ಸಂಸ್ಕೃತಿ ಸಂಕಥನ – ೧
– ರಮಾನಂದ ಐನಕೈ
ಭಾರತೀಯ ಸಂಸ್ಕೃತಿಯ ವಿಷಯದಲ್ಲಿ ಇಂದಿಗೂ ಕೂಡಾ ಗೊಂದಲವಿದೆ. ನಮ್ಮ ಆಚರಣೆಗಳು ಅರ್ಥವಿಲ್ಲದ್ದು. ಮೌಢ್ಯದಿಂದ ಕೂಡಿದ್ದು…. ಇತ್ಯಾದಿ. ನಮ್ಮ ಸುಶೀಕ್ಷಿತ ಜನರೂ ಕೂಡ ಇದನ್ನೇ ಪುನರುಚ್ಚರಿಸುತ್ತಿದ್ದಾರೆ. ಆದರೆ ಇದು ನಿಜ ಅಲ್ಲ. ಇವು ಕೇವಲ ಪಾಶ್ಚಾತ್ಯರಿಗೆ ನಮ್ಮ ಸಂಸ್ಕೃತಿಯ ಕುರಿತಾದ ಅನುಭವಗಳು. ಅವರ ಅನುಭವಗಳೇ ನಮಗೆ ಆದರ್ಶವಾಗಿದೆ.ಬೆಲ್ಜಿಯಂನ ಗೆರಿಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಾಲಗಂಗಾಧರ ಅವರು ಈ ಕುರಿತು ದೀರ್ಘ ಸಂಶೋಧನೆ ಮಾಡಿದ್ದಾರೆ. ಇವರ ಸಂಶೋಧನೆ ಭಾರತೀಯ ಸಂಸ್ಕೃತಿಯ ಮೇಲೆ ಹೊಸ ಬೆಳಕು ಚೆಲ್ಲಲಿದೆ.
ಭಾರತೀಯ ಸಂಸ್ಕೃತಿಯ ಕುರಿತಾದ ನಮ್ಮ ತಪ್ಪು ತಿಳುವಳಿಕೆ ಹೇಗೆ ಜೀವನದ ಬೇರೆ ಬೇರೆ ರಂಗದ ಮೇಲೆ ಅಡ್ಡ ಪರಿಣಾಮ ಮಾಡಿದೆ ಎಂಬ ಬಾಲಗಂಗಾಧರರ ವಾದವನ್ನು ಸರಳವಾಗಿ ಅನುಭವಕ್ಕೆ ದಕ್ಕುವಂತೆ ನಿರೂಪಿಸಲಿದ್ದಾರೆ ರಮಾನಂದ ಐನಕೈ. ಹೊಸ ಅಂಕಣ ‘ಸಂಸ್ಕೃತಿ ಸಂಕಥನ’ ಆರಂಭವಾಗಲಿದೆ.
ಇದು ಹೇಳುವಷ್ಟು ಸುಲಭವಲ್ಲ. ಆದರೂ ಒಂದು ಕ್ಷಣ ವರ್ತಮಾನದ ನಮ್ಮ ಸಿದ್ಧ ನಂಬಿಕೆಗಳನ್ನು ಪೂರ್ವಾಗ್ರಹಗಳನ್ನು ಬದಿಗಿಟ್ಟು ಮುಂದುವರಿಯೋಣ.
ಕಳೆದ ೬೦ ವರ್ಷಗಳ ನಮ್ಮ ಸ್ವತಂತ್ರ ಭಾರತದಲ್ಲಿ ನೂರಾರು ರೀತಿಯ ಮನಸ್ಸುಗಳು ಬೆಳೆಯುತ್ತ ಬಂದಿವೆ. ಪ್ರತಿಯೊಂದು ಮನಸ್ಸೂ ತನ್ನದೇ ರೀತಿಯ ವೈಚಾರಿಕ ಹಾಗೂ ಮಾನಸಿಕ ಸಾಮ್ರಾಜ್ಯವನ್ನು ಕಟ್ಟಿಕೊಂಡಿದೆ ಹಾಗೂ ಅದೇ ಅಂತಿಮ ಸತ್ಯ ಎಂದು ಪ್ರತಿಪಾದಿಸುತ್ತಲಿದೆ.ಈ ಕಾರಣಕ್ಕಾಗೇ ದೇಶದಲ್ಲಿ ಅಸಂಖ್ಯಾತ ವೈವಿಧ್ಯಮಯ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಇವುಗಳನ್ನೆಲ್ಲ ಸೇರಿಸಿ ನಾವು ಮುಖ್ಯವಾಗಿ ಎರಡು ರೀತಿಯ ಮನಸ್ಸುಗಳನ್ನು ಗುರುತಿಸೋಣ.
ಒಂದು ಮನಸ್ಸು ನಮ್ಮದಲ್ಲದ್ದನ್ನು ನಮ್ಮದೂ ಎಂದು ತಪ್ಪಾಗಿ ನಂಬಿ ನಿಜವಾದ ನಮ್ಮದನ್ನು ಅನಾಗರಿಕ, ಅವೈಜ್ನಾನಿಕ, ಗೊಡ್ಡು ಮೌಢ್ಯ ಇತ್ಯಾದಿಗಳೆಂದು ವ್ಯಾಖ್ಯಾನಿಸುತ್ತ ಪ್ರಗತಿಪರವೆನಿಸಿಕೊಂಡಿದೆ.
ಇನ್ನೊಂದು ಮನಸ್ಸು ನಮ್ಮದೆಲ್ಲವೂ ಅತೀ ಶ್ರೇಷ್ಠವಾದದ್ದು, ಅದನ್ನು ನಮ್ಮವರಿಗೆಲ್ಲರಿಗೂ ತಿಳಿಸಿ ಹೇಳಬೇಕೆಂಬ ಹುಮ್ಮಸ್ಸಿನಲ್ಲಿ ನಮ್ಮದಲ್ಲದ ವಿಚಾರ ಹಾಗೂ ಸಾಧನಗಳ ಮೂಲಕವೇ ಪ್ರತಿಪಾದಿಸಹೊರಟಿದೆ.
ಈ ಎರಡು ಮಾನಸಿಕ ಸಾಮ್ರಾಜ್ಯಗಳು ನಮ್ಮಲ್ಲಿ ಪಕ್ಷ ರಾಜಕೀಯದ ಮೌಲಿಕವೂ ಕೆಲಸ ಮಾಡುತ್ತಲಿದೆ. ಆದರೂ ದೇಶದ ಸಮಸ್ಯೆ ಬಗೆಹರಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಏಕೆ? ಇವೆರಡೂ ಮನಸ್ಸುಗಳ ಹೋರಾಟದ ಮಾರ್ಗವನ್ನೂ ಮೀರಿದ ನಿಜವಾದ ಇನ್ನೊಂದು ಸತ್ಯ ಇರಬಹುದೇ? ಇದ್ದರೆ ಆ ಸತ್ಯ ಯಾವುದು ಮತ್ತು ಅದರ ಕಥೆ ಏನಾಗಿರಬಹುದು.ಭಾರತದಲ್ಲಿ ಸದ್ಯ ಸಂಶೋಧನೆಗಳೊಗಾಗಬೇಕಾದ ಸಂಗತಿ ಇದು.
ಪ್ರೊ. ಬಾಲಗಂಗಾಧರ ಈ ಕೆಲಸ ಮಾಡಲು ಮುಖ್ಯ ಪ್ರೇರಣೆಯಾಗಿದ್ದಾರೆ. ಮೂಲತಃ ಇವರು ಕನ್ನಡದವರು. ಬೆಲ್ಜಿಯಂನ ಗೆಂಟ್ ವಿಶ್ವವಿದ್ಯಾಲಯದ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ “ಭಾಗದಲ್ಲಿ ಪ್ರಾಧ್ಯಾಪಕರು. ಕ್ರಿಶ್ಚಿಯಾನಿಟಿ ಮತ್ತು ರಿಲಿಜನ್ ಇವರ ಸಂಶೋಧನಾ ಪ್ರಬಂಧದ ವಿಷಯ.ಕ್ರಿಶ್ಚಿಯಾನಿಟಿ ಅಧ್ಯಯನ ಮಾಡುವಾಗ ಇವರಿಗೆ ಭಾರತ ಬೇರೆಯೇ ರೀತಿಯಲ್ಲಿ ಅರ್ಥವಾಗತೊಡಗಿತು. ಕ್ರಿಶ್ಚಿಯಾನಿಟಿಯ ಯಾವ ಮಿತಿಗಳೂ ಭಾರತೀಯ ಸಂಸ್ಕೃತಿಯಲ್ಲಿ ಕಾಣುತ್ತಿಲ್ಲ. ಆ ದ್ರುಷ್ಟಿಯಲ್ಲಿ ಭಾರತದ್ದು ಜಗತ್ತಿನಲ್ಲೇ ಒಂದು ಅದ್ಭುತವಾದ ಸಂಸ್ಕೃತಿ. ಹೀಗಿದ್ದೂ ದೇಶದಲ್ಲಿ ಯಾಕಿಷ್ಟು ಆಂತರಿಕ ಸಮಸ್ಯೆಗಳು ಹುಟ್ಟಿಕೊಂಡಿವೆ ಎಂಬುದು ಅವರ ಕುತೂಹಲಕ್ಕೆ ಕಾರಣವಾತು. ಆಗ ಅವರು ಪೂರ್ವ ಮತ್ತು ಪಶ್ಚಿಮ ಎರಡೂ ಸಂಸ್ಕೃತಿಗಳ ಕುರಿತು ಆಳವಾಗಿ ಅಧ್ಯಯನ ಮಾಡಿದರು. ಇಂದು ನಾವು ವ್ಯಾಖ್ಯಾನಿಸುತ್ತಿರುವ ಭಾರತೀಯ ಸಂಸ್ಕೃತಿಯೆಂಬ ಹಲವು ಅಂಶಗಳು ಕ್ರಿಶ್ಚಿಯಾನಿಟಿಯ ಕವಚ ತೊಟ್ಟಿವೆ ಎಂಬ ಕಠೋರ ಸತ್ಯ ಅವರಿಗೆ ಗೋಚರವಾತು. ಈ ಕವಚವನ್ನು ಕಿತ್ತೆಸೆದು ನಿಜವಾದ ನಮ್ಮ ಸಂಸ್ಕೃತಿಯ ದರ್ಶನ ಮಾಡಿಕೊಳ್ಳಬೇಕು. ಆಗ ಮಾತ್ರ ಭಾರತ ದೇಶಕ್ಕೆ ನೆಮ್ಮದಿ ಎಂಬುದು ಇವರ ವಾದವೂ ಹೌದು, ಹೋರಾಟವೂ ಹೌದು.
ಹಾಗಂತ, ನಮ್ಮ ಸಂಸ್ಕೃತಿಯನ್ನು ನಾವು ನೋಡುತ್ತಿರುವ ದ್ರುಷ್ಟಿ ಸರಿಯಾಗಿಲ್ಲ ಎಂದು ಹೇಳುತ್ತಿರುವವರಲ್ಲಿ ಬಾಲಗಂಗಾಧರರೇ ಪ್ರಥಮರಲ್ಲ. ಸಾಕಷ್ಟು ಚಿಂತಕರು ಹೇಳಿದ್ದಾರೆ. ಹೇಳುತ್ತಲೂ ಇದ್ದಾರೆ. ಆದರೆ ಈ ಕುರಿತು ಆಳವಾಗಿ ಅಧ್ಯಯನ ಮಾಡಿಲ್ಲ. ಈ ಸಮಸ್ಯೆಯ ಕಾರ್ಯಕಾರಣ ಸಂಬಂಧವನ್ನು ವೈಜ್ನಾನಿಕವಾಗಿ, ತರ್ಕಬದ್ಧವಾಗಿ ತೆರೆದು ತೋರಿಸುತ್ತಿರುವ ಪ್ರಪ್ರಥಮ ಚಿಂತಕರು ಇವರು. ತಮ್ಮ ಚಿಂತನೆಗೆ ಇವರು ಭಾರತೀಯರ ಅನುಭವವನ್ನು ಪ್ರಮಾಣವಾಗಿಸಿಕೊಳ್ಳುತ್ತಾರೇ ಪುನಃ ಪಾಶ್ಚಾತ್ಯರು ನಮ್ಮ ಬಗ್ಗೆ ಬರೆದಿಟ್ಟ ಗ್ರಂಥಗಳನ್ನಲ್ಲ. ಹಾಗಾಗೇ ಇವರ ಅನಿಸಿಕೆಗಳು ಹೆಚ್ಚು ಪ್ರಾಮಾಣಿಕವಾಗುತ್ತವೆ. ಸಾಮಾನ್ಯರ ಅನುಭವಕ್ಕೆ ಹತ್ತಿರವಾಗುತ್ತವೆ.
ನಾವು ನಮ್ಮ ಸಂಸ್ಕೃತಿಯ ಬಗ್ಗೆ, ಸಮಾಜದ ಬಗ್ಗೆ ಓದುತ್ತಿರುವ, ಕೇಳುತ್ತಿರುವ ಅನೇಕ ಸಂಗತಿಗಳು ತಪ್ಪು ತಿಳುವಳಿಕೆಂದ ಕೂಡಿವೆ ಎಂಬುದು ಬಾಲಗಂಗಾಧರರ ಖಚಿತ ಅಭಿಪ್ರಾಯ. ನೂರಾರು ವರ್ಷಗಳಿಂದ ಈ ತಪ್ಪು ತಿಳುವಳಿಕೆಯನ್ನೇ ನಾವು ಸತ್ಯ ಎಂದು ನಂಬಿಕೊಂಡಿದ್ದೇವೆ. ಹಾಗಾಗಿ ನಿಜವಾದ ಸತ್ಯ ಎದುರಿಗೆ ಬಂದರೂ ಅದನ್ನು ಸ್ವೀಕರಿಸಲು ನಮ್ಮ ಸಿದ್ಧನಂಬಿಕೆ ಕಾಲಾವಕಾಶ ಬೇಡುತ್ತದೆ. ಈ ತಪ್ಪು ತಿಳುವಳಿಕೆ ನಮಗೆ ಯುರೋಪಿಯನ್ನರಿಂದ ಬಂದದ್ದು. ಇಂಗ್ಲೀಶರು ಭಾರತಕ್ಕೆ ಬಂದಾಗ ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳೆಲ್ಲ ಅವರಿಗೆ ವಿಚಿತ್ರವಾಗಿ ಕಾಣಿಸತೊಡಗಿದವು. ಈ ದೇಶ ಏನೆಂಬುದೇ ಅವರಿಗೆ ಅರ್ಥವಾಗಲಿಲ್ಲ. ಇದನ್ನು ಅರ್ಥ ಮಾಡಿಸದಿದ್ದರೆ ಅವರಿಗೆ ಇಲ್ಲಿ ವಸಾಹತು ಮುಂದುವರಿಸುವುದು ಕಷ್ಟ. ಹಾಗಾಗಿ ಭಾರತಕ್ಕೆ ಬಂದು ಸಮಾಜ ವಿಜ್ನಾನ ಕಟ್ಟುವ ಕೆಲಸಕ್ಕೆ ಕೈಹಾಕಿದರು. ಈ ಸಮಾಜ ವಿಜ್ನಾನದ ಮೂಲಕ ಭಾರತೀಯರಿಗೆ ನೀವು ಇಂಥವರು ಎಂದು ತೋರಿಸಿ ಕೊಡುವ ಪ್ರಯತ್ನ ಅವರದ್ದು.
ಆಗ ತಮ್ಮದೇ ಸಿದ್ಧ ಮಾದರಿಯಲ್ಲಿ ಅಂದರೆ ಕ್ರಿಶ್ಚಿಯಾನಿಟಿಯ ಚೌಕಟ್ಟಿನಲ್ಲಿ ಭಾರತವನ್ನು ನೋಡುತ್ತ ಹೋದರು. ಇದು ಅವರ ಧೂರ್ತತನ ಅನ್ನುವುದು ಬೇಡ, ಪ್ರಾಮಾಣಿಕವಾಗೇ ಮಾಡಿರಬಹುದು. ಅವರು ಭಾರತವನ್ನು ಈ ರೀತಿ ನೋಡದೇ ಬೇರೆ ರೀತಿಯಲ್ಲಿ ನೋಡಲು ಸಾಧ್ಯವೂ ಇರಲಿಲ್ಲ. ಪ್ರಾಮಾಣಿಕವಾಗೇ ಸಮಾಜ ವಿಜ್ನಾನ ಬರೆದರು. ಆದರೆ ಏನಾಯಿತು? ಕ್ರಿಶ್ಚಿಯಾನಿಟಿಯ ಮಿತಿ ಭಾರತೀಯ ಸಂಸ್ಕೃತಿಯ ಮಿತಿಯಾಗಿ ಮಾರ್ಪಾಡಾಯಿತು. ಭಾರತೀಯ ಸಂಪ್ರದಾಯಗಳು ‘”ಹಿಂದೂ ರಿಲಿಜನ್” ಎಂದು ಕರೆಯಲ್ಪಟ್ಟವು. ಯಾವಾಗ ಭಾರತಕ್ಕೆ ರಿಲಿಜನ್‌ನ ಲೇಪ ಬಿತ್ತೋ ಆಗಲೇ ಭಾರತೀಯ ಸಂಸ್ಕೃತಿಯ ಅರ್ಥವೂ ವ್ಯತ್ಯಾಸವಾಯಿತು. ಇದೇ ಮುಂದೆ ನಮ್ಮ ಸಂಸ್ಕೃತಿ, ಸಮಾಜ, ಆಡಳಿತ, ರಾಜಕೀಯ, ಸಂಪ್ರದಾಯ, ಧರ್ಮ – ಎಲ್ಲ ರಂಗದಲ್ಲೂ ಗೊಂದಲ ಸ್ರುಷ್ಟಿಯಾಗಲು ಕಾರಣವಾತು. ಇದೇ ನಂಬಿಕೆಯಲ್ಲಿ ನಾವು ಎಷ್ಟೇ ಪ್ರಯತ್ನಿಸಿದರೂ ಸಮಸ್ಯೆಗಳು ದೊಡ್ಡ ಸಮಸ್ಯೆಗಳಾಗುತ್ತವೆಯೇ ವಿನಃ ಪರಿಹಾರ ಕಾಣಲಾರದು.
ಇಂದಿಗೂ ಕೂಡ ಭಾರತದ ಬಗ್ಗೆ, ಭಾರತೀಯ ಸಂಸ್ಕೃತಿಯ ಬಗ್ಗೆ ಮಾತನಾಡುವ ಹಾಗೂ ಬರೆಯುವ ಅಪ್ಪಟ ಭಾರತೀಯ ಚಿಂತಕರಿಗೂ ಕೂಡಾ ಆಧಾರ ಯಾವುದು ಗೊತ್ತಾ? ಪಾಶ್ಚಾತ್ಯರು ನಮ್ಮ ಕುರಿತು ಬರೆದಿಟ್ಟ ಬೃಹತ್ ಗ್ರಂಥಗಳೇ! ಹಾಗಿದ್ದಾಗ ಇಲ್ಲಿ ಬೇರೆ ರೀತಿಯ ತಿಳುವಳಿಕೆ ಅರಳಲು ಹೇಗೆ ಸಾಧ್ಯ? ಮನುಷ್ಯ ಹೇಗೆ ಬಾಳಿ ಬದುಕಿ ಬಂದ ಎಂಬ ಅನುಭವದ ಕಥೆ ನಮಗೆ ಸುಳ್ಳು ಅನಿಸುತ್ತದೆ. ಮನುಷ್ಯನ ಬಗ್ಗೆ ಪ್ರಜ್ನಾಪೂರಕವಾಗಿ ಚಿಂತಿಸಿ ಬರೆದ ಕಥೆ ಸತ್ಯ ಅನಿಸುತ್ತದೆ. ವಿಪರ್ಯಾಸ ನೋಡಿ! ನಾವು ನಮ್ಮ ಸಂಸ್ಕೃತಿ ಅರಿಯುವಲ್ಲಿ ಕೂಡಾ ಈ ಅಂತರ ಇದೆ.
ಭಾರತದ ಪ್ರತಿಯೊಂದು ಸಂಗತಿಯ ಮೇಲೂ ಈ ತಪ್ಪು ತಿಳುವಳಿಕೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಬಾಲಗಂಗಾಧರ ಸಚಿತ್ರವಾಗಿ ತಿಳಿಸುತ್ತಾರೆ. ಅದನ್ನೇ ಪ್ರತಿವಾರ ನಾವು ಸರಳವಾಗಿ ಹಂಚಿಕೊಳ್ಳುವಾ.
“ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಬೆಳೆದುಬಂದ ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿಯ ನಿಜ ಅರ್ಥವಾಗಲು ಸಾಧ್ಯವಿಲ್ಲ. ಅಂತೆಯೇ ಭಾರತೀಯರಿಗೆ ಪಾಶ್ಚಾತ್ಯ ಸಂಸ್ಕೃತಿ ಕೂಡಾ. ಪಾಶ್ಚಾತ್ಯ ವಿದ್ವಾಂಸರು ಭಾರತದ ಕುರಿತಾದ ತಮ್ಮ ಅನುಭವಗಳನ್ನು ಹೇರಳವಾಗಿ ದಾಖಲಿಸಿದ್ದಾರೆ. ನಾವು ಅವರ ಅನುಭವಗಳನ್ನೇ ನಮ್ಮ ನಿಜ ಎಂದು ನಂಬಿದ್ದೇವೆ. ಇಂದಿನ ಭಾರತೀಯ ಬುದ್ದುಜೀವಿಗಳು ಕೂಡ ಅದೇ ತಪ್ಪು ತಿಳುವಳಿಕೆಯಲ್ಲಿದ್ದಾರೆ. ನಮಗೆ ನಮ್ಮ ಸಂಸ್ಕೃತಿಯ ಸತ್ಯ ಗೊತ್ತಾಗಬೇಕು – ಪ್ರೊ. ಬಾಲಗಂಗಾಧರ“





ಒಳ್ಳೆ ಪ್ರಯತ್ನ , ಒಳ್ಳೆದಾಗಲಿ. ದಯವಿಟ್ಟು ಇಲ್ಲಾದರೂ ಪೂರ್ವಾಗ್ರಹ (ಪಾಶ್ಚಿಮಾಗ್ರಹ???) ಬಿಟ್ಟು ವರ್ತಿಸೋಣ .!!!! ಚರ್ಚಿಸೋಣ,ಹಾಗು ತರ್ಕಿಸೋಣ.
ಈ ವಾದದಿಂದ ಬಲಪಂಥೀಯರಿಗೆ ಅನುಕೂಲವಾಗುವ ಅಪಾಯವಿದೆ 🙂
ವಿಶ್ವನಾಥ
ಹೊಸ ಅಂಕಣಕ್ಕೆ ಸ್ವಾಗತ :). ಏಳಬಹುದಾದ ಸಂದೇಹ/ ಪ್ರಶ್ನೆಗಳಿಗೆ ಲೇಖಕರು ತಾಳ್ಮೆಯಿಂದ ಉತ್ತರ ಕೊಡಲೆಂಬ ಕೋರಿಕೆ.
ಈ ಲೇಖನ ಸರಣಿಗೆ ಸ್ವಾಗತ, ಲೇಖನದ ವಿಚಾರಗಳು ಬರುವ ಮುಂಚೆಯೇ ವಿಶ್ವನಾಥರವರು “ಈ ವಾದದಿಂದ ಬಲಪಂಥೀಯರಿಗೆ ಅನುಕೂಲವಾಗುವ ಅಪಾಯವಿದೆ ” ಎನ್ನುತ್ತಾರೆ. ಈ ಪೂರ್ವಾಗ್ರಹ ಏಕೆ? . ಹಾಗೆ ನೋಡಿದ್ರೆ, ಬಾಲಗಂಗಾಧರ ವಿಚಾರವನ್ನು ನಾನು ಓದಿದ ಮಿತಿಯಲ್ಲಿ ಹೇಳುವುದಾರೆ, ಅವರ ವಿಚಾರ ಬಲಪಂಥೀಯರ ಅನೇಕ ಪೂರ್ವಾಗ್ರಹೀತಗಳನ್ನು ತಳ್ಳಿಹಾಕುತ್ತದೆ.
ಇರಲಿ, ವಿಜಯ್ ಪೈ ಹೇಳಿದಂತೆ, ಲೇಖಕರು “ಏಳಬಹುದಾದ ಸಂದೇಹ/ ಪ್ರಶ್ನೆಗಳಿಗೆ ಲೇಖಕರು ತಾಳ್ಮೆಯಿಂದ ಉತ್ತರ” ಕೊಡಲಿ. ಹಾಗೆಯೇ ಓದುಗರಿಗೂ ಹೇಳುವುದನ್ನು ತಾಳ್ಮೆಯಿಂದ ಕೇಳಲಿ, ಪ್ರತಿಕ್ರಿಯಿಸಲಿ.
ಮಹೇಶ
ಮೊನ್ನೆ ನೋರ್ವೇಯಲ್ಲಿ ೮೭ ಮಂದಿ ಹದಿಹರೆಯದವರನ್ನು ಗುಂಡಿಕ್ಕಿ ಕೊಂದವನು ಬರೆದ ಪ್ರಬಂಧ. ಅದರಲ್ಲಿ ಆಟ ಭಾರತ ಹಾಗು ಹಿಂದೂಗಳ ಬಗ್ಗೆ ಬರೆದ ಅನಿಸಿಕೆ ಹಾಗು ಮಾಹಿತಿ ಓದತಕ್ಕದ್ದು. ಅತಿ-ಬಲ-ಪಂಥೀಯತೆ ಏನು ಮಾಡಬಲ್ಲುದು ನೋಡಿ!
Click to access 2083+-+A+European+Declaration+of+Independence.pdf
“ಪಾಶ್ಚಾತ್ಯ ವಿದ್ವಾಂಸರು ಭಾರತದ ಕುರಿತಾದ ತಮ್ಮ ಅನುಭವಗಳನ್ನು ಹೇರಳವಾಗಿ ದಾಖಲಿಸಿದ್ದಾರೆ. ನಾವು ಅವರ ಅನುಭವಗಳನ್ನೇ ನಮ್ಮ ನಿಜ ಎಂದು ನಂಬಿದ್ದೇವೆ. ”
ಇಷ್ಟನ್ನು ತೆಗೆದುಕೊಂಡು ವಿಶ್ಲೇಷಿಸುವುದಾದರೆ; ಪಾಶ್ಚಾತ್ಯ ವಿದ್ವಾಂಸರ ಪ್ರಕಾರ ಆರ್ಯರು ಕುದುರೆಯನ್ನೇಱಿ ಬಂದವರು, ಸ್ಥಳೀಯ ದ್ರಾವಿಡ ಜನಾಂಗಕ್ಕೆ ಸೇರಿದ ಮೂಲನಿವಾಸಿಗಳನ್ನು ದಕ್ಷಿಣಕ್ಕೆ ಅಟ್ಟಿದವರು. ಆದರೆ ಇಂತಿಪ್ಪ ಪಾಶ್ಚಾತ್ಯ ವಿದ್ವಾಂಸರೇ ಹೇೞುತ್ತಾರೆ – ಆರ್ಯರು ಬುಡಕಟ್ಟು ವರ್ಗಕ್ಕೆ ಸೇರಿದವರು; ಅವರ ಸಂಸ್ಕೃತಿಯೆಂಬುದು ಬಹಳ ಕೆಳಮಟ್ಟದಲ್ಲಿತ್ತು ಎಂಬುದಾಗಿ.
ಪಾಶ್ಚಾತ್ಯ ವಿದ್ವಾಂಸರ ನೆಗೞ್ತೆಗಳಿಂದ ಸ್ಫೂರ್ತಿಗೊಂಡ ಶ್ರೀಪಾದ ಅಮೃತ ಡಾಂಗೆಯವರ ‘ಸಂಘಜೀವನದಿಂದ ಗುಲಾಮಗಿರಿಯತ್ತ’ ಎಂಬ ಪುಸ್ತಕದಲ್ಲಿಯೂ ಆರ್ಯರ ಜೀವನ ವಿಧಾನ ದುಡಿ-ತಿನ್ನು-ಉಣ್ಣು-ಕೂಡು ಎನ್ನುವಂಥ ಜೀವನವೇ ಆಗಿತ್ತಂತೆ, ಯಜ್ಞವೇ ಅವರ ಉತ್ಪಾದನ ವಿಧಾನವಾಗಿತ್ತಂತೆ. [ಆದರೆ ಯಜ್ಞ ಆರಾಧನಾ ವಿಧಾನವಾಗಿ ನಮಗೆ ಪರಿಚಿತವಾಗಿದೆ, ಉತ್ಪಾದನ ವಿಧಾನವಾಗಿ ಅಷ್ಟರ ಮಟ್ಟಿಗೆ ಪರಿಚಿತವಲ್ಲ.] ಅಲ್ಲಿ ಇರುವುದು ಹಾಲಿನ ಉತ್ಪಾದನೆ ಮತ್ತು ದನಗಳ ಸಂಖ್ಯೆಗಳ ವರ್ಧನೆ ಮಾತ್ರವಂತೆ. ದನಗಳನ್ನು ಸಾಕಲು ಬೇಕಾಗುವ ಸ್ಥಳವನ್ನು ಪ್ರತಿಯೊಬ್ಬನೂ ಆಕ್ರಮಿಸಿಕೊಳ್ಳಬೇಕಂತೆ.
ಸಹಜವಾಗಿ ಮೂಡುವ ಸಂದೇಹವೆಂದರೆ ಕುದುರೆಗಳ ವರ್ಧನೆ ಆಗುತ್ತಿರಲಿಲ್ಲವೇ? ಎಷ್ಟಾದರೂ ಕುದುರೆಯನ್ನೇಱಿ ಬಂದವರು ಕುದುರೆಗಳ ವರ್ಧನೆಯ ಮಾಡದಿದ್ದರೇ? ನಿಜವಾಗಿ ಆರ್ಯರು ಕುದುರೆಯನ್ನೇಱಿ ಬಂದವರು ಎನ್ನಲು ಸಿಕ್ಕುವ ಪುರಾವೆಗಳಾದರೂ ಏನು? [ಹೊಱಗಿನಿಂದ ಬಂದವರೆಂದು ವಾದಕ್ಕಾಗಿ ಒಪ್ಪುವುದಿದ್ದರೂ]
ಇತ್ತೀಚೆಗೆ ಲೋಕನಾಥನ್ ಎಂಬವರು ನಡೆಸುತ್ತಿರುವ ಅಧ್ಯಯನದಂತೆ ತಮಿೞು ಭಾರತ ಮೂಲದ ಭಾಷೆಯಲ್ಲ, ಅದು ಸುಮೇರಿಯ ಮೂಲದ ಭಾಷೆ. ಸುಮೇರಿಯದ ಇಂದಿನ ಭಾಷೆಗಳೊಂದಿಗೆ ಪ್ರಾಚೀನ ತಮಿೞಿಗೆ ಹೋಲಿಕೆಯಿದೆ. ಕುಮಾರಿ ಖಂಡದ ಕುಱಿತಾದ ಈಗಲೂ ತಮಿೞಿಗರು ಸಾಂಸ್ಕೃತಿಕ ನೆನಪು ಉೞಿಸಿಕೊಂಡಿರುವವರು. ಶ್ರೀ ಲೋಕನಾಥನ್ ಹೇೞುವಂತೆ ಕುಮಾರಿ ಖಂಡವೆಂದರೆ ಸುಮೇರಿಯವೇ ಆಗಿದೆ.
ಕೃಷ್ಣಪ್ರಕಾಶ ಬೊಳುಂಬು ಅವರೆ,
“ಪಾಶ್ಚಾತ್ಯ ವಿದ್ವಾಂಸರು ಭಾರತದ ಕುರಿತಾದ ತಮ್ಮ ಅನುಭವಗಳನ್ನು ಹೇರಳವಾಗಿ ದಾಖಲಿಸಿದ್ದಾರೆ”
ಈ ಸಾಲನ್ನು ಹೀಗೆ ಗ್ರಹಿಸ ಬೇಕು ಎನಿಸುತ್ತದೆ: ಭಾರತೀಯ ಸಂಸ್ಕೃತಿಯ ಬಗೆಗೆ ಪಾಶ್ಚಾತ್ಯ ವಿದ್ವಾಂಸರು ನೀಡಿದ ವಿವರಣೆಗಳು ಭಾರತದ ವಾಸ್ತವದ ಚಿತ್ರಣವಲ್ಲ. ಪಾಶ್ಚಾತ್ಯ ವಿದ್ವಾಂಸರು ಅವರ ಸಂಸ್ಕೃತಿಯ ಅನುಭವದಿಂದ ಬರೆದದ್ದು, ಎಂದು ಉದಾಹರಣೆಗೆ, ಉತ್ತರ ಭಾರತದ ಜನ ಖಾರವನ್ನು ಕಡಿಮೆ ತಿನ್ನುತ್ತಾರೆ ಎಂದು ನಾನು ಹೇಳಿದ್ರೆ, ಅದು ನನ್ನ ಸಂಸ್ಕೃತಿಯ ಹಿನ್ನಲೆಯಲ್ಲಿ ಹೇಳುತ್ತಿದ್ದೇನೆ ಎಂದಾಗುತ್ತದೆ ವಿನಃ ಉತ್ತರ ಭಾರತದ ಜನ ಅವರ ಬಗ್ಗೆ ಹಾಗೆ ಭಾವಿಸಿಕೊಳ್ಳುತ್ತಾರೆ ಎಂದಲ್ಲಾ. ಅಂದ್ರೆ ಒಂದು ಸಂಸ್ಕೃತಿಯ ಅನುಭವ ಇನ್ನೊಂದು ಸಂಸ್ಕೃತಿಯ ವಾಸ್ತವದ ಚಿತ್ರಣವೆಂದೆನು ಅಲ್ಲಾ ಎಂದಾಗುತ್ತದೆ.