ಶೇರು ಮಾರುಕಟ್ಟೆ : ಭಾಗ -೧
– ವೆಂಕಟೇಶ್ ಗುರುರಾಜ್
ಹಣ ಯಾರಿಗೆ ಬೇಡ? ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಮತ್ತು ಅವನು ಸತ್ತಮೇಲೆ ಅವನ ಅಂತ್ಯಕ್ರಿಯಯನ್ನು ಮಾಡುವ ಅವನ ಮನೆಯವರಿಗೂ ಹಣ ಬೇಕೇಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾಮಕರಣದಿಂದ ತಿಥಿಯವರೆಗೆ. ನಾವು ನೀವೆಲ್ಲರೂ ನಮ್ಮ ಜೀವಿತ ಅವಧಿಯಲ್ಲಿ ಹಣವನ್ನು ನಮ್ಮ ಇತಿಮಿತಿಯಲ್ಲಿ ಸಂಪಾದಿಸುತ್ತೇವೆ. ಕೆಲವರು ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ಸ್ವಂತ ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ವ್ಯಾಪಾರ ವಹಿವಾಟು ಮಾಡಿ, ಮತ್ತೆ ಕೆಲವರು ಹಣದಿಂದ ಹಣವನ್ನು ಸಂಪಾದಿಸುತ್ತಾರೆ. ಮೊದಲ ಮೂರು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕೊನೆಯದಾದ ಹಣದಿಂದ ಹಣವನ್ನು ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ಸ್ವಲ್ಪ ಗಮನ ಕೊಡೋಣ. ಇದನ್ನು ಬಂಡವಾಳ ಹೂಡಿಕೆ ಎಂದೂ ಸಹ ಕರೆಯುತ್ತಾರೆ. ಬಂಡವಾಳ ಎಂದರೆ ಏನು ಎಂಬುದರ ಬಗ್ಗೆ ಸ್ವಲ್ಪ ಚಿಂತನೆಯನ್ನು ಮಾಡೋಣವೇ?
ಬಂಡವಾಳ ಹೂಡುವುದೆಂದರೆ ಜನಸಾಮಾನ್ಯರಲ್ಲಿ ಅದು ಲಕ್ಷ/ಕೋಟಿಗಳ ರೂಪದಲ್ಲಿ ಇರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದು ಸುಳ್ಳು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಜನ ಸಾಮಾನ್ಯರೂ ಸಹ ಸ್ವಲ್ಪ ಮಟ್ಟಿನ ಬಂಡವಾಳ ಹೂಡಿಕೆದಾರರೇ. ಕೆಲವರು ತಮ್ಮ ಹೆಚ್ಚುವರಿ ಸಂಪಾದನೆಯನ್ನು ಅಥವಾ ತಮ್ಮ ಉಳಿತಾಯದ ಹಣವನ್ನು ನಿಶ್ಚಿತ ಠೇವಣಿಯಾಗಿ ಬ್ಯಾಂಕ್/ಅಂಚೆ ಕಚೇರಿಯಲ್ಲಿ ಇಟ್ಟು ಅದರಲ್ಲಿ ಬರುವ ಬಡ್ದಿಯನ್ನು ಪಡೆಯುತ್ತಾರೆ. ಇದೂ ಸಹ ನಿಮ್ಮ ಹಣ ವೃದ್ದಿಸುತ್ತದೆ. ಭೂಮಿಯ ಮೇಲೆ ಹಾಕಿದ ಹಣ ನಿಮ್ಮ ಮೂಲ ಹಣವನ್ನು ಅನೇಕ ಬಾರಿ ವೃದ್ದಿಸುತ್ತದೆ. ಚಿನ್ನ, ಬೆಳ್ಳಿಯ ಮೇಲೆ ಹಾಕಿದ ಹಣ ನಿಮಗೆ ದುಪ್ಪಟ್ಟು, ತಿಪ್ಪಟ್ಟಾಗುತ್ತದೆ. ಶೇರು/ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿದ ಹಣ ನಿಮಗೆ ಲಾಭವನ್ನು ತಂದುಕೊಡುತ್ತದೆ.