ಕನ್ನಡಪ್ರೇಮದ ಕುರಿತು ಒಂಚೂರು…
ನಾನು ಕನ್ನಡಿಗ ಅಂತ ಅನ್ನುವಾಗ ನನಗೆ ಚೂರೂ ಹೆಮ್ಮೆಯೇ ಆಗುತ್ತಿದ್ದಿರಲಿಲ್ಲ.
ಹೌದು. ಇಸ್ಕೂಲು, ಹೈಸ್ಕೂಲು ಓದುವಾಗಲೆಲ್ಲ ’ನಾನು ಕನ್ನಡಿಗ’ ಅನ್ನುವುದರಲ್ಲಿ ಅಂತಹ ವಿಶೇಷಗಳೇನೂ ಇರಲಿಲ್ಲ. ಸುತ್ತಮುತ್ತಲೂ ಮುತ್ತಿಕೊಂಡಿದ್ದ ಗೆಳೆಯರೆಲ್ಲರೂ ಕನ್ನಡಿಗರೇ ಆಗಿದ್ದರಿಂದ ಅದೊಂದು ಸ್ಪೆಷಲ್ ಅನ್ನುವ ಭಾವ ಮೂಡುತ್ತಿರಲಿಲ್ಲ. ಕಾಲೇಜುಪರ್ವದಲ್ಲಿ ಕನ್ನಡಿಗ ಆಗಿರುವುದು ಕೊಂಚ ಸಂಕಟಗಳಿಗೆ ಸಿಕ್ಕಿಸಿತ್ತಾದರೂ ಅದಕ್ಕೆ ಕಾರಣ ’ನಾ ಕನ್ನಡದವ’ ಆಗಿರುವುದಲ್ಲ, ’ಇಂಗ್ಲೀಷ್ ಅರಿವು ಕಡಿಮೆ ಇರುವುದು’ ಎಂಬ ಜ್ಞಾನೋದಯ ಆದಮೇಲೆ ಆ ಕುರಿತು ಆಲೋಚನೆಯೂ ಬರಲಿಲ್ಲ.
ಆದರೆ ಕರುನಾಡ ಕೋಟೆ ದಾಟಿದ ಮೇಲೆ ಕನ್ನಡ ಎಂಬ ಭಾಷೆ ಎಷ್ಟು ಸಿಹಿ ಅನ್ನುವುದು ಗೋಚರವಾಗುತ್ತಿತ್ತು. ಇದೊಂಥರ ಮನೆಯಲ್ಲಿದ್ದಾಗ ಹಠ, ಗೊಂದಲ ಮಾಡುತ್ತಿದ್ದು ನಂತರ ಅಮ್ಮನ ಮಹತ್ವ ಅರಿವಾಗುವ ಹಾಸ್ಟೆಲ್ ಹುಡುಗನ ರೀತಿ. ಸಿಂಗಾಪೂರ್ ಗೆ ಬಂದ ಮೇಲೆ ನನ್ನ ಜತೆ ಕೆಲಸ ಮಾಡುವವರಿಗೆ ನನ್ನ ರಾಜ್ಯದ ಕುರಿತು, ಭಾಷೆಯ ಕುರಿತು ವಿವರಿಸುವಾಗ ಅದೆಂತದೋ ಪದಗಳಲ್ಲಿ ಸಿಲುಕದ ಸಂತಸ. ಅವರಂತೂ ಅಮೇರಿಕದ ವೈಭವವನ್ನೂ ಈ ರೀತಿಯ ವಿವರಣೆಯ ಸಹಿತ ಕೇಳಿರಲಿಕ್ಕಿಲ್ಲ, ಹಾಗೆ ಇರುತ್ತಿತ್ತು. ಇಲ್ಲಿಯ ಹೆಚ್ಚಿನವರಿಗೆ ಭಾರತೀಯರೆಂದರೆ ತಮಿಳರು ಅನ್ನುವ ಭಾವ ಇರುವುದರಿಂದ, ನನ್ನ ಭಾರತೀಯತೆ ಅರಿವಾದ ಕೂಡಲೇ, ’ತಮಿಳಾ?’ ಎನ್ನುವ ಪ್ರಶ್ನೆ ಕೇಳುತ್ತಾರೆ. “ಅಲ್ಲ, ನಾನು ಕನ್ನಡಿಗ’ ಎಂಬ ಉತ್ತರಕ್ಕೆ ಪೂರ ಹೆಮ್ಮೆಯ ಲೇಪ. ಅಲ್ಲೇ ಹುಟ್ಟಿ, ಅಲ್ಲೇ ಬೆಳೆದಿದ್ದರೂ ಯಾವಾಗಲೂ ಈ ವಾಕ್ಯ ಆಡಿದ ಉದಾಹರಣೆ ನೆನಪಿಲ್ಲ.
ಜಯಂತ್ ಕಾಯ್ಕಿಣಿ ತಮ್ಮ ಭಾಷಣದಲ್ಲಿ ಯಾವಾಗಲೂ ಹೇಳುತ್ತಿರುತ್ತಾರೆ, ” ನಾವು ಅಮೇರಿಕದಲ್ಲೋ, ಸಿಂಗಾಪುರ್ ನಲ್ಲೋ ಅಥವ ಅಸ್ಸಾಂ, ಮುಂಬೈ ನಲ್ಲಿ ಇದ್ದುಕೊಂಡು, ಒಳ್ಳೆಯ ಕೆಲಸಗಾರರಾಗಿ, ಒಳ್ಳೆಯ ಪ್ರಜೆಯಾಗಿ, ಒಳ್ಳೆಯ ತಂದೆ, ಮಗ, ಅಣ್ಣ, ತಮ್ಮ, ಗೆಳೆಯನಾಗಿ ಇರುವುದು ಕನ್ನಡತನವಾ? ಅಥವ ಬೆಂಗಳೂರಲ್ಲೆ ಇದ್ದು, ವಿಧಾನಸೌಧದ ಮುಂದೇನೆ ಮನೆಮಾಡಿ, ಕೈತುಂಬ ಉಂಗುರಗಳು, ಕೊರಳ ತುಂಬಾ ಚೈನು ಹಾಕಿಕೊಂಡು, ಸಿಕ್ಕಾಪಟ್ಟೇ ಭ್ರಷ್ಟಾಚಾರ ಮಾಡಿ, ಹೀನವಾಗಿ ಬದುಕಿ ರಾಜ್ಯೋತ್ಸವದ ದಿವಸ ಧ್ವಜ ಹಾರಿಸುವುದು ಕನ್ನಡತನವಾ? ಅಂದರೆ ಕನ್ನಡತನ ಅನ್ನುವುದು ನೀವಾಡುವ ಭಾಷೆಯ ಮೇಲೆ ಮಾತ್ರ ನಿರ್ಭರವಾಗಿಲ್ಲ. ಕನ್ನಡತನ ಅಂದರೆ ನಾವು ಬದುಕುವ ರೀತಿ. ಮಮತೆ, ಪ್ರೀತಿಯೇ ಕನ್ನಡತನ. ನಾವೆಲ್ಲಿ ಇರುತ್ತೇವೆ ಅನ್ನುವುದಲ್ಲ, ಚೆನ್ನಾಗಿ ಕೆಲಸ ಮಾಡಿ, ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯುವುದಕ್ಕಿಂತ ದೊಡ್ಡ ಕನ್ನಡತನ ಬೇರೆಯಿಲ್ಲ.”
ನನ್ನಲ್ಲೂ ಅಂಥ ಒಂದು ಕನಸು. ಉಳಿದವರು ’ರೀ ಅವ್ರು ಕನ್ನಡವರು, ಮೋಸ ಮಾಡೋಲ್ಲ” ಅಂತಲೋ ಅಥವ ಅಂಗಡಿಯಲ್ಲಿ ಪರ್ಸು ಮರೆತ ಘಳಿಗೆಯಲಿ, “ನೀವ್ ಕನ್ನಡದವ್ರಾ? ಪರ್ವಾಗಿಲ್ಲ, ನಾಳೆ ಕೊಡಿ” ಈ ರೀತಿ ಕನ್ನಡ ಒಂದು ನಂಬಿಕೆಯಾಗಿ, ಒಳ್ಳೆಯತನವಾಗಿ ಹಬ್ಬಬೇಕು. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಅನ್ನುವುದಕ್ಕಿಂತ Value ಆಗಿ ಬೆಳೆಯಬೇಕು ಎಂಬುದೊಂದು ಆಶಯ.
ಎಂದಿಗೂ ನಾನು ಅಂಥ ಕನ್ನಡಿಗನಾಗಲು ಬಯಸುತ್ತೇನೆ.
ಅಡಿಟಿಪ್ಪಣಿ: ಇಲ್ಲಿಯ ಹೋಟೇಲೊಂದರಲ್ಲಿ ಅಕಸ್ಮಾತ್ ಭೇಟಿಯಾದ ಬೆಳಗಾವಿಯ ಬಾಲರಾಜ್ ಮತ್ತವರ ಪುಟ್ಟಿಯ ಕನ್ನಡ ಹುಟ್ಟಿಸಿದ ರೋಮಾಂಚನದಿಂದಾಗಿ, ಮತ್ತೆ ಬರೆಯುತ್ತೇನೆ ಅಂತ ಮುಂದೂಡುತ್ತಲೇ ಬರುತ್ತಿದ್ದ ಈ ಲೇಖನ ಇವತ್ತೇ ಬರೆಯುವಂತಾಯಿತು. ಬೆಂಗಳೂರಲ್ಲೇ ಅಪರೂಪವಾಗುತ್ತಿರುವ ಕನ್ನಡವನ್ನು ಸಾವಿರಾರು ಮೈಲು ದೂರ ಅದೂ ಪುಟ್ಟ ಹುಡುಗಿಯ ಮಾತಾಗಿ ಕೇಳುವ ಅದ್ಭುತವೇ ಬೇರೆ.
*************
ಚಿತ್ರ ಕೃಪೆ : thatskannada.oneindia.in






ಚೆನ್ನಾಗಿದೆ.
ಚೆನ್ನಾಗಿದೆ ಲೇಖನ. ಥ್ಯಾಂಕ್ಸ್
ವಿಶ್ವ
ವಿಶ್ವನಾಥ್,
ತಾವು “ಥ್ಯಾಂಕ್ಸ್”ಗೆ ಬದಲಾಗಿ “ಧನ್ಯವಾದಗಳು” ಅಂತ ಬರೆದಿದ್ದಿದ್ದರೆ, ಚೆನ್ನಾಗಿರುವ ಈ ಲೇಖನಕ್ಕೆ ತಾವು ನೀಡಿರುವ ಪ್ರತಿಕ್ರಿಯೆ ಇನ್ನೂ ಚೆನ್ನಾಗಿರುತ್ತಿತ್ತೇನೋ!
ತುಂಬಾ ಚೆನ್ನಾಗಿದೆ ………………
Thumba uttamavada lekhana Praveen avre… Nijvaglu odi ondu sari mi JHUM andithu….
Dhanyavadagalu……
Manju
ಚಿಕ್ಕದಾದ ಚೊಕ್ಕವಾದ ಸೊಗಸಾದ ಲೇಖನವಿದು 🙂
ಶ್ರೀ. ರಂಜಿತ್ ಅಡಿಗರ “ಕನ್ನಡ ಪ್ರೇಮದ ಕುರಿತು ಒಂಚೂರು” ನೋಡಿ ನನಗೆ ತುಂಬಾ ಕುಶಿ ಆಯಿತು.
-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್.
ರಂಜಿತ್..
ಖುಷಿಕೊಟ್ಟ ಲೇಖನ..ಚಿಕ್ಕ ಲೇಖನದಲ್ಲಿ ಮಹತ್ವದ ಸಂದೇಶ ಅಡಗಿಸಿದ್ದೀರಿ.
>> ನನ್ನಲ್ಲೂ ಅಂಥ ಒಂದು ಕನಸು. ಉಳಿದವರು ’ರೀ ಅವ್ರು ಕನ್ನಡವರು, ಮೋಸ ಮಾಡೋಲ್ಲ” ಅಂತಲೋ ಅಥವ ಅಂಗಡಿಯಲ್ಲಿ ಪರ್ಸು ಮರೆತ ಘಳಿಗೆಯಲಿ, “ನೀವ್ ಕನ್ನಡದವ್ರಾ? ಪರ್ವಾಗಿಲ್ಲ, ನಾಳೆ ಕೊಡಿ” ಈ ರೀತಿ ಕನ್ನಡ ಒಂದು ನಂಬಿಕೆಯಾಗಿ, ಒಳ್ಳೆಯತನವಾಗಿ ಹಬ್ಬಬೇಕು. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಅನ್ನುವುದಕ್ಕಿಂತ Value ಆಗಿ ಬೆಳೆಯಬೇಕು ಎಂಬುದೊಂದು ಆಶಯ.<<
ಈ ಪ್ಯಾರ ತುಂಬಾ ಹಿಡಿಸ್ತು.
ಜಯಂತ ಕಾಯ್ಕಿಣಿ ಮಾತುಗಳನ್ನು ಕೇಳ್ಬೇಕಾದ್ರೆ..ಇಲ್ಲಿದೆ ಕೊಂಡಿ
ಕೊಲ್ಲಾಪುರದಲ್ಲಿ ಹೋಟಲ್ ಮಾಲಿಕರು ಕನ್ನಡದವರಾಗಿದ್ದರೂ ಕನ್ನಡ ಗಿರಾಕಿಗಳೆದುರು ಕನ್ನಡದಲ್ಲಿ ಮಾತನಾಡುವುದಿಲ್ಲ. ಕನ್ನಡಿಗರಾದರೆ ಡಿಸ್ಕೌಂಟ್ ಕೇಳುತ್ತಾರೆ ಎಂಬ ಮುನ್ನೆಚ್ಚರಿಕೆ..
ಹರ್ಷ..
ಆ ಮಾಲೀಕರು ನಮ್ಮ ಜನ…ಅಂದರೆ ಕೊಂಕಣಿಗಳು ಆಗಿದ್ದರೆ ನೀವು ಆಶ್ಚರ್ಯ ಪಡುವ ಅವಶ್ಯಕತೆಯಿಲ್ಲ ! :).