ನಾನು ಫೋಟೋ ಕ್ಲಿಕ್ಕಿಸುವ ಆಸೆ!
-ಶಿವು.ಕೆ
ಫೋಟೊಗ್ರಫಿ ಎಂದರೇನು? ಅದು ಎಲ್ಲಿ ಹುಟ್ಟಿತು? ಮುಂದೆ ಹೇಗೆ ಅದು ಹೊಸ ಅವತಾರಗಳನ್ನು ಪಡೆಯಿತು? ಈಗ ಏನು ನಡೆಯುತ್ತಿದೆ ಎನ್ನುವುದನ್ನು ಮೊದಲು ಬರೆಯಬೇಕೆನಿಸಿದರೂ ಅವೆಲ್ಲಾ ಈಗ ಅಂತರಜಾಲದಲ್ಲಿ ಜಾಲಾಡಿದರೆ ಅನೇಕಭಾಷೆಗಳಲ್ಲಿ ಸಿಕ್ಕಿಬಿಡುವುದರಿಂದ ಅದರ ಬಗ್ಗೆ ಬರೆಯುವ ಅವಶ್ಯಕತೆಯಿಲ್ಲ. ವಿಶ್ವದಾದ್ಯಂತ ಪುಸ್ತಕಗಳಲ್ಲಿ ಮತ್ತು ಅಂತರಜಾಲದಲ್ಲಿ ಸಿಗುವ ಫೋಟೊಗ್ರಫಿಗಿಂತ ನಿಮ್ಮ ಮತ್ತು ನನ್ನ ಫೋಟೊಗ್ರಫಿ ಆಸೆಯ ಬಗ್ಗೆ ಅದರೆಡೆಗೆ ಮೂಡಿದ ಕುತೂಹಲದ ಬಗ್ಗೆ ಇತ್ಯಾದಿ ವಿಚಾರಗಳ ಬಗ್ಗೆ ಬರೆಯಲು ಪ್ರಯತ್ನಿಸುತ್ತೇನೆ. ಏಕೆಂದರೆ ಫೋಟೊಗ್ರಫಿ ಎನ್ನುವ ವಿಚಾರ ಎಷ್ಟು ದೊಡ್ಡದಾಗಿದ್ದರೂ ನಮ್ಮ ವೈಯಕ್ತಿಕ ವಿಚಾರಕ್ಕೆ ಬಂದಾಗ ಅದೊಂದು ಹವ್ಯಾಸ. ನಿಮಗೂ ಕೂಡ ಫೋಟೊಗ್ರಫಿ ಕಲಿಯಬೇಕೆನ್ನುವ ಮತ್ತು ಹವ್ಯಾಸವನ್ನಾಗಿ ಮಾಡಿಕೊಳ್ಳುವ ಆಸೆಯಿರುತ್ತದೆಯಲ್ಲವೇ…? ನಿಮ್ಮಲ್ಲಿ ಈಗ ಹುಟ್ಟಿದ ಆಸೆ ನನಗೆ ಯಾವಾಗ ಹುಟ್ಟಿತ್ತು? ಅದರ ಮುಂದಿನ ಹಂತಗಳೇನು ಎನ್ನುವುದನ್ನು ಸ್ವಲ್ಪ ವಿವರಿಸಿಬಿಡುತ್ತೇನೆ.
ಚಿಕ್ಕಂದಿನಲ್ಲಿ ನಾನು ಬಿಳಿ ಹಾಳೆಯ ಅನೇಕ ಚಿತ್ರಗಳನ್ನು ಗೀಚುತ್ತಿದ್ದೆ. ಎಂಟನೆ ತರಗತಿಗೆ ಬರುವ ಹೊತ್ತಿಗೆ ಚಿತ್ರಕಲೆಯೂ ಒಂದು ವಿಷಯವಾಗಿದ್ದರಿಂದ ಸಹಜವಾಗಿ ನಾನು ಅದನ್ನು ಇಷ್ಟಪಟ್ಟು ಕಲಿಯುತ್ತಿದ್ದೆ. ಮುಖ್ಯವಾಗಿ ಒಂದು ಚಿತ್ರವನ್ನು ಬರೆಯಬೇಕಾದರೆ ಒಂದು ಪೇಪರ್ ಮತ್ತು ಪೆನ್ಸಿಲ್ ಇರಲೇಬೇಕು. ಬರೆದಿದ್ದು ತಪ್ಪೆನಿಸಿದರೆ ಹಳಿಸಿ ಬರೆಯಲು ರಬ್ಬರ್ ಇರಬೇಕು ಇದು ಚಿತ್ರಕಲೆ ಕಲಿಯಲು ಬೇಕಾದ ಮೂಲವಸ್ತುಗಳು. ನಾವು ಒಂದು ಚಿತ್ರವನ್ನು ಬರೆಯಬೇಕಾದರೆ ಬಿಳಿಹಾಳೆಯಲ್ಲಿ ಒಂದು ಚೌಕಟ್ಟು ಅಥವ ಆಯತಾಕಾರದ ಗೆರೆಗಳನ್ನು ಹಾಕಿಕೊಳ್ಳುತ್ತೇವೆ. ಏಕೆಂದರೆ ನಮ್ಮ ಚಿತ್ರ ಅದರೊಳಗೆ ಮಾತ್ರ ನೆಲೆಸಿರಲಿ ಎನ್ನುವ ಆಸೆ. ಕೆಲವೊಮ್ಮೆ ನಾವು ಯಾವುದೇ ಚೌಕಟ್ಟು ಹಾಕಿಕೊಳ್ಳದಿದ್ದರೂ ಚಿತ್ರ ಬರೆಯಲೆತ್ನಿಸುತ್ತೇವೆ. ಏಕೆಂದರೆ ಆ ಬಿಳಿಹಾಳೆಯೇ ಒಂದು ಚೌಕಟ್ಟು ಅಥವ ಆಯತಾಕರದಲ್ಲಿ ಇರುತ್ತದಲ್ಲ…ನಾವು ಏನೇ ಚಿತ್ರಗಳನ್ನು ಗೀಚಿದರೂ ಅದರೊಳಗೆ ಮಾತ್ರ ಬರೆಯುತ್ತೇವೆಯೇ ಹೊರತು ಅದರ ಹೊರಗೆ ಬರೆಯುವುದಿಲ್ಲ ಅಲ್ವಾ? ಇದರಿಂದ ನಮಗೆ ಮೊದಲು ಗೊತ್ತಾಗುವುದು ಒಂದು ಚಿತ್ರಕ್ಕೆ ಒಂದು ಚೌಕಟ್ಟು ಬೇಕು.
ಅದೇ ರೀತಿ ಯಾವುದೇ ಒಂದು ವಸ್ತು, ಮನೆ, ರಸ್ತೆ, ಮನುಷ್ಯ, ಪ್ರಾಣಿ ಪಕ್ಷಿ ಕೀಟ…ಪ್ರಕೃತಿ…ಆಕಾಶ ಹೀಗೆ ಏನನ್ನು ಕ್ಲಿಕ್ಕಿಸಿದರೂ ಅವೆಲ್ಲಾ ಇಂಥ ಒಂದು ಚೌಕಟ್ಟಿನೊಳಗೆ ಸೆರೆಹಿಡಿಯಬೇಕು. ಹೀಗೆ ನನ್ನ ಫೋಟೊಗ್ರಫಿಯ ಮೂಲವನ್ನು ಗುರುತಿಸಿಕೊಂಡಿದ್ದು ನನ್ನ ಬಾಲ್ಯದ ಚಿತ್ರಕಲೆಯ ಹಿನ್ನೆಲೆಯಲ್ಲಿ.
ಅದೇ ರೀತಿ ನಿಮ್ಮ ಫೋಟೋಗ್ರಫಿಗೂ ಒಂದು ಮೂಲವಿರಬೇಕಲ್ಲವೇ…ಅದನ್ನು ಮೊದಲು ಗುರುತಿಸಿಕೊಳ್ಳಲು ಪ್ರಯತ್ನಿಸಬೇಕು. ಮೂಲವಿಲ್ಲದಿದ್ದಲ್ಲಿ ನಿಮ್ಮಲ್ಲಿ ಫೋಟೋಗ್ರಫಿಯ ಬಗ್ಗೆ ಕುತೂಹಲ ಹೇಗೆ ಹುಟ್ಟಿತು? ಈ ಪ್ರಶ್ನೆಗೆ ಉತ್ತರಗಳನ್ನು ಹೀಗೆ ನಾವೇ ಕಂಡುಕೊಳ್ಳಬಹುದು. ಮೊದಲಿಗೆ ನಿಮ್ಮಲ್ಲಿ ನೀವು ನೋಡುವ ಎಲ್ಲಾ ವಸ್ತುಗಳ ಬಗ್ಗೆ ಕುತೂಹಲವಿರಬಹುದು. ಅವುಗಳನ್ನು ಅಬ್ಯಾಸ ಮಾಡುವ ಉತ್ಸಾಹವಿರಬಹುದು. ಬೇರೆಯವರಿಗೆ ಕಾಣಿಸುವುದಕ್ಕಿಂತ ನಿಮಗೆ ಬೇರೇನೋ ಅರ್ಥಕೊಡುವ ರೀತಿ ಕಾಣಿಸುತ್ತಿರಬಹುದು. ಕೆಲವೊಮ್ಮೆ ಆ ವಸ್ತು, ಪ್ರಾಣಿ, ಮನುಷ್ಯ, ಪ್ರಕೃತಿ ಇತ್ಯಾದಿಗಳಲ್ಲಿ ಬೇರೆಯವರಿಗೆ ಹೊಳೆಯದ ಒಳಾರ್ಥಗಳು ನಿಮಗೆ ನೋಡಲು ಕಾಣಸಿಗಬಹುದು. ಇಂಥ ಸಮಯದಲ್ಲಿ ನೀವು ಮಾತುಗಾರರಾದರೆ ತಕ್ಷಣ ಕುತೂಹಲವನ್ನು ಹಂಚಿಕೊಂಡುಬಿಡುತ್ತೀರಿ. ಮೌನಿಯಾದರೆ ಮನದೊಳಗೆ ಮನನ ಮಾಡಿಕೊಳ್ಳುತ್ತಾ ಬರವಣಿಗೆಯ ಅಭ್ಯಾಸವಿದ್ದಲ್ಲಿ ಕವನ, ಕತೆ ಬರೆದುಬಿಡುತ್ತೀರಿ. ನಿಮ್ಮ ಸಣ್ಣ ಕಣ್ಣುಗಳಿಗೆ ಇಡೀ ಪ್ರಪಂಚವೇ ಕಾಣಿಸುತ್ತಿದ್ದರೂ ಈ ವಸ್ತುಗಳೇಕೆ ನಿಮ್ಮ ಗಮನ ಸೆಳೆದವು? ಇದಕ್ಕೆ ಉತ್ತರ ನಿಮ್ಮ ಕುತೂಹಲ ಮತ್ತು ಆಸಕ್ತಿ. ಹೊರಪ್ರಪಂಚದಲ್ಲಿ ಕೆಲವೊಂದು ವಸ್ತು, ಪ್ರಾಣಿ, ಮನುಷ್ಯ, ಅವನ ಭಾವನೆ, ಇತ್ಯಾದಿಗಳು ಮಾತ್ರ ಏಕೆ ಕಾಣಿಸುತ್ತವೆಯೆಂದರೆ ಆ ಮಟ್ಟಿಗೆ ನಿಮ್ಮ ಕಣ್ಣುಗಳು ಅವುಗಳಿಗೆ ಚೌಕಟ್ಟು ಹಾಕಿದ್ದರಿಂದ ಮಾತ್ರ ನಿಮಗೆ ಅವುಗಳ ಬಗ್ಗೆ ಕುತೂಹಲ ಮತ್ತು ಆಸಕ್ತಿ ಹುಟ್ಟಿದ್ದು. ನೀವು ಸ್ವಲ್ಪ ಈ ವಿಚಾರದಲ್ಲಿ ಮತ್ತಷ್ಟು ಆಸಕ್ತಿ ಮತ್ತು ಕಾರ್ಯತತ್ಪರತೆಯನ್ನು ಬೆಳೆಸಿಕೊಂಡರೆ ನೀವು ಕೂಡ ಸುಲಭವಾಗಿ ಛಾಯಾಗ್ರಾಹಕರಾಗಬಹುದು.
ಮೊದಲಿಗೆ ನೀವು ರಸ್ತೆಯಲ್ಲಿ ಚಲಿಸುತ್ತಿರುತ್ತೀರಿ. ಆಗ ನೂರಾರು ಜನರ ನಡುವೆ ಒಂದು ಪುಟ್ಟ ಮಗು ಅಮ್ಮನ ಹೆಗಲ ಮೇಲೆ ನಗುತ್ತಿರುವುದು ನಿಮ್ಮ ಕಣ್ಣನ್ನು ಸೆಳೆಯುತ್ತದೆ. ಇಂಥ ಸಮಯದಲ್ಲಿ ನಮ್ಮ ಕಣ್ಣನ್ನು ಹದ್ದುಬಸ್ತಿನಲ್ಲಿಡುವುದು ಮುಖ್ಯ. ಏಕೆಂದರೆ ಆಂತ ಮುಗ್ದ ಮಗುವಿನ ಚಿತ್ರ ಕಾಣಿಸಿದರೂ ಅದರ ಜೊತೆಗೆ ಪ್ರಪಂಚವೆಲ್ಲಾ ಕಾಣಿಸುವುದರಿಂದ ಮರುಕ್ಷಣ ನಮ್ಮ ಚಂಚಲ ಕಣ್ಣು ಬೇರೆ ಅನಾಸಕ್ತಿಕರ ವಸ್ತುಗಳ ಮೇಲೆ ಬಿದ್ದಿರುತ್ತದೆ. ಅದಕ್ಕಾಗಿಯೇ ನಾನು ಹೇಳಿದ್ದು ಆ ಕ್ಷಣದಲ್ಲಿ ಈ ಚಂಚಲ ಕಣ್ಣನ್ನು ಹದ್ದುಬಸ್ತಿನಲ್ಲಿಡಬೇಕು ಅಂತ. ಅದು ಹೇಗೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡುಬಹುದು. ನೀವು ಅದಕ್ಕಾಗಿ ನಿಮ್ಮ ಜೇಬಿನಿಂದ ಹಣ ಖರ್ಚು ಮಾಡಬೇಕಿಲ್ಲ. ಅದರ ಬದಲು ಸ್ಟೈಲಾಗಿ ಜೇಬಿನೊಳಗೆ ಇಳಿಬಿಟ್ಟಿರುವ ಎರಡು ಕೈಗಳನ್ನು ಹೊರತೆಗೆದು ಕಣ್ಣಿನ ಮುಂದೆ ತಂದು ನಾನು ಚಿತ್ರದಲ್ಲಿ ತೋರಿಸಿರುವ ಹಾಗೆ ಮಾಡಬೇಕು. ಇದರಿಂದ ನಿಮ್ಮ ಕಣ್ಣು ನಿಮ್ಮ ಕುತೂಹಲ ಕೆರಳಿಸಿದ ನಗುಮುಖದ ಪುಟ್ಟ ಮಗುವಿನ ಕಡೆಗೆ ನೋಡುವುದನ್ನು ಬಿಟ್ಟು ಬೇರೆಡೆಗೆ ಗಮನ ಹರಿಯದಂತೆ ನಿಯಂತ್ರಿಸಬಹುದು. ಈಗ ಮತ್ತೆ ಮತ್ತೆ ಈ ರೀತಿ ನೋಡುವುದರಿಂದ ನಿಮ್ಮ ಗಮನವೆಲ್ಲಾ ಈಗ ಆ ಮಗುವಿನ ನಗುಮುಖದ ಮೇಲೆ. ಆ ನಗು ನಿಮಗರಿವಿಲ್ಲದಂತೆ ಕಣ್ಣಿನ ಮೂಲಕ ಮನಸ್ಸಿಗೆ ಸಂದೇಶ ಕಳಿಸಿ ನಿಮ್ಮೊಳಗೂ ಒಂದು ಖುಷಿ ತುಂಬಿದ ನಗು ಮುಖದಲ್ಲಿ ಮೂಡುತ್ತದೆ. ಈಗ ಹೇಳಿ ನೀವು ನಿಮಗರಿವಿಲ್ಲದಂತೆ ಹೊರ ಪ್ರಪಂಚದಲ್ಲಿ ಕಾಣುವ ಎಲ್ಲವನ್ನು ಬಿಟ್ಟು ಮಗುವಿನ ನಗುಮುಖದ ಚಿತ್ರವನ್ನು ನೋಡಲು ನಿಮ್ಮ ಕೈಗಳಿಂದ ಚೌಕಟ್ಟು ಹಾಕಿದ್ದರಿಂದಲೇ ಇದೆಲ್ಲಾ ಸಾಧ್ಯವಾಯಿತು ಅಲ್ವ?
ಮತ್ತೇಕೆ ತಡ ನಿಮ್ಮ ನೋಡುವಿಕೆಯಲ್ಲೇ ನಿಮಗರಿವಿಲ್ಲದಂತೆ ಎಲ್ಲೋ ಒಂದು ಕಡೆ ಕಲಾತ್ಮಕತೆ ಮೂಡುತ್ತಿದೆಯಲ್ಲವೇ… ತಾವು ಕಂಡ ದೃಶ್ಯದಲ್ಲಿನ ಖುಷಿಯನ್ನು ಇನ್ನೊಬ್ಬರಿಗೆ ಹಂಚಿಕೊಂಡರೆ ಅದು ಮತ್ತಷ್ಟು ಹೆಚ್ಚಾಗುತ್ತದಂತೆ. ಹಾಗಾದರೆ ನೀವು ನೋಡಿ ಪುಳಕಗೊಂಡ ಇಂಥ ಚಿತ್ರವನ್ನು ನಿಮ್ಮಂತೆ ನೂರಾರು ಜನರು ನೋಡಿ ಖುಷಿಪಡಲಿ ಅಂತ ನಿಮ್ಮ ಮನಸ್ಸು ನಿಮಗೆ ಹೇಳಿದರೆ ಆಯ್ತಲ್ಲ..ಅಲ್ಲಿಗೆ ನೀವು ಛಾಯಾಗ್ರಾಹಕರಾಗಲು ಸಿದ್ದರಿದ್ದೀರಿ ಅಂತ ಅರ್ಥ.
ನಾನು ಇಷ್ಟೇಲ್ಲವನ್ನು ವಿವರಿಸುವ ಉದ್ದೇಶವೇನೆಂದರೆ ಪ್ರತಿ ಕಲಾತ್ಮಕ ದೃಶ್ಯವಳಿಗೂ ಒಂದು ಚೌಕಟ್ಟು ಇರಲೇಬೇಕು ಅಂತ. ಇದೆಲ್ಲ ತಿಳಿದ ಮೇಲೆ ನೀವು ಛಾಯಾಗ್ರಾಹಕರಾಗಲು ಕ್ಯಾಮೆರಾ ಬೇಕಲ್ವ? ಕ್ಯಾಮೆರದಲ್ಲಿ ವ್ಯೂ ಪೈಂಡರ್ ಅಂತ ನಿಮ್ಮ ಕಣ್ಣನ್ನು ಕ್ಯಾಮೆರ ಮೂಲಕ ಹೊರಗಿನ ದೃಶ್ಯವನ್ನು ನೋಡಲು ಕ್ಯಾಮೆರಕ್ಕೂ ಒಂದು ಕಣ್ಣು ಇರುತ್ತದೆ. ಅದಕ್ಕೆ ವ್ಯೂ ಪೈಂಡರ್ ಎನ್ನುತ್ತೇವೆ. ಈ ವ್ಯೂ ಪೈಂಡರ್ ನಾನು ಮೊದಲೇ ವಿವರಿಸಿದಂತೆ ಚೌಕಟ್ಟಿನಲ್ಲೇ ಇರುತ್ತದೆ.
ಪ್ರಾರಂಭದಲ್ಲಿ ನಾವು ನಮ್ಮ ಮೊಬೈಲಿನಲ್ಲಿರುವ ಕ್ಯಾಮೆರದಿಂದ ಚಿತ್ರಗಳನ್ನು ತೆಗೆಯುವ ಹವ್ಯಾಸ ಮೂಡಿಸಿಕೊಳ್ಳಬೇಕು. ಮುಂದಿನ ಹಂತ ನಿದಾನವಾಗಿ ಸರಳ ಕ್ಯಾಮೆರಾಗಳಾದ ಏಮ್ ಅಂಡ್ ಷೂಟ್ ಕ್ಯಾಮೆರಗಳಲ್ಲಿ ಪ್ರಯತ್ನ. ಈಗ ಬಂದಿರುವ ಕ್ಯಾಮೆರಗಳ ಉತ್ತಮ ತಾಂತ್ರಿಕತೆಯುಳ್ಳವಾಗಿ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಕ್ಲಿಕ್ಕಿಸಿದರೂ ಹೊಸ ಹವ್ಯಾಸಿ ಛಾಯಾಗ್ರಾಹಕರನ್ನು ಸೋಮಾರಿಗಳನ್ನಾಗಿಸುವುದಲ್ಲದೇ ನಮ್ಮ ಒಳಗಣ್ಣಿನ ಕುತೂಹಲವನ್ನು ಕೊಂದುಹಾಕಲು ಸಿದ್ದವಾಗಿರುತ್ತವೆ. ಈ ವಿಚಾರವನ್ನು ನಾನು ಏಕೆ ಹೇಳಿದೆನೆಂದರೆ ಈಗ ಯಾವುದೇ ಹೊಸ ಕ್ಯಾಮೆರದ ಹಿಂದೆ ಪುಟ್ಟ ಪರಧೆಯಿದ್ದು ಆ ಪರಧೆಯ ಮೂಲಕ ಎಲ್ಲವನ್ನು ನೋಡಿ ಫೋಟೊಗ್ರಫಿ ಮಾಡುವುದು ಒಂಥರ ನಾವು ಎಂಟಿಆರ್ ರೆಡಿ ಉಪ್ಪಿಟ್ಟು ಪೊಟ್ಟಣವನ್ನು ತಂದು ಬಿಸಿ ಮಾಡಿ ತಿಂದಂತೆ ಅಷ್ಟು ಸುಲಭವೆನಿಸಿದರೂ ಇದು ಮನಸ್ಸಿನ ಒಳಗಣ್ಣನ್ನು ತೆರೆದುಕೊಳ್ಳಲು ಸಹಾಯ ಮಾಡುವುದಿಲ್ಲ. ಅದರ ಬದಲು ನೀವೇ ಆ ಪುಟ್ಟ ಕ್ಯಾಮೆರ ಕಣ್ಣಿನ ಮೂಲಕ ನೋಡುತ್ತಿದ್ದಲ್ಲಿ ನಾನು ಹಿಂದೆ ವಿವರಿಸಿದಂತೆ ನಿಮಗಿಷ್ಟವಾದ ವಸ್ತುವಿಗೆ ಕ್ಯಾಮೆರದ ವ್ಯೂ ಪೈಂಡರಿನ ಚೌಕಟ್ಟಿನಲ್ಲಿ ನೋಡಿ ಆ ಮಗುವಿನ ಆಟಪಾಟ, ಕಣ್ಣೋಟ, ನಗು, ಅಳು, ಮುಗ್ಧ ಭಾವ ಇತ್ಯಾದಿಗಳನ್ನು ನೋಡುತ್ತಲ್ಲೇ ಫೋಟೋ ಕ್ಲಿಕ್ಕಿಸಬಹುದು. ನನ್ನ ಈ ಲೇಖನದಲ್ಲಿ ಮಗು ಮತ್ತು ಮಗುವಿನ ನಗುವನ್ನು ಮಾತ್ರ ಉದಾಹರಿಸಿದ್ದೇನೆ. ನೀವು ನಿಮಗಿಷ್ಟವಾದ ವಸ್ತು, ವ್ಯಕ್ತಿ, ಪ್ರಾಣಿ, ಪ್ರಕೃತಿ….ಹೀಗೆ ಯಾವುದನ್ನು ಬೇಕಾದರೂ ನಿಮ್ಮ ಛಾಯಾಗ್ರಹಣಕ್ಕೆ ಆಯ್ಕೆ ಮಾಡಿಕೊಳ್ಳಬಹುದು.
ಇಲ್ಲಿಯವರೆಗೆ ಫೋಟೋಗ್ರಫಿಗಿಂತ ಮೊದಲು ನಿಮ್ಮಲ್ಲಿ ಮೊದಲು ಇದ್ದ ಮೂಲ ಆಸಕ್ತಿಯಾವುದು, ಅದು ಹೊರಗೆ ಬಂದ ಬಗೆ, ಅದರಿಂದ ನಿಮ್ಮ ಛಾಯಾಗ್ರಾಹಣಕ್ಕೆ ಸಿಕ್ಕ ಸಂಭಂದ, ನೀವು ಹೇಗೆ ಸುಲಭವಾಗಿ ಛಾಯಾಗ್ರಹಕರಾಗಬಹುದು ಇತ್ಯಾದಿಗಳನ್ನು ನನ್ನ ಅನುಭವವೇ ನಿಮ್ಮ ಅನುಭವವೆನ್ನುವ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ್ದೇನೆ. ಮುಂದಿನ ಭಾಗದಲ್ಲಿ ನಾವು ಯಾವ ರೀತಿಯ ಛಾಯಾಗ್ರ್‍ಆಹಕರಾಗಬಹುದು. ಎಷ್ಟು ವಿಧದ ಛಾಯಾಗ್ರಹಣ ವಿಭಾಗಗಳಿವೆ. ಅವುಗಳಿಂದ ಮುಂದಿನ ಬೆಳವಣಿಗೆಗಳೇನು? ಮುಂದೆ ಫೋಟೊಗ್ರಫಿ ಸಾಧನೆಯಲ್ಲಿ ದೊರಕುವ ಮನ್ನಣೆಗಳೇನು? ಅವುಗಳನ್ನು ಪಡೆಯುವ ಪ್ರಯತ್ನ ಹೇಗಿರಬೇಕು? ಹೀಗೆ ಇನ್ನೂ ಅನೇಕ ವಿಚಾರಗಳು. ಮುಂದಿನ ಭಾಗಗಳಲ್ಲಿ..
ಚಿತ್ರಗಳು : ಶಿವು.ಕೆ




