– ಡಾ.ಅಶೋಕ್ ಕೆ.ಆರ್
ಹೆಂಡತಿ ಗಂಡನಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಗಂಡ ಹೆಂಡತಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಪೂನಂ ಪಾಂಡೆ ಬೆತ್ತಲಾದದ್ದು, ಐಶ್ವರ್ಯ ರೈ ದಪ್ಪಗಾಗಿದ್ದು ಮುಖಪುಟ ಸುದ್ದಿ! ಅಧಿಕಾರಿ, ರಾಜಕಾರಣಿ, ಸನ್ಯಾಸಿ ಮಾಡಿದ ತಪ್ಪುಗಳು ‘ಬ್ರೇಕಿಂಗ್ ನ್ಯೂಸ್’ [ofcourse ಯಾವ ವಾಹಿನಿ ವೀಕ್ಷಿಸುತ್ತಿದ್ದೀರೆಂಬುದರ ಮೇಲೆ ಈ ಕೊನೆಯ ಬ್ರೇಕಿಂಗ್ ನ್ಯೂಸ್ ಬದಲಾಗುತ್ತಿರುತ್ತದೆ!]. ಪತ್ರಕರ್ತನೊಬ್ಬ ನೆಲದ ಕಾನೂನಿಗೆ ಗೌರವ ಕೊಡದೆ ನಡೆದುಕೊಂಡಾಗ? ಅದು ಸುದ್ದಿಯೂ ಅಲ್ಲ, ರದ್ದಿಗೆ ಹಾಕುವಂಥ ವಿಷಯ ಎಂಬುದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ನಿಲುವು!
ಪತ್ರಕರ್ತ ಅದರಲ್ಲೂ ಪತ್ರಿಕೆಯೊಂದರ ಸಂಪಾದಕನೆಂದ ಮೇಲೆ ಮಾನನಷ್ಟ ಮೊಕದ್ದಮೆಯ ಆರೋಪಿಯಾಗುವುದು ಸಹಜ. ಕೆಲವೊಮ್ಮೆ ವೈಯಕ್ತಿಕ ದ್ವೇಷದಿಂದ ಸಂಪಾದಕರೇ ಸುಳ್ಳು ಮಾಹಿತಿಯನ್ನು ವೈಭವೀಕರಿಸುತ್ತಾರೆ. ಇನ್ನು ಕೆಲವೊಮ್ಮೆ ನಂಬಿದ ವರದಿಗಾರರೇ ಸುಳ್ಳು ಅಥವಾ ಅರ್ಧ ಸತ್ಯದ ಮಾಹಿತಿಯನ್ನು ನೀಡಿ ಸಂಪಾದಕರ ದಾರಿ ತಪ್ಪಿಸುತ್ತಾರೆ. ಸತ್ಯ ತನ್ನ ಪರವಾಗಿದೆಯೆಂಬ ಧೃಡತೆ ಇರುವ ವ್ಯಕ್ತಿ ಪತ್ರಿಕೆ, ಅದರ ವರದಿಗಾರ-ಸಂಪಾದಕರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ. ವರದಿ ಅಪ್ಪಟ ಸುಳ್ಳಾಗಿದ್ದರೆ ಪತ್ರಿಕೆ ಅಥವಾ ಸುದ್ದಿವಾಹಿನಿಯಲ್ಲಿ ತಪ್ಪೊಪ್ಪಿಗೆ ನೀಡಬೇಕಾಗುತ್ತದೆ. ಮಾನಸಿಕ ಹಿಂಸೆ, ಸಾಮಾಜಿಕ ನೆಲೆಯಲ್ಲಾದ ಅವಮಾನಗಳನ್ನು ಪರಿಗಣಿಸಿ ಪರಿಹಾರ ಕೊಡಿಸುವುದೂ ಉಂಟು. ಜೈಲು ಪಾಲಾಗುವ ಸಾಧ್ಯತೆಯೂ ಇದೆಯಾದರೂ ಅದು ಬಹಳವೇ ಅಪರೂಪ.
ಇವೆಲ್ಲವನ್ನೂ ಹೇಳಲು ಕಾರಣ ಹಾಲಿ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರೂ, ಸುವರ್ಣ ಸುದ್ದಿ ವಾಹಿನಿಯ ಮುಖ್ಯಸ್ಥರೂ ಆದ ವಿಶ್ವೇಶ್ವರ ಭಟ್ಟರು ಜೂನ್ 27ರಂದು ಬಂಧಿತರಾಗಿ ಮಧ್ಯಾಹ್ನದ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. 2008ರಲ್ಲಿ ವಿಜಯ ಕರ್ನಾಟಕದ ಸಂಪಾದಕರಾಗಿದ್ದ ಸಮಯದಲ್ಲಿನ ಒಂದು ವರದಿಯ ಕುರಿತಂತೆ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದರು. ನ್ಯಾಯಾಲಯದಿಂದ ಪದೇ ಪದೇ ಸಮನ್ಸ್ ಜಾರಿಯಾದಾಗ್ಯೂ ಕೂಡ ಹಾಜರಾಗಲಿಲ್ಲ. ಕೊನೆಗೆ ಬೇಸತ್ತ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿತು. ಭಟ್ಟರ ಬಂಧನವಾಯಿತು.
ಇದು ಸುದ್ದಿಯಲ್ಲವಾ?
ಸಮಾಜವನ್ನು ತಿದ್ದುವ ಸರಿಪಡಿಸುವ ಕೆಲಸ ಮಾಧ್ಯಮಗಳಿಂದಾಗಬೇಕಿತ್ತು. ಎರಡು ಪ್ರಮುಖ ಮಾಧ್ಯಮದ ಮುಖ್ಯಸ್ಥನಾಗಿರುವ ವ್ಯಕ್ತಿಯೇ ನ್ಯಾಯಾಲಯದ ಆದೇಶಗಳಿಗೆ ಬೆಲೆ

ಕೊಡುವುದಿಲ್ಲವೆಂದ ಮೇಲೆ ತನ್ನ ಮುಂದಾಳತ್ವದ ಪತ್ರಿಕೆ, ವಾಹಿನಿಗಳಲ್ಲಿ ಸಮಾಜ ಪರ, ನ್ಯಾಯ ಪರ ಸುದ್ದಿಗಳನ್ನು ಹೇಗೆ ತಾನೇ ನೀಡಬಲ್ಲ? ನೈತಿಕತೆಯ ಪ್ರಶ್ನೆಯೇ ಇವರಿಗೆ ಕಾಡುವುದಿಲ್ಲವಾ? ಅವರನ್ನು ಬಿಡಿ; ಉಳಿದ ವಾಹಿನಿಗಳು? ವಾರ್ತಾ ಭಾರತಿ, ದಿ ಹಿಂದೂ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಒಳಪುಟಗಳಲ್ಲಿ ಈ ಸುದ್ದಿ ಬಂದಿದೆಯಷ್ಟೇ. ಉಳಿದ ಪತ್ರಕೆಗಳು, ವಾಹಿನಿಗಳು? ಎಂದಿನಂತೆ ದಿವ್ಯ ಮೌನ! ಅವರ ಬಣ್ಣ ಬಯಲು ಮಾಡಿದರೆ ನಮ್ಮ ಬಣ್ಣವೂ ಬಯಲಾಗಬಹುದೆಂಬ ಭೀತಿಯೇ?
ನನಗೀ ವಿಷಯದ ಅರಿವಾಗಿದ್ದು ನಮ್ಮ ಮುಖ್ಯ ಮಾಧ್ಯಮಗಳು ತುಚ್ಛವಾಗಿ ಕಾಣುವ ವೆಬ್ ಸೈಟ್ ಬ್ಲಾಗುಗಳಿಂದ [ದಟ್ಸ್ ಕನ್ನಡ, ವರ್ತಮಾನ]. ನಾನಿರುವ ಜಾಗದಲ್ಲಿ ಮಂಗಳೂರಿನ ಆವೃತ್ತಿಯ ಪತ್ರಿಕೆಗಳು ಬರುತ್ತವೆ. ಬೆಂಗಳೂರಿನ ಆವೃತ್ತಿಗಳಲ್ಲಾದರೂ ಬಂದಿರಬಹುದೋ ಏನೋ ಎಂದು ಗೆಳೆಯನೊಬ್ಬನಿಗೆ ಫೋನಿಸಿದರೆ ಅವನಿಗೆ ಬಂಧನದ ವಿಷಯವೇ ಗೊತ್ತಿರಲಿಲ್ಲ! ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುತ್ತಿರುವ ಇನ್ನೋರ್ವ ಸ್ನೇಹಿತನಿಗೆ ‘ನಿಮ್ಮ ವಾಹಿನಿಯಲ್ಲಿ ಬಂಧನದ ಸುದ್ದಿ ಪ್ರಸಾರ ಮಾಡಿದರಾ?’ ಎಂದು ಮೆಸೇಜಿಸಿದೆ. ‘ಇಲ್ಲ. ಯಾವ ವಾಹಿನಿಯಲ್ಲೂ ಬಂದಿಲ್ಲ’ ಎಂದು ಹೇಳಿದ. ಕಾರಣ ಕೇಳಿ ಮಾಡಿದ ಮೆಸೇಜಿಗೆ ಇನ್ನೂ ಉತ್ತರಿಸಿಲ್ಲ. ನಿಜಕ್ಕೂ ಪ್ರಾಮಾಣಿಕನಾಗಿರುವ ಈ ಗೆಳೆಯನಾದರೂ ಉತ್ತರಿಸುತ್ತಾನೆಂಬ ನಿರೀಕ್ಷೆಯಲ್ಲಿದ್ದೇನೆ.
ಹಿಂಗ್ಯಾಕೆ?! – ಪ್ರಜೆಗಳ ಜೊತೆಗಿದ್ದು ಕಾರ್ಯನಿರ್ವಹಿಸಬೇಕಾದ ಮುಖ್ಯವಾಹಿನಿ ಮಾಧ್ಯಮಗಳು ಪ್ರಭುಗಳ ಜೊತೆ ಸೇರಿ ತಿರುಚಿದ ಸುದ್ದಿಯನ್ನು ಪ್ರಜೆಗಳ ಮೇಲೆ ಸುರಿಯುತ್ತಿರುವಾಗ ‘ಪ್ರಜಾಪ್ರಭುತ್ವ’ವನ್ನು ನಂಬುವುದಾದರೂ ಹೇಗೆ ಮತ್ತು ಯಾಕೆ?
ವಿಶ್ವೇಶ್ವರ ಭಟ್ಟರು ಈಚೀಚೆಗೆ ತುಂಬಾ ಕೆಟ್ಟರು. ಅದು ಸಹವಾಸ ದೋಷನೋ ಅಥವಾ ಅಹಂಕಾರನೋ ಭಟ್ಟರೇ ಹೇಳಬೇಕು.
ಸರಿ ಇನ್ನಾದರು ಮಾಧ್ಯಮಗಳು ಸದಾ ಯಡಿಯೂರಪ್ಪನವರ ಹಾಗು ನಿತ್ಯಾನಂದನ ಮನೆ ಗೇಟಿನಲ್ಲಿ ಕ್ಯಾಮರ ಹಿಡಿದು ನಿಲ್ಲುವ ಕೆಲಸ ಬಿಟ್ಟು ಬೇರೆ ಏನಾದರು ರಚನಾತ್ಮಕ ಕೆಲಸ(?) ಮಾಡಿದರೆ ಒಳ್ಳೆಯದು
ಕನ್ನಡಪ್ರಭದಲ್ಲಿ ಇದರ ಬಗ್ಗೆ ತಿಪ್ಪೆಸಾರಿಸಿದ ವರದಿ ಸಣ್ಣದಾಗಿ ಪ್ರಕಟವಾಗಿದೆ. ಅದರಲ್ಲಿ ಬಂಧನ ವಿಚಾರವಿಲ್ಲ. ನ್ಯಾಯಾಲಯಕ್ಕೆ ಹಾಜರಾದ ಬಗ್ಗೆ ಉಲ್ಲೇಖವಿದೆ.
Superb article..I appriciate your frankness.. Keep it up sir..we are with you..
U r right