ಕುರುಕ್ಷೇತ್ರದ ಯುದ್ಧಕ್ಕೆ ಕೃಷ್ಣನೇ ಸರಿ ಅಣ್ಣಾ !
– ರಾಕೇಶ್ ಶೆಟ್ಟಿ
ಕುಂಭಕರ್ಣ ನಿದ್ದೆಯಿಂದ ಎದ್ದ ಭಾರತವನ್ನ ಮತ್ತೆ ನಿದ್ದೆಗೆ ದೂಡಲಾಗುತ್ತಿದೆಯಾ? ಇಂತದ್ದೊಂದು ಪ್ರಶ್ನೆ ಕಾಡಲಾರಂಭಿಸಿದೆ.ಕೆಲವೆ ದಿನದ ಹಿಂದೆ ಅಣ್ಣಾ ಹಜ಼ಾರೆಯವರ ಉಪವಾಸ ಸತ್ಯಾಗ್ರಹದಿಂದ ನಿದ್ದೆಯಲ್ಲಿದ್ದ ಜನ (ಎಲ್ಲ ಜನ ಅಂತೇಳಲು ಸಾಧ್ಯವಿಲ್ಲ) ಎದ್ದು ಬಂದು, ಕಡೆಗೆ ಸೋನಿಯಾ ಮೇಡಂ ಅವರ ಯುಪಿಎ ಸರ್ಕಾರ ಅಣ್ಣನ ಮುಂದೆ ಮಂಡಿಯೂರಿ ಕುಳಿತಾಗಲೇ, ‘ಪಿಕ್ಚರ್ ಅಭಿ ಬಾಕಿ ಹೈ ಮೇರಿ ದೋಸ್ತ್’ ಅಂತ ಬಹುಷಃ ಬಹುತೇಕರಿಗೆ ಅನ್ನಿಸಿತ್ತು.ಅದನ್ನ ನಿಜ ಮಾಡಲೆಂಬಂತೆ ಜನಲೋಕಪಾಲ ಸಮಿತಿ ರಚನೆಯಾದ ಮರುದಿನವೇ ಕೇಂದ್ರ ಮಂತ್ರಿ ಕಪಿಲ್ ಸಿಬಲ್, ಖುದ್ದು ಸಮಿತಿಯ ಸದಸ್ಯರಾಗಿದ್ದೂ, ಸಮಿತಿಯ ಬಗ್ಗೆ ಕೊಂಕು ನುಡಿದು,ಕಡೆಗೆ ನಂಬಿಕೆಯಿಲ್ಲದಿದ್ದರೆ ತೊಲಗಿ ಅಂತ ಅಣ್ಣಾ ಗದರಿದ್ಮೇಲೆ ಯಥಾಪ್ರಕಾರ ರಾಜಕಾರಣಿಗಳ ಹೇಳಿಕೆಯಂತೆ ’ತಪ್ಪಾಗಿ ಅರ್ಥೈಸಲಾಗಿದೆ; ಅಂತೇಳಿ ತೇಪೆ ಹಾಕಿದ್ರು.ಮೊಯ್ಲಿ,ಮನೀಶ್ ತಿವಾರಿಯವ್ರು ಕೊಂಕಿಸಿದ್ದಾಯ್ತು.
ಬಹುಷಃ ಗಾಂಧೀಜಿ,ಜೆಪಿ ನಂತರ ಈ ಮಟ್ಟಕ್ಕೆ ಜನರನ್ನ ಸೆಳೆದಿದ್ದು ಅಣ್ಣಾ ಹಜ಼ಾರೆಯವರೇ ಇರಬೇಕು.ಅವರ ಈ ಪರಿಯ ಜನಪ್ರಿಯತೆ ಪುಡಿವೋಟಿಗಾಗಿ ದೇಶವನ್ನೆ ಬೇಕಾದರು ಮಾರಬಲ್ಲ (ಪುರುಲಿಯಾ ಶಸ್ತ್ರಾಸ್ತ್ರ ಕರ್ಮಕಾಂಡಕ್ಕಿಂತ ದೇಶವನ್ನ ಅಡ ಇಡುವ ಉದಾಹರಣೆ ಬೇಕಾ?) ಹಗಲು ವೇಷದ ರಾಜಕಾರಣಿಗಳ ಕಣ್ಣು ಕೆಂಪಗಾಗುವಂತೆ ಮಾಡಿದ್ದು ಸುಳ್ಳಲ್ಲ.ಸಾಲಾಗಿ ಎಲ್ಲ ಅಣ್ಣನ ವಿರುದ್ಧ ಸದ್ದಿಲ್ಲದೆ ಕೆಲಸ ಶುರು ಹಚ್ಚಿಕೊಂಡರು…!





