-ರವಿ ಮೂರ್ನಾಡು
ಈ ದಿನ ನಿನ್ನದೇ ನೆನಪು
ಹಗಲು ಸಾಯುವ ಹೊತ್ತು
ಕತ್ತೆಲೆಗೆ ಹೆದರಿ ಉರಿಯುವ ದೀಪಕೆ
ಮತ್ತೆ ಬಾ ಹಗಲೆಂದ ಕನಸು..!
ನೀ ನಡೆದ ದಾರಿಯಲಿ
ತಲೆದೂಗಿದ ಗಿಡಗಂಟಿಗಳು
ಮರವಾಗಿ ಆಗಸಕೆ ಬೆಳೆದ ಸೊಗಸು..!
ಸಾಲು ಬೇಲಿಯ ಬಳ್ಳಿಗೂ
ನೀನುಟ್ಟ ಉಡುಗೆಯದ್ದೇ ಬಣ್ಣಗಳು
ಅಲ್ಲಲ್ಲಿ ಚುಕ್ಕಿಟ್ಟ ಕಾಡು ಹೂವುಗಳಿಗೂ
ನೀ ಮುಡಿದ ಮಲ್ಲಿಗೆಯ ಕಂಪು..!
ಮಾತು ಹಿಡಿಗಂಟಾಗಿ
ನಿಂತಿದ್ದ ಮರದ ಕೆಳಗೆ
ನಗುವಿಗೂ ಬೆಚ್ಚಿದ ಎಲೆಗಳು..!
ಜೀವ ತುಂಬಿವೆ ಸುತ್ತಲ ನೆರಳುಗಳು
ಚಿಲಿಪಿಲಿ ಚಪ್ಪಾಳೆ ತಟ್ಟಿ ಹಕ್ಕಿಗಳು
ಪ್ರೀತಿಗೆ ಸಾಕ್ಷಿಯದ ಅದರ ಮರಿಗಳು.!
ಗೆಳತಿ.. ಈ ದಿನ ನಿನ್ನದೇ ನೆನಪು…!
ಈ ಸಂಜೆ ರಾತ್ರಿಯಲಿ
ಕೋಣೆಗಳಿಗೂ ನಿನ್ನದೇ ಮಾತು
ಕಿಟಕಿ ಸರಳನು ಸೀಳಿ
ಬಂದ ಬೀಸಣಿಕೆ ಗಾಳಿಗೂ
ನಿನ್ನದೇ ಹೊಗಳಿಕೆಯ ಹಾಡು !
ಕನಸು ಬಚ್ಚಿಟ್ಟ ಮೋಡ
ಕಣ್ ರೆಪ್ಪೆ ಬೇಲಿಯ ದಾಟಿ
ಮಳೆ ಸುರಿದು ತಿಳಿಯಾದ ತಳುಕು..!
ಈ ರಾತ್ರಿ ಹಗಲಿನದೇ ಕನಸು
ಕತ್ತಲು ಸಾಯುವ ಹೊತ್ತು
ಸೂರ್ಯನಿಗೆ ಹೆದರಿ ನಂದಿದ ದೀಪಕೆ
ಮತ್ತೆ ಬಾ ನೆನಪೆಂದ ಮನಸು..!
ವಾವ್, ನಿಮ್ಮ ಮನಸ್ಸಿನಾಳದಲ್ಲಿ ನೆಲೆಯೂರಿ ಅನುಗಾಲವೂ ಬೇರ್ಪಡದ ಭಾವದಂತೆಯೂ ಮತ್ತು ಸದಾ ನೆನಪಾಗಿ ಅಚ್ಚೆಯೂರಿದ ಆಕೆ ಬಲು ಬಾಗ್ಯವಂತಳು ಸಾರ್.
ಭಾಷೆಯ ಬಳಕೆಯಲ್ಲೇ ಒಂದು ಲಾಲಿತ್ಯ ಕಾಪಾಡಿಕೊಂಡಿದ್ದೀರಿ. ಬಳಸಿರುವ ಉಪಮೇಯಗಳೂ ಮತ್ತು ಸಂಕೇತಗಳೂ ಆಕೆಯ ಔನತ್ಯವನ್ನೇ ಬೊಬಿಸುತ್ತವೆ. ಒಂದು ಒಳ್ಳೆಯ ಕಾವ್ಯ ಓದಿದ ಮೇಲೂ ಅದು ನಮ್ಮ ಮನಃಪಟಲದಲ್ಲಿ ನೆಲೆಯೂರಿದರೆ ಮತ್ತು ಅಂತಹದೇ ಪರಿಕಲ್ಪನೆಯು ನಮ್ಮಲ್ಲೂ ಮೂಡಿದರೆ, ಅಲ್ಲಿಗೆ ಕವಿಯ ಪ್ರಯತ್ನಕ್ಕೂ ಸಾಫಲ್ಯ. ನಿಮ್ಮ ಕವನವು ಓದಿದ ನಂತರ ನನಗೂ ನನ್ನವಳು (!) ನೆನಪಾದದದ್ದು ನೀವು ಕಾವ್ಯವನ್ನು ಕಟ್ಟಿಕೊಟ್ಟ ಶಕ್ತಿ.
ಸಮಕಾಲೀನ ಕವಿಗಳ ಅಭಿರುಚಿ ಅರಿಯಲು ನಿಮ್ಮನ್ನೂ ಮಾನದಂಡವಾಗಿ ಬಳಸಿಕೊಳ್ಳುತ್ತೇನೆ. ಒಲುಮೆಯ ಒಪ್ಪುಗೆ ಇರಲಿ.
is she ur dream gal ah thamma