ವಿಷಯದ ವಿವರಗಳಿಗೆ ದಾಟಿರಿ

ಜುಲೈ 14, 2011

3

ನಾಯಿ ಸನ್ಯಾಸಿಗೆ ನೀಡಿದ ಶಿಕ್ಷೆ…!

‍ನಿಲುಮೆ ಮೂಲಕ

– ಗೋವಿಂದ ರಾವ್ ವಿ ಅಡಮನೆ

ಇಂದಿನ ಮಠಾಧಿಪತಿಗಳೂ ಅಸಂಖ್ಯ ‘ಜಗದ್ಗುರು’ಗಳೂ ‘ಧರ್ಮ’ ಪ್ರಚಾರಕರೂ ಮುಂದಿನ ಜನ್ಮದಲ್ಲಿ ಏನಾಗುತ್ತಾರೆ? ಈ ಪ್ರಶ್ನೆಗೆ ಉತ್ತರ ಇತ್ತೀಚೆಗೆ ನಾನು ಓದಿದ ಕಥೆಯಲ್ಲಿ ಹುದುಗಿದೆ. ಅದು ಇಂತಿದೆ:

ನಾಯಿಯೊಂದು ಶ್ರೀರಾಮಚಂದ್ರನ ಹತ್ತಿರ ಸನ್ಯಾಸಿಯೊಬ್ಬ ತನಗೆ ಕಲ್ಲು ಹೊಡೆದು ಹಿಂಸಿಸಿದ್ದಾನೆ ಎಂದು ದೂರು ಕೊಟ್ಟಿತು. ಶ್ರೀರಾಮಚಂದ್ರನ ಆಜ್ಞೆಯಂತೆ ಆ ಸನ್ಯಾಸಿಯನ್ನು ರಾಜಭಟರು ಹಿಡಿದು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ನಾಯಿಗೆ ಕಲ್ಲು ಹೊಡೆದದ್ದು ನಿಜವೆಂದು ಸನ್ಯಾಸಿ ಒಪ್ಪಿಕೊಂಡ. ನಾಯಿ ಅಗಲ ಕಿರಿದಾದ ಕಾಲುದಾರಿಯಲ್ಲಿ ದಾರಿಗೆ ಅಡ್ಡವಾಗಿ ಮಲಗಿತ್ತೆಂದೂ ಎಷ್ಟೇ ಗದರಿಸಿದರೂ ಎದ್ದು ತನಗೆ ದಾರಿ ಬಿಡದೇ ಇದ್ದದ್ದರಿಂದ ಕಲ್ಲುಹೊಡೆದು ಎಬ್ಬಿಸಬೇಕಾಯಿತೆಂದೂ ಆತ ಹೇಳಿದ.

ಅಹಿಂಸೆಯ ದೀಕ್ಷೆ ಪಡೆದಿರುವ ಸನ್ಯಾಸಿ ನಾಯಿಗೆ ಕಲ್ಲು ಹೊಡೆದದ್ದು ಅಕ್ಷಮ್ಯ ಅಪರಾಧವೆಂದು ತೀರ್ಪು ನೀಡಿದ ಶ್ರೀರಾಮಚಂದ್ರ ಸನ್ಯಾಸಿಗೆ ಏನು ಶಿಕ್ಷೆ ನೀಡಬೇಕು ಎಂದು ಸಭಾಸದರನ್ನು ಕೇಳಲಾಗಿ ಅವರೆಲ್ಲರೂ ಒಮ್ಮತದಿಂದ ಫಿರ್ಯಾದುದಾರ ನಾಯಿಯೇ ಶಿಕ್ಷೆ ಏನಿರಬೇಕು ಎಂಬುದನ್ನು ತಿಳಿಸಲಿ ಎಂದರು. “ಇಲ್ಲಿಂದ ಒಂದುನೂರು ಹರದಾರಿ ದೂರದಲ್ಲಿ ಸನ್ಯಾಸಿಗಳು ವಾಸವಿರುವ ಆಶ್ರಮ ಒಂದಿದೆ. ಅದರ ಮುಖ್ಯಸ್ತ ದೈವಾಧೀನನಾಗಿ ಎರಡು ವರ್ಷಗಳು ಕಳೆದರೂ ಬೇರೊಬ್ಬ ಮುಖ್ಯಸ್ಥ ನೇಮಕಗೊಂಡಿಲ್ಲ. ಈ ಸನ್ಯಾಸಿಯನ್ನು ಆ ಆಶ್ರಮದ ಮುಖ್ಯಸ್ಥನನ್ನಾಗಿ ನೇಮಿಸಿ” ಎಂದಿತು ನಾಯಿ. ಎಲ್ಲರೂ ಆಶ್ಚರ್ಯಚಕಿತರಾಗಿ ಇದೂ ಒಂದು ಶಿಕ್ಷೆಯೇ ಎಂದು ಕೇಳಲಾಗಿ ಅದು “ಎರಡು ವರ್ಷದ ಹಿಂದೆ ತೀರಿಕೊಂಡ ಮುಖ್ಯಸ್ಥ ನಾನೇ. ಮುಖ್ಯಸ್ಥನಾಗಿದ್ದಾಗ ಐಷಾರಾಮೀ ಭೋಗ ಜೀವನ ನಡೆಸಿದ್ದರಿಂದ ಈ ಜನ್ಮದಲ್ಲಿ ನಾಯಿಯಾಗಿದ್ದೇನೆ. ಈ ಸನ್ಯಾಸಿಗೂ ಇದೇ ಗತಿಯಾಗಲಿ ಎಂದೇ ಈ ಮನವಿ” ಎಂದು ಹೇಳಿತು.

3 ಟಿಪ್ಪಣಿಗಳು Post a comment
  1. vishwanath mysore's avatar
    vishwanath mysore
    ಜುಲೈ 14 2011

    ಒಳ್ಳೆಯ ಕಥೆ. ಚೆನ್ನಾಗಿದೆ. ಧನ್ಯವಾದಗಳು

    ಉತ್ತರ
  2. makara's avatar
    makara
    ಜುಲೈ 15 2011

    ಈ ಕಥೆಯನ್ನು ಬಹಳ ಹಿಂದೆ ವಿವೇಕ ಸಂಪದದಲ್ಲಿ ಓದಿದ್ದೆ. ಅದರಿಂದ ಸ್ಪೂರ್ತಿಗೊಂಡು ನಮ್ಮ ಸ್ನೇಹಿತರಿಗೆ ಪತ್ರವನ್ನು ಬರೆದಿದ್ದೆ. ಅದನ್ನು ಇಲ್ಲಿ ಕೊಡುತ್ತಿದ್ದೇನೆ. ಓದಿ ಆನಂದಿಸಿ. ಬೀದಿನಾಯಿಗಳು ಮತ್ತು ಭ್ರಷ್ಟಾಚಾರವೂ

    ಆತ್ಮೀಯರೇ,
    ಏನಿದು ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಎತ್ತಣಿಂದ-ಎತ್ತ ಸಂಭಂದ ಎಂದು ಕೊಂಡಿರಾ? ಖಂಡಿತಾ ಸಂಭಂದ ಇದೆ ಅದಕ್ಕೇ ಇಬ್ಬರಿಗೂ ಗೋಕುಲಾಷ್ಟಮಿಯ ದಿನ ರಜೆ ಇರುತ್ತದೆ. ಇರಲಿ, ಇತ್ತೀಚೆಗೆ ಎಲ್ಲಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಹಲವಾರು ನಾಯಿಗಳು ಹುಚ್ಚಾಗಿ ಜನರನ್ನು ಯಾವ ಪರಿ ಕಡಿದಿವೆಯೆಂದರೆ ಆಂಧ್ರದ ವಿಶಾಖಪಟ್ಣಂ ಜಿಲ್ಲೆಯಲ್ಲಿ ಹುಚ್ಚು ನಾಯಿ ಕಡಿತಕ್ಕೆ ಬೇಕಾಗುವ ಪ್ರತಿನಿರೋಧಕ- Rabies Vaccine ಇಲ್ಲದೇ ಬಹಳ ಜನ ರೇಬಿಸ್ ರೋಗದಿಂದ ಸಾಯುವಂತಾಯಿತು. ಎಷ್ಟೋ ಬಾರಿ ಈ ಬೀದಿ ನಾಯಿಗಳನ್ನು ಮುನಿಸಿಪಾಲಿಟಿಯವರು ಹಿಡಿದುಕೊಂಡು ಹೋಗಿ ಅವುಗಳಿಗೆ ಸಂತಾನ-ಹರಣ ಶಸ್ತ್ರಚಿಕಿತ್ಸೆ ಮಾಡಿದರೂ ಕೂಡ ಅವುಗಳ ಸಂಖ್ಯೆ ನಿಯಂತ್ರಣದಲ್ಲಿರದೇ ಅವುಗಳ ಸಂತತಿ ಹೆಚ್ಚುತ್ತಲೇ ಇರುವುದನ್ನು ಕಂಡು ಅದಕ್ಕೆ ಕಾರಣಗಳನ್ನು ಅರಸುತ್ತಾ ಹೊರಟವನಿಗೆ; ಸಮಸ್ಯೆಗೆ ಪರಿಹಾರ ರೂಪದಲ್ಲಿ ಹೊಳದದ್ದೇ ರಾಮಾಯಣದ ಈ ಕಥೆ.
    ಒಮ್ಮೆ ಬೀದಿ ನಾಯಿಯೊಂದು ರಾಮನ ಅರಮನೆಯ ಮುಂದೆ ಕಟ್ಟಿದ್ದ ನ್ಯಾಯದ ಘಂಟೆಯನ್ನು ಬಾರಿಸಿತಂತೆ. ಆಗ ಮಂತ್ರಿ-ಮಾಗಧರೊಂದಿಗೆ ಒಡ್ಡೋಲಗದಲ್ಲಿ ಕುಳಿತಿದ್ದ ರಾಮ ವಿಚಾರ ತಿಳಿದು ಆ ನಾಯಿಯನ್ನು ತನ್ನ ಆಸ್ಥಾನಕ್ಕೆ ಕರೆಸಿ, ಅದು ನ್ಯಾಯದ ಘಂಟೆಯನ್ನು ಬಾರಿಸಿದ ಕಾರಣವನ್ನು ಕೇಳಿದ. ಅದಕ್ಕೆ ಆ ನಾಯಿ, “ಒಬ್ಬ ಬ್ರಾಹ್ಮಣ ನನ್ನನ್ನು ಅನ್ಯಾಯವಾಗಿ ಹೊಡೆದಿದ್ದಾನೆ, ಅದರಿಂದ ನೊಂದಿರುವ ನನಗೆ ನೀವು ನ್ಯಾಯ ಒದಗಿಸಿಕೊಡಬೇಕು”. ನ್ಯಾಯ ಪರಿಪಾಲಕನಾದ ರಾಮ, ಸಂಬಂಧಿಸಿದ ಬ್ರಾಹ್ಮಣನನ್ನು ಕರೆಸಿ ವಿಚಾರಿಸಿದಾಗ ಅವನು ನಾಯಿಗೆ ಅನ್ಯಾಯವಾಗಿ ಹೊಡೆದದ್ದು ಸಾಬೀತಾಯಿತು. ಆಗ ರಾಮ ಆ ಬ್ರಾಹ್ಮಣನಿಗೆ ಏನು ಶಿಕ್ಷೆ ಕೊಟ್ಟರೆ ನ್ಯಾಯ ಒದಗಿಸಿದಂತಾಗುತ್ತದೆಂದು ಆ ನಾಯಿಯನ್ನೇ ಕೇಳಿದ. ಆಗ ಆ ನಾಯಿ, “ಮಹಾಸ್ವಾಮಿ, ನೀವು ಆ ಬ್ರಾಹ್ಮಣನನ್ನು ಮಠವೊಂದರ ಮೇಲ್ವಿಚಾರಕನನ್ನಾಗಿ ನೇಮಕ ಮಾಡಿದರೆ ನನಗೆ ನ್ಯಾಯ ಕೊಟ್ಟಂತೆ ಆಗುತ್ತದೆ” ಎಂದು ಹೇಳಿತು. ಅದನ್ನು ಕೇಳಿ ಅಲ್ಲಿದ್ದ ಸಭಿಕರಿಗೆಲ್ಲಾ ಆಶ್ಚರ್ಯವಾಯಿತು, ಏನು ತನ್ನನ್ನು ಅನ್ಯಾಯವಾಗಿ ಹೊಡೆದವನಿಗೆ ಮಠದ ಅಧಿಕಾರಿಯಾಗುವ ಶಿಕ್ಷೆಯೇ? ಎಂದು ನಾಯಿಯೆಡೆಗೆ ಪ್ರಶ್ನಾರ್ಥಕವಾಗಿ ನೋಡಿದರು. ಆಗ ನಾಯಿ ಹೇಳಿತು, “ಮಹನೀಯರೇ, ನಾನು ಕೂಡ ಹಿಂದಿನ ಜನ್ಮದಲ್ಲಿ ಮಠಾಧಿಪತಿಯಾಗಿದ್ದೆ, ಆಗ ಸಾರ್ವಜನಿಕರು ಭಕ್ತಿಯಿಂದ ಕೊಟ್ಟಿದ್ದ ಕಾಣಿಕೆಗಳನ್ನು ನನ್ನ ಸ್ವಂತಕ್ಕೆ ಬಳಸಿಕೊಂಡಿದ್ದರ ಫಲವಾಗಿ ನಾನೀಗ ಬೀದಿ ನಾಯಿಯಾಗಿ ಹುಟ್ಟಿದ್ದೇನೆ ಮತ್ತು ಈ ಯಾತನೆಯನ್ನು ಅನುಭವಿಸುವ ಫಲ ನನ್ನದಾಯಿತು, ಆದ್ದರಿಂದ ಆ ಬ್ರಾಹ್ಮಣನನ್ನು ಮಠಾಧೀಶನನ್ನಾಗಿ ಮಾಡಿದರೆ ಅವನು ಕೂಡ ಸಾರ್ವಜನಿಕರ ಹಣವನ್ನು ಕಬಳಿಸಿ ನಾಯಿಯ ಜನ್ಮವೆತ್ತಿ ನನ್ನಂತೆ ಕಷ್ಟ ಪಡುವಂತಾಗುತ್ತಾನೆ”. ಅದರ ಮನವಿಯನ್ನು ಒಪ್ಪಿದ ರಾಮ ನಾಯಿಯ ಇಚ್ಛೆಯಂತೆ ಆ ಬ್ರಾಹ್ಮಣನನ್ನು ಮಠಾಧೀಶನಾಗಿ ನೇಮಿಸಿದ; ಅದರಿಂದಾಗಿ ಅವನು ಮುಂದಿನ ಜನ್ಮದಲ್ಲಿ ನಾಯಿಯಾಗಿ ಜನ್ಮತೆಳೆದ. ಬಹುಶಃ ಇದೇ ರೀತಿ ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆಯಲು ವಿಪುಲ ಅವಕಾಶವಿರುವ ಈ ಕಲಿಯುಗದಲ್ಲಿ ಹೀಗೆ ತಿಂದು ತೇಗುವವರ ಸಂಖ್ಯೆ ಹೆಚ್ಚಾಗಿ ಅವರೆಲ್ಲಾ ಕಾಲಕ್ರಮೇಣ ಬೀದಿನಾಯಿಗಳಾಗಿ ನಮ್ಮ ಭಾರತದಲ್ಲಿ ಹುಟ್ಟಿರಬೇಕು. ಅದರಲ್ಲಿ ರಾಜಕೀಯ ನಾಯಕರಂತೆ ಕಚ್ಚಾಡುತ್ತಿದ್ದವುಗಳು ಹುಚ್ಚು ನಾಯಿಗಳಾಗಿಯೂ, ಅವರ ಅನುಯಾಯಿಗಳಾಗಿದ್ದವರು ಕಾಲ ಮಹಿಮೆಯಿಂದ ಅನುನಾಯಿಗಳಾಗಿ ಹುಟ್ಟಿರಬೇಕು. ಸಾರ್ವಜನಿಕರ ಸ್ವತ್ತನ್ನು ತಿಂದರೂ ಪರೋಪಕಾರಿ ಕೆಲಸ ಮಾಡಿದವರು ಬಹುಶಃ ಅಮೇರಿಕಾ-ಯೂರೋಪುಗಳಲ್ಲಿ ನಾಯಿಗಳಾಗಿ ಹುಟ್ಟಿರಬೇಕು ಏಕೆಂದರೆ ಅಲ್ಲಿ ಜನರಿಗಿಂತ ನಾಯಿ-ಪಾಡೇ ಚೆನ್ನಾಗಿರುತ್ತದೆ.

    ಉತ್ತರ
  3. ರಾಮಕೃಷ್ಣ ನಿಡಗುಂದಿ ಹುಬ್ಬಳ್ಳಿ.'s avatar
    ರಾಮಕೃಷ್ಣ ನಿಡಗುಂದಿ ಹುಬ್ಬಳ್ಳಿ.
    ಜುಲೈ 15 2011

    ಐಷಾರಾಮೀ ಭೋಗ ಜೀವನದ ಪರಿಣಾಮದ ಬಗ್ಗೆ ಚನ್ನಾಗಿ ಬರೆದಿದ್ದೀರ. (ರಾಮಕೃಷ್ಣ ನಿಡಗುಂದಿ)

    ಉತ್ತರ

Leave a reply to vishwanath mysore ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments