ವಿಷಯದ ವಿವರಗಳಿಗೆ ದಾಟಿರಿ

ಜುಲೈ 4, 2011

5

ದಿಲ್ಲಿಯ ’ಹುಳಿ ದ್ರಾಕ್ಷೆ’ ಹಿಡಿಯಲು ಹೋಗಿ

‍ನಿಲುಮೆ ಮೂಲಕ

-ಕಾಲಂ ೯

ದಿಲ್ಲಿ ಕನ್ನಡದ ಪತ್ರಕರ್ತರಿಗೆ ದೂರ. 3000 ಕಿ.ಮೀ. ಅಷ್ಟೇ ಅಲ್ಲ. ಅದರಾಚೆಗೂ ದೂರ. ಕನ್ನಡದ ಪತ್ರಕರ್ತರು ದಿಲ್ಲಿಯಲ್ಲಿ ಹೆಜ್ಜೆ ಗುರುತು ಮೂಡಿಸುವುದು ಸುಲಭದ ಮಾತಲ್ಲ. ಏರು ಬಿಸಿಲು ಅಥವಾ ತೀವ್ರ ಚಳಿಯಲ್ಲಿ ನಿರಂತರ ಆಲೂ ಪಲ್ಯವನ್ನೂ ಅರಗಿಸಿಕೊಳ್ಳುತ್ತಲೇ ಇರಬೇಕು.

ದಿಲ್ಲಿಯ ಆಡುಭಾಷೆ ಹಿಂದಿ – ಉರ್ದು ಮಾತ್ರ. ಇಂಗ್ಲೀಷು ಅಷ್ಟಕ್ಕಷ್ಟೆ. ಇನ್ನು ಕನ್ನಡದ ಕಥೆ? ಪತ್ರಿಕಾರಂಗವೇನು? ಸುಪ್ರೀಂ ಕೋರ್ಟು, ಪಾರ್ಲಿಮೆಂಟು, ಐಎ ಎಸ್ ಲಾಬಿಯಲ್ಲಿಯೂ ಕನ್ನಡದ ಧ್ವನಿ ಕ್ಷೀಣವೇ.

ಕನ್ನಡದ ಪತ್ರಿಕೋದ್ಯಮಕ್ಕೆ ‘ಕೊಂಬು-ಕಹಳೆ’ ಎಲ್ಲ ಆದವರೂ ದಿಲ್ಲಿಯಲ್ಲಿ ಏನೂ ಅಲ್ಲ.

ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಅಂದರೆ ಅದು ಅಡ್ವಾಣಿಯದ್ದೋ – ಪ್ರಕಾಶ್ ಕಾರಟರದ್ದೋ – ಚಿದಂಬರರದ್ದೋ – ಯಾವುದೇ ರಾಷ್ಟ್ರೀಯ ನಾಯಕರದ್ದಾಗಲಿ. ಅಂದೊಂದು ಮದುವೆ ಮನೆಯ ಬಾಬತ್ತು. ಬರೋಬ್ಬರಿ 600 ಜನ. ಇಂಗ್ಲೀಷ್ ಚಾನೆಲ್ ಗಳು, ಹಿಂದಿ ಚಾನೆಲ್ ಗಳು, ರಾಷ್ಟ್ರೀಯ ಪತ್ರಿಕೆಗಳು, ಅವರವರ ಕ್ಯಾಮರಾಮೆನ್ ಗಳು, ಮೈಕ್‍ಮೆನ್ ಗಳು, ಅದರಾಚೆಗೆ ಎಲ್ಲೋ ಕಳೆದು ಹೋಗುವ ಕನ್ನಡದ ಪತ್ರಕರ್ತ. ಪ್ರಶ್ನೆ ಕೇಳುವುದು, ಉತ್ತರ ಬರೆಯುವುದು ದೂರದ ಮಾತು. ಎಷ್ಟು ದೂರವೆಂದರೆ ದೆಲ್ಲಿಯ ನಮ್ಮ ಧ್ವನಿಗಳು ಆ ಬಾಬತ್ತಿನ ತನಕ ಹೋಗುವುದೇ ಇಲ್ಲ. ದಿಲ್ಲಿಯ ತಮ್ಮ ಮನೆಯಲ್ಲಿಯೇ ಕೂತು NDTVಯದೋ ಆಜ್ ತಕ್ ನದೋ Direct Rellay ನೋಡ್ತಾ ನೋಡ್ತಾನೇ ಇವರು ಸುದ್ದಿ ಕೊಟ್ಟು ಕೈತೊಳೆದುಕೊಳ್ಳುತ್ತಾರೆ.

ಈಗ ಕನ್ನಡದ ಧ್ವನಿಯಾಗಿರುವ ದಿಲ್ಲಿಯ ಪತ್ರಕರ್ತರೆಂದರೆ ಉಮಾಪತಿ(VK), ಹೊಸಕೆರೆ ನಂಜುಂಡ ಗೌಡ(PV), ಪ್ರಶಾಂತ ನಾತೂ(ಸುವರ್ಣ ನ್ಯೂಸ್), ರಾಘವೇಂದ್ರ ಶರ್ಮ(ಜನಶ್ರೀ), ಈಗಷ್ಟೇ ದಿಲ್ಲಿ ತಲಪಿಕೊಂಡಿರುವ ರೇಣುಕಾ ಪ್ರಸಾದ್ ಹಾಡ್ಯ, ಅಪರೂಪಕ್ಕೆ ETVಯಲ್ಲಿ ಉಲಿಯುವ ಶ್ರೀರಾಜ್ ಗುಡಿ.

ದಿಲ್ಲಿಯ ದಿನಗಳನ್ನು ಬೆಂಗಳೂರಿನಲ್ಲಿ ಼ಚಪ್ಪರಿಸಲು ಅಮಿನಮಟ್ಟು, ಶಿವಪ್ರಸಾದ್, ಅಶೋಕರಾಮ್ ಇದ್ದಾರೆ. ದಿಲ್ಲಿಯಲ್ಲಿದ್ದಾಗ ಅಲ್ಲಿನ ರೆಡಿಮೇಡ್ ಸುದ್ದಿಗಳ ಹಿಂದೆ ಬೀಳದೆ ಯೂಪಿ, ಬಿಹಾರ, ಗುಜರಾತ್ ತಿರುಗಾಡಿ ಅನೇಕ ವಿಲಕ್ಷಣಗಳನ್ನು ಹೆಕ್ಕಿ ಕೊಟ್ಟವರು ಮಟ್ಟು.  ಮಲ ಹೊರುವ ಪದ್ಧತಿ ಮಾಯಾವತಿಯ ಯೂಪಿಯಲ್ಲಿ ಇನ್ನೂ ಇದೆ! ಭೂ ಸುಧಾರಣೆಯ ಮಸೂದೆ ಕಮ್ಯೂನಿಷ್ಟರ ಬೆಂಗಾಲದಲ್ಲಿ ಜಾರಿಯಾಗಿರುವುದು ಅಲ್ಲಿಂದಲ್ಲಿಗೆ…. . ಟಿವಿ9 ಮೂಲಕ ವಾಘಾ ಗಡಿ, ಕಾರ್ಗಿಲ್, ಹಿಮಾಲಯ, ಮುಂಬೈ ಅಟ್ಯಾಕ್ ಗಳನ್ನು ಒಂದಿಷ್ಟು ಲೈವ್ ಕವರ್ ಮಾಡಿದ್ದು ಶಿವಪ್ರಸಾದ್, ನಮ್ಮೆಲ್ಲ ಸಂಸದರ ಕಾರ್ಯಭಾರವನ್ನು ಜಾಲಾಡಿದ ಅಶೋಕರಾಮ್! ಇವರೆಲ್ಲ ದಿಲ್ಲಿಯಲ್ಲಿ ಒಂದಿಷ್ತು ಕಾಲೂರಿದವರು.

ದಿಲ್ಲಿಯಲ್ಲಿ ನಮ್ಮ ಪತ್ರಕರ್ತರು ಇದುರಿಸುವ ಕಷ್ಟವೆಂದರೆ ಅಲ್ಲಿನ ಅಗಾಧತೆ. ವಾರಗಟ್ಟಲೆ ಏನೂ ಇರೋಲ್ಲ.  ಸುದ್ದಿ ಬಂದರೆ ಕವರ್ ಮಾಡೋಕೆ ಒಬ್ಬರು ಸಾಕಾಗೋಲ್ಲ. ನಮ್ಮವರಿಗೆಲ್ಲ ದಿಲ್ಲಿಯಲ್ಲಿ ಕೆಲಸ ಸಿಗೋದು ಇಲ್ಲಿಯವರು ಅಲ್ಲಿಗೆ ಹೋದಾಗಲೇ. ನಮ್ಮ ಸಿಎಂ ರಾಜ್ಯಪಾಲರು ದಿಲ್ಲಿಗೆ ಹೊರಟರೆಂದರೆ ಕರ್ನಾಟಕ ಭವನ ಗಿಜಡಲಾರಂಭಿಸುತ್ತದೆ. ಸರ್ಕಾರ ಇಂದೋ ನಾಳೆಯೋ ಎಂಬಂತಾಗಿ ಹೈ ಟೈಂ ಸೃಷ್ಟಿಯಾದರೆ ದಿಲ್ಲಿಯ ನಮ್ಮ ಪತ್ರಕರ್ತರಿಗೆ ಸಾಕೋ ಸಾಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವ ರಾಜ್ಯಪಾಲರು, ಬಿಜೆಪಿ ಕಛೇರಿಯಲ್ಲಿ ಜೇಟ್ಲಿ,ಅಡ್ವಾಣಿ ಮನೆಗೆ ಹೊಕ್ಕಲು ಹವಣಿಸುತ್ತಿರುವ ಸಿಎಂ, ಅಲ್ಲಿಗೆ ಮೊದಲೇ ತಲಪಿರುವ ಅನಂತ ಕುಮಾರ್, ಬನ್ನಿ ನನ್ನ ಹತ್ರ ಸುದ್ದಿ ಇದೆ ಎಂದು ಗೋಗರೆಯುತ್ತಿರುವ ಧನಂಜಯ ಕುಮಾರ್ – ಹೀಗೆ  ನಾಲ್ಕು, ನಾಲ್ಕು ಕಡೆ ಸುದ್ದಿ ಒಸರತೊಡಗಿದರೆ ಇದ್ದ ಅನುಭವವೆಲ್ಲ ಬಳಸಿದರೂ ಸಾಲದಾಗುತ್ತದೆ.

ದಿಲ್ಲಿಯಲ್ಲಿ ಆಗಿದ್ದವರು, ಈಗಿರುವವರು -ಇಬ್ಬರದೂ ಒಂದೇ ಕೊರಗು. ನಮ್ಮ ಎಂಪಿಗಳು ಪಾರ್ಲಿಮೆಂಟಲ್ಲಿ ಬಾಯ್ಬಿಡೋದೇ ಇಲ್ಲ. ದೇವೇಗೌಡ, ಅನಂತ್ ಕುಮಾರ್ ಬಿಟ್ಟರೆ ಉಳಿದವರು ವರ್ಷದಲ್ಲಿ ಒಂದೆರಡು ಸಲಾನೂ ಮಾತನಾಡೋಲ್ಲ. ಅದು ಗೌಡರಿರಲಿ, ಮತ್ತೊಬ್ಬರಿರಲಿ, ಅವತ್ತೇನಾದರೂ ಪಾರ್ಲಿಮೆಂಟಲ್ಲಿ ಮಾತನಾಡೋರಿದ್ದರೆ ಕನ್ನಡದ ಪತ್ರಕರ್ತರಿಗೆ ಎರಡೆರಡು ಬಾರಿ ನೆನಪಿಸಲಾಗುತ್ತದೆ. ಇವರ ‘ಪ್ರಸೆನ್ಸ್’ ಖಾತರಿ ಮಾಡಿಕೊಂಡೇ ಅವರು ಮಾತನಾಡುವುದು! ಕೊನೆಗೆ ಮಾತಿನಲ್ಲಿ ಗಟ್ಟಿಯಾದದ್ದು ಏನಾದ್ರು ಇರುತ್ತಾ ಅಂದರೆ, ಅನಂತಕುಮಾರ್ ಒಂದು ಕೇಳಿ ಸಾಕಾದ ಜೋಕ್ ಹೇಳಿ ಮಾತು ಆರಂಭಿಸಲು ಹೊರಟು ಲಲ್ಲೂ ಗಲಾಟೆಗೆ ಸಿಲುಕಿ, ಸಿಕ್ಕ 40 ನಿಮಿಷ ಗೋವಿಂದವಾಗಿರುತ್ತೆ.

ಆದರೂ ಅದನ್ನೇ ಜೋರಾಗಿ ಕೆತ್ತಬೇಕು, ಮೆತ್ತಬೇಕು. ಏಕೆಂದರೆ ಈ ನಾಯಕ ಮಣಿಗಳು ಖುದ್ದು ಬೆಂಗಳೂರಿನ ಸಂಪಾದಕರಿಗೆ ತಮ್ಮ ಸಾಧನೆ ಹೇಳಿಕೊಂಡು ಬಿಟ್ಟಿರುತ್ತಾರೆ.

ಈ ಎಲ್ಲ day to dayಗಳಾಚೆ ದಿಲ್ಲಿಯಲ್ಲಿ ಬೇರು ಬಿಟ್ಟಿರುವ ಇಬ್ಬರೆಂದರೆ ವೀಕ್‍ನ ಸಚ್ಚಿ, ಸಿಎನ್‍ಎನ್‍ನ ಡಿಪಿ ಸತೀಶ್. ಹಾಗೆ ಸುಧೀಂದ್ರ ಕುಲಕರ್ಣಿಯವರನ್ನೂ ನೆನಪಿಸಿಕೊಳ್ಳಬಹುದು. ಸಂಡೆ ಇಂಡಿಯನ್ ಮೂಲಕ ಪ್ರಜಾವಣಿಯಲ್ಲಿದ್ದ ಸತೀಶ್ ಚಪ್ಪರಿಕೆ, ನಾರಾಯಣ ಸ್ವಾಮಿಯವರಿಗೆ ದಿಲ್ಲಿ ಹೋಗಿ ಬಂದ ಅನುಭವವಾಗಿದೆ.

ದಿಲ್ಲಿ ಪತ್ರಿಕೋದ್ಯಮದ ಮುಖ್ಯಧಾರೆಗೆ ಮಲೆಯಾಳಿ, ಬೆಂಗಾಲಿ, ಮರಾಠಿಗರಿಗೆ ಸಾಧ್ಯವಾಗಿದೆ. ಕನ್ನಡಿಗರಿಗೇಕೆ ಸಾಧ್ಯವಾಗುತ್ತಿಲ್ಲ?

ಮುಖ್ಯ ತೊಡರು ಹಿಂದಿ, ಇಂಗ್ಲಿಷ್ ಮೇಲಿನ ಹಿಡಿತದ್ದು. ಒಳ್ಳೇ ಇಂಗ್ಲಿಷ್ ಇದ್ದು ಈಗ ಬ್ಲಾಗಿಗರಾದರೂ ಒಂದು try ಕೊಟ್ಟು ನೋಡಬಹುದು.

ಪ್ರಶಾಂತ ನಾತು ಹಾಗೇ ಮಾಡಿದ್ದು. ಇಂಜಿನಿಯರ್ ಆದವರೂ ಕೆಲಸ ಬಿಟ್ಟು ಬೆಂಗರೂರು ವಿವಿಯಲ್ಲಿ ಇಲೆಕ್ಟ್ರಾನಿಕ್ ಮೀಡಿಯಾ ಓದಿ ಈಗ ದಿಲ್ಲಿ ಸೇರಿದ್ದಾರೆ. ಮತ್ತೂ ಎತ್ತರಕ್ಕೆ ಹೋಗಬೇಕು. ಕಷ್ಟ ನಿಜ, ಅಸಾಧ್ಯವಲ್ಲ.

******************

5 ಟಿಪ್ಪಣಿಗಳು Post a comment
  1. ಆಸು ಹೆಗ್ಡೆ's avatar
    ಜುಲೈ 4 2011

    ಅವರಿವರು ಸಾಧಿಸಬಹುದಾದುದನ್ನು, ಸಾಧಿಸದೇ ಉಳಿದುದನ್ನು, ತಾವೇ ಸಾಧಿಸಸಬಾರದೇಕೆ?
    ತಾವೇ ಸಾಧಿಸಿ ತೋರಿಸಬಾರದೇಕೆ? ತಾವೇ ಪ್ರಯತ್ನಿಸಬಾರದೇಕೆ?
    “ಕಾಲಂ ದಿಲ್ಲಿ ನೈನ್” ಅಂತ ಹೆಸರಿಟ್ಟರಾಯ್ತು!
    ತಮ್ಮ ನಿಲುಮೆ ಭದ್ರವಾಗಿದ್ದರೆ, ತಮ್ಮ ಹಿಂದೆ ನಮ್ಮೆಲ್ಲರ ನಿಲುಮೆ ಇದೆ.
    ಶುಭಹಾರೈಕೆಗಳು.

    ಒಂದು ಪ್ರಶ್ನೆ:
    ಯಾಕೆ ಎಲ್ಲರೂ ಮುಖ ಮುಚ್ಚಿಕೊಂಡು ರಂಗಕ್ಕೆ ಇಳಿಯುತ್ತಾರೆ?
    ಮಾಧ್ಯಮದವರನ್ನು ಹಳಿಯುವುದಕ್ಕೆ, ಹೊಗಳುವುದಕ್ಕೆ, ಮುಖವಾಡದ ಅಗತ್ಯ ಇದೆಯೇ?

    ಉತ್ತರ
    • sriharsha's avatar
      sriharsha
      ಜುಲೈ 4 2011

      ಹೆಸರು ಹೇಳಿಕೊಂಡು ಉಗಿಯುವುದಕ್ಕೂ ಧೈರ್ಯ ಬೇಕು. ಅನಾಮಿಕ ಬರಹಗಳು ನಿಲುಮೆಗೆ ಸಮ್ಮತವೇ?

      ಉತ್ತರ
      • ಮುಖವಾಡ ಹೊತ್ತವರ ಎಡಬಿಡಂಗಿ ನಿಲುವುಗಳಿಗೆ ವೇದಿಕೆಯಾದರೆ, ಹತಾಶ ಮನಸ್ಥಿತಿಯವರ ತೀಟೆ ತೀರಿಸಿಕೊಳ್ಳುವುದಕ್ಕೆ ರಂಗ ಮಂಚವಾದರೆ, ಕಾಲಕ್ರಮೇಣ ಈ “ನಿಲುಮೆ” ತನ್ನ ನಿಲುಮೆಯನ್ನೇ ಕಳೆದುಕೊಂಡು, ಇನ್ನೊಂದು ಗೊಬ್ಬರದರಾಶಿ ಆಗಿಬಿಡಬಹುದು!

        ಉತ್ತರ
  2. ನಿಲುಮೆ's avatar
    ಜುಲೈ 5 2011

    ಆತ್ಮೀಯ ಆಸು ಹೆಗ್ಡೆ ಮತ್ತು ಶ್ರೀ ಹರ್ಷ,
    ಈ ಮೇಲಿನ ಲೇಖನದ ಲೇಖಕರ ಆಶಯದಂತೆ ಅವರೇ ನೀಡಿದ ಹೆಸರನ್ನು ಲೇಖನದಲ್ಲಿ ಬಳಸಲಾಗಿದೆ. ಮಾಧ್ಯಮದಲ್ಲಿಯೇ ಕೆಲಸ ನಿರ್ವಹಿಸುತ್ತಿರುವ ಲೇಖಕರಿಗೆ, ತಮ್ಮ ಮಾಧ್ಯಮದ ಬಗ್ಗೆಯೇ ಕೆಲವು ವೇಳೆ ಕಾಮೇಂಟ್ ಮಾಡಬೇಕಾದ ಅನಿವಾರ್ಯತೆ ಬರಬಹುದು. ಹಾಗಾಗಿ ಅವರು ತಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವ ಸಲುವಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಈ ಬಗ್ಗೆ ನಿಲುಮೆಯು ಅವರನ್ನು ಸಂಪರ್ಕಿಸಿ ಮಾತನಾಡಿಯೇ ಅವರ ಲೇಖನಗಳನ್ನು ಪ್ರಕಟಿಸುವ ತೀರ್ಮಾನಕ್ಕೆ ಬಂತು. ಇಲ್ಲಿ ವ್ಯಕ್ತಿಗಿಂತ ಲೇಖನದ ಆಶಯ ಮುಖ್ಯ ಎನಿಸಿ ಪ್ರಕಟಿಸಲಾಗಿದೆ. ಯಾವುದೇ ಲೇಖನಗಳನ್ನು ಪರಿಶೀಲಿಸದೇ ಪ್ರಕಟಿಸುವ ಕ್ರಮವನ್ನು ನಿಲುಮೆ ಇಟ್ಟು ಕೊಂಡಿಲ್ಲ.
    -ನಿಲುಮೆ ತಂಡ.

    ಉತ್ತರ
    • ಮಾಧ್ಯಮದ ಬಗ್ಗೆಯೇ ಬರೆಯಬೇಕಾದಾಗ, ಬಳಸಲಾಗುವ ಬರೀ ಒಂದು ಮಾಧ್ಯಮವೆಂದು, ನಿಲುಮೆಯನ್ನು ತಿಳಿಯದಿರಲಿ, ಅಷ್ಟೇ, ನಮ್ಮ ಆಶಯ!

      ಉತ್ತರ

Leave a reply to ಆಸು ಹೆಗ್ಡೆ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments