ನಾನು ಫೋಟೊ ತೆಗೆಯುವ ಆಸೆ-ಭಾಗ ೨
-ಶಿವು.ಕೆ
ಮೊದಲ ಭಾಗದಲ್ಲಿ ನಮ್ಮ ಕಣ್ಣಿಗೆ ಕಾಣುವ ಚಿತ್ರಗಳಿಗೆ ಮೊದಲಿಗೆ ಕೈ ಬೆರಳುಗಳಿಂದ, ನಂತರ ಕ್ಯಾಮೆರದ ವ್ಯೂ ಪೈಂಡರಿನ ಮೂಲಕ ಹೇಗೆ ಚೌಕಟ್ಟುಗಳನ್ನು ಹಾಕಬಹುದು? ಆ ಮೂಲಕ ಕಂಡ ಪುಟ್ಟ ಚಿತ್ರಗಳನ್ನು ನೋಡುತ್ತಲೇ ಮನಸ್ಸಿಗೆ ಲಿಂಕ್ ಮಾಡಿಕೊಂಡು ಆನಂದಿಸಬಹುದು, ಹಾಗೆ ಕ್ಲಿಕ್ಕಿಸಿದ ಫೋಟೊವನ್ನು ನೂರಾರು ಜನರು ನೋಡುವುದರ ಮೂಲಕ ಅವರಿಗೂ ನಿಮ್ಮ ಮನಸ್ಸಿನೊಳಗೆ ಉಂಟಾದ ಸಂತೋಷವನ್ನು ಹಂಚಿಕೊಳ್ಳಬಹುದು ಎನ್ನುವುದನ್ನು ವಿವರಿಸಿದ್ದೆ.
ಈ ಮೂಲಕ ನೀವು ಹೊರಗಿನವರ ಕಣ್ಣಿಗೆ ಮತ್ತು ನಿಮ್ಮ ಮಟ್ಟಿಗೆ ಛಾಯಾಗ್ರಾಹಕರಾಗಿಬಿಟ್ಟಿದ್ದೀರಿ! ಎಷ್ಟು ಖುಷಿಯ ವಿಚಾರ ಅಲ್ವಾ! ಇದೇ ಖುಷಿಯಲ್ಲಿ ನಾವು ಮುಂದೇನು ಮಾಡುತ್ತೇವೆ ಗೊತ್ತಾ? ಗೆಳೆಯರು, ಮನೆಯವರು, ಹೊರಗಿನವರು ನನ್ನನ್ನು ಛಾಯಾಗ್ರಹಕನೆಂದು ಗುರುತಿಸಿದ್ದಾರೆ ಎಂದುಕೊಂಡು ನಿಮಗರಿವಿಲ್ಲದಂತೆ ನಿಮ್ಮ ಉತ್ಸಾಹ ನೂರ್ಮಡಿಯಾಗಿ ಕಣ್ಣಿಗೆ ಕಂಡಿದ್ದನ್ನೆಲ್ಲಾ ಕ್ಲಿಕ್ಕಿಸತೊಡಗುತ್ತೀರಿ…ಮತ್ತೆ ನೀವು ಕಲಿತ ಚೌಕಟ್ಟು ಹಾಕುವುದು ನಿಯಮವನ್ನು ಚೆನ್ನಾಗಿಯೇ ಪಾಲಿಸಿ ಸಿಕ್ಕಾ ಪಟ್ಟೆ ಫೋಟೊ ತೆಗೆಯಲಾರಂಭಿಸುತ್ತೀರಿ.
ಆಗ ಮುಂದೇನಾಗಬಹುದು? ಇಲ್ಲಿಯೇ ನಾವು ದೊಡ್ಡ ಯಡವಟ್ಟು ಮಾಡಿಕೊಳ್ಳುವುದು. ಎಂಥ ಯಡವಟ್ಟು ಎಂದರೆ ಈಗ ನಾವು ಮಾಡುತ್ತಿರುವ ಫೋಟೊಗ್ರಫಿ ಬೇರೆಯವರು ಮೆಚ್ಚುತ್ತಾರೆಂದೇ ಮೈಮರೆತು ಕ್ಲಿಕ್ಕಿಸುತ್ತಿರುತ್ತೇವೆ. ಇದರಿಂದ ಏನಾಗುತ್ತದೆಂದರೇ ನೀವು ಕ್ಲಿಕ್ಕಿಸುವ ಫೋಟೊ ಬೇರೆಯವರು ನೋಡಿ ಮೆಚ್ಚುತ್ತಾರೆ ಎನ್ನುವ ಸಲುವಾಗಿಯೇ ನೀವು ಛಾಯಾಗ್ರಾಹಕರಾಗಿದ್ದೀರಿ. ಮತ್ತೆ ನಿಮಗಾಗಿ ಅಲ್ಲ. ಅಂದರೆ ನಿಮ್ಮ ಮನಸ್ಸು ನಿಮಗಾಗಿ ಎಂಥ ಫೋಟೊಗ್ರಫಿ ಮಾಡಬೇಕು ಎನ್ನುವುದನ್ನು ಮರೆತು ಬೇರೆಯವರ ಮೆಚ್ಚುಗೆಗಾಗಿ ನಿಮ್ಮ ಕೈ ಮತ್ತು ಕಣ್ಣುಗಳನ್ನು ಬಳಸಿಕೊಂಡು ಫೋಟೊ ತೆಗೆಸುತ್ತಿರುತ್ತದೆ. ಆ ಮಟ್ಟಿಗೆ ಅದು ನಿಮ್ಮನ್ನೇ ಮರೆತುಬಿಟ್ಟಿರುತ್ತದೆ. ಇದರ ಪರಿಣಾಮವೇನೆಂದರೆ ಮುಂದಿನ ಪ್ರತಿ ಛಾಯಾಗ್ರಾಹಣ ಕ್ಷಣದ ಮೊದಲು ನಿಮ್ಮ ಮನಸ್ಸಿನಲ್ಲಿ ಮೊದಲು ಮೂಡುವುದು ನಿಮ್ಮ ಪಕ್ಕದಲ್ಲಿರುವ ಗೆಳೆಯ ಅಥವ ಮತ್ಯಾರೋ ಸಂಭಂದಿ, ಇನ್ಯಾರೋ ನಿಮ್ಮನ್ನು ಮೆಚ್ಚುವವರು ಹೀಗಾಗಿ ಅವರಿಷ್ಟದ ಫೋಟೊಗ್ರಫಿ ನಡೆಯುತ್ತಿರುತ್ತದೆ. ಅವರು ನಿಮ್ಮನ್ನು ಅಭಿನಂದಿಸುವ ಸಲುವಾಗಿ ಮಾಡುವ ಈ ಫೋಟೊಗ್ರಫಿ ಕೆಲವೇ ದಿನಗಳಲ್ಲಿ,ತಿಂಗಳುಗಳಲ್ಲಿ ಬೇಸರ ಮೂಡಿಸುತ್ತದೆ. ಏಕೆಂದರೆ ದಿನಕಳೆದಂತೆ ನಿಮ್ಮ ಗೆಳೆಯರ ಮೆಚ್ಚುಗೆ ವಿಷಯಗಳು ಬದಲಾಗುತ್ತಿರುವುದರಿಂದ ಇವತ್ತು ಮೆಚ್ಚುಗೆಯಾಗಿದ್ದು ಇನ್ನಾರು ತಿಂಗಳುಗಳಲ್ಲಿ ಚೆನ್ನಾಗಿರದಿರಬಹುದು. ಆಗ ಮತ್ಯಾವುದೋ ಚೆನ್ನಾಗಿರುವುದನ್ನು ಫೋಟೊಗ್ರಫಿ ಮಾಡು ಎನ್ನಬಹುದು. ಅದಕ್ಕೆ ತಕ್ಕಂತೆ ನೀವು ನಡೆದುಕೊಳ್ಳುತ್ತಾ ಹೋದರೆ ಎಷ್ಟು ಜನರನ್ನು ಮೆಚ್ಚಿಸಲು ಸಾಧ್ಯ!
ಇದಕ್ಕೆ ಒಂದು ಸಣ್ಣ ಉದಾಹರಣೆಯೆಂದರೆ ನಿಮ್ಮ ಗೆಳೆಯರು ಆಕಾಶ ಅದರಲ್ಲಿ ಮೋಡ, ಹಕ್ಕಿಗಳು ಚುಕ್ಕಿಗಳನ್ನು ಫೋಟೊ ತೆಗಿ ಅಂದ್ರೆ ತೆಗೆಯುತ್ತೀರಿ. ಹುಣ್ಣಿಮೆ ಚಂದ್ರನ ಫೋಟೊಗ್ರಫಿ ಓಕೆ. ಆದ್ರೆ ಕಾಣದ ಇಂದ್ರನ ಫೋಟೊಗ್ರಫಿ ಮಾಡು ಅಂದ್ರೆ? ನಿಮಗೆ ಸಾಧ್ಯವೇ? ಅದಕ್ಕೆ ಬೇರೆಯವರ ಆಸೆಗೆ ಮಿತಿಯೇ ಇರುವುದಿಲ್ಲವೆನ್ನುವುದಕ್ಕೆ ಇದು ಚಿಕ್ಕ ಉದಾಹರಣೆ. ಮುಂದೆ ಮೆಚ್ಚುಗೆಯ ಬದಲು ತಿರಸ್ಕಾರಗಳು ವ್ಯಕ್ತವಾದಾಗ ನಿಮಗೆ ಈ ಫೋಟೊಗ್ರಫಿಯೇ ಬೇಸರವಾಗಿ ಆರು ತಿಂಗಳು ವರ್ಷಗಳಲ್ಲಿ ಈ ಫೋಟೊಗ್ರಫಿಯೆಲ್ಲಿ ಏನು ಸುಖವಿಲ್ಲ, ಸೊಗಸಿಲ್ಲ, ಇದು ನಮಗಲ್ಲ ಎಂದೆನಿಸಿ ನಿಮ್ಮ ಕ್ಯಾಮೆರವನ್ನು ಬೀರುವಿನಲ್ಲಿ ಇಟ್ಟು ಲಾಕ್ ಮಾಡಿಬಿಡಬಹುದು.
ಇದೆಲ್ಲಾ ಆಗದಂತೆ ಹೇಗ ತಡೆಯಬಹುದು ಎಂದರೆ ನಿಮ್ಮಿಷ್ಟದ ಫೋಟೊಗ್ರಫಿ ಮಾಡುವುದು ಯಾವಾಗ? ಅಂತ ಪ್ರಶ್ನಿಸಿಕೊಳ್ಳುವುದರ ಮೂಲಕ. ಹೌದು ಯಾವುದೇ ಕೆಲಸವನ್ನು ನಮಗಿಷ್ಟದಂತೆ ಆಸೆಪಟ್ಟಂತೆ ಕನಸುಕಂಡಂತೆ ಮಾಡುವ ನಾವು ಈ ಫೋಟೊಗ್ರಫಿ ವಿಚಾರಕ್ಕೆ ಬಂದಾಗಲೂ ಕೂಡ ನಮಗಿಷ್ಟವಾದ ಫೋಟೊಗ್ರಫಿ ಮಾಡುವುದರಿಂದ ಮೊದಲಿಗೆ ಅದು ಆತ್ಮ ಸಂತೃಪ್ತಿಯಾಗುತ್ತದೆ. ಮನಸ್ಸು ಪುಳಕಗೊಳ್ಳುತ್ತದೆ. ನಿಮಗರಿವಿಲ್ಲದಂತೆ ಗರಿಗೆದರಿಕೊಂಡು ಮತ್ತಷ್ಟು ಹೊಸ ಕ್ರಿಯಾಶೀಲತೆ ತುಂಬಿಕೊಳ್ಳುತ್ತದೆ. ಇದೇ ದಿಕ್ಕಿನಲ್ಲಿ ಸಾಗುವುದೇನೋ ಸರಿ. ಇಲ್ಲಿ ಸ್ವಲ್ಪ ಯಡವಟ್ಟಾದರೂ ನಮ್ಮ ಗುರಿ ಅಡ್ಡದಾರಿಯಿಡುವುದಂತೂ ಖಚಿತ. ಏನಿದು ಅಡ್ಡದಾರಿ? ಯಾವುದೇ ಕಲೆಯನ್ನು ಸಿದ್ಧಿಸಿಕೊಳ್ಳಬೇಕಾದರೆ ತಪಸ್ಸಿನಂತೆ ಸಾಧಿಸಬೇಕಾದ್ದು ಮುಖ್ಯ. ಸಾಧನೆಯ ಹಾದಿಯ ಈ ತಪಸ್ಸು ಹಗ್ಗದ ಮೇಲಿನ ನಡಿಗೆಯ ಹಾಗೆ. ನಿದಾನವಾಗಿ ತಾಳ್ಮೆಯಿಂದ ನಿಮ್ಮ ಗುರಿಯತ್ತ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸ್ವಲ್ಪವೇ ಯಡವಿದರೂ ಕೆಟ್ಟ ಸಾಧನೆಯ ಹಳ್ಳಕ್ಕೆ ಬೀಳುವುದು ಗ್ಯಾರಂಟಿ. ಅದಕ್ಕಾಗಿ ನಮಗೆ ಗುರುವೊಬ್ಬ ಬೇಕು. ಎಲ್ಲಾ ವಿದ್ಯೆಗಳಿಗೂ ಗುರುವಿದ್ದಂತೆ ನಾವು ಇಂಥ ಫೋಟೊಗ್ರಫಿ ಸಾಧನೆಗೂ ಒಬ್ಬ ಗುರುವನ್ನು ಹುಡುಕಿಕೊಳ್ಳಬೇಕು.
ನಾನು ಹನ್ನೊಂದು ವರ್ಷಗಳ ಹಿಂದೆ ಮೇಲೆ ವಿವರಿಸಿದಂತೆ ಫೋಟೊಗ್ರಫಿ ಕಲಿಯಲಾರಂಭಿಸಿದಾಗ ನಾನು ಮಾಡುತ್ತಿರುವುದು ಸರಿಯೋ ತಪ್ಪೋ, ನಾನು ಸಾಗುತ್ತಿರುವ ದಾರಿ ಸರಿಯಿದೆಯೇ ಎಂದು ತಿಳಿದುಕೊಳ್ಳಲು ನಾನು ಹುಡುಕಿಕೊಂಡ ಗುರುವೆಂದರೆ ದಿವಂಗತ ಸಿ. ರಾಜಗೋಪಾಲ್. ೧೯೫೦ರ ದಶಕದಲ್ಲಿಯೋ ಎ ಎಪ್ ಐ ಎ ಫಿ ಪಡೆದುಕೊಂಡ ಮೊದಲ ಭಾರತೀಯರೆನಿಸಿಕೊಂಡ ಇವರ ಸಾಧನೆ ತುಂಬಾ ದೊಡ್ಡದು. ೧೯೭೨ರಲ್ಲಿ ಮೊದಲ ಭಾರತೀಯನಾಗಿ ಮಾಸ್ಟರ್ ಅಪ್ ಫೋಟೊಗ್ರಫಿ ಎನ್ನುವ ಅತ್ಯುನ್ನತ ಮನ್ನಣೆಯನ್ನು ಪಡೆದ ಆಗಲೇ ಫೋಟೊಗ್ರಫಿ ವಿಚಾರದಲ್ಲಿ ದಂತಕತೆಯಾಗಿಬಿಟ್ಟಿದ್ದರು. ಅವರು ಬೆಂಗಳೂರಿನವರಾಗಿದ್ದು ನಮಗೆಲ್ಲಾ ಹೆಮ್ಮೆ. ನಾನು ಕ್ಲಿಕ್ಕಿಸಿದ ಫೋಟೊಗಳನ್ನೆಲ್ಲಾ ಇವರಿಗೆ ತೋರಿಸುತ್ತಿದ್ದೆ. ತೆಗೆದ ನೂರು ಚಿತ್ರಗಳಲ್ಲಿ ಇವರು ಒಂದನ್ನು ಮೆಚ್ಚುತ್ತಿರಲಿಲ್ಲ. ಎಲ್ಲವು ವೇಸ್ಟ್ ಎನ್ನುತ್ತಿದ್ದರು. “ಏನಾದರೂ ಹೊಸತನ್ನು ಫೋಟೊ ತೆಗೆಯಿರಿ” ಅನ್ನುತ್ತಿದ್ದರು. ಹೊಸತು ಹೇಗಿರಬೇಕು ಅಂತ ಕೇಳಿದರೆ ಅದು ನಿಮ್ಮ ಅಲೋಚನೆಗೆ ಮತ್ತು ಕಲ್ಪನೆಗೆ ಬಿಟ್ಟಿದ್ದು ಅಂತ ಹೇಳಿ ಕಳಿಸುತ್ತಿದ್ದರು. ಹೀಗೆ ಅವರು ನನ್ನೊಳಗೆ ವಿಚಾರವನ್ನು ಅವಲೋಕಿಸುವಂತೆ ಮಾಡುತ್ತಿದ್ದರು. ಇದರಿಂದಾಗಿ ಕೆಲವೆ ದಿನಗಳಲ್ಲಿ ಮತ್ತಷ್ಟು ಹೊಸ ಫೋಟೊಗಳೊಂದಿಗೆ ಹೋದಾಗ ಮೊದಲಿಗಿಂತ ಈ ಫೋಟೊಗಳು ಹೇಗೆ ವಿಭಿನ್ನವಾಗಿವೆ ಎಂದು ಹೇಳುತ್ತಿದ್ದರು. ಅವರನ್ನು ಮನಸ್ಸಿನಲ್ಲಿಯೇ ಗುರುವಿನಂತೆ ಸ್ವೀಕರಿಸಿ ನಾನು ಅವರಿಂದ ಫೋಟೊಗ್ರಫಿ ಕಲಿತುಕೊಂಡದ್ದು ಹೀಗೆ.
ಆಗ ನಿಮ್ಮಿಂದ ಕ್ಲಿಕ್ಕಿಸುವ ಫೋಟೊ ನಿಮಗೆ ಅದ್ಬುತವಾಗಿ ಕಾಣಲು ಅದು ನಿಮ್ಮೊಳಗಿನ ಫ್ಯಾಶನ್ ಆಗಿಬಿಟ್ಟಿರುತ್ತದೆ. ಯಾವಾಗ ಇದೆಲ್ಲಾ ಆಗುತ್ತದೋ ಮುಂದೆ ನೀವು ಕ್ಲಿಕ್ಕಿಸುವ ಫೋಟೊವನ್ನು ಬೇರೆಯವರು ಇಷ್ಟಪಟ್ಟು ನೋಡುತ್ತಾರೆ. ಆನಂದಿಸುತ್ತಾರೆ. ಈ ವಿಚಾರದಲ್ಲಿ ನಿಮಗೆ ಗೊತ್ತಿಲ್ಲದಂತೆ ನೀವು ಟ್ರೆಂಡ್ ಸೆಟ್ಟರ್ ಆಗಿರುತ್ತೀರಿ. ನಿಮ್ಮ ಹೊಸ ಫೋಟೊಗ್ರಫಿಗಾಗಿ ಜನ ಕಾಯುತ್ತಿರುತ್ತಾರೆ. ಬೇರೆಯವರಿಗಾಗಿ ಫೋಟೊಗ್ರಫಿ ಮಾಡುತ್ತಾ ಅವರನ್ನು ಮೆಚ್ಚಿಸಲಾಗದೆ ಕೆಲವೇ ದಿನಗಳಲ್ಲಿ ಕ್ಯಾಮೆರ ಎತ್ತಿಡುವುದರ ಬದಲು ನಿಮ್ಮ ಮನಸ್ಸಂತೋಷದ ಫೋಟೊ ಕ್ಲಿಕ್ಕಿಸುತ್ತಾ ಅದರೊಳಗೆ ನೀವು ಒಂದಾಗುತ್ತಾ ಆನುಭೂತಿ ಪಡೆಯುತ್ತಾ ಸೃಷ್ಟಿಯಾದ ಫೋಟೊಗಳನ್ನು ಬೇರೆಯವರು ನೋಡಿ “ಎಂಥ ಅದ್ಭುತ ಫೋಟೊ ನೋಡ್ರೀ” ಎಂದು ನಿಮ್ಮ ಫೋಟೊ ಜೊತೆಗೆ ನಿಮ್ಮ ಕ್ರಿಯಾಶೀಲತೆಯನ್ನು ಮೆಚ್ಚುವಾಗ ನೀವು ಟ್ರೆಂಡ್ ಸೆಟ್ಟರ್ ಛಾಯಾಗ್ರಾಹಕರಾಗಿರುತ್ತೀರಿ..
ಅರೆರೆ….ಈ ಲೇಖನದಲ್ಲಿ ಯಾವ ರೀತಿಯ ಛಾಯಾಗ್ರಾಹಕರಾಗಬಹುದು? ಅದರಲ್ಲಿ ಎಷ್ಟು ಛಾಯಾಗ್ರಹಣ ವಿಭಾಗಗಳಿವೆ? ಅವುಗಳಲ್ಲಿ ಪರಿಣತಿಯನ್ನು ಸಾಧಿಸುವುದು ಹೇಗೆ? ಮುಂದೆ ಫೋಟೊಗ್ರಫಿ ಸಾಧನೆಯಲ್ಲಿ ದೊರಕುವ ಮನ್ನಣೆಗಳೇನು/ ಇತ್ಯಾದಿ ವಿಚಾರವಾಗಿ ಬರೆಯಲು ಪ್ರಾರಂಭಿಸಿದೆನಾದರೂ ಮೊದಲ ಕಲಿಕೆಯ ಸಮಯದಲ್ಲಿ ಆಗುವ ಇಂಥ ಪರಿಣಾಮಗಳನ್ನು ವಿವರಿಸುವುದು ಮುಖ್ಯವೆಂದುಕೊಂಡು ನನಗಾದ ಅನುಭವದ ಜೊತೆಗೆ ಎರಡನೆ ಭಾಗವನ್ನು ಮುಗಿಸುತ್ತೇನೆ. ಮುಂದಿನ ಭಾಗದಲ್ಲಿ ಖಂಡಿತ ಛಾಯಾಗ್ರಾಹಣದ ವಿಭಾಗಗಳು, ಬೆಳವಣಿಗೆ, ಮನ್ನಣೆ ಇತ್ಯಾದಿ ವಿಚಾರಗಳನ್ನು ಬರೆಯುತ್ತೇನೆ.
ಚಿತ್ರಗಳು : ಶಿವು.ಕೆ





