ವಿಜಯ್ ಹೆರಗು

ಗೆಳೆಯರೇ,
ಇಂದು ೧೮ ಮೇ, ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ, ಧೂಳಿನಿಂದ ಎದ್ದು ಬಂದ ಧೀಮಂತ ನಾಯಕ, ಮಣ್ಣಿನ ಮಗ, ೨೪ X ೭ ರಾಜಕಾರಣಿ ಶ್ರೀಮಾನ್ ಎಚ್.ಡಿ.ದೇವೇಗೌಡರ ಜನ್ಮದಿನ. ವಯಸ್ಸು ಎಪ್ಪತ್ತೊಂಭತ್ತಾದರೂ ಇಪ್ಪತ್ತೈದರ ಉತ್ಸಾಹ. ಹೌದು, ದೇವೇಗೌಡರು ಈ ದೇಶ ಕಂಡ ಪಕ್ಕಾ ರಾಜಕಾರಣಿ. ಇವರು ಜಾತ್ಯಾತೀತ,ಧರ್ಮಾತೀತ ವ್ಯಕ್ತೀನಾ ಅಂತ ನನಗಂತೂ ಗೊತ್ತಿಲ್ಲ. ಆದರೆ ಗ್ರಾಮ ಪಂಚಾಯ್ತಿ ಎಲೆಕ್ಷನ್ನಿಂದ ಪಾರ್ಲಿಮೆಂಟ್ ಎಲೆಕ್ಷನ್ ವರೆಗೂ ಯಾವುದೇ ಎಲೆಕ್ಷನ್ ನಡೆದರೂ ಭೇದಭಾವ ತೋರಿಸದೆ ಸಕ್ರಿಯವಾಗಿ ಭಾಗವಹಿಸುವ ಏಕೈಕ ನಾಯಕ ದೇವೇಗೌಡರು. ಅದಕ್ಕೇ ಇವರನ್ನು “ಚುನಾವಣಾತೀತ ರಾಜಕಾರಣಿ” ಎಂದು ಕರೆಯಬಹುದು.
ಈಟ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್, ಡ್ರಿಂಕ್ ಕ್ರಿಕೆಟ್ ಅನ್ನುವ ಜಾಹೀರಾತು ನಿಮಗೆಲ್ಲ ನೆನಪಿರಬೇಕು. ಆದರೆ ಇವರ ವಿಷಯದಲ್ಲಿ ಸ್ವಲ್ಪ ಅದಲು ಬದಲಾಗುತ್ತೆ, ಇವರದು ಈಟ್ ಪಾಲಿಟಿಕ್ಸ್, ಸ್ಲೀಪ್ ಪಾಲಿಟಿಕ್ಸ್, ಡ್ರಿಂಕ್ ಪಾಲಿಟಿಕ್ಸ್. ಯಾರ ಬಗ್ಗೆ ಮಾತಾಡ್ತಾ ಇದ್ದೀನಿ ಗೊತ್ತಾಯ್ತಾ ನಮ್ ದೇವೇಗೌಡರ ಬಗ್ಗೆ. . ಯಾವುದೇ ಸಭೆ- ಸಮಾರಂಭ ಎಲ್ಲೇ ಆಗಲಿ ಸದಾ ಕಾಲ “ದೇಶ”ದ ಕುರಿತು ಚಿಂತನೆ (ಮೀಡಿಯಾದವರು ಅದನ್ನು ನಿದ್ದೆ ಅಂತ ಕರೀತಾರೆ) ನಡೆಸೋ ಮಹಾನ್ ವ್ಯಕ್ತಿ ಇವರು. ಕರ್ನಾಟಕದಲ್ಲಿ ಎಂಥೆಂಥ ಮಹಾನ್ ರಾಜಕಾರಣಿಗಳು ಜನ್ಮ ತಳೆದಿದ್ದರು ಕೂಡಾ ಅವರ್ಯಾರಿಗೂ ಪ್ರಧಾನಿ ಹುದ್ದೆಯ ಹತ್ತಿರಕ್ಕೂ ಸುಳಿಯೋದು ಸಾಧ್ಯ ಆಗಲಿಲ್ಲ. ಆದರೆ ನಮ್ಮ ದೇವೇಗೌಡರಿಗೆ ಮಾತ್ರ ಇದು ಬಯಸದೇ ಬಂದ ಭಾಗ್ಯ. ಅಷ್ಟೆಲ್ಲ ಹಿರಿಯ,ಮುತ್ಸದ್ದಿ ರಾಜಕಾರಣಿಗಳು ಇದ್ದರೂ ದೇವೇಗೌಡರು ಪ್ರಧಾನಿ ಆಗಿದ್ದು ಹೇಗೆ? ನಿಜವಾಗಲೂ ಅವರಿಗೆ ಅಷ್ಟು ಕೆಪಾಸಿಟಿ ಇತ್ತಾ? ಅಥವಾ ಅಲ್ಲೇನಾದ್ರೂ ಭಾರೀ ಹಣದ ಗೋಲ್ಮಾಲ್ ನಡೆದಿತ್ತಾ!!!!????
ನೋಡಿ (ಓದಿ) ಬ್ರೇಕ್ ನಂತರ ಅಲ್ಲಲ್ಲಾ….ಮುಂದಿನ ಪ್ಯಾರಾದಲ್ಲಿ… 🙂
ದೇವೇಗೌಡರು ಪ್ರಧಾನಿ ಆಗಿದ್ದಾಗ ಒಂದೆರಡು ಜೋಕುಗಳು ಚಾಲ್ತಿಯಲ್ಲಿ ಇದ್ದವು. ಇದನ್ನು ನಿಮ್ಮಲ್ಲಿ ಕೆಲವರು ಈಗಾಗಲೇ ಕೇಳಿರಬಹುದು,ಓದಿರಬಹುದು. ಮೊದಲೇ ಗೊತ್ತಿದ್ದರೆ ಮೆಲುಕು ಹಾಕಿ, ಗೊತ್ತಿಲ್ಲದಿದ್ದರೆ ಓದಿನೋಡಿ.
ಮೊದಲ ಜೋಕು:
ದೆಹಲಿಯ ಪ್ರಖ್ಯಾತ ಹೋಟೆಲೊಂದರ ಸಭಾಭವನದಲ್ಲಿ ಯುನೈಟೆಡ್ ಫ್ರಂಟ್ ನಾಯಕರುಗಳಾದ ಜ್ಯೋತಿಬಸು, ಲಾಲು ಪ್ರಸಾದ್ ಯಾದವ್,ಹರ್ಕಿಶನ್ ಸಿಂಗ್ ಸುರ್ಜೀತ್, ದೇವೇಗೌಡ ಮುಂತಾದ ಪ್ರಖ್ಯಾತ ನಾಯಕರೆಲ್ಲ ಆ ಸಭೆಯಲ್ಲಿ ಸೇರಿದ್ದರು. ಪ್ರಧಾನಿ ಹುದ್ದೆಗೆ ಯಾರನ್ನು ತರಬೇಕು ಅನ್ನೋ ವಿಷಯದ ಬಗ್ಗೆ ಚರ್ಚೆ ನಡೆದಿತ್ತು. ಜ್ಯೋತಿಬಸು ಹೆಸರು ಎಲ್ಲರ ಬಾಯಲ್ಲೂ ಬಂತಾದರೂ ಅವರು ಸ್ವತಃ ಒಪ್ಪಲಿಲ್ಲ. ಇದೆ ವೇಳೆ ದೆಹಲಿಯ ಭಯಂಕರ ಬಿಸಿಲ ಅಬ್ಬರಕ್ಕೆ ಬಸವಳಿದಿದ್ದ ನಮ್ಮ ಲಾಲೂ ಯಾದವರಿಗೆ ಮೊಸರುವಡೆ ತಿನ್ನುವ ಹಂಬಲ ಆಯಿತು. ಸರಿ ಮೊದಲೇ ಆವಯ್ಯ ಸ್ಟ್ರೈಟ್ ಫಾರ್ವರ್ಡ್ ಆಸಾಮಿ ಸೀದಾ ಎದ್ದು ನಿಂತುಕೊಂಡು “ಅರೆ ದಹೀ ವಡಾ ಲಾವೋ, ದಹೀ ವಡಾ ಲಾವೋ” ಅಂತ ಕೂಗಿದರು. ಅಲ್ಲಿ ಸೇರಿದ್ದ ವಯೋವೃದ್ದ ನಾಯಕರಿಗೆ “ದಹೀ ವಡಾ” ಅಂದಿದ್ದು ದೇವೇಗೌಡ ಅಂತ ಕೇಳಿಸಿ ನಮ್ಮ ಗೌಡ್ರು ಪ್ರಧಾನಿ ಗದ್ದುಗೆ ಏರುವ ಅವಕಾಶ ಸಿಕ್ತು.
ಎರಡನೇ ಜೋಕು:
ಪಾರ್ಲಿಮೆಂಟಿನ ಬಳಿ ಸೇರಿದ್ದ ಯುನೈಟೆಡ್ ಫ್ರಂಟಿನ ನಾಯಕರುಗಳು ಗೊಂದಲದ ಸ್ಥಿತಿಯಲ್ಲಿದ್ದಾರೆ. ಜ್ಯೋತಿಬಸುರಂತಹ ಹಿರಿಯ ನಾಯಕರು ಪ್ರಧಾನಿ ಹುದ್ದೆ ನನಗೆ ಬೇಡ ಅಂತ ಹೇಳಿ ಇವರನ್ನೆಲ್ಲ ಗೊಂದಲದಲ್ಲಿ ಸಿಲುಕಿಸಿದ್ದಾರೆ. ಮುಂದಿನ ಹಾದಿ ಏನು? ಯಾರನ್ನು ಸರ್ವ ಸಮ್ಮತ ನಾಯಕನನ್ನಾಗಿ ಆರಿಸುವುದು ಅಂಥ ಎಲ್ಲ ನಾಯಕರೂ ಯೋಚನೆ ಮಾಡ್ತಾ ಇದ್ದಾರೆ. ಹೀಗೆ ಎಲ್ಲರೂ ಚಿಂತಾಮಗ್ನರಾಗಿದ್ದಾಗ ಒನ್ಸ್ ಎಗೈನ್ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ ಲಾಲೂಜಿ ಅಲ್ಲಿಗೆ ಬಂದರು. ವಾತಾವರಣವನ್ನು ತಿಳಿಯಾಗಿಸುವ ಸಲುವಾಗಿ ಒಂದು ಹಿಂದಿ ಗಾದೆ ಹೇಳಿದರು ” ಘೋಡಾ ಹೇ ಮೈದಾನ್ ಹೇ, ಆಪ್ ಲೋಗ ಆರಾಮ್ ಸೆ ರಹೋ ” ಅಂದ್ರು. ಹಿರಿಯ ನಾಯಕರೊಬ್ಬರಿಗೆ “ಘೋಡಾ” ಅಂದದ್ದು “ಗೌಡ” ಅಂತ ಕೇಳಿಸಿ ದೇವೇಗೌಡರು ಪ್ರಧಾನಿ ಆದರು.
ಪಂಚೆ ಸರಿ ಮಾಡಿಕೊಳ್ಳಲು ಎದ್ದುನಿಂತ ದೇವೇಗೌಡರನ್ನು ಪ್ರಧಾನಿ ಮಾಡಿದರು ಅನ್ನೋ ಜೋಕೂ ಇದೆ. ಒಟ್ಟಾರೆ ದೇವೇಗೌಡರ ಕುರಿತು ಪರ-ವಿರೋಧಗಳು ಏನೇ ಇರಲಿ ಅವರ ಜನ್ಮದಿನವಾದ ಇಂದು ಅವರಿಗೆ ಶುಭ ಹಾರೈಸೋಣ… ಇಷ್ಟು ದಿನ ಹೊರೆ (ಜೆ.ಡಿ.ಎಸ್. ಗುರುತು-ಹುಲ್ಲಿನ ಹೊರೆ) ಹೊತ್ತದ್ದು ಸಾಕು, ಇನ್ನಾದರೂ ರಾಜಕಾರಣದಿಂದ ನಿವೃತ್ತರಾಗಿ ತಮ್ಮ ಜೀವಿತದ ಉಳಿದ ಅವಧಿಯಲ್ಲಿ ವಿಶ್ರಾಂತಿಯಿಂದ ಕಳೆಯಲಿ ಎಂದು ವಿನಂತಿಸೋಣ.
************
ವಿಜಯ್, ಕರಾರುವಕ್ಕಾದ ರಾಜಕೀಯ ವ್ಯಕ್ತಿತ್ವದ ವಿಶ್ಲೇಷಣೆ ಇದು.” ಪಂಚೆ ಸರಿ ಮಾಡಿಕೊಳ್ಳಲು ಎದ್ದ ದೇವೇ ಗೌಡರು ,ಪ್ರಧಾನಿಯಾದರು” ವಸ್ತುನಿಷ್ಠ ವ್ಯಂಗ್ಯ ಎನ್ನುತ್ತೇವೆ.ಧನ್ಯವಾದಗಳು.
ರಾಜಕೀಯ ಚತುರ, ಮಣ್ಣಿನ ಮಗ, ದೆಹಲಿಗೆ ಮುದ್ದೆ ಪರಿಚಯಿಸಿದ ವೀರ, ದೇವೇಗೌಡರಿಗೆ ಹಾರ್ದಿಕ ಅಭಿನಂದನೆಗಳು
tumba chennagittu nimma vishleshane
ನನ್ನ ಲೇಖನವನ್ನು ಮೆಚ್ಚಿದ ಎಲ್ಲರಿಗೂ ನನ್ನ ವಂದನೆಗಳು……ಮೇಲುಕೋಟೆಯಲ್ಲಿ ತಮ್ಮ ೭೯ ನೇ ಹುಟ್ಟುಹಬ್ಬ ಆಚರಿಸಿಕೊಂಡು ಈ ಲೇಖನ ಬರೆಯಲು ಸ್ಫೂರ್ತಿ ನೀಡಿದ ದೇವೇಗೌಡರಿಗೆ ನನ್ನ namaskaara ಹಾಗೂ ಅಭಿನಂದನೆಗಳು .