ವಿಷಯದ ವಿವರಗಳಿಗೆ ದಾಟಿರಿ

Archive for

18
ಜೂನ್

ಕಾನೂನಿನಂಗಳ ೬ : ಕಾನೂನಿನ ಕಣ್ಣಲ್ಲಿ ವಿವಾಹ

ಉಷಾ ಐನಕೈ  ಶಿರಸಿ

ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ಅಂದರೆ ಒಂದು ಪವಿತ್ರ ಬಂಧನ. ಈ ಮೂಲಕ ಮಾತ್ರ ಮನುಷ್ಯ ಪರಿಪೂರ್ಣತೆಯತ್ತ ಹೋಗಲು ಸಾಧ್ಯ ಎಂಬ ನಂಬಿಕೆಯಿದೆ. ಈ ವೈವಾಹಿಕ ಜೀವನ ಸುಸಂಬದ್ಧವಾಗಿ ಸಾಗಲು ಅನುಕೂಲವಾಗುವಂತೆ ಕಾನೂನುಗಳನ್ನು ರಚಿಸಲಾಗಿದೆ. ಈ ಕಾನೂನುಗಳು ವಿವಾಹ ಅಂದರೇನು? ವಿವಾಹವನ್ನು ಯಾವಾಗ ಅನೂರ್ಜಿತಗೊಳಿಸಬಹುದು? ಗಂಡ-ಹೆಂಡತಿಯ ಹಕ್ಕು-ಬಾಧ್ಯತೆಗಳು ಹಾಗೂ ಅದನ್ನು ಚ್ಯುತಿಗೊಳಿಸಿದಲ್ಲಿ ಪಡೆಯಬಹುದಾದ ಶಿಕ್ಷೆಗಳು ಮುಂತಾದವುಗಳನ್ನೆಲ್ಲ ವಿವರಿಸುತ್ತದೆ.

ಹಿಂದೂ ಸಂಪ್ರದಾಯದಲ್ಲಿ ವಿವಾಹಕ್ಕೆ ಒಂದು ವಿಶೇಷ ಅರ್ಥವಿದೆ. ಇಲ್ಲಿ ವಿವಾಹ ಒಂದು ಪವಿತ್ರ ಬಂಧನ. ಹೆಣ್ಣು-ಗಂಡು ಪರಸ್ಪರ ಅಗ್ನಿಸಾಕ್ಷಿಯಾಗಿ ಕೈಹಿಡಿದು ನೆಮ್ಮದಿಯ ಬದುಕಿಗೆ ಸಂಕಲ್ಪ ಕಟ್ಟಿಕೊಳ್ಳುವ ಸಂದರ್ಭ ಇದು. ವಿವಾಹವಿಲ್ಲದ ಜೀವನ ಅಪೂರ್ಣ ಎಂಬ ಭಾವನೆ ನಮ್ಮಲ್ಲಿದೆ. ‘ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿ ಚರಿತವ್ಯಾ ತ್ವಯೀಯಮ್ ನಾತಿ ಚರಾಮಿ’ ಎನ್ನುತ್ತ ಧರ್ಮ, ಅರ್ಥ, ಕಾಮ ಈ ಮೂರರಲ್ಲೂ ಇಬ್ಬರೂ ಒಂದಾಗಿ ಬಾಳೋಣ ಎನ್ನುವ ಪ್ರತಿಜ್ಞೆಯೊಂದಿಗೆ ವಿವಾಹ ಸಂಸ್ಕಾರ ನಡೆಯುತ್ತದೆ. ಹಾಗಾಗಿ ಹಿಂದೂ ಪದ್ಧತಿಯಲ್ಲಿ ವಿವಾಹ ಒಂದು ಧಾರ್ಮಿಕ ಸಂಸ್ಕಾರ.

ವಿವಾಹ ಎಂದರೆ ಹೆಣ್ಣು-ಗಂಡು ಒಂದಾಗಿ ಬಾಳುವುದಕ್ಕೋ, ಸಂತಾನೋತ್ಪತ್ತಿಗೋ ಸೀಮಿತವಾಗಿಲ್ಲ. ಇದರ ಅರ್ಥ ಬಹು ವಿಶಾಲವಾಗಿದೆ. ಹೆಣ್ಣು-ಗಂಡು ಸೇರಿ ಒಂದು ಪೂರ್ಣತೆಯನ್ನು ಕಾಣುವುದು.  ಈ ರೀತಿಯಾಗಿ ಇಡೀ ಬದುಕನ್ನೇ ಪೂರ್ಣತೆಯತ್ತ ಒಯ್ಯುವುದು. ಈ ಬದುಕಿನಲ್ಲಿ ಸಾವಿರಾರು ಕನಸುಗಳಿವೆ. ನೂರಾರು ಸವಾಲುಗಳಿವೆ. ಎರಡು ವಿಭಿನ್ನ ಮನಸ್ಸುಗಳು ಒಂದೇ ಬಿಂದುವಿನೊಂದಿಗೆ ಮುಂದುವರಿಯುವ ವಿಸ್ಮಯವಿದೆ. ಹೀಗೆ ವಿವಾಹದ ಅರ್ಥ ಮಾಡುತ್ತಹೋದರೆ ಅನಂತದೆಡೆಗೆ ಸಾಗುತ್ತದೆ. ಇದೇ ಭಾರತೀಯ ಸಂಸ್ಕೃತಿ. ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಬಂಧನ ಎನ್ನುವುದು ಅದ್ಭುತವಾದ ಲಕ್ಷಣ.

Read more »