ವಿಷಯದ ವಿವರಗಳಿಗೆ ದಾಟಿರಿ

ಮೇ 19, 2011

1

ಕಲೆಯ ಉಳಿವಿಗೆ ಕಲಾವಿದನೂ ಜವಾಬ್ದಾರ!

‍ನಿಲುಮೆ ಮೂಲಕ

-ಅರೆಹೊಳೆ ಸದಾಶಿವರಾವ್

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಶ್ರೀಕುಂಬ್ಳೆ ಸುಂದರ ರಾವ್ ಅವರು ಮಾತಾಡುತ್ತಾ ಯಕ್ಷಗಾನದ ಉಳಿವಿಗೆ ನಾವೆಲ್ಲರೂ ನಿರ್ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ಹೇಳುತ್ತಿದ್ದರು. ಮುಖ್ಯವಾಗಿ ಇಂದು ಮಂದಾರ್ತಿ, ಕಟೀಲುಗಳಂತಹ ಹರಕೆಯ ಆಟಗಳ ಅತಿಯಾದ ಬೇಡಿಕೆ ಇರುವ ಮೇಳಗಳು, ತಮ್ಮ ‘ವೀಳ್ಯ’ದಲ್ಲಿ ಕೇವಲ ಐದು ನೂರು ರೂಪಾಯಿಗಳನ್ನು ಹೆಚ್ಚುವರಿಯಾಗಿ ಸೇವೆ ಮಾಡಿಸುವವರಿಂದ ಪಡೆದು, ಅದನ್ನು ಮಕ್ಕಳಿಗೆ ಯಕ್ಷಶಿಕ್ಷಣಕ್ಕೆ ಬಳಸಬಹುದು ಎಂಬ ಸಲಹೆಯನ್ನು ಅವರಿತ್ತರು. ಇದು ನಿಜಕ್ಕೂ ಸ್ವಾಗತಾರ್ಹ ಸಲಹೆ ಮತ್ತು ಸಂಬಂಧಿಸಿದವರು ಈ ಬಗ್ಗೆ ಹೆಜ್ಜೆ ಇಡಬಹುದು ಎಂದು ಆಶಿಸೋಣ.

ಇಂದು ಯಕ್ಷಗಾನವನ್ನು ನೋಡುವವರ ಸಂಖ್ಯೆ ಮತ್ತು ಆ ಕಲೆಗೆ ಸಿಗುತ್ತಿರುವ ಗೌರವ ಕಡಿಮೆಯಾಗಿದೆ ಎಂಬ ಮಾತೂ ಕೇಳಿಬರುತ್ತದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕನಷ್ಟೇ ಕಲಾವಿದನೂ ಜವಾಬ್ದಾರಿಯನ್ನು ಅರಿತು ನಡೆಯುವ ಅನಿವಾರ್ಯತೆ ಇದೆ. ಎಲ್ಲೆಡೆಯಲ್ಲಿಯೂ ಪ್ರೇಕ್ಷಕ ಬದಲಾಗಬೇಕು ಎಂಬ ಮಾತುಗಳೇ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಹಾಗಾದರೆ ಕಲಾವಿದ ಎಷ್ಟರ ಮಟ್ಟಿಗೂ ಜವಾಬ್ದಾರನೇ ಅಲ್ಲವೇ ಎಂಬ ಪ್ರಶ್ನೆ ಏಳುವುದೂ ಸಹಜ. ನನ್ನ ಒಂದೆರಡು ಅನುಭವಗಳನ್ನು ಇಲ್ಲಿ ವಿವರಿಸಬೇಕೆನ್ನುತ್ತದೆ.

ಇತ್ತೀಚೆಗೆ ನಾನು ನನ್ನ ಊರಿನಲ್ಲಿ ಒಂದು ವಿಶಿಷ್ಠ ಮತ್ತು ಕಲಾತ್ಮಕ ಯಕ್ಷಗಾನ ಪ್ರದರ್ಶನವೊಂದನ್ನು ಏರ್ಪಡಿಸುವ ಯೋಜನೆ ಹಾಕಿಕೊಂಡೆ. ಅದರಂತೆ ಕೆಲವು ಖ್ಯಾತ ಕಲಾವಿದರನ್ನು ಸಂಪರ್ಕಿಸಿ, ಯಕ್ಷಗಾನದ ವ್ಯವಸ್ಥೆ ಮಾಡುವಂತೆ ಒಬ್ಬ ಸಂಘಟಕನಲ್ಲಿ ಕೇಳಿಕೊಂಡೆ. ಅದರಂತೆ ಅವರು ಕೆಲವರನ್ನು ಸಂಪರ್ಕಿಸಿ ದಿನಾಂಕ, ಸ್ಥಳ ಎಲ್ಲಾ ತಿಳಿಸಿ, ನಿಗದಿ ಪಡಿಸಿಕೊಂಡು, ಕೊನೆಗೂ ಭಾಗವಹಿಸುವ ಕಲಾವಿದರ ಪಟ್ಟಿ ನೀಡಿದರು. ನಾವದನ್ನು ಹಾಗೆಯೇ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದೆವು, ಪ್ರಚಾರವನ್ನೂ ನೀಡಿದೆವು. ಕೊನೆಗೆ ಪ್ರದರ್ಶನಕ್ಕೆ ಇನ್ನೆರಡು ದಿನ ಇದೆ ಎನ್ನುವಾಗ, ಒಬ್ಬೊಬ್ಬರೇ ಕಲಾವಿದರು ತಮಗೆ ಬgಲಾಗುವುದಿಲ್ಲ ಎಂದರು. ಒಬ್ಬ ಕಲಾವಿದನಂತೂ, ಪ್ರದರ್ಶನದ ದಿನ ಮಧ್ಯಾಹ್ನ ಕೇವಲ ಒಂದು ಎಸ್‌ಎಂಎಸ್ ಕಳಿಸಿ ತನಗೆ ಬರಲಾಗದು ಎಂದು, ಮರಳಿ ಕರೆ ಮಾಡಿದರೆ ಕರೆಯನ್ನೇ ಸ್ವೀಕರಿಸಲಿಲ್ಲ. ಮತ್ತೊಬ್ಬರು ರಾತ್ರಿ ಹನ್ನೆರಡರ ನಂತರ ತಮಗಿರುವ ವೇಷಕ್ಕೆ ಸರಿಯಾಗಿ ಹತ್ತು ಘಂಟೆಗೆ ಬರುತ್ತೇನೆ ಎಂದವರೂ, ಹತ್ತರ ನಂತರ ಫೋನಿಗೇ ಸಿಗಲಿಲ್ಲ!. ಕೊನೆಗೂ ಸಂಘಟಿಸಿದವರೂ ಖುದ್ದು ಕಲಾವಿದರಾಗಿದ್ದರಿಂದ ಎರಡೆರಡು ವೇಷಗಳನ್ನು ಅವರೇ ಮಾಡಿ ಪ್ರದರ್ಶನ ಪೂರೈಸಿದರು!. ಆಮಂತ್ರಣ ಪತ್ರಿಕೆ ನೋಡಿ ಬಂದವರೆಲ್ಲರೂ ಜನರನ್ನು ಸೇರಿಸಲು ಇದು ಸಂಘಟಕರು (ನಾನು) ಮಾಡಿದ ಮೋಸ ಎಂಬಂತೆ ಬೈದು ಮರಳಿದರು. ಸದ್ಯಕ್ಕೆ ಇದು ಬಯಲಾಟವಾಗಿದ್ದರಿಂದ ನಾನು ಉಳಿದುಕೊಂಡೆ.

ಇನ್ನೊಮ್ಮೆ ಒಬ್ಬ ಯುವ ಭಾಗವತರ ಬಗ್ಗೆ ಕೇಳಿ, ಅವರ ಹಾಡುಗಾರಿಕೆಯನ್ನು ಕೇಳಲೆಂದು ದೂರದಿಂದ ಯಕ್ಷಗಾನಕ್ಕೆ ಹೋಗಿದ್ದೆ. ಆದರೆ ಆ ದಿನ ಅವರು ಚೌಕಿಯಲ್ಲಿದ್ದರೂ ಹಾಡಲು ಬರಲೇ ಇಲ್ಲ. ಯಾಕೆ ಎಂದು ಕಾರಣ ಹುಡುಕ ಹೊರಟವನಿಗೆ ಅಚ್ಚರಿಯಾಗಿದ್ದು ಎಂದರೆ, ಅಂದು ಅವರು ಕುಡಿದದ್ದು ತುಸು ಹೆಚ್ಚಾದ ಕಾರಣ ರಂಗದ ಮೇಲೆ ಹಾಡುವ ಸ್ಥಿತಿಯಲ್ಲಿರಲಿಲ್ಲ ಎಂಬುದು. ಕೇಳಿ ನಿಜಕ್ಕೂ ಅವಾಕ್ಕಾಗಿ ಬಿಟ್ಟೆ. ಕಲೆ ಮತ್ತು ಕಲಾವಿದರನ್ನೇ ದೇವರೆಂದು ನಂಬುವ ಕಲಾಭಿಮಾನಿಗೆ ಬಹುಶ: ತೆರೆಮರೆಯ ಇಂತಹ ಅದೆಷ್ಟೋ ಕಥೆಗಳು ಗೊತ್ತಾಗದಿರುವುದರಿಂದ ಇಂದು ಕಲೆ ಇಷ್ಟಾದರೂ ಉಳಿದುಕೊಂಡಿದೆ ಎನ್ನಲೇ ಬೇಕು.

ಈ ಎರಡು ಘಟನೆಯ ನಂತರ ನನಗೆ ಕಲಾವಿದನೂ ಯಕ್ಷಗಾನ ಉಳಿಸುವಲ್ಲಿ ಪ್ರಾಮಾಣಿಕವಾಗಿ ಕಲೆಗೆ ಸ್ಪಂದಿಸುತ್ತಲೇ, ಅದನ್ನೊಂದು ಸೇವೆ ಎಂದೇ ದುಡಿಯಬೇಕಾದ ಅನಿವಾರ್ಯತೆ ಇದೆ ಎನಿಸುತ್ತದೆ. ಒಂದನ್ನು ನಾನೂ ಒಪ್ಪುತ್ತೇನೆ-ಅದೆಂದರೆ ಜೀವನೋಪಾಯಕ್ಕಾಗಿಯೂ ಈ ಕಲೆ ಕಲಾವಿದನ ವೃತ್ತಿಯಾಗಿರುತ್ತದೆ. ವಿಶೇಷವಾಗಿ ಕಲಾವಿದನಿಗೆ ಇದು ಒಂದು ವೃತ್ತಿಯಾಗುತ್ತಲೇ, ಆತ ಜನರನ್ನು ರಂಜಿಸುವ ಸಾಮಾಜಿಕ ಜವಾಬ್ದಾರಿಯುತ ಸ್ಥಾನದಲ್ಲಿರುತ್ತಾನೆ ಎಂಬ ಸತ್ಯವನ್ನು ತಿಳಿದಿರಬೇಕು. ಕಲೆ ಬೆಳೆಯಬೇಕೆಂದರೆ, ಕಲಾ ಪೋಷಕ ಹೇಗೆ ಬೇಕೋ ಹಾಗೆಯೇ ಕಲಾವಿದನೂ ಸ್ಪಂದಿಸಲೇ ಬೇಕು. ಅದಿಲ್ಲವಾದರೆ ಕಲೆ ಉಳಿದೀತಾದರೂ ಹೇಗೆ?

ಇಂದು ಯಾವುದೇ ಸಭೆಗೆ ಹೋದರೂ, ಯಕ್ಷಗಾನದ ಉಳಿವಿನ ಬಗ್ಗೆ ಮಾತು ಹರಿದಾಡುತ್ತದೆ. ಹೆಚ್ಚಿನೆಡೆಗಳಲ್ಲಿ, ಕಲೆಯನ್ನು ಉಳಿಸಲು ಸರಕಾರ ಹಾಗೆ ಮಾಡಬೇಕು, ಸಂಘ ಸಂಸ್ಥೆಗಳು ಹೀಗೆ ಮಾಡಬೇಕು……ಪ್ರೇಕ್ಷಕನ ಜವಾಬ್ದಾರಿಗಳು ಹೀಗಿರಬೇಕು, ಶಿಕ್ಷಣದಲ್ಲಿ ನಾವೇನು ಮಾಡಬೇಕು…..ಇತ್ಯಾದಿಗಳ ಬಗ್ಗೆಯೇ ಚರ್ಚೆಯಾಗುತ್ತಿರುತ್ತದೆ. ಆದರೆ ಮೇಲೆ ಹೇಳಿದ ಮತ್ತು ನಾನೇ ಅನುಭವಿಸಿದ ಘಟನೆಗಳು ಕಲಾವಿದನಿಗೂ ಬದ್ದತೆ, ವಚನಬದ್ಧತೆ ಇರಬೇಕು ಎಂಬುದನ್ನು ಧ್ರಡಪಡಿಸುತ್ತದೆ. ಅದು ಚರ್ಚೆಯಾಗುವುದು ಕಡಿಮೆ ಎಂಬುದು ವಿಪರ್ಯಾಸ.

ಎಲ್ಲಾ ಕಲಾವಿದರೂ ಹೀಗೆಯೇ ಎಂಬುದು ಇದರ ತಾತ್ಪರ್ಯವಲ್ಲ. ಮಂಗಳೂರಿನಲ್ಲೂ ನನ್ನ ಸ್ನೇಹಿತರೋರ್ವರು ಇತ್ತೀಚೆಗೆ ಒಂದು ಪ್ರದರ್ಶನ ಏರ್ಪಡಿಸಿದ್ದರು. ಅಲ್ಲಿಯೂ ಖ್ಯಾತ ಕಲಾವಿದರ ಹೆಸರನ್ನೇ ಪ್ರಚಾರದಲ್ಲಿಯೂ ಹೇಳಿದ್ದರು. ಮೇಲಿನ ಅನುಭವಕ್ಕೆ ವ್ಯತಿರಿಕ್ತವಾಗಿ ಅಂದು ಕೇವಲ ಒಬ್ಬ ಕಲಾವಿದನ್ನು ಉಳಿದು ಎಲ್ಲರೂ ಹೇಳಿದ ಸಮಯಕ್ಕೆ ಬಂದು ಉತ್ತಮ ಪ್ರದರ್ಶನವನ್ನು ನೀಡಿದ್ದರು. ಸಹಜವಾಗಿಯೇ ಯಕ್ಷಪ್ರೇಮಿಗಳು ಈ ಪ್ರದರ್ಶನದಿಂದ, ಪ್ರಸನ್ನರಾಗಿದ್ದರು. ಆದರೆ ಇಂತಹ ನಿದರ್ಶನಗಳು ಬಹಳ ಕಡಿಮೆ ಅಷ್ಟೇ.

ಇಂದು ಎಲ್ಲದರಂತೆ ಯಕ್ಷಗಾನವೂ ವಾಣಿಜ್ಯೀಕರಣಗೊಂಡ ಪರಿಣಾಮವೂ ಇದಿರಬಹುದೇನೋ. ಹಿಂದಿನಂತೆ ಇಂದು ಕಲಾವಿದ ಬಡವನಾಗಿ ಉಳಿದಿಲ್ಲ. ಬಡತನವೇನಾದರೂ ಇದ್ದರೆ ಅದು ಅವನ ಕಲೆಯಲ್ಲಿರಬಹುದೇ ಹೊರತು, ಆರ್ಥಿಕವಾಗಿ ಹೆಚ್ಚಿನವರು ಶ್ರೀಮಂತರೇ. ಹಾಗಾಗಿ ಕೆಲವು ಕಲಾವಿದರಿಗೆ ಇಂದು, ತಮ್ಮ ಮಾತಿನ ಬಗ್ಗೆ ತಮಗೇ ಬೆಲೆ ಇಲ್ಲದಿರುವಂತೆ ವರ್ತಿಸಿದರೂ ಏನೂ ಅನಿಸುವುದೇ ಇಲ್ಲ.

ಇಂದು ಯಕ್ಷಗಾನದ ಉಳಿವಿಗೆ ದೇವರ ಹರಕೆಯ ಮೂಲಕ ಮಾತ್ರ ಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗಿದ್ದರೆ ಪ್ರೇಕ್ಷಕನಷ್ಟೇ ಕಲಾವಿದನೂ ಕಾರಣ. ಪ್ರೇಕ್ಷಕನಲ್ಲಿ ಮಾತ್ರ ನಾವು ಹುಡುಕುವ ಆಸಕ್ತಿಯನ್ನು ಕಲಾವಿದಲ್ಲಿಯೂ ಕಾಣದಿದ್ದರೆ, ಕಲೆಗೆ ಸರಿಯಾದ ಬೆಲೆ ಸಿಗದು. ಮೇಲಿನ ಘಟನೆಗಳು ಅದನ್ನು ಪುಷ್ಠೀಕರಿಸುತ್ತವೆ.

ಇದನ್ನೆಲ್ಲಾ ಏಕೆ ಹೇಳ ಬೇಕಾಯ್ತೆಂದರೆ, ಕಲಾವಿದರು, ಮೇಳದ ಯಜಮಾನರು ಒಂದೆಡೆ ಕುಳಿತು, ತಮ್ಮ ತಮ್ಮಲ್ಲೇ ಈಗಿರುವ ಸ್ವಯಂ ನಿರ್ಮಿತ ಕಾನೂನುಗಳನ್ನು ಒಂದು ಚೌಕಟ್ಟಿನೊಳಗೆ ತರಬೇಕಿದೆ. ಹಾಗೆ ಬಂದಾಗ, ಮೇಲೆ ತಿಳಿಸದಂತೆ ಜನರನ್ನು ಭ್ರಮನಿರಸನಗೊಳಿಸುವುದರಿಂದ, ಜನರಿಗೆ ಕಲೆಯ ಬಗ್ಗೆ ಅಸಡ್ಡೆ ಬೆಳೆಯುವುದರಿಂದ ತಪ್ಪಿಸಬಹುದು. ಇಲ್ಲವಾದರೆ ಎಲ್ಲದರಂತೇ ಯಕ್ಷಗಾನವೂ ಮಿತಿಮೀರಿದ ವಾಣಿಜ್ಯೀಕರಣದಿಂದ, ಇಂದು ಜೀವ ಉಳಿಸಿಕೊಂಡಿರುವ ಕಾಲಮಿತಿಗೂ ಬೆಲೆ ಇಲ್ಲದ ಸ್ಥಿತಿ ತಲುಪಬಹುದು!.

ಒಂದು ನಿಜದ ಅನುಭವದೊಂದಿಗೆ ಮುಗಿಸುತ್ತೇನೆ. ನನ್ನ ಮೇಲಿನ ಅನುಭವಗಳ ನಂತರ, ಯಕ್ಷಗಾನ ಪ್ರದರ್ಶನ ಏರ್ಪಡಿಸುವುದು ಎಂದರೆ ಯಾಕೋ ‘ಹೆದರಿಕೆ’ ಯಾಗುತ್ತದೆ. ನಾನು ಈ ಕೆಲಸ ಒಪ್ಪಿಸಿದ ಸ್ನೇಹಿತ ಸಂಘಟಕ ಸಹಾ, ತಾನಿನ್ನು ಇಂತಹ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದೇ ಇಲ್ಲ, ಹೆಚ್ಚೆಂದರೆ ಕರೆದಲ್ಲಿ ಹೋಗಿ ವೇಷ ಹಾಕಿ ಬರುತ್ತೇನೆ ಎಂದು ನೊಂದು ನಡಿಯುತ್ತಿದ್ದರು. ಈ ಪರಿಗೆ ಕಲಾ ಪೋಷಕರನ್ನು ಭ್ರಮನಿರಸನ ಗೊಳಿಸುದರಿಂದ ಕಲಾವಿದನೂ ಹೊರ ಬರದೇ ಕೇವಲ ಪ್ರೇಕ್ಷಕನ್ನು ದೂರಿದರೆ ಎನೂ ಸಾಧಿಸಿದಂತಾಗುವುದಿಲ್ಲ.

ಈ ದಿಸೆಯಲ್ಲಿ ಚಿಂತನೆ ನಡೆಯಬೇಕಿದೆ.

***************

ಚಿತ್ರಕೃಪೆ: onlineweblibrary.com

1 ಟಿಪ್ಪಣಿ Post a comment
  1. Nagashree's avatar
    Nagashree
    ಮೇ 19 2011

    ಲೇಖನ ಚೆನ್ನಾಗಿದೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments