ವಿಷಯದ ವಿವರಗಳಿಗೆ ದಾಟಿರಿ

ಮೇ 26, 2011

16

ಒಂದು ತುತ್ತು ಅನ್ನ… ಎರಡು ತೊಟ್ಟು ಕಣ್ಣೀರು…!

‍ನಿಲುಮೆ ಮೂಲಕ

-ರವಿ ಮೂರ್ನಾಡು

ಮದುವೆಗೆ ಗೆಳತಿಯ ಆಮಂತ್ರಣ  ಬಂದಿತ್ತು.ಆ ಮದುವೆ ಶುಭದಿನ ಹೊಸ ಜಗತ್ತೊಂದನ್ನು ಚಿತ್ತಪಟದಲ್ಲಿ ಮುದ್ರೆಯೊತ್ತುತ್ತದೆ ಅಂತ ತಿಳಿದಿರಲಿಲ್ಲ. ಜೀವವಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಕವಚವೊಂದು ಬದ್ಧತೆಯನ್ನು ನಿರ್ಮಿಸಿ ಕೊಡುತ್ತದೆ ಅಂತ ಗೊತ್ತಿತ್ತು. ಅದನ್ನು ಮೀರಿ ಮನುಷ್ಯನ ಮನಸ್ಸಿಗೇ ಸವಾಲೊಡ್ಡುವ ಶಾರೀರಿಕ ತಲ್ಲಣದ ಸನ್ನಿವೇಶಕ್ಕೆ ಎದೆಯನ್ನೊಮ್ಮೆ ಮುಟ್ಟಿ ನೋಡುತ್ತೇನೆ. ಹಸಿವಿನ ಪ್ರಪಂಚದ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗುತ್ತೇನೆ. ಈ ಕಡಲ ಅಲೆಗಳಲ್ಲಿ ದಡ ಸೇರಲು ಹವಣಿಸುವ ಪುಟ್ಟ ದೋಣಿಯೆಂದು ಗೊತ್ತಿರಲಿಲ್ಲ. ಅಲೆಗಳು ಹಾಗೇ ಬಡಿಯುತ್ತಲೆ ಇವೆ…..ತಡಿಯಲ್ಲಿ ಮೂಡಿಸಿದ ಹೆಜ್ಜೆಗಳ ಅಳಿಸುತ್ತಲೇ ಇದೆ….! ಹೆಜ್ಜೆಗಳು ಮೂಡುತ್ತಲೇ ಇವೇ…

ಮದುವೆ ಇದ್ದದ್ದು ಬೆಂಗಳೂರಿನಲ್ಲಿ. 500 ರೂಪಾಯಿಯೊಂದಿಗೆ ನನ್ನ ಪ್ರಯಾಣ.ಎಂದಿಗೂ ಎಲ್ಲಿಗೂ ಹೊರಡುವಾಗ ಒಂದಷ್ಟು ಸಾಹಿತಿಗಳ ಪುಸ್ತಕ, ಪತ್ರಕರ್ತನಾಗಿದ್ದರಿಂದ ಒಂದೆರಡು ಲೇಖನಗಳ ಟಿಪ್ಪಣಿ. ಜೋಳಿಗೆ  ಹೆಗಲಿಗೆ ಭಾರವಾಗುತ್ತಿರಲಿಲ್ಲ. ಬಸ್ಸಿನಲ್ಲಿ ಮಡಿಕೇರಿಯಿಂದ ಬೆಂಗಳೂರುವರೆಗೆ ಆರು ಗಂಟೆಗಳ ಕಾಲ ಕೂರಬೇಕಲ್ಲ. ಸುಮ್ಮನೇ ಕುಳಿತಾಗ ಸಮಯದ ಗೈರು ಹಾಜರಿಯ ಕೊರತೆಯನ್ನು ಈ ಪುಸ್ತಕಗಳು ನೀಗಿಸುತ್ತಿದ್ದವು. ನನ್ನೊಂದಿಗೆ ಮಾತಾಡುತ್ತಿದ್ದವು.

ಹಾಗೇ ದ.ರಾ.ಬೆಂದ್ರೆ, ಎಂ.ಟಿ.ವಾಸುದೇವನ್‍ ನಾಯರ‍್, ಪ್ರೇಮ್‍ಚಂದ್‍., ಜಿ.ಎಸ್‍. ಶಿವರುದ್ರಪ್ಪ.. ಇತ್ಯಾದಿ…! ಅದರಲ್ಲಿ ವಾಸುದೇವನ್‍ ನಾಯರರ  ಒಂದು ಕಥೆ ಹಸಿವಿನ  ಕ್ಷಣಗಳನ್ನು ಕದಕಿದಂತಾಯಿತು. ಕಥೆ ” ಕರ್ಕಟಕ ಮಾಸ”. ಕೇರಳದಲ್ಲಿ ” ಕಕ್ಕಡ ಮಾಸಂ” ಅಂತ ಕರೀತಾರೆ.ಕೃಷಿಕರಿಗೆ ತುಂಬಾ ಕಷ್ಟದ ತಿಂಗಳು ಇದು. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅಶುಭ ಅಂತ ಪ್ರತೀತಿ.ಜ಼ಾನಪೀಠ ಪ್ರಶಸ್ತಿ ವಿಜೇತ ಎಂ.ಟಿ.ವಾಸುದೇವನ್‍ ನಾಯರರ ಹುಟ್ಟಿದ ನಕ್ಷತ್ರ ಇದು. ಅದರಲ್ಲಿ ಅವರ ಹುಟ್ಟುಹಬ್ಬದ ದಿನವನ್ನು ಅವರ ತಾಯಿ ಹೇಗೆ ಆಚರಿಸಿದರು ಅಂತ ವಿವರಿಸುತ್ತಾರೆ. ಖಾಧ್ಯಾನ್ನಗಳ ವಿಚಾರದಲ್ಲಿ ಕೇರಳ ಸ್ವಾವನಂಭಿಯಲ್ಲ ಎಂದೂ ವ್ಯಂಗ್ಯವಾಡುತ್ತಾರೆ.

ಒಬ್ಬ ಶಾಲಾ ಬಾಲಕ ಸ್ಥಾನದಲ್ಲಿ ನಿಂತ ಮನಸ್ಥಿತಿಯ ಚಿತ್ರಣ. ತನ್ನದೆ ಆದ ಹಸಿವಿನ ಅನುಭವ ಕೇರಳವಲ್ಲದೇ ಇಡೀ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದೆ ಉಳಿಯುವ ಮನುಷ್ಯಾವಸ್ಥೆಯ ಧಾರುಣ ಸ್ಥಿತಿಯ ಕಥೆಯಿದು. ಔಷಧಿಗೂ ಅಕ್ಕಿ ಕಾಳಿಲ್ಲದ ಮನೆಯಲ್ಲಿ ಅವರು ಬೆಳೆದದ್ದು ಅಂತ ತಿಳಿಯಿತು. ತನ್ನ ಕರುಳ ಬಳ್ಳಿಯ ಹುಟ್ಟುಹಬ್ಬಕ್ಕೆ ತಾಯಿ ಪಡುವ ವ್ಯಾತನಾಮಯ ಸಂದರ್ಭ ಇಡೀ ಪ್ರಯಾಣದಲ್ಲಿ ನನ್ನನ್ನು ಬೆಂಗಳೂರು ತಲುಪಿಸಿದ್ದೇ ಗೊತ್ತಾಗಲಿಲ್ಲ. ಮನಸ್ಸು ಖಾಲಿಯಾಗಲೇ ಇಲ್ಲ. ಈ ಹಸಿವಿನ ಜಗತ್ತಿನಲ್ಲಿ ನನ್ನದೊಂದು ಧನಿ ಕೇಳಿಸಿತು, ಇಲ್ಲಿಯ ಬಂಡೆ ಕಲ್ಲಿಗೆ ಅದರ ಪರಿಚಯವಿದೆ ಅನ್ನಿಸಿತು.

ಮೆಜೆಸ್ಟಿಕ್‍ನಿಂದ ನೇರವಾಗಿ ಭಾರತೀನಗರಕ್ಕೆ ಬಂದಿಳಿದೆ. ಒಂದು ಗಲ್ಲಿಗೆ ಗೆಳೆತಿಯ ಮದುವೆ ಮಂಟಪಕೆ ಬಂದಾಗ ಪರಿಚಯಸ್ಥರ ನಗುವಿನೊಳಗೆ ಅವಿತುಕೊಳ್ಳಲು ಯತ್ನಿಸಿದ್ದೆ. ಒಂದಿಬ್ಬರು ಗೆಳೆಯರು ನನ್ನ ಜೋಳಿಗೆಯ ಬಗ್ಗೆ ಮಾತು ತೆಗೆದರು. ಅದು-ಇದು ಅಂತ ನಡೆದಾಗ ಮುಹೂರ್ತಕ್ಕೆ ಅರ್ಧ ಗಂಟೆಯ ಸಮಯವಿತ್ತು.ಮದುವೆ ಮಂಟಪದ ಸುತ್ತೆಲ್ಲಾ ಓಡಾಡಬೆಕೆನಿಸಿತ್ತು.ಮದುವೆಗೆ ಬಂದ ಜನರ ಸಮೂಹದಿಂದ ಕೊಂಚ ದೂರ ಹೆಜ್ಜೆಯಿಕ್ಕಿದೆ.ಸ್ವಾಗತ ಬಾಗಿಲಿಗೆ. ಅನತಿ ದೂರದಲ್ಲಿ ಒಬ್ಬಳು ಹಣ್ಣು ಹಣ್ಣು ಅಜ್ಜಿ ಕುಳಿತಿದ್ದಳು. ಮೂರ್ರ್ನಾಲ್ಕು ಖಾಲಿ ಪತ್ರೆಗಳೂ.ಅವಳೊಂದಿಗೆ ಐವರು ಮಕ್ಕಳು. ಒಂದು ಸಣ್ಣದು, ಹೆಣ್ಣು ಮಗು. ಅದರ ಕೈಯಲ್ಲಿ ಒಂದು ತಟ್ಟೆ. ಇನ್ನೆರಡು ಎಂಟತ್ತು ವರ್ಷದ ಹೆಣ್ಣು ಮಕ್ಕಳು, ಮಿಕ್ಕಿದ್ದು ಸಣ್ಣ ಹುಡುಗರು. ಅಜ್ಜಿಯ ಮೊಮ್ಮಕ್ಕಳು ಅಂದುಕೊಂಡೆ. ಮದುವೆಯ ಅಡುಗೆ ಕೋಣೆಯ ದಿಕ್ಕಿಗೇ ಅವರು ದಿಟ್ಟಿಸುತ್ತಿದ್ದರು. ಮದುವೆಯ ಸಂಭ್ರಮದಲ್ಲಿ ಅನ್ನ ಕೇಳಲು ಬಂದವರು. ಅನ್ನ-ಖಾಧ್ಯಾನ್ನಗಳ ಸುವಾಸನೆ ಹಸಿದು ಆಸ್ವಾಧಿಸುತ್ತಿದ್ದವರಂತೆ ಗೋಚರಿಸಿತು. ಹಾಗೇ ಅವರ ಸುತ್ತೆಲ್ಲ ಓಡಾಡುತ್ತಿದ್ದವು ಬೀದಿ ನಾಯಿಗಳು.ಇಂತಹ ಸನ್ನಿವೇಶಗಳು ಎಲ್ಲಾ ಕಡೆಯಿದೆ ಎಂದು ಒಂದು ಕ್ಷಣ ಆಲೋಚಿಸಿದ್ದೆ.

ಫ್ರೇಂಚ್‍ ಕಥೆಯ ಇಂಗ್ಲೀಷ್‍ ಅನುವಾದ ಓದಿದ ನೆನಪು ಬಂತು. ಅದೊಂದು ದೊಡ್ಡ ಪಟ್ಟಣ. ಅಲ್ಲಿ ಭಿಕ್ಷುಕರ ನಾಲ್ಕು ಗುಂಪುಗಳಿದ್ದವು. ಪಟ್ಟಣದಲ್ಲಿ ವಾರಕ್ಕೆ ಹೇಗಿದ್ದರೂ ಮದುವೆಗಳು ನಡೆಯುತ್ತಿದ್ದವು. ಎಲ್ಲಾ ಮದುವೆಗಳಿಗೂ ಈ ಗುಂಪು ಅನ್ನಕ್ಕಾಗಿ ಹೋಗುತ್ತಿದ್ದವು. ಹಾಗೆ ನಡೆಯುತ್ತಿದ್ದಾಗ ಒಂದು ಬಾರಿ ಮದುವೆ ಮನೆಯ ಹೊರಾಂಗಣದಲ್ಲಿ ಈ ಗುಂಪುಗಳ ನಡುವೆ ಅನ್ನದ ಜಗಳ ಶುರುವಾಯಿತು. ಅದು ಎಲ್ಲಿಯವರೆ ನಡೆಯಿತೆಂದರೆ, ಮದುವೆಯನ್ನೇ ಮುಂದೂಡುವಂತೆ ಮಾಡಿತು. ಮಧ್ಯಸ್ಥಿಕೆ ತೆಗೆದುಕೊಂಡವರು ಪೋಲೀಸರು ಮತ್ತು ಪಟ್ಟಣದ ಆಡಳಿತ ಮಂಡಳಿ.ತೀರ್ಮಾನ ಹೀಗಿತ್ತು,  ಭಿಕ್ಷುಕರ ಅನ್ನದ ಗುಂಪಿಗೆ ” ಟೋಕನ್‍ ಸಿಸ್ಟಂ” ಕೊಡುವುದು.ಪಟ್ಟಣದಲ್ಲಿ ಯಾವುದೇ ಮದುವೆ ನಿಶ್ಚಯವಾದಲ್ಲಿ ಒಂದು ಗುಂಪಿಗೆ ಮಾತ್ರ  ಅನ್ನ ಕೇಳುವ ಅವಕಾಶ ಅಂತ.ಮಿಕ್ಕುಳಿದವರು ಹೋಗುವಂತಿಲ್ಲ. ಬೇರೆ ಮದುವೆ ಇದ್ದರೆ ಅಲ್ಲಿಗೆ ಹೋಗಬಹುದು.ಇಲ್ಲದಿದ್ದರೆ ಭಿಕ್ಷೆ ಬೇಡಿಯೇ ಹಸಿವು ಇಂಗಿಸಿಕೊಳ್ಳಬೇಕು.ಅಂತಹ ಸ್ಥಿತಿ ಬೆಂಗಳೂರಿನಲ್ಲಿ ಇಲ್ಲ ಅನ್ನುವ ಸಮಾದಾನದಿಂದ ಹೆಚ್ಚಿನ ಗಮನ ಕೊಡದೆ ಮುಹೂರ್ತ ಮಂಟಪಕೆ ಬಂದೆ.

ಎಲ್ಲಾ ಮುಗಿದಾಗ ಊಟದ ಸಮಯ ಬಂತು. ಹೊಟ್ಟೆ ಹಸಿಯುತ್ತಿತ್ತು. ಬೆಳಿಗ್ಗೆ ಮೂರು ಗಂಟೆಗೆ ಬಿಟ್ಟಿದ್ದು ಮಡಿಕೇರಿಯಿಂದ. ಮೆಜೆಸ್ಟಿಕ್‍ನಲ್ಲಿ ಒಂದು ಕಪ್‍ ಕಾಫಿ ಬಿಟ್ಟರೆ ಏನೂ ಇರಲಿಲ್ಲ. ಮೊದಲ ಪಂಕ್ತಿಯಲ್ಲೇ ನಾನೂ ಕುಳಿತುಕೊಂಡೆ. ಊಟ ಮುಗಿಸಿ ಎಲ್ಲರೊಂದಿಗೆ ಕೈ ತೊಳೆಯಲೆಂದು ಹೊರಗೆ ಬಂದೆ. ನೀರಿನ ವ್ಯವಸ್ಥೆ  ಎಂಜಲೆಲೆಗಳನ್ನು ಬಿಸಾಕುವ ಸ್ವಲ್ಪ ಹತ್ತಿರವೇ ಇತ್ತು. ಯಾರೋ ಸಣ್ಣ ಮಗು ಈ ಎಂಜಲೆಲೆ ಬಿಸಾಕುವ ಸ್ಥಳದಲ್ಲಿ ಅಳುತ್ತಿರುವಂತೆ ಸ್ವರ ಆಲಿಸಿದೆ. ಜೇಬಿನಿಂದ ಕೈ ಬಟ್ಟೆ ತೆಗೆದು ಅಲ್ಲೇ ಬದಿಗೆ ಸರಿದು ಕೈ ಒರಸುತ್ತ ನಿಂತೆ. ಮದುವೆಯ ಸ್ವಾಗತ ಬಾಗಿಲಿನಲ್ಲಿ ಅಜ್ಜಿಯೊಂದಿಗೆ ಕುಳಿತಿದ್ದ ಹೆಣ್ಣು ಮಗು ಅದು. ಹಸಿವಿನಿಂದ ಅಳುತ್ತಿತ್ತು.

ಊಟದ ಎಂಜಲೆಲೆಗಳನ್ನು  ಮಂಟಪದ ಕೆಲಸಗಾರರು ಎತ್ತಿ ಎತ್ತಿ ಆ ಕಸದ ತೊಟ್ಟಿಯ ಸಮೀಪಕ್ಕೆ ಎಸೆದು ಹೋದರು. ಅವರಿಗೂ ಗೊತ್ತಿತ್ತೇನೋ ತಿಪ್ಪೆಯ ಅನ್ನಕ್ಕಾಗಿ ಕಾಯುವ ಜೀವಗಳಿವೆ ಎಂದು. ಕ್ಷಣ ಮಾತ್ರದಲ್ಲಿ ಆ ಐವರು ಮಕ್ಕಳು ಮುಗಿಬಿದ್ದರು ಎಂಜಲೆಲೆಗೆ…! ಊಟ ಮಾಡಿ ಬಾಕಿ ಉಳಿಸಿದ ಎಂಜಲೆಲೆಯ ಅನ್ನವನ್ನು ತಮ್ಮ ತಮ್ಮ ಖಾಲಿ ಪಾತ್ರೆಗಳಲ್ಲಿ ತುಂಬಿಸಿಕೊಳ್ಳತೊಡಗಿದರು. ಅಲ್ಲೇ ಸಾವವಾಕಾಶವಾಗಿ ತಿನ್ನುತ್ತಲೂ ಇದ್ದರು. ಆ ಹೆಣ್ಣು ಮಗುವಂತೂ ಎಲೆಗಳ ಮಧ್ಯದಲ್ಲೇ ಅನ್ನವನ್ನು ತಿನ್ನ ತೊಡಗಿತು. ಹಸಿವಿನ ಪ್ರವಾಹ…! ಬೋರ್ಗೆರೆಯುವ ಅನ್ನದ ನರ್ತನಕ್ಕೆ ಬಾಯಿ-ಕೈ- ಕಣ್ಣುಗಳು ಒಂದಾದಂತೆ…!

ಆ ಹೊತ್ತಿನಲ್ಲೇ ಬಂದವು ಅಲ್ಲೇ ಸುತ್ತಾಡುತ್ತಿದ್ದ ಬೀದಿ ನಾಯಿಗಳು..! ಇವರ ಮಧ್ಯೆ ಮುನ್ನಗ್ಗಲು ಪ್ರಯತ್ನಿಸುತ್ತಿದ್ದವು. ಅವುಗಳನ್ನು ಮಕ್ಕಳು ಓಡಿಸಲು ಯತ್ನಿಸುತ್ತಿದ್ದಂತೆ ಕೆಲವು ನಾಯಿಗಳು ದುರುಗುಟ್ಟಿ ಬೊಗಳಲು ಪ್ರಾರಂಭಿಸಿದವು. ಕಚ್ಚಲು ಹವಣಿಸಿದವು. ಮೊದಲು ಸಿಕ್ಕಿದ್ದು ಆ ಹೆಣ್ಣು ಮಗು.ಮಗುವಿಗೆ ಕಚ್ಚಿದಾಕ್ಷಣ ಅದು ಉಳಿದ ಅನ್ನದ ಎಲೆಯೊಂದಿಗೆ ಅಜ್ಜಿಯ ಬಳಿ ಸೇರಿತು. ಎಲೆಗಳ ಅನ್ನಕ್ಕೆ ಹುಡುಕಿ ಹುಡುಕಿ ತುಂಬಿಸುವುದು ಒಂದು ಕಡೆ,ನಾಯಿಗಳೊಂದಿಗೆ ಜಗಳ ಇನ್ನೊಂದು ಕಡೆ. ಜೊತೆಗೆ ಕಾಗೆಗಳೂ…! ಎಂಜಲೆಲೆಗಳ ಮಧ್ಯೆ ಮಕ್ಕಳು, ಸುತ್ತಲೂ ನಾಯಿಗಳು- ಕಾಗೆಗಳು.. ನೊಣಗಳು..! ಊಟದ ಪಂಕ್ತಿಗಳು ಮುಗಿಯುತ್ತಿದ್ದಂತೆ ಆ ಕೆಲಸಗಾರರು ಅಲ್ಲಿಯ ತಿಪ್ಪೆಗೆ ಎಲೆಗಳನ್ನು ಹಾಕುತ್ತಲೇ ಇದ್ದರು. ಖಾಲಿ ಪಾತ್ರೆಗಳು ಅನ್ನದಿಂದ ತುಂಬಿದವು.ಆ ಮಕ್ಕಳು ನೇರವಾಗಿ ಅಜ್ಜಿಯ ಬಳಿ ಓಡಿದರು. ನಾಯಿಗಳೊಂದಿನ ಕಿತ್ತಾಟದಿಂದ ಒಂದು ಹೆಣ್ಣು ಮಗುವಿನ ಲಂಗ ಹರಿದಿತ್ತು.. ಇನ್ನೊಂದು ಮಗು ಚಡ್ಡಿ- ಶರ್ಟು ಎರಡೂ ಹರಿದುಕೊಂಡಿತ್ತು. ಅಜ್ಜಿ ಪಕ್ಕದಲ್ಲೇ ಇದ್ದ ಅವಳ ಜೋಳಿಗೆಯಿಂದ ತಟ್ಟೆಗಳನ್ನು ಹೊರ ತೆಗೆದಳು. ಮಕ್ಕಳು ತಂದ ಅನ್ನವನ್ನು ಒಟ್ಟು ಸೇರಿಸಿ ತಟ್ಟೆಗಳಿಗೆ ಹಾಕಿ ಹಂಚಿದಳು. ತಾನೂ ತಿನ್ನತೊಡಗಿದಳು, ಪಕ್ಕದಲ್ಲಿದ್ದ ಜೋತು ಬಿದ್ದಿದ್ದ ಸಣ್ಣ ಮಗುವಿನ ಬಾಯಿಗೂ ತುತ್ತುಣ್ಣಿಸಿದಳು. ನನ್ನ ಹೊಟ್ಟೆಯನ್ನೊಮ್ಮೆ ಮುಟ್ಟಿ ನೋಡಿದೆ. ಈಗಷ್ಟೆ ತಿಂದ ಅನ್ನ ಕರಗಿ ಹೋದದಂತನಿಸಿತು. ಎದೆಯೊಳಗೆ ಉದಿಸಿದ ಹಸಿವಿನ ಭಯದ ಜ್ವಾಲೆ ಹೊತ್ತಿ ಉರಿಯಿತು. ಎರಡು ತೊಟ್ಟು ಕಣ್ಣೀರು ಸುರಿಸಿ ಅದನ್ನು ಆರಿಸಲು ಪ್ರಯತ್ನಪಟ್ಟೆ.

ಎಷ್ಟೋ ದಿನಗಳಿಂದ ಮುಚ್ಚಿದ್ದ ಪ್ರಪಂಚ ಬಾಗಿಲು ತೆರೆದಂತೆ, ಹಸಿವಿನ ಜೋಳಿಗೆಯ ಹೊಟ್ಟೆಗೆ ಸಮಾಧಾನದ ನಿಟ್ಟುಸಿರು. ನೀರಿನ ಭಾರದಿಂದ ಕಟ್ಟೆಯೊಡೆದ ಅಣೆಕಟ್ಟೆಯಂತೆ, ತಾಯಿ ಗರ್ಭದಿಂದ ಆಗ ತಾನೇ ಹೊರಬಂದ ಪ್ರಬುದ್ಧ ಮಗುವಿನಂತೆ ಅಮ್ಮಾ… ಎನ್ನುವ  ಒಂದು ಆರ್ತಸ್ವರ…..! ಹಸಿವಿನಿಂದ ಕೈಯಾಡಿಸುತ್ತಿದ್ದ ಮಗುವಿಗೆ ತಾಯಿ ಮೊಲೆ ಹಾಲುಣಿಸಿದ ಚಿತ್ರಣ….!. ಗೆಳತಿಯ ಮದುವೆ ಬದುಕಿನ ವ್ಯವಸ್ಥೆಗೊಂದು ಅಡಿಪಾಯ ನೀಡಿತು. ನಾನು ಯಾರು? ಈ ಜಗತ್ತಿನ ಸಂತೆಯಲಿ ಹೆಚ್ಚೆಂದರೆ ನಾನು… ಎಂಜಲೆಲೆಗೆ ಮುಗಿಬಿದ್ದ ಹಸಿವಿನ ಬಾಲಕ…..!

*******************

ಚಿತ್ರಕೃಪೆ: sydwalker.info

16 ಟಿಪ್ಪಣಿಗಳು Post a comment
  1. sunitha.a's avatar
    sunitha.a
    ಮೇ 26 2011

    ravi……………:((((((((((

    ಉತ್ತರ
  2. ನಿಮ್ಮ ಲೇಖನ ಓದುವಾಗ ನನ್ನ ಅಜ್ಜ ಮತ್ತು ತಂದೆ ಹೇಳುತ್ತಿದ್ದ ಘಟನೆಗಳು ನೆನಪಾದವು…… ಎರಡು ಮೂರು ದಶಕಗಳ ಮೊದಲು ದಕ್ಷಿಣ ಕನ್ನಡದ ಹಲವೆಡೆ ಇದೇ ಸ್ಥಿತಿ ಇತ್ತಂತೆ….. ಬಡವರು, ನಿರ್ಗತಿಕರು, ಊರಿನ ಶ್ರೀಮಂತರ ಮನೆಯ ಸಮಾರಂಭಗಳಿಗೆ ಮುಗಿ ಬೀಳುತ್ತಿದ್ದರಂತೆ….. ನನ್ನ ಮುತ್ತಜ್ಜನ ಉತ್ತರಕ್ರಿಯೆಯ ಮೊದಲ ಪಂಕ್ತಿ ಊಟ ಮುಗಿಸಿದವರು ಗೇಟಿನಿಂದ ಹೊರಬರುವ ಮೊದಲೆ ಊರ ಬಡವರು ಒಳಗೆ ನುಗ್ಗಲು ಗೇಟಿನ ಎದುರು ಕಾದು ಕುಳಿತಿದ್ದರಂತೆ….. ಒಳಗಿರುವವರು ಹೊರಬರಲೂ ಸಾಧ್ಯವಾಗದಷ್ಟು ನೂಕುನುಗ್ಗಲು, ಒಂದು ಹೊತ್ತಿನ ಊಟಕ್ಕಾಗಿ ! 😦 ಎಂಜಲೆಲೆ ಪಡೆಯಲು ಜಗಳಗಳೂ ನಡೆಯುತ್ತಿದ್ದವಂತೆ…. ಆದರೆ ಇಂದು ದಕ್ಷಿಣ ಕನ್ನಡದ ಬಹುತೇಕ ಭಾಗಗಳಲ್ಲಿ ಆ ದುಸ್ಥಿತಿ ಉಳಿದಿಲ್ಲ 🙂 ಪೇಟೆ ಪಟ್ಟಣಗಳಲ್ಲಿ ಇನ್ನೂ ಇದೇ ದುಸ್ಥಿತಿ !!!! ಒಂದು ಹೊತ್ತಿನ ಊಟಕ್ಕೆ ಚಡಪಡಿಸುವ ಸಾವಿರಾರು ಮಂದಿಯ ಸ್ಥಾನದಲ್ಲಿ ನಮ್ಮನ್ನು ನಾವು ಒಂದು ಕ್ಷಣ ಕಲ್ಪಿಸಿಕೊಂಡರೂ ಮೈ ಜುಮ್ ಎನ್ನುತ್ತದೆ…. ವಾಸ್ತವ ಬಹು ಕ್ರೂರ ಆಲ್ವಾ ?

    ಉತ್ತರ
    • Ravi Murnad,Cameroun's avatar
      Ravi Murnad,Cameroun
      ಮೇ 26 2011

      ನಿಮ್ಮ ವಾಸ್ತವ ಚಿತ್ರಣದ ಪ್ರತಿಕ್ರಿಯೆಗೆ ಧನ್ಯವಾದಗಳು ಮಾನ್ಯ ಅಕ್ಷಯ ರಾಮರೆ.ನನಗೆ ಹಸಿವಿನ ಜ್ವಾಲೆಯ ಭಯವಿತ್ತು.ಅದನ್ನು ಈ ಅನುಭವದ ನಂತರವೂ ಅನುಭವಿಸಿದ್ದೆ ಕೂಡ.ನನ್ನೊಂದಿಗೆ ಈ ಜಗತ್ತು ಇದೆ ಅನ್ನುವ ಭಯವನ್ನು ನೀವು ಹೋಗಲಾಡಿಸಿದ್ದಿರಿ.
      ಸುನೀತಕ್ಕನಿಗೂ ನನ್ನ ವಂದನೆಗಳು.

      ಉತ್ತರ
      • ರವಿ, ಹಸಿವಿನ ಭಯ ಅನ್ನೋದಕ್ಕಿಂತಲೂ “ಹಸಿವು ಅನ್ನೋ ಭಾವ” ಕಾಡುತ್ತಾ ಇರುತ್ತದೆ ಎಷ್ಟೋ ಸಲ……. ಅದೆಷ್ಟೋ ಬಾರಿ ಕಾರಣಾಂತರಗಳಿಂದ ಊಟ ಮಾಡದೇ ದಿನ ನೂಕಿದ್ದೇನೆ…. ಕೆಲವೊಮ್ಮೆ ಜೇಬಿನಲ್ಲಿ ಹಣವಿಲ್ಲದೆ, ಕೆಲವೊಮ್ಮೆ ಹಣವಿದ್ದರೂ ತಿನ್ನಲಾಗದೇ, ಮತ್ತೆ ಕೆಲವೊಮ್ಮೆ ಹಸಿವನ್ನು “ಅನುಭವಿಸಬೇಕು” ಎನ್ನುವ ಭಾವದಿಂದ, ಕೆಲವೊಮ್ಮೆ ಮುನಿಸಿನಿಂದ, ಹಲವು ರಾತ್ರಿ, ಹಲವು ಮಧ್ಯಾನ್ಹಗಳನ್ನು ಉಪವಾಸದಲ್ಲೇ ಕಳೆದಿದ್ದೇನೆ….. ಆದರೆ ಅದಷ್ಟೂ ಬಾರಿ “ಒಂದು ಹೊತ್ತಿನ ಊಟ ಮಾಡಲೂ ಶಕ್ಯರಲ್ಲದ ಕೋಟ್ಯಾಂತರ ಬಂಧುಗಳ” ಹಸಿವಿನ ನೋವನ್ನು, ಬೆಂಕಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ….
        ಚಿಕ್ಕಂದಿನಲ್ಲಿ ನಾನು ರಾತ್ರಿ ಊಟ ಮಾಡದೇ ಇದ್ದಾಗ, ಬಟ್ಟಲಿನಲ್ಲಿ ಅನ್ನ ಹಾಳು ಮಾಡಿದಾಗ ನನ್ನ ಅಪ್ಪ ಹೇಳಿದ್ದು ಇನ್ನೂ ನನ್ನ ಕಿವಿಯಲ್ಲಿ ಇದೆ…. “ಆ ಒಂದು ತುತ್ತು ಅನ್ನಕ್ಕೂ ಗತಿಯಿಲ್ಲದೆ ಉಪವಾಸ ಮಲಗಿರುವ ಕೋಟ್ಯಾಂತರ ಜನರಿದ್ದಾರೆ ಈ ಲೋಕದಲ್ಲಿ…. ನೀನು ಅನ್ನ ಹಾಳು ಮಾಡ್ತಾ ಇದ್ದೀಯಾ ?”
        ನನ್ನ ಬುದ್ದಿ ಬಲಿತಾಗಿನಿಂದ ತಿಳಿದೂ ತಿಳಿದೂ ಅನ್ನ ಹಾಳು ಮಾಡಲಿಲ್ಲ….. ಅನಿವಾರ್ಯ ಕಾರಣಗಳಿಂದಾಗಿ ಅನ್ನ ಚೆಲ್ಲಿದ್ದಿರಬಹುದು ಆದರೆ ಅನ್ನ ದೇವರ ವ್ಯರ್ಥ ದೂಷಣೆ ಮಾಡುವ ಮನ ಬರಲಿಲ್ಲ……. ನಿಮ್ಮ ಭಾವನೆಗಳಿಗೆ ನನ್ನ ನಮನಗಳು……. ಅದ್ಭುತ ಲೇಖನ……..

        ಉತ್ತರ
  3. Narendra Kumar.S.S's avatar
    Narendra Kumar.S.S
    ಮೇ 26 2011

    ಹಸಿದವರ ನೋವನ್ನು ಅರ್ಥ ಮಾಡಿಕೊಳ್ಳಲು ಉಪವಾಸ…..ಒಂದೆರಡು ಬಾರಿ ಉಪವಾಸ ಮಾಡಿದ ನಂತರ…..?
    ಅರ್ಥ ಮಾಡಿಕೊಂಡ ನಂತರ ಏನು?
    ಯಾವುದಾದರೂ “ಹಸಿದ ಮಕ್ಕಳ ಚಿತ್ರದ ಜಾಹಿರಾತು” ಹಾಕಿರುವ ಸಂಸ್ಥೆಗೆ ಸಹಾಯ ಮಾಡಿ ಧನ್ಯತಾಭಾವ ಪಡೆಯುವಿರಾ?
    ಅಥವಾ “ನೆಲೆ”ಯಂತಹ ಅಥವಾ “ಯೂತ್ ಫ಼ಾರ್ ಸೇವಾ”ದಂತಹ ಸಂಸ್ಥೆಗಳೊಡನೆ ಕೈಜೋಡಿಸಿ, ಹಸಿವನ್ನು ತೊಡೆದು ಹಾಕುವ ಕಾಯಕಕ್ಕೆ ಕೈಹಾಕುವಿರಾ?

    ಉತ್ತರ
    • Ravi Murnad,Cameroun's avatar
      Ravi Murnad,Cameroun
      ಮೇ 26 2011

      ನರೇಂದ್ರಣ್ಣ ,ಸ್ವಾನುಭವದ ಹಸಿವಿನ ಚಿತ್ರಣ ಇದು.ಸಂಸ್ಥೆಗೆ ಕೈಜೋಡಿಸುವ ಮಾತು ಬಂದಿಲ್ಲ ಇಲ್ಲಿ. ನಮ್ಮ ಅನುಭವಗಳನ್ನು ಪದಗಳಲ್ಲಿ ಸೆರೆಹಿಡಿಯೋದು ತಪ್ಪೇ? ಬೇರೆಯವರ ಹಸಿವನ್ನು ಬಣ್ಣ ಹಚ್ಚಿ ಬರೆಯೋದು ಮೇಲೋ ಅಥವಾ ಅವರ ಹಸಿವನ್ನು ತಾನೇ ಅನುಭವಿಸಿದಂತೆ ಬರೆಯೋದು ಮೇಲೋ ? ನಾನೇ ಹಸಿದಿದ್ದೆ.ಆ ಸಂದರ್ಭವನ್ನು ಇಲ್ಲಿ ಒಕ್ಕಣಿಸಲಿಲ್ಲ. ನೀವು ಸೂಚಿಸಿದ ಯಾವುದೇ ಸಂಸ್ಥೆ ಸಹಾಯಕ್ಕೆ ಬರಲಿಲ್ಲ.ಆ ಕಾರಣದ ಹಸಿವಿನಿಂದ ನಾನೇ ಇಲ್ಲವಾಗಿದ್ದರೆ ನಿಮಗೆ ನನ್ನ ಲೇಖನ ಸಿಗುತಲೂ ಇರಲಿಲ್ಲ.ನಾಡಿನ ಖ್ಯಾತರೋ , ಪ್ರಶಸ್ತಿ ವಿಜೇತರೋ ಇಂತಹ ಚಿತ್ರಣ ಬರೆದಿದ್ದರೆ ಚಪ್ಪಾಳೆಯ ಸುರಿಮಳೆ ಬಿಳುತ್ತಿತ್ತೇನೋ?

      ಉತ್ತರ
      • Narendra Kumar.S.S's avatar
        Narendra Kumar.S.S
        ಮೇ 26 2011

        ನೀವು ಬರೆದದ್ದು ತಪ್ಪೆಂದು ನಾನೇನೂ ಹೇಳುತ್ತಿಲ್ಲ.
        ಸ್ವಾನುಭವ ಬಹಳ ಮುಖ್ಯ.
        ಈ ರೀತಿಯ ಅನುಭವ ಪ್ರತಿಯೊಬ್ಬರಿಗೂ ಆಗುತ್ತದೆ, ಆಗಬೇಕು.
        ಹಾಗಾದಾಗಲೇ ವಸ್ತುಸ್ಥಿತಿಯ ಅರಿವಾಗುವುದು.
        ಆದರೆ, ಅದು ಅಲ್ಲಿಗೇ ನಿಂತರೆ ಆ ಅನುಭವದಿಂದ ಏನೂ ಉಪಯೋಗವಿಲ್ಲ.

        > ನೀವು ಸೂಚಿಸಿದ ಯಾವುದೇ ಸಂಸ್ಥೆ ಸಹಾಯಕ್ಕೆ ಬರಲಿಲ್ಲ
        ಹೌದು. ಕಾರಣ, ಆ ಸಂಸ್ಥೆಗಳ ಹಸ್ತ ಅಷ್ಟು ದೂರ ಇನ್ನೂ ಚಾಚಿಲ್ಲ.
        ಆ ರೀತಿ ಚಾಚುವಂತಾಗಲು ಅನುಭವ ಪಡೆದವರು ಕೈಜೋಡಿಸಬೇಕು.
        ಅದಾಗದಿದ್ದರೆ, ಆ ಸಂಸ್ಥೆಗಳೆಂದೂ ಹಸಿದವರೆಲ್ಲರನ್ನೂ ತಲುಪಲಾರದು, ಕಣ್ಣೀರು ಒರೆಸಲಾರರು.

        ಉತ್ತರ
    • ನರೇಂದ್ರ ಕುಮಾರ್ ಅವರೇ,
      ರವಿಯವರ ಲೇಖನ ಓದಿ ನಾನು ನನ್ನ ಅನುಭವ ಹಂಚಿಕೊಂಡೆ ಅಷ್ಟೇ ಹೊರತು ನಾನೊಬ್ಬ “ಬಡವರಿಗೋಸ್ಕರ ಉಪವಾಸ ಮಾಡಿದ ಮಹಾನುಭಾವ” ಎಂದು ಬಿಂಬಿಸುವ ಉದ್ದೇಶ ನನಗಿಲ್ಲ….. ಎರಡು ದಿನಗಳ ಉಪವಾಸ ಮಾಡಿ ಭಾಷಣ ಬಿಗಿಯೋದಕ್ಕೆ ನಾನೇನು “ಎಂ.ಕರುಣಾನಿಧಿ” ಅಲ್ಲ 🙂
      ಹಸಿವಿನ ಬೆಲೆ, ನೋವಿನ ಅರಿವು ನನಗಿದೆ ಎಂಬ ತೃಪ್ತಿ ಇದೆ ನನ್ನಲ್ಲಿ……. ನೀವು ಹೇಳಿದಂತೆ ಒಂದೆರಡು ದಿನಗಳ ಉಪವಾಸದಿಂದ ಬಂದ ಅನುಭವ ಅಲ್ಲ ಅದು…… ಜೀವನದ ಹರಿವು ಕಲಿಸಿದ ಪಾಠ ಅದು……
      “ಅರ್ಥ ಮಾಡಿಕೊಂಡ ನಂತರ ಏನು ?” ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ……
      ೧. ಅರ್ಥ ಮಾಡಿಕೊಂಡ ನಂತರ ಪ್ರತಿ ದಿನ ನಾನು ಹಾಳುಮಾಡುವ ಅನ್ನದ ಪ್ರಮಾಣ ಕಡಿಮೆಯಾಗಿದೆ, ಎಷ್ಟು ಬೇಕೋ ಅಷ್ಟೇ ಹಾಕಿಕೊಂಡು ಊಟ ಮಾಡುವುದು ನಮಗೂ ಒಳ್ಳೆಯದು ದೇಶಕ್ಕೂ ಒಳ್ಳೆಯದು ಅಲ್ಲವೇ ?
      ೨. ಇಂದಿಗೂ ನಮ್ಮ ಮನೆಯಲ್ಲಿ ಮಧ್ಯಾನ್ಹದ ಹೊತ್ತಿಗೆ ಹಸಿದು ಬಂದವರಿಗೆ (ಯಾರೇ ಆಗಿರಲಿ) ಬಾಳೆ ಎಲೆ ಹಾಕಿ ಊಟ ಬಡಿಸುವ ಪದ್ಧತಿ ಇದೆ….. ಪ್ರತಿ ದಿನ ಅಡುಗೆ ಮಾಡುವ ಮುನ್ನ ಒಂದು ಮುಷ್ಠಿ ಅಕ್ಕಿ ತೆಗೆದಿಟ್ಟು ತಿಂಗಳಿಗೊಮ್ಮೆ ಸೇರುವ ಅಕ್ಕಿಯನ್ನು (ಒಂದೋ ಎರಡೋ Kg) ಶ್ರೀ ರಾಮಚಂದ್ರಾಪುರ ಮಠದ “ಮುಷ್ಠಿ ಭಿಕ್ಷಾ” ಯೋಜನೆಗೆ ಕೊಡುತ್ತೇವೆ….. ಸಮಾಜದ ಹಲವು ಮನೆಗಳಲ್ಲಿ ಈ ರೀತಿ ಸಂಗ್ರಹವಾದ ಅಕ್ಕಿಯನ್ನು ಹಸಿದ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆ ಇದೆ…… ತಿಂಗಳಿಗೆ ಅದೆಷ್ಟೋ ಕ್ವಿಂಟಾಲ್ ಅಕ್ಕಿ ಬಡವರ ಓದಲು ಸೇರುತ್ತದೆ…….
      “ನೆಲೆ” ಅಥವಾ “ಯೂತ್ ಫಾರ್ ಸೇವಾ” ಇವೆರಡೇ ಅಲ್ವಲ್ಲಾ ಸಮಾಜ ಸೇವೆಗೆ ಇರುವ ದಾರಿಗಳು ??? ಪ್ರಚಾರದ ಹಂಗಿಲ್ಲದೆ ಸಮಾಜಕ್ಕೋಸ್ಕರ ದುಡಿಯುವ ಸಾವಿರಾರು ಸಂಘಟನೆಗಳಿವೆ ಆಲ್ವಾ ???
      ೩. “ಯಾವುದಾದರೂ “ಹಸಿದ ಮಕ್ಕಳ ಚಿತ್ರದ ಜಾಹಿರಾತು” ಹಾಕಿರುವ ಸಂಸ್ಥೆಗೆ ಸಹಾಯ ಮಾಡಿ ಧನ್ಯತಾಭಾವ ಪಡೆಯುವಿರಾ?” ಎಂಬ ನಿಮ್ಮ ಮಾತು ಒಳ್ಳೆಯದೇ, ಜಾಹೀರಾತು ಹಾಕಿ ಕಾಸು ಮಾಡುವ NGO ಗಳು ಅಣಬೆಗಳಂತೆ ಎದ್ದು ನಿಂತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ…. ವರ್ಷಕ್ಕೊಮ್ಮೆ ಅಥವಾ ಎರಡು ಮೂರು ಸಲ ಯಾವುದೊ NGO ಗಳಿಗೆ ಒಂದಷ್ಟು donation ಕೊಟ್ಟು ಸಮಾಜಕ್ಕೆ “ಏನೋ” ಕೊಟ್ಟಿದ್ದೇನೆ ಎಂಬ ಪೋಸ್ ಕೊಡುವವರಿಗೇನೂ ಕಡಿಮೆ ಇಲ್ಲ…… ಅಂಥವರ ಪಟ್ಟಿಗೆ ನನ್ನೊಬ್ಬನ ಹೆಸರು ಸೇರ್ಪಡೆ ಆದ ಕೂಡಲೇ ಲೋಕದ ಸಕಲ ಬಡಜನರ ಹಸಿವು ನೀಗೀತೇ ನರೇಂದ್ರ ಕುಮಾರ್ ಅವರೇ ???

      ಉತ್ತರ
      • Narendra Kumar.S.S's avatar
        Narendra Kumar.S.S
        ಮೇ 26 2011

        ಅಕ್ಷಯರಾಮ ಅವರೇ,
        ನೀವು ನಿಮ್ಮ ಅನುಭವದಿಂದ ಇಟ್ಟಿರುವ ಹೆಜ್ಜೆ ಮೆಚ್ಚತಕ್ಕದ್ದೇ.
        ಆ ರೀತಿಯ ಹೆಜ್ಜೆಗಳನ್ನಿಡದಿದ್ದರೆ, ಅನುಭವಕ್ಕೆ ಬೆಲೆಯೇ ಇಲ್ಲವೆನಿಸುತ್ತದೆ ಅಲ್ಲವೇ?
        ನಾವಿಡುವ ಹೆಜ್ಜೆಗಳು ನಿರಂತರವಾಗಬೇಕು. ಈ ರೀತಿಯ ಹೆಜ್ಜೆಗಳನ್ನಿಡುವವರು ಕೈಜೋಡಿಸಬೇಕು.
        ಹನಿಗಳು ಕೂಡಿದರೆ ಅಲ್ಲೊಂದು ಧಾರೆಯೋ ಅಥವಾ ತೊರೆಯೋ ಆಗುತ್ತದೆ ಅಲ್ಲವೇ?
        ನಾನು “ನೆಲೆ”, “ಯೂತ್ ಫ಼ಾರ್ ಸೇವಾ” ಎಂಬ ಉದಾಹರಣೆ ನೀಡಿದೆ ಅಷ್ಟೇ.
        ಆದರೆ, ಅವೆರಡೇ ಎಂದೇನೂ ಹೇಳಲಿಲ್ಲವಲ್ಲ. ಅಂತಹ, ನಮಗೆ ತಿಳಿಯದ ಅದೆಷ್ಟೋ ಸಂಸ್ಥೆಗಳು, ವ್ಯಕ್ತಿಗಳು
        ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವರು. ಯಾರೊಡನೆ ಸೇರಿದರೂ ತಪ್ಪಿಲ್ಲ.

        ಉತ್ತರ
        • ನರೇಂದ್ರಣ್ಣಾ…..
          ಪರಸ್ಪರ ದೋಷಾರೋಪ ಮಾಡುವ ಉದ್ದೇಶ ಇಟ್ಟುಕೊಂಡು ನಾನು ಬರೆಯಲಿಲ್ಲ…… ಯಾವುದೇ ಸಂಸ್ಥೆಯಾಗಲೀ ಹಲವರು ಕೈ ಜೋಡಿಸಿ ದುಡಿದಾಗ ಮಾತ್ರ ಸದುದ್ದೇಶ ಸಾಧನೆ ಆಗಲು ಸಾಧ್ಯ….. ಆದರೆ ಇಂಥಾ ಸಂಸ್ಥೆಗಳಿಗೆ ಸೇರುವ ಮುನ್ನ ನಮ್ಮೊಳಗೇ ನಾವು ಪರಿವರ್ತನೆ ಹೊಂದುವುದು ಮುಖ್ಯ ಅಲ್ಲವೇ ? ಅಂಥಹಾ ಪರಿವರ್ತನೆಯ ಭಾವ ಹೊರಹೊಮ್ಮಿದರೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಜನರ ಸಂಖ್ಯೆ ಹೆಚ್ಚಾಗುತ್ತದೆ…….
          ರವಿ ಅವರ ಲೇಖನದಲ್ಲಿ ಮೂಡಿದ ಆ ಭಾವಕ್ಕೆ ನನ್ನ ನಮನ…..

          ಉತ್ತರ
  4. P.Ramachandra, Ras Laffan- Qatar's avatar
    P.Ramachandra, Ras Laffan- Qatar
    ಮೇ 26 2011

    ನಾಡಿನ ಜೀವನದ ವಾಸ್ತವ ಚಿತ್ರಣದ ಮನ ಮಿಡಿಯುವ ಲೇಖನವನ್ನು ಜನತೆಯ ಮುಂದಿಟ್ಟ ಶ್ರೀ. ರವಿ.ಮೂರ್ನಾಡು ಅವರಿಗೆ ವಂದನೆಗಳು.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್

    ಉತ್ತರ
  5. Ravi Murnad,Cameroun's avatar
    Ravi Murnad,Cameroun
    ಮೇ 26 2011

    ನನ್ನ ಮನಸ್ಸಿನ ಧನಿ ಕೇಳಿಸಿತು.ನಾನು ಅನುಭವಿಸಿದ ಆ ದಿನದ ಹಸಿವಿನ ಕ್ಷಣಗಳು ಇಂದು ಮಾತಾಡಿದವು.ಇಂದಿಗೂ ಅಂತಹ ಕ್ಷಣಗಳನ್ನು ಅನುಭಸಿದವರು ಬರಬಹುದು. ಗೌರವಾನ್ವಿತ ಅಕ್ಷಯ ರಾಮರು ಮಾಡುತ್ತಿರುವ ಕಾರ್ಯದಂತೆ ಎಲ್ಲಾರೂ ಮಾಡಲಿ ಎಂದು ಪ್ರಾರ್ಥಿಸುತ್ತೇನೆ.ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಗೌರವಾನ್ವಿತ ನರೇಂದ್ರಣ್ಣ ,ಸದಾ ಎಲ್ಲರನ್ನೂ ಪ್ರೋತ್ಸಾಹಿಸುವ ನನ್ನ ಗೌರವಾನ್ವಿತ ರಾಮಚಂದ್ರರಿಗೆ ಹೃದಯ ತುಂಬಿದ ಅಭಿವಂದನೆಗಳು.

    ಉತ್ತರ
  6. basavaraj jakkali.'s avatar
    basavaraj jakkali.
    ಮೇ 27 2011

    sir,
    Ee sandarba , sannivesha maduve maadorige yavattu gottagodeilla.

    ಉತ್ತರ
  7. ಎಲ್.ಚಿನಪ್ಪ's avatar
    ಎಲ್.ಚಿನಪ್ಪ
    ಮೇ 27 2011

    ರವಿಯವರ ಲೇಖನ ಮನಕಲಕುವಂತಿದೆ.ಹಸಿವಿನ ರಾಕ್ಷಸನ ಅಬ್ಬರಕ್ಕೆ ತತ್ತರಿಸಿ ರೋದಿಸಿತ್ತಿರುವ ಕರುಣಾಜನಕ ಸ್ಟಿತಿಯನ್ನು ನಾವು ಅಲ್ಲಲ್ಲಿ ಕಾಣುತ್ತೇವೆ. ಏನಾದರೂ ಯಾವ ರೂಪದಲ್ಲಾದರೂ ಸಹಾಯ ಮಾಡುವಂತೆ ಆತ್ಮ ಪ್ರೇರಣೆಯಾದರೂ ಹಾಗೆ ಮಾಡದ ಹಾಗೆ ಸುಮ್ಮನಿದ್ದುಬಿಡುತ್ತೇವೆ. ಅನುಕಂಪಕ್ಕಿಂತ ಕಾರ್ಯರೂಪ ಮುಖ್ಯ. ಒಂದು ಧರ್ಮಗ್ರಂಥದ ವಾಕ್ಯ ಇಲ್ಲಿ ತುಂಬಾ ಪ್ರಸ್ತುತವೆನಿಸುತ್ತದೆ. “ನಾನು ಮಾಡುವುದು ನನಗೇ ಅರ್ಥವಾಗುತ್ತಿಲ್ಲ, ಏನನ್ನು ಮಾಡಲು ಅಪೇಕ್ಷಿಸುತ್ತೇನೊ ಅದನ್ನು ಮಾಡುತ್ತಿಲ್ಲ, ಏನನ್ನು ದ್ವೇಷಿಸುತ್ತೇನೊ ಅದನ್ನೇ ಮಾಡುತ್ತೇನೆ” ಇದು ನಮ್ಮ ಬಲಹೀನತೆಯೂ ಹೌದು! ರವಿಯವರ ಮನಃಸ್ಪರ್ಷಿಸುವ ಲೇಖನಕ್ಕೆ ನನ್ನ ಧನ್ಯವಾದಗಳು.

    ಉತ್ತರ
  8. ರವಿಯವರಿಗೆ ಆದಂತಹ ಅನುಭವ ನನಗೂ ಹಲವು ಬಾರಿ ಆಗಿದೆ. ತೀರಾ ಇತ್ತೀಚಿಗೆ ನನ್ನ ಸಂಬಂಧಿಕರೊಬ್ಬರ ನ್ಮದುವೆಗೆ ತುಮಕೂರಿಗೆ ಹೋಗಿದ್ದೆ. ಅಲ್ಲಿ ಮದುವೆ ಮಂಟಪದ ಮುಂದೆ ಹಿಡಿ ಅನ್ನಕ್ಕಾಗಿ ಕಾದು ನಿಂತಿದ್ದ ಹತ್ತಾರು ಕೈಗಳ ಚಿತ್ರ
    ಈಗಲೂ ನನ್ನ ಕಣ್ಣ ಮುಂದಿದೆ. ಹಂಚಲು ಬಂದ ವ್ಯಕ್ತಿಯತ್ತ ಮುಗಿಬಿದ್ದ ಹಸಿದ ಮಕ್ಕಳನ್ನು ಹತೋಟಿಗೆ ತರಲು ಆತ ಹರಸಾಹಸ ಮಾಡಬೇಕಾಯ್ತು. ಇಲ್ಲಿ ತುತ್ತು ಅನ್ನಕ್ಕಾಗಿ ಹಾತೊರೆಯುವ ಜೀವಗಳು…ಅಲ್ಲಿ ತಮ್ಮ ಶ್ರೀಮಂತಿಕೆಯ ಪ್ರದರ್ಶನಕ್ಕಾಗಿ ವೈಭವೋಪೇತ ವಿವಾಹಗಳನ್ನು ಏರ್ಪಡಿಸುವ ಜನ…….ವಿಧಿ ವಿಪರೀತ ಎಂದರೆ ಇದೇನಾ!!!!!!!???

    ಉತ್ತರ
  9. Vijay's avatar
    Vijay
    ಮಾರ್ಚ್ 31 2013

    Aren’t we Indians not responsible to tolerate this, can not fight against it, but just write about it. ( I am not saying writing is wrong, I do appreciate the article.)

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments