಗುತ್ತಿದೆ.  ಇದನ್ನು ಪ್ರಜ್ಞಾವಂತರು ವಿರೋಧಿಸಬೇಕಾಗಿದೆ.  ಮಾಧ್ಯಮಗಳಿಗೆ ಜನರನ್ನು ವಿಚಾರವಂತರನ್ನಾಗಿ ಮಾಡುವ ಮಹತ್ತರ ಜವಾಬ್ದಾರಿ ಇದೆ.  ಇದನ್ನು ಕಡೆಗಣಿಸಿ ೨೧ ಶತಮಾನದಲ್ಲೂ ಜ್ಯೋತಿಷ್ಯ, ವಾಸ್ತು ಎಂಬ ವೈಜ್ಞಾನಿಕ ಆಧಾರಗಳಿಲ್ಲದ ಪುರೋಹಿತಶಾಹಿ ವಿಚಾರಗಳನ್ನು ಜನರ ಮೇಲೆ ಹೇರಲು ಯತ್ನಿಸುತ್ತಿರುವ ಟಿವಿ ವಾಹಿನಿಗಳ ಧೋರಣೆಯನ್ನು ವಿಚಾರವಂತರು, ಸಾಹಿತಿಗಳು, ವಿಜ್ಞಾನಿಗಳು, ತಂತ್ರಜ್ಞರು, ಪ್ರಜ್ಞಾವಂತರು  ವಿರೋಧಿಸಬೇಕಾಗಿದೆ.

ಇಂದು ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪುಗೊಳ್ಳುತ್ತಿರುವ ಹೊತ್ತಿನಲ್ಲಿ ಮೂಢನಂಬಿಕೆಗಳನ್ನು ಬಲಪಡಿಸುವ ಪುರೋಹಿತಶಾಹಿ ಕುತಂತ್ರದ ವಿರುದ್ಧವೂ ಹೋರಾಟ ನಡೆಯಬೇಕಾದ ಅಗತ್ಯ ಇದೆ.  ಕಷ್ಟಪಟ್ಟು ದುಡಿದು ತಿನ್ನುವುದರ ಬದಲು ಕೆಲವು ಪುರೋಹಿತಶಾಹಿಗಳು ಜ್ಯೋತಿಷ್ಯ, ವಾಸ್ತುವಿನ ಹೆಸರಿನಲ್ಲಿ ಜನರ ನಂಬಿಕೆಗಳನ್ನು, ಜನರ ಭಯವನ್ನು ತಮ್ಮ ಜೇಬು ತುಂಬಿಸಿಕೊಳ್ಳಲು ಸುಲಭೋಪಾಯವಾಗಿ ಬಳಸಿಕೊಳ್ಳುತ್ತಿರುವುದೂ ಒಂದು ರೀತಿಯ ಭ್ರಷ್ಟಾಚಾರವಲ್ಲವೇ?  ಇಂಥ ಭ್ರಷ್ಟಾಚಾರಕ್ಕೆ ಟಿವಿ ವಾಹಿನಿಗಳು ಕೈಗೂಡಿಸುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸವೆಂದು ಟಿವಿ ವಾಹಿನಿಗಳನ್ನು ನಡೆಸುವವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ.  ಜ್ಯೋತಿಷ್ಯ, ವಾಸ್ತು ಇಲ್ಲದೆ ಪಾಶ್ಚಾತ್ಯ ರಾಷ್ಟ್ರಗಳು ಅಭಿವೃದ್ಧಿ ಸಾಧಿಸಿವೆ.   ಹೀಗಿರುವಾಗ ನಮ್ಮ ಟಿವಿ ವಾಹಿನಿಗಳು ಜ್ಯೋತಿಷ್ಯ, ವಾಸ್ತುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮೆರೆಸುತ್ತ್ತಿರುವುದು ಯಾವ ಪುರುಷಾರ್ಥ ಸಾಧನೆಗಾಗಿ ಎಂದು ನಾವು ಕೇಳಬೇಕಾಗಿದೆ.  ಮತ್ತಷ್ಟು ಓದು »

30
ಮೇ

ಬಸವನ ಗುಡಿಯಲ್ಲಿ ‘ಕರಪ್ಷನ್ ಸಾಕು’ ಆ೦ದೋಲನ. ನಾ ಕ೦ಡ೦ತೆ

– ಹರೀಶ್ ಆತ್ರೇಯ

ಕಿರಣ್ ಬೇಡಿ ಸ್ವಾಮಿ ಅಗ್ನಿವೇಶ್ ರ ಪ್ರಚೋದಕನಕಾರಿ ಭಾಷಣ, ಶ್ರೀ ಬಾಲಸುಬ್ರಹ್ಮಣ್ಯ೦ ರ ನಿರೂಪಣೆ ಮತ್ತು ಗಣ್ಯರ ಭಾಷಣದ ಅನುವಾದ, ಅರವಿ೦ದ್ ಖೇಜ್ರಿವಾಲರ ಜನಲೋಕಪಾಲ್ ಕಾನೂನು ಪಾಠ, ಕೆಲ ಕಾರ್ಯತಕರ್ತರ ಉತ್ಸಾಹ, ನೈಜ ಕಾಳಜಿ. ಇನ್ನೂ ಕೆಲವರ ಶೋ, ವಾಲ೦ಟೀರ್ ಟೀ ಶರ್ಟ್ ಮೇಲೆ ಎಲ್ಲರ ಕಣ್ಣು, ಮಾಸ್ಟರ್ ಹಿರಣ್ಣಯ್ಯರನವರ ಅನುಭವದ ಮಾತು, ಅಣ್ಣಾ ಹಜಾರೆಯವರ ಮುಗ್ಧ ನುಡಿಗಳು, ರಾಜಕಾರಣಿಗಳ/ ಸರ್ಕಾರಿ ಅಧಿಕಾರಿಗಳ ಮೋಸದಿ೦ದ ಬೇಸತ್ತ ಜನರ ಹತಾಶ ನುಡಿಗಳು, ಜೈಕಾರ, ಗಲೀ ಗಲೀಮೆ ಶೋರ್ ಹೈ ಸಾರೆ ನೇತ ಚೋರ್ ಹೈ ಎನ್ನುವ ಘೋಷಣೆಗಳು, ಇನ್ನೂ ಕೆಲವರಿಗೆ ಇಲ್ಲೇನ್ ನಡೀತಿದೆ ಅ೦ತ್ಲೇ ಗೊತ್ತಿಲ್ದೆ ಇರೋ ಅಮಾಯಕತೆ (?) ಇದೆಲ್ಲರ ನಡುವೆ ನಮ್ ಯಡ್ಯೂರಪ್ಪನವರ ಪರ ಅದ್ಯಾರೋ ನರಸಿ೦ಹ (ಮು. ಮುಖ್ಯಮ೦ತ್ರಿ) ಎ೦ಬುವವನ ಪ್ರಚಾರ, ಸ್ವರಾತ್ಮ ತ೦ಡದ ಪಾಪ್ ರೀತಿಯ ಸ೦ಗೀತ ಅದಕ್ಕೆ ಜನರು ತಲೆದೂಗಿದ್ದು, ಇವು ನಿನ್ನೆಯ ಆ೦ದೋಲನದ ಹೈಲೈಟ್.

ಹನ್ನೊ೦ದು ಗ೦ಟೆಯಿ೦ದ ೨:೫೦ರ ತನಕ ಕಾರ್ಯಕರ್ತರ ಜನಗಳ ಮತ್ತು ಅಲ್ಲಿ ಆಡುತ್ತಿದ್ದ ಯುವಕರ ಮುಖಗಳನ್ನು ಗಮನಿಸುತ್ತಾ ಬ೦ದೆ. ಅಣ್ಣಾ ಹಜಾರೆಯವ್ರು ಬ೦ದದ್ದು ೨:೫೦ ಕ್ಕೆ. ಅಲ್ಲಿಯವರೆಗೂ ಒ೦ದೆರಡು ಬಾರಿ ಸ್ಟೇಜಿನ ಹತ್ರ ಸುತ್ತ ಮುತ್ತ ಓಡಾಡ್ತಾ ಎಲ್ಲರ ಅಭಿಪ್ರಾಯಗಳನ್ನ ಸ೦ಗ್ರಹಿಸುತ್ತಾ ನಿ೦ತೆ. ಕಾರ್ಯಕರ್ತನೊಬ್ಬ “ನೀವು ವಾಲ೦ಟೀರಾ”? ಅ೦ತ ಕೇಳಿದ “ಅಲ್ಲಪ್ಪ” ಅ೦ದೆ “ಹೀಗೆಲ್ಲಾ ಓಡಾಡ್ಬೇಡಿ ಸರ್ ಬಾ೦ಬ್ ಥ್ರೆಟ್ ಇದೆ “ಅ೦ದ ಆಯ್ತಣ್ಣ ಅ೦ತ ಒ೦ಕಡೆ ಕೂತು ಅವರ ಕೆಲ್ಸಾನ ಗಮನಿಸುತ್ತಾ ಬ೦ದೆ. ಮನೇಲಿ ಇರಕ್ಕೆ ಬೋರ್ ಆಗಿ ನಾವೂ ಟಿ ವೀಲಿ ಕಾಣ್ತೀವಲ್ಲ ಅ೦ತ ಯೋಚಿಸ್ಕೊ೦ಡ್ ಬ೦ದು ಟೈಟ್ಸ್, ಅರೆ ತೋಳಿನ ಟಾಪ್ (ಇನ್ನೂ ಕೆಲವರು ಬನೀನ್ ಥರದ್ದು, ಬೇಡ ಬಿಡಿ) ಹಾಕ್ಕೊ೦ಡ್ “ಹೇ ಇಟ್ಸ್ ವೆರಿ ಫನ್ನಿ ಯೋ ನೋ, ಐ ಅಯಾಮ್ ಆಲ್ಸೋ ಎ ವಾಲ೦ಟೀರ್ ಹಿಯರ್, ಇಲ್ಲಿ ಸಕ್ಕತ್ತಾಗಿದೆ, ಐ ವಾನ ವೇರ್ ದಿಸ್ ಟಿ ಶರ್ಟ್, ಹ್ಮ್ ಲೆಟ್ಸ್ ಗೋ ಇನ್ ಸೈಡ್ ದಿ ವಾನ್ ” ಅ೦ತ ಹೋದವರು ಅರ್ಧ ಗ೦ಟೆಯನ೦ತರ ಸರ್ವಾ೦ಗ ಸು೦ದರಿಯರಾಗಿ ಬ೦ದರು.

ಮತ್ತಷ್ಟು ಓದು »

30
ಮೇ

ಶಿಕ್ಷಣ ಎಂಬ ವ್ಯಾಪಾರದ ಕುರಿತು…..

ಅರೆಹೊಳೆ ಸದಾಶಿವರಾವ್

ಈಗ ಎಲ್ಲಿ ನೋಡಿದರೂ ಶೈಕ್ಷಣಿಕ ವರ್ಷದ ಪುನರಾರಂಭದ ಕಾಲ. ಇತ್ತೀಚೆಗೆ ಶಿಕ್ಷಣದ ಕೆಲವು ಮಹತ್ವದ ಫಲಿತಾಂಶಗಳು ಹೊರಬಿದ್ದುವು. ಯಾಕೋ ಇವುಗಳನ್ನು ಗಮನಿಸಿದಾಗ ಕೆಲವು ಪ್ರಶ್ನೆಗಳು ಏಳುತ್ತವೆ. ಹೀಗೇ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಗಮನಿಸುತ್ತಿದ್ದಾಗ, ನನಗೆ ತಿಳಿದ ಕೆಲವು ಶಾಲೆಗಳು ನೂರು ಶೇಕಡಾ ಬಂದದ್ದನ್ನು ಓದಿದೆ. ಆದರೆ ಆ ಶಾಲೆಗಳು ವಾಸ್ತವಿಕವಾಗಿ ಆ ರೀತಿಯ ಗುಣಮಟ್ಟದ ಶಿಕ್ಷಣವನ್ನು ಕೊಟ್ಟ ಬಗ್ಗೆ ಅನುಮಾನಗಳಿದ್ದುವು. ಕೊನೆಗೆ ಈ ನೂರು ಶೇಕಡಾದ ಮರ್ಮವನ್ನು ತಿಳಿಯಹೋದರ ಅಚ್ಚರಿ ಹುಟ್ಟಿದ ಅಂಶವೆಂದರೆ, ಅಲ್ಲಿಂದ ಈ ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳು ಕೇವಲ ೧೩ಎಂಬುದು!  ಮತ್ತೊಂದು ಶಾಲೆಯ ಪರಿಚಿತ ಮುಖ್ಯೋಪಾದ್ಯಾಯರು ತಮ್ಮ ಶಾಲೆಯ ಫಲಿತಾಂಶವನ್ನು ನೂರು ಶೇಕಡಾ ನಿರೀಕ್ಷಿಸಿದ್ದೆ. ಆದರೆ ಕೇವಲ ೮೭ ಶೇಕಡಾ ಬಂತೆಂದು ಅಳಲು ತೋಡಿಕೊಂಡಾಗ ಅವರ ಶಾಲೆಯಲ್ಲೆಷ್ಟು ವಿದ್ಯಾರ್ಥಿಗಳು ಕುಳಿತಿದ್ದರು ಎಂದು ಪ್ರಶ್ನಿಸಿದರೆ ಆಶ್ಚರ್ಯ ಕಾದಿತ್ತು. ಒಟ್ಟೂ ಕುಳಿತ ನೂರು ಮಕ್ಕಳಲ್ಲಿ ೮೭ ಜನ ಮಕ್ಕಳು ಉನ್ನತ ದರ್ಜೆಯಲ್ಲಿ ಪಾಸಾಗಿದ್ದರು!. ಆದರೆ ಪತ್ರಿಕೆಯಲ್ಲಿ ಹಾಕಿಕೊಳ್ಳಲು ಅವರ ಫಲಿತಾಂಶದ ಶೇಕಡಾವಾರು ೮೭ ಮಾತ್ರ!. ಮತ್ತಷ್ಟು ಓದು »

28
ಮೇ

ದೆವ್ವಗಳ ಹಾಡುಗಳು…!!

– ಉಮೇಶ್ ದೇಸಾಯಿ

  ಶೀರ್ಷಿಕೆ ಓದಿ ಆಶ್ಚರ್ಯಗೊಳ್ಳಬಹುದು ಆದರೆಇದು ವಾಸ್ತವ ಹೌದು ನಮ್ಮ ಸಿನೇಮಾಗಳಲ್ಲಿ ಬಹಳ ದಿನಿಂದಲೂ ದೆವ್ವ ಹಾಡುತ್ತಿವೆ..ಹಾಗೂ ಆ ಹಾಡು ಹಿಟ್ ಸಹ ಆಗಿವೆ. ಇಲ್ಲಿ ಸಿನೇಮಾಜನ ಅವುಗಳಿಗೆ ದೆವ್ವ ಅನ್ನುವ ಬದಲು ಅತೃಪ್ತ ಆತ್ಮ ಅಂತ ಕರೆದರು. ಈ ಹಾಡುಗಳ ವಿಶೇಷತೆ ಅನೇಕ ಇವೆ..

ಕೃತಕವಾಗಿ ಹಾಕಿದ ಸೆಟ್ಟು.., ಬಿಳಿಸೀರೆ ಧರಿಸಿದ ನಾಯಕಿ ,ಆ ನೀರವತೆಯಲ್ಲೂ ಸುಶ್ರಾವ್ಯವಾಗಿ ಕೇಳಿಬರುವ ಹಿನ್ನೆಲೆ ಸಂಗೀತ, ಭಯ ಬೆವರು ಹೀಗೆ ಹತ್ತು ಹಲವು ಭಾವ ಮುಖದಲ್ಲಿ ತೋರುವ ನಾಯಕ. ಹೀಗೆ ಈ ಹಾಡುಗಳಿಗೆ ಒಂದು ಫಾರ್ಮುಲಾ ಇತ್ತು. ಹಾಗೂ ಆ ಫಾರ್ಮುಲಾ ಯಶಸ್ವಿಯೂ ಆಗಿತ್ತು. ನಮ್ಮ ಭಾರತೀಯ ಯಾವ ಭಾಷೆಯ ಚಿತ್ರವನ್ನೇ ತಗೊಂಡರೂ ಅಲ್ಲಿ ಈ ಬಗೆಯ ಹಾಡು ಇದ್ದೇ ಇರುತ್ತವೆ.

ರಾತ್ರಿವೇಳೆ ಯಾಕಾಗಿ ಈ ಹಾಡು ಅವುಗಳ ಉದ್ದೇಶ ಏನು ? ಮುಖ್ಯವಾಗಿ ನಾಯಕನಿಗೆ ದಿಗಿಲು ಹುಟ್ಟಿಸುವುದು

ನಾಯಕ ಟಾರ್ಚು ಹಿಡಿದುಕೊಂಡು ಹಾಡಿನ ಜಾಡು ಬೆಂಬತ್ತಿ ಬಿಳಿಸೀರೆ ಧರಿಸಿದ ಮೋಹಿನಿಯನ್ನು ಬೆನ್ನತ್ತುತ್ತಾನೆ. ರಹಸ್ಯ ಭೇದಿಸದೆ ದಿಗಿಲುಗೊಳ್ಳುತ್ತಾನೆ. ಚಿತ್ರ ವೀಕ್ಷಿಸುತ್ತಿದ್ದ ಪ್ರೇಕ್ಷಕನೂ ನಾಯಕನ ಜೊತೆಗೂಡುತ್ತಾನೆ. ಈ ಅತೃಪ್ತ ಆತ್ಮ ಅವುಗಳ ಮೇಲೆ ಚಿತ್ರಿತವಾದ ಹಾಡು ಹಿಟ್ ಅಂತ ಮೊದಲೇ ಹೇಳಿರುವೆ. ಇನ್ನೊಂದು ವಿಶೇಷ ಅಂದರೆ ಹೆಚ್ಚಿನವುಗಳು ಲತಾ ಹಾಡಿದ್ದು. ಸುಮಾರು ಅರವತ್ತು ವರ್ಷಗಳ ಹಿಂದೆ ತೆರೆಕಂಡ “ಮೆಹಲ್” ಚಿತ್ರದ “ಆಯೇಗಾ ಆಯೇಗಾ ಆನೇವಾಲಾ ಆಯೇಗಾ..”ಹಾಡು. ಲತಾಳ ದನಿ ತೀರ ಎಳಸು ಅನಿಸುತ್ತದೆ ಈ ಹಾಡಿನಲ್ಲಿ.

ಮಧುಬಾಲಾಳ ಮಾದಕ ಚೆಲುವು, ಅಶೋಕ್ ಕುಮಾರನ ದಿಗಿಲು ತುಂಬಿದ ಮುಖ ಒಟ್ಟಿನಲ್ಲಿ ಈ ಹಾಡು ಒಂಥರಾ ಟ್ರೆಂಡ್ ಸೆಟರ್. ಹಾಡಿನ ಸಾಲು ಸಹ ಎಷ್ಟು ಚಂದ…“ತರಸಿ ಹುಯಿ ಜವಾನಿ ಮಂಜಿಲ್ ಕೋ ಢುಂಡತಿಹೈ ಮಾಜಿ ಬಗೈರ್ ನೈಯ್ಯಾ ಸಾಹಿಲ್ ಕೊ ಢುಂಡತಿಹೈ..” ಅನೇಕ ಹಾಡಿವೆ. ಒಂದು ವಿಶೇಷದ್ದು. ಮುಬಾರಕ್ ಬೇಗಂ ಎನ್ನುವ ಗಾಯಕಿ ಹಾಡಿದ್ದು–“ಹಮಾರಿ ಯಾದ್ ಆಯೇಗಿ” ಚಿತ್ರದ್ದು. “ಕಭಿ ತನಹಾಯಿಮೆ ಯೂಂ ಹಮಾರಿ ಯಾದ್ ಆಯೇಗಿ…” ಮುಬಾರಕ್ ಬೇಗಂಳದ್ದು ಒಂಥರಾ ಶೀರು ದನಿ. ಈ ಹಾಡಿಗೆ ಅವಳು ಜೀವತುಂಬಿದ್ದಳು. ಇದು ಒಂಥರಾ ಸೇಡಿನ ಹಾಡೇ..ಸಾಲು ಗಮನಿಸಿ..“ಯೇ ಬಿಜಲಿ ರಾಖ ಕರಜಾಯೇಗಿ ತೇರೆ ಪ್ಯಾರ್ ಕಿ ದುನಿಯಾ ನ ತೂ ಜೀ ಸಕೇಗಾ ಔರ್ ನ ತುಜಕೊ ಮೌತ್ ಆಯೇಗಿ..”. ಹೇಮಂತ ಕುಮಾರ್ ಆರ್ಥರ್ ಕಾನನ್ ಡಾಯಲ್ ನ ಕಾದಂಬರಿ ಆಧರಿಸಿ ಒಂದು ಚಿತ್ರ ತೆಗೆದ–“ಬೀಸ್ ಸಾಲ್ ಬಾದ್”. ಈ ಚಿತ್ರದ ಥೀಮ್ ಸಾಂಗ್ “ಕಹಿ ದೀಪ್ ಜಲೆ ಕಹಿ ದಿಲ್ ಜರಾದೇಖಲೆ ಆ ಕರ್ ಪರವಾನೆ..”ಲತಾಳ ಅಧ್ಭುತ ಹಾಡು ಇದು.

ಅವಳ ದನಿಗೆ ಮಾರುಹೋಗಿ ಆ ದನಿ ಬಂದ ದಿಕ್ಕಿಗೆ ಹೋಗಿಬಿಡಬೇಕು ..ಅಂಥಾ ಸಮ್ಮೋಹಕ ಹಾಡು ಇದು. ಈ ಚಿತ್ರದ ಯಶಸ್ಸಿನ ನಂತರ ಹೇಮಂತ್ ದಾ ಮತ್ತೆರಡು ಚಿತ್ರ ತೆಗೆದ– “ಕೋಹರಾ” ಹಾಗೂ “ಬಿನ್ ಬಾದಲ್ ಬರಸಾತ್’. ಕೋಹರಾ ಚಿತ್ರದ ಲತಾಳ ದನಿಯ “ಜುಂ ಜುಂ ಢಲತಿ ರಾತ್ ..” ಹಾಡು ಕೇಳಿದರೆ ರೋಮಾಂಚನ ಆಗುವುದು ನಿಜ.

ಲತಾ ಮದನ್ ಮೋಹನ್ ಸಂಗೀತದಲ್ಲಿ ಹಾಡಿದ “ನೈನಾ ಬರಸೆ ರಿಮಝಿಮ್ ನೈನಾ ಬರಸೆ..” ಹಾಡು ಚಿತ್ರದ ಜೀವಾಳ. ಅಂತೆಯೇ “ತು ಜಹಾಂ ಜಹಾಂ ಚಲೇಗಾ ಮೇರಾ ಸಾಯಾ ಸಾಥ್ ಹೋಗಾ..” ಹಾಡು ಆ ಸಿನೇಮಾಗಳಿಗೆ ಒಂದು ಮೆರುಗು ಕೊಟ್ಟಿದ್ದವು. ಕೊಲೆ ಯಾರು ಮಾಡಿದ್ದು, ಕೊಲೆಗಾರ ಯಾರು ಎಂದು ನಾಯಕ ಮನೋಜ್ ಕುಮಾರ್ ತಲೆಕೆಡಿಸಿಕೊಳ್ಳುತ್ತಿರುವಾಗ ಶೂನ್ಯದಿಂದ ತೇಲಿ ಬರುವ ಹಾಡು “ಗುಮನಾಮ್ ಹೈ ಕೋಯಿ ಬದನಾಮ್ ಹೈ ಕೋಯಿ..” ಪ್ರೇಕ್ಷಕನಲ್ಲಿ ನಡುಕ ಹುಟ್ಟಿಸುತ್ತದೆ. ಲತಾಳ ಕಂಠಸಿರಿ ಕೇಳಿಯೇ ಅನುಭವಿಸಬೇಕು..!

ಕೇವಲ ನಾಯಕಿ ಮಾತ್ರ ಹೀಗೆ ಅತೃಪ್ತಳಲ್ಲ. ಪ್ರೇಯಸಿಯನ್ನು ಪಡೆಯದ ನೋವಿನಲ್ಲಿಯೇ ಸಾಯುವ ನಾಯಕ ಅವನ ತೃಷೆ ಹಾಡಾಗಿ ಮಾರ್ಪಟ್ಟು ನಾಯಕಿಯನ್ನು ಕರೆಯುತ್ತದೆ..” ಆ ಜಾ ತುಜ್ ಕೊ ಪುಕಾರೆ ಆ ಜಾ ಮೈ ತೋ ಮಿಟಾ ಹುಂ ತೇರಿ ಚಾಹ್ ಮೇ..”ರಫಿಯ ಈ ಹಾಡು ನೀಲಕಮಲ್ ಚಿತ್ರದ್ದು. ಹಾಗೆಯೇ ಕಿಶೋರ್ ಹಾಡಿದ “ಮೇರೆ ಮೆಹಬೂಬ್ ಕಯಾಮತ್ ಹೋಗಿ ಆಜ್ ರುಸವಾ ತೇರಿ ಗಲಿಯೊಂಮೆ ಮೊಹಬ್ಬತ್ ಹೋಗಿ….”. ಕಿಶೋರ್ ಆ ಅತೃಪ್ತ ಆತ್ಮದ ನೋವಿಗೆ ದನಿಯಾಗಿದ್ದ.

ಕನ್ನಡದಲ್ಲೂ ಇಂತಹ ಹಾಡುಗಳಿವೆ. ನನಗೆ ನೆನಪಿಗೆ ಬರುವುದು ಮೂರು ಹಾಡುಗಳು–

“ದೇವರಕಣ್ಣು” ಚಿತ್ರದ್ದು ಪಿ. ಸುಶೀಲಾ ಹಾಡಿದ ಹಾಡು “ಓ ಇನಿಯಾ ನೀ ಎಲ್ಲಿರುವೆ ನಿನಗಾಗಿ ನಾ ಕಾದಿರುವೆ…” ಹಾಗೆಯೇ ಶಂಕರನಾಗ್ ನಿರ್ದೇಶನದಲ್ಲಿನ “ಜನ್ಮಜನ್ಮದ ಅನುಬಂಧ” ಚಿತ್ರದ ಎಸ್. ಜಾನಕಿ ಹಾಡಿದ  “ತಂಗಾಳಿಯಲ್ಲಿ ನಾನು ತೇಲಿ ಬಂದೆ ನಿನ್ನನ್ನು ಪ್ರೀತಿಯಿಂದ ಸೇರಲೆಂದೆ…”  ಇನ್ನೊಂದು ಹಾಡಿದೆ ಅದೂ ಕೂಡ ಜಾನಕಿ ಅವರೇ ಹಾಡಿದ್ದು “ಈ ಗುಲಾಬಿಯು ನಿನಗಾಗಿ ಅದು ಚೆಲ್ಲುವ ಪರಿಮಳ ನಿನಗಾಗಿ…” , ಇದು “ಮುಳ್ಳಿನಗುಲಾಬಿ” ಚಿತ್ರದ್ದು. ಇನ್ನೂ ಅನೇಕ ಹಾಡುಗಳಿರಬಹುದು. ನಾ ಮರೆತಿರಬಹುದು.

ಈ ಬಗೆಯ ಹಾಡುಗಳಿಗೆ ಅದರದೇ ಆದ ಛಂದ ಇದೆ ಲಾಲಿತ್ಯ ಇದೆ. ಅಂತೆಯೇ ಅವು ಅಮರ ಗೀತೆಗಳಾಗಿವೆ.

***********

photo courtesy: thehitman-cthemusic.blogspot.com

27
ಮೇ

ಬಯಸಿದ್ದೆಲ್ಲ ನಮಗೇ ಸಿಗಬೇಕೆಂಬ ಹಠವಾದರೂ ಏಕೆ…???

– ಅಮಿತಾ ರವಿಕಿರಣ್

ಉಷಾ ಕಟ್ಟೆಮನೆ ಅವರ ಬ್ಲಾಗು ಓದುತ್ತಿದ್ದೆ …ಪ್ರೆಮಿಸಿದವನ ಕಣ್ಣು ಕಿತ್ತ ಘಟನೆಯೊಂದರ ಕುರಿತಾದ ಬರಹವದು….ಅದನ್ನು ಓದುತ್ತ ಓದುತ್ತ ಹಸಿರಾದ ನೆನಪೊಂದನ್ನು ಅಕ್ಷರದಲ್ಲಿ ಬಂಧಿಸಿಡುವ ಪ್ರಯತ್ನ ಮಾಡುತ್ತಿರುವೆ…

ನಾನು  ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ದಿನಗಳವು…ನನ್ನೂರಿಂದ  ವಿಶ್ವವಿದ್ಯಾಲಯ ಸುಮಾರು ೭೪ ಕಿ ಮಿ ದೂರ..ದಿನ ಬೆಳಿಗ್ಗೆ ೮ ಕ್ಕೆ ನಾನು ಮನೆಯಿಂದ ಹೊರಡುತ್ತಿದ್ದೆ ..ಆ ಸಮಯದಲ್ಲಿ ಲಭ್ಯವಿದ್ದ ಬಸ್ಸುಗಳಲ್ಲಿ ವಿದ್ಯಾರ್ಥಿಗಳೇ ತುಂಬಿರುತ್ತಿದ್ದರು…ನಾ ಮುಂದು ನೀ ಮುಂದು ಎಂದು ಸೀಟು ಹಿಡಿಯೋದು…ಕಿಟಕಿಯಿಂದಲೇ ಕರ್ಚೀಪು ಎಸೆಯೋದು..ಹೇಗೋ ಒಂದು ಸೀಟು ಗಿಟ್ಟಿಸಿ ಕುಳಿತುಕೊಂಡರೆ ಹುಬ್ಬಳ್ಳಿ ತನಕ ಯಾವುದೊ ರಗಳೆ ಇಲ್ಲ….
ನಂತರ ಪುಟ್ಟ ಕಾಡು..ಬಿದಿರುಮೆಳೆ..ಬಾಚಣಿಕಿ ಡ್ಯಾಮ್ ..ಗಳನ್ನು ದಾಟಿದ ನಂತರ ಸಿಗುವುದು ತಡಸ್ ಎಂಬ ಪುಟ್ಟ ಊರು ..ಅಲ್ಲೊಂದಿಷ್ಟು ವಿದ್ಯಾರ್ಥಿಗಳು ತುಂಬುತ್ತಿದ್ದರು …ಬಸ್ಸು ತುಂಬಿದ ಗರ್ಭಿಣಿಯಂತೆ..ಅಲ್ಲೇ ಸಿಗುತ್ತಿದ್ದಳಾಕೆ…ಕೃಷ್ಣನ ತಾಯಿಯ ಹೆಸರವಳದು…ಸ್ನೇಹಿತೆ ಅಂತ ಹೇಳಲಾರೆ…ಸುಮ್ಮನೆ ನಗುತ್ತಿದ್ದಳು..ಅಥವಾ ದೂರದಿಂದಲೇ ಕೈ ಬೀಸುತ್ತಿದ್ದಳು..ಆಕೆಗೆ ಯಾವತ್ತು ಸೀಟ್ ಸಿಗುತ್ತಿರಲಿಲ್ಲ…ನಿಂತ ವಿದ್ಯಾರ್ಥಿಗಳ ಬ್ಯಾಗು,ಪುಸ್ತಕ ಕುಳಿತವರ ಮಡಿಲಲ್ಲಿ ಆರಾಂ ಮಾಡುತ್ತಿದ್ದವು…ಹಾಗೆ…ಪ್ರತಿ ದಿನ ಅಲ್ಲದಿದ್ದರೂ..ಹೆಚ್ಚಿನ ಸಂಧರ್ಭದಲ್ಲಿ ಆಕೆ ಮತ್ತು ನಾನು ಬಸ್ ನಲ್ಲಿ ಭೇಟಿ ಆಗುತ್ತಿದ್ದೆವು…
ಚಂದದ ಹುಡುಗಿ…ಆಕೆಗೂ ಕನಸುಗಳಿದ್ದವು..ಮಧ್ಯಮವರ್ಗದ ಎಲ್ಲಾ ಹುಡುಗಿಯರಿಗೆ ಇರೋ  ಹಂಗೆ ಆಕೆಗೂ ಬಾನು ಮುಟ್ಟೋ ಕನಸಿತ್ತು…ಗಂಡ ಮನೇ ಮಕ್ಕಳ ಬಗ್ಗೆ ಸುಂದರ ಕಲ್ಪನೆಗಳಿದ್ದವು.ಇದೆಲ್ಲ ಇದ್ದ ಮೇಲೆ….ಹದಿವಯಸ್ಸಿಗೆ ಈ ಜಾಯಮಾನದಲ್ಲಿ ಕಂಪಲ್ಸರಿ ಅನ್ನೋ ಒಂದು ಅಫ್ಫೆರೂ ಇತ್ತು…ಹಾಗಂತ ಅವಳೇನು ನನ್ ಬಳಿ ಹೇಳಿರಲಿಲ್ಲ…ಗೆಳತಿಯರ ತಮಾಷೆ…,ಆಕೆಯ ಸುಖಾಸುಮ್ಮನೆ ನಗು..ಕಣ್ಣಂಚಿನ ತಿರುಚು .ಮೌನದಲ್ಲಿ ಮಾತು…ಇವೆಲ್ಲ ಅದಕ್ಕೆ ಪೂರಕವಾಗಿದ್ದವು…ಅದೇನು ಅಪರಾಧ ಅಲ್ಲ ಬಿಡಿ….
ಆದಿನ ಬೆಳಿಗ್ಗೆ ಕಪ್ಪು ಬಣ್ಣದ ಉಡುಗೆಯಲ್ಲಿ ಚಂದ ಕಾಣುತ್ತಿದ್ದಳು …ಅದೇ ಹೂ ನಗು…ಹಾಯ್ !ಅನ್ನೋ ರೀತಿಯ ಒಂದು ಕೈ ಬೀಸೋ ಮೂಲಕ ಮಾತಿಲ್ಲದೆ ಮಾತಾಡಿದ್ದಳು ಹುಡುಗಿ….ಹುಬ್ಬಳ್ಳಿ ಬಂತು ಸೀಟು ಹಿಡಿಯುವಾಗ ಇರೋ ಅವಸರದ ಮೂರು ಪಟ್ಟು ಅವಸರ ಇಳಿಯುವಾಗ…ಮತ್ತೆ ಬೇರೆ ಬಸ್ಸ ಹಿಡಿಬೇಕಲ್ಲ..”ಕ್ಲಾಸಸ್ ತಪ್ಪುತ್ತೆ..”ಇವತ್ತು ಮುಗೀತು ಮತ್ತೆ ಗೈರು ನಾ ಕ್ಲಾಸ್ ಗೆ..ಅಂತ..ಎಲ್ಲರು ಮಾತಾಡ್ತಾ ದೂದಡಿ ಕೊಂಡು ಇಳಿದು ಹೋಗಿದ್ದೆವು ಎಂದಿನಂತೆ… ಮತ್ತಷ್ಟು ಓದು »
27
ಮೇ

ನಾಗೇಶ್ ಹೆಗಡೆಯವರ ಮನೆಯಲ್ಲಿ ಒಂದೆರಡು ತಾಸು…

– ಹರ್ಷ ಕುಗ್ವೆ

 ನಮ್ಮ ‘ದ ಸಂಡೆ ಇಂಡಿಯನ್’ ಪತ್ರಿಕೆಯ ’ಸಾಕ್ಷಿ ಪ್ರಜ್ಞೆ’ ಅಂಕಣಕ್ಕಾಗಿ ಈ ಸಲಕ್ಕೆ ನಾಗೇಶ್ ಹೆಗಡೆಯವರನ್ನು ಸಂದರ್ಶನ ಮಾಡೋಣ ಎಂದು ತೀರ್ಮಾನಿಸಿ ಅವರಿಗೆ ಕಾಲ್ ಮಾಡಿದಾಗ ನಿಮ್ಮ ಪ್ರಶ್ನೆಗಳೇನಿವೆ ಕಳುಹಿಸಿ, ನಾನು ಉತ್ತರ ಕಳುಹಿಸುತ್ತೇನೆ ಎಂದರು. ಸಂದರ್ಶನದ ನೆಪದಲ್ಲಿಯಾದರೂ ಅವರನ್ನು ಖುದ್ದಾಗಿ ಮಾತನಾಡಿಸುವ ಅವಕಾಶ ಮಿಸ್ ಆಗಿ ಬಿಡುತ್ತಲ್ಲಾ, ಛೆ ಎಂದು ಮನಸ್ಸಲ್ಲೇ ಹೇಳಿಕೊಂಡು ’ಆಯ್ತು ಸರ್ ಎಂದು ಮರುಮಾತಲ್ಲೇ ‘ನೀವು ಫ್ರೀ ಇರೋದಾದ್ರೆ ನಿಮ್ಮ ಮನೆಗೇ ಬರ‍್ತೀನಿ ಸರ್’ ಎಂದೆ. ಅದಕ್ಕವರು, ನಿಮಗೆ ಬರಬೇಕೆಂದರೆ ಬನ್ನಿ. ನಾನು ಬಿಡುವಾಗೇ ಇರ‍್ತೀನಿ. ಆದ್ರೆ ಪ್ರಶ್ನೆಗಳನ್ನು ಮೊದಲೇ ಕಳುಹಿಸಿರಿ ಎಂದರು. ’ಓಕೆ’ ಸರ್ ಹಾಗಾದ್ರೆ ಬೆಳಿಗ್ಗೆ ಬರ‍್ತೀನಿ ಎಂದು ಅವರ ಮನೆಯ ವಿಳಾಸ ಬರೆದುಕೊಂಡೆ.

ಪತ್ರಿಕೋದ್ಯಮದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ನನ್ನಂತಹವರಿಗೆ ಈ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನೂ, ಅನುಭವವನ್ನೂ ಗಳಿಸಿಕೊಂಡಿರುವ ನಾಗೇಶ್ ಹೆಗಡೆಯವರಂತಹವರ ಜೊತೆ ಒಂದಷ್ಟು ಹೊತ್ತು ಕಳೆಯುವುದಕ್ಕಿಂತ ಬೇರೆ ಭಾಗ್ಯ ಇದೆಯೇ? ಮರುದಿನ ಬೆಳಿಗ್ಗೆ ಆರುವರೆಗೇ ಮನೆ ಬಿಟ್ಟು ಕೆಂಗೇರಿಯಿಂದ ಹಿರಿಯ ಮಿತ್ರ ಮೂರ್ತಿಯವರ ಕಾರಿನಲ್ಲಿ ನಾಗೆಶ್ ಹೆಗಡೆಯವರ ಮನೆ ಇರುವ ‘ಮೈತ್ರಿ ಪಾರಂ’ಗೆ ಹೋಗಿ ತಲುಪುವುದು ಒಂಭತ್ತೂ ಕಾಲು. ನಾನು ಬೆಳಿಗ್ಗೆ ಹೊರಡುವಾಗ ನಾಗೇಶ್ ಹೆಗಡೆಯವರಿಗೆ ಕಾಲ್ ಮಾಡಿ ತಿಳಿಸುವುದನ್ನೇ ಮರೆತು ಬಿಟ್ಟಿದ್ದೆ. ಹಾಗಾಗಿ ಅವರು ಇನ್ನೂ ತಮ್ಮ ಕೆಲಸಗಳಲ್ಲಿ ತೊಡಗಿದ್ದವರು ನಮ್ಮನ್ನು ಆದರದಿಂದ ಬರ ಮಾಡಿಕೊಂಡವರು ’ಒಂದರ್ಧ ಗಂಟೆ ಫಾರಂ ಒಳಗೆಲ್ಲಾ ಸುತ್ತಾಡಿ ಬನ್ನಿ’ ಎಂದು ಹೇಳಿದರು. ಸೈ ಎಂದು ಹೊರಟೆವು.
26
ಮೇ

ಒಂದು ತುತ್ತು ಅನ್ನ… ಎರಡು ತೊಟ್ಟು ಕಣ್ಣೀರು…!

-ರವಿ ಮೂರ್ನಾಡು

ಮದುವೆಗೆ ಗೆಳತಿಯ ಆಮಂತ್ರಣ  ಬಂದಿತ್ತು.ಆ ಮದುವೆ ಶುಭದಿನ ಹೊಸ ಜಗತ್ತೊಂದನ್ನು ಚಿತ್ತಪಟದಲ್ಲಿ ಮುದ್ರೆಯೊತ್ತುತ್ತದೆ ಅಂತ ತಿಳಿದಿರಲಿಲ್ಲ. ಜೀವವಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಕವಚವೊಂದು ಬದ್ಧತೆಯನ್ನು ನಿರ್ಮಿಸಿ ಕೊಡುತ್ತದೆ ಅಂತ ಗೊತ್ತಿತ್ತು. ಅದನ್ನು ಮೀರಿ ಮನುಷ್ಯನ ಮನಸ್ಸಿಗೇ ಸವಾಲೊಡ್ಡುವ ಶಾರೀರಿಕ ತಲ್ಲಣದ ಸನ್ನಿವೇಶಕ್ಕೆ ಎದೆಯನ್ನೊಮ್ಮೆ ಮುಟ್ಟಿ ನೋಡುತ್ತೇನೆ. ಹಸಿವಿನ ಪ್ರಪಂಚದ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗುತ್ತೇನೆ. ಈ ಕಡಲ ಅಲೆಗಳಲ್ಲಿ ದಡ ಸೇರಲು ಹವಣಿಸುವ ಪುಟ್ಟ ದೋಣಿಯೆಂದು ಗೊತ್ತಿರಲಿಲ್ಲ. ಅಲೆಗಳು ಹಾಗೇ ಬಡಿಯುತ್ತಲೆ ಇವೆ…..ತಡಿಯಲ್ಲಿ ಮೂಡಿಸಿದ ಹೆಜ್ಜೆಗಳ ಅಳಿಸುತ್ತಲೇ ಇದೆ….! ಹೆಜ್ಜೆಗಳು ಮೂಡುತ್ತಲೇ ಇವೇ…

ಮದುವೆ ಇದ್ದದ್ದು ಬೆಂಗಳೂರಿನಲ್ಲಿ. 500 ರೂಪಾಯಿಯೊಂದಿಗೆ ನನ್ನ ಪ್ರಯಾಣ.ಎಂದಿಗೂ ಎಲ್ಲಿಗೂ ಹೊರಡುವಾಗ ಒಂದಷ್ಟು ಸಾಹಿತಿಗಳ ಪುಸ್ತಕ, ಪತ್ರಕರ್ತನಾಗಿದ್ದರಿಂದ ಒಂದೆರಡು ಲೇಖನಗಳ ಟಿಪ್ಪಣಿ. ಜೋಳಿಗೆ  ಹೆಗಲಿಗೆ ಭಾರವಾಗುತ್ತಿರಲಿಲ್ಲ. ಬಸ್ಸಿನಲ್ಲಿ ಮಡಿಕೇರಿಯಿಂದ ಬೆಂಗಳೂರುವರೆಗೆ ಆರು ಗಂಟೆಗಳ ಕಾಲ ಕೂರಬೇಕಲ್ಲ. ಸುಮ್ಮನೇ ಕುಳಿತಾಗ ಸಮಯದ ಗೈರು ಹಾಜರಿಯ ಕೊರತೆಯನ್ನು ಈ ಪುಸ್ತಕಗಳು ನೀಗಿಸುತ್ತಿದ್ದವು. ನನ್ನೊಂದಿಗೆ ಮಾತಾಡುತ್ತಿದ್ದವು.

ಹಾಗೇ ದ.ರಾ.ಬೆಂದ್ರೆ, ಎಂ.ಟಿ.ವಾಸುದೇವನ್‍ ನಾಯರ‍್, ಪ್ರೇಮ್‍ಚಂದ್‍., ಜಿ.ಎಸ್‍. ಶಿವರುದ್ರಪ್ಪ.. ಇತ್ಯಾದಿ…! ಅದರಲ್ಲಿ ವಾಸುದೇವನ್‍ ನಾಯರರ  ಒಂದು ಕಥೆ ಹಸಿವಿನ  ಕ್ಷಣಗಳನ್ನು ಕದಕಿದಂತಾಯಿತು. ಕಥೆ ” ಕರ್ಕಟಕ ಮಾಸ”. ಕೇರಳದಲ್ಲಿ ” ಕಕ್ಕಡ ಮಾಸಂ” ಅಂತ ಕರೀತಾರೆ.ಕೃಷಿಕರಿಗೆ ತುಂಬಾ ಕಷ್ಟದ ತಿಂಗಳು ಇದು. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅಶುಭ ಅಂತ ಪ್ರತೀತಿ.ಜ಼ಾನಪೀಠ ಪ್ರಶಸ್ತಿ ವಿಜೇತ ಎಂ.ಟಿ.ವಾಸುದೇವನ್‍ ನಾಯರರ ಹುಟ್ಟಿದ ನಕ್ಷತ್ರ ಇದು. ಅದರಲ್ಲಿ ಅವರ ಹುಟ್ಟುಹಬ್ಬದ ದಿನವನ್ನು ಅವರ ತಾಯಿ ಹೇಗೆ ಆಚರಿಸಿದರು ಅಂತ ವಿವರಿಸುತ್ತಾರೆ. ಖಾಧ್ಯಾನ್ನಗಳ ವಿಚಾರದಲ್ಲಿ ಕೇರಳ ಸ್ವಾವನಂಭಿಯಲ್ಲ ಎಂದೂ ವ್ಯಂಗ್ಯವಾಡುತ್ತಾರೆ. ಮತ್ತಷ್ಟು ಓದು »

26
ಮೇ

ಉಗ್ರರ ಉಪದ್ರವಕ್ಕೆ ಪರಿಹಾರವಿಲ್ಲವೇ?

– ಮುರಳೀಧರ ದೇವ್

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳಿಗೆ ಏನಾಗಿದೆ? ಒಂದಾದ ಮೇಲೆ ಒಂದರಂತೆ ಹಗರಣಗಳು, ಅವಾಂತರಗಳು, ಒಟ್ಟಿನಲ್ಲಿ ಇಡೀ ಭಾರತ ದೇಶ ವಿಶ್ವಡೆದುರು ತಲೆ ತಗ್ಗಿಸುವ ಹಾಗೆ ಆಗಿದೆ. ಕಾಮನ್ ವೆಲ್ತ್  ಕ್ರೀಡೆಯ ಹಗರಣದಿಂದ ಸರ್ಕಾರದ ಮಹತ್ವದ ಹುದ್ದೆಗಳಲ್ಲಿರುವವರೆಲ್ಲರೂ ಭಾಗಿಗಳು ಅಂತ ಕಾಣ್ಸುತ್ತೆ. ಈಗ ಕೇಂದ್ರದ ಮತ್ತೊಂದು ಅವಾಂತರ, ಇತ್ತೀಚೆಗೆ ಕೇಂದ್ರೀಯ ತನಿಖಾ ದಳ ಪಾಕಿಸ್ತಾನಕ್ಕೆ ರವಾನಿಸಿದ ಪಟ್ಟಿಯಲ್ಲಿ ಕೆಲವರು ಭಾರತದ ಜೈಲಿನಲ್ಲಿ ಇದ್ದಾರೆ.  ಅಲ್ಲದೇ ಆ ಪಟ್ಟಿಯಲ್ಲಿರುವವರನ್ನು ತನಿಖಾದಳವೆ ವಿಚಾರಣೆ ನಡೆಸಿದೆ ಹಾಗಿದ್ದೂ ಇಂತಹ ಲೋಪ ಆಗೋಕೆ ಹೇಗೆ ಸಾಧ್ಯ? ಕಡೆ ಪಕ್ಷ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡುವಾಗಲಾದ್ರೂ ಪಟ್ಟಿಯನ್ನು ಸರಿಯಾಗಿ ಪರಿಶೀಲನೆ ಮಾಡೋಕೆ ಆಗೋಲ್ವಾ? ತನಿಖಾ ಸಂಸ್ಥೆಗಳ ನಡುವೆ ಅಷ್ಟೂ ಸಮನ್ವಯ ಸಾಧಿಸೋಕೆ ಆಗೋಲ್ವಾ? ಇತ್ತೀಚಿನ ಬೆಳವಣಿಗೆಗಳಿಂದ ಭಾರತ ವಿಶ್ವ ಸಮುದಾಯದೆದುರು ಅಪರಾಧಿ ಸ್ಥಾನದಲ್ಲಿ ನಿಲ್ಲುವ ಹಾಗೆ ಆಗಿದೆ.

ಈಗ ಪಾಕಿಸ್ತಾನ ಇದೆ ಅಂಶಗಳನ್ನು ಮುಂದಿಟ್ಟುಕೊಂಡು ತನ್ನಲ್ಲಿ ಯಾವುದೇ ಭಯೋತ್ಪಾದಕರಿಲ್ಲ ಅವರೆಲ್ಲ ಭಾರತದಲ್ಲೇ ಇದ್ದಾರೆ ಅಂತ ಹೊಸ ವಾದ ಮುಂದಿಟ್ಟರು ಆಶ್ಚರ್ಯವಿಲ್ಲ. ಅಲ್ಲದೇ ಈಗ ಹಿಡಿದಿರುವ ಉಗ್ರರಿಂದ ಸರ್ಕಾರ ಕಡೆದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಭಾರತದ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ, ಮುಂಬೈ ನಗರವನ್ನು ನಡುಗಿಸಿದ ಉಗ್ರಗಾಮಿಗಳಿಗೆ ನಮ್ಮ ಜೈಲುಗಳಲ್ಲಿ ಭಾರಿ ಅತಿಥಿ ಸತ್ಕಾರಗಳು ನಡೀತಾ ಇವೆ. ಇದನ್ನೆಲ್ಲ ನೋಡಿ ಪಾಕಿಸ್ತಾನದಲ್ಲಿರುವ ಉಗ್ರಗಾಮಿಗಳು ತಾವೇ ಶರಣಾಗಿ ಬಂದರು  ಪಾಕಿಸ್ತಾನಕ್ಕಿಂತ ಹೆಚ್ಚಿನ ಅನುಕೂಲಗಳು ಇಲ್ಲೇ ಸಿಗುತ್ತವೆ. ಅಲ್ಲ ಆಡಳಿತ ನಡೆಸುವ ಪಕ್ಷಕ್ಕೆ ಉಗ್ರಗಾಮಿಗಳಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡೋಕೆ ನಾಚಿಕೆ ಆಗೋಲ್ವಾ? ಹೀಗೆ ಭಾರತದ ಮೇಲೆ ದಾಳಿ ಮಾಡುವ ಉಗ್ರರನ್ನು ಎಷ್ಟು ದಿನ ಅಂತ ತೆರಿಗೆದಾರರ ಹಣದಿಂದ ಸಾಕಬೇಕು.

ಮತ್ತಷ್ಟು ಓದು »

25
ಮೇ

ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!

– ಪಾಲಚಂದ್ರ

ನೀವು ತೆಗೆದ ಚಿತ್ರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅಂತರ್ಜಾಲಕ್ಕೆ ಸೇರಿಸ ಹೊರಟಿದ್ದೀರ? ಸ್ವಲ್ಪ ನಿಧಾನಿಸಿ, ಯಾಕೆಂದರೆ “ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!”.  ದಿನೇ ದಿನೇ ಹೆಚ್ಚುತ್ತಿರುವ ವೃತ್ತ ಪತ್ರಿಕೆಗಳೇ ಈ ಕಳ್ಳತನ ಮಾಡುತ್ತಿರುವುದು ವಿಷಾದದ ವಿಚಾರ.

ಕಳ್ಳತನ ಏಕೆ, ಹೇಗೆ?
ಇದು instant ಕಾಲ. ಆಹಾರದಿಂದ ಹಿಡಿದು ಸುದ್ದಿಯವರೆಗೂ ನಮಗಿರುವುದು ಅವಸರವೇ. ಮಾಹಿತಿಯ ಪರಿಶೀಲನೆಗೇ ಸಮಯವಿಲ್ಲದಿರುವಾಗ ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ಜೊತೆಗೆ ಮುದ್ರಿತವಾಗುವ ಚಿತ್ರಗಳನ್ನು ಪಡೆಯಲು ಬಿಡುವೆಲ್ಲಿದೆ. ಗೂಗಲ್, ಯಾಹೂ ಮೊದಲಾದ ಹುಡುಕು ತಾಣಗಳಲ್ಲಿ ನಿಮ್ಮ ಲೇಖನಕ್ಕೆ ಬೇಕಾದ ಕೀ-ವರ್ಡ್ ಹೊಡೆದರೆ ಲಕ್ಷಾಂತರ ಚಿತ್ರಗಳು ಕ್ಷಣಾರ್ಧದಲ್ಲಿ ಲಭಿಸುತ್ತದೆ. ಅದರಲ್ಲಿ ಕೆಲವನ್ನು ಆಯ್ದು, ತಮಗೆ ಬೇಕಾದಂತೆ ಮಾರ್ಪಡಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರಾಯ್ತು. ಪುಕ್ಕಟೆಯಾಗಿ ಸಿಗುವ ಸರಕು ಬೇರೆ, ಛಾಯಾಗ್ರಾಹಕನಿಗೆ ಹಣ ಕೊಡುವ ಅಗತ್ಯವೂ ಇಲ್ಲ.

ಏಕೆ ಕದಿಯಬಾರದು
ಅಂತರ್ಜಾಲದ ಹುಡುಕು ತಾಣಗಳು ನಿಮಗೆ ಬೇಕಾದ ಚಿತ್ರವನ್ನು ಹುಡುಕಿ ಕೊಡುತ್ತದಾದರೂ ಆ ಚಿತ್ರದ ಸಂಪೂರ್ಣ ಹಕ್ಕು  ಚಿತ್ರ ತೆಗೆದವರ ಅಥವಾ ಅದನ್ನು ಅಂತರ್ಜಾಲಕ್ಕೆ ಸೇರಿಸಿದವರದ್ದಾಗಿರುತ್ತದೆ. ಅವರ ಅನುಮತಿಯಿಲ್ಲದೆಯೇ ಯಾವುದೇ ರೀತಿಯಲ್ಲಿ ಅದನ್ನು ಉಪಯೋಗಿಸುವುದು ಅನೀತಿ ಮಾತ್ರವಲ್ಲ ಅಪರಾಧ ಕೂಡ.ಚಿತ್ರ ತೆಗೆದವನ, ತೆಗೆಯಿಸಿಕೊಂಡವನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಧಕ್ಕೆಯುಂಟುಮಾಡುತ್ತದೆ. ಆದರೆ ಕಳ್ಳತನ ಮಾಡುವವರು ಇದರ ಹಿಂದೆ ಇನ್ನೊಬ್ಬರ ಪರಿಶ್ರಮ ಅಡಗಿದೆ ಎಂಬುದನ್ನು ಸುಲಭದಲ್ಲಿ ಮರೆಯುತ್ತಾರೆ.

ಕದಿಯುವುದನ್ನು ತಡೆಗಟ್ಟುವುದು ಹೇಗೆ?
ಫ್ಲಿಕರ್, ಫೋಟೋ ಬಕೆಟ್ ಮೊದಲಾದ  ಚಿತ್ರ ತಾಣಗಳಲ್ಲಿ ನೀವು ಸೇರಿಸಿದ ಚಿತ್ರಗಳು ಹುಡುಕು ತಾಣಗಳಲ್ಲಿ ಕಾಣಿಸದಿರುವಂತೆ, ಡೌನ್ ಲೋಡ್ ಮಾಡಿಕೊಳ್ಳದಂತೆ ಸೆಟ್ಟಿಂಗ್ ಮಾಡಬಹುದು. ಚಿತ್ರದ ಮೇಲೆ ಕಾಪಿ ರೈಟ್ ವಾಟರ್ ಮಾರ್ಕ್ ಹಾಕುವುದೂ ಕೂಡ ಈ ನಿಟ್ಟಿನಲ್ಲಿ ಒಳ್ಳೆಯದು. ಮತ್ತಷ್ಟು ಓದು »