ವಿಷಯದ ವಿವರಗಳಿಗೆ ದಾಟಿರಿ

ಜುಲೈ 3, 2012

ಕಾನೂನಿನಂಗಳ ೪ : ಆಧುನಿಕ ಕಾನೂನುಗಳು

‍ನಿಲುಮೆ ಮೂಲಕ

– ಉಷಾ ಐನಕೈ  ಶಿರಸಿ

ಭಾರತದಲ್ಲಿ ಕಾನೂನುಗಳನ್ನು ಅಧ್ಯಯನ ಮಾಡುವಾಗ ಸ್ಥೂಲವಾಗಿ ಎರಡು ವಿಭಾಗಗಳಲ್ಲಿ ನೋಡುವುದು ಅನಿವಾರ್ಯವಾಗುತ್ತದೆ. ಅದಾವವೆಂದರೆ ಬ್ರಿಟಿಶ್ ವಸಾಹತುಶಾಹಿ ಪೂರ್ವದ ಕಾನೂನುಗಳು ಹಾಗೂ ವಸಾಹತುಶಾಹಿ ನಂತರದ ಕಾನೂನುಗಳು. ಪೂರ್ವದ ಕಾನೂನುಗಳು ಪ್ರಾಚೀನ ಭಾರತದ ಕಾನೂನುಗಳೆಂದೇ ಗುರುತಿಸಲ್ಪಡುತ್ತದೆ. ಶ್ರುತಿ, ಸ್ಮೃತಿ, ಧರ್ಮ, ಸಂಪ್ರದಾಯಗಳೆಲ್ಲ ಆ ಕಾಲದ ಕಾನೂನಿನ ನೆಲೆಗಳು. ವಸಾಹತುಶಾಹಿ ನಂತರದ  ಕಾನೂನುಗಳು ಆಧುನಿಕ ಕಾನೂನುಗಳೆಂದು ಗುರುತಿಸ್ಪಟ್ಟು ಇಂದಿಗೂ ಕೂಡ ಚಾಲನೆಯಲ್ಲಿವೆ.

ವಸಾಹತುಶಾಹಿ ನಂತರದ ಕಾನೂನುಗಳು ಏಕೆ ಆಧುನಿಕ ಕಾನೂನುಗಳೆಂದು ಕರೆಯಲ್ಪಟ್ಟವು ಎಂಬುದಕ್ಕೆ ವಿವರಣೆಗಳು ಬೇಕಿಲ್ಲ. ಏಕೆಂದರೆ ಅದೊಂದು ಸಾಮಾನ್ಯ ಜ್ಞಾನ. ಐರೋಪ್ಯರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದವರು. ನಂತರ ಈ ದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡರು. ಪಾಶ್ಚಾತ್ಯ ದೇಶಗಳ ಹಾಗೆ ಇಡೀ ಭಾರತದ ದೇಶವನ್ನು ಪುನರ್ಕಟ್ಟಲು ಪ್ರಯತ್ನಿಸಿದರು. ಅವರ ಈ ಪ್ರಯತ್ನ ಒಳಿತು ಕೆಡಕುಗಳೆರಡನ್ನೂ ಒಳಗೊಂಡಿದೆ. ಭಾರತ ನೂರಾರು ಪ್ರಾಂತಗಳಾಗಿ ಒಡೆದು ಹಂಚಿಹೋಗಿತ್ತು. ಇದು ಆಡಳಿತಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ತುಂಬ ತೊಂದರೆಯನ್ನುಂಟುಮಾಡುತ್ತಿತ್ತು.

ಕಾನೂನಿನ ವಿಷಯವಾಗಿ ನೋಡುವುದಾದರೆ ಆಯಾ ಪ್ರಾಂತ್ಯದ ರೂಢಿ, ಪದ್ಧತಿಗಳೇ ಅಲ್ಲಿನ ಕಾನೂನುಗಳಾಗಿದ್ದವು. ಹೀಗಾಗಿ ಸ್ಥಳದಿಂದ ಸ್ಥಳಕ್ಕೆ ಕಾನೂನಿನ ಸ್ವರೂಪ ಕೂಡ ಭಿನ್ನತೆಯನ್ನು ಹೊಂದಿತ್ತು. ಇದು ಇಡೀ ಭಾರತವನ್ನು ಆಳಲು  ಹೊರಟ ಇಂಗ್ಲೀಶರಿಗೆ ನ್ಯಾಯ ನಿರ್ಣಯ ನೀಡಲು ತೊಡಕಾಯಿತು. ಹೀಗಾಗಿ ತಮ್ಮಂತಹದೇ ಒಂದು ಏಕರೂಪಿ ಕಾನೂನಿನ ಪರಿಕಲ್ಪನೆಯನ್ನು ಇಲ್ಲಿ ಅನುಷ್ಠಾನಗೊಳಿಸಲು ನಿರ್ಣಯಿಸಿದರು. ಪ್ರಾರಂಭದಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಅಧಿಕಾರದ ಕೇಂದ್ರಗಳಾದ ಮದ್ರಾಸ್, ಮುಂಬಯಿ, ಕಲ್ಕತ್ತಾಗಳ ಮೂಲಕ ಬ್ರಿಟಿಶ್ ಇಂಗ್ಲೀಶ್ ಕಾನೂನುಗಳನ್ನು ಆಧಾರವಾಗಿಟ್ಟುಕೊಂಡು ಆಡಳಿತ ನಡೆಸುತ್ತಿತ್ತು. ನಂತರ ಈ ಅಧಿಕಾರ ಬ್ರಿಟಿಶ್ ಸರಕಾರಕ್ಕೆ ಹಸ್ತಾಂತರವಾದಾಗ ಇಡೀ ಭಾರತಕ್ಕೆ ಅನ್ವಯವಾಗುವಂತಹ ಹಲವು ಕಾನೂನುಗಳು ರಚಿತವಾದವು.

ಭಾರತೀಯ ದಂಡ ಸಂಹಿತೆ (Indian Penal Code)

ಭಾರತದಲ್ಲಿ ಇಂಗ್ಲೀಶರಿಂದ ಜಾರಿಗೊಂಡ ಮೊದಲ ಲಿಖಿತ ಕಾನೂನುಗಳಲ್ಲಿ ಇದೂ ಒಂದು. ಇದು ಅಂದಿನ ಬ್ರಿಟಿಶ್ ಗವರ್ನರ್ ಮೆಕಾಲೆ ಅವರಿಂದ ರಚಿಸಲ್ಪಟ್ಟಿತು. ಇದು ಅಪರಾಧಿಕ ಕಾನೂನಿನ ಒಂದು ಅಂಗ. ಭಿನ್ನವಾದ ಸಂಸ್ಕೃತಿಯಿರುವ ಭಾರತದಲ್ಲಿ ಯಾವುದೇ ಏಕರೂಪವಾದ ಕಾನೂನನ್ನು ತರುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿ ಆಗಲೇ ಭಾರತದಲ್ಲಿ ಅನುಷ್ಠಾನದಲ್ಲಿದ್ದ ಅಪರಾಧಿಕ ಕಾನೂನುಗಳನ್ನು ಪರಿಗಣನೆಗೆ ತೆಗೆದುಕೊಂಡರು. ಅಂದಿನ ‘ರಾಜಧರ್ಮ’ದ ಆಧಾರದ ಮೇಲೆ ಸಂಪ್ರದಾಯ, ಸಾಮಾಜಿಕ ಸ್ಥಿತಿ, ಸ್ಮೃತಿಗಳು ಮುಂತಾದವುಗಳನ್ನೆಲ್ಲ ಪರಿಶೀಲಿಸಿ ಒಂದೇ ರೂಪದ ದಂಡನೆಯ ಕಾನೂನನ್ನು ರಚಿಸಿದರು. ಇದೇ 1860ರಲ್ಲಿ ರಚಿತಗೊಂಡ ಭಾರತೀಯ ದಂಡ ಸಂಹಿತೆ. ಇದೊಂದು ರೀತಿಯಲ್ಲಿ ಬ್ರಿಟಿಶ್ ದಂಡ ಸಂಹಿತೆಗೆ ಭಾರತೀಯ ಸ್ಥಳೀಯ ಕಾನೂನುಗಳು ಸೇರಿಸಲ್ಪಟ್ಟು ರಚಿತವಾದ ಕಾನೂನು.

ಅಚ್ಚರಿಯೆಂದರೆ ದಂಡ ಸಂಹಿತೆ ರಚಿಸಲ್ಪಟ್ಟು ಇಂದಿಗೆ 150ಕ್ಕೂ ಹೆಚ್ಚು ವರ್ಷ ಕಳೆದರೂ ಇವತ್ತಿಗೂ ಈ ಕಾನೂನಿನಲ್ಲಿ ಯಾವುದೇ ಮಹತ್ತರವಾದ ಬದಲಾವಣೆಯಾಗಲೀ, ತಿದ್ದುಪಡಿಯಾಗಲೀ ಆಗಲಿಲ್ಲ. ಕೆಲವು ಪೂರಕ ಅಂಶಗಳು ಸೇರ್ಪಡೆಯಾಗಲ್ಪಟ್ಟಿವೆ. ಉದಾಹರಣೆಗೆ ವರದಕ್ಷಿಣೆ ನಿಷೇಧಕ್ಕೆ ಸಂಬಂಧಪಟ್ಟಂತೆ ಕಲಮು 498 ಎ, ಇತ್ಯಾದಿ. ಒಟ್ಟಿನಲ್ಲಿ ದಂಡ ಸಂಹಿತೆಯಲ್ಲಿ ಬರುವ ವಿಷಯಗಳೇನೆಂದರೆ ಭಾರತದಲ್ಲಿ ಯಾವ ಯಾವ ಕ್ರಿಯೆಗಳನ್ನು ಮಾಡಿದರೆ ಅದು ಅಪರಾಧಿಕವಾಗುತ್ತದೆ, ಯಾವ ಕಾರಣಕ್ಕಾಗಿ ಅವು ಅಪರಾಧಿಕವಾಗಿರುತ್ತದೆ ಇಂಥ ಭಿನ್ನ ಭಿನ್ನ ಅಪರಾಧಗಳಿಗೆ ಶಿಕ್ಷೆಗಳ ಪ್ರಮಾಣಗಳೆಷ್ಟು ಹಾಗೂ ಶಿಕ್ಷೆಗಳನ್ನು ವಿಧಿಸುವ ವಿಧಾನ ಇತ್ಯಾದಿಗಳಾಗಿರುತ್ತದೆ. ಆದ್ದರಿಂದ ಇಂತಹ ಕಾನೂನಿನ ಸಾಮಾನ್ಯ ಜ್ಞಾನವೂ ನಾಗರಿಕರಲ್ಲಿ ಭಯ ಹುಟ್ಟಿಸಿ ಅಪರಾಧಿಕ ಘಟನೆಗಳು ಕಡಿಮೆಯಾಗಲಿ ಎಂಬುದೇ ಮುಖ್ಯ ಉದ್ದೇಶ.

ಸಿವಿಲ್ ಪ್ರಕ್ರಿಯಾ ಸಂಹಿತೆ (Civil procedure code)

ಸಿವಿಲ್ ಕಾನೂನುಗಳಿಗೆ ಕನ್ನಡದಲ್ಲಿ ದಿವಾನೀ ಕಾನೂನು ಅಂತಲೂ ಕರೆಯುತ್ತಾರೆ. ಅಂದರೆ ಸಿವಿಲ್ ಪ್ರಕರಣಗಳನ್ನು ಅಪರಾಧಿಕ ಸ್ವರೂಪದಲ್ಲಿ ಪರಿಗಣಿಸಲ್ಪಡುವುದಿಲ್ಲ. ಅನ್ಯಾಯಕ್ಕೊಳಗಾದ ಮನುಷ್ಯನಿಗೆ ನ್ಯಾಯ ನೀಡುವುದೇ ಸಿವಿಲ್ ಕಾನೂನಿನ ಉದ್ದೇಶ. ಇಲ್ಲಿ ಅನ್ಯಾಯಕ್ಕೆ ಪರ್ಯಾಯವಾಗಿ ನ್ಯಾಯ ನೀಡಲಾಗುತ್ತದೆಯೇ ವಿನಃ ಶಿಕ್ಷೆಗಳನ್ನಲ್ಲ. ಮನುಷ್ಯನ ಸ್ವಾಭಾವಿಕ ಹಕ್ಕುಗಳನ್ನು, ಆತ್ಮಗೌರವವನ್ನು ಕಾಪಾಡುವುದು ಇಂಥ ಕಾನೂನುಗಳ ಆಶಯ. ಆಸ್ತಿಗೆ ಸಂಬಂಧಪಟ್ಟಂತೆ, ಆನುವಂಶಿಕ ಹಕ್ಕು-ಬಾಧ್ಯತೆಗಳಿಗೆ ಸಂಬಂಧಪಟ್ಟಂತೆ, ಕೌಟುಂಬಿಕ ಕಲಹಗಳು ಮುಂತಾದ ಹಲವಾರು ಸಿವಿಲ್ ಸ್ವರೂಪದ ವಿವಾದಗಳಿಗೆ ಈ ಕಾನೂನು ಪರಿಹಾರ ಸೂಚಿಸುತ್ತದೆ. ಸಿವಿಲ್ ವಿವಾದಗಳ ಲಕ್ಷಣಗಳು, ಅದನ್ನು ನಿರ್ಧರಿಸಬೇಕಾದ ಹಲವು ಹಂತಗಳು ಮುಂತಾದ ಎಲ್ಲ ಪ್ರಕ್ರಿಯೆಗಳು ಈ ಕಾನೂನಿನಲ್ಲಿ ದಾಖಲಿಸಲ್ಪಟ್ಟಿವೆ.

ಸಿವಿಲ್ ಕಾನೂನುಗಳನ್ನು ರಚಿಸುವಾಗ ಇಂಗ್ಲಿಶರು ಭಾರತದಲ್ಲಿ ಆಗ ರೂಢಿಯಲ್ಲಿದ್ದ ಹಲವಾರು ಅಂಶಗಳನ್ನು ಅಳವಡಿಸಿಕೊಂಡಿದ್ದನ್ನು ನಾವು ಗಮನಿಸಬಹುದು. ಇಂತಹ ಸಿವಿಲ್ ಸಂಹಿತೆ 1859ರಲ್ಲೇ ರಚಿಸಲ್ಪಟ್ಟಿದ್ದರೂ 1908ರಲ್ಲಿ ನಿರ್ಧಿಷ್ಟವಾದ ಒಂದು ಸ್ಪಷ್ಟರೂಪವನ್ನು ಪಡೆದು ‘ಸಿವಿಲ್ ಪ್ರಕಿಯಾ ಸಂಹಿತ’ ಎಂಬ ಹೆಸರಿನಲ್ಲಿ ಜಾರಿಯಲ್ಲಿ ಬಂತು. ನಂತರ 1976 ಮತ್ತು 2002ರಲ್ಲಿ ಹಲವು ಮಹತ್ವದ ತಿದ್ದುಪಡಿಗಳಾದವು.

ಭಾರತೀಯ ಒಪ್ಪಂದದ ಅಧಿನಿಯಮ (Indian Contract act)

ನಾಗರಿಕತೆ ಬೆಳೆಯುತ್ತ ಬಂದಹಾಗೆ ಇಂಥ ಒಪ್ಪದಂದ ಕಾನೂನು ಹೆಚ್ಚು ಹೆಚ್ಚು ಮಹತ್ವವನ್ನು ಪಡೆಯುತ್ತ ಹೋಗುತ್ತವೆ. ಏಕೆಂದರೆ ಆಧುನಿಕ ಜಗತ್ತು ನಿಂತಿದ್ದೇ ಹಣ, ವಸ್ತು ಹಾಗೂ ಭೂಮಿಯ ಉಪಭೋಗದ ಮೇಲೆ. ಹಾಗಾಗಿ ಇವುಗಳಿಗೆ ಸಂಬಂಧಪಟ್ಟಂತೆ ಇಬ್ಬರು ವ್ಯಕ್ತಿಗಳ ಹಕ್ಕು ಬಾಧ್ಯತೆಗಳನ್ನು ನಿಯಂತ್ರಿಸುವುದೇ ಒಪ್ಪಂದದ ಕಾನೂನು. ಇದರಲ್ಲಿ ಒಪ್ಪಂದ ಎಂದರೇನು? ಒಪ್ಪಂದದ ಲಕ್ಷಣಗಳು, ಒಪ್ಪಂದದ ಊರ್ಜಿತ ಹಾಗೂ ಅನೂರ್ಜಿತತೆ, ಯಾರ ಯಾರ ಜೊತೆ ಒಪ್ಪಂದ ಮಾಡಿಕೊಳ್ಳಬಹುದು ಎಂಬಿತ್ಯಾದಿ ಅನೇಕ ಅಂಶಗಳನ್ನು ವರ್ಣಿಸಲಾಗಿದೆ ಮತ್ತು ಕಾನೂನಿಗೊಳಪಡಿಸಲಾಗಿದೆ.

ಸ್ವತ್ತು ಹಸ್ತಾಂತರ ಅಧಿನಿಯಮ(Indian Contract act)

ತೀರಾ ಸಂಕ್ಷಿಪ್ತವಾಗಿ ಹೇಳುವುದಾದರೆ ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಯಾವ ಯಾವ ಸ್ವರೂಪದ ಆಸ್ತಿಗಳನ್ನು ಯಾವ ಯಾವ ಸ್ವರೂಪದಲ್ಲಿ ಹಸ್ತಾಂತರ ಮಾಡಬಹುದು ಹಾಗೂ ಅದರ ಕಾನೂನಿನ ಸ್ವರೂಪಗಳನ್ನು ವಿವರಿಸಲಾಗಿದೆ.

ಭಾರತೀಯ ನೋಂದಣಿ ಅಧಿನಿಯಮ (Indian registration act)

ಈ ಕಾನೂನು 1908ರಲ್ಲಿ ಅನುಷ್ಠಾನಕ್ಕೆ ಬಂದಿದೆ. ಪ್ರಸ್ತುತ ಆಧುನಿಕ ಸಂದರ್ಭದಲ್ಲಿ ಅತೀ ಹೆಚ್ಚು ಮಹತ್ವ ಪಡೆದ ಕಾನೂನು ಇದು. ನಮ್ಮ ದಿನನಿತ್ಯದ ಬದುಕಿನ ಹಲವಾರು ಸಂಗತಿಗಳು ಕಾನೂನಿಗನ್ವಯವಾಗಬೇಕಾದರೆ ಅದು ನೋಂದಣಿಯಾಗಲೇಬೇಕು. ವಿಭಾಗ ಪತ್ರ, ಮರಣ ಶಾಸನ, ವಿವಾಹ, ಭಕ್ಷೀಸು, ಕ್ರಯ-ವಿಕ್ರಯ, ಸಂಘ-ಸಂಸ್ಥೆಗಳ ಸ್ಥಾಪನೆ ಮುಂತಾದ ಎಲ್ಲ ಸಂದರ್ಭಗಳಲ್ಲೂ ನೋಂದಣಿ ಕಾನೂನಿನಂತೆ ನೋಂದಾಯಿಸಿಕೊಂಡಾಗ ಮಾತ್ರ ಕಾನೂನಿನ ರಕ್ಷಣೆ ಪಡೆಯಲು ಸಾಧ್ಯ. ಇದಕ್ಕೆ ಸಂಬಂಧಪಟ್ಟ ಎಲ್ಲ ನಿಯಮಾವಳಿಗಳು ಈ ಕಾನೂನಿನಲ್ಲಿವೆ.

ಹಿಂದೂ ಕಾನೂನು   (Hindu Law)

ಹಿಂದೂ ಕಾನೂನಿಗೆ ಸಂಬಂಧಪಟ್ಟಂತೆ 1956ರಲ್ಲಿ ಹಿಂದೂ ವಾರಸಾ ಅಧಿನಿಯಮ ಜಾರಿಯಲ್ಲಿ ಬಂತು. ಅದಕ್ಕೂ ಪೂರ್ವದಲ್ಲಿ ಭಾರತದಲ್ಲಿ ಆಸ್ತಿಯ ಹಕ್ಕು, ವಿಭಜನೆಗೆ ಸಂಬಂಧಪಟ್ಟಂತೆ ಭಾರತೀಯ ಸಂಪ್ರದಾಯ ಮತ್ತು ಪದ್ಧತಿಗಳ ಮೇಲೆ ಅಥವಾ ಸ್ಮೃತಿಗಳಲ್ಲಿ ಉಲ್ಲೇಖಿಸಿದ ನಿಯಮಾವಳಿಗಳ ಮೇಲೆ ನಡೆಯುತ್ತಿರುತ್ತಿತ್ತು. ಹಿಂದೂ ವಾರಸಾ ಕಾನೂನು ಆಧುನಿಕ ಭಾರತದ ಕಾನೂನಾದರೂ ಕೂಡ ನಮ್ಮ ಪೂರ್ವ ಸಂಸ್ಕೃತಿಯಲ್ಲಿ ಅನುಸರಿಸುತ್ತಿದ್ದ ವಿಧಾನಗಳನ್ನೇ ಬಳಸಿಕೊಳ್ಳಲಾಗಿದೆ. ಆಸ್ತಿ ಹಕ್ಕಿಗೆ ಸಂಬಂಧಪಟ್ಟಂತೆ ಭಾರತೀಯ ಪರಂಪರೆಯಲ್ಲಿ ಪ್ರಾಮುಖ್ಯತೆ ಪಡೆದಿದ್ದ ದಯಾಭಾಗ ಮತ್ತು ಮಿತಾಕ್ಷರ ಎರಡೂ ಕಾನೂನಿನ ಅಂಶಗಳು ಹಿಂದೂ ವಾರಸ ಅಧಿನಿಯಮಕ್ಕೆ ಮುಖ್ಯ ಆಕರಗಳಾಗಿವೆ. ಇಡೀ ಭಾರತಕ್ಕೆ ಸಂಬಂಧಪಟ್ಟಂತೆ ಹಿಂದೂ ವಾರಸಾ ಅಧಿನಿಯಮ ಇದ್ದರೂ ಈ ಕಾನೂನು ಆಯಾ ಪ್ರಾಂತ್ಯದ ಪದ್ದತಿ ಹಾಗೂ ಸಂಪ್ರದಾಯಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು ಗಮನಾರ್ಹವಾದ ಸಂಗತಿ. ಒಂದರ್ಥದಲ್ಲಿ ಭಾರತೀಯ ಸಂಸ್ಕೃತಿಯನ್ನು ಆಧರಿಸಿ ರಚಿತವಾದ ಏಕಮೇವ ಕಾನೂನು ಇದು ಎಂದರೂ ತಪ್ಪೇನಿಲ್ಲ.

ಇದರ ಜೊತೆಗೆ ಮಹಿಳಾ ಕಾನೂನುಗಳು, ಅಲ್ಪಸಂಖ್ಯಾತರ ಕಾನೂನುಗಳು, ಮೀಸಲಾತಿ, ಧಾರ್ಮಿಕದತ್ತಿ ಮುಂತಾಗಿ ಹಲವಾರು ಕಾನೂನುಗಳನ್ನು ನಾವು ಆಧುನಿಕ ಕಾನೂನುಗಳನ್ನಾಗಿ ಗುರುತಿಸಬಹುದು.

************

ಚಿತ್ರ ಕೃಪೆ : lawyers4sc.com

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments