ಅಮರನಾಥ ಯಾತ್ರೆಯ ಪ್ರಾರಂಭ
ಶ್ರೀಹರ್ಷ ಸಾಲಿಮಠ
ಅಮರನಾಥ ಯಾತ್ರೆ ಮತ್ತೆ ಶುರುವಾಗಿದೆ. ಅಲ್ಲಿ ಇಲ್ಲಿ ರಿಸರ್ಚು ಮಾಡುವವರಿಗಿಂತ ಹೋಗಿಬಂದವನ ಬಾಯಲ್ಲೇ ಕೇಳಿದರೆ ವಿವರವಾದ ಐಡಿಯಾ ಸಿಗುತ್ತದೆ! ವಾಟ್ ಎನ್ ಐಡಿಯಾ ಸರ್ ಜಿ!
ಅಮರನಾಥಕ್ಕೆ ಹೋಗುವವರು ಮೊದಲು ಪರವಾನಗಿ ಪಡೆಯಬೇಕು. ಪರವಾನಗಿ ಜೆ&ಕೆ (ಜಮ್ಮು ಕಾಶ್ಮೀರ) ಬ್ಯಾಂಕ್ ನಲ್ಲಿ ದೊರೆಯುತ್ತದೆ. ಕರುನಾಡಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಈ ಬ್ಯಾಂಕಿದೆ. ಬೆಂಗಳೂರಲ್ಲಿ ಅವೆನ್ಯೂ ರಸ್ತೆಯ ಕೊನೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಬಳಿ ಜಮ್ಮು ಕಾಶ್ಮೀರ ಬ್ಯಾಂಕಿದೆ. ದಿನಕ್ಕೆ ಪರಿಮಿತ ಜನರಿಗೆ ಮಾತ್ರ ಪರವಾನಗಿ ಕೊಡುತ್ತಾರೆ. ಇವತ್ತು ಪರವಾನಗಿ ಪಡೆದರೆ ಜುಲೈಗೆ ಸಿಗಬಹುದು. ಪರವಾನಗಿ ಸಿಕ್ಕ ದಿನವೇ ಗುಹೆಯ ಬಳಿ ಹೋಗಬೇಕೆಂದು ಹೇಳುತ್ತಾರಾದರೂ ಅಮರನಾಥದಲ್ಲಿ ಅಷ್ಟು ಕಟ್ಟುನಿಟ್ಟಿನ ನಿಯಮವಿರಲಿಲ್ಲ.
ಯಾತ್ರೆಗೆ ಹೊರಡಲು ಮದ್ಯಮವರ್ಗದವರಿಗೆ ರೈಲು ಒಳ್ಳೆಯ ಮಾರ್ಗ. ಪುಣೆಯಿಂದ ಜಮ್ಮುವಿಗೆ ನೇರ ರೈಲು ಇದೆ. ಇಲ್ಲವೇ ಹುಬ್ಬಳ್ಳಿ ಅಥವಾ ಬೆಂಗಳೂರಿನಿಂದ ಹೊಸದೆಹಲಿ ತಲುಪಿ ಹಳೆ ದೆಹಲಿ ರೇಲ್ವೇ ನಿಲ್ದಾಣದಿಂದ ಜಮ್ಮು ತಲುಪಬಹುದು (ಹೊಸ ದೆಹಲಿ ಯಿಂದ ಹಳೆದೆಹಲಿ ರೇಲ್ವೇ ನಿಲ್ದಾಣಕ್ಕೆ ಹೋಗಬೇಕು). ದೆಹಲಿಯಿಂದ ಜಮ್ಮು ಸುಮಾರು ಹದಿನೈದು ತಾಸುಗಳ ರೈಲು ಪಯಣ. ಸರ್ಕುಲಾರ್ ಟಿಕೆಟ್ ಕಾಯ್ದಿರಿಸಿದರೆ ಟಿಕೆಟ್ ದರದಲ್ಲಿ ರಿಯಾಯಿತಿ ಸಿಗುತ್ತದೆ.
ಜಮ್ಮು ಕಾಶ್ಮೀರದಲ್ಲಿ ಆ ರಾಜ್ಯದ ಪ್ರಿಪೇಡ್ ಸಿಮ್ ಕಾರ್ಡುಗಳನ್ನು ಹೊರತುಪಡಿಸಿ ಬೇರೆ ರಾಜ್ಯದ ಪ್ರಿಪೇಡ್ ಸಿಮ್ ಕಾರ್ಡುಗಳು ಕೆಲಸ ಮಾಡುವುದಿಲ್ಲ. ಎಲ್ಲ ರಾಜ್ಯದ ಎಲ್ಲ ಪೋಸ್ಟ್ ಪೇಡ್ ನೆಟ್ವರ್ಕ್‌ಗಳು ಕೆಲಸ ಮಾಡುತ್ತವಾದರೂ ಬಿ ಎಸ್ ಎನ್ ಎಲ್ ಪೋಸ್ಟ್ ಪೇಡ್ ಉತ್ತಮವಾದದ್ದು. ಅಮರನಾಥ ಕ್ಷೇತ್ರದಲ್ಲಿ ಬಿಎಸ್ ಎನ್ ಎಲ್ ಮಾತ್ರ ಕೆಲಸ ಮಾಡುತ್ತದೆ. ಸ್ವಂತ ಮೊಬೈಲ್ ತೆಗೆದುಕೊಂಡು ಹೋಗುವುದು ಒಳಿತು ಏಕೆಂದರೆ ಅಮರನಾಥ ಬಳಿಯ ಟೆಲಿಫೋನ್ ಬೂತ್ ಗಳಲ್ಲಿ ಒಂದಕ್ಕೆರಡು ಹಣ ತೆರಬೇಕಾಗುತ್ತದೆ. ಜಮ್ಮು ರೇಲ್ವೇ ನಿಲ್ದಾಣದಲ್ಲಿ ಬಿಎಸ್ ಎನ್ ಎಲ್ ಸಿಬ್ಬಂದಿ ಅಮರನಾಥ ಯಾತ್ರಿಗಳಿಗಾಗಿ ತಾತ್ಕಾಲಿಕ ಟೆಂಟನ್ನು ಹಾಕಿಕೊಂಡು ಬಿ ಎಸ್ ಎನ್ ಎಲ್ ಸಿಮ್ ಕಾರ್ಡನ್ನು ವಿತರಿಸುತ್ತಾರೆ. ಯವುದಕ್ಕೂ ಇಲ್ಲಿಂದಲೇ ಪೋಸ್ಟ್ ಪೇಡ್ ಸಿಮ್ ತೆಗೆದುಕೊಂಡು ಹೋಗುವುದು ಒಳಿತು.
ಅಮರನಾಥಕ್ಕೆ ಎರಡು ಮಾರ್ಗಗಳಿವೆ. ಒಂದು ಬಾಲಟಾಲ ಮುಖಾಂತರ ಇನ್ನೊಂದು ಪಹಲಗಾಂವ್ ಮೂಲಕ. ನಾನು ಹೋಗಿದ್ದು ಬಾಲಟಾಲದ ಮೂಲಕ. ಬಾಲಟಾಲದ ಹಾದಿ ಅತ್ಯಂತ ದುರ್ಗಮವಾದದ್ದು. ಕಡಿದಾದ ಕೆಲವು ಬೆಟ್ಟಗಳನ್ನು ಹತ್ತಿಳಿಯಬೇಕು. ಈ ಬೆಟ್ಟಗಳು ಕೆಲವು ಕಡೆ ಎಷ್ಟು ಕಡಿದಾಗಿವೆಯೆಂದರೆ ಚತುಷ್ಪಾದಿಯಂತೆ ಕೈಕಾಲುಗಳ ಸಹಾಯದಿಂದ ಹತ್ತಬೇಕಾಗುತ್ತದೆ. ಜಮ್ಮುವಿನಿಂದ ಬಾಲಟಾಲಕ್ಕೆ ಶ್ರೀನಗರ, ಅನಂತನಾಗ್ ಪಚೌರಿ ಮೂಲಕ ಹನ್ನೆರಡು ತಾಸುಗಳ ಹಾದಿ. ಜಮ್ಮು ರೇಲ್ವೆ ನಿಲ್ದಾಣದಿಂದ ಸಾಕಷ್ಟು ಟಾಟಾ ಸುಮೋಗಳು ಟ್ರಾಕ್ಸ್ ಗಳು ದೊರೆಯುತ್ತವೆ. ಹಾಗೆಯೇ ಬಸ್ಸುಗಳು ದೊರೆಯುತ್ತಚೆ. ಗುಂಪಿನಲ್ಲಿ ಹೋದಾಗ ಟಾಟಾ ಸುಮೋ ಒಳಿತು.
ಬಾಲ್ಟಾಲಿನಲ್ಲಿ ಟೆಂಟುಗಳ ವ್ಯವಸ್ಥೆಯಿರುತ್ತದೆ. ನೂರು ರೂಪಾಯಿಗೊಂದು ಹಾಸಿಗೆ ಈ ಟೆಂಟುಗಳಲ್ಲಿ ದೊರೆಯುತ್ತದೆ. ಕಕ್ಕಸು ಮತ್ತು ಸ್ನಾನಕ್ಕೆ ವ್ಯವಸ್ಥೆ ಇರುತ್ತದೆ. ಊಟದ ವ್ಯವಸ್ಥೆಗೆ ಹತ್ತಾರು ಭಂಡಾರಗಳಿರುತ್ತವೆ. ಕರ್ನಾಟಕದ್ದೂ ಒಂದು ಭಂಡಾರವಿದೆ.ಕ್ಲಾಕ್ ರೂಂ ವ್ಯವಸ್ಥೆಯಿದೆ. ಬಾಲ್ಟಾಲ್ ನಿಂದ ಅಮರನಾಥನ ಗುಹೆ ಹದಿನಾರು ಕಿಮೀ ದೂರವಿದೆ. ದಾರಿಯಲ್ಲಿ ಭಂಡಾರಗಳಿದ್ದು ಊಟ ನೀರಿಗೆ ಚಿಂತೆಯಿಲ್ಲ. ಬಾಲ್ಟಾಲ್ ಮತ್ತು ಗುಹೆಯ ನಡುವೆ ಎಲ್ಲೂ ಉಳಿದುಕೊಳ್ಳುವ ಜಾಗವಿಲ್ಲವಾದ್ದರಿಂದ ಸಂಪೂರ್ಣ ದಾರಿಯನ್ನು ಒಂದೇ ದಿನದಲ್ಲಿ ಕ್ರಮಿಸಬೇಕು! ಹಾಗಾಗಿ ಬೆಳಿಗ್ಗೆ ಬೇಗನೆ ಹೊರಡುವುದು ಒಳಿತು. ಬೆಳಿಗ್ಗೆ ಹತ್ತು ಗಂಟೆಯ ನಂತರ ಯಾತ್ರೆಗೆ ಅನುಮತಿಯಿಲ್ಲ.
ಬಾಲ್ಟಾಲ್ ನಿಂದ ಅಮರನಾಥ ಗುಹೆಗೆ ಹೋಗಲು ಅನೇಕ ಮಾಧ್ಯಮಗಳಿವೆ. ಅತ್ಯುತ್ತಮವಾದದ್ದು ನಟರಾಜ ಎಕ್ಸ್ ಪ್ರೆಸ್! ನಮ್ಮ ಕಾಲುಗಳು. 🙂 ಬಿಟ್ಟರೆ ಡೋಲಿ. ಕುರ್ಚಿಗೆ ಎರಡು ಬೊಂಬನ್ನು ಕಟ್ಟಿ ಕುರ್ಚಿಯ ಮೇಲೆ ಯಾತ್ರಿಯನ್ನು ಕೂರಿಸಿಕೊಂಡು ಹೊರಡುತ್ತಾರೆ. (ರಾಮ ನಾಮ ಸತ್ಯ ಹೈ ಅಂತ ಕೂಗೋದಿಲ್ಲ! ಜೈ ಭೋಲೆ ಅಂತಲೂ ಕೂಗೋದಿಲ್ಲ ಏಕೆಂದರೆ ಇವರೆಲ್ಲ ಮುಸ್ಲಿಮರು.ಮೂಗು ಮುರೀಬೇಡಿ ಡೆಡ್ಲಿ ಪಿಜೆ ಅಂತ ಗೊತ್ತು 😉 ) ಇನ್ನೊಂದು ಕುದುರೆ. ನಿಮ್ಮ ಟೆಂಟಿನವರೇ ಡೋಲಿ ಅಥವಾ ಕುದುರೆಗೆ ವ್ಯವಸ್ಥೆ ಮಾಡುತ್ತಾರೆ. ಡೋಲಿ ಅಥವಾ ಕುದುರೆಗಾಗಿ ಟೆಂಟಿನವರ ಸಹಾಯ ಯಾವ ಕಾರಣಕ್ಕೂ ತೆಗೆದುಕೊಳ್ಳಬಾರದು! ಟೆಂಟಿನಿಂದ ಡೋಲಿ ರೂ.೨೫೦೦ /- ಕುದುರೆ ರೂ.೧೫೦೦/- ಇರುತ್ತದೆ.
ಹಣ ಉಳಿಸಲು ಉತ್ತಮ ಉಪಾಯ ಇಲ್ಲಿದೆ. ಮೊದಲ ನಾಲ್ಕಾರು ಕಿಮೀಗಳು ಅಷ್ಟೇನು ಕಡಿದಾಗಿಲ್ಲದ ನೆಲವಿದ್ದು ಆರಾಮವಾಗಿ ನಡೆಯಬಹುದು. ಅಷ್ಟು ನಡೆದರೆ ಅಲ್ಲಿ ಸಿಗುವ ಮೊದಲ ಭಂಡಾರದ ಬಳಿ ಕುದುರೆಯವರು ಕೇವಲ ಐನೂರು ಆರುನೂರು ರೂಪಾಯಿಗೆ ಬರುತ್ತಾರೆ! ಅಷ್ಟು ದೂರ ಆಗದಿದ್ದರೆ ಟೆಂಟಿನ ಗುಂಪಿನಿಂದ ಹೊರಬಂದು ಕೊಂಚ ನಡೆಯುತ್ತಿದ್ದಂತೆ ಏಳು ಎಂಟು ನೂರು ರೂಪಾಯಿಗೆ ಕುದುರೆಗಳು ಸಿಗುತ್ತವೆ. ಕೈಯಲ್ಲಿ ಟಾಫಿ, ಚಾಕೊಲೇಟುಗಳನ್ನು ಹಿಡಿದುಕೊಂಡಿದ್ದರೆ ಕುದುರೆ ಎಳೆಯುವವರಿಗೆ ಕೇಳಿದಾಗೆಲ್ಲ ಕೊಡಬಹುದು. ಕುದುರೆಯವರ ಬಳಿ ಸರಕಾರದವರು ಕೊಟ್ಟ ಗುರುತಿನ ಬಿಲ್ಲೆ ಇರುತ್ತದೆ. ಅದನ್ನು ನಿಮ್ಮ ಅಡವಿನಲ್ಲಿ ಇಟ್ಟುಕೊಳ್ಳಬಹುದು. ಬಾಲ್ಟಾಲ್ ನಿಂದ ಹೆಲಿಕಾಪ್ಟರ್ ಗಳು ಲಭ್ಯವಿವೆ. ಕಾಪ್ಟರ್ ಗಳು ೧೨೫೦ ರೂಪಾಯಿಗೆ ಯಾತ್ರಿಗಳನ್ನು ಪಂಚತರಣಿಯಲ್ಲಿ ಇಳಿಸುತ್ತವೆ. ಅಲ್ಲಿಂದ ಐದು ಕಿಮೀ ಕುದುರೆ ಅಥವಾ ನಡಿಗೆಯಲ್ಲಿ ಕ್ರಮಿಸಬೇಕು.
ಅಮರನಾಥಕ್ಕೆ ಹೋಗುವದಾರಿ ಬಹಳ ಧೂಳಿನಿಂದ ಕೂಡಿದ್ದು ಮೂಗಿಗೆ ಬಟ್ಟೆ ಕಟ್ಟಿಕೊಳ್ಳಬಹುದು. ಮೈಮೇಲೆ ಹೆಚ್ಚಿನ ಉಣ್ಣೆ ಬಟ್ಟೆ ಅವಶ್ಯಕತೆ ಇರುವುದಿಲ್ಲ.ಸಾಧಾರಣ ಬಟ್ಟೆ ಸಾಕು. ಏಕೆಂದರೆ ಬಿಸಿಲೇರಿದಂತೆ ಧಗೆ ಹೆಚ್ಚಾಗಿ ಮೈಮೇಲಿನ ಬಟ್ಟೆ ಭಾರವಾಗತೊಡಗುತ್ತವೆ. ಆಯಾಸ ಹೆಚ್ಚಾಗುತ್ತದೆ. ಬೆಳಗನ ಜಾವದ ಛಳಿಯಿಂದ ನಡಿಗೆಯಿಂದ ಉಂಟಾಗುವ ಉಷ್ಣ ಕಾಪಾಡುತ್ತದೆ. ಅಲ್ಲಿ ಯಾವ ಸಮಯದಲ್ಲಾದರೂ ಇದ್ದಕ್ಕಿದ್ದಂತೆ ಮಳೆ ಶುರುವಾಗಬಹುದು. ಉಣ್ಣೆಬಟ್ಟೆ ಮತ್ತು ರೇನ್ಕೋಟನ್ನು ಚೀಲಲ್ಲಿಟ್ಟುಕೊಳ್ಳಬಹುದು. ರಾತ್ರಿ ಇಲ್ಲಿ ಬಹಳ ಛಳಿಯಿರುತ್ತದೆ.
ಅಮರನಾಥ ಗುಹೆಯ ಬಳಿ ಸಾಕಷ್ಟು ಟೆಂಟುಗಳು ಲಭ್ಯವಿವೆ. ನೂರು ರೂಪಾಯಿ ಪರ್ ಹೆಡ್ಡು. ಭಂಡಾರಗಳೂ ಇವೆ. ಊಟಕ್ಕೆ ತೊಂದರೆಯಿಲ್ಲ. ಕಕ್ಕಸಕ್ಕೆ ಬಂಡೆಯ ಹಿಂದೆ ಹೋಗಬೇಕು. ಐಸ್ ತಣ್ಣಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ಅಲ್ಲಿಂದ ವಾಪಸು ಬಾಲ್ಟಾಲ್ ಗೆ ಬರಲು ಏಳು ನೂರು ರೂಪಾಯಿ ಚೌಕಾಶಿಗೆ ಕುದುರೆಗಳು ಲಭ್ಯವಿವೆ. ಅಮರನಾಥ ಗುಹೆಯ ಬಳಿ ಆಮ್ಲಜನಕದ ಕೊರತೆಯಿದ್ದು ವಾಂತಿ, ಸುಸ್ತು, ತಲೆಸುತ್ತುವಿಕೆಗಳು ಕಾಣಿಸಿಕೊಳ್ಳಬಹುದು. ರಾತ್ರಿಯಲ್ಲಿ ಈ ತೊಂದರೆ ಹೆಚ್ಚು. ಎಲ್ಡೋಪರ್ ನಂತಹ ಗುಳಿಗೆಗಳು ಉಪಯುಕ್ತ. ಕರ್ಪೂರವನ್ನು ಮೂಸುತ್ತಿದ್ದರೆ ಉಸಿರಾಟದಲ್ಲಿ ನಿರಾಳತೆ ಮೂಡುತ್ತದೆ. ಕರ್ಪೂರದ ಹುಡಿ ಪುಪ್ಪಸದೊಳಗೆ ಹೋಗಿ ಹೆಚ್ಚಿನ ತೊಂದರೆ ಆಗಬಾರದು. ಅದಕ್ಕಾಗಿ ಪ್ಲಾಸ್ಟಿಕ್ ಕವರಿನೊಳಗೆ ಕರ್ಪೂರವನ್ನಿಟ್ಟು ಮೂಸುವುದು ಒಳಿತು.
ಬಾಲ್ಟಾಲ ಮೂಲಕದ ಯಾತ್ರೆಗಿಂತ ಪಹಲಗಾಂವ್ ಮೂಲಕದ ಅಮರನಾಥದ ಪ್ರಯಾಣ ಮನಮೋಹಕವಾಗಿದೆ ಎಂದು ಬಲ್ಲವರು ಹೇಳುತ್ತಾರೆ. ಇಪ್ಪತ್ತಾರು ಕಿಮೀಗಳ ಈ ಹಾದಿ ಮೂರು ದಿನದ್ದು. ಪಹಲಗಾಂವ್ನಿಂದ ಗಣಪತಿ ಟಾಪ್, ಶೇಷನಾಗ, ಪಂಚತರಣಿ ಮೂಲಕ ಅಮರನಾಥ. ಎರಡು ದಿನಗಳ ತಂಗುವಿಕೆಯಲ್ಲಿ ಟೆಂಟು, ವಸತಿಗಳ ವ್ಯವಸ್ಥೆಯಿದೆ. ಯಾವ ರಸ್ತೆಯಲ್ಲಿ ಹೋಗುತ್ತೀರೋ ಅದೇ ದಾರಿಯಲ್ಲಿ ಬರುವುದು ಒಳಿತು. ಜಮ್ಮುವಿನಿಂದ ಚಂದನವಾಡಿಗೆ ಶ್ರೀನಗರದ ಮೂಲಕ ಎಂಟು ತಾಸುಗಳ ಹಾದಿ. ಅಲ್ಲಿಗೂ ಸುಮೋ ಮತ್ತು ಬಸ್ಸುಗಳ ಸೌಲಭ್ಯವಿದೆ. ಚಂದನವಾಡಿಯಿಂದ ಹತ್ತು ಕಿಮೀ ದೂರ ಪಹಲಗಾಂವ್. ಚಂದನವಾಡಿಯಿಂದ ಪಹಲಗಾಂವ್ ಗೆ ಟೆಂಪೋಗಳು ಸಿಗುತ್ತವೆ.
ಬಸ್ಸಿನಲ್ಲಿ ತಿರುಗಿ ಜಮ್ಮುವಿಗೆ ಬರುವವರು ಒಂದೆರಡು ದಿನ ಮೊದಲೇ ಕಾಯ್ದಿರಿಸಬೇಕು. ಬಸ್ಸುಗಳು ಕೆಟ್ಟದಾಗಿವೆ. ಜಮ್ಮುವಿನಲ್ಲಿ ರಘುನಾಥನ ಗುಡಿ ಚೆನ್ನಾಗಿದೆ. ಡ್ರೈ ಪ್ರೂಟುಗಳು, ಕ್ರಿಕೆಟ್ , ಹಾಕಿ, ಬೇಸ್ ಬಾಲ್ ಬ್ಯಾಟುಗಳು ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯವು ದೊರೆಯುತ್ತವೆ. ಜಮ್ಮುವಿನಿಂದ ಒಂದು ತಾಸಿನ ಹಾದಿ ಕಟ್ರಾ. ಅಂದರೆ ವೈಶ್ಣೋದೇವಿ ವಾಸಸ್ಥಾನ. ಹದಿನಾಲ್ಕು ಕಿಮೀ ಬೆಟ್ಟದ ಹಾದಿಯ ನಡಿಗೆ. ಜಮ್ಮುವಿನಿಂದ ಕಟ್ರಾಕ್ಕೆ ಬಸ್ಸುಗಳು ಲಭ್ಯವಿವೆ.
****************
ಚಿತ್ರಕೃಪೆ: travel.kashmironline.net




