ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು?
ಬಹುಶಃ ಯಡಿಯೂರಪ್ಪರಿಗೆ ಅಧಿಕಾರ ಹಸ್ತಾಂತರ ಮಾಡಲು ಇದಕ್ಕಿಂತ ಸುಸಂದರ್ಭ ಮುಂದೆ ಬರುವುದು ಅನುಮಾನ, ಅದೇ ರೀತಿ ಯಡಿಯೂರಪ್ಪರಿಂದ ರಾಜೀನಾಮೆ ಕೇಳಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಯನ್ನು ಅನುಸ್ಥಾಪಿಸಲು ಬಿಜೆಪಿ ಹೌಕಮಾಂಡ್‌ಗೂ ಇದು ಸುವರ್ಣವಕಾಶ. ಆದರೆ ಯಡಿಯೂರಪ್ಪ ತಮ್ಮ ಹಠವನ್ನು ಬಿಡುವರೇ ಅಥವಾ ಮತ್ತೇ ತನ್ನ ಲಿಂಗಾಯತ ಆಸ್ತ್ರವನ್ನು ಬಿಟ್ಟು ಹೈಕಮಾಂಡ್ ಅನ್ನು ನಿಶ್ಯಸ್ತ್ರಗೊಳಿಸವರೇ ಎಂಬುದು ಈ ಸಮಯದ ಕುತುಹಲ.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಒಪ್ಪಿದರೆ ಬಿಜೆಪಿ ಶೋಭಾ ಕರಂದ್ಲಾಜೆ, ಆರ್. ಅಶೋಕ್, ವಿ ಎಸ್ ಅಚಾರ್ಯ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಸುರೇಶ್ ಕುಮಾರ್ ಅಥವಾ ಅನಂತ್ ಕುಮಾರ್‌ರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿಸುವ ಸಾಧ್ಯತೆಯಿದೆ. ಇನ್ನು ಕಪ್ಪು ಕುದುರೆಗಳು ಕೂಡ ಅಚಾನಕ್ ಆಗಿ ರಂಗ ಪ್ರವೇಶಿಸಿ ರೇಸ್‌ಗೆಲ್ಲಲು ಬಹುದು. ಈ ರಾಜಕೀಯದಲ್ಲಿ ಎಲ್ಲವೂ ಸಾಧ್ಯ!
ಇಲ್ಲಿ ಸದಾನಂದ ಗೌಡ ಮತ್ತು ಅನಂತ್ ಕುಮಾರ್ ಲೋಕಸಭೆ ಸದಸ್ಯರು. ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಅಂದರೆ ಇಂದಲ್ಲ ನಾಳೆ ತಮ್ಮ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನ ಸಭೆ ಪ್ರವೇಶಿಸಬೇಕಾಗುತ್ತದೆ. ಆದರೆ ಇದನ್ನು ಪಕ್ಷದ ಹೈಕಮಾಂಡ್ ಒಪ್ಪುವುದು ಅನುಮಾನ. ಅದರಲ್ಲೂ ಯಡಿಯೂರಪ್ಪ ಈಗ ಅನಂತ್ ಕುಮಾರ್‌ರ ನೆರಳು ಕಂಡರು ಕತ್ತಿ ಝಳಪಿಸುತ್ತಿದ್ದಾರೆ. ಅದೇ ರೀತಿ ಅನಂತ್ ಕುಮಾರ್ ಕೂಡ ಒಂದೆರಡು ಬಾರಿ ಯಡಿಯೂರಪ್ಪರ ಪದಚ್ಯುತಿಗಾಗಿ ತಿಪ್ಪರಲಾಗ ಹಾಕಿದ್ದರು. ಇದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಹುಬ್ಬಳಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಅನಂತ್‌ರ ಹಾಜರಾತಿಯೇ ಇರಲಿಲ್ಲ. ಒಂದು ವೇಳೆ ಅನಂತ್‌ಗೆ ಪಟ್ಟ ನೀಡಿದರೆ ಯಡಿಯೂರಪ್ಪ ಮತ್ತವರ ಪಡೆ ಪಕ್ಷ ತೊರೆಯುವುದು ನಿಶ್ಚಿತ, ಆ ಕಾರಣದಿಂದ ಬಿಜೆಪಿ ಸರ್ಕಾರವೇ ಪತನವಾಗಬಹುದು. ರಾಜ್ಯ ಮತ್ತೆ ಚುನಾವಣೆ ಎದುರಿಸಬೇಕಾಗಬಹುದು. ಈಗ ಚುನಾವಣೆ ನಡೆದರೆ ಬಿಜೆಪಿ ಕಾರ್ಯಕರ್ತ ಯಡಿಯೂರಪ್ಪರ ಯಾವ ಘನಂದಾರಿ ಕೆಲಸವನ್ನು ಹಿಡಿದು ಕೊಂಡು ಜನರಲ್ಲಿ ಮತ ಯಾಚಿಸಬಲ್ಲ? ಯಡಿಯೂರಪ್ಪರಿಗೆ ಮಾನ ಮಾರ್ಯದೆ ಇಲ್ಲವೆಂದು ಆ ಕಾರ್ಯಕರ್ತನಿಗೂ ಇಲ್ಲವೇ? ಇಲ್ಲಿ ಮತ್ತೊಂದು ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ… ಯಾರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವುದು ಎಂಬ ದೊಡ್ಡ ಪ್ರಶ್ನೆಯದು. ಆಗ ಬಿಜೆಪಿ ಮತ್ತೇ ಗೊಂದಲಕ್ಕೆ ಸಿಳುಕಿ ಕೊಳ್ಳಲಿದೆ. ಇಲ್ಲಿ ಯಾರನ್ನು ಬಿಂಬಿಸಿದರೂ ಜಾತಿಯ ಪ್ರಶ್ನೆ ಅದರ ಕಾಲಿಗೆ, ಮೈಗೆ ಎಲ್ಲ ತೊಡರಿಕ್ಕೊಳ್ಳುತ್ತದೆ. ಅದಕ್ಕಾಗಿ ಸುರಕ್ಷಿತವಾಗಿರೋಣ ಎಂದು ಆದು ಸಮೂಹ ನಾಯಕತ್ವದ ಮೊರೆ ಹೋಗಬಹುದು. ಆದರೆ ಇಲ್ಲಿ ಮತ್ತೇ ಬಣ ಸಂಸ್ಕೃತಿ ಹುಟ್ಟಿಕೊಂಡು (ಇದರರ್ಥ ಈಗ ಇಲ್ಲ ಎಂದಲ್ಲ) ಪಕ್ಷವನ್ನು ರಾಜ್ಯದಲ್ಲಿ ಹೇಳ ಹೆಸರಿಲ್ಲದ ಹಾಗೆ ಮಾಡುವುದು ನಿಶ್ಚಿತ. ಅದ್ದರಿಂದ ಅನಂತ್ ಕುಮಾರ್‌ಗೆ ಹೋಲಿಸಿದರೆ ಸದಾನಂದ ಗೌಡ ಉತ್ತಮ ಆಯ್ಕೆ ಎಂದು ಬಿಜೆಪಿ ಹೈಕಮಾಂಡ್ ಭಾವಿಸಬಹುದು. ಬಿಜೆಪಿ ಅಧಿಕಾರಕ್ಕೆ ಬಂದಾಗ ಸದಾನಂದ ಗೌಡ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದರು ಎಂಬುದು ಇಲ್ಲಿ ಉಲ್ಲೇಖನಿಯ. ಅವರು ಯಡಿಯೂರಪ್ಪರ ಆಪ್ತ ವಲಯದಲ್ಲಿರುವುದರಿಂದ ಅವರಿಗೆ ಯಡಿಯೂರಪ್ಪರಿಂದ ಅಡ್ಡಿಯಾಗಲಾರದು. ಆದರೆ ಹಸನ್ಮುಖಿ ಸದಾನಂದ ಗೌಡರು ಒಕ್ಕಲಿಗ ವರ್ಗದವರಾಗಿರುವುದರಿಂದ ಶೋಭಾ ಕರಂದ್ಲಾಜೆ ಮತ್ತು ಆರ್ ಆಶೋಕ್ ಅವರ ಆಯ್ಕೆಗೆ ಅಡ್ಡಗಾಲು ಹಾಕಬಹುದು. ಆದರಲ್ಲೂ ಶೋಭಾರಿಗೆ ಬೇಸರವಾದರೆ ಯಡಿಯೂರಪ್ಪ ಸುಮ್ಮನಿರುತ್ತಾರೆಯೇ? ಅದ್ದರಿಂದ ಇವರಿಬ್ಬರು ನೇರವಾಗಿ ತಾವೇ ಮುಖ್ಯಮಂತ್ರಿ ಆಗುವ ಪ್ರಯತ್ನ ಮಾಡುವುದು ಬಿಟ್ಟು ತಮ್ಮವರನ್ನು ಮುಖ್ಯಮಂತ್ರಿಯನ್ನಾಗಿಸಲು ಅವಿರತವಾಗಿ ಶ್ರಮಿಸುವ ಸಾಧ್ಯತೆಯೇ ಹೆಚ್ಚು.
ಇನ್ನು ರೆಡ್ಡಿ ಸೋದರರು ಮುಖ್ಯಮಂತ್ರಿ ಬಿಡಿ ಮಂತ್ರಿ ಸ್ಥಾನ ಉಳಿದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದಾರೆ. ಬಹುಶಃ ಅವರ ಕೈಯಿಂದ ಮಂತ್ರಿ ಹುದ್ದೆ ಕಿತ್ತುಕೊಳ್ಳುವುದು ನಿಶ್ಚಿತ. ಆದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಜಗದೀಶ್ ಶೆಟ್ಟರ್‌ನ್ನು ಕೂರಿಸಲು ತೆರೆ ಮರೆಯ ಪ್ರಯತ್ನ ಮಾಡುವುದು ಖಂಡಿತ. ಆದರೆ ಅವರ ಪ್ರಯತ್ನಕ್ಕೆ ಹೈಕಮಾಂಡ್ ಸೊಪ್ಪು ಹಾಕುವುದು ಅನುಮಾನ ಅಥವಾ ಅವರ ಪ್ರಯತ್ನವೇ ಶೆಟ್ಟರ್‌ರ ಆಸೆಗೆ ತಣ್ಣೀರಾಗಲು ಬಹುದು. ಶೆಟ್ಟರ್ ಆಯ್ಕೆಯನ್ನು ಯಡಿಯೂರಪ್ಪ ಸುತಾರಾಂ ಒಪ್ಪುವುದಿಲ್ಲ. ಎಲ್ಲಿಯಾದರೂ ಬಿಜೆಪಿ ಶೆಟ್ಟರ್‌ನ್ನು ಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಿದರೆ ಯಡಿಯೂರಪ್ಪ ಇದು ತನಗೆ ಮುಳುಗು ನೀರು ಎಂದೆ ಭಾವಿಸುತ್ತಾರೆ ಮತ್ತು ಅವರು ಪಕ್ಷದಿಂದ ಹೊರ ಹೋಗುವ ಸಾಧ್ಯತೆಯೇ ಹೆಚ್ಚು. ಯಡಿಯೂರಪ್ಪ ತಾವು ಮುಖ್ಯಮಂತ್ರಿಯಗುವ ಮುಂಚೆಯೆ ಬಿ ಬಿ ಶಿವಪ್ಪ, ಬಸವರಾಜ್ ಪಾಟೀಲ್ ಸೆಡಂ ಮುಂತಾದವರ ರಾಜಕೀಯ ಭವಿಷ್ಯವನ್ನೇ ನುಂಗಿ ನೀರು ಕುಡಿದವರು. ಅದೇ ಬುದ್ಧಿಯನ್ನು ಮತ್ತೂ ಮುಂದುವರಿಸಿ ಬಸನಗೌಡ ಪಾಟೀಲ್ ಯತ್ನಾಲ್‌ರನ್ನು ಪಕ್ಷದಿಂದ ಹೊರ ಹೋಗುವಂತೆ ಮಾಡಿದ್ದರು. ಇದೇ ರೀತಿ ಶೆಟ್ಟರ್ ಕೊರಳಿಗೆ ಉರುಳಾಗುವ ಅನೇಕ ದಾಳಗಳನ್ನ ಎಸೆದು ಅವರನ್ನು ರಾಜಕೀಯವಾಗಿ ಇಲ್ಲವಾಗಿಸಲು ಸಾಕಷ್ಟು ಪ್ರಯತ್ನಿಸಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಇಲ್ಲೇ ಯಡಿಯೂರಪ್ಪರ ಸೋಗಲಾಡಿತ ಬಟಾ ಬಯಲಾಗುತ್ತದೆ. ಅವರು ನಿಜವಾಗಿಯೂ ಲಿಂಗಾಯತರ ಹಿತ ಚಿಂತನೆ ಮಾಡುವವರೇ ಆದರೆ “ನಾನು ಹೋದರೆ ಹೋಗಲಿ ಮತ್ತೊಬ್ಬ ಲಿಂಗಾಯತ ರಾಜ್ಯದ ಮುಖ್ಯಮಂತ್ರಿ ಅಗುತ್ತಾನೆ, ಆಗಲಿ ಬಿಡಿ ನಮ್ಮ ಸಮುದಾಯಕ್ಕೆ ಒಳ್ಳೆದಾಗಲಿ” ಎಂದು ಶೆಟ್ಟರ್‌ಗೆ ಅವಕಾಶ ಮಾಡಿಕೊಡುತ್ತಿದ್ದರು. ಆದರೆ ಅವರಿಗೆ ಇಡೀ ಲಿಂಗಾಯತ ಸಮುದಾಯಕ್ಕೆ ತಾನೊಬ್ಬನೆ ಏಕಚಕ್ರಾಧಿಪತಿ ನನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬ ಸ್ವಾರ್ಥ ಮುಖ್ಯವೇ ಹೊರತು ಆ ಸಮುದಾಯದ ಒಳಿತಲ್ಲ. ಲೋಕಾಯುಕ್ತ ವರದಿಯ ಬಳಿಕವು ಲಿಂಗಾಯತ ಸಮುದಾಯ ಯಡಿಯೂರಪ್ಪರ ಹಿಂದೆ ಮೊದಲಿನಂತೆ ನಿಲ್ಲುತ್ತದೆ ಎಂದು ಭಾವಿಸುವ ಹಾಗಿಲ್ಲ. ಭ್ರಷ್ಟರ ರಕ್ಷಣೆಗೆ ನಿಲ್ಲುವಷ್ಟು ನಮ್ಮ ಯಾವುದೇ ಮಠ ಮಾನ್ಯಗಳು, ಸಮುದಾಯಗಳು ಕೆಟ್ಟು ಹೋಗಿಲ್ಲ ಎಂದೆ ನಾನು ಭಾವಿಸುತ್ತೇನೆ. ಇಲ್ಲಿ ಶೆಟ್ಟರ್‌ರನ್ನು ಆಯ್ಕೆ ಮಾಡುವ ರಿಸ್ಕ್‌ನ್ನು ಹೈಕಮಾಂಡ್ ತೆಗೆದುಕೊಳ್ಳಹುದು. ಆದರೆ ಅದು ಯಡಿಯೂರಪ್ಪ ಪಕ್ಷ ತೊರೆಯುತ್ತಾರೆ ಎಂದರೆ ಅವರ ಹಿಂದೆ ಎಷ್ಟು ಜನ ಶಾಸಕರು ಹೋಗುತ್ತಾರೆ ಎಂದು ಲೆಕ್ಕ ಹಾಕಿಕೊಂಡ ಬಳಿಕವೇ ತೆಗೆದುಕೊಳ್ಳಬಹುದಾದ ಕ್ಯಾಲ್ಕುಲೇಟೆಡ್ ರಿಸ್ಕ್.
ಇಂದು ಕಾಂಗ್ರೆಸ್‌ನಲ್ಲಾಗಲಿ, ಜಾತ್ಯತೀತ ಜನತಾದಳದಲ್ಲಾಗಲಿ ಪ್ರಬಲ ಲಿಂಗಾಯತ ನಾಯಕರುಗಳಿಲ್ಲ. ಜನತಾದಳ ಎಂದರೆ ನೆನಪಾಗುವುದು ಗೌಡ ಫ್ಯಾಮಿಲಿ. ಯತ್ನಾಲ್ ಲಿಂಗಾಯತ ಸಮುದಾಯದವರಾಸರು ಪ್ರಭಾವಿ ಮಟ್ಟಕ್ಕೆ ಇನ್ನೂ ಏರಿಲ್ಲ. ಇನ್ನು ಕಾಂಗ್ರೆಸ್‌ನ ನಾಯಕರ ಪಟ್ಟಿ ತೆಗೆದರೆ ಅಲ್ಲಿ ನೆನಪಾಗುವ ಹೆಸರುಗಳನ್ನೊಮ್ಮೆ ನೋಡಿ ಪರಮೇಶ್ವರ್, ಸಿದ್ಧರಾಮಯ್ಯ, ಡಿ ಕೆ ಶಿವಕುಮಾರ್, ಎಚ್ ವಿಶ್ವನಾಥ್, ವೀರಪ್ಪ ಮೊಯಿಲಿ, ಎಸ್ ಎಮ್ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಆರ್ ವಿ ದೇಶಪಾಂಡೆ ಇವರಲ್ಲಿ ಯಾರು ಲಿಂಗಾಯತರಿಲ್ಲ. ಆದರೆ ಬಿಜೆಪಿಯಲ್ಲಿ ಯಡ್ಡಿ ಬಿಟ್ಟರೆ ಶೆಟ್ಟರ್ ಇದ್ದಾರೆ. ಇವರಿಬ್ಬರನ್ನು ಬಿಟ್ಟರೆ ಬಸವರಾಜ ಬೊಮ್ಮಾಯಿ ಇದ್ದಾರೆ. ಆದ್ದರಿಂದ ಯಡಿಯೂರಪ್ಪ ಪಕ್ಷ ತೊರೆದರೆ ಅಥವಾ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಇಡೀ ಲಿಂಗಾಯತ ಸಮುದಾಯ ಬಿಜೆಪಿಯನ್ನು ಬಹಿಷ್ಕರಿಸಿ ಬೇರೆ ಪಕ್ಷಗಳ ಹಿಂದೆ ಹೋಗುತ್ತಾರೆ ಎಂದು ನಂಬುವುದೇ ಮೂರ್ಖತನ. ಇದೆಲ್ಲ ಯಡಿಯೂರಪ್ಪ ಸೃಷ್ಟಿಸಿರುವ ಭ್ರಮೆಗಳಷ್ಟೆ.
ಇನ್ನು ಯಡಿಯೂರಪ್ಪ ತಮ್ಮ ಪರಮಾಪ್ತೆ ಶೋಭಾ ಕರಂದ್ಲಾಜೆಯವರನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಿಸುವ ಸಾಧ್ಯತೆ ನಿಚ್ಛಳ. ಕರಂದ್ಲಾಜೆಯ ಕೆಲಸದ ಹಸಿವು ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಅವರ ಆಯ್ಕೆಯನ್ನು ವಿರೋಧಿಸುವ ಪ್ರಬಲ ಗುಂಪು ಪಕ್ಷದೊಳಗೆ ಇದೆ. ಇನ್ನೊಂದು ನಿಟ್ಟಿನಲ್ಲಿ ಹೇಳುವುದಾದರೆ ಯಡಿಯೂರಪ್ಪ ಹಗರಣಗಳ ಕಿರಿಕಿರಿಯಿಂದಾಗಿ ಪದಚ್ಯುತರಾದರೆ ಅಕಾಲ ರಾಜಕೀಯ ಮುಸ್ಸಂಜೆ ತಲುಪಿದಂತೆ. ಆ ಬಳಿಕ ಶೋಭಾ ಬಿಜೆಪಿಯಲ್ಲಿ ತನ್ನ ದಾರಿಯನ್ನು ತಾನೆ ಕಂಡುಕೊಳ್ಳಬೇಕಾಗುತ್ತದೆ. ಇಲ್ಲಿ ಆಕೆ ಲಿಂಗಾಯತ ನಾಯಕರಾದ ಶೆಟ್ಟರ್, ಕೇಂದ್ರದಲ್ಲಿ ಪ್ರಭಾವಿಯಾಗಿರುವ ಅನಂತ್ ಕುಮಾರ್ ಮತ್ತು ತನ್ನದೇ ಒಕ್ಕಲಿಗ ಸಮುದಾಯದ ಆರ್. ಆಶೋಕ್‌ರ ಪ್ರಬಲ ರಾಜಕೀಯ ನಡೆಗಳನ್ನು ಎದುರಿಸಿ ತನ್ನ ಭವಿಷ್ಯವನ್ನು ಕಂಡುಕೊಳ್ಳುವುದು ನಿಜಕ್ಕೂ ಕಠಿಣ. ಅದರ ಬದಲು ತಾನು ಯಡಿಯೂರಪ್ಪರ ನೆರಳಿನಿಂದ ಹೊರ ಬಂದು, ಬಿಜೆಪಿಯಲ್ಲಿ ತನ್ನದೆ ಆದ ಅಸ್ತಿತ್ವವನ್ನು ಕಾಣುವವರೆಗೆ ಆಕೆ ಕಾಯುವುದೇ ಒಳಿತು. ಒಂದು ವೇಳೆ ಶೋಭಾ ಆಯ್ಕೆಗೆ ನಿರೀಕ್ಷಿತ ವಿರೋಧ ವ್ಯಕ್ತವಾಗದೇ ಹೋದರೆ ಆಕೆ ಚಿಕ್ಕ ಪುಟ್ಟ ವಿರೋಧವನ್ನು ಲೆಕ್ಕಿಸದೇ ಈ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಳ್ಳುವುದೇ ಉತ್ತಮ. ಶೋಭಾರನ್ನು ಸಿಎಮ್ ಮಾಡಿದರೆ ಯಡಿಯೂರಪ್ಪರ ತಾನು ಲಿಂಗಾಯತ ಸಮುದಾಯದ ಹಿತ ರಕ್ಷಕ ಎಂಬ ಸ್ವ ಘೋಷಿತ ಇಮೇಜ್‌ಗೆ ಧಕ್ಕೆ ಉಂಟು ಮಾಡಬಹುದು. ಆದರೆ ನ್ಯಾ. ಸಂತೋಷ್ ಹೆಗ್ಗಡೆಯವರ ಮಾತಿನಲ್ಲೆ ಹೇಳುವುದಾದರೆ ಒಂದು ತಪ್ಪಿನಲ್ಲಿ ಶೆ. ೫೦ ಭಾಗ ಪಾಪ(ಶಿಕ್ಷೆ) ತಪ್ಪು ಮಾಡಿದವನದ್ದು, ಶೇ. ೨೫ ಭಾಗ ಪಾಪ (ಶಿಕ್ಷೆ) ಅದಕ್ಕೆ ಪ್ರೋತ್ಸಾಹ ನೀಡಿದವನದ್ದು ಹಾಗೂ ಶೇ. ೨೫ ಭಾಗ ಪಾಪ (ಶಿಕ್ಷೆ) ಆ ತಪ್ಪನ್ನು ನೋಡಿಯೂ ಸುಮ್ಮನಿದ್ದವನದ್ದು. ಅಂದರೆ ಕರಂದ್ಲಾಜೆ ಈಗಾಗಲೇ ಶೇ ೫೦ರಷ್ಟು ಪಾಪ ಮಾಡಿದ್ದಾರೆ. ಇದನ್ನೆ ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಅವರು ಯಡಿಯೂರಪ್ಪ ಮಾಡಿದ ತಪ್ಪಿಗೆ ಶೇ. ೫೦ರಷ್ಟು ಶಿಕ್ಷೆ ಪಡೆಯಲು ಆರ್ಹರು. ಯಡ್ಡಿಯ ಆಖಿಲಾಂಡ ಕೋಟಿ ಭ್ರಷ್ಟಾಚಾರದ ಬಗ್ಗೆ ಆಕೆಗೆ ಗೊತ್ತೇ ಇರಲಿಲ್ಲವೆಂದರೆ ಆಕೆ ಯಡ್ಡಿಯ ಪರಮಾಪ್ತೆ ಎಂಬುದಕ್ಕೆ ಆರ್ಥವೇ ಇಲ್ಲ. ಇನ್ನೊಂದು ಅಂಶವೆಂದರೆ ಯಡಿಯೂರಪ್ಪ ಶೋಭಾರನ್ನು ಮುಖ್ಯಮಂತ್ರಿಯನ್ನಾಗಿಸಲು ಪ್ರಯತ್ನಿಸುತ್ತಿರುವುದು ಪರೋಕ್ಷವಾಗಿ ತಾನು ರಾಜ್ಯವನ್ನು ಮುನ್ನಡೆಸಬೇಕು ಎಂಬ ಉದ್ದೇಶ ಮತ್ತು ತನ್ನವರೇ ಸಿಎಮ್ ಆಗಿದ್ದರೆ ಸರ್ಕಾರವನ್ನು ತನ್ನ ಮೇಲಿರುವ ಆರೋಪಗಳಿಗೆ ಗುರಾಣಿ ಯನ್ನಾಗಿಸಬಹುದು ಎಂಬ ಕಾರಣಕ್ಕಾಗಿ. ಅದ್ದರಿಂದ ಶೋಭಾ ಕರಂದ್ಲಾಜೆ ತನ್ನ ಸುದೀರ್ಘ ರಾಜಕೀಯ ಭವಿಷ್ಯದ ಒಳಿತಿಗಾಗಿ ಈ ಕೊಡುಗೆಯನ್ನು ತಿರಸ್ಕರಿಸುವುದೇ ಕ್ಷೇಮ.
ಆರ್ ಆಶೋಕ್ ಮೊದಲು ಅನಂತ್ ಕುಮಾರ್ ಬಣದೊಂದಿಗೆ ಗುರುತಿಸಿಕೊಂಡಿದ್ದವರು. ಆ ಬಳಿಕ ತಮ್ಮ ಬಣ ನಿಷ್ಠೆಯನ್ನು ಯಡಿಯೂರಪ್ಪ ಕ್ಯಾಂಪ್‌ಗೆ ಬದಲಿಸಿ ಮಹತ್ವದ ಗೃಹ ಮತ್ತು ಸಾರಿಗೆ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೆರಡು ಹಗರಣಗಳ ಕಲೆ ಮೈಮೇಲೆ ಮೆತ್ತಿಕೊಂಡಿವೆ. ಬಿಜೆಪಿಯಲ್ಲಿನ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ. ಪ್ರಸಕ್ತ ರಾಜ್ಯ ಬಿಜೆಪಿಯಲ್ಲಿರುವ ಬಣಗಳನ್ನು ಕೇವಲ ಎರಡಕ್ಕೆ ಸೀಮಿತಗೊಳಿಸಿ ಮಾತನಾಡಿದರೆ ಆರ್ ಆಶೋಕ್‌ರ ಉಮೇದುದಾರಿಕೆಯನ್ನು ಎರಡು ಬಣಗಳು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಎಲ್ಲಾದರೂ ವಿರೋಧ ವ್ಯಕ್ತ ಪಡಿಸಿದರೆ ಅದು ಯಡಿಯೂರಪ್ಪ ಬಣವಾಗಿರುವ ಸಾಧ್ಯತೆ ಸಂಭವ ಇದೆ. ಕಾರಣ ಶೋಭಾ ಫ್ಯಾಕ್ಟರ್!
ಇನ್ನು ಸುರೇಶ್ ಕುಮಾರ್ ಮತ್ತು ವಿ ಎಸ್ ಆಚಾರ್ಯ ಇಬ್ಬರು ಕೂಡ ಮುಖ್ಯಮಂತ್ರಿ ಸ್ಥಾನದ ಪೈಪೋಟಿಗೆ ಅನಿವಾರ್ಯವಾಗಿ ಬಿದ್ದಿದ್ದಾರೆ. ಇಬ್ಬರಿಗೂ ಪ್ರಾಮಾಣಿಕತೆಯೇ ಆಸ್ತಿ. ಇಲ್ಲಿ ವಿ ಎಸ್ ಆಚಾರ್ಯ ಯಡಿಯೂರಪ್ಪ ಕೃಪಾಪೋಷಿತ ಬಂಡಾಯ ಮತ್ತು ಸಮಾಧಾನ ಮಂಡಳಿಯ ಖಾಯಂ ಸದಸ್ಯ. ಆಚಾರ್ಯರಿಗೆ ಯಡಿಯೂರಪ್ಪರ ಪೂರ್ಣ ರಕ್ಷೆಯಿದೆ. ಹಾಗೆಂದು ಅವರನ್ನು ವಿರೋಧಿಸುವರು ಆಚಾರ್ಯ ಯಡ್ಡಿ ಬಣಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕಾಗಿಯೇ ಇವರನ್ನು ವಿರೋಧಿಸಬೇಕು ಅನ್ನುವುದನ್ನು ಬಿಟ್ಟು ಬೇರೆ ಕಾರಣಗಳಿಲ್ಲ. ಇನ್ನು ಸುರೇಶ್ ಕುಮಾರ್‌ರ ಪ್ರಮಾಣಿಕತೆ, ಸಂವೇದನಶೀಲತೆ ಬಗ್ಗೆ ಎರಡು ಮಾತಿಲ್ಲ. ಆವರ ಆಯ್ಕೆಯನ್ನು ಯಾವ ಬಣಗಳು ಕೂಡ ನೇರವಾಗಿ ವಿರೋಧಿಸಲಾರವು. ಆದರೆ ಸುರೇಶ್ ಕುಮಾರ್‌ರ ಪ್ರಾಮಾಣಿಕತೆಯ ಜೊತೆ ಹೆಜ್ಜೆ ಹಾಕಲಾಗದ ಕೆಲವು ಶಕ್ತಿಗಳು ಅವರ ಆಯ್ಕೆಯನ್ನು ವಿರೋಧಿಸುವ ಸಾಧ್ಯತೆ ಇದೆ. ಇವರಿಬ್ಬರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಜಾತಿಯ ಪ್ರಾಬಲ್ಯತೆಯೆ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಮಾನದಂಡವಾಗುವುದಾದರೆ ಇವರಿಬ್ಬರ ಉಮೇದುದಾರಿಕೆಯೂ ಮೂಲೆ ಗುಂಪಾಗುತ್ತದೆ.
ವಾಸ್ತವವಾಗಿ ಜಾತಿಯನ್ನೇ ಮಾನದಂಡವಾಗಿಸಿ ಮತದಾರ ಮತದಾನ ಮಾಡುತ್ತಾನೆ ಎಂದಾದರೆ ಗುಜರಾತ್‌ನಲ್ಲಿ ನರೇಂದ್ರ ಮೋದಿ, ಬಿಹಾರದಲ್ಲಿ ನಿತೀಶ್ ಕುಮಾರ್ ಆಡಳಿತ ನಡೆಸಲು ಸಾಧ್ಯವೇ ಇರಲಿಲ್ಲ. ಅದು ಎರಡೆರಡು ಬಾರಿಗೆ! ಖ್ಯಾತ ನಟಿ ಕತ್ರಿನಾ ಕೈಫ್‌ರ ಮಾತಿನಲ್ಲೇ ಹೇಳುವುದಾದರೆ ಅರ್ಧ ಭಾರತೀಯನಾಗಿರುವ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಅದು ಹೇಗೆ ತನ್ನ ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತದೆ? ಅವರಿಗೆ ಮತ ಹಾಕಬಹುದಾದ ಅರ್ಧ ಭಾರತೀಯರು ದೇಶದಲ್ಲಿ ಎಷ್ಟು ಜನ ಇದ್ದಾರೆ? ಜಾತಿಯ ಹೆಸರು ಹೇಳಿ ರಾಜಕೀಯ ಮಾಡುವುದು ದುರ್ಬಲತೆಯ ಲಕ್ಷಣ. ಆ ಜಾತಿಯ ಮಂತ್ರಕ್ಕೆ ಬೆದರಿ ಕೂರುವುದು ಪುಕ್ಕಲುತನದ ಪರಮಾವಧಿ.
ಇನ್ನು ಯಡಿಯೂರಪ್ಪರ ಮೇಲೆ ಸಾಲು ಸಾಲು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಸಿಇಸಿ ಸುಪ್ರಿಂ ಕೋರ್ಟ್‌ಗೆ ತನ್ನ ಪೂರ್ಣ ವರದಿ ನೀಡಲು ಬಾಕಿಯಿದೆ.ಅದ್ದರಿಂದ ಅವರು ರಾಜೀನಾಮೆ ನೀಡಿದರೆ ಇಲ್ಲಿಗೆ ಎಲ್ಲವೂ ಮುಕ್ತಾಯವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಅವರು ಮುಖ್ಯಮಂತ್ರಿ ಸ್ಥಾನದಲ್ಲೇ ಉಳಿದರೆ ಆ ಪ್ರಕರಣಗಳು, ಅದರ ವಿಚಾರಣೆ ಸರ್ಕಾರ ಮತ್ತು ಬಿಜೆಪಿಗೆ ಕೆಟ್ಟ ಹೆಸರು ಮತ್ತು ಆಗಾಗ ತಲೆ ನೋವು ತರಲಿದೆ. ಅದ್ದರಿಂದ ಒಮ್ಮೆಲೆ ಯಡ್ಡಿ ಮತ್ತು ಸರ್ಕಾರಕ್ಕಿರುವ ಸಂಬಂಧವನ್ನು ಕಡಿದು ಹಾಕಿ ಅವರನ್ನು ಆಡಳಿತ ಪಕ್ಷದ ಶಾಸಕ ಸ್ಥಾನದಲ್ಲಿ ಕೂರಿಸಿ ಬಿಟ್ಟರೆ, ಬೀಸೋ ದೊಣ್ಣೆ ತಪ್ಪಿದಂತೆ. ನಂತರ ಅವರಾಯಿತು ಅವರ ಪ್ರಕರಣಗಳಾಯಿತು ಅಂತ ಸುಮ್ಮನಿರಬಹುದು.
ಹಾಗೇ ಮುಂದೆ ಮುಖ್ಯಮಂತ್ರಿ ಆಗುವಾತ, ಆದಷ್ಟು ಪಕ್ಷದಲ್ಲಿ ಗುಂಪುಗಾರಿಕೆ ಹುಟ್ಟಿಕೊಳ್ಳದಂತೆ ನೋಟಿಕೊಳ್ಳಬೇಕಿದೆ. ಯಡ್ಡಿ ಜೊತೆ ಗುರುತಿಸಿಕೊಳ್ಳುವವರನ್ನು ಆದಷ್ಟು ಮುಖ್ಯ ವಾಹಿನಿಗೆ ಎಳೆಯುವ ಕಠಿಣ ಕೆಲಸ ಮಾಡಬೇಕಿದೆ. ಏಕೆಂದರೆ ಯಡ್ಡಿ ಯಾವುದೇ ಕ್ಷಣದಲ್ಲಿ ಬಗಲ ಮುಳ್ಳಾಗಬಹುದು.
ರಾಜ್ಯದ ಬಿಜೆಪಿ ಶಾಸಕರುಗಳೇ ನಿಮಗೆ ಮಾನ, ಮಾರ್ಯಾದೆ, ನಾಚಿಕೆ ಇತ್ಯಾದಿ ಇದೆ ಎಂದಾದರೆ ದಯಮಾಡಿ ಯಡಿಯೂರಪ್ಪರನ್ನು ಸಿಎಮ್ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡಿ. ಇಲ್ಲವೆಂದರೆ ಮುಂದಿನ ಚುನಾವಣೆಯಲ್ಲಿ ನೀವು ಗಂಟು ಮೂಟೆ ಕಟ್ಟುವ ಹಾಗೆ ಮತದಾರರಾದ ನಾವು ಮಾಡುತ್ತೇವೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಯಡಿಯೂರಪ್ಪ ಕಳೆದ 3 ವರ್ಷಗಳಿಂದ ಮಾಡುತ್ತಲೇ ಇದ್ದಾರೆ. ಎಚ್ಚರ!






Shobakka is right person!
suresh kumar aadru parvagilla
i feel same
jagadish shetter or sadananda gowda
Why is no one talking about Shobha’s estate scam in Coorg? People of Puttur still talk how for Shobha’s sisters wedding, all govt officials were asked to collect money from bars. And how about the recent mess she has created in “gas” supply?
Estate scam she is still accused not proved guilty or convicted.
Shobhakka collected money from Bars, not from formers or poors.
Recent mess was intended to help people. As the housewives were unaware of technology it was a fail. It was not intended to harm people.
Remember: After Shobha is power minister there has been no load Shedding.
Central govt has made petrol cost reach Rs.70.
Shobha is better.
Before commenting on any BJP leaders or Shobha on corruption issues, Let people question Sonia and her sycophants way of treating Indians and riding on common man’s back..Let the Cong and JDS of Karnataka clean themselves first and fire their salvos on BJP later.
Jokers from these two parties never let BJP breathe from the day one…what else you expect when the elasticity breaks..