ವಿಷಯದ ವಿವರಗಳಿಗೆ ದಾಟಿರಿ

Archive for

30
ಜೂನ್

ಖೆಡ್ಡಾ – ೨ : ನಿಮಗೆ ಬೇಕಾ….. ಪ್ರೀತಿ!

ಹೇಮಂತ್ ಕುಮಾರ್

ಯಾವನಾದರೂ ಇನ್ನು ಮುಂದೆ ಲವ್ ಆಗಿದ್ಯ ನಿನಗೆ ಅಂತ ಕೇಳಿದ್ರಿ ಅಂದ್ರೆ ಹಿಗ್ಗಾ ಮುಗ್ಗಾ ಒದೆ ತಿಂತೀರಾ ಹುಶಾರಾಗಿರಿ ಹೇಳಿದ್ದೀನಿ. ಲವ್ ಅಂತೇ ಲವ್ವು ಸುಡುಗಾಡು. ಬರೀ ಬೂಟಾಟಿಕೆ. ಲವ್ವು ಅಂದದ್ದೇ ಹದಿನೈದರಿಂದ ಇಪ್ಪತ್ತೈದು ವರ್ಷದ ಹುಡುಗ ಹುಡುಗಿಯ ಚಿತ್ರವನ್ನ ಮನದ ಮುಂದೆ ತಂದು ನಿಲ್ಲಿಸಿಕೊಂಡು, ಪಾರ್ಕು, ಥಿಯೇಟರು, ಕಾಫೀ ಡೇ, ರೆಸಾರ್ಟುಗಳಿಗೆಲ್ಲಾ ಹೋಗಿಬಂದುಬಿಡ್ತೀರಿ. ನಾಚಿಕೆ ಆಗಲ್ವೇನ್ರೀ ಯಾರಿಗೂ. ನಾನೂ ನಂಬಿದ್ದೆ ಪ್ರೀತಿ ಇನ್ನೂ ಉಳ್ಕೊಂಡಿದೆ ಅಂತ. ಆದರೆ ಎಲ್ಲಿ ಉಳ್ಕೊಂಡಿದೆ ಅಂತ ಹುಡುಕೋಕೆ ಹೊರಟಾಗಲೇ ಗೊತ್ತಾಗಿದ್ದು…….

ನನ್ನಲ್ಲಿ ಬೆಟ್ಟದಷ್ಟು ತುಂಬಿಕೊಂಡಿದ್ದ ಪ್ರೀತಿಯಲ್ಲಿ ಒಂದು ಚಮಚೆಯಷ್ಟನ್ನ ಅಂಗೈಯಲ್ಲಿ ಇಟ್ಟುಕೊಂಡು ಯಾರಿಗಾದರೂ ಒಬ್ಬರಿಗೆ ಪ್ರೀತಿ ಕೊಡೋಣೆಂದು ಹೊರಟೆ. ಯಾರಿಗೆ ಕೊಡಲೆಂದೇ ಪ್ರಶ್ನೆ. ಆರೆ ಯಾರಿಗಾದರೇನಂತೆ ಎಲ್ಲರೂ ಮನುಷ್ಯರೇ ತಾನೆ? ಇನ್ನೂ ನೋಡಿದರೆ ಪ್ರಾಣಿಗಳಿಗೂ ಸಹ ಕೊಡಬಹುದು ನಾನು. ಯಾರಾದರೇನಂತೇ ಒಂದು ಜೀವ ನನ್ನ ಪ್ರೀತಿ ಪಡೆದುಕೊಂಡರೆ ಸಾಕಿತ್ತು ನನಗೆ. ಸರಿ, ಯಾರಿಗೆ ಕೊಡಲಿ. ಈ ರಸ್ತೆಯ ಆ ಪಕ್ಕದಲ್ಲಿ ಯಾರೋ ಒಬ್ಬ ನಿಂತಿರುವನು. ಏನೋ ಗಲಿಬಿಲಿಗೊಂಡವನಂತೆ ಕಾಣುತ್ತಿರುವನು. ಅವನಿಗೂ ನನ್ನಂತೆಯೇ ಯಾರೂ ಪ್ರೀತಿ ಕೊಟ್ಟೇ ಇಲ್ಲವೇನೋ ಅದಕ್ಕೇ ನನ್ನಂತೆಯೇ ಚಿಂತೆಯಲ್ಲಿರುವನೆಂದು ಊಹಿಸಿಕೊಂಡು ನೇರ ಅವನ ಬಳಿಗೇ ಹೊರಟೆ. ಫೋನಿನಲ್ಲಿ ಯಾರ ಅಮ್ಮನನ್ನೋ, ಅಕ್ಕನನ್ನೋ ಕೆಟ್ಟದಾಗಿಯಾದರೂ ನೆನಪಿಸಿಕೊಳ್ಳುತ್ತಿದ್ದ. ಅವನು ಮಾತು ಮುಗಿಸಲೆಂದು ನನ್ನ ಮುಷ್ಟಿ ತುಂಬು ಪ್ರೀತಿಯನ್ನು ಹಿಡಿದೇ ಕಾದೆ. ಆತ ಯಾರೋ ತನ್ನ ಸ್ನೇಹಿತನಿರಬೇಕು ಅವನ ಸಂಸಾರ, ವಂಶವನ್ನೆಲ್ಲಾ ನೆನಪಿಸಿಕೊಳ್ಳುತ್ತಲೇ ಇದ್ದ.