ವಿಷಯದ ವಿವರಗಳಿಗೆ ದಾಟಿರಿ

Archive for

16
ಜೂನ್

ಮನದರಸಿಯಾಗುವಾಸೆ

ಅನಾಮಿಕ ಸಿದ್ದಾಂತ್

ನಿನ್ನ ಬೆಚ್ಚಗಿನ ಶ್ವಾಸದಲಿ, ಹೆಪ್ಪುಗಟ್ಟಿದ
ದುಃಖ ದುಮ್ಮನಗಳ ಕರಗಿಸಿ 
ಕಣ್ಣೀರಾಗಿ ಹರಿಸುವಾಸೆ

ಪರಿಸ್ಥಿತಿಗಳ ಹೊಡೆತಗಳಿಂದ ಬಳಲಿ, ಬೆಂಡಾಗಿರುವ
ನಿನ್ನ ತೋಳುಗಳ ಬಂಧನದಲ್ಲಿ
ದಣಿವಾರಿಸಿ ಕೊಳ್ಳುವಾಸೆ

ಎಲ್ಲರ ಕಣ್ತಪ್ಪಿಸಿ ನಿನ್ನ ಬರುವಿಕೆಯನ್ನೇ ಎದಿರುನೋಡುತಾ,
ನಿನ್ನಾಗಮನದ ಕನಸಿನ ರೋಮಾಂಚನದಲ್ಲಿ
ಮೈ ಮನಗಳ ಮೀಯಿಸುವಾಸೆ

ನಿನ್ನಯ ಮುಂದಿನ ಚಿಂತೆಗಳ ಹೊದಿಕೆಯಲಿ
ಇಂದಿನ ಅಸ್ಥಿರ ಬೆತ್ತಲ ದೇಹವನ್ನು ಮುಚ್ಚಲು,
ನಿನ್ನಾಸರೆಯ ದುಪ್ಪಟವನ್ನು ಹೊದೆಯುವಾಸೆ

ಇರುಳಿನಲಿ ನಿದ್ರಾದೇವಿಯು ಕೈಕೊಟ್ಟು ಕಾಮನ
ಕೈಗೆ ಜಾರಿಸಿದಾಗ, ನಕ್ಷತ್ರಗಳ ಬೆಳಕಿನಲಿ
ಅವನನ್ನೇ ಕಾಣುವಾಸೆ

ಹೊಟ್ಟೆತುಂಬಾ ಹಿಟ್ಟಿಲ್ಲದಿದ್ದರೂ ಮಲ್ಲಿಗೆ ಮುಡಿದು
ಲತಾಂಗಿಯಾಗಿ ಮನದನ್ನನ
ಮನದರಸಿಯಾಗುವಾಸೆ

******************************************