ವಿಷಯದ ವಿವರಗಳಿಗೆ ದಾಟಿರಿ

ಜುಲೈ 4, 2012

5

ಮಾತೃಭಾಷೆಯಲ್ಲಿಯೇ ಶಿಕ್ಷಣ-ಮಕ್ಕಳ ಹಕ್ಕನ್ನು ರಕ್ಷಿಸಿ

‍ನಿಲುಮೆ ಮೂಲಕ

– ಪಂಡಿತಾರಾಧ್ಯ,ಮೈಸೂರು

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿತು. ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ. ಇದರಿಂದ ಮಕ್ಕಳು ಆರಂಭದ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.

ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಮಾನದ ಅನಂತರ ಸರಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲ ಮಕ್ಕಳಿಗೆ ಏಕರೂಪದ ಮಾತೃಭಾಷಾ ಶಿಕ್ಷಣ ಜಾರಿಗೆ ಬರುತ್ತದೆ. ಸರಕಾರವು ಸರ್ವೋನ್ನತ ನ್ಯಾಯಾಲಯದ ಮುಂದಿರುವ ಪ್ರಕರಣವು ಬೇಗ ಇತ್ಯರ್ಥವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುತ್ತಿರುವುದು ಆತಂಕದ ಸಂಗತಿ.

ಸರ್ವೋನ್ನತ ನ್ಯಾಯಾಲಯವು ಪುರಸ್ಕರಿಸಿದ ಸರಕಾರದ ಭಾಷಾ ನೀತಿಯಿಂದ ರಾಜ್ಯದ ಸರಕಾರಿ-ಖಾಸಗಿ, ಅನುದಾನಿತ-ಅನುದಾನರಹಿತ ಎಂಬ ಭೇದವಿಲ್ಲದೆ ಪೂರ್ವ ಪ್ರಾಥಮಿಕ ಹಂತದಿಂದ ಐದನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಏಕರೂಪದ, ಸಮಾನ ಅವಕಾಶದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷನ್ನು ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮವಾಗಿದೆ. ಇದರಿಂದ ಹಿಂದುಳಿದ ವರ್ಗಗಳ ಮಕ್ಕಳಂತೆ ಮುಂದುವರೆದ ವರ್ಗಗಳ ಮಕ್ಕಳೂ ಮಾತೃಭಾಷೆಯಲ್ಲಿಯೇ ಕಲಿಯುವುದರಿಂದ ಎಲ್ಲ ವರ್ಗಗಳ ಮಕ್ಕಳಿಗೆ ಸಮಾನ ಸ್ಪರ್ಧೆಯ ಸಮಾನ ಅವಕಾಶ ದೊರೆಯುತ್ತದೆ. ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಕಲಿಕೆಯ ಸೌಲಭ್ಯಗಳ ಬೆಂಬಲವಿರುವ ಮುಂದುವರೆದ ವರ್ಗಗಳ ಮಕ್ಕಳ ಜೊತೆ, ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಕಲಿಕೆಯ ಸೌಲಭ್ಯಗಳ ಬೆಂಬಲಗಳಿಲ್ಲದ ಹಿಂದುಳಿದ ವರ್ಗಗಳ ಮಕ್ಕಳು ಇಂಗ್ಲಿಷನ್ನೂ ಕಲಿಯುತ್ತಾ ಇಂಗಿಷಿನಲ್ಲಿ ಸ್ಪರ್ಧಿಸಬೇಕಾಗುವುದರಿಂದ ಅವರ ನಡುವೆ ಅಸಮಾನತೆಯ ಅಂತರ ಹೆಚ್ಚುತ್ತದೆ. ಅದರ ಬದಲು ಎಲ್ಲ ಮಕ್ಕಳೂ ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯುವುದರಿಂದ ಅವರು ಶೈಕ್ಷಣಿಕವಾಗಿ ಸಮಾನವಾಗಿ ಮುಂದುವರೆಯಲು ಸಾಧ್ಯವಾಗುವುದು ಮಹತ್ವದ ಸಂಗತಿ.

ಮಕ್ಕಳು ಐದನೆಯ ತರಗತಿಯಿಂದ ಮಾತ್ರ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಲು ಆರಂಭಿಸಿರುವುದರಿಂದ ಅವರಿಗೆ ಆರನೆಯ ತರಗತಿಯ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನು ಕಲಿಯುವಷ್ಟು ಸಾಮರ್ಥ್ಯವಾಗಲಿ, ಅಗತ್ಯವಾಗಲಿ ಇರುವುದಿಲ್ಲ. ಅವರು ಮಾಧ್ಯಮವಾಗಿ ಬಳಸಬಹುದಾದಷ್ಟು ಸಾಮರ್ಥ್ಯವನ್ನು ಇಂಗ್ಲಿಷಿನಲ್ಲಿ ಪಡೆಯವವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ದುಡುಕಬಾರದು. ಕರ್ನಾಟಕ ಸರಕಾರವು ಈಗಿರುವ ಶಿಕ್ಷಣಕ್ರಮದಲ್ಲಿಯೇ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದು ಅಶೈಕ್ಷಣಿಕವಷ್ಟೇ ಅಲ್ಲ, ಸಾಧ್ಯವಾದಷ್ಟೂ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕೆಂಬ ಮಕ್ಕಳ ಶಿಕ್ಷಣ ಹಕ್ಕಿನ ವಿರುದ್ಧವೂ ಆಗುತ್ತದೆ. ಸರ್ವೋನ್ನತ ನ್ಯಾಯಾಲಯ ಅನುಮೋದಿಸಿರುವ ಭಾಷಾನೀತಿಯನ್ನು ಮೊದಲು ಪೂರ್ಣವಾಗಿ ಜಾರಿಗೊಳಿಸಿ, ಅದರ ಕ್ರಮದಂತೆ ಐದನೆಯ ತರಗತಿಯನ್ನು ಪೂರೈಸಿದ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಗಮನಿಸಿದ ಅನಂತರವೇ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಬಹುದಾದ ಹಂತದ ಬಗ್ಗೆ ನಿರ್ಧರಿಸಬೇಕು.
ಸರ್ವೋನ್ನತ ನ್ಯಾಯಾಲಯ ಅನುಮೋದಿಸಿದ್ದ ಕರ್ನಾಟಕ ಸರಕಾರದ ಭಾಷಾನೀತಿಯನ್ನು ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿ, ಅದರ ಇತ್ಯರ್ಥವನ್ನು ಹದಿನಾಲ್ಕು ವರ್ಷಗಳವರೆಗೆ ವಿಳಂಬಿಸಿ, ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಿತಗೊಳಿಸಿರುವುದು ಮಕ್ಕಳ ಶಿಕ್ಷಣದ ಹಕ್ಕಿನ ಉಲ್ಲಂಘನೆಯೇ ಆಗಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಯಾರ ಮಾತೃಭಾಷೆಯೂ ಅಲ್ಲದ, ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಆರಂಭಿಸಿರುವ, ಮತ್ತು ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವುದರ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಅವಕಾಶದ ಹಕ್ಕನ್ನು ಶಾಶ್ವತವಾಗಿ ವಂಚಿಸುವ ವ್ಯವಸ್ಥಿತವಾದ ಸಂಚಿರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವುದು ಇದಕ್ಕೆ ಪುಷ್ಟಿಯನ್ನು ನೀಡುವಂತಿದೆ.

‘ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಲ್ಲ ವರ್ಗ ಹಾಗೂ ಸಮುದಾಯಗಳ ಕನ್ನಡಿಗರೆಲ್ಲರ ಬೇಡಿಕೆ ಎಂದೂ ಅದಕ್ಕೆ ಕೆಲವರು ಮಾತ್ರ ಬೇಡವೆನ್ನುವುದು ಜನಪರವಲ್ಲ’ವೆಂದೂ ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ತಂದೆತಾಯಿಗಳ ಅಶೈಕ್ಷಣಿಕ ಮಹತ್ವಾಕಾಂಕ್ಷೆಯ ಬೇಡಿಕೆಯ ಆಧಾರದ ಮೇಲೆ ನಿರ್ಧರಿಸುವುದಿಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಮಾತ್ರ ನಿರ್ಧರಿಸುತ್ತಾರೆ. ಮಾತೃಭಾಷೆಯಲ್ಲದ ಭಾಷೆಯನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸುವುದು ಗುಣಮಟ್ಟದ ಶಿಕ್ಷಣಕ್ಕೆ ಕಾರಣ ಎಂದು ಯಾವ ಶಿಕ್ಷಣ ತಜ್ಞರೂ ಹೇಳಿಲ್ಲ. ಅದಕ್ಕೆ ಬದಲಾಗಿ ಮಕ್ಕಳ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದೇ ಹೇಳಿದ್ದಾರೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಅವರ ಭಾಷೆಯಲ್ಲಿ ಕಲಿಸುವುದು ಮಾತ್ರ ಶೈಕ್ಷಣಿಕವಾಗಿ ಮುಖ್ಯ. ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿಯೇ ಕಲಿಸುವುದನ್ನು ಯಾರೂ ಬೇಡವೆನ್ನುತ್ತಿಲ್ಲ.

ಇಂಗ್ಲಿಷ್ ಮಾತೃಭಾಷೆಯ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುವ ರೀತಿಯಲ್ಲಿಯೇ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಇಂಗ್ಲಿಷನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಧಾನದಲ್ಲಿ ಸುಲಭವಾಗಿ ಮತ್ತು ಯಶಸ್ವಿಯಾಗಿ ಕಲಿಸಬಹುದು. ಅದಕ್ಕೆ ಅಗತ್ಯವಾದ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಮೊದಲು ಸಿದ್ಧಪಡಿಸಬೇಕು. ಹಾಗೆ ತರಬೇತಿಪಡೆದ ಶಿಕ್ಷಕರು ಮಕ್ಕಳೊಂದಿಗೆ ಸರಳವಾಗಿ ಇಂಗ್ಲಿಷಿನಲ್ಲಿ ಯೋಚಿಸುವುದನ್ನು, ಮಾತನಾಡುವುದನ್ನು ಮೊದಲು ಕಲಿಸಬೇಕು. ಅನಂತರವೇ ಇಂಗ್ಲಿಷಿನಲ್ಲಿ ಓದುವುದು, ಬರೆಯುವುದನ್ನು ಕಲಿಸಬೇಕು. ಈಗ ಹಾಗೆ ಮಾಡದೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅಕ್ಷರ, ಪುಸ್ತಕಗಳನ್ನು ಓದಿಸುತ್ತಿರುವುದರಿಂದ ಉದ್ದೇಶಿತ ಪ್ರಯೋಜನವಾಗುತ್ತಿಲ್ಲ. ಶೈಕ್ಷಣಿಕವಾದ ಸರಿಯಾದ ಕ್ರಮದಲ್ಲಿ ಸುಲಭವಾಗಿ ಕಲಿಯಬಹುದಾದ ಇಂಗ್ಲಿಷ್ ಭಾಷೆಯನ್ನು ಶೈಕ್ಷಣಿಕವಲ್ಲದ ಕ್ರಮದಲ್ಲಿ ಪ್ರಾಥಮಿಕ ಒಂದನೆಯ ತರಗತಿಯಿಂದಲೇ ಕಡ್ಡಾಯಗೊಳಿಸಿ ಆರನೆಯ ತರಗತಿಯಿಂದ ಹಾಗೆ ಅಸಮರ್ಪಕವಾಗಿ ಕಲಿಸಿದ ಇಂಗ್ಲಿಷನ್ನು ಮಾಧ್ಯಮವಾಗಿ ಮುಂದುವರೆಸುವುದರಲ್ಲಿ ಅರ್ಥವಿಲ್ಲ.

ತಮಗೆ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು. ಸರಕಾರ ಯಾವ ಕಾರಣಕ್ಕೂ ಮಕ್ಕಳ ಈ ಹಕ್ಕನ್ನು ಕಸಿಯಬಾರದು. ಸರಕಾರ ತಂದೆತಾಯಿಗಳ ಅಶೈಕ್ಷಣಿಕ ಮಹತ್ವಾಕಾಂಕ್ಷೆ ಮತ್ತು ಶಿಕ್ಷಣ ವ್ಯಾಪಾರಿಗಳ ದುರಾಸೆಗೆ ಇಂಬುಕೊಡುವಂತೆ ಇಂಗ್ಲಿಷ್ ಭಾಷೆಯನ್ನು ಕಲಿಸುವ ಮತ್ತು ಮಾಧ್ಯಮವಾಗಿ ಅದನ್ನು ಬಳಸುವ ವಿಷಯದಲ್ಲಿ ದುಡುಕಬಾರದು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಹಕ್ಕಿನ ರಕ್ಷಕನಾಗಿ ವರ್ತಿಸಬೇಕು.

೧೯೮೯ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ರಾಮಾಜೋಯಿಸ್ ಮತ್ತು ಶ್ರೀ ರಾಜೇಂದ್ರಬಾಬು ಅವರು ನೀಡಿದ ತೀರ್ಪು ಇಡೀ ದೇಶಕ್ಕೆ ಮಾದರಿಯಾದುದು ಎಂದು ದಿ ಟೈಮ್ಸ್ ಆಫ್ ಇಂಡಿಯಾ ಸಂಪಾದಕೀಯದಲ್ಲಿ ಪ್ರಶಂಸಿಸಿತ್ತು. ಅದನ್ನು ೧೯೯೩ರಲ್ಲಿ ಸರ್ವೋನ್ನತ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ಎಂ ಎನ್ ವೆಂಕಟಾಚಲಯ್ಯ ಮತ್ತು ಶ್ರೀ ಎಸ್ ಮೋಹನ್ ಅವರು ಅನುಮೋದಿಸಿದ್ದರು. ಅದನ್ನು ಆಧರಿಸಿ ಶ್ರೀ ಎಂ ವೀರಪ್ಪ ಮೊಯಿಲಿ ಅವರ ಸರಕಾರ ೧೯೯೪ರಲ್ಲಿ ರೂಪಿಸಿದ ಭಾಷಾನೀತಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಸದವಕಾಶ ಇಂದಿನ ಮುಖ್ಯಮಂತ್ರಿಗಳಾಗಿರುವ ಶ್ರೀ ಸದಾನಂದಗೌಡರ ಸರಕಾರಕ್ಕೆ ದೊರೆತಿದೆ. ಅದನ್ನು ಅನುಷ್ಠಾನಗೊಳಿಸಿದ ಕೀರ್ತಿ ಅವರದಾಗಲಿ ಎಂದೇ ನನ್ನ ಆಶಯ.

ಬೆಂಗಳೂರು*
೧೯೩೪ ಗ್ರೀಷ್ಮ ಜ್ಯೇಷ್ಠ ೨೫ ಕೃಷ್ಣ ಏಕಾದಶಿ ಅಶ್ವಿನಿ ಶುಕ್ರವಾರ
೧೫ಜೂನ್ ೨೦೧೨
—-
* ಸರಕಾರಿ ಶಾಲೆಗಳಲ್ಲಿ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವುದರ ವಿರುದ್ಧ ಮೈಸೂರಿನ ಕನ್ನಡ ಕ್ರಿಯಾ ಸಮಿತಿಯು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ಪ್ರತಿಭಟನೆಯ ಧರಣಿಯಲ್ಲಿ ವಿತರಿಸಿದೆ*

================================================================================================

ಕನ್ನಡ/ಇಂಗ್ಲೀಷ್ ಮಾಧ್ಯಮದ ಜೊತೆಗೆ ಏಕರೂಪ ಶಿಕ್ಷಣದ ಬಗ್ಗೆಯೂ ಚರ್ಚೆ ಆಗಬೇಕಲ್ಲವೇ?” ಲೇಖನದ ಮೇಲೆ ಫ಼ೇಸ್ಬುಕ್ಕಿನ ಚರ್ಚೆಯಲ್ಲಿ ನೀಡಿದ ಪ್ರತಿಕ್ರಿಯೆಗಳು

ಇಂಗ್ಲಿಷ್ ಕಲಿಕೆ :
ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯ ಹಂತದಿಂದ ಇಂಗ್ಲಿಷನ್ನು ಐಚ್ಛಿಕವಾಗಿ, ಪರೀಕ್ಷೆಗೆ ಇಲ್ಲದ ವಿಷಯವಾಗಿ ಕಲಿಸುವುದೆಂದರೆ ಇಂಗ್ಲಿಷನಲ್ಲಿ ಕೇಳುವ ಮತ್ತು ಮಾತನಾಡುವ ಕೌಶಲಗಳನ್ನು ಮಾತ್ರ ಕಲಿಸುವುದು. ಹೀಗೆ ಇಂಗ್ಲಿಷಿನಲ್ಲಿ ಕೇಳಿ ಅರ್ಥಮಾಡಿಕೊಳ್ಳುವ, ಯೋಚಿಸುವ ಮತ್ತು ಇಂಗ್ಲಿಷಿನಲ್ಲಿಯೇ
ಉತ್ತರಿಸುವ ಕೌಶಲವನ್ನು ಕಲಿಸಬೇಕು.ಇಲ್ಲಿ ಓದುವುದು ಬರೆಯುವುದು ಇರಕೂಡದು. ಐದನೆಯ ತರಗತಿಯಲ್ಲಿ ಓದುವ ಮತ್ತು ಬರೆಯುವ ಕೌಶಲಗಳನ್ನು ಕಲಿಸುವುದು ಉಪಯುಕ್ತ.

ಈ ಕ್ರಮದಲ್ಲಿ ಕಲಿಸುವುದರಿಂದ ಇಂಗ್ಲಿಷನ್ನೂ ಸಮಾನ ಅವಕಾಶಗಳ ನೆಲೆಯಲ್ಲಿಯೇ ಹಿಂದುಳಿದವರ ಮತ್ತು ಮುಂದುವರೆದವರ ಮಕ್ಕಳು ಕಲಿಯಲು ಸಾಧ್ಯವಾಗುವುದು ಮಹತ್ವದ ಸಂಗತಿ.ಹೀಗೆ ಕಲಿತ ಇಂಗ್ಲಿಷನ್ನು ಮಕ್ಕಳು ಮುಂದೆ ತಮ್ಮ ಅಗತ್ಯಕ್ಕೆ ಅನುಸಾರವಾಗಿ ಮಾಧ್ಯವಾಗಿಯೂ ಬಳಸಲು ಸ್ವಯಂ ಶಕ್ತರಾಗಿರುತ್ತಾರೆ.ಅದರ ಆಯ್ಕೆ ಅವರದು.ಅವರದ್ದು ಮಾತ್ರ.

ಏಕರೂಪ ಶಿಕ್ಷಣ:  

ರಾಜ್ಯ ಸರಕಾರದ ಶಿಕ್ಷಣ ನೀತಿ ಪೂರ್ಣರೂಪದಲ್ಲಿ ಏಕರೂಪ ಸಮಾನ ಶಿಕ್ಷಣವನ್ನೇ ಕುರಿತಿದೆ. ರಾಜ್ಯದ ಎಲ್ಲ ಮಕ್ಕಳಿಗೂ ಮಾತೃಭಾಷೆ/ಪರಿಸರದ ಭಾಷೆ/ರಾಜ್ಯಭಾಷೆಯ ಸಮಾನ ಅವಕಾಶದ ಸಮಾನ ಸ್ಪರ್ಧೆ ಇದರಿಂದ ಸಾಧ್ಯ. ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಾತೃಭಾಷೆ ಶಿಕ್ಷಣದಿಂದ ವಂಚಿತರಾಗುವ ನತದೃಷ್ಟ ಮಕ್ಕಳಿಗೆ ಮಾತ್ರ ಅನಿವಾರ್ಯವಾಗಿ ಕೇಂದ್ರ ಪಠ್ಯಕ್ರಮ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಎಲ್ಲ ಮಕ್ಕಳ ಹಕ್ಕು. ಅದನ್ನು ವಂಚಿಸುವ ಪೋಷಕರು,ಶಾಲಾ ವರ್ತಕರು, ರಾಜಕಾರಣಿಗಳು ಮತ್ತು ಹೊಣೆಗಾರಿಕೆಯ ಸ್ಥಾನದಲ್ಲಿರುವ ಎಲ್ಲರೂ ಮಕ್ಕಳ ಹಕ್ಕುಗಳನ್ನು ದಮನ ಮಾಡುವವರೇ.

ಕನ್ನಡವನ್ನು ಉದ್ಧರಿಸುವುದಕ್ಕಾಗಿ ಮಾತೃಭಾಷೆಯ ಶಿಕ್ಷಣ ಎಂಬ ಭ್ರಮೆ ಯಾರೂ ಇಟ್ಟುಕೊಳ್ಳುವುದು ಬೇಡ.ಮಾತೃಭಾಷೆಯ ಶಿಕ್ಷಣ ಬೇಕಾಗಿರುವುದು ಮಕ್ಕಳ ಹಿತಕ್ಕಾಗಿ. ಅದರಲ್ಲಿ ಬಡವ ಬಲ್ಲಿದ ನಗರ ಹಳ್ಳಿ ಹಿಂದುಳಿದ,ಮುಂದುವರೆದ ಎಂಬೆಲ್ಲ ಬಗೆಯ ಮಕ್ಕಳಿಗೂ ಮಾತೃಭಾಷೆಯ ಸಮಾನ ಏಕರೀತಿಯ ಶಿಕ್ಷಣ ದೊರೆಯಬೇಕು ಎಂಬುದು ರಾಜ್ಯ
ಸರಕಾರದ ಭಾಷಾನೀತಿಯ ಸಂಪೂರ್ಣ ಅನುಷ್ಠಾನದಿಂದ ಸಾಧ್ಯ.

ಸಂವಿಧಾನದ ಪ್ರಕಾರ ಒಂದನೆಯ ತರಗತಿಯಲ್ಲಿ ಮಾತೃ ಭಾಷೆ ಒಂದು ಮಾತ್ರ ಕಲಿಕೆಯ ವಿಷಯ. ರಾಜ್ಯ ಭಾಷೆ ಕನ್ನಡವನ್ನೇ ಮಾತೃಭಾಷೆಯಲ್ಲದವರಿಗೆ ಕಡ್ಡಾಯಮಾಡುವಂತಿಲ್ಲ.ಇನ್ನು ಯಾರ ಮಾತೃಭಾಷೆಯೂ ಅಲ್ಲದ, ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಸುವುದೂ ಸಂವಿಧಾನ ವಿರೋಧಿಯೇ.
ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಕನ್ನಡೇತರರಿಗೆ ಎರಡನೆಯ ಭಾಷೆ ಕನ್ನಡ ಐಚ್ಛಿಕ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಡ್ಡಾಯ ಮತ್ತು ಪರೀಕ್ಷೆಯ ವಿಷಯ. ಮೂರನೆಯ ತರಗತಿಯಿಂದ ಮಾತ್ರ ಎರಡನೆಯ ಭಾಷೆ ಇಂಗ್ಲಿಷ್ ಐಚ್ಛಿಕ, ಪರೀಕ್ಷೆ ಕಡ್ಡಾಯವಲ್ಲ.

ಐದನೆಯ ತರಗತಿಯಿಂದ ಎಲ್ಲವೂ ಕಡ್ಡಾಯ ಮತ್ತು ಪರೀಕ್ಷೆಯ ವಿಷಯ.ಎಲ್ಲ ವರ್ಗಗಳ ಮಕ್ಕಳಿಗೂ ಸಮಾನ ಅವಕಾಶ ಸಮಾನ ಸ್ಪರ್ಧೆ ಇದರಿಂದ ಮಾತ್ರ ಸಾಧ್ಯ.
ಮುಂದುವರೆದವರ ಮಗುವೂ ಹಿಂದುಳಿದವರ ಮಕ್ಕಳ ಜೊತೆ ಸಮಾನವಾಗಿ ಮಾತೃಭಾಷೆಯಲ್ಲಯೇ ಸ್ಪರ್ಧಿಸಬೇಕು.ಮುಂದುವರೆದ ವರ್ಗದವರ ಮಕ್ಕಳ ಜೊತೆ ಹಿಂದುಳಿದವರ ಮಕ್ಕಳು ಅಪರಿಚಿತ ಇಂಗ್ಲಿಷಿನಲ್ಲಿ ಅಸಮಾನವಾಗಿ ಸ್ಪರ್ಧಿಸಿ ಸೋಲುವುದಕ್ಕೆ ಅವಕಾಶವಿಲ್ಲ. ಇದು ಮಾತ್ರವೇ ಏಕರೂಪ ಸಮಾನ ಶಿಕ್ಷಣ.

ಪ್ರೀತಿಯ ತಂದೆ ತಾಯಿಗಳೇ, ಮಕ್ಕಳ ಶಿಕ್ಷಣದಲ್ಲಿ ಆಸಕ್ತಿ ಇರುವವರೆ ದಯವಿಟ್ಟಯ ಯೋಚಿಸಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಹಕ್ಕನ್ನು ಅವರಿಗೆ ರಕ್ಷಿಸಿ ಕೊಡಿ…

———-

ರಾಕೇಶ್ ಶೆಟ್ಟಿ : ಮೊದಲು “ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಅನಿವಾರ್ಯವಾಗಿ ಕೇಂದ್ರ ಪಠ್ಯಕ್ರಮವಿತ್ತು”,ಆದರೆ ಈಗ ಈ ಕೇಂದ್ರ ಪಠ್ಯಕ್ರಮ ಖಾಸಗಿ ಶಾಲೆಗಳಲ್ಲೂ ಲಭ್ಯವಿದೆ.ಜೊತೆಗೆ ಇನ್ನೊಂದಿಷ್ಟು ಪಠ್ಯಕ್ರಮಗಳೂ ಸೇರಿ ಪೋಷಕರಿಗೆ ಟೋಪಿ ಹಾಕುತ್ತಿವೆ…!

ನಮ್ಮ ಘನ ಸರ್ಕಾರಗಳು ಇಂತ ಖಾಸಗಿ ಶಾಲೆಗಳಿಗೆ ಅವಕಾಶಕೊಟ್ಟು ಜನರನ್ನೂ ವಂಚಿಸುತ್ತಿವೆ.ಕೇಂದ್ರ ಪಠ್ಯಕ್ರಮವೊಂದನ್ನು (ಅದು ಕೇಂದ್ರೀಯ ವಿದ್ಯಾಲಯಗಳಿಗೆ ಸೀಮಿತಗೊಳಿಸಿ) ಉಳಿದಂತೆ ರಾಜ್ಯದೊಳಗಿರುವ ಎಲ್ಲ ಶಾಲೆಗಳಿಗೂ ಸರ್ಕಾರಿ ಶಾಲೆಯ ಪಠ್ಯಕ್ರಮವನ್ನೇ ಕಡ್ಡಾಯ ಮಾಡುವ ಶಿಕ್ಷಣ ನೀತಿಯಿಂದ ಶಿಕ್ಷಣದ ವ್ಯಾಪಾರೀಕರಣಕ್ಕೆ ಬ್ರೇಕ್ ಹಾಕಿದಂತಾಗುವುದಿಲ್ಲವೇ?

ಪಂಡಿತಾರಾಧ್ಯ : ಹೌದು.
ಇವೆಲ್ಲ ಆಗುವುದಕ್ಕೆ ಮುಖ್ಯ ಕಾರಣ ೧೯೯೪ರ ಭಾಷಾನೀತಿ ಅನುಷ್ಠಾನವಾಗದಂತೆ ಸರ್ವೋನ್ನತ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ನೆಪವೊಡ್ಡಿ
ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಉಳಿಸಿದ್ದು. ಅದರ ಪರಿಣಾಮವಾಗಿ, ಆ ತಡೆಯಾಜ್ಞೆಯ ತೆರವಿಗೆ ಪ್ರಯತ್ನಿಸದೆ ಒಂದನೆಯ ತರಗತಿಯಲ್ಲಿ ಮಾತೃಭಾಷೆಯಲ್ಲದ ಭಾಷೆಯನ್ನು ಕಲಿಸಲು ಅವಕಾಶವಿಲ್ಲವೆಂಬ ಸಂವಿಧಾನದ ನಿಯಮವನ್ನು ಗಾಳಿಗೆ ತೂರಿ ಆಂಗ್ಲೊ ಇಂಡಿಯನ್ನರನ್ನು ಬಿಟ್ಟರೆ ದೇಶದಲ್ಲಿ ಯಾರ ಮಾತೃಭಾಷೆಯೂ ಅಲ್ಲದ ಇಂಗ್ಲಿಷ್ ಅನ್ನು ಕಲಿಸಲು ಆರಂಭಿಸಿತು.

ಶಿಕ್ಷಣ ತಜ್ಙರಲ್ಲದವರು, ರಾಜಕಾರಣಿಗಳು ಸಾಮಾಜಿಕ ನ್ಯಾಯ ಇತ್ಯಾದಿ ಅಶೈಕ್ಷಣಿಕ ನೆಪಗಳನ್ನು ಒಡ್ಡಿ ಮಕ್ಕಳ ಶಿಕ್ಷಣದಲ್ಲಿ ಗೊಂದಲ ನಿರ್ಮಿಸಿದರು.ತಡೆಯಾಜ್ಙೆ ತೆರವುಗೊಳಿಸುವ ಬದಲು ರಾಜ್ಯ ಉಚ್ಚ ನ್ಯಾಯಾಲಯವು ಸರಕಾರದ ಭಾಷಾನೀತಿಯನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ ಮಿತಗೊಳಿಸಿ ಖಾಸಗಿ ಶಾಲೆಗಳಿಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಮುಕ್ತ ಅವಕಾಶ ಕೊಟ್ಟಿತು. -ಒಂದೆ ಎರಡೇ ಮಕ್ಕಳ ಪುಣ್ಯದ ಫಲಗಳು!

ಮಾತೃಭಾಷೆಯಲ್ಲದ ಇಂಗ್ಲಿಷ್ ಆಥವಾ ಬೇರಾವುದೇ ಭಾಷೆಯನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಶೇಷ ತರಬೇತಿಯಿರುವ ತಜ್ಙ ಶಿಕ್ಷಕರು ಕಲಿಸಬೇಕು.
ಶಿಕ್ಷಕರು ಮೊದಲಿಗೆ ಮಕ್ಕಳೊಂದಿಗೆ ಆ ಭಾಷೆಯಲ್ಲಿ ಮಾತನಾಡುವ ಮೂಲಕ ಮಕ್ಕಳು ಆ ಭಾಷೆಯನ್ನು ಕೇಳಿ ಅರ್ಥಮಾಡಿಕೊಳ್ಳುವ ಕೌಶಲವನ್ನು ಕಲಿಸಬೇಕು.
ಎರಡನೆಯ ಹಂತದಲ್ಲಿ ಓದುವ, ಬರೆಯುವ ಕೌಶಲಗಳನ್ನು ಕಲಿಸಬೇಕು. ಹಾಗಲ್ಲದೆ ಒಂದನೆಯ ತರಗತಿಯಿಂದ ಭಾಷೆಯೇ ಬರದ ಮಗುವಿಗೆ ಆ ಭಾಷೆಯಲ್ಲಿ ಓದುವ ಬರೆಯುವ ಅಷ್ಟೇ ಅಲ್ಲ ಮಾಧ್ಯಮವಾಗಿಯೇ ಆ ಭಾಷೆಯನ್ನುಬಳಸಲು ತೊಡಗಿದರೆ ಆ ಭಾಷೆಯೇ ಬಾರದ ಮಕ್ಕಳು ಏನನ್ನೂ ಕಲಿಯಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ಎರಡನೆಯ ಭಾಷೆಯಾಗಿ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕಲಿಸಲು ತರಬೇತಿ ಪಡೆದ ಇಂಗ್ಲಿಷ್ ಶಿಕ್ಷಕರನ್ನು ಶಾಲೆಗಳಲ್ಲಿ ಮೊದಲು ನೇಮಿಸಬೇಕು.
ತಂದೆತಾಯಿಗಳ ಶೈಕ್ಷಣಿಕ ಅರಿವಿನ ಕೊರತೆ ಮತ್ತು ತಮ್ಮ ಮಕ್ಕಳು ಮುಂದೆಬರಬೇಕೆಂಬ ಅವರ ಧಾವಂತ, ರಾಜಕಾರಣಿಗಳಿಗೆ ತಮ್ಮ ಎಲ್ಲ ಸಾಮಾಜಿಕ ಸಮಸ್ಯೆಗಳಿಗೆ ಇಂಗ್ಲಿಷ್ ಕಲಿಕೆ ಪರಿಹಾರವೆಂಬ ರಾಜಕೀಯ ನಿಲುವು ಮಕ್ಕಳ ಪಾಲಿಗೆ ಇಬ್ಬಾಯಿ ಖಡ್ಗವಾಗಿ ಅವರನ್ನು ಕೊಲ್ಲುತ್ತಿದೆ ಆದ್ದರಿಂದಲೇ ರಾಷ್ಟ್ರಕವಿ ಕುವೆಂಪು ತಮ್ಮ ಒಂದು ಪದ್ಯದಲ್ಲಿ
’ಪಾರುಮಾಡೆಮ್ಮನೀ ಇಂಗ್ಲಿಷಿನಿಂದ ಪೂತನಿಯ ಅಸುವೀಂಟಿ ಕೊಂದ ಗೋವಿಂದ” ಎಂದು ಪ್ರಾರ್ಥಿಸುವಂತೆ ಮಕ್ಕಳಿಗೆ ಕರೆ ಕೊಟ್ಟಿದ್ದಾರೆ.

ನಾವು ಇಂಗ್ಲಿಷ್ ಅನ್ನು ಚೆನ್ನಾಗಿ ಕಲಿಸಬೇಕು.ಆದರೆ ಅದು ಒಂದನೆಯ ತರಗತಿಯಿಂದಲೇ ಆಗಬೇಕಿಲ್ಲ.ಮಕ್ಕಳಿಗೆ ತಮ್ಮ ಮಾತೃಭಾಷೆಯನ್ನು ಕಲಿಯುತ್ತಲೇ ಭಾಷೆಯನ್ನು ಕಲಿಯುವ ಕೌಶಲಗಳನ್ನು ಮೊದಲು ಕಲಿತ ಅನಂತರ ಯಾವ ಭಾಷೆಯನ್ನೂ ಸುಲಭವಾಗಿ ಕಲಿಯಲು ಸಾಧ್ಯವಾಗುತ್ತದೆ.ಇಂದು ಇಂಗ್ಲೆಂಡ್ ಅಮೆರಿಕಗಳಲ್ಲಿ ನೆಲಸಿರುವ ಭಾರತವೂ ಸೇರಿದಂತೆ ಇತರ ದೇಶಗಳವರ ಮಕ್ಕಳು ಕಲಿಯುತ್ತಿರುವ ಶಾಲೆಗಳವರು ತಂದೆತಾಯಿಗಳನ್ನು ಕರೆಸಿಕೊಂಡು ಅವರು ಮನೆಗಳಲ್ಲಿ ತಮ್ಮ
ಮಕ್ಕಳೊಂದಿಗೆ ತಮ್ಮ ಭಾಷೆಗಳಲ್ಲಿಯೇ ಮಾತನಾಡುವಂತೆ ಸೂಚಿಸುತ್ತಾರೆ.ಅದಕ್ಕೆ ಮಾತೃಭಾಷೆಯನ್ನು ಚೆನ್ನಾಗಿ ಕಲಿತ ಮಕ್ಕಳು ಶಾಲೆಯಲ್ಲಿ ಇಂಗ್ಲಿಷನ್ನೂ ಚೆನ್ನಾಗಿ
ಕಲಿಯಲು ಸಾಧ್ಯವಾಗುತ್ತದೆ ಎಂಬ ಶೈಕ್ಷಣಿಕ ಸತ್ಯವೇ ಕಾರಣ.

೧೯೯೪ರ ಭಾಷಾ ನೀತಿ ಪೂರ್ಣರೂಪದಲ್ಲಿ ಜಾರಿಗೆ ಬಂದಾಗ ಕೇವಲ ಮಾತೃಭಾಷೆಯ ಶಾಲೆಗಳೇ ಇರುತ್ತವೆ.ಬೇರೆ ಭಾಷಾ ಮಾಧ್ಯಮದ ಶಾಲೆಗಳೇ ಇರುವುದಿಲ್ಲ. ಒಂದರಿಂದ ಐದನೆಯ ತರಗತಿಯವರೆಗೆ ಮಾತೃಭಾಷೆಯನ್ನು ಭಾಷೆಯಾಗಿ ಕಲಿಯುವ ಮಗು ಭಾಷಾ ಕಲಿಕೆಯ ಕೌಶಲಗಳನ್ನು ಚೆನ್ನಾಗಿಕಲಿಯುತ್ತದೆ. ಅದರ ಬುನಾದಿಯ ಮೇಲೆ ಎರಡನೇ ಮೂರನೇ ಭಾಷೆಗಳನ್ನೂ ಸಾರ್ಥಕವಾಗಿ ಕಲಿಯಲು ಸಾಧ್ಯವಾಗುತ್ತದೆ. ಆರನೆಯ ತರಗತಿ ಇರಲಿ ಇಡೀ ಶಿಕ್ಷಣವನ್ನೇ ಮಾತೃಭಾಷೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಪಡೆಯಲು ಸಾಧ್ಯ.

ಇದರಿಂದ ಮಕ್ಕಳ ಯೋಚನಾಶಕ್ತಿ ಹೆಚ್ಚುತ್ತದೆ. ಕಲಿತದ್ದರ ಬಗ್ಗೆ ತನ್ನ ಭಾಷೆಯಲ್ಲಿ ಸೃಜನಶೀಲವಾಗಿ ಯೋಚಿಸಿ ಹೊಸ ಹೊಸ ವಿಷಯಗಳ ಬಗ್ಗೆ ಸ್ವಂತವಾಗಿ ಚಿಂತಿಸಲು ಸಾಧ್ಯವಾಗುತ್ತದೆ. ತನಗೆ ಚೆನ್ನಾಗಿ ಗೊತ್ತಿರುವ ವಿಷಯವನ್ನು ಅಗತ್ಯ ಬಂದಾಗ ಬೇರೆ ಯಾವ ಭಾಷೆಯಲ್ಲಿಯೂ ಸಮರ್ಥವಾಗಿ ಹೇಳುವ ಶಕ್ತಿಯನ್ನೂ ಮಕ್ಕಳು ಪಡೆಯುತ್ತಾರೆ.

ಹಾಗೆ ಆಗಲಿ.

5 ಟಿಪ್ಪಣಿಗಳು Post a comment
 1. ಯಾವುದೇ ಶಿಕ್ಷಣ ನೀತಿ ಕೇವಲ ಸರಕಾರೀ ಶಾಲೆಗಳಿಗೆ ಮಾತ್ರ ಯಾಕೆ ಅನ್ವಯವಾಗಬೇಕು?
  ನಾಡೀನಲ್ಲಿರುವ ಶಿಕ್ಷಣ ನೀತಿಯು, ಸರಕಾರೀ ಹಾಗೂ ಖಾಸಗೀ ಶಾಲೆಗಳಿಎಗ್ ಸಮಾನವಾಗಿ ಅನ್ವಯವಾಗುವುದು ಸೂಕ್ತ. ಹಾಗಾಗದೇ ಇದ್ದಲ್ಲಿ, ಸಮಾಜದ ಒಂದು ವರ್ಗದ ಮಂದಿ ಉತ್ತಮ ಶಿಕ್ಷಣ ಪಡೆದು ಇನೊಂದು ವರ್ಗ ಅದರಿಂದ ವಂಚಿತವಾಗಿ,
  ಸಾಮಾಜಿಕ ಧ್ರುವೀಕರಣಕೆ ಅವಕಾಶ ಮಾಡಿಕೊಟ್ಟಂತೆ.

  ಉತ್ತರ
 2. shree ganesh
  ಜುಲೈ 5 2012

  vijnani galu hosa prayogagalannu ili(mouse) heggana gala mele prayogisidante ,Hosa shikshana neetiyannu govt school gala mele prayogisuttare.idu sarina?

  ಉತ್ತರ
 3. divin
  ಏಪ್ರಿಲ್ 18 2016

  thank for detail information.these much day we thought that govt.impose kannada language to non kannada mother tongue students also..and its compulsion in nature.but now we realize flexibility of that act.but my question is here,why govt.schools only?why not private schools?
  it makes disparities between two sectors.simply poor peoples going beyond the private schools.its later affect on our education system and monetary status of the society.therefore think that unique system in education.i think that is little better.

  ಉತ್ತರ
 4. ತಾಯಿನುಡಿಯಲ್ಲಿ ಮಕ್ಕಳ ಕಲಿಕೆಯು ಅವರಲ್ಲಿ ಪರಿಪೂರ್ಣ ವ್ಯಕ್ತಿತ್ವವನ್ನು ಚೆನ್ನಾಗಿ ಅರಳಿಸುತ್ತದೆ ದೈಹಿಕ ಮತ್ತು ಮಾನಸಿಕ ವ್ಯಕ್ತಿತ್ವವನ್ನು ಬೆಳೆಸುತ್ತದೆ.

  ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

  ಉತ್ತರ
 5. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments