ಕಾನೂನಿನಂಗಳ ೬ : ಕಾನೂನಿನ ಕಣ್ಣಲ್ಲಿ ವಿವಾಹ
ಉಷಾ ಐನಕೈ ಶಿರಸಿ
ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ಅಂದರೆ ಒಂದು ಪವಿತ್ರ ಬಂಧನ. ಈ ಮೂಲಕ ಮಾತ್ರ ಮನುಷ್ಯ ಪರಿಪೂರ್ಣತೆಯತ್ತ ಹೋಗಲು ಸಾಧ್ಯ ಎಂಬ ನಂಬಿಕೆಯಿದೆ. ಈ ವೈವಾಹಿಕ ಜೀವನ ಸುಸಂಬದ್ಧವಾಗಿ ಸಾಗಲು ಅನುಕೂಲವಾಗುವಂತೆ ಕಾನೂನುಗಳನ್ನು ರಚಿಸಲಾಗಿದೆ. ಈ ಕಾನೂನುಗಳು ವಿವಾಹ ಅಂದರೇನು? ವಿವಾಹವನ್ನು ಯಾವಾಗ ಅನೂರ್ಜಿತಗೊಳಿಸಬಹುದು? ಗಂಡ-ಹೆಂಡತಿಯ ಹಕ್ಕು-ಬಾಧ್ಯತೆಗಳು ಹಾಗೂ ಅದನ್ನು ಚ್ಯುತಿಗೊಳಿಸಿದಲ್ಲಿ ಪಡೆಯಬಹುದಾದ ಶಿಕ್ಷೆಗಳು ಮುಂತಾದವುಗಳನ್ನೆಲ್ಲ ವಿವರಿಸುತ್ತದೆ.
ಹಿಂದೂ ಸಂಪ್ರದಾಯದಲ್ಲಿ ವಿವಾಹಕ್ಕೆ ಒಂದು ವಿಶೇಷ ಅರ್ಥವಿದೆ. ಇಲ್ಲಿ ವಿವಾಹ ಒಂದು ಪವಿತ್ರ ಬಂಧನ. ಹೆಣ್ಣು-ಗಂಡು ಪರಸ್ಪರ ಅಗ್ನಿಸಾಕ್ಷಿಯಾಗಿ ಕೈಹಿಡಿದು ನೆಮ್ಮದಿಯ ಬದುಕಿಗೆ ಸಂಕಲ್ಪ ಕಟ್ಟಿಕೊಳ್ಳುವ ಸಂದರ್ಭ ಇದು. ವಿವಾಹವಿಲ್ಲದ ಜೀವನ ಅಪೂರ್ಣ ಎಂಬ ಭಾವನೆ ನಮ್ಮಲ್ಲಿದೆ. ‘ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿ ಚರಿತವ್ಯಾ ತ್ವಯೀಯಮ್ ನಾತಿ ಚರಾಮಿ’ ಎನ್ನುತ್ತ ಧರ್ಮ, ಅರ್ಥ, ಕಾಮ ಈ ಮೂರರಲ್ಲೂ ಇಬ್ಬರೂ ಒಂದಾಗಿ ಬಾಳೋಣ ಎನ್ನುವ ಪ್ರತಿಜ್ಞೆಯೊಂದಿಗೆ ವಿವಾಹ ಸಂಸ್ಕಾರ ನಡೆಯುತ್ತದೆ. ಹಾಗಾಗಿ ಹಿಂದೂ ಪದ್ಧತಿಯಲ್ಲಿ ವಿವಾಹ ಒಂದು ಧಾರ್ಮಿಕ ಸಂಸ್ಕಾರ.
ವಿವಾಹ ಎಂದರೆ ಹೆಣ್ಣು-ಗಂಡು ಒಂದಾಗಿ ಬಾಳುವುದಕ್ಕೋ, ಸಂತಾನೋತ್ಪತ್ತಿಗೋ ಸೀಮಿತವಾಗಿಲ್ಲ. ಇದರ ಅರ್ಥ ಬಹು ವಿಶಾಲವಾಗಿದೆ. ಹೆಣ್ಣು-ಗಂಡು ಸೇರಿ ಒಂದು ಪೂರ್ಣತೆಯನ್ನು ಕಾಣುವುದು. ಈ ರೀತಿಯಾಗಿ ಇಡೀ ಬದುಕನ್ನೇ ಪೂರ್ಣತೆಯತ್ತ ಒಯ್ಯುವುದು. ಈ ಬದುಕಿನಲ್ಲಿ ಸಾವಿರಾರು ಕನಸುಗಳಿವೆ. ನೂರಾರು ಸವಾಲುಗಳಿವೆ. ಎರಡು ವಿಭಿನ್ನ ಮನಸ್ಸುಗಳು ಒಂದೇ ಬಿಂದುವಿನೊಂದಿಗೆ ಮುಂದುವರಿಯುವ ವಿಸ್ಮಯವಿದೆ. ಹೀಗೆ ವಿವಾಹದ ಅರ್ಥ ಮಾಡುತ್ತಹೋದರೆ ಅನಂತದೆಡೆಗೆ ಸಾಗುತ್ತದೆ. ಇದೇ ಭಾರತೀಯ ಸಂಸ್ಕೃತಿ. ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಬಂಧನ ಎನ್ನುವುದು ಅದ್ಭುತವಾದ ಲಕ್ಷಣ.
ಈ ರೀತಿಯ ವೈವಾಹಿಕ ಬದುಕು ಹಸನಾಗಿ ಸಾಗಬೇಕು. ಮಧ್ಯದಲ್ಲಿ ತಲೆದೋರುವ ಅಡೆತಡೆಗಳೆಲ್ಲ ನಿವಾರಣೆಯಾಗಬೇಕು. ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ಅನ್ಯಾಯವಾಗಬಾರದು ಎಂಬಿತ್ಯಾದಿ ಉದ್ದೇಶಗಳಿಂದ ಕಾನೂನು ಕೂಡಾ ಜಾರಿಗೆ ಬಂತು. ಅದೇ ‘ಹಿಂದೂ ವಿವಾಹ ಅಧಿನಿಯಮ 1955’. ಈ ಕಾನೂನಿಗೆ ಹಿಂದೂ ಸಂಪ್ರದಾಯ ಮತ್ತು ಪದ್ಧತಿಗಳನ್ನೇ ಬಳಸಿಕೊಂಡು ಜೊತೆಗೆ ಒಂದಿಷ್ಟು ಶರತ್ತುಗಳನ್ನು ವಿಧಿಸಿ ಕಾನೂನು ಬದ್ಧಗೊಳಿಸಲಾಯಿತು.
ಈ ಅಧಿನಿಯಮದಡಿ ಕಲಂ 5ರ ಪ್ರಕಾರ ಹಿಂದೂ ವಿವಾಹವು ಕೆಲವು ಶರತ್ತುಗಳಿಗೆ ಒಳಪಟ್ಟು ನಡೆಯಬೇಕಾಗುತ್ತದೆ. ಆ ಶರತ್ತುಗಳನ್ನು ಪೂರೈಸಿದರೆ ಮಾತ್ರ ಅಂಥ ವಿವಾಹವು ಕಾನೂನು ಸಮ್ಮತ ಎನಿಸಿಕೊಳ್ಳುತ್ತದೆ. ಅವು ಯಾವುವೆಂದರೆ ವಧುವರ ರಿಬ್ಬರೂ ಮಾನಸಿಕ ಸ್ವಾಸ್ಥ್ಯವುಳ್ಳವರಾಗಿದ್ದು ವಿವಾಹಕ್ಕೆ ಸ್ವತಂತ್ರವಾಗಿ ಒಪ್ಪಿಗೆಯನ್ನು ಸೂಚಿಸುವ ಮನಸ್ಥಿತಿಯುಳ್ಳವರಾಗಿರಬೇಕು. ಮದುವೆಯಾಗುವ ಹುಡುಗನ ವಯಸ್ಸು ಕನಿಷ್ಟ 21 ವರ್ಷ ಹಾಗೂ ಹುಡುಗಿಯ ವಯಸ್ಸು ಕನಿಷ್ಟ 18 ವರ್ಷ ದಾಟಿರಬೇಕು. ಗಂಡಸು ಒಬ್ಬ ಹೆಂಡತಿಯ ಜೀವಿತಾವಧಿಯಲ್ಲಿ ಅವಳ ಸಮ್ಮತಿಯಿಲ್ಲದೇ ಇನ್ನೊಬ್ಬಳನ್ನು ಮದುವೆಯಾಗುವ ಹಾಗಿಲ್ಲ. ಅದೇ ರೀತಿ ಹೆಣ್ಣೂ ಕೂಡಾ ಜೀವಂತ ಪತಿ ಇರುವಾಗ ಮತ್ತೊಂದು ಮದುವೆಯಾಗುವಹಾಗಿಲ್ಲ. ಈ ಮೇಲಿನ ಶರತ್ತುಗಳನ್ನು ಉಲ್ಲಂಘಿಸಿದಾಗ ಕಾನೂನಿನ ದೃಷ್ಟಿಯಿಂದ ಅದು ಅಪರಾಧವಾಗುತ್ತದೆ. ಹಾಗೂ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಹಿಂದೂ ವಿವಾಹ ಕಾನೂನು ಆಯಾ ಸಂಪ್ರದಾಯದವರು ತಮ್ಮ ಸಂಪ್ರದಾಯದಂತೆ ಮದುವೆಯಾದಲ್ಲಿ ಅದು ಕಾನೂನುಬದ್ಧ ವಿವಾಹ ಎಂದೇ ಪರಿಗಣಿಸುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ವಧು-ವರರಿಬ್ಬರೂ ಪರಸ್ಪರ ಒಪ್ಪಿಕೊಂಡು ಆಡಂಬರವಿಲ್ಲದೇ ಸಾಂಪ್ರದಾಯಿಕ ಆಚರಣೆಗಳನ್ನು ಮಾಡದೇ ಸರಳವಾಗಿ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಅವರ ಸಮಕ್ಷಮ ಸಾಕ್ಷಿದಾರರ ಎದುರು ವಿವಾಹ ಮಾಡಿಕೊಳ್ಳಬಹುದು. ಇದನ್ನೇ ‘ನೊಂದಾಯಿತ ವಿವಾಹ’ ಎನ್ನುವುದು. ಇಲ್ಲಿ ಯಾವುದೇ ಬಾಹ್ಯ ಒತ್ತಡ ಇರದೇಇರುವುದು ಮುಖ್ಯವಾಗುತ್ತದೆ.
ವಿವಾಹ ನೊಂದಣಿಗೆ ‘ವಿಶೇಷ ವಿವಾಹ ಅಧಿನಿಯಮ 1954’ ಅನ್ವಯವಾಗುತ್ತದೆ. ಇದರ ವಿಶೇಷತೆಯೇನೆಂದರೆ ಹಿಂದೂ ವಿವಾಹ ಅಧಿನಿಯಮದಲ್ಲಿ ಪರಸ್ಪರ ಹೆಣ್ಣು-ಗಂಡು ಇಬ್ಬರೂ ಒಂದೇ ಜಾತಿಯವರಾಗಿರಬೇಕು. ಸಂಪ್ರದಾಯ ದವರಾಗಿರಬೇಕು. ಸಗೋತ್ರಜರಾಗಿರಬಾರದು ಎಂಬಿತ್ಯಾದಿ ಕಟ್ಟಳೆಯಿದೆ. ಆದರೆ ನೊಂದಾಯಿತ ವಿವಾಹವಾದರೆ ಈ ಮೇಲಿನ ಯಾವ ನಿರ್ಬಂರ್ಧವೂ ಭಾದಿಸಲಾರದು. ವಯಸ್ಸಿಗೆ ಬಂದ ಹುಡುಗ-ಹುಡುಗಿ ನೋಂದಾಯಿತ ವಿವಾಹವಾಗಬಹುದು. ನೋಂದಣಾಧಿಕಾರಿಗಳ ಕಚೇರಿಯಲ್ಲಿ ಇಬ್ಬರೂ ಸೇರಿ ಅರ್ಜಿಯನ್ನು ವಿವಾಹಾಧಿಕಾರಿಗೆ ಕೊಡಬೇಕು. ಮೋಸ, ಬೆದರಿಕೆ, ಒತ್ತಡಗಳಿಂದ ಇಂತಹ ವಿವಾಹ ನಡೆಯಬಾರದೆಂಬ ಕಾರಣಕ್ಕೆ ಅರ್ಜಿಯನ್ನು ಸಾರ್ವಜನಿಕರ ಗಮನಕ್ಕೆ ತರುವ ಸಲುವಾಗಿ ನೋಂದಣಿ ಕಾಯರ್ಾಲಯದ ಆವರಣದಲ್ಲಿ ನೋಟೀಸ್ ಹಾಕಿರಲಾಗುತ್ತದೆ. ಇಂಥ ವಿವಾಹದ ಕುರಿತು ನೋಟೀಸ್ ಹಾಕಿದ 30 ದಿನಗಳಲ್ಲಿ ಯಾವುದೇ ತಕರಾರು ಬರದೇ ಇದ್ದರೆ ಆ ವಿವಾಹವನ್ನು ನೊಂದಾಯಿಸಲಾಗುತ್ತದೆ ಹಾಗೂ ಕಾನೂನು ಬದ್ಧವಾಗುತ್ತದೆ.
ವಿವಾಹಗಳ ನೋಂದಣಿ ಕಡ್ಡಾಯವಲ್ಲ. ಆದರೆ ಆಧುನಿಕ ಯುಗದಲ್ಲಿ ಗಂಡ-ಹೆಂಡತಿ ಎನ್ನುವುದನ್ನು ಸಾಬಿತು ಪಡಿಸಲು ಅತೀ ಮುಖ್ಯವಾದ ದಾಖಲೆ ವಿವಾಹ ನೋಂದಣಿ ಪ್ರಮಾಣ ಪತ್ರವಾಗಿದೆ. ಈಗಾಗಲೇ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದವರೂ ಕೂಡ ಅಧಿಕೃತ ದಾಖಲೆಯ ಅವಶ್ಯಕತೆಯಿದ್ದರೆ ನೋಂದಾಯಿಸಿಕೊಳ್ಳಬಹುದು ವಿವಾಹದ ಕರೆಯೋಲೆ, ವಯಸ್ಸಿನ ದಾಖಲೆ, ಸಾಕ್ಷಿ ಮುಂತಾದವುಗಳನ್ನು ನೋಂದಾವಣೆ ವೇಳೆಯಲ್ಲಿ ಪೂರೈಸಬೇಕಾಗುತ್ತದೆ.
ಶೂನ್ಯವಿವಾಹ Void Marriage
ಹಿಂದೂ ವಿವಾಹ ಅಧಿನಿಯಮ ಕಲಂ 11ರಲ್ಲಿ ಶೂನ್ಯವಿವಾಹದ ಕುರಿತು ವಿವರಿಸಲಾಗಿದೆ. ಮೊದಲ ಹೆಂಡತಿ ಬದುಕಿರುವಾಗಲೇ ಇನ್ನೊಂದು ವಿವಾಹವಾದರೆ, ಮೊದಲ ಪತಿ ಜೀವಂತವಿರುವಾಗಲೇ ಪರಸ್ಪರ ವಿಚ್ಛೇದನವಿಲ್ಲದೇ ಮತ್ತೊಂದು ಮದುವೆಯಾದರೆ ಆ ವಿವಾಹವನ್ನು ‘ವಿವಾಹ’ ಎಂದು ಕರೆಯಲು ಸಾಧ್ಯವಿಲ್ಲ. ಅದು ಅಧಿಕೃತ ಮದುವೆಯಾಗಲಾರದು. ಅದು ಕಾನೂನಿನ ಪರಿಭಾಷೆಯಲ್ಲಿ ‘ಶೂನ್ಯವಿವಾಹ’ ಎಂದು ಕರೆಯಲ್ಪಡುತ್ತದೆ. ಕಾನೂನಿನ ಪ್ರಕಾರ ಅದು ಸಿಂಧುವಲ್ಲ. ಉದಾಹರಣೆಗೆ ಮೊದಲ ಹೆಂಡತಿಯ ಜೀವಿತ ಕಾಲದಲ್ಲಿ ಅವಳ ಒಪ್ಪಿಗೆಯಿಲ್ಲದೇ ಇನ್ನೊಬ್ಬಳನ್ನು ವಿವಾಹವಾದರೆ ಆ ಎರಡನೆಯ ಹೆಂಡತಿಗೆ ಗಂಡನ ಆಸ್ತಿಯಲ್ಲಿ ಯಾವುದೇ ಕಾನೂನಿನ ಹಕ್ಕು ಇರಲಾರದು. ಎರಡನೇ ಹೆಂಡತಿಗೆ ಅವನಿಂದ ಜನಿಸಿದ ಮಗುವಿಗೂ ಕೂಡ ಯಾವುದೇ ವಾರಸಾ ಹಕ್ಕು ಇರಲಾರದು. ಎರಡನೇ ಹೆಂಡತಿಯ ಮಗ ಕೇವಲ ಅಪ್ಪನ ಸ್ವಯಾರ್ಜಿತ ಆಸ್ತಿ ಇದ್ದಲ್ಲಿ ಮಾತ್ರ ಹಕ್ಕು ಕೇಳಬಹುದು.
‘ಕಾನೂನಿನ ಅಜ್ಞಾನ ಕ್ಷಮ್ಯವಲ್ಲ ಎನ್ನುತ್ತದೆ ನ್ಯಾಯಶಾಸ್ತ್ರ. ಇಂದಿನ ಸಮಾಜದಲ್ಲಿ ಅದೆಷ್ಟೋ ಮಹಿಳೆಯರು ವಿವಾಹಿತ ಪುರುಷರ ಸಂಬಂಧ ಹೊಂದಿ ಅವರನ್ನು ನಂಬಿ ಬದುಕುತ್ತಿರುತ್ತಾರೆ. ಅವರಿಗೆ ಇದರ ಕಾನೂನಿನ ಪರಿಣಾಮದ ಅರಿವೇ ಇರುವುದಿಲ್ಲ. ಮುಂದೊಂದು ದಿನ ಅಪಾಯಕ್ಕೆ ಸಿಕ್ಕಿ ಕೊಳ್ಳುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ಗಂಡಸು ಯಾವುದೇ ಹಿಂಸೆ ಪಡಲಾರ. ಆದರೆ ಹೆಂಗಸರು ಮಾನಸಿಕವಾಗಿ ಹಿಂಸೆ ಪಟ್ಟುಕೊಳ್ಳುತ್ತ ಬದುಕನ್ನೇ ಅಂತ್ಯಗೊಳಿಸಿಕೊಳ್ಳುವ ಅಪಾಯವಿರುತ್ತದೆ. ಆದ್ದರಿಂದ ಮಹಿಳೆಯರಿಗೆ ಇಂಥ ಕಾನೂನುಗಳ ಅರಿವು ಅಗತ್ಯ.
ಶೂನ್ಯಗೊಳಿಸಬಹುದಾದ ವಿವಾಹ Viodable Marriage
ಹಿಂದೂ ವಿವಾಹ ಅಧಿನಿಯಮ ಕಲಂ 12ರಲ್ಲಿ ಶೂನ್ಯಗೊಳಿಸಬಹುದಾದ ವಿವಾಹದ ಕುರಿತು ವಿವರಗಳಿವೆ. ಕೆಲವು ಸಾರಿ ವಿವಾಹವು ಸಾಂಪ್ರದಾಯಿಕವಾಗೇ ನಡೆದಿದ್ದರೂ ಹಲವು ನಿರ್ಧಿಷ್ಟ ಕಾರಣಗಳಿಗಾಗಿ ಆ ವಿವಾಹವನ್ನು ಅಮಾನ್ಯ ಅಥವಾ ವಿವಾಹವೇ ನಡೆದಿಲ್ಲ ಎಂದು ನ್ಯಾಯಾಲಯ ತಿರ್ಮಾನಿಸಬಹುದು. ಗಂಡು ಅಥವಾ ಹೆಣ್ಣು ಯಾರಾದರೊಬ್ಬರು ವಿವಾಹವನ್ನು ಶೂನ್ಯಗೊಳಿಸುವ ಕುರಿತು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಬೇಕಾಗುತ್ತದೆ. ಮದುವೆ ನಡೆಯುವ ಸಂದರ್ಭದಲ್ಲಿ ಪತಿ ಅಥವಾ ಪತ್ನಿ ನಪುಂಸಕರಾಗಿದ್ದರೆ, ಇಬ್ಬರಲ್ಲಿ ಯಾರಾದರೊಬ್ಬರು ಮದುವೆಗೆ ಪೂರ್ವದಲ್ಲಿ ಬುದ್ಧಿ ಭ್ರಮಣೆಯಿಂದ ಬಳಲುತ್ತಿದ್ದರೆ, ಹೆಣ್ಣು ವಿವಾಹಕ್ಕೂ ಮುಂಚೆಯೇ ಪರಪುರುಷನಿಂದ ಗರ್ಭ ಧರಿಸಿದ್ದರೆ, ಇಬ್ಬರಲ್ಲಿ ಯಾರಾದರೊಬ್ಬರನ್ನು ವಿವಾಹಕ್ಕೆ ಒತ್ತಡದಿಂದ ಅಥವಾ ಮೋಸ ಮಾಡಿ ಒಪ್ಪಿಸಿದ್ದರೆ ಅಂತಹ ವಿವಾಹವನ್ನು ಶೂನ್ಯಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ. ಅದಕ್ಕೆ ಸಂಬಂಧಪಟ್ಟವರು ನ್ಯಾಯಾ ಲಯಕ್ಕೆ ಮನವಿ ಸಲ್ಲಿಸಿ ಸಾಕ್ಷಿ ಸಮೇತ ಮನವರಿಕೆ ಮಾಡಿಕೊಟ್ಟಲ್ಲಿ ನ್ಯಾಯಾಲಯ ಆ ವಿವಾಹವನ್ನು ಶೂನ್ಯಗೊಳಿಸಬಹುದು.
ದಾಂಪತ್ಯ ಹಕ್ಕುಗಳ ಪೂರ್ವಸ್ಥಿತಿ ಪ್ರಾಪ್ತಿ
ಕಾನೂನು ಬದ್ಧವಾಗಿ ಮದುವೆಯಾದ ಗಂಡ- ಹೆಂಡತಿ ಸುಖವಾಗಿ ಒಟ್ಟಿಗೇ ಬಾಳಬೇಕು. ಆಗ ಮಾತ್ರ ವೈವಾಹಿಕ ಸಂಬಂಧಕ್ಕೆ ಒಂದು ಗೌರವವಿರುತ್ತದೆ. ಅದಕ್ಕಾಗೇ ‘ವಿವಾಹಬಂಧನ’ ಅನ್ನುವುದು. ಯಾರೊಬ್ಬರೂ ಅದನ್ನು ಮೀರಿ ಸ್ವೇಚ್ಛೆಯಿಂದ ಮನ ಬಂದಂತೆ ಇರಲುಸಾಧ್ಯವಿಲ್ಲ.ಗಂಡ-ಹೆಂಡತಿಸೌಹಾರ್ದದಿಂದಬದುಕುವುದುಅವರಹಕ್ಕು. ಹೀಗಿದ್ದೂ ಯಾವುದೇ ಸಮರ್ಥನೀಯಕಾರಣವಿಲ್ಲದೇಗಂಡ-ಹೆಂಡತಿಬೇರೆಬೇರೆಯಾಗಿ ಉಳಿಯುವಂತಿಲ್ಲ. ಈ ದಾಂಪತ್ಯದ ಹಕ್ಕಿನಿಂದ ನೋವುಂಡ ಗಂಡು ಅಥವಾ ಹೆಣ್ಣು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ ‘ನಾವು ಕೂಡಿ ಬಾಳಲು ಆದೇಶ ನೀಡಬೇಕು’ ಎಂದು ಕೇಳಿಕೊಳ್ಳಬಹುದು. ಹಿಂದೂ ವಿವಾಹ ಅಧಿನಿಯಮದ ಕಲಂ 9ರಲ್ಲಿ ಈ ಅವಕಾಶ ನೀಡಲಾಗಿದೆ. ಇದನ್ನೇ ‘ದಾಂಪತ್ಯಹಕ್ಕುಗಳ ಪೂರ್ವಸ್ಥಿತಿ ಪ್ರಾಪ್ತಿ’ ಎನ್ನುತ್ತಾರೆ.
* * * * * * * * *
ಚಿತ್ರಕೃಪೆ : pandithrshastri.com




