ದೆವ್ವದ ಹರಕೆ!!
– ನಾಗರಾಜ್ ಮೌಳಿ
ನಿಮಗೆ ಗೊತ್ತಿದೆ ಎಷ್ಟೊಂದು ದೆವ್ವ ಭೂತ, ಪಿಚಾಚಿಗಳು, ಹಾಗೆ ಅದು ಇದು ಅಂತ ಮೂವೀಸ್ ಬಂದಿದಾವೆ, ಕಥೆಗಳು , ಕಾದಂಬರಿಗಳು, ಹಾಗೆ ಅಲ್ಲಿ ಇಲ್ಲಿ ಕೇಳಿದ್ದು ಎಲ್ಲ ನಮ್ಮ ಕಿವಿಗೂ ಬೀಳ್ತಾ ಇರ್ತವೆ. ಅದರಲ್ಲಿ ಕೆಲವೊಂದು ನಿಮಗಾಗಿ ಇಲ್ಲಿ ಬರೀತಿನಿ…..ಅದಕ್ಕೂ ಮುಂಚೆ ನಮ್ಮೂರಲ್ಲಿ ದೆವ್ವ, ದೈವ, ದಯ್ಯ ಹೀಗೆಲ್ಲಾ ಕರಿತಾರೆ ನಿಮಗೆ ಯಾವತರ ಅನ್ಸುತ್ತೋ ಹಾಗೆ ಓದಿ..
ಮೊನ್ನೆ ಟಿವಿ 9 ಲಿ ತೋರಿಸ್ತಾ ಇದ್ರು ಬೆಂಗಳೂರಲ್ಲಿ ಒಂದು 8 ಮಹಡಿ ಬಿಲ್ಡಿಂಗ್ ಇದ್ಯಂತೆ ಅಲ್ಲಿ ಯಾರು ಹೋಗೋಕೆ ಅಗಲ್ವಂತೆ, ಅದು ಏನು ಅಂತ ನೋಡೋಕೆ ಟಿವಿ 9 ತಂಡ ಹೋದಾಗ ಭಯಾನಕ ಅನುಭವ ಆಯಿತಂತೆ, ಅದನ್ನು ತೋರಿಸ್ತಿದ್ರು ಅದು ರಾತ್ರಿ ಕಣ್ರೀ ಸ್ವಲ್ಪ ಭಯನೆ ಆಯಿತು ನನಗೂ.. ಏನ್ ಕೇಳ್ತೀರಾ ಆಟೋಮೇಟಿಕ್ ಆಗಿ ಮಾಮೂಲಿ ಬಾಗಿಲು ತೆಗೆದುಕೊಳ್ಳುತ್ತೆ, ನಿಮ್ಮ ಹತ್ತಿರದಲ್ಲೇ ನೆರಳುಗಳು ಒಡಿಯಾಡ್ತವೆ, 1ನೇ ಮಹಡಿಗೆ ಹೋದ್ರೆ 4ನೇ ಮಹಡಿಲಿ, ಹಾಗೆ 4ನೇ ದಕ್ಕೆ ಹೋದರೆ 1ನೆದರಲ್ಲಿ ಯಾರೋ ಭಯಾನಕವಾಗಿ ಅಳುತ್ತಿರುವ ಶಭ್ದ, ಮೆಟ್ಟಿಲುಗಳಿಂದ ಯಾರೋ ಇಳಿದುಕೊಂಡು ಹೋಗ್ತಾ ಇರೋ ಸದ್ದು ಕೇಳಿಸುತ್ತೆ ಅಬ್ಬಾ ನೋಡಿ ಸ್ವಲ್ಪ ನೀರಾದೆ….
ಮತ್ತೆ ಒಂದು ಮನೆ ಇದೆ ನಮ್ಮ ಊರಲ್ಲಿ ಆ ಮನೆಯ ಯಜಮಾನ್ರು ನಮ್ಮ ಅಪ್ಪನ ಹತ್ರ ನಾವು ಚಿಕ್ಕವರಿದ್ದಾಗ ಬಂದು ಹೇಳ್ತಿದ್ರು, ಅವ್ರ ಮನೇಲಿ ಮರದ ತೊಲೆಗಳ ಮೇಲೆ ಯಾರೋ ಕಂಟಿನಿಯಸ್ ಆಗಿ ಗುದ್ದಿದ ಶಭ್ದ ಕೇಳುತ್ತಿತಂತೆ, ಹಾಗೆ ರಾತ್ರಿ ಒಬ್ಬ ಎತ್ತರದ ಮನುಷ್ಯ ದೀಪ ಹಿಡಿದುಕೊಂಡು ಹಾರಿ ಹೋಗ್ತಾ ಇದ್ದಹಾಗೆ, ಗೇಟಿನಬಳಿ ಯಾವುದೋ ಬಿಳಿ ಸೀರೆಯ ಹೆಂಗಸು ನಿಂತು ಅಳುತ್ತಿರುವ ಹಾಗೆ ಕಾಣಿಸ್ತಿತ್ತಂತೆ,
ಮನೇಲಿ ಮಲಗಿದ್ರೆ ಮೈತುಂಬಾ ಯಾವುದೋ ಒಂದು ಹಾವು ಹರಿದಾಡಿದ ಅನುಭವ ಆಗಿ ಶಾಂತಿ ಮಾಡಿಸಿದ್ದನ್ನ ನೋಡಿದೀನಿ, ಮನೇಲಿ ನೀರು ಅದಾಗಿ ಅದೇ 5 ನಿಮಿಷದಲ್ಲಿ ಕೆಂಪು ಬಣ್ಣಕ್ಕೆ ತಿರುಗೋದು, ಏನು ಅಡಿಗೆ ಮಾಡಿದ್ರೂ, ಉಪ್ಪು ಹಾಕದೇ ಇದ್ರು, ತಿಂದಾಗ ಅತಿಯಾಗಿ ಉಪ್ಪಾಗಿ ಊಟಾನೇ ಬಿಟ್ಟು ಏಳಬೇಕು ಹಾಗೆ ಆಗ್ತಿತ್ತು ಅಂತ ಹೇಳ್ತೀದ್ರು, ಅದನ್ನ ನೋಡೋಕೆ ನಮ್ಮ ಕೆಲವು ಗುರುತು ಪರಿಚಯ ಇರೋರು ಹೋಗಿದ್ರೂ ನಾವು ಬಿಡಿ ತುಂಬಾ ದೈರ್ಯವಂತರು ಹಾಗಾಗಿ ಅಂತ ಸಾಹಸ ಮಾಡಲಿಲ್ಲ.
ಇನ್ನೂ ನಮ್ಮೂರ ಒಬ್ಬರು ಆಟೋ ರಿಕ್ಷಾ ಓಡಿಸ್ತಾರೆ ಅವ್ರು ರಾತ್ರಿ ಬರಬೇಕಾದ್ರೆ ಒಂದು ಅಜ್ಜಿ ಡ್ರಾಪ್ ಕೇಳಿದ್ಳಂತೆ ಕೂರಿಸಿಕೊಂಡು ಬಂದು ಸ್ವಲ್ಪ ದೂರದ ನಂತರ ಹಿಂತಿರುಗಿ ನೋಡಿದ್ರೆ ಅವಳಿಲ್ಲ!! ಹೆದರಿದ ಆಟೋ ಡ್ರೈವರ್ ಕೃಷ್ಣಪ್ಪ 7 ದಿನ ಜ್ವರದಿಂದ ಹಾಸಿಗೆ ಹಿಡಿದು, ವಿಜೇಂದ್ರ ಡಾಕ್ಟರ್ ಓವರ್ ಡೋಸೇಜ್ ಮಾತ್ರೆ ಕೊಟ್ಟಮೇಲೆ ಸರಿಯಾಗಿದ್ದು.
ಇನ್ನೂ ಒಂದು ಕಡೆ ಅಂತೂ, ದೆವ್ವ ದಿನಾ ಮನೆಮೇಲೆ ಕಲ್ಲು ಎಸಿತಾ ಇತ್ತಂತೆ, ಮತ್ತೆ ಇನ್ನೊಬ್ಬ ಇದಾನೆ ಅವ್ನಿಗೆ ದೆವ್ವ ಬಂದು ಮೈಯೆಲ್ಲಾ ಬ್ಲೇಡ್ ಇಂದ ಕುಯ್ಯಿದಂತಾ ಗಾಯಗಳು, ಮತ್ತೆ ನಮ್ಮೂರಿನ ಅನುಭವಕ್ಕೆ ಬಂದ್ರೆ ಅಲ್ಲಿ ಯವದಾರು ಜಾನುವಾರು ಕಾಡಲ್ಲೆ ಸತ್ತು ಹೋದ್ರೆ , ಕಾಣೆಯಾದ್ರೆ ಅದನ್ನ ರಣ ಹೊಡೆದಿದೆ ಅನ್ನುವ ಕನ್ಫರ್ಮ್ ಉತ್ತರ ಸಿಗುತ್ತೆ.
ರಾತ್ರಿ ನೆಡೆದುಕೊಂಡು ಬರ್ತಿದ್ದ ಗೌಡ್ರಿಗೆ ಯಾರೋ ಹಿಂಬದಿಯಿಂದ ಫಾಲೋ ಮಾಡ್ತಿದಾರೆ ಅಂತ ಅನ್ನಿಸಿ ತಿರುಗಿ ನೋಡಿದ್ರೆ ಯಾರು ಇಲ್ಲ!! ಫುಲ್ ಜ್ವರ ಆವೃಗಂತೂ, ಇನ್ನೊ ಒಂದು ಹೆಜ್ಜೆ ಮುಂದೆ ಹೋಗಿ ರಾತ್ರಿ ಕತ್ತಲಲ್ಲಿ ಯಾರೋ ಬಂದಹಾಗೆ, ಅವರ ಗೆಜ್ಜೆ ಸಪ್ಪಳ ಕೇಳೋದು, ಇವರು ನಿಂತರೆ ಗೆಜ್ಜೆನೂ ನಿಲ್ಲುತ್ತೇ, ಹೊರಟರೆ ಮತ್ತೆ ಅದೇ ನಾಗವಲ್ಲಿ ಗೆಜ್ಜೆ…….
ಇನ್ನೂ ಕೆಲವು ಕಡೆ ದೆವ್ವದ ಬನಗಳು ಇರ್ತವೆ, ಅದು ಅಲ್ಲಿನ ಹತ್ತಿರದ ಮನೆಗಳಲ್ಲಿನ ಕೆಲವರಿಗೆ ಭಯಾನಕ ತೊಂದರೆಗಳನ್ನು ಕೊಟ್ಟು ಆಮೇಲೆ ಅದಕ್ಕೆ ಒಂದು ದೇವಸ್ಥಾನ ಕಟ್ಟಿದ್ದು ನೋಡಿದೇನೆ. ಆಮೇಲೆ ಅಲ್ಲಿ ಹರಕೆ, ಹಂದಿ, ಕೋಳಿಬಲಿಗಳು ಸಾಮಾನ್ಯ ಬಿಡಿ. ಕಾಡಿನ ಸ್ವಲ್ಪ ದೂರದಲ್ಲಿ ರೋಡ್ ಇರುತ್ತೆ ಅಲ್ಲೇ ಒಂದು ಕಲ್ಲು, ಅದರ ಬಳಿ ರಾತ್ರಿ ನೆಡೆದು ಹೋದರೆ ಜಾರಿ ಬೀಳೋದು, ಉಸಿರುಕಟ್ಟಿದಹಾಗೆ ಆಗೋದು ಇದೆಲ್ಲ ಇದೆ ಕೇಳಿದೀರಾ ಅಲ್ವಾ?
ಇನ್ನೂ ಬಿಡಿ ವಾಮಚಾರಿಗಳಬಗ್ಗೆ ಹೇಳೋದೇ ಬೇಡ ರವಿಬೇಳೆಗೆರೆಯವರ “ಸರ್ಪ ಸಂಭಂದ” ಓದಿ ಮೂರು ದಿನ ಊಟದ ಖರ್ಚು ಉಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು, ಅದು ಅಲ್ಲದೆ ವಾಮಾಚಾರಿಗಳಿಗೆ ಫೇಸ್ಬುಕ್ ಅಕೌಂಟ್ ಇದ್ದರೆ ಬರೀ ದೆವ್ವಗಳೆ ಫ್ರೆಂಡ್ಸ್ ಇರ್ತಾರೆನೋ ಅಲ್ವಾ? ದೆವ್ವಗಳ ಲೈಕು, ಕಾಮೆಂಟು, ವಿಡಿಯೋ, ಅಯ್ಯೋ ಬಿಡಿ ಯಾಕೆ ಅದೆಲ್ಲ ನಮಗೆ…
ಇನ್ನೂ ನಮ್ಮ ಮನೆ ಹತ್ರ ಒಬ್ಬರಿಗೆ ಯಾರೋ ಯಾವಗ್ಲೂ ಮಾಟ ಮಾಡ್ಸೋದು ಕಣ್ರೀ, ಮಾಟ ಮಾಡಿದ ಸ್ವಲ್ಪ ದಿನದಲ್ಲೆ ಇವರ ಎಮ್ಮೆ, ಇಲ್ಲಾ ದನ ಸತ್ತು ಬೀಳೋದು, ಇವರು ಮತ್ತೆ ಮರು ಮಾಟ ಮಾಡೋಕೆ ಕೇರಳಕ್ಕೆ ಹೋಗೋದು ಇದೆಲ್ಲ ಗುಸು ಗುಸು ಸುದ್ದಿ.
ಪಂಜುರ್ಲಿ, ಜಟಿಕ, ಊರ ಮಾರಿ, ರಣ, ಕೆಂಬತ್ತ, ಇನ್ನೂ ಏನೇನೋ ಹೆಸರುಗಳು ಇವು ಊರ / ಗ್ರಾಮ ದೇವತೆಗಳು, ಕೆಲವೊಂದು ಮಾತ್ರ ಅದರಲ್ಲಿ ಸ್ವಲ್ಪ ಕುಟುಂಬಗಳಿಗೆ ಮಾತ್ರ ಸೇರಿರ್ತವೆ. ಇದನ್ನ ದೆವ್ವ ಅಂತೀರಾ, ದೇವರು ಅಂತೀರಾ? ಬೇಡ ಬಿಡಿ ಅವರವರ ನಂಬಿಕೆಗೆ ಬಿಟ್ಟ ವಿಷ್ಯ, ಸುಮ್ನೆ ಯಾಕೆ ವಿವಾದ.
ಇನ್ನೂ ಕೆಲವರಿಗೆ ವಯಕ್ತಿಕವಾಗಿ ದೆವ್ವಗಳ ಕಾಟ, ಮೈಮೇಲೆ ಬರೋದು, ನೋಡೋಕೆ ಹಗಲು ಹೊತ್ತೆ ಭಯಾನಕವಾಗಿ ಕಾಣೋ ವ್ಯಕ್ತಿಗಳು ಇದ್ದಾರೆ ಅವರನ್ನ ಗಣಮಗ ಅಂತ ಕರಿತಾರೆ ನಮ್ಮ ಕಡೆ ಹಾಗೆ “ಅವನಿಗೆ ಗಾಳಿ ಸೋಕಿದೆ ಆಂತಾರೆ, ಇನ್ನೂ ಇಲ್ಲಿ ಭೂತ ಕೋಲ ಅನ್ನುವ ದಕ್ಷಿಣ ಕನ್ನಡದ ವಿಶಿಷ್ಟ ಸಂಪ್ರದಾಯದ ಬಗ್ಗೆ ಬರ್ದಿಲ್ಲ ಯಾಕಂದ್ರೆ ಅದು ಅಲ್ಲಿಯ ಜನರ ನಂಬಿಕೆ ಮತ್ತೆ ಹೆಚ್ಚಾಗಿ ಅವರು ತೊಂದರೆಗಳಲ್ಲಿ ಸಿಲುಕಿದಾಗ ದೇವರಿಗಿಂತ ದೆವ್ವ (ದೈವ)ಗಳಿಗೆ ಮೊರೆ ಹೋಗ್ತಾರೆ ಅಂತ ನಂಬಿಕೆ ಬಗ್ಗೆ ಹೇಳೋದು ಬೇಡ ಅನ್ನಿಸ್ತಿದೆ ಅದು ದಕ್ಷಿಣ ಕನ್ನಡದವರ ಅನುಭವಗಳನ್ನ ಕೇಳಿದ್ರೆ ಒಂದು ಗ್ರಂಥನೇ ಬರಿಬೋದು…..
ನಾವು ಚಿಕ್ಕವರಿದ್ದಾಗ ಪ್ಯಾರಳೆ ಮರ ಹತ್ತಿ ಅಲ್ಲಿನ ಕಾಯಿಗಳನ್ನ ತಿನ್ನೋ ಅಭ್ಯಾಸ, ಅಲ್ಲಿ ಅಪರೂಪಕ್ಕೆ ನಮ್ಮ ಕಣ್ಣಿಗೆ ಕಾಣದ ಒಂದು ಹಣ್ಣು ಇದ್ದು ಅದನ್ನ ಹಕ್ಕಿಗಳು ಅರ್ಧ ತಿಂದಿದ್ದದ್ದನ್ನ ನಾವು ಮನೆಗೆ ತಂದರೆ ಕಥೆ ಮುಗೀತು ಅಮ್ಮ ಫುಲ್ ಹೆದುರ್ಸ್ತಿದ್ರು ಅದು ದೆವ್ವ ತಿಂದಿರೋ ಹಣ್ಣು, ತಿನ್ನಬೇಡ ಅಂತ!! ಇನ್ನೂ ಮರಹತ್ತಿ ಬಿದ್ದರೆ ಅಂತೂ ದೆವ್ವದ ಕಾಟ ಇತ್ತು ಸೋ ಅದು ಎಳೆದು ಕೆಳಗಡೆ ಹಾಕಿ ಸರಿಯಾಗಿ ಏಟು ಮಾಡಿದೆ ಅಂತ ಮಂತ್ರ, ತಂತ್ರ, ತಾಯತ, ಎಲ್ಲ ನಮ್ಮ ಹಣೆ, ಕುತ್ತಿಗೆಗಳನ್ನ ಆವರಿಸ್ತಿದ್ವು.
ದೆವ್ವಗಳನ್ನ ಎದಿರು ಹಾಕ್ಕೊಂಡ್ರೆ ಅದಕ್ಕೂ ಭಲವಾದ ಶಿಕ್ಷೆ ಇದೆ ಅಂತ ಜನ ನಂಬುತ್ತಾರೆ, ರಕ್ತ ಕಾರಿ ಸಾಯಿತಾರೆ, ಅನ್ನ ನೀರು ಕೊಡಿಯೋಕೆ ಆಗ್ದೆ ಸಾವು, ಕಾಡಿಗೆ ಹೋದಾಗ ಹೊಡೆದು ಹಾಕುತ್ತೆ, ಮನೆ ಜಾನುವಾರುಗಳು ಮಟ್ಯಾಷ್!! ಹೀಗೆ ಇನ್ನೂ ಏನೇನೋ.ಅದಕ್ಕೆ ನಂಗೆ ಅನ್ನಿಸೋದು ನಮ್ಮ ರಾಜಕಾರಣಿಗಳು ಇತ್ತೀಚೆಗೆ ಆಣೆ ಭಾಷೆ ಶುರುಮಾಡಿದ್ದರಲ್ಲ ದೇವರ ಬಳಿ ಮಾಡ್ಸೋದಕ್ಕಿಂತ ದೆವ್ವಗಳ ಬಳಿ ಮಾಡ್ಲಿ, ಸಕತ್ ಶಿಕ್ಷೆ!! ಒಟ್ಟಿಗೆ ಆಣೆ ಮಾಡಿದ ಎರಡೂ ಪಾರ್ಟಿಗಳು ನೆಗದು ಬಿದ್ದು ಹೋಗ್ಲಿ ಎನಂತೀರ?
ನೀವು “ನಾಳೆ ಬಾ” ದೆವ್ವದ ಬಗ್ಗೆ ಕೇಳಿದೀರಾ? ನಾನು ಸಣ್ಣವನಿರುವಾಗ ಕೆಲವು ಸೈಟ್ ಮನೆಗಳ ಬಾಗಿಲುಗಳ ಮೇಲೆ ಇದನ್ನ ಬರೆದಿರ್ತಿದ್ರು, ದೆವ್ವ ಬಂದ್ರೆ ಅದಕ್ಕೆ ಕನ್ನಡ ಓದೊಕೆ ಬರುತ್ತಾ? ಎಜುಕಟೆಡ್ ದೆವ್ವಗಳು ಇದಾವ ? ಅಥವಾ ಈ ಸರ್ಕಾರಿ ಅಧಿಕಾರಿಗಳು ಸತ್ತು ಹೀಗೆ ದೆವ್ವಗಳಾಗಿದ್ದಾರಾ? ಇದೆಲ್ಲ ಉತ್ತರ ಸಿಗದ ಪ್ರಶ್ನೆಗಳು. ಹೋಗ್ಲಿ ಸಧ್ಯ ದೆವ್ವ ಬಂದ್ರೆ ಓಕೆ. ಮನೇಲಿ ಯಾರು ಇಲ್ಲದಿದ್ದಾಗ ನೆಂಟರೊಬ್ಬರು ಬಂದ್ರೆ ಅವರ ಕಥೆ ಏನು? ಬಾಗಿಲು ನೋಡಿ ನಾಳೆ ಬಾ…?!!!
ಇನ್ನೂ ಮಜಾ ಏನು ಗೊತ್ತ ನಮ್ಮ ಊರಲ್ಲಿ ಹಳೆಯಕಾಲದಲ್ಲಿ ಎತ್ತಿನ ಗಾಡಿಗಳು ಇದ್ವು, ಈಗ ಇಲ್ಲ ಬಿಡಿ, ಆವಾಗ ಅಪ್ಪ ಮತ್ತೆ ಮಗ ಅಮಾವಾಸ್ಯೆಯ ರಾತ್ರಿಯಲ್ಲಿ ಗಾಡಿ ಹೊಡ್ಕೊ0ಡು ಮನೆಗೆ ಬರುವಾಗ ಹಿಂದಿನಿಂದ ಯಾವುದೋ ನೆರಳು ಡ್ಯಾನ್ಸ್ ಮಾಡಿದಹಾಗೆ ಕಾಣಿಸ್ತಾ ಇತ್ತಂತೆ, ಅಪ್ಪ ಹೌಹಾರಿ ಹೋದ, ಆದರೆ ಸ್ವಲ್ಪ ಬುದ್ಧಿವಂತನಾದ ಮಗ ಗಾಡಿ ನಿಲ್ಲಿಸಲು ಹೇಳಿ ಸರಿಯಾಗಿ ನೋಡಿದ್ರೆ ಗಾಡಿಗೆ ಕಟ್ಟಿದ ಲಾಟೀನ್ ದೀಪದ ಬೆಳಕು ನೆರಳಿನ ಆಟ ಅಂತ ಗೊತ್ತಾಯಿತು!!
ದೇವಸ್ಥಾನಗಳು ಎಷ್ಟು ಇದಾವೋ ಅದರ ಅರ್ಧದಷ್ಟು ದೆವ್ವಗಳ ಅಂದರೆ ದೈವಗಳ ಗುಡಿ ಬನಗಳೂ ಇವೆ ಅಲ್ವಾ? ದೇವರು ಅನ್ನುವ ಆಪಥ್ಬಾಂದವನ ನಡುವೆಯೇ ಇಂತ ದೆವ್ವಗಳು ನೀಡುವ ಶೀಘ್ರ ಪರಿಹಾರದ ನಂಬಿಕೆಇಂದಾಗಿಯೇ ಹೆಚ್ಚಿನ ಅಸ್ತಿತ್ವಕ್ಕೆ ಕಾರಣನೆನೋ ಅಲ್ವಾ? ಹಾಗೆ ಇವುಗಳ ಹೆಸರು ಬಳಸಿ ಮೋಸ ಮಾಡುವ, ಹೆದರಿಸಿ ದುಡ್ಡು ಮಾಡುವ ಕ್ಷುದ್ರ ಮನಸ್ಸುಗಳು ಇದ್ದವೇ ಅನ್ನೋದು ವಿಪರ್ಯಾಸ..
ದೇವರು, ದೈವ, ದೆವ್ವ, ಇವುಗಳ ಇರುವಿಕೆಯ ಹುಡುಕಾದಲ್ಲಿ, ಈ ವಿಸ್ಮಯಗಳು, ವಿಚಿತ್ರಗಳ ನಡುವೆ ಕಾಡುವ ಒಂದೇ ಒಂದು ಪ್ರಶ್ನೆ “ ಹೀಗೂ ಊಂಟೇ?” (ಟಿವಿ 9 ನಾರಾಯಣ ಸ್ವಾಮಿ ಸ್ಟೈಲ್ ಅಲ್ಲಿ ಓದಿ ಮಜಾ ಬರುತ್ತೆ )ಅದೇನೇ ಇರಲಿ ಇದೆಲ್ಲ ನಾನು ಕೇಳಿದ ಸುದ್ದಿಗಳು ಅಷ್ಟೇ, ತುಂಬಾ ಸೀರಿಯಸ್ ಆಗಿ ಓದಿ ತಲೆ ಕೆಡಿಸಿಕೊಳ್ಳಬೇಡಿ, ಹಾಗೆ ನಿಮಗೆ ಕೇಳಿರೋ ಗಾಳಿ ಸುದ್ದಿ , ಇಂತ ಕಥೆಗಳು ಇದ್ರೆ ನಂಗೂ ಹೇಳಿ ನಮ್ಮ ಮ್ಯಾನೇಜರ್ ಯಾಕೋ ಸಂಬಳ ಜಾಸ್ತಿ ಮಾಡ್ತಿಲ್ಲ ಅವ್ನಿಗೆ ಈ ಕಥೆ ಹೇಳಿ ಹೆದರಿಸಿ ಕೆಲ್ಸ ಮಾಡ್ಕೊಳ್ಳೋ ಕೊನೆ ಪ್ರಯತ್ನ ಮಾಡ್ತೀನಿ….ಬರ್ಲಾ..?




