ವಿಷಯದ ವಿವರಗಳಿಗೆ ದಾಟಿರಿ

ಜುಲೈ 20, 2011

3

ರಹಸ್ಯಗಳನ್ನು ಹುಡುಕತ್ತ…!

‍ನಿಲುಮೆ ಮೂಲಕ

– ವಿಷ್ಣುಪ್ರಿಯ

ಸೌರಮಂಡಲದ ತುದಿಯಲ್ಲಿ ನೀರಿನ ಗುಳ್ಳೆಗಳ್ಳಂಥ ಗುಳ್ಳೆಗಳಿವೆ. ಇವು 10 ಕೋಟಿ ಮೈಲಿಗಳಷ್ಟು ವಿಶಾಲವಾಗಿವೆ ಎಂಬುದನ್ನು ಕೂಡಾ ತಿಳಿಸಿದ್ದು ಇವೇ ವಾಯೇಜರ್ ನೌಕೆಗಳು. ಜಗತ್ತು ಹೇಗಿರಬಹುದು? ಎಂಬ ಕಲ್ಪನೆ ನಮ್ಮಲ್ಲಿ ವೇದ, ಪುರಾಣಗಳ ಕಾಲದಿಂದಲೂ ಬೆಳೆದು ಬಂದಿದೆ. ಆವಾಗ ಭೂಮಿಯಿಂದ ಬೇರೆ ಜಗತ್ತಿನತ್ತ ಚಲಿಸಲು ಈಗಿರುವಂಥ ರಾಕೆಟ್ಗಳಿರಲಿಲ್ಲ. ಗಗನನೌಕೆಗಳಿರಲಿಲ್ಲ. ಆದರೂ ಅಂದಿನ ದಿನಗಳಲ್ಲಿ ಹೇಳಿದ್ದು ಈಗ ಸತ್ಯವಾಗುತ್ತಿದೆ. ಹಾಗಿದ್ದರೆ ವೇದಗಳ ಕಾಲದಲ್ಲಿ ಜೀವಿಸಿದ್ದ ಜನರು ಯಾವ ಮಟ್ಟದ ಜ್ಞಾನವನ್ನು ಹೊಂದಿದ್ದರು? ಸಪ್ತ ಸಾಗರಗಳ ಬಗ್ಗೆ ವೇದಗಳು ಹೇಳುತ್ತವೆ. 14 ಲೋಕಗಳ ಬಗ್ಗೆಯೂ ನಮ್ಮ ಪುರಾಣಗಳಲ್ಲಿ ಪ್ರಸ್ತಾಪವಿದೆ.

ಈ ಪ್ರಪಂಚದಲ್ಲಿ ಅಥವಾ ಬ್ರಹ್ಮಾಂಡದಲ್ಲಿ ಏನೆಲ್ಲ ಇದೆ ಎಂಬ ಚಿಂತನೆ ಹಲವು ಕಾಲದಿಂದ ವಿಜ್ಞಾನಿಗಳ ಮನದಲ್ಲಿದೆ. ಅದರ ಬೆನ್ನು ಹತ್ತಿ ಹುಡುಕುವ ಪ್ರಯತ್ನಗಳೂ ನಡೆಯುತ್ತಿವೆ. ಭೂಮಿಯ ಹೊರತಾಗಿ ಬೇರೆ ಯಾವುದಾದದರೂ ಗ್ರಹಗಳು ವಾಸಕ್ಕೆ ಯೋಗ್ಯವಾಗಿವೆಯೇ? ಬೇರೆ ಯಾವುದಾದರೂ ಗ್ರಹಗಳಲ್ಲಿ ಜೀವಿಗಳಿವೆಯೇ? ಒಂದುವೇಳೆ ಇದ್ದದ್ದೇ ಆದಲ್ಲಿ ಆ ಅನ್ಯಗ್ರಹ ಜೀವಿಗಳು ಭೂಮಿಯನ್ನು ಮತ್ತು ನಮ್ಮನ್ನು ಗಮನಿಸುತ್ತಿರುವ ಸಾಧ್ಯತೆಗಳಿವೆಯೇ? ಎಂಬೆಲ್ಲ ವಿಚಾರಗಳ ಬಗ್ಗೆ ವಿಜ್ಞಾನಿಗಳು ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಲೇ ಇದ್ದಾರೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡಾ ಇಂಥದ್ದೇ ಪ್ರಯತ್ನವನ್ನು ನಡೆಸುತ್ತಿದೆ. ನಾಸಾದ ವಾಯೇಜರ್ ಗಗನನೌಕೆ ಈ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದು, ಹಲವು ಅದ್ಭುತಗಳನ್ನ, ವಿಚಿತ್ರಗಳನ್ನು ಅನಾವರಣಗೊಳಿಸಿದೆ. ಪ್ರಸ್ತುತ ಈ ಗಗನನೌಕೆಯು ಇದುವರೆಗೆ ಯಾರೂ ಹೋಗದಿದ್ದಂತ ಪ್ರದೇಶವನ್ನು ದಾಟಿ ಮಂದಕ್ಕೆ ಹೋಗಿದೆ. ಹಾಗೆ ಚಲಿಸುತ್ತಲೇ ಇದೆ, ರಹಸ್ಯಗಳನ್ನು ಅನಾವರಣಗೊಳಿಸುತ್ತಾ, ಹೊಸ ಹೊಸ ವಿಚಾರಗಳನ್ನು ಜಗತ್ತಿಗೆ ತಿಳಿಸುತ್ತಾ. ವಾಯೇಜರ್1 ಮತ್ತು ವಾಯೇಜರ್ 2 ಗಗನನೌಕೆಗಳು ಒಂದರ ಹಿಂದೊಂದರಂತೆ ಸಂಶೋಧನೆ ನಡೆಸುತ್ತಾ ಸಾಗಿದ್ದು, ಕೇವಲ ಹೊಗೆಯಂತ ಕಣಗಳಿಂದ ಆವೃತವಾಗಿರುವ ಭಾಗವನ್ನು ಇವೆರಡೂ ಮೂರು ವರ್ಷಗಳ ಹಿಂದೆಯೇ ಪ್ರವೇಶಿಸಿದ್ದವು. ಸೂರ್ಯನ ಕಾಂತವಲಯದ ತುತ್ತ ತುದಿಯವರೆಗೆ ಇವು ಸಾಗಿದ್ದು, ಅಲ್ಲಿನ ರಹಸ್ಯಗಳನ್ನು ಅನಾವರಣಗೊಳಿಸಲು ಪ್ರಯತ್ನಿಸುತ್ತಿವೆ. ಸೌರಮಂಡಲದ ತುದಿಯಲ್ಲಿ ನೀರಿನ ಗುಳ್ಳೆಗಳ್ಳಂಥ ಗುಳ್ಳೆಗಳಿವೆ. ಇವು 10 ಕೋಟಿ ಮೈಲಿಗಳಷ್ಟು ವಿಶಾಲವಾಗಿವೆ ಎಂಬುದನ್ನು ಕೂಡಾ ತಿಳಿಸಿದ್ದು ಇವೇ ವಾಯೇಜರ್ ನೌಕೆಗಳು.
ಸೂರ್ಯನ ಕಾಂತವಲು ಹೇಗೆ ವ್ಯಾಪಿಸಿದೆ? ವಾಯೇಜರ್ ನ ಸಂಶೋಧನೆಗಳು ಹೇಳುವ ಪ್ರಕಾರ ಈ ವಲಯವು ಸುರುಳಿ ಸುರುಳಿಯಾಗಿದೆ. ನಿರಿಗೆ ಹಿಡಿದ ಬಟ್ಟೆಯನ್ನು ಕಲ್ಪಿಸಿಕೊಳ್ಳಿ, ಅದೇ ರೀತಿ ಸೂರ್ಯನ ಕಾಂತವಲಯ ಕೂಡಾ ಪದರ ಪದರವಾಗಿದೆ. ಸೂರ್ಯ ತನ್ನ ಕಕ್ಷೆಯಲ್ಲಿ ಪರಿಭ್ರಮಿಸುತ್ತಾ ಇರುವ ಕಾರಣ ಕಾಂತವಲಯ ಕೂಡಾ ಬದಲಾಗುತ್ತಾ ಹೋಗುತ್ತದೆ. ಇದರಿಂದಾಗಿ ಕಾಂತವಲಯವು ಸುರುಳಿ ಸುರುಳಿಯಾಗಿರುತ್ತದೆ ಎಂಬುದು ವಿಜ್ಞಾನಿಗಳ ಅಂಬೋಣ. ಝಿಗ್ಝಾಗ್ ಮಾದರಿಯಲ್ಲಿರುವ ಕಾರಣಈ ಕಾಂತವಲಯದ ಮೂಲಕ ಹಾದು ಹೋಗುವಾಗ  ಕಾಸ್ಮಿಕ್ ಕಿರಣಗಳು ಒಂದಕ್ಕೊಂದು ಘರ್ಷಿಸುತ್ತಾ, ಮಿಲನವಾಗುತ್ತಾ, ಪ್ರತ್ಯೇಕಗೊಳ್ಳುತ್ತಾ ಸಾಗುತ್ತವೆ. ಹಲವಾರು ಬಾರಿ ಭಾರೀ ಸ್ಫೋಟಕ್ಕೂ ಒಳಗಾಗುತ್ತವೆ. ಈ ರೀತಿ ಸ್ಫೋಟಗೊಂಡಾಗ ಗುಳ್ಳೆಗಳಂಥ ರಜನೆಗಳು ಸೃಷ್ಟಿಯಾಗುತ್ತವೆ ಎಂಬ ಸಂಗತಿ ವಾಯೇಜರ್ ನೌಕೆಗಳ ಸಂಶೋಧನೆಯಿಂದ ತಿಳಿದುಬಂದಿದೆ.
ಈ ಗುಳ್ಳೆಗಳು ಮತ್ತು ಅದರ ಜೊತೆಗೇ ಇರುವಂಥ ದಟ್ಟವಾದ ನೊರೆಯಂತಹ ಈ ರಚನೆ ಪತ್ತೆಯಾದಾಗ ಅಚ್ಚರಿಗೊಂಡಿದ್ದ ವಿಜ್ಞಾನಿಗಳು `ಸೌರಮಂಡಲದ ತುದಿಯಲ್ಲಿ ಇಂಥದ್ದೊಂದು ವಿಸ್ಮಯವಿದೆ ಎಂದು ಭಾವಿಸಿರಲಲಿಲ್ಲ’ ಎಂದು ಉದ್ಘರಿಸಿದ್ದರು. ಹಿಂದೆ ವೈಜ್ಞಾನಿಕ ಜಗತ್ತು ಸೂರ್ಯನಿಂದ ಹೊತಡುವ ಕಾಸ್ಮಿಕ್ ಕಿರಣಗಳು ನೇರವಾಗಿ ಸಾಗುತ್ತವೆ ಎಂದು ನಂಬಿತ್ತು. ಅದರ ಬಗ್ಗೆ ನಂತರದ ದಿನಗಳಲ್ಲಿ ಪ್ರಶ್ನೆಗಳೂ ಎದ್ದಿದ್ದವು. ವಾಯೇಜರ್ ಗಗನನೌಕೆಗಳ ಸಂಶೋಧನೆಗಳು ಇಂತಹ ಹಲವು ವೈಜ್ಞಾನಿಕ ನಂಬಿಕೆಗಳನ್ನು ಬದಲಾಯಿಸಿದೆ. ವಾಸ್ತವ ಏನು ಎಂಬುದನ್ನು ತಿಳಿಸಿಕೊಡುತ್ತಿವೆ.
ವೇದಗಳ ಕಾಲದಲ್ಲಿ…
ಜಗತ್ತು ಹೇಗಿರಬಹುದು? ಎಂಬ ಕಲ್ಪನೆ ನಮ್ಮಲ್ಲಿ ವೇದ, ಪುರಾಣಗಳ ಕಾಲದಿಂದಲೂ ಬೆಳೆದು ಬಂದಿದೆ. ಆವಾಗ ಭೂಮಿಯಿಂದ ಬೇರೆ ಜಗತ್ತಿನತ್ತ ಚಲಿಸಲು ಈಗಿರುವಂಥ ರಾಕೆಟ್ಗಳಿರಲಿಲ್ಲ. ಗಗನನೌಕೆಗಳಿರಲಿಲ್ಲ. ಆದರೂ ಅಂದಿನ ದಿನಗಳಲ್ಲಿ ಹೇಳಿದ್ದು ಈಗ ಸತ್ಯವಾಗುತ್ತಿದೆ. ಹಾಗಿದ್ದರೆ ವೇದಗಳ ಕಾಲದಲ್ಲಿ ಜೀವಿಸಿದ್ದ ಜನರು ಯಾವ ಮಟ್ಟದ ಜ್ಞಾನವನ್ನು ಹೊಂದಿದ್ದರು? ಸಪ್ತ ಸಾಗರಗಳ ಬಗ್ಗೆ ವೇದಗಳು ಹೇಳುತ್ತವೆ. 14 ಲೋಕಗಳ ಬಗ್ಗೆಯೂ ನಮ್ಮ ಪುರಾಣಗಳಲ್ಲಿ ಪ್ರಸ್ತಾಪವಿದೆ. ಇವನ್ನೆಲ್ಲ ಸುಳ್ಳು ಎಂದು ಏಕಾಏಕಿ ತಳ್ಳಿ ಹಾಕುವುದಕ್ಕಂತೂ ಸಾಧ್ಯವಿಲ್ಲ.
14 ಲೋಕಗಳನ್ನು ಗೆದ್ದ ವೀರ ಎಂದು ಬೀಗುವ ರಾಕ್ಷಸರ ಕಥೆ ಕೇಳಿರುತ್ತೀರಿ. ಅವರನ್ನು ಹನನ ಮಾಡಿದಂಥ ದೇವತೆಗಳ ಕಥೆಯೂ ನಿಮಗೆ ಗೊತ್ತಿದೆ. ಈ ಎಲ್ಲ ಲೋಕಗಳು ನಿಜಕ್ಕೂ ಅಸ್ತಿತ್ವದಲ್ಲಿದ್ದಾವೆಯೇ? ಇದ್ದರೆ ಅವುಗಳ ರೂಪ ಎಂಥದ್ದು? ಭೂಮಿಯಂಥದ್ದೇ ಗ್ರಹಗಳು ಹಲವಾರು ಪತ್ತೆಯಾಗುತ್ತಿವೆ. ಅವುಗಳಲ್ಲಿ ನೀರು, ಉಸಿರಾಟಕ್ಕೆ ಆಮ್ಲಜನಕ ಎಲ್ಲವೂ ಪತ್ತೆಯಾಗುತ್ತಿದೆ. ಅಂತಹ ಗ್ರಹಗಳಲ್ಲಿ ಜೀವಾಸ್ತಿತ್ವದ ಸಾಧ್ಯತೆಯ ಬಗ್ಗೆಯೂ ಹುಡುಕಾಟ ನಡೆದಿದೆ. ಆದರೆ ನಾವು ಇಲ್ಲೊಂದು ತಪ್ಪು ಮಾಡುತ್ತಿದ್ದೇವೇನೋ ಅನ್ನಿಸುತ್ತದೆ.
ಜೀವಾಸ್ತಿತ್ವ ಇದೆಯೇ ಎಂದು ಹುಡುಕಾಡುವಾಗ ಭೂಮಿಯಲ್ಲಿ ಇರುವ ರೀತಿಯದ್ದೇ ಜೀವಿಗಳು ಕಾಣಿಸಬೇಕೆಂದು ಹುಡುಕುತ್ತಿದ್ದೇವೇನೋ ಅನ್ನಿಸುತ್ತದೆ. ಯಾವುದೋ ಗ್ರಹಗಳಲ್ಲಿ ಅಸ್ತಿತ್ವದಲ್ಲಿರುವ ಜೀವಿಗಳಿಗೂ ನಮ್ಮ ಭೂಮಿಯಲ್ಲಿನ ಜೀವಿಗಳಿಗೂ ಸಾಮ್ಯತೆ ಇರಲೇಬೇಕೆಂದೇನೂ ಇಲ್ಲವಲ್ಲ? ಇನ್ಯಾವುದೋ ರೂಪದಲ್ಲಿರಬಹುದು, ಆ ರೂಪವನ್ನು ನೋಡುವ ಶಕ್ತಿ ನಮ್ಮ ಕಣ್ಣುಗಳಿಗೆ, ನಾವು ತಯಾರಿಸಿರುವಂಥ ಉಪಕರಣಗಳಿಗೆ ಇಲ್ಲದೆಯೇ ಇರಬಹುದು. ಅವನ್ನೆಲ್ಲ ಅರ್ಥ ಮಾಡಿಕೊಳ್ಳುವುದಕ್ಕೆ, ಅವುಗಳಿಗೆ ಸ್ಪಂದಿಸುವುದಕ್ಕೆ ವಾಯೇಜರ್ ಗಗನನೌಕೆಗಳಿಂದ ಸಾಧ್ಯವೇ?
ಹಾಗಿದ್ದರೆ ನಮ್ಮ ಪೂರ್ವಜರು ಇವನ್ನೆಲ್ಲ ಹೇಗೆ ಕಂಡುಕೊಂಡರು ಎನ್ನುವ ಪ್ರಶ್ನೆ ಬರುತ್ತದೆ? ಅದನ್ನೇ ಮನೋಸಂಚಾರ ಎಂದು ಕರೆಯಲಾಗುತ್ತದೆ. ಇಲ್ಲಿ ಮನ ಎಂದರೆ ಆತ್ಮ. ಇಂಥದ್ದಕ್ಕೆ ನಿದರ್ಶನ ಕಠೋಪನಿಷತ್ತಿನಲ್ಲಿ ಬರುತ್ತದೆ. ಮುದಿ ಎತ್ತುಗಳನ್ನು, ಗೋವುಗಳನ್ನು ದಾನ ಕೊಡುತ್ತಿದ್ದ ಗೌತಮ ವಂಶಜ ವಾಜಶ್ರವಸನ ಬುದ್ಧಿ ಆತನ ಮಗ ನಚಿಕೇತನಿಗೆ ಹಿಡಿಸುವುದಿಲ್ಲ. ಇದನ್ನು ಪ್ರತಿಭಟಿಸಬೇಕೆಂದು ಆತ ತನ್ನ ಅಪ್ಪನಲ್ಲಿ `ನನ್ನನ್ನು ಯಾರಿಗೆ ಕೊಡುತ್ತೀ?’ ಎಂದು ಕೇಳುತ್ತಾನೆ. ಇದರಿಂದ ಸಿಟ್ಟಾದ ವಾಜಶ್ರವಸ `ಮೃತ್ಯುವಿಗೆ ಕೊಡುತ್ತೇನೆ’ ಎನ್ನುತ್ತಾನೆ. ತಂದೆಯ ಮಾತನ್ನು ಉಳಿಸಬೇಕೆಂದು ನಚಿಕೇತ ತನ್ನ ಶರೀರದಲ್ಲಿನ ದೇವತೆಗಳನ್ನು ಪ್ರತಿಬಂಧಿಸಿ (ವೈಜ್ಞಾನಿಕವಾಗಿ ಹೇಳುವುದಾದರೆ ದೇಹವನ್ನು ಕೋಮಾ ಸ್ಥಿತಿಗೆ ತಳ್ಳಿ) ಆತ್ಮರೂಪಿಯಾಗಿ ಮೃತ್ಯು ಲೋಕಕ್ಕೆ ಹೋಗುತ್ತಾನೆ.
ಆತ್ಮರೂಪದಲ್ಲಿ ಮೃತ್ಯುಲೋಕಕ್ಕೆ ಹೋಗುವುದು ಎಂಬಷ್ಟು ಗಾಢವಾದ ಚಿಂತನೆಗಳನ್ನು ವೈಜ್ಞಾನಿಕ ಜಗತ್ತಿನಿಂದ ಅಪೇಕ್ಷಿಸುವುದಕ್ಕೆ ಸಾಧ್ಯವಿಲ್ಲ. ಅದು ಸರಿಯೂ ಅಲ್ಲ. ಆದರೆ ವೇದಗಳಲ್ಲಿನ ಆಕರಗಳನ್ನು ಪಡೆದುಕೊಂಡು ಮುಂದುವರಿದರೆ ವಾಯೇಜರ್ ಗಗನನೌಕೆಗಳ ಪ್ರಯತ್ನ ಶೀಘ್ರ ಫಲಪ್ರದವಾದೀತು…
3 ಟಿಪ್ಪಣಿಗಳು Post a comment
  1. sriharsha's avatar
    sriharsha
    ಜುಲೈ 20 2011

    ಇವನ್ನೆಲ್ಲ ಸುಳ್ಳು ಎಂದು ಏಕಾಏಕಿ ತಳ್ಳಿ ಹಾಕುವುದಕ್ಕಂತೂ ಸಾಧ್ಯವಿಲ್ಲ
    ಯಾಕೆ ಸಾಧ್ಯವಿಲ್ಲ. ಇವೆಲ್ಲ ಹೇಗೆ ಸತ್ಯವೆಂದು ದಯವಿಟ್ಟು ಹೇಳಿ.

    ದೇಹವನ್ನು ಬಿಟ್ಟು ಆತ್ಮರೂಪಿಯಾಗಿ ಹೋಗುವುದು ಎಂದರೆ ಕೋಮಾ ಸ್ಥಿತಿಯಾ? ಹೇಗೆ ಸ್ವಲ್ಪ ವಿವರಿಸಿ.

    ಇವೆರಡಕ್ಕೆ ಉತ್ತರ ಕೊಟ್ಟರೆ ಮುಂದಿನ ಪ್ರಶ್ನೆಗಳನ್ನು ಕೇಳುವೆ. ಉತ್ತರ ಕೊಡುತ್ತೀರಿ ಎಂದು ನಂಬಿ ಕಾಯುತ್ತಿರುತ್ತೇನೆ.

    ಉತ್ತರ
  2. ವಿಜಯ ಪೈ's avatar
    ವಿಜಯ ಪೈ
    ಜುಲೈ 21 2011

    ವಿಷ್ಣುಪ್ರಿಯರೆ..
    ನೀವಿಲ್ಲಿ ಓದುಗರು ಕೇಳಿದ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರಿಸದರೆ ತಾವು ನಂಬಿದ/ಪ್ರತಿಪಾದಿಸುವ ವಿಷಯಗಳು ಸ್ಪಷ್ಟವಾಗುತ್ತವೆ. ದಯವಿಟ್ಟು ಲೇಖನ ಬರೆದ ನಂತರ ಓದುಗರ ಜೊತೆ ಚರ್ಚೆಯಲ್ಲಿ ಭಾಗವಹಿಸಿ. ಧನ್ಯವಾದಗಳು.

    ಉತ್ತರ
  3. sriharsha's avatar
    sriharsha
    ಜುಲೈ 23 2011

    ಇದೊಂದು ಕೆಲಸಕ್ಕೆ ಬಾರದ ಅರ್ಥಹೀನ ಬರಹ!!

    ವಿಜ್ಞಾನಿಗಳು ಸಮತ ವ್ಯರ್ಥ ಮಾಡದೇ ತಮ್ಮ ಕೆಲಸ ತಾವು ಮುಂದುವರಿಸುವುದು ಒಳಿತು.

    ಉತ್ತರ

Leave a reply to ವಿಜಯ ಪೈ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments