ವಿಷಯದ ವಿವರಗಳಿಗೆ ದಾಟಿರಿ

ಜುಲೈ 16, 2011

4

ಸಂಸ್ಕೃತಿ ಸಂಕಥನ – ೨

‍ನಿಲುಮೆ ಮೂಲಕ

-ರಮಾನಂದ ಐನಕೈ

ಸಂಸ್ಕೃತಿ ಸಂಕಥನ – ೧

ಭಾರತೀಯ ಸಂಸ್ಕೃತಿಯ ಕುರಿತಾದ ನಮ್ಮ ಸ್ಮೃತಿ ವಿಸ್ಮೃತಿಯಾಗಿದೆ. ಇದಕ್ಕೆ ಕಾರಣವೇನು ಈ ಮರೆವನ್ನು ಪುನಃ ನೆನಪಿಸಿಕೊಳ್ಳುವುದು ಹೇಗೆ? ಸಂಸ್ಕೃತಿಯನ್ನು ಮರೆತದ್ದರಿಂದ ಆದ ಪರಿಣಾಮಗಳೇನು? ಹೀಗೆ ಯೋಚಿಸಲು ಹೋದರೆ ನಮ್ಮೆದುರು ನೂರಾರು ಪ್ರಶ್ನೆಗಳುಂಟು. ಭಾರತೀಯರು ತಮ್ಮ ಸಂಸ್ಕೃತಿಯ ಕುರಿತಾಗಿ ಕೇಳುತ್ತಿರುವ, ಓದುತ್ತಿರುವ, ನಂಬಿಕೊಂಡಿರುವ ಹಲವು ಸಂಗತಿಗಳು ತಪ್ಪು ತಿಳುವಳಿಕೆಂದ ಕೂಡಿದ್ದರಿಂದ ವರ್ತಮಾನದ ಭಾರತದಲ್ಲಿ ಅನೇಕಾನೇಕ ಸಮಸ್ಯೆಗಳು ಜೀವಪಡೆಯುತ್ತಲೇ ಇವೆ. ಈ ಸತ್ಯ ಅರ್ಥವಾಗಬೇಕಾದರೆ ಇತ್ತೀಚೆಗೆ ಪ್ರಕಟಗೊಂಡ ಎರಡು ಕನ್ನಡದ ಪುಸ್ತಕಗಳನ್ನು ಪ್ರತಿಯೊಬ್ಬರೂ ಓದಲೇಬೇಕು.

ಒಂದು ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿ ಎಂಬ ಪುಸ್ತಕ ಇದು ಪ್ರೊ. ಬಾಲಗಂಗಾಧರರ ಸಂಶೋಧನಾ ಗ್ರಂಥ  ಇದನ್ನು ಪ್ರೊ. ರಾಜಾರಾಮ ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಇನ್ನೊಂದು ಪುಸ್ತಕ ಪೂರ್ವಾವಲೋಕನ. ಇದು ಬಾಲಗಂಗಾಧರರ ಬಿಡಿ ಲೇಖನಗಳ ಅನುವಾದಗಳ ಸಂಗ್ರಹ. ಇವೆರಡೂ ಕೂಡಾ ಭಾರತೀಯ ಸಮಾಜ ವಿಜ್ಞಾನವನ್ನು ಪುನರ್‌ಪರಿಶೀಲನೆಗೆ ಹಚ್ಚುವ ಮಹತ್ವದ ಕೃತಿಗಳು.

ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿ ಪುಸ್ತಕ ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆಯುತ್ತದೆ. ಜಗತ್ತಿನ ಸಂಸ್ಕೃತಿಗಳನ್ನು ಅಧ್ಯಯನ ಮಾಡಲು ಬೇಕೆಂದ ವೈ್ಜ್ಞಾನಿಕ ತರ್ಕವನ್ನು ಸೂತ್ರವನ್ನು ಇದು ಅನಾವರಣ ಮಾಡುತ್ತದೆ. ಶೈಲಿಯ ದ್ರುಷ್ಟಿಯಿಂದಲೂ ಈ ಗ್ರಂಥ ಅಪರೂಪದ್ದು. ವಿಷಯ ಮಂಡಿಸಲು ಬೇಕಾದ ವೈಜ್ಞಾನಿಕ ತರ್ಕ, ಚಿಕಿತ್ಸಕ ದ್ಟೃಷ್ಟಿ, ಸಹನೆ, ಹಠ ಎಲ್ಲವನ್ನೂ ನಾವಿಲ್ಲಿ ಕಾಣಬಹುದು. ಪಾಶ್ಚಾತ್ಯರು ಸಂಸ್ಕೃತಿಯನ್ನು ಅರ್ಥೈಸುವ ರೀತಿಗೂ ನಾವು ಅರ್ಥೈಸಬೇಕಾದ ರೀತಿಗೂ ಇರುವ ಮುಖ್ಯ ವ್ಯತ್ಯಾಸವನ್ನು ಈ ಕೃತಿಯಲ್ಲಿ ತಿಳಿಸಲಾಗುತ್ತದೆ.

ಪಾಶ್ಚಾತ್ಯ ಸಂಸ್ಕೃತಿ ಕ್ರಿಶ್ಚಿಯನ್ ಥಿಯಾಲಜಿಂದ ಬೆಳೆದುಬಂದದ್ದು.ನಮ್ಮ ಸಂಸ್ಕೃತಿ ಅನುಭವ ಮತ್ತು ಆಚರಣೆಯ ಮೂಲಕ ಹರಿದುಬಂದದ್ದು. ಹಾಗಾಗಿ ಪರಸ್ಪರ ಅರ್ಥವಾಗುವುದು ತುಂಬಾ ಕಷ್ಟ.ಪಾಶ್ಚಾತ್ಯರು ನಮ್ಮ ಸಂಸ್ಕೃತಿಯ ಕುರಿತು ಎಷ್ಟೇ ಅಧ್ಯಯನ ಮಾಡಿದ್ದರೂ ಅದು ಭಾರತೀಯ ಸಂಸ್ಕೃತಿಯ ಕುರಿತಾದ ಅವರ ಅನುಭವವೇ ವಿನಾ ನಿಜ ಅಲ್ಲ. ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಹೊರಟಾಗ ಮಾತ್ರ ಈ ಸತ್ಯ ಅರಿವಾಗುತ್ತದೆ.

ಸ್ಮೃತಿ ವಿಸ್ಮೃತಿಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥೈಸುವ ಅದ್ಭುತವಾದ ಪ್ರಯತ್ನ ಕಾಣುತ್ತದೆ. ಹಾಗೂ ಪಾಶ್ಚಾತ್ಯ ಸಂಸ್ಕೃತಿಯಿಂದ ಯರವಲು ಅಂಶಗಳೂ ನಮ್ಮಲ್ಲಿ ಇಲ್ಲದೇ ಇದ್ದಷ್ಟು  ಇದ್ದದ್ದು ಗೋಚರವಾಗಿರುತ್ತದೆ. ಆಗ ನಮ್ಮ ಸಂಸ್ಕೃತಿ ಅತ್ಯಂತ ವಿಶಾಲವೂ ಶ್ರೀಮಂತವೂ ಆಗಿ ಕಾಣುತ್ತದೆ. ಹಾಗಾದರೆ ನಮ್ಮ ಸಂಸ್ಕೃತಿ ಅಂದರೆ ಗೊಡ್ಡು ಆಚರಣೆಗಳಿಂದ ಕೂಡಿದ ಸಂಪ್ರದಾಯಗಳು ಎಂಬ ಭಾರತೀಯ ಸುಶಿಕ್ಷಿತರ ಚಿಂತನೆಗೆ ಅರ್ಥ ಎಲ್ಲಿದೆ? ಇದೇ ಬಾಲಗಂಗಾಧರರ ಬರವಣಿಗೆಯ ಶಕ್ತಿ.

ನಿಜಕ್ಕೂ ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿಯನ್ನು ಅರ್ಥ ಮಾಡಿಸಲು ಬರೆದ ಪಾಶ್ಚಾತ್ಯ ಸಂಸ್ಕೃತಿಯ ಸುದೀರ್ಘವಾದ ಕಥೆ. ಪಾಶ್ಚಾತ್ಯರ ಕತೆಯನ್ನು ಓದುತ್ತ ಹೋದಹಾಗೆ ಭಾರತ ನಮಗೆ ಅರ್ಥವಾಗುತ್ತ ಬರುತ್ತದೆ. ಪಾಶ್ಚಾತ್ಯ ಸಂಸ್ಕೃತಿ ನಿಂತಿದೆ.  ಮುಖ್ಯವಾಗಿ ರಿಲಿಜನ್ ಎಂಬ ಪರಿಕಲ್ಪನೆಯ ಮೇಲೆ. ಅಷ್ಟೇ ಅಲ್ಲ, ಪಾಶ್ಚಾತ್ಯ ಪಂಡಿತರು ರಿಲಿಜನ್ ಜಗತ್ತಿನ ಎಲ್ಲ ಸಂಸ್ಕೃತಿಗಳ ಸಾಮಾನ್ಯ ಲಕ್ಷಣ ಎಂದು ಭಾವಿಸುತ್ತಾರೆ. ಹಾಗಾಗಿಯೇ ಯುರೋಪಿಯನ್ನರು ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ರಿಲಿಜನ್ ಎಂದು ಪರಿವರ್ತಿಸಿ ಸಮಾಜ ವಿಜ್ಞಾನ ಬರೆದದ್ದು. ಆದರೆ ಬಾಲಗಂಗಾಧರರು ಪ್ರತಿಪಾದಿಸುತ್ತಾರೆ ರಿಲಿಜನ್ ಸಂಸ್ಕೃತಿಗಳ ಸಾಮಾನ್ಯ ಲಕ್ಷಣ ಅಲ್ಲ. ರಿಲಿಜನ್ ಇಲ್ಲದ ಅದೆಷ್ಟೋ ಸಂಸ್ಕೃತಿಗಳು ಜಗತ್ತಿನಲ್ಲಿ ಇವೆ ಎಂದು ಹಾಗಾದರೆ ರಿಲಿಜನ್ ಅಂದರೆ ಏನು? ಇಲ್ಲಿ ಪುನಃ ಶುರುವಾಗುತ್ತದೆ. ರಿಲಿಜನ್ನಿನ ಕಥೆ. ಇಡೀ ಪುಸ್ತಕದುದ್ದಕ್ಕೂ ಬಾಲಗಂಗಾಧರ ರಿಲಿಜನ್ನಿನ ವ್ಯಾಖ್ಯೆ ಹೇಳುವುದಿಲ್ಲ. ಆದರೆ ರಿಲಿಜನ್ ಅಂದರೆ ಏನೆಂಬುದನ್ನು ಅರ್ಥ ಮಾಡಿಸುತ್ತಾರೆ. ಇದೇ ಈ ಗ್ರಂಥದ ಬಹುದೊಡ್ಡ ಯಶಸ್ಸು.

ಹಾಗಾದರೆ ಯುರೋಪಿಯನ್ನರಿಗೆ ಭಾರತದಲ್ಲಿ ಹಿಂದೂ ರಿಲಿಜನ್ ಗುರುತಿಸುವ ಅನಿವಾರ್ಯತೆ ಏಕೆ ಬಂತು? ಏಕೆಂದರೆ ಅವರಿಗೆ ಭಾರತಕ್ಕೊಂದು ಸಮಾಜ ವಿಜ್ಞಾನವನ್ನು ಬರೆಯಬೇಕಾಗಿತ್ತು. ಅದಕ್ಕೆ ಅವರು ಪಾಶ್ಚಾತ್ಯ ಸಮಾಜವಿಜ್ಞಾನ ಅಥವಾ ಕ್ರಿಶ್ಚಿಯಾನಿಟಿಯನ್ನೇ ಮಾದರಿಯಾಗಿಟ್ಟುಕೊಂಡರು. ಅವರು ಸಮಾಜವಿಜ್ಞಾನ ಪ್ರಾರಂಭವಾದುದೇ ರಿಲಿಜನ್‌ನ ನಾಂದಿಂದ. ಹಾಗಾಗಿ ಹಿಂದೂ ರಿಲಿಜನ್ ಭಾರತೀಯ ಸಮಾಜ ವಿಜ್ಞಾನಕ್ಕೆ ನಾಂದಿಯಾತು. ರಿಲಿಜನ್‌ನ ರೀತಿಗಳೆಲ್ಲ ಭಾರತೀಯ ಸಂಸ್ಕೃತಿಯ  ಮಿತಿಗಳಾದವು. ಸ್ವಾತಂತ್ರ್ಯಾನಂತರದ ಪಂಡಿತರು, ಬುದ್ಧಿಜೀವಿಗಳು ಈ ಮಿತಿಯಲ್ಲಿ ಸಿಕ್ಕಿಬಿದ್ದರು. ಹೀಗೆ ಈ ಗ್ರಂಥ ಓದುಗರ ಸಾಮರ್ಥ್ಯಕ್ಕನುಗುಣವಾಗಿ ಅರ್ಥ ಸಾಧ್ಯತೆಯನ್ನು ಒದಗಿಸುತ್ತದೆ.

ಮುಖ್ಯವಾಗಿ ಬಾಲಗಂಗಾಧರರು ಈ ಸಂಶೋಧನಾ ಗ್ರಂಥವನ್ನು ೧೭ ವರ್ಷದ ಹಿಂದೆ ಬರೆದದ್ದು. ಅದರಲ್ಲೂ ಯುರೋಪಿಯನ್ ಚಿಂತಕರನ್ನು ಹಾಗೂ ಅವರಿಂದ ಪ್ರೇರಿತರಾದ ಭಾರತೀಯ ಬುದ್ಧಿಜೀವಿಗಳನ್ನು ಗಮನದಲ್ಲಿಟ್ಟುಕೊಂಡು ಬರೆದ ಕೃತಿ. ಹಾಗಾಗಿ ಸಾಮಾನ್ಯ ಓದುಗರಿಂದ ಸಹನೆ ಅಪೇಕ್ಷಿಸುತ್ತದೆ.ಭಾವಾನುವಾದವಾಗಿರದೇ ನೇರ ಅನುವಾದವಾದ್ದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ನಿಖರತೆ ಒದಗಿಸುತ್ತದೆ.

ಪೂರ್ವಾವಲೋಕನ ಕನ್ನಡದ ಸಾಮಾನ್ಯ ಓದುಗರನ್ನು ಲಕ್ಷದಲ್ಲಿ ಇಟ್ಟುಕೊಂಡು ಹೊರತಂದ ಸರಳವಾದ ಕೃತಿ ಭಾರತದಲ್ಲಿನ ಅನೇಕ ಸಮಸ್ಯೆಗಳ ಕುರಿತಾಗಿ ಬರೆದ ಬಾಲಗಂಗಾಧರರ ಲೇಖನಗಳ ಕನ್ನಡಾನುವಾದ. ಭಾರತದಿಂದ ವಸಾಹತು ಆಳ್ವಿಕೆ ಹಿಂದೆ ಹೋದರೂ ಆ ವಸಾಹತು ಪ್ರಜ್ಞೆ ಇಲ್ಲಿ ಕೆಲಸ ಮಾಡುತ್ತದೆ. ಇಂಗ್ಲೀಶರು ಸ್ಟೃಸಿದ ಅರ್ಥ ಸಾಮ್ರಾಜ್ಯದಲ್ಲಿ ಕಣ್ಣಿಗೆ ಬಟ್ಟೇ ಕಟ್ಟಿಬಿಟ್ಟಂತಾಗಿದೆ ನಮ್ಮ ಪರಿಸ್ಥಿತಿ. ಆದರೂ ನಿಜವಾಗಿ ಕಣ್ಣು ಕಾಣುವವರಂತೆ ನಟಿಸುತ್ತಿದ್ದೇವೆ. ಏಕೆಂದರೆ ಈ ಸಭ್ಯತೆಯನ್ನು ಅವರೇ ಹೇಳಿಕೊಟ್ಟಿದ್ದಲ್ಲವೇ?

********************

(ಚಿತ್ರ ಕೃಪೆ : http://www.rethinkingreligion.org/)

4 ಟಿಪ್ಪಣಿಗಳು Post a comment
  1. maaysa's avatar
    maaysa
    ಜುಲೈ 16 2011

    “ಪಾಶ್ಚಾತ್ಯ ಸಂಸ್ಕೃತಿ ಕ್ರಿಶ್ಚಿಯನ್ ಥಿಯಾಲಜಿಂದ ಬೆಳೆದುಬಂದದ್ದು.ನಮ್ಮ ಸಂಸ್ಕೃತಿ ಅನುಭವ ಮತ್ತು ಆಚರಣೆಯ ಮೂಲಕ ಹರಿದುಬಂದದ್ದು. ”

    ಇದು ಅನುವಾದವಾದುದರಿಂದ ಮೂಲ ಲೇಖಕರು ಅನಿಸಿಕೆ ತಿಳಿಯದು ..

    ಆದರೆ ಯೂರೋಪಿನ ಹಲವು ದೇಶಗಳಲ್ಲಿ ಇಂದಿಗೂ ಅಲ್ಲಿಯ ನಲೆದ ಆರಚಣೆಗಳೇ ಪ್ರಮುಖವಾದುದು ..

    ಈ ಕೆಳಗಿನ ಆರಚಣೆಗಳು ಯಾವ ಧರ್ಮಕ್ಕೂ ಸೇರದೆ ಇಂದಿಗೂ ಬರಿ ನೆಲದ ಸಂಸ್ಕೃತಿಯಾಗಿ ಆರಚಣೆಯಲ್ಲಿದೆ. ಹಾಗೆ ಈ ಪಾಗನ್ ಆಚರಣೆಗಳಿಗೆ ಕ್ರಿಸ್ತಿಯ ಮತದ ಲೇಪ ಬಳಿಕ ಬಂದಿದೆ ಕೂಡ.

    http://en.wikipedia.org/wiki/Midsummer
    http://en.wikipedia.org/wiki/Walpurgis_Night

    ನನ್ನ ಪ್ರಶ್ನೆ ಅದು ಹೇಗೆ ಇಡೀ ಯುರೋಪನ್ನು ಒಂದು ಸಾಂಸ್ಕೃತಿಕ ಎಂಟಿಟಿಯಾಗಿ ಪ್ರತಿಪಾದಕರು ಕಾಣುವರು. ಇಲ್ಲಿಯೂ ಹಲ ನುಡಿ ನಡೆ, ಖಾದ್ಯ, ಆಚರಣೆ, ನಮ್ಮ ಭಾರತದಷ್ಟೇ ವಿಭಿನ್ನ ಹಾಗು ವೈವಿದ್ಯವಾಗಿರುವಾಗ?

    ಇನ್ನು ಇಂಡಿಯಾ ಒಂದು ದೇಶವಾದುದ್ದೆ ಯುರೋಪಿಯನ್ನರು ಬಂದ ಬಳಿಕ. ಅದಕ್ಕೆ ಮುನ್ನ ನಮ್ಮಲ್ಲೇ ಚಪ್ಪಾನ್ನಾರು ದೇಶ, ಅಂಗ ವಂಗ ಕಳಿಂಗ, ಮಾಗಧ, ಕರ್ನಾಟ, ಚೋಳ, ಚೇರ ಹೀಗೆ ಹಲ ದೇಶ, ಹಲ ಸಂಸ್ಕೃತಿಯ ವಿಭಿನ್ನತೆ ಹಾಗು ಪ್ರತ್ಯಕತೆ ಇತ್ತಲ್ಲ. ಇಂದಿಗೂ ಇಂಡಿಯಾ ಒಂದು ರಾಜಕೀಯ ಏಕತೆಯಲ್ಲಿದ್ದೂ, ಸಾಂಸ್ಕೃತಿಕ ವಿಭಿನ್ನತೆಯಲ್ಲಿದೆ.

    ಇನ್ನೊಂದು ಪ್ರಶ್ನೆ, ಇಡೀ ಇಂಡಿಯಾ ದೇಶವನ್ನು ಕೇವಲ ಹಿಂದೂ ಧರ್ಮವೆಂದು ನೋಡಿದ ಯುರೋಪಿನಯನ್ನರೆ ಜೈನ, ಬೌದ್ಧ ಹಾಗು ಸಿಖ್ ಧರ್ಮಗಳು ಹಿಂದೂ ಧರ್ಮಾತಿತ ಎಂದು ಹೇಗೆ ಗುರುತಿಸಿದರು?

    ಉತ್ತರ
  2. makara's avatar
    makara
    ಜುಲೈ 16 2011

    ನಮ್ಮ ಆಚರಣೆಗಳು ಗೊಡ್ಡಾಗಿ ಕಾಣಬಹುದು; ಆದರೂ ಆಚರಣೆಗಳು ಏಕೆ ಇರಬೇಕು ಎಂದು ರಾಮಕೃಷ್ಣ ಪರಮಹಂಸರು ಬಹಳ ಸರಳವಾಗಿ ತಿಳಿಸಿಕೊಟ್ಟಿದ್ದಾರೆ. ನಾವು ಭತ್ತದಲ್ಲಿರುವ ಅಕ್ಕಿಯನ್ನು ಉಪಯೋಗಿಸುತ್ತೇವಾದರೂ ಹೊಟ್ಟಿಲ್ಲದಿದ್ದರೆ ಅಕ್ಕಿಯನ್ನು ಬೆಳೆಯಲಾಗುವುದಿಲ್ಲ. ಆದ್ದರಿಂದ ಆಚರಣೆಗಳು ಗೊಡ್ಡೆನಿಸಿದರೂ (ಉಪಯೋಗವಿಲ್ಲವೆನಿಸಿದರೂ) ಅವುಗಳ ಅಂತರಾರ್ಥ ಬೇರೆಯೇ ಇರುತ್ತದೆ ಮತ್ತು ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ರಕ್ಷಿಸುವ ಸಾಧನೆಗಳಾಗಿ ಅವುಗಳು ಇರಲೇಬೇಕು ಮತ್ತು ನಮ್ಮ ಪ್ರತ್ಯೇಕತೆಯನ್ನು ತಿಳಿಸಿಕೊಡಲು ಕೂಡ ಇವು ಸಾಧನಗಳೇ.

    ಉತ್ತರ
  3. vedasudhe Hariharapura sridhar's avatar
    vedasudhe Hariharapura sridhar
    ಜುಲೈ 16 2011

    ಸೊಗಸಾದ ಬರವಣಿಗೆಗಾಗಿ ನಿಮಗೆ ಧನ್ಯವಾದಗಳು.’ಒಂದು ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿ” ಬಗ್ಗೆ ನನ್ನ ಬ್ಲಾಗ್ vedasudhe.blogspot.com ನಲ್ಲಿ ಬರೆಯಲು ತಮಗೆ ಆಹ್ವಾನಿಸುವೆ.

    ಉತ್ತರ
  4. maaysa's avatar
    maaysa
    ಜುಲೈ 17 2011

    ನೀವು ನಿಮ್ಮ ಪೂರ್ವ ಹಾಗು ಪಶ್ಚಿಮದ ಜಗಳದಲ್ಲಿ ನಮ್ಮ ನೆಲದ ಸಂಸ್ಕೃತಿಗಳಿಗೆ ಈ ಗತಿ ತಂದಿದ್ದೀರಿ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments