ಬದಲಾವಣೆ ಬಯಸುವುದಾದರೆ ಬಸವನಗುಡಿಗೆ ಬನ್ನಿ…
– ರಾಕೇಶ್ ಶೆಟ್ಟಿ
ಬಸವನಗುಡಿಗೆ ಬಂದ ತಕ್ಷಣ ಬದಲಾವಣೆಯಾಗುತ್ತಾ? ಅನ್ನುವ ಪ್ರಶ್ನೆ ನಿಮ್ಮದಾದರೆ ನನ್ನ ಉತ್ತರ ’ಇಲ್ಲ’! ಅಂತಲೇ. ಭ್ರಷ್ಟಚಾರ ಅನ್ನುವ ಬ್ರಹ್ಮ ರಾಕ್ಷಸನ ವಿರುದ್ಧ ಅಣ್ಣ ಹಜ಼ಾರೆ ನೇತೃತ್ವದಲ್ಲಿ ಶುರುವಾಗಿರುವ ಈ ಹೋರಾಟವೇ ಅಂತಿಮವಲ್ಲ.ಇದು ಆರಂಭವಷ್ಟೆ ಅನ್ನುವುದು ನನ್ನ ಅಭಿಪ್ರಾಯ.
ಅಂತಿಮವಾಗುವುದಾದರೂ ಹೇಗೆ ಹೇಳಿ, ಭ್ರಷ್ಟಚಾರ ಅಂದಾಕ್ಷಣ ಎಲ್ಲರ ಕಣ್ಣು ಮೊದಲು ಬೀಳುವುದೂ ಕಳ್ಳ(ಎಲ್ಲ ಅಲ್ಲ) ರಾಜಕಾರಣಿಗಳ ಮೇಲೆ,ಆಮೇಲೆ ಸರ್ಕಾರಿ ಕಛೇರಿ ಮತ್ತು ಅಧಿಕಾರಿಗಳ ಮೇಲೆ.ತಪ್ಪೇನಿಲ್ಲ ಬಿಡಿ…! ಭ್ರಷ್ಟಚಾರ ಅನ್ನೋ ಪಿರಮಿಡ್ನ ತುತ್ತ ತುದಿಯಲ್ಲಿರೋ ಅವರ ಮೇಲೆ ಎಲ್ಲರ ಕಣ್ಣು ಬೀಳುವುದು ಸಹಜ.ಆದರೆ, ’ನಾವುಗಳೆಷ್ಟು ಸಾಚಾ?’ ಅಂತ ನಮ್ಮನ್ನೇ ನಾವ್ಯಾವತ್ತಾದರೂ ಕೇಳಿಕೊಂಡಿದ್ದೇವೆಯೇ?
ಮನೆ ಕಟ್ಟಿಕೊಳ್ಳುವಾಗ ರಸ್ತೆ ಒತ್ತುವರಿ ಮಾಡುವ,ಸರ್ಕಾರಿ ಕಛೇರಿಗಳಲ್ಲಿ ಕೈ ಬೆಚ್ಚಗೆ ಮಾಡಿ ಕೆಲಸ ಮಾಡಿಸಿಕೊಳ್ಳುವ,ಸಿಗ್ನಲ್ ಜಂಪ್ ಮಾಡಿ ಸಿಕ್ಕಿ ಬಿದ್ದಾಗ ದಂಡದ ಅರ್ಧ ಅಮೌಂಟ್ ಕೊಟ್ಟು ಪರಾರಿಯಾಗುವ,ರೂಲ್ಸ್ ಗಳಿರುವುದೇ ಬ್ರೇಕ್ ಮಾಡಲು ಅಂತ ಮಾತನಾಡುವ ನಾವುಗಳು…! ಮನೆ ಅಡವಿಟ್ಟೋ,ಹೆಂಡತಿಯ ಒಡವೆ ಅಡ ಇಟ್ಟೋ ಮಗನಿಗೆ ಸರ್ಕಾರಿ ಕೆಲಸವನ್ನ ಕೊಡಿಸುವ ತಂದೆ, ಮಗನಿಗೆ ’ಈ ದುಡ್ಡು ವಾಪಸ್ ತರೋ ಜವಬ್ದಾರಿ ನಿನ್ನದೋ ಕಂದ’ ಅನ್ನುವ ಸಮಾಜದಲ್ಲಿ ಬದಲಾವಣೆಯನ್ನ ಇಷ್ಟು ಬೇಗ ನಿರೀಕ್ಷಿಸುವುದು ಮೂರ್ಖತನವಾದೀತೂ ಅಲ್ಲವೇ?
ಚುನಾವಣೆಗೆ ನಿಂತ ರಾಜಕಾರಣಿ ನೀಡುವ ಬಿರಿಯಾನಿ,ಹೆಂಡ ಹಿಂದೆ ನಾಚಿಕೆ ಇಲ್ಲದೆ ಹೋಗುವ,ರಾಜಕಾರಣಿಗಳಿಗೆ ಬೈಯುತ್ತ, ವಿದ್ಯಾವಂತರು ರಾಜಕೀಯಕ್ಕೆ ಬರಲಿ ಅಂತೇಳುತ್ತಲೇ,ಶಿವರಾಮ ಕಾರಂತ,ಕ್ಯಾಪ್ಟನ್ ಗೋಪಿನಾಥ್ ರಂತವರು ಚುನಾವಣೆಗೆ ನಿಂತಾಗ ಸೋಲಿಸುವ ಮನಸ್ಥಿತಿ ನಮ್ಮದಾಗಿರುವಾಗ ಬದಲಾವಣೆ ಧೀಢಿರ್ ಸಾಧ್ಯವೂ ಇಲ್ಲ ಸಾಧೂವೂ ಅಲ್ಲ! ಹಾಗೆಂದು ಸುಮ್ಮನೆ ಕೂತರೂ ಏನೂ ಬದಲಾಗದು.
ಇಂತದ್ದೇ ನೆಗೆಟಿವ್ ವಾತವಾರಣವಿದ್ದಾಗಲೇ ಉಪವಾಸ ಸತ್ಯಾಗ್ರಹದಿಂದ ಸರ್ಕಾರದ ಮಂಡಿಯೂರುವಂತೆ ಮಾಡಿದ್ದು ಅಣ್ಣ ಹಜ಼ಾರೆ.ಅವರ ಹೋರಾಟದ ಫ಼ಲವಾಗಿ ಇದೀಗ ’ಜನಲೋಕಪಾಲ’ ಮಸೂದೆಯ ಅಂಗೀಕಾರ ಬಹುಷಃ ಮುಂದಿನ ಸಂಸತ್ ಅಧಿವೇಶನದಲ್ಲಿ ನಡೆಯಬಹುದು ಅನ್ನುವ ಆಶಾಭಾವನೆ ಮೂಡಿದೆ.ಆದರೆ ಸರ್ಕಾರ ಅನ್ನುವ ಆನೆಯ ಮೇಲೆ ಅಂಕುಶವನ್ನಿಡಲು ಮತ್ತೊಮ್ಮೆ ’ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಲನ ಬೆಂಗಳೂರಿನಲ್ಲಿ ನಡೆಯಲಿದೆ.
ಎಲ್ಲಕ್ಕೂ ಒಂದು ಅಂತ್ಯವಿರುವಂತೆ ನಮ್ಮ-ನಿಮ್ಮೊಳಗಿನ ಭ್ರಷ್ಟಚಾರ ಅನ್ನುವ ಭೂತದಿಂದ ಮುಕ್ತವಾದ ನೆಮ್ಮದಿಯ ನಾಳೆಗಳು ನಮಗೆ – ನಮ್ಮ ಮಕ್ಕಳಿಗೆ ಕೊಡುವುದಕ್ಕಾದರೂ ಈ ಹೋರಾಟದಲ್ಲಿ ಪಾಲ್ಗೊಳ್ಳೋಣ ಬನ್ನಿ.
ಇದೆ ಮೇ ೨೮ರ ಶನಿವಾರ ಮಧ್ಯಾನ್ಹ ೨ ಗಂಟೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಅಣ್ಣ ಹಜ಼ಾರೆ,ಕಿರಣ್ ಬೇಡಿ,ಸ್ವಾಮಿ ಅಗ್ನಿವೇಶ್,ಅರವಿಂದೆ ಕ್ರೇಜಿವಾಲ್ ಮತ್ತು ಪ್ರಶಾಂತ್ ಭೂಷಣ್ ಬರುತಿದ್ದಾರೆ. ನೀವೂ ಬರ್ತೀರಲ್ವಾ?





good one rakesh.
ಖಂಡಿತ
ಚೆನ್ನಾಗಿದೆ ರಾಕೇಶ್
Thumba chennagidhe Rakesh.
GOOD