ವಿಷಯದ ವಿವರಗಳಿಗೆ ದಾಟಿರಿ

ಮೇ 31, 2011

5

ಚಿತ್ರದುರ್ಗ: ಒಂದು ಅಪರೂಪ ಐತಿಹಾಸಿಕ ತಾಣ.

‍ನಿಲುಮೆ ಮೂಲಕ

–    ಆರ್.ರಾಘವೇಂದ್ರ, ಚಳ್ಳಕೆರೆ

ಇತಿಹಾಸ ಪ್ರಸಿದ್ಧ ಚಿತ್ರದುರ್ಗ ಜಿಲ್ಲೆಯು ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಮತ್ತು ಹೊಳಲ್ಕೆರೆ ಎಂಬ ಆರು ತಾಲ್ಲೂಕು ಕೇಂದ್ರಗಳನ್ನೊಳಗೊಂಡಂತೆ ೧೮೫ ಗ್ರಾಮ ಪಂಚಾಯಿತಿ ಕೇಂದ್ರಗಳಿಂದ ಕೂಡಿರುತ್ತದೆ. ಚಿತ್ರದುರ್ಗ ಜಿಲ್ಲೆಯು ೮೩೮೮ ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಒಟ್ಟು ೧೫,೧೦,೨೨೭ ಜನಸಂಖ್ಯೆ ಇರುತ್ತದೆ.

ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ, ಚಿತ್ರದುರ್ಗ ತಾಲ್ಲೂಕು ಸಾಪೇಕ್ಷಿತವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕಿನ ಗುಂಪಿನಲ್ಲಿದ್ದರೆ, ಚಳ್ಳಕೆರೆ, ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ ಅತಿ ಹಿಂದುಳಿದ ತಾಲ್ಲೂಕುಗಳ ಗುಂಪಿನಲ್ಲಿವೆ ಹಾಗೂ ಮೊಳಕಾಲ್ಮೂರು ತಾಲ್ಲೂಕು ಅತ್ಯಂತ ಹಿಂದುಳಿದ ತಾಲ್ಲೂಕಿನ ಗುಂಪಿನಲ್ಲಿದೆ. ಆದರೆ ರಾಜ್ಯದ ಹಿಂದುಳಿದ ಪ್ರದೇಶವಾಗಿದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. ಅದು ಹೇಗೆಂದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕ್ಷರತೆ ಪ್ರಮಾಣ, ಮಕ್ಕಳು-ಉಪಾಧ್ಯಾಯರ ಅನುಪಾತ, ೬-೧೪ ವಯೋಮಾನದಲ್ಲಿ ಶಾಲೆ ಸೇರದ ಮಕ್ಕಳ ಪ್ರಮಾಣ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇವುಗಳ ಮೇಲೆ ನಾವು ಜಿಲ್ಲೆಯ ಶೈಕ್ಷಣಿಕ ಪ್ರಗತಿಯನ್ನು ಕಾಣಬಹುದು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶವೆಂದು ಮೊಳಕಾಲ್ಮೂರು ತಾಲ್ಲೂಕು ಒಂದೇ. ಚಿತ್ರದುರ್ಗವು ತಾಮ್ರದ ಖನಿಜ ಸಂಪತ್ರವನ್ನು ಇಂಗಳದಾಳ್‌ನಲ್ಲಿ ಒಳಗೊಂಡಿದೆ.

ಸಾಹಿತ್ಯ ಕ್ಷೇತ್ರದ ಮೇರುವ್ಯಕ್ತಿಯಾದ ರಸಕವಿ ‘ಕುವೆಂಪು’ರವರನ್ನೇ ಶಿಷ್ಯರಾಗಿ ಪಡೆದಂತಹ ಕೀರ್ತಿ ಟಿ.ಎಸ್.ವೆಂಕಣ್ಣಯ್ಯರವರದು. ತಳಕಿನ ಕುಟುಂಬದ ತ.ಸು.ಶಾಮರಾಯರು, ತ.ರಾ.ಸು., ಅಂಬುಜಾ ತ.ರಾ.ಸು., ರವರು ಸೇರಿದಂತೆ, ಬೆಳಗೆರೆ ಮನತೆನದ ಬೆಳಗೆರೆ ಚಂದ್ರಶೇಖರಶಾಸ್ತ್ರಿ, ಬೆಳಗೆರೆ ಕೃಷ್ಣಶಾಸ್ತ್ರಿ, ಬೆಳಗೆರೆ ಜಾನಕಮ್ಮ ಮುಂತಾದ ಸಾಹಿತ್ಯ ಗಣಿಗಳು ಚಿತ್ರದುರ್ಗದ ಸಾಹಿತ್ಯವನ್ನು ಅಮರವಾಗಿಸಿದ್ದಾರೆ. ತ.ರಾ.ಸು. ರವರ ದುರ್ಗಾಸ್ತಮಾನ, ನಾಗರಹಾವು ಹಾಗೂ ಇತರೆ ಕೃತಿಗಳು ವಿಶ್ವಕ್ಕೆ ಚಿತ್ರದುರ್ಗದ ಪರಿಚಯವನ್ನು ಬಹುಸುಂದರವಾಗಿ ಮಾಡಿಕೊಟ್ಟಿದೆ. ‘ಬಿ.ಎಲ್.ವೇಣು’ ರವರ ‘ಕಲ್ಲರಳಿ ಹೂವಾಗಿ’ ಚಲನಚಿತ್ರವು ರಾಷ್ಟ್ರಮಟ್ಟದಲ್ಲಿ ಪ್ರಶಂಸೆ ಪಡೆದಿದ್ದು, ಖ್ಯಾತ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರು, ಪ್ರೋ. ಲಕ್ಷ್ಮಣ ತೆಲಗಾವಿ, ಪ್ರೋ. ಬಿ.ರಾಜಶೇಖರಪ್ಪ, ಜಾನಪದ ತಜ್ಞರಾದ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಮಲ್ಲಿಕಾರ್ಜುನ ಕಲಮರಹಳ್ಳಿ, ನೇಮಿಚಂದ್ರ, ಮುಂತಾದವರು ಸೇರಿದಂತೆ ಅನೇಕ ಸಾಹಿತ್ಯ ಕಣ್ಮಣಿಗಳನ್ನೊಳಗೊಂಡಿದ್ದು, ದುರ್ಗವು ಸಾಹಿತ್ಯದ ಗಣಿಯಾಗಿದೆ.

ಇತಿಹಾಸದಲ್ಲಿ ಚಿತ್ರದುರ್ಗ ಪಾಳೆಯಗಾರರ ಪಾತ್ರ ಇಡೀ ವಿಶ್ವಕ್ಕೆ ತಿಳಿದ ವಿಷಯವಾಗಿದೆ. ಒನಕೆ ಓಬವ್ವಳ ಸಾಹಸಗಾಥೆ ದುರ್ಗದ ವೀರತೆಯನ್ನು ಸಾರುತ್ತದೆ. ಚಿತ್ರದುರ್ಗದ ಪಾಳೆಯಗಾರರು ಅಷ್ಟೇ ಅಲ್ಲದೇ, ದುರ್ಗವನ್ನು ಮತ್ತೋಡು ಪಾಳೆಯಗಾರರು, ಹರತಿ ಪಾಳೆಯಗಾರರು, ಹಟ್ಟಿ ಪಾಳೆಯಗಾರರು ಸೇರಿದಂತೆ ಅನೇಕರು ಚಿತ್ರದುರ್ಗವನ್ನು ಆಳಿದ್ದಾರೆ. ಚಂದ್ರವಳ್ಳಿಯು ಇತಿಹಾಸ ಕೇಂದ್ರವಾಗಿದ್ದು, ಭೂಸಂಶೋಧನೆಯಲ್ಲಿ ತನ್ನ ಮಹತ್ತರ ಪಾತ್ರವನ್ನು ನಿರ್ವಹಿಸಿದೆ. ಚಿತ್ರದುರ್ಗದ ಕೋಟೆ, ಚಂದ್ರವಳ್ಳಿ, ಇತಿಹಾಸ ಕೇಂದ್ರಗಳಾಗಿದ್ದರೂ, ಪ್ರೇಕ್ಷಣೀಯ ಸ್ಥಳಗಳಾಗಿ ರಸಿಕರ ಮನ ಸೆಳೆದಿವೆ. ವಾಣಿವಿಲಾಸಸಾಗರ ಅಣೆಕಟ್ಟು, ಜೋಗಿಮಟ್ಟಿ ಗಿರಿಧಾಮ, ನಾಯಕನಹಟ್ಟಿ ಕ್ಷೇತ್ರ, ಹಾಲುರಾಮೇಶ್ವರ ಕ್ಷೇತ್ರ, ರಾಜ್ಯದ ಏಕೈಕ ಕೂರ್ಮಾವತಾರ ಗವಿರಂಗನಾಥಪುರ ಕ್ಷೇತ್ರ ಮುಂತಾದಂತೆ ಅನೇಕ ತಾಣಗಳು ಜಿಲ್ಲೆಯ ಆಕರ್ಷಕ ಪ್ರವಾಸಿ ತಾಣಗಳಾಗಿವೆ.

ಸ್ವಾತಂತ್ಯ ಹೋರಾಟದ ಚಳುವಳಿಯಲ್ಲಿ ಚಿತ್ರದುರ್ಗವೂ ಸಹ ಮಹತ್ವದ ಪಾತ್ರ ವಹಿಸಿದ್ದು, ಮಹಾತ್ಮ ಗಾಂಧಿಯವರು ಜಿಲ್ಲೆಯ ತುರುವನೂರಿಗೆ ಭೇಟಿ ನೀಡಿದ್ದು ಈಗ ಇತಿಹಾಸ. ರಾಷ್ಟ್ರನಾಯಕರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ‘ಎಸ್.ನಿಜಲಿಂಗಪ್ಪ’ ರವರು ರಾಜ್ಯದಲ್ಲಿ ಗಮನಸೆಳೆದ ತುರುವನೂರಿನ ‘ಈಚಲಮರದ ಸತ್ಯಾಗ್ರಹ’ದಿಂದ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಅವರಂತೆ ಅನೇಕ ಗಣ್ಯರು ಸ್ವಾತಂತ್ರ ಹೋರಾಟದ ಸಮಯದಲ್ಲಿ ತಮ್ಮ ದೇಶಾಭಿಮಾನದ ಕೊಡುಗೆಯನ್ನು ನೀಡಿದ್ದಾರೆ.

ಚಿತ್ರದುರ್ಗದ ಎಂದರೆ ಗಂಡುಗಲಿಗಳ ನಾಡು ಎಂದು ಎಲ್ಲರೂ ಹೇಳುವುದು ಸರ್ವೆಸಾಮಾನ್ಯ. ನಿಜ, ಏಕೆಂದರೆ ಚಿತ್ರದುರ್ಗವೆಂಬ ಬಂಡೆಗಳ ನಾಡು ಸಾಹಸಿಗಳ ಗಮನ ಸೆಳೆದು, ಗಂಡುಗಲಿಗಳ ಬೀಡಾಗಿರುವುದು ನಿಜ. ಅಷ್ಟೇ ಏಕೆ, ದುರ್ಗದ ಒಡಲಿನ ಹೆಣ್ಣು ಸಹ ಕಚ್ಚೆಹಾಕಿ ನಿಂತರೆ, ರಣಚಂಡಿಗೆ ಸರಿಸಾಟಿಯೆಂಬುದಕ್ಕೆ ‘ಒನಕೆ ಓಬವ್ವ’ಳೇ ಸಾಕ್ಷಿ. ಇಂತಹ ದುರ್ಗದಲ್ಲಿ ‘ಯುನೆಸ್ಕೋ ಕ್ಲಬ್’ ಎಂಬ ಸಂಸ್ಥೆಯು ಸಾಹಸ ಚಟುವಟಿಕೆಗಳನ್ನು ಪರಿಚಯಿಸುತ್ತಾ ೧೯೯೬ರಲ್ಲಿ ‘ರಾಜ್ಯಮಟ್ಟದ ಪರಿಸರ ಮತ್ತು ಸಾಹಸ ಸಮ್ಮೇಳನ’ ಏರ್ಪಡಿಸಿ ರಾಜ್ಯದ ಮನೆಮಾತಾಯಿತು. ಧನಾತ್ಮಕ ಚಿಂತನೆಗಳಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಹಸ ಕ್ರೀಡೆಗಳಿಗೆ, ಉನ್ನತ ವಿದ್ಯಾಭ್ಯಾಸಕ್ಕೆ, ಸಂಶೋಧನೆಗೆ, ಪತ್ರಿಕಾ ರಂಗ, ಟಿ.ವಿ, ನಾಟಕ, ಸಿನೆಮಾ, ವಿದೇಶ ಯಾತ್ರೆಗೆ ಈ ಸಂಸ್ಥೆಯ ಸದಸ್ಯರು ರಾಷ್ಟ್ರಮಟ್ಟದಲ್ಲಿಯೇ ಹೆಸರು ಗಳಿಸಿದ್ದಾರೆ. ವ್ಯಕ್ತಿತ್ವ ವಿಕಾಸ ಮತ್ತು ಮನೋಸಾರ್ಮಥ್ಯ ವೃದ್ಧಿಗೊಳಿಸುವಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ೧೧-೦೦ ಗಂಟೆಯಿಂದ ೧-೩೦ರವರೆಗೆ ಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಉಪನ್ಯಾಸ ನೀಡುತ್ತಾ, ದುರ್ಗದ ಕಲ್ಲುಗಳಂತ ಧೀಮಂತರನ್ನು ಸೃಷ್ಟಿಸುತ್ತಿದೆ.

ಅಷ್ಟೇ ಅಲ್ಲದೇ ಕಲೆ ಹಾಗೂ ಸಂಸ್ಕೃತಿಯ ವಿಚಾರದಲ್ಲೂ ಸಹ ಚಿತ್ರದುರ್ಗವು ತನ್ನ ಛಾಪನ್ನು ಮೂಡಿಸಿದೆ. ೧೯೮೬ರ ಜನವರಿಯಂದು ಚಳ್ಳಕೆರೆಯಲ್ಲಿ ‘ನೃತ್ಯ ನಿಕೇತನ’ ಎಂಬ ಸಾಂಸ್ಕೃತಿಕ ಶಿಕ್ಷಣ ಕೇಂದ್ರವು ರಚನೆಯಾಗಿ, ಇಲ್ಲಿಯವರೆಗೂ ಅನೇಕಾನೇಕ ಪ್ರತಿಭಾನ್ವಿತ ಭರತನಾಟ್ಯ ನರ್ತಕರನ್ನು ಸೃಷ್ಟಿ ಮಾಡಿ ಕೀರ್ತಿ ಇದರದ್ದಾಗಿದೆ. ಶ್ರೀಮತಿ ಸುಧಾಮೂರ್ತಿ ಮತ್ತು ವಿಷ್ಣುಮೂರ್ತಿಯವರು ಇದರ ರೂವರಿಗಳಾಗಿದ್ದು, ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮೂರು, ಪರಶುರಾಂಪುರ ಸೇರಿದಂತೆ ಅನೇಕ ಕಡೆ ತಮ್ಮ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ ಜಿಲ್ಲೆಯಲ್ಲಿ ಭರತನಾಟ್ಯ ಕಲೆಯ ಪರಿಚಯಿಸಿ, ಬೆಳೆಸಿದವರಾಗಿರುತ್ತಾರೆ.

ಮಾಹಿತಿ ತಂತ್ರಜ್ಞಾನದಲ್ಲೂ ಸಹ ಚಿತ್ರದುರ್ಗವು ತನ್ನ ಪಾತ್ರ ನಿರ್ವಹಿಸಿದೆ. ಜಿಲ್ಲೆಯ ಇತಿಹಾಸ, ಪ್ರೇಕ್ಷಣೀಯ ಸ್ಥಳಗಳು, ಸಾಹಿತ್ಯ, ಪ್ರಾತಃಸ್ಮರಣೀಯರು ಮುಂತಾದ ವಿಶೇಷತೆಗಳ ಬೆಳಕು ಚೆಲ್ಲಲು “ಚಿತ್ತಾರದುರ್ಗ.ಕಾಂ (ತಿತಿತಿ.ಛಿhiಣhಚಿಡಿಚಿಜuಡಿgಚಿ.ಛಿom)” ಎಂಬ ಪ್ರಪ್ರಥಮ ಕನ್ನಡ ವೆಬ್‌ಸೈಟ್ ಮಾಹಿತಿ ನೀಡುವಲ್ಲಿ ಸಫಲತೆ ಹೊಂದಿದೆ. ಅಲ್ಲದೇ ಕನ್ನಡೇತರರಿಗೆ ಮಾಹಿತಿ ತಲುಪಿಸುವಲ್ಲಿ “ವಿಸಿಟ್ ಚಿತ್ರದುರ್ಗ.ಕಾಂ ” ಎಂಬ ವೆಬ್‌ಸೈಟ್ ಸಹಕಾರಿಯಾಗಿದೆ.  ಚಿತ್ರದುರ್ಗದಲ್ಲಿನ ಅನೇಕ ಬುದ್ದಿಜೀವಿಗಳಿಂದ ಅನೇಕ ಬ್ಲಾಗ್‌ಗಳು ಹೊರಬಂದಿದ್ದು, http://bedrefoundation.blogspot.com, http://bedrebaraha.blogspot. com, http://unescoclubchitradurga.blogspot.com, http://chitharaarticls.blogspot. com, http://vkchitradurga.blogspot.com, http://chitradurgapolice.blogspot.com, http://banadhoogalu.blogspot.com, http://nannedepreethi.blogspot.com, http:// durgasahityasammelana.blogspot.com ಇವುಗಳು ಪ್ರಮುಖವಾಗಿವೆ. ಚಿತ್ರದುರ್ಗದ ಬಗ್ಗೆ ತಿಳಿಯಲು ಸಾಕಷ್ಟು ಮಾಹಿತಯನ್ನು ಕಂಪ್ಯೂಟರ್ ಪರದೆಯ ಮೇಲೆ ಹಿಡಿದು ಕೂರಿಸುತ್ತದೆ.

****************

indianetzone.com

 

5 ಟಿಪ್ಪಣಿಗಳು Post a comment
  1. ಈ ವೆಬ್ ತಾಣದ ವಿಳಾಸ…

    http://www.chitharadurga.com

    ಉತ್ತರ
  2. ಚಿತ್ರದುರ್ಗದ ಇತಿಹಾಸವನ್ನು ಚೆನ್ನಾಗಿ ವಿವರಿಸಿ ಕೊಟ್ಟ ರಾಘವೇಂದ್ರ ರವರಿಗೆ ಧನ್ಯವಾದಗಳು.

    ಸಂಪಾದಕರು,

    ವಿಶ್ವ ಕನ್ನಡಿಗ ನ್ಯೂಸ್.

    ಉತ್ತರ
  3. prashasti.p's avatar
    ನವೆಂ 30 2011

    ತುಂಬಾ ಚೆನ್ನಾಗಿದೆ ರಾಘವೇಂದ್ರ ರೇ 🙂 ನಾನು ನನ್ನ ಬ್ಲಾಗಲ್ಲಿ ಚಿತ್ರದುರ್ಗದ ಬಗ್ಗೆ ಲೇಖನವೊಂದನ್ನು ಬರೆದಾಗ ನನ್ನ ಮಿಂಚೆಗೆ ಚಿತ್ತಾರದುರ್ಗದ ಮಿಂಬಲೆಯ ಬಗ್ಗೆ ಒಂದು ಮಿಂಚೆ ಬಂದಿತ್ತು .. ಹೇಗೆಂದು ಇಲ್ಲಿಯವರೆಗೂ ಅರ್ಥವಾಗಿರಲಿಲ್ಲ.. ಈಗ ಸ್ವಲ್ಪ ಅರ್ಥವಾಯಿತು 🙂 ಒಳ್ಳೆಯ ಮಾಹಿತಿಗೆ ಮತ್ತೊಮ್ಮೆ ಅಭಿನಂದನೆಗಳು 🙂

    ಉತ್ತರ
  4. S L Shashidhar's avatar
    S L Shashidhar
    ಸೆಪ್ಟೆಂ 27 2013

    need for more information durgas history by hydarali v/s madhakari war

    ಉತ್ತರ
  5. veeresh's avatar
    veeresh
    ಆಕ್ಟೋ 29 2014

    Very gud article …sir..

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments